You are here

Add new comment

ಎಕ್ಸ್-ರೇ ಕ್ರಿಸ್ಟಲೋಗ್ರಫಿಗೆ ನೂರರ ಪ್ರಾಯ

  • ಭಾರತೀಯ ಅಂಚೆ ಬಿಡುಗಡೆ ಒಂದು ನೆನಪಿನ ಅಂಚೆಚೀಟಿ

ಭಾರತೀಯ ಅಂಚೆ ಬಿಡುಗಡೆ ಒಂದು ನೆನಪಿನ ಅಂಚೆಚೀಟಿ

ಸುಮಾರು ನೂರು ವರ್ಷಗಳ ಹಿಂದಿನ ಘಟನೆ. ಜರ್ಮನ್ ವಿಜ್ಞಾನಿಗಳಾದ ಮ್ಯಾಕ್ಸ್ ವಾನ್ ಲಾಯೆ, ಸಾಮರ್ಫೀಲ್ಡ್ ಮತ್ತು ಸಂಗಡಿಗರು ಸ್ಕಿ ಮಾಡಲು (ಹಿಮದ ಮೇಲೆ ಜಾರುವುದು) ಹೋಗಿದ್ದಾಗ ,ಲಾಯೆ ತಾನು ಇತ್ತೀಚಿಗೆ ಯೋಚಿಸುತ್ತಿದ್ದ ವಿಷಯವೊಂದನ್ನು ಚರ್ಚಿಸಿದ. ಅವನ ಮಾತಿನ ತಿರುಳು ಇಷ್ಟೇ: ಅಡುಗೆ ಉಪ್ಪಿನ ಒಳಗೆ ಪರಮಾಣುಗಳ ಜೋಡಣೆ ಹೇಗಿದೆಯೆಂದು ತಿಳಿಯಬೇಕೆಂದರೆ, ಅದರ ಒಂದು ಕಾಣದ ಮೂಲಕ ಎಕ್ಸ್-ರೇ ಹಾದುಹೋಗುವಂತೆ ಮಾಡಿ, ನಂತರ ಸ್ವಲ್ಪ ವಿಶ್ಲೇಷಿಸಿದರೆ ಸಾಕು. ನಿಜ. ಇದನ್ನು ಮಾಡಲು ವಿಜ್ಞಾನದಲ್ಲಿ ಸ್ವಲ್ಪ ಹೆಚ್ಚಿನ ತರಬೇತಿಯೇ ಬೆಕು. ಆದರೂ, ಪರಮಾಣು ಜೋಡಣೆಯಂತಹ ಸೂಕ್ಷ್ಮ ವಿಚಾರವನ್ನು ಅರಿಯಲು ಇದು ಸರಳ ವಿಧಾನವೇ ಸರಿ. ಒಂದು ಸ್ಕೀ ವಿಹಾರದಲ್ಲಿ ನಡೆದ ಚರ್ಚೆ ಮುಂದೆ ಮಾನವ ವಸ್ತುಗಳನ್ನು, ಅಂದರೆ ಅಡುಗೆ ಉಪ್ಪಿನಿಂದ ಹಿಡಿದು ಡಿಎನ್ಎ ನಂತಹ ಸಂಕೀರ್ಣ ಜೈವಿಕ ವ್ಯವಸ್ಥೆಗಳ ಬಗ್ಗೆ, ನೋಡುವ ರೀತಿಯನ್ನೇ ಬದಲಾಯಿಸುತ್ತದೆ ಎಂದು ಪ್ರಾಯಶಃ ಲಾಯೆ ಕೂಡ ಭಾವಿಸಿರಲಿಲ್ಲ. ಈ ಅದ್ಭುತ ಆವಿಷ್ಕಾರದಿಂದ ೧೯೧೪ರಲ್ಲಿ ಲಾಯೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನನಾದನು. ಬ್ರಿಟಿಷ್  ವಿಜ್ಞಾನಿಗಳಾದ ಡಬ್ಲು. ಎಚ್. ಬ್ರಾಗ್ ಮತ್ತು ಡಬ್ಲು. ಎಲ್. ಬ್ರಾಗ್ (ತಂದೆ - ಮಗ) ಲಾಯೆಯ ಕೆಲಸವನ್ನು ಮುಂದುವರೆಸಿ ೧೯೧೫ರಲ್ಲಿ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಪಡೆದರು. ಅಂದಹಾಗೆ ಬ್ರಾಗ್ ದ್ವಯರದ್ದು ಭೌತಶಾಸ್ತ್ರ ನೊಬೆಲ್ ಪಡೆದ ಮೊದಲ ತಂದೆ-ಮಗನ ತಂಡ! ವಸ್ತುಗಳ ಒಳಗಿನ ಪ್ರಪಂಚದ ಕುತೂಹಲ ತಣಿಸಲು ಇರುವ ಅತ್ಯಂತ ಯಶಸ್ವೀ ತಂತ್ರಗಳಲ್ಲಿ ಒಂದಾದ 'ಎಕ್ಸ್-ರೇ ಕ್ರಿಸ್ಟಲೋಗ್ರಫಿ' ನೂರು ವರ್ಷಗಳ ಹಿಂದೆ ಬಳಕೆಗೆ ಬಂದದ್ದು ಹೀಗೆ. ಈವರೆಗೆ ಎಕ್ಸ್-ರೇ ಕ್ರಿಸ್ಟಲೋಗ್ರಫಿ ಬಳಸಿ ಮಾಡಿರುವ ಬರೋಬ್ಬರಿ ೨೬ ಆವಿಷ್ಕಾರಗಳಿಗೆ ನೊಬೆಲ್ ಬಹುಮಾನ ಬಂದಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು, ಡಿಏನ್ಎ ಯ ಜಡೆಯಂತೆ ಹೆಣೆದಿರುವ (double helical) ರೂಪವನ್ನು ಗುರುತಿಸಿದ್ದು. ಕ್ಯಾನ್ಸರ್, ಏಡ್ಸ್ ಮುಂತಾದ ಮಾರಣಾಂತಿಕ ರೋಗಗಳ ವಿರುದ್ಧ ಮಾನವ ಸಾರಿರುವ ಸಮರದಲ್ಲಿ ಎಕ್ಸ್-ರೇ ಕ್ರಿಸ್ಟಲೋಗ್ರಫಿಯ ಪಾತ್ರ ಬಹಳ ಮಹತ್ವದ್ದು. ಮಂಗಳ ಗ್ರಹಕ್ಕೆ ನಾಸಾ ಕಳಿಸಿರುವ ಮಾರ್ಸ್ ರೋವೆರ್ ನಲ್ಲಿ ಒಂದು ಎಕ್ಸ್-ರೇ ಕ್ರಿಸ್ಟಲೋಗ್ರಫಿಯ ಘಟಕ ಕೂಡ ಇದೆ. ಮಂಗಳ ಮೇಲಿರುವ ಕಲ್ಲು ಮಣ್ಣುಗಳು ಯಾವ ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿವೆ ಎಂದು ತಿಳಿಯುವುದು ಇದರ ಉದ್ದೇಶ. ಹೀಗೆ, ವಿಜ್ಞಾನದ ಹತ್ತು ಹಲವು ಸ್ತರಗಳಲ್ಲಿ ಅತ್ಯುಪ್ತಯುಕ್ತ  ಸಾಧನವಾಗಿ ಬೆಳೆದಿರುವ ಎಕ್ಸ್-ರೇ ಕ್ರಿಸ್ಟಲೋಗ್ರಫಿಯ ಬಗ್ಗೆ ಸಾಮಾನ್ಯ ಜನಕ್ಕಿರುವ ಅರಿವು ಮಾತ್ರ ಬಹಳ ಕಡಿಮೆ. ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಲು ಲಾಯೆ ಆವಿಷ್ಕಾರದ ಶತಮಾನೋತ್ಸವ ಸಂಭ್ರಮಕ್ಕಿಂತ ಉತ್ತಮ ಸಂದರ್ಭ ಬೇಕೇ? ಆದ್ದರಿಂದಲೇ, ೨೦೧೪ ಅನ್ನು ವಿಶ್ವ ಸಂಸ್ಥೆಯು International Year of X-ray Crystallography ಎಂದು ಘೋಷಿಸಿದೆ.

ನಾವು ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ ಬಹಳಷ್ಟು ಘನವಸ್ತುಗಳಲ್ಲಿ ಅಣು ಅಥವಾ ಪರಮಾಣು ಜೋಡಣೆ ಬಹಳ ಅಚ್ಚುಕಟ್ಟಾಗಿರುತ್ತದೆ. ಇದು ಕೆಲವು ದ್ರವ ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ. ಇಂತಹ ವಸ್ತುಗಳನ್ನು ಕ್ರಿಸ್ಟಲೈನ್ (ಹರಳುಗಳು) ಎಂದು ಕರೆಯುತ್ತಾರೆ. ಎಕ್ಸ್-ರೇ ಉಪಯೋಗಿಸಿ ಕ್ರಿಸ್ಟಲೈನ್ ವಸ್ತುಗಳ ರಚನೆಯನ್ನು ತಿಳಿಯುವ ತಂತ್ರವೇ ಎಕ್ಸ್-ರೇ ಕ್ರಿಸ್ಟಲೋಗ್ರಫಿ. ಅಡುಗೆ ಉಪ್ಪು, ಇಲೆಕ್ಟ್ರಾನಿಕ್ ಪರಿಕರಗಳನ್ನು ತಯಾರಿಸಲು ಬಳಸುವ ಸಿಲಿಕಾನ್, ವಾಹನಗಳನ್ನು ತಯಾರಿಸಲು ಬಳಸುವ ಲೋಹಗಳು ಇವೆಲ್ಲವೂ ಕ್ರಿಸ್ಟಲೈನ್ ವಸ್ತುಗಳು. ಈ ಎಲ್ಲ ವಸ್ತುಗಳಲ್ಲೂ ಅಣುಗಳನ್ನು (ಅಥವಾ ಪರಮಾಣು) ಪ್ರಕೃತಿ ಅಚ್ಚುಕಟ್ಟಾಗಿ ಜೊಡಿಸಿದೆ. (ಎಲ್ಲ ವಸ್ತುಗಳಲ್ಲೂ ಈ ಅಚ್ಚುಕಟ್ಟು ಇರುವುದಿಲ್ಲ. ಉದಾಹರಣೆಗೆ ಗಾಜಿನ ಒಳಗೆ ಅಣುಗಳ ಜೋಡಣೆಯಲ್ಲಿ ಯಾವ ಶಿಸ್ತೂ ಇಲ್ಲ!) ಇದಲ್ಲದೆ, ಪ್ರತಿಯೊಂದು ಕ್ರಿಸ್ಟಲೈನ್ ವಸ್ತುವಿನ ಪರಮಾಣು ಜೋಡಣೆಯೂ unique. ಉದಾಹರಣೆಗೆ, ಉಪ್ಪಿನಲ್ಲಿ ಕಂಡುಬರುವ ಪರಮಾಣುಗಳ ಜೋಡಣೆ ಇನ್ನಾವ ವಸ್ತುವಿನಲ್ಲೂ ಕಂಡುಬರುವುದಿಲ್ಲ. ಹಾಗೆಯೇ, ಪ್ರಪಂಚದ ಯಾವುದೇ ಭಾಗದಲ್ಲಿ ತಯಾರಾದ ಉಪ್ಪನ್ನು ನೋಡಿದರೂ, ಅದರ ರಚನೆ ಸರಿಸುಮಾರು ಒಂದೇ ಆಗಿರುತ್ತದೆ. ಹಾಗೆಯೇ, ನಮ್ಮಲ್ಲಿ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಜೆನೆಟಿಕ್ ವಿಷಯಗಳನ್ನು  ರವಾನೆ ಮಾಡುವ ಡಿಎನ್ಎ ರಚನೆ ಎಲ್ಲ ಮನುಷ್ಯರಲ್ಲೂ ಒಂದೇ ರೀತಿ ಇರುತ್ತದೆ. ಆದರೆ, ಡಿಎನ್ಎ ಗಿರುವ ರಚನೆ ಇನ್ನಾವ ವಸ್ತುವಿನಲ್ಲೂ ಕಾಣಬರುವುದಿಲ್ಲ. ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ರಚನೆಯಿದ್ದರೂ, ಎಲ್ಲ ವಸ್ತುಗಳ ಒಳ ಪ್ರಪಂಚದಲ್ಲಿ ಒಂದು ಸಾಮ್ಯತೆ ಕನ್ದುಬರುತ್ತದೆ: ಒಂದು ಪರಮಾಣುವಿನಿಂದ ಅದರ ಪಕ್ಕದ ಪರಮಾಣುವಿಗಿರುವ ದೂರ ತೀರ ಕಡಿಮೆ. ನಾವು ಊಹಿಸಿಕೊಳ್ಳಲೂ ಆಗದಷ್ಟು ಕಡಿಮೆ. ಅಷ್ಟು ಚಿಕ್ಕ ದೂರಗಳನ್ನು ಅಳೆಯಲು ನಮ್ಮ ದಿನನಿತ್ಯದ ಅಳತೆಗಳು ಸರಿಬರುವುದಿಲ್ಲ. (ಹಾಗೆ ಮಾಡಲು ಹೋದರೆ ಮೌಂಟ್ ಎವರೆಸ್ಟ್ ನ ಎತ್ತರವನ್ನು ಮಿಲಿಮೀಟರ್ ನಲ್ಲಿ ಅಳೆದಂತಾಗುತ್ತದೆ!) ಅದಕ್ಕಾಗಿಯೇ ನ್ಯಾನೋಮೀಟರ್ ಎಂಬ ಅಳತೆಗೋಲನ್ನು ಉಪಯೋಗಿಸಬೇಕು. ಒಂದು ಸೆಂಟಿಮೀಟರ್ ಉದ್ದವನ್ನು ಹತ್ತು ಸಮಭಾಗಗಳನ್ನಾಗಿ ಮಾಡಿದರೆ, ಪ್ರತಿಯೊಂದು ಭಾಗವೂ ಒಂದು ಮಿಲಿಮೀಟರ್ ಉದ್ದ ಇರುತ್ತದೆ ಅಲ್ಲವೇ? ಅದೇ ಒಂದು ಸೆಂಟಿಮೀಟರ್ ಉದ್ದವನ್ನು ಒಂದು ಕೋಟಿ ಸಮಭಾಗಗಳನ್ನಾಗಿ ವಿಭಜಿಸಿದರೆ, ಒಂದೊಂದು ಭಾಗವೂ ಒಂದು ನ್ಯಾನೋಮೀಟರ್ ಇರುತ್ತದೆ. ನಮ್ಮ ಕಣ್ಣಿಗೆ ತೆಳ್ಳಗೆ ಕಾಣುವ ಕಾಗದ ಒಂದು ಲಕ್ಷ ನ್ಯಾನೋಮೀಟರ್ ನಷ್ಟು ದಪ್ಪ ಇರುತ್ತದೆ! ನಮ್ಮ ಉಗುರುಗಳು ಒಂದು ಸೆಕೆಂಡಿನಲ್ಲಿ ಸುಮಾರು ಒಂದು ನ್ಯಾನೋಮೀಟರ್ ಬೆಳೆಯುತ್ತವೆ! ಮನುಷ್ಯನ ಕೂದಲ ದಪ್ಪ ಒಂದು ಮಿಲಿಮೀಟರ್ ಗಿಂತಲೂ ಕಡಿಮೆ; ಆದರೆ ನ್ಯಾನೋಮೀಟರ್ ಅಳತೆಯಲ್ಲಿ ಅಳೆದಾಗ ಕೂದಲು ೮೦,೦೦೦ - ೧,೦೦,೦೦೦ ನ್ಯಾನೋಮೀಟರ್ ನಷ್ಟು ದಪ್ಪ ಇದೆ!

ಈಗ ವಸ್ತುಗಳ ಒಳ ಪ್ರಪಂಚಕ್ಕೆ ಹಿಂದಿರುಗೋಣ. ಅಲ್ಲಿ ಒಂದು ಪರಮಾಣುವಿಗೂ ಅದರ ಪಕ್ಕದ ಪರಮಾಣುವಿಗೂ ನಡುವಿನ ದೂರ ಕೆಲವು ನ್ಯಾನೋಮೀಟರ್ ಗಳು. ಎಕ್ಸ್-ರೇ ಗಳ ತರಂಗಾಂತರವೂ ಕೆಲವು ನ್ಯಾನೋಮೀಟರ್ ಗಳು. ಒಂದು ಕ್ರಿಸ್ಟಲೈನ್  ವಸ್ತುವಿನಲ್ಲಿ,  ಅಕ್ಕ ಪಕ್ಕದ ಪರಮಾಣುಗಳ ಮಧ್ಯದಲ್ಲಿ ಎಕ್ಸ್-ರೇ ಹೋದಾಗ, ಎಕ್ಸ್-ರೇ ಬಾಗುತ್ತದೆ. ಈ ಎಕ್ಸ್-ರೇಗಳನ್ನು ಛಾಯಾಗ್ರಹಣ ಪರದೆಯ ಮೇಲೆ ಬೀಳಿಸಿದಾಗ, ಒಂದು ನಮೂನೆ (pattern) ರಚನೆಯಾಗುತ್ತದೆ. ವಿಶೇಷವೆಂದರೆ, ಪ್ರತಿಯೊಂದು ವಸ್ತುವೂ ತನ್ನದೇ ಆದ ನಮೂನೆಯನ್ನು ರಚಿಸುತ್ತದೆ. ಉದಾಹರಣೆಗೆ, ಉಪ್ಪಿನಿಂದ ಬರುವ ನಮೂನೆ ಇನ್ನಾವ ವಸ್ತುವಿನಿಂದಲೂ ಬರುವುದಿಲ್ಲ. ಆದ್ದರಿಂದ, ಈ ನಮೂನೆಯನ್ನು ಒಂದು ವಸ್ತುವಿನ 'ಸಹಿ' ಎನ್ನಬಹುದು. ವಿಜ್ಞಾನಿಗಳು ಈ  ನಮೂನೆಗಳನ್ನು  ವಿಶ್ಲೇಷಿಸಿ, ಅದನ್ನು ನಿರ್ಮಿಸಿದ ವಸ್ತುವಿನ ರಚನೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ವಿಜ್ಞಾನಿಯದು ಒಂದು ರೀತಿಯ ಪತ್ತೇದಾರಿ ಕೆಲಸ. ಅವಳಿಗೆ ಸಿಗುವುದು 'ಸಹಿ' ಮಾತ್ರ. ಆ ಸಹಿಯ ಜಾಡು ಹಿಡಿದು, ಸಹಿ ಹಾಕಿದ ವಸ್ತು ಯಾವುದು ಎಂದು ಕಂಡುಹಿಡಿಯಬೇಕು. ಉಪ್ಪಿನ ಒಳ ಪ್ರಪಂಚದ ಬಗ್ಗೆ ತಿಳಿದದ್ದು ಹೀಗೆಯೇ. ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಡಿಎನ್ಎ ನ ಜಡೆಯಂತಿರುವ ರಚನೆಯನ್ನು ಕಂಡುಹಿಡಿದದ್ದೂ ಹೀಗೆಯೇ.

ನೂರು ವರ್ಷದ ಹಿಂದೆ ಎಕ್ಸ್-ರೇ ಕ್ರಿಸ್ಟಲೋಗ್ರಫಿ ಮಾಡುತ್ತಿದ್ದ ರೀತಿಗೂ ಇಂದು ಮಾಡುವ ರೀತಿಗೂ ಬಹಳ ವ್ಯತ್ಯಾಸಗಳಿವೆ. ಕಳೆದ ಕೆಲವು ದಶಕಗಳಲ್ಲಿ ಎಕ್ಸ್-ರೇ ತಯಾರಿಕೆ ಮತ್ತು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಆದ ಭಾರೀ ಬೆಳವಣಿಗೆಗಳಿಂದ ಎಕ್ಸ್-ರೇ ಕ್ರಿಸ್ಟಲೋಗ್ರಫಿ ಬಹಳ ದೊಡ್ಡದಾಗಿ ಬೆಳೆಯಲು ಸಾಧ್ಯವಾಗಿದೆ. ಇಂದು ಭಾರೀ ಗಾತ್ರದ ವೃತ್ತಾಕಾರದ ಯಂತ್ರಗಳಲ್ಲಿ ಎಲೆಕ್ಟ್ರಾನ್ ಗಳನ್ನು ಅತಿ ಹೆಚ್ಚು ವೇಗದಲ್ಲಿ ಕಳಿಸುವ ಮೂಲಕ ಎಕ್ಸ್-ರೇಗಳನ್ನು ತಯಾರಿಸಲಾಗುತ್ತಿದೆ. ಈ ಯಂತ್ರಗಳನ್ನು ಸೈಕ್ಲೊಟ್ರಾನ್ ಗಳೆಂದು ಕರೆಯುತ್ತಾರೆ. ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಡೈಮಂಡ್ ಲೈಟ್ ಸೊರ್ಸ್ ಅಂಥದ್ದೊಂದು ಸೈಕ್ಲೊಟ್ರಾನ್. ಇದರಲ್ಲಿ ತಯಾರಾಗುವ ಎಕ್ಸ್-ರೇಗಳು, ನಮ್ಮ ಆಸ್ಪತ್ರೆಗಳಲ್ಲಿ ಮೂಳೆಯ ಬಿರುಕುಗಳನ್ನು ಕಂಡುಹಿಡಿಯಲು ಬಳಸುವ ಎಕ್ಸ್-ರೇ ಗಳಿಗಿಂತ ಒಂದು ಸಾವಿರ ಕೋಟಿ ಪಟ್ಟು ಶಕ್ತಿಶಾಲಿ. ಈ ಡೈಮಂಡ್ ಲೈಟ್ ಸೊರ್ಸ್ ಅನ್ನು ಬಳಸಿಕೊಂಡು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ, ರೀಡಿಂಗ್ ವಿಶ್ವವಿದ್ಯಾನಿಲಯ ಮತ್ತು ಪಿರ್ಬ್ರೈಟ್ ಸಂಸ್ಥೆಯ ವಿಜ್ಞಾನಿಗಳ ತಂಡವೊಂದು, ಜಾನುವಾರುಗಳಿಗೆ ಬರುವ ಕಾಲು-ಬಾಯಿ ರೋಗಕ್ಕೆ ಲಸಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ. ಕಳೆದ ವರ್ಷ ಕರ್ನಾಟಕದ ಸಾವಿರಾರು ಜಾನುವಾರುಗಳು  ಕಾಲು-ಬಾಯಿ ರೋಗಕ್ಕೆ ತುತ್ತಾಗಿ ಸಾವಿಗೀಡಾದದ್ದು ನಿಮಗೆ ನೆನಪಿರಬಹುದು.

ಭಾರತೀಯ ವಾಯುಸೇನೆಗೆ ಇತ್ತೀಚಿಗೆ ಸೇರ್ಪಡೆಯಾದ ಸ್ವದೇಶಿ ನಿರ್ಮಿತ ಯುದ್ಧ ವಿಮಾನ 'ತೇಜಸ್' ಹೆಸರು ನಿಮಗೆ ನೆನಪಿರಬಹುದು. ಈ ವಿಮಾನದ ಅಭಿವೃದ್ಧಿಯಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದರೂ, ಎಕ್ಸ್-ರೇ ಕ್ರಿಸ್ಟಲೋಗ್ರಫಿಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ವಿಮಾನದ ಹಲವು ಬಿಡಿಭಾಗಗಳನ್ನು ಯಾವ ವಸ್ತುವಿನಿಂದ ತಯಾರಿಸಬೇಕು ಎಂದು ತಿಳಿಯಲು ಎಕ್ಸ್-ರೇ ಕ್ರಿಸ್ಟಲೋಗ್ರಫಿ ಒಂದು ಉಪಯುಕ್ತ ಸಾಧನ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ದಿವಂಗತ ಜಿ. ಆರ್. ರಾಮಚಂದ್ರನ್ ರವರು ಎಕ್ಸ್-ರೇ ಕ್ರಿಸ್ಟಲೋಗ್ರಫಿ ಬಳಸಿ ಜೈವಿಕ ರಚನೆಗಳ (biological structures) ಮೇಲೆ ಹೊಸ ಬೆಳಕು ಚೆಲ್ಲಿದರು. ಅವರು ರೂಪಿಸಿದ 'ರಾಮಚಂದ್ರನ್ ಮ್ಯಾಪ್' ಅನ್ನು ಪ್ರಪಂಚದಲ್ಲೆಡೆ ಪ್ರೋಟೀನ್ ರಚನೆಯ ಮೇಲೆ ಸಂಶೋಧನೆ ನಡೆಸುವ ಎಲ್ಲ ವಿಜ್ಞಾನಿಗಳೂ ಬಳಸುತ್ತಾರೆ. ಭಾರತೀಯ ವಿಜ್ಞಾನ ಸಂಸ್ಥೆ, ಐ ಐ ಟಿ, ಹಾಗೂ ಭಾರತದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಎಕ್ಸ್-ರೇ ಕ್ರಿಸ್ಟಲೋಗ್ರಫಿ ಬಳಸಿ ಹತ್ತು ಹಲವು ವಸ್ತುಗಳ ಹಾಗೂ ಜೈವಿಕ ರಚನೆಗಳ ಒಳ ಪ್ರಪಂಚವನ್ನು ಅರಿಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಎಕ್ಸ್-ರೇ ಕ್ರಿಸ್ಟಲೋಗ್ರಫಿ ಬಳಸಿ ಕೆಲವು ಖಾಯಿಲೆಗಳಿಗೆ ಬಡವರ ಕೈಗೆಟುಕುವ ಬೆಲೆಯ ಔಷಧಿಗಳನ್ನೂ ಕಂಡುಹಿಡಿದು ಜನಸಾಮಾನ್ಯರ ಬದುಕನ್ನು ಹಸನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನಗಳು ಸಫಲವಾದಲ್ಲಿ, ಅದು ನೂರು ವರುಷಗಳ ಹಿಂದೆ ಎಕ್ಸ್-ರೇ ಕ್ರಿಸ್ಟಲೋಗ್ರಫಿ ಅನ್ನು ಬಳಕೆಗೆ ತಂದ ಲಾಯೆ ಮತ್ತು ಬ್ರಾಗ್ ದ್ವಯರಿಗೆ ಈ ಯುಗದ ವಿಜ್ಞಾನಿಗಳು ಸಲ್ಲಿಸಬಹುದಾದ ಅತಿ ದೊಡ್ಡ ಅಭಿನಂದನೆ.

 

CAPTCHA
This question is for testing whether or not you are a human visitor and to prevent automated spam submissions.
10 + 10 =
Solve this simple math problem and enter the result. E.g. for 1+3, enter 4.