ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತದ ವಿಜ್ಞಾನ ಕ್ಷೇತ್ರದಲ್ಲಿ ೨೦೧೭ ರ ವರ್ಷ ಹೇಗಿತ್ತು?

December 31,2017 Read time: 6 mins

Illustration : Purabi Deshpande / Research Matters

ಕಳೆದ ಕೆಲವು ದಶಕಗಳಲ್ಲಿ ಭಾರತದ ವಿಜ್ಞಾನ ಕ್ಷೇತ್ರವು ಅಪಾರ ವೇಗದಿಂದ ಔನತ್ಯದೆಡೆಗೆ ಮುನ್ನಡೆಯುತ್ತಿದ್ದು, ಇದರ ಹಿಂದಿರುವ ಕಾರಣ ಇಲ್ಲಿ ಯಥೇಚ್ಛವಾಗಿ ಲಭ್ಯವಿರುವ ಪ್ರತಿಭೆ ಮತ್ತು ಮೂಲಭೂತ ಸೌಕರ್ಯ. ಖಗೋಳಶಾಸ್ತ್ರದಿಂದ ಮೊದಲ್ಗೊಂಡು ಜೀವಶಾಸ್ತ್ರದವರೆಗೂ, ರಸಾಯನಶಾಸ್ತ್ರದಿಂದ ಕೃಷಿಯವರೆಗೂ ಎಲ್ಲಾ ವೈಜ್ಞಾನಿಕ ಕ್ಷೇತ್ರಗಳನ್ನೂ ಒಳಗೊಂಡಂತೆ ಹೆಮ್ಮೆ ಪಡಬೇಕಾದ ಹಲವಾರು ಸಾಧನೆಗಳು, ಅದರ ಹಿಂದಿನ ವಿಜ್ಞಾನಿಗಳು ಇಲ್ಲಿರುವುದು ಸಂತಸದ ಸತ್ಯ; ಆದರೆ ೨೦೧೭ ಹೇಗೆ ವಿಭಿನ್ನವಾಗಿತ್ತು? ಭಾರತೀಯ ವೈಜ್ಞಾನಿಕ ಸಮುದಾಯದಿಂದ ಕೆಲವು ಪ್ರಮುಖ ಸಂಶೋಧನಾ ಮುಖ್ಯಾಂಶಗಳು ಯಾವುವು? ಯಾವುದೇ ನಿರ್ದಿಷ್ಟ ಕ್ರಮದಲ್ಲಲ್ಲದೆ, ನಾವು ಆರಿಸಿದ ಹತ್ತು ಪ್ರಗತಿಗಳು ಈ ಕೆಳಗಿನಂತಿವೆ:

೧. ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಯಶಸ್ಸಿನ ನಾಗಾಲೋಟದ ರೂವಾರಿ - ಇಸ್ರೋ
ಈ ವರ್ಷವೆಲ್ಲಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಗಮನಾರ್ಹ ಸಾಧನೆಗಳು ಎದ್ದುಕಾಣುತ್ತಿತ್ತು. ಒಂದೇ ವಿತರಣೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಉಪಗ್ರಹಗಳ ಉಡಾವಣೆ ಮತ್ತು ಅತಿ ಹೆಚ್ಚು ಪೇಲೋಡ್ ಹೊಂದಿರುವ ರಾಕೆಟ್ (ಜಿ.ಎಸ್.ಎಲ್.ವಿ ಮಾರ್ಕ್ III) ಉಡಾವಣೆಯ ಮೂಲಕ ನಮ್ಮ ವಿಜ್ಞಾನಿಗಳು ವಿಶ್ವದಾಖಲೆ ಮಾಡಿದರು. ಅನೇಕ ಬಹು-ಉಪಗ್ರಹ ಉಡಾವಣೆಯೊಂದಿಗೆ ವಾಣಿಜ್ಯ ಮಟ್ಟದಲ್ಲಿ ಉಪಗ್ರಹ ಉಡಾವಣೆಯ ಸೇವೆ ಆರಂಭಿಸಲು ತನ್ನ ಸಾಮರ್ಥ್ಯವನ್ನು ಇಸ್ರೋ ಈಗ ಜಗಜ್ಜಾಹೀರು ಮಾಡಿದೆ. ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಕಡಿಮೆ ವೆಚ್ಚದ ಆಯ್ಕೆಯನ್ನು ಒದಗಿಸುವ ಮೂಲಕ, ೨೦೧೭ರ ವರ್ಷವೊಂದರಲ್ಲೇ ಅಚ್ಚರಿಯೆನಿಸುವಷ್ಟು ದೊಡ್ಡ ಸಂಖ್ಯೆಯಲ್ಲಿ ಅಂದರೆ ೧೩೦ ಗ್ರಾಹಕ ಉಪಗ್ರಹಗಳನ್ನು ನಭಕ್ಕೆ ಸೇರಿಸಿದೆ! ಕೇವಲ ಸಂಖ್ಯೆಯಲ್ಲಷ್ಟೇ ಅಚ್ಚರಿಯಲ್ಲ; ಹೀಗೆ ನಭಕ್ಕೆ ಸೇರಿಸಿದ ಗ್ರಾಹಕ ಉಪಗ್ರಹಗಳ ಭಾರ ಕೂಡ ೪ ಕೆ.ಜಿಯಿಂದ ೩೧೩೬ ಕೆ.ಜಿಯವರೆಗಿನ ವ್ಯಾಪಕ ಶ್ರೇಣಿಯದ್ದಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು, ಇಸ್ರೋ ತನ್ನ ಸಂಪ್ರದಾಯವನ್ನು ಮುಂದುವರೆಸುತ್ತಾ ಈ ವರ್ಷ ಮತ್ತೊಂದು ವಿದ್ಯಾರ್ಥಿ ಉಪಗ್ರಹವನ್ನು ಕೂಡಾ ಉಡಾವಣೆ ಮಾಡಿದೆ.

೨. ಮುಂಗಾರು - ಹಿಂಗಾರಿನ ಭವಿಷ್ಯವನ್ನು ನಿಖರವಾಗಿ ಸೂಚಿಸಲು ಶಕ್ತರಾದ ವಿಜ್ಞಾನಿಗಳು:
ಮಾನ್ಸೂನ್ ಅಥವಾ ಮಳೆಮಾರುತ ತರುವ ಮಳೆಯು, ಭಾರತೀಯರ ಬದುಕಿನಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ; ವಿಪರೀತವಾದ ಬೇಸಿಗೆಯ ನಂತರದ ತಾಪವನ್ನು ನಿವಾರಿಸುತ್ತದೆ ಎಂಬ ಕಾರಣಕ್ಕೆ ಮಾತ್ರವಲ್ಲ, ನಮ್ಮ ದೇಶದ ಕೃಷಿಯು ಈ ಮಳೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಕಾರಣಕ್ಕೆ ಮಾನ್ಸೂನ್ ಅತ್ಯಂತ ಮುಖ್ಯವಾಗುತ್ತದೆ.  ಹಾಗಾಗಿ, ಅದರ ಆಗಮನ, ಸಮಯ ಮತ್ತು ತೀವ್ರತೆಗಳನ್ನು ನಿಖರವಾಗಿ ಊಹಿಸುವುದು ಮಹತ್ವದ ವಿಚಾರವೆನಿಸುತ್ತದೆ. ಮಾನ್ಸೂನ್ ಆಗಮನವನ್ನು ಪ್ರಭಾವಿಸುವ ಅಂಶಗಳನ್ನು ನಿಷ್ಕರ್ಷಿಸುವುದು, ತೀವ್ರ ಮಳೆಗಾಲದ ಘಟನೆಗಳನ್ನು ಅರ್ಥೈಸಿಕೊಳ್ಳುವುದು ಮತ್ತು ದೇಶದಲ್ಲಿನ ಒಟ್ಟಾರೆ ಮಳೆ ಮಾದರಿಯ ಮೇಲೆ ಅವುಗಳ ಪ್ರಭಾವವನ್ನು ಕಂಡುಕೊಳ್ಳುವುದು -  ಇಂತಹ ಮಹತ್ವದ ಮತ್ತು ಕ್ಲಿಷ್ಟ ಸವಾಲನ್ನು ನಮ್ಮ ವಿಜ್ಞಾನಿಗಳು ೨೦೧೭ರಲ್ಲಿ ಭೇದಿಸಿದ್ದಾರೆ ಎಂದು ತೋರುತ್ತದೆ. ಇದರ ಜೊತೆಗೆ, 'ಮಾನ್ಸೂನ್ ಮಿಷನ್' ಕಾರ್ಯಕ್ರಮವು, ವಿಪತ್ತು ನಿರ್ವಹಣೆಗೂ ತನ್ನ ಸೌಲಭ್ಯಗಳನ್ನು ವಿಸ್ತರಿಸಿ, ಹೆಚ್ಚಿನ ಜೀವಗಳನ್ನು ಉಳಿಸಿಕೊಳ್ಳುವುದಕ್ಕೂ ಕೈಜೋಡಿಸಲಿದೆ.

೩. 'ಸರಸ್ವತಿ' - ನಮ್ಮ ಸೂಪರ್ ವಿಜ್ಞಾನಿಗಳು ಕಂಡುಹಿಡಿದ ಸೂಪರ್ ಕ್ಲಸ್ಟರ್:
೨೦೧೭ ರ ವರ್ಷವು ಭಾರತೀಯ ಖಗೋಳಶಾಸ್ತ್ರಜ್ಞರಿಗೆ ಎರಡು ವಿಷಯಗಳಿಗೆ ಮಹತ್ವದ್ದಾಗಿದೆ - ಮೊದಲನೆಯದಾಗಿ, ನಮ್ಮ ವಿಜ್ಞಾನಿಗಳ ಕೊಡುಗೆಯನ್ನೂ ಒಳಗೊಂಡಿದ್ದ 'ಗುರುತ್ವಾಕರ್ಷಣೆಯ ಅಲೆಗಳ ಆವಿಷ್ಕಾರ'ಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತದ್ದು ಮತ್ತು ಎರಡನೆಯದಾಗಿ, ನಕ್ಷತ್ರಪುಂಜಗಳ ಒಂದು ಸೂಪರ್ ಕ್ಲಸ್ಟರ್ ನ ಅನ್ವೇಷಣೆಯಾಗಿದೆ. ಸಂಗೀತ, ಕಲೆ ಮತ್ತು ಜ್ಞಾನದ ಭಾರತೀಯ ದೇವತೆಯಾದ 'ಸರಸ್ವತಿ'ಯ ಹೆಸರನ್ನಿರಿಸಿಕೊಂಡ ಈ ಸೂಪರ್ ಕ್ಲಸ್ಟರ್, ತನ್ನಲ್ಲಿ ಶತಕೋಟಿ ನಕ್ಷತ್ರಗಳು, ಗ್ರಹಗಳು, ಅನಿಲಗಳು, ಡಾರ್ಕ್ ಮ್ಯಾಟರ್ ಮತ್ತು ಇತರ ಆಕಾಶಕಾಯಗಳನ್ನು ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ. ಖಗೋಳಶಾಸ್ತ್ರಜ್ಞರು ನಮ್ಮ ಬ್ರಹ್ಮಾಂಡದ ಸಂಯೋಜನೆ ಮತ್ತು ಅದರ ನಿಗೂಢವಾದ ಇತಿಹಾಸವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

೪. ಹಿಂದೂ ಮಹಾಸಾಗರದಲ್ಲಿ ದ್ರವ್ಯರಾಶಿ ಇಳಿತವನ್ನು ಉಂಟುಮಾಡುವ ಅಂಶಗಳನ್ನು ಅರ್ಥೈಸಿದ ವಿಜ್ಞಾನಿಗಳು:
ಸಾಗರಗಳಲ್ಲಿ ಸಾಕಷ್ಟು ರಹಸ್ಯಗಳು ಹುದುಗಿವೆ; ಹಿಂದೂ ಮಹಾಸಾಗರದಲ್ಲಿ ಅಡಗಿದ್ದ ಅಂತಹದ್ದೇ ಒಂದು ರಹಸ್ಯವನ್ನು ಅಂದರೆ ದ್ರವ್ಯರಾಶಿ ಇಳಿತವನ್ನು ಉಂಟುಮಾಡುವ ಅಂಶಗಳನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ; ಭೂಕಂಪನ ಅಧ್ಯಯನದಲ್ಲಿ ನಿರತ ಸಂಶೋಧಕರು, ಮಹಾಸಾಗರದ ಕೆಳಗಿನ ಭೂಮಿಯ ದ್ರವ್ಯರಾಶಿಯಲ್ಲಿ ಆದ ಕೊರತೆಯಿಂದ, ಅಸಹಜವಾಗಿ ಉಂಟಾಗುವ ಕಡಿಮೆ ಗುರುತ್ವಾಕರ್ಷಣೆಯ ಒಂದು ಭಾಗವನ್ನು 'ಇಂಡಿಯನ್ ಓಶನ್ ಜಿಯಾಯಿಡ್ ಲೋ' ಎಂದು ಕರೆದಿದ್ದು (ಐ.ಒ.ಜಿ.ಎಲ್) ಅದನ್ನು ಕೂಲಂಕುಷವಾಗಿ ಪರೀಕ್ಷಿಸಿದ್ದಾರೆ. ಈ ಕಾರಣವನ್ನು ವಿವರಿಸಲು  ಈಗಾಗಲೇ ಕೆಲವು ಸಿದ್ಧಾಂತಗಳು ಪ್ರಚಲಿತವಿದ್ದರೂ, ಅವುಗಳಲ್ಲಿ ಯಾವುದೂ ಸಮರ್ಥವಾಗಿ ಜಗದ ಒಪ್ಪಿಗೆ ಪಡೆಯುವಂತಿಲ್ಲ; ಆದರೆ, ಈ ವರ್ಷ ಪ್ರಕಟವಾದ ಹೊಸ ಅಧ್ಯಯನದಲ್ಲಿ, ಭಾರತ ಮತ್ತು ಜರ್ಮನಿಯ ವಿಜ್ಞಾನಿಗಳು ಅಂತಿಮವಾಗಿ ಈ ವಿದ್ಯಮಾನವನ್ನು ವಿವರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಂಡುಬರುತ್ತದೆ. ಭೂಮಿಯ ಗರ್ಭದ ಹೊರಗಿರುವ 'ಪ್ರಾವಾರ'ದ ಮೇಲ್ಭಾಗ ಮತ್ತು ಮಧ್ಯಮ ಆವರಣದಲ್ಲಿ, ಹಗುರವಾದ ವಸ್ತುವಿದ್ದು, ಅದೇ ಈ ಅಸಂಗತತೆಗೆ ಕಾರಣವಾಗಿರಬಹುದು ಎಂದು ಅವರು ಸೂಚಿಸುತ್ತಾರೆ. ಸಂಶೋಧಕರು ವಿವಿಧ ಭೂಕಂಪನ ಮಾಪಕ ಉಪಕರಣಗಳು ಮತ್ತು ಕಂಪ್ಯೂಟರ್ ವಿಶ್ಲೇಷಣೆಯನ್ನು ಬಳಸಿದ್ದು, ದೀರ್ಘಕಾಲದಿಂದ ಇದ್ದ ನಿಗೂಢತೆಗೆ ತೃಪ್ತಿಕರ ವಿವರಣೆಯನ್ನು ಒದಗಿಸುವುದರ ಮೂಲಕ, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

೫. ಹವಾಮಾನ ಬದಲಾವಣೆಯು ಹೇಳುವ ಎಚ್ಚರಿಕೆಯ ಕಥೆಗಳು:
ಹವಾಮಾನ ಬದಲಾವಣೆ ನಿಚ್ಚಳ ಸತ್ಯ ಎಂಬುದು ನಮಗೆ ತಿಳಿದಿದೆ. ಆದರೆ ಇದು ಹೇಗೆ ನಿಖರವಾಗಿ ಬದಲಾಗುತ್ತಾ ಸಾಗುತ್ತದೆ? ಇದರ ಕುರಿತಾಗಿ ವಿಜ್ಞಾನಿಗಳು ನಡೆಸಿದ ಅಧ್ಯಯನಗಳ ಸರಣಿಯಲ್ಲಿ, ವಾತಾವರಣ ಬದಲಾವಣೆಯ ರಕ್ತಸಿಕ್ತ ಮುಖವನ್ನು ಬಿಡಿಸಿಟ್ಟಿದ್ದಾರೆ. ಹಿಮಾಲಯದಲ್ಲಿನ ಹಿಮನದಿಗಳ ಕರಗುವಿಕೆಯು, ಹವಾಮಾನ ಬದಲಾವಣೆಯು ನಮ್ಮ ದೇಶಕ್ಕೆ ಒಡ್ಡುತ್ತಿರುವ ಗಮನಾರ್ಹ ಬೆದರಿಕೆಯಾಗಿದೆ; ಒಮ್ಮೆ ಸಾಕಷ್ಟು ಮರಗಳ ನೆಲೆವೀಡಾಗಿದ್ದ ನಗರಗಳು ಈಗ ಕಾಂಕ್ರೀಟ್ ಕಾಡುಗಳಾಗಿವೆ. ಹವಾಮಾನ ಬದಲಾವಣೆಯಿಂದ ಅಥವಾ ಮಾನವನ ಎಗ್ಗಿಲ್ಲದ ಚಟುವಟಿಕೆಗಳ ಕಾರಣದಿಂದಾಗಿ ಪ್ರಾಣಿಗಳ ಆವಾಸಸ್ಥಾನಗಳು ನಾಶವಾಗುತ್ತಿದ್ದು,  ಪ್ರಾಣಿಗಳೊಂದಿಗಿನ ನಮ್ಮ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರ ಫಲವಾಗಿ, ಮಾನವ - ಪ್ರಾಣಿ ಸಂಘರ್ಷಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆದರೆ, ಇವೇ ಅಧ್ಯಯನಗಳ ಮೂಲಕ, ಹವಾಮಾನ ಬದಲಾವಣೆಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನುಕೂಡ ವಿಜ್ಞಾನಿಗಳು ನಮಗೆ ತಿಳಿಯಪಡಿಸುತ್ತಿದ್ದಾರೆ. ಆದರೆ ವಿಜ್ಞಾನಿಗಳ ಸೂಚನೆಯಂತೆ ನಾವು ಯಶಸ್ವಿಯಾಗುತ್ತೇವೆಯೇ? ಕಾಲವೇ ನಿರ್ಧರಿಸಬೇಕು.

೬. ಮಾರಕ ಕ್ಯಾನ್ಸರ್ ನ ಮೇಲೆ ಜಗದ ವಿಜ್ಞಾನಿಗಳ ಯುದ್ಧ:
ಪ್ರಪಂಚದಾದ್ಯಂತ  ಪ್ರತಿ ೬ ಸಾವುಗಳಲ್ಲಿ ೧ ಸಾವಿಗೆ  ಕಾರಣ ಈ ಮಾರಕ ರೋಗ ಕ್ಯಾನ್ಸರ್; ಭಾರತವನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ಮೂಲೆಗಳ ವಿಜ್ಞಾನಿಗಳು ಇದನ್ನು ಸೋಲಿಸಲು, ಹೊಸ ಚಿಕಿತ್ಸೆ ಮತ್ತು ಔಷಧಿಗಳನ್ನು ಪ್ರತಿ ದಿನವೂ ಪತ್ತೆಹಚ್ಚುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ತಳೀಯವಿಜ್ಞಾನ, ಗಣಕೀಕೃತ ಜೀವಶಾಸ್ತ್ರ, ಬಯೋಇನ್ಫರ್ಮ್ಯಾಟಿಕ್ಸ್ ಮತ್ತು ನ್ಯಾನೊತಂತ್ರಜ್ಞಾನದಂತಹಾ ಕ್ಷೇತ್ರಗಳ ಜ್ಞಾನವನ್ನು ಅನ್ವಯಿಸಿ ವ್ಯಾಪಕವಾಗಿ ನಡೆದ ಸಂಶೋಧನೆಗಳಲ್ಲಿ ಭಾರತೀಯರ ಕೊಡುಗೆ ಇದೆ. ಕೆಲವು ಅಧ್ಯಯನಗಳು ನೈಸರ್ಗಿಕ ಪರಿಹಾರಗಳನ್ನು ಪರಿಶೋಧಿಸಿದರೆ, ಮತ್ತೂ ಕೆಲವು ಕೆಂಪು ವೈನ್ನಂತಹ ಕೆಲವು ಅನಿರೀಕ್ಷಿತ ಸಂಭಾವ್ಯ ಪದಾರ್ಥಗಳನ್ನು ಕ್ಯಾನ್ಸರ್ ವಿರೋಧಿ ಎಂದು ಸೂಚಿಸಿದೆ! ಅಷ್ಟೇ ಅಲ್ಲದೇ, ಭಾರತೀಯ ವಿಜ್ಞಾನಿಗಳೇ 'ಡಿಸ್ಅರಿಬ್' ಎಂಬ ಕ್ಯಾನ್ಸರ್ ವಿರೋಧಿ ಔಷಧವನ್ನು ತಯಾರಿಸಿದ್ದು, ಈಗಾಗಲೇ ಇದು ವೈದ್ಯಕೀಯ ಪೂರ್ವ ಪರೀಕ್ಷೆಗಳಿಗೆ ಸಿದ್ಧವಾಗಿದೆ.

೭. ೫೦ ವರ್ಷ ಹಳೆಯ ಸಮಸ್ಯೆಯಾದ 'ತೇಲುವಿಕೆಯಿಂದ ಉಂಟಾದ ಪ್ರಕ್ಷುಬ್ಧತೆ'ಯನ್ನು ಬಗೆಹರಿಸಿದ ಭಾರತೀಯ ವಿಜ್ಞಾನಿಗಳು:
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬಗೆಹರಿಸಲಾಗದ 'ತೇಲುವಿಕೆಯಿಂದ ಉಂಟಾದ ಪ್ರಕ್ಷುಬ್ಧತೆ'ಯ ಸಮಸ್ಯೆಯನ್ನು  ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪರಿಹರಿಸಿದ್ದಾರೆ; ಸೂಪರ್ ಕಂಪ್ಯೂಟರ್ಗಳನ್ನು ಬಳಸಿಕೊಂಡು, ಕೆಲವು ಹಳೆಯ ಪೂರ್ವಾಗ್ರಹಗಳನ್ನು ನಿವಾರಿಸಿಕೊಳ್ಳುತ್ತಾ, ಚದುರಿದ್ದ ಉತ್ತರದ ತುಣುಕುಗಳನ್ನು ಒಟ್ಟಿಗೆ ಸೇರಿಸಿದರು; ಇದರ ಮುಖಾಂತರ 'ತೇಲುವಿಕೆಯಿಂದ ಉಂಟಾದ ಪ್ರಕ್ಷುಬ್ಧತೆ'ಯ ಸಮಸ್ಯೆಯನ್ನು ಇನ್ನಿಲ್ಲವಾಗಿಸಲು ಸ್ಥಿರವಾದ ಸಿದ್ಧಾಂತವನ್ನು ಪ್ರಸ್ತುತಪಡಿಸಿದರು. ವಿಜ್ಞಾನಿಗಳ ಪ್ರಕಾರ, ಈ ಸಂಶೋಧನೆಯು ನಮ್ಮ ಭೂಮಂಡಲದ ವಾತಾವರಣ ಮತ್ತು ಒಳಾಂಗಣದಲ್ಲಿರುವ ಹರಿವನ್ನು ಅರ್ಥೈಸಿಕೊಳ್ಳಲು ಉತ್ತಮ ಮಾದರಿಯಾಗಿ ಸಹಾಯ ಮಾಡುತ್ತದೆ.

೮. ಭಾರತದ ಐ.ಒ.ಟಿ ತಂತ್ರಜ್ಞಾನದ ಕನಸನ್ನು ನನಸಾಗಿಸುವ ಭಾರತ ನಿರ್ಮಿತ ಟ್ರಾನ್ಸಿಸ್ಟರ್
ಚಂಡೀಘಡದಲ್ಲಿನ 'ಇಸ್ರೋ ಅರೆವಾಹಕ ಪ್ರಯೋಗಾಲಯ'ದ ಸಹಭಾಗಿತ್ವದಲ್ಲಿ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಸಂಪೂರ್ಣವಾಗಿ ಭಾರತದ್ದೇ ಆದ  'ಬೈಪೋಲಾರ್ ಜಂಕ್ಷನ್ ಟ್ರಾನ್ಸಿಸ್ಟರ್' ಅನ್ನು ಅಭಿವೃದ್ಧಿಪಡಿಸಿದ್ದಾರೆ;  ಇದು ಬಿ.ಐ.ಸಿ.ಎಂ.ಎಸ್ ಟ್ರಾನ್ಸಿಸ್ಟರ್ಗಳೊಡನೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.  ಐ.ಒ.ಟಿ ತಂತ್ರಜ್ಞಾನದಲ್ಲಿ 'ಬೈಪೋಲಾರ್ ಜಂಕ್ಷನ್ ಟ್ರಾನ್ಸಿಸ್ಟರ್'ಗಳು ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆಯಿದೆ. ಇದು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ನ್ಯಾನೊವಿದ್ಯುನ್ಮಾನ ಶ್ರೇಷ್ಠತಾ ಕೇಂದ್ರವು ಸಾಧಿಸಿರುವ ಪ್ರಮುಖ ಮೈಲಿಗಲ್ಲು. ಇದೀಗ ಭಾರತದ್ದೇ ಟ್ರಾನ್ಸಿಸ್ಟರ್ ಲಭ್ಯವಿರುವ ಕಾರಣ, ಬಹುರಾಷ್ಟ್ರೀಯ ಅರೆವಾಹಕ ತಯಾರಕರ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ಇದು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಯೋಜನೆಗಳಿಗೆ ಬಹಳ ಉಪಯುಕ್ತ ಎನಿಸಿದೆ.

೯. ಔಷಧ ನಿರೋಧಕ ಕ್ಷಯರೋಗದ ವಿರುದ್ಧ ಹೋರಾಟ:
ವಿಶ್ವದ ಕ್ಷಯರೋಗ ಪ್ರಮಾಣದಲ್ಲಿ ಭಾರತದ್ದು ಬಹುದೊಡ್ಡ ಪಾಲು; ೨೦೧೬ ವರ್ಷವೊಂದರಲ್ಲೇ ಕ್ಷಯರೋಗವು ನಮ್ಮ ದೇಶದಲ್ಲಿ ೪ ಲಕ್ಷ ಜನರ ಸಾವಿಗೆ ಕಾರಣವಾಗಿದೆ. ಇಂತಹ ಮಾರಕ ರೋಗದ ವಿರುದ್ಧ ಭಗೀರಥ ಪ್ರಯತ್ನ ನಡೆಸುತ್ತಿರುವ ನಮ್ಮ ಸಂಶೋಧಕರ ಮುಂದಿರುವ ಸವಾಲೆಂದರೆ, ಕ್ಷಯರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ಔಷಧ ನಿರೋಧಕ ತಳಿಗಳು. ಈ ತಳಿಗಳು ಈಗ ಲಭ್ಯವಿರುವ ಎಲ್ಲಾ ಪ್ರತಿಜೀವಕಗಳಿಗೆ ನಿರೋಧಕವಾಗಿದ್ದು, ಈ ಪ್ರತಿರೋಧವನ್ನು ಅವು ಹೇಗೆ ಬೆಳೆಸಿಕೊಳ್ಳುತ್ತವೆ ಎಂಬುದನ್ನು ಅರಿಯಲು ಸಂಶೋಧನೆಯನ್ನು ನಡೆಸಿದ್ದಾರೆ; ಇದು ಈ ವರ್ಷದ ಒಂದು ಪ್ರಮುಖ ಅಧ್ಯಯನವಾಗಿದ್ದು, ಈ ಔಷಧ ಪ್ರತಿರೋಧವನ್ನು ಹಿಮ್ಮುಖಗೊಳಿಸುವ ವಿಧಾನಗಳನ್ನು ಕಂಡುಕೊಳ್ಳಲು ನಮ್ಮ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ಟಿಬಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಇತರ ಔಷಧಿಗಳನ್ನು ಗುರುತಿಸುವ ಅಧ್ಯಯನವೂ ವೇಗ ಪಡೆಯುತ್ತಿದೆ. ಈ ಹೋರಾಟದಲ್ಲಿ ನಾವು ಶೀಘ್ರದಲ್ಲೇ ಯಶಸ್ವಿಯಾಗಬಹುದೆಂದು ಭಾವಿಸಲಾಗುತ್ತಿದೆ.

೧೦. ನಮ್ಮ ನಗರಗಳು ಕಸದ ತೊಟ್ಟಿಗಳಾಗದಂತೆ ತಡೆಯುವ ಕೈಂಕರ್ಯ:
ಸಣ್ಣ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ದೊಡ್ಡ ಪ್ರಮಾಣದ ತ್ಯಾಜ್ಯವನ್ನು ನಿರ್ವಹಿಸುವುದು ನಗರ ಜೀವನದಲ್ಲಿನ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಸಂಶೋಧಕರು ತ್ಯಾಜ್ಯರಾಶಿಗಳನ್ನು ತಡೆಯಲು ಪರ್ಯಾಯಗಳನ್ನು ಸೂಚಿಸುತ್ತಾರಾದರೂ, ಇದಷ್ಟೇ ಸಾಕಾಗುವುದಿಲ್ಲ; ಇದು ಜಲಪಾತ್ರಗಳನ್ನು ಮಲಿನಗೊಳಿಸುತ್ತದೆ, ಪರಿಸರವನ್ನು ಹಾಳುಗೆಡವುತ್ತದೆ ಮತ್ತು ನಗರದ ಸೌಂದರ್ಯಕ್ಕೂ ಕುತ್ತು ತರುತ್ತದೆ. ಹೆಚ್ಚುತ್ತಿರುವ ಇ-ತ್ಯಾಜ್ಯವನ್ನು ಮರುಬಳಕೆ ಮಾಡಲು ವಿಜ್ಞಾನಿಗಳು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಮತ್ತು ಇದರ ಮೂಲಕ ವಿಷಕಾರಿ ಹೊರಸೂಸುವಿಕೆಗಳನ್ನು ಕಡಿಮೆಯಾಗಿಸುವ ಯೋಜನೆ ರೂಪಿಸುತ್ತಿದ್ದಾರೆ. ಜೈವಿಕ ತ್ಯಾಜ್ಯದ ನಿವಾರಣೆಗೆ ತಂತ್ರಜ್ಞಾನದ ಮೂಲಕ ಪರಿಹಾರಗಳನ್ನು ಬಯಸುತ್ತಿರುವ ಸಂದರ್ಭದಲ್ಲೇ, ನಾವು ಜೈವಿಕತ್ಯಾಜ್ಯವೇ ಒಂದು ನಿಧಿ ಎಂಬುದನ್ನು ಕಂಡುಕೊಳ್ಳಬಹುದಾದ ಸಾಧ್ಯತೆಗಳೂ ಇಲ್ಲದಿಲ್ಲ!