Sorry, you need to enable JavaScript to visit this website.

ಜಾನುವಾರು ಭಕ್ಷಕ ನಾಯಿಗಳು - ಒಂದು ಅಧ್ಯಯನ

Read time: ೧ ನಿಮಿಷ

ಮನೆಮನೆಗಳಲ್ಲಿ ಮುದ್ದು ನಾಯಿಮರಿಗಳನ್ನು ಸಾಕುವುದು ಇಂದು ನಿನ್ನೆಯಿಂದ ಪ್ರಾರಂಭವಾದದ್ದಲ್ಲ; ಮಾನವ, ಅಲೆಮಾರಿ ಜೀವನಕ್ಕೆ ಬೆನ್ನುಮಾಡಿ, ಒಂದೆಡೆ ವಾಸ್ತವ್ಯ ಹೂಡುವುದನ್ನು ಕಲಿಯುವುದಕ್ಕೆ ಮುನ್ನವೂ, ಅವನೊಂದಿಗೆ ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗುತ್ತಿದ್ದು, ವಾಸ್ತವ್ಯ ಹೂಡುತ್ತಿದ್ದಂತೆ ತಾನೂ ಅಲ್ಲೇ ಮೊಕ್ಕಾಂ ಹೂಡಿದ ಮೊದಲ ಪ್ರಾಣಿಗಳಲ್ಲಿ ನಾಯಿಯೂ ಒಂದು! ಆದರೆ, ಸಾಕುಪ್ರಾಣಿಯಾಗಿರಬೇಕಾದ ನಾಯಿಗಳು ಹಲವಾರು ಕಾರಣಗಳಿಂದ ಬೀದಿಯ ಪಾಲಾಗುತ್ತಿರುವುದು ವಿಪರ್ಯಾಸ ಹಾಗೂ ಹಲವು ಸಮಸ್ಯೆಗಳ ಮೂಲವೂ ಹೌದು.

ನಾಯಿಗಳಿಗೂ ಮಾನವನಿಗೂ ಅವಿನಾಭಾವ ಸಂಬಂಧವಿರುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ, ಅನುಭವಿಸಿರುತ್ತೇವೆ! ಆದರೆ, ಮಕ್ಕಳ ಮೇಲೆ ಬೀದಿನಾಯಿಗಳ ದಾಳಿಯ ಪ್ರಕರಣಗಳನ್ನು ನೀವು ಗಮನಿಸಿರಬಹುದು. ಜಾನುವಾರು ಹಾಗೂ ಇತರ ಸಾಕುಪ್ರಾಣಿಗಳ ಮೇಲೂ ಇವು ಒಮ್ಮೊಮ್ಮೆ ದಾಳಿ ಮಾಡಿ, ತಮ್ಮ ಹೊಟ್ಟೆ ಹೊರೆದುಕೊಳ್ಳುವುದೂ ಉಂಟು. ಆದರೆ, ಜಾನುವಾರುಗಳ ಸಾವಿನಲ್ಲಿ ಯಾವುದೋ ವನ್ಯಮೃಗಕ್ಕಿಂತಲೂ ಹೆಚ್ಚಿನ ಪಾಲು ಶ್ವಾನಗಳದ್ದಿದೆ ಎಂದರೆ ನಂಬುತ್ತೀರಾ? ಹೌದೆನ್ನುತ್ತಾರೆ ಸಂಶೋಧಕರು. ಪರಿಸರ ಹಾಗೂ ಪರಿಸರೀಯ ವಿಜ್ಞಾನದ ಸಂಶೋಧನೆಗಾಗಿ ಇರುವ ಅಶೋಕ ದತ್ತಿ ಸಂಸ್ಥೆ (ATREE), ಬೆಂಗಳೂರು, ವಿಶ್ವ ವನ್ಯಜೀವಿ ನಿಧಿ (WWF), ಸಿಯಾಟಲ್, ಭಾರತೀಯ ವನ್ಯಜೀವಿ ಸಂಸ್ಥೆ, ಮತ್ತು ಮೈಸೂರಿನಲ್ಲಿರುವ ನೇಚರ್ ಕನ್ಸರ್ವೇಶನ್ ಫೌಂಡೇಶನ್ನ ಸಂಶೋಧಕರ ಸಹಯೋಗದಲ್ಲಿ ನಡೆಸಿದ ಅಧ್ಯಯನವು ಈ ಅಚ್ಚರಿದಾಯಕ ಸತ್ಯಾಂಶವನ್ನು ಹೊರಹಾಕಿದೆ.

ಜಾನುವಾರುಗಳಿಗಾಗುವ ಹಾನಿಯು ಒಂದು ಪ್ರಮುಖ ಆರ್ಥಿಕ ಹಾಗೂ ಸಂರಕ್ಷಣಾ ಸಮಸ್ಯೆಯಾಗಿದೆ. ಬಹುಪಾಲು ಸಂಶೋಧನೆಗಳು ಹಾಗೂ ಪ್ರಕಟಿತ ಅಧ್ಯಯನಗಳು ಕೇವಲ ದೊಡ್ಡ ವನ್ಯಜೀವಿಗಳಿಂದ ಜಾನುವಾರಿಗೆ ಒದಗುವ ಅಪಾಯದ ಮೇಲೆ ಕೇಂದ್ರೀಕೃತಗೊಂಡಿವೆ. ಆದರೆ, ವಾಸ್ತವಿಕವಾಗಿ ಈ ಹಾನಿಯಲ್ಲಿ, ವನ್ಯಜೀವಿಗಳಿಗಿಂತಲೂ ಹೆಚ್ಚು ಹಸ್ತಕ್ಷೇಪವು ಶ್ವಾನಗಳದ್ದು ಎಂದು ಈ ಅಧ್ಯಯನದಿಂದ ಕಂಡುಬಂದಿದೆ. 'ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್' ಅವರ ಸಹಕಾರದೊಂದಿಗೆ, ಹಿಮಾಚಲ ಪ್ರದೇಶದ ಸ್ಪಿತಿ ನದಿಯ ಸುತ್ತಲಿನ ಬೆಟ್ಟ ಕಣಿವೆಗಳ ಭೂಭಾಗದಲ್ಲಿ ನಡೆಸಲಾದ ಈ ಅಧ್ಯಯನವು, 'ಆಮ್ಬಿಯೋ' ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಈ ಅಧ್ಯಯನಕ್ಕಾಗಿ ಸಂಶೋಧಕರು ಅಲ್ಲಿನ ೨೫ ಹಳ್ಳಿಗಳನ್ನು ಆಯ್ದುಕೊಂಡರು. ಮೊದಲನೆಯದಾಗಿ ಅಲ್ಲಿ ಜಾನುವಾರುಗಳನ್ನು ಕಳೆದುಕೊಂಡ ರೈತರ ಸಂದರ್ಶನ ನಡೆಸಿ, ಅವರಿಂದ ಕಳೆದುಕೊಂಡ ಜಾನುವಾರುಗಳ ಸಂಖ್ಯೆ, ಅವರು ಕಣ್ಣಾರೆ ಕಂಡ ಬೇಟೆಗಾರ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದರು. ಆ ಹಳ್ಳಿಗಳ ಭೌಗೋಳಿಕ ಪರಿಸ್ಥಿತಿ, ಅಲ್ಲಿನ ತಾಪಮಾನ, ಜೀವವೈವಿಧ್ಯತೆ, ಜನಸಂಖ್ಯೆ, ನಾಯಿಗಳ ಸಂಖ್ಯೆ ಮತ್ತು ಅವುಗಳ ಜೀವನರೀತಿ, ಇನ್ನಿತರ ಮಾಹಿತಿಯನ್ನು ಹಲವಾರು ಮೂಲಗಳಿಂದ ಕಲೆ ಹಾಕಿದರು. ಈ ಸಂಶೋಧನೆಗಾಗಿ  'GRASS GIS', 'CAPTURE' ನಂತಹಾ ಹಲವಾರು ಪ್ರಮಾಣಿತ ಸುಧಾರಿತ ವಿಧಾನಗಳನ್ನು ಬಳಸಿದರು.

ಟಿಬೆಟ್ ಹಾಗೂ ಭಾರತದ ನಡುವಿನ ಕಣಿವೆಯಲ್ಲಿರುವ ಸ್ಪಿತಿ ಭೂಪ್ರದೇಶವು, ದೇಶದಲ್ಲೇ ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಪ್ರದೇಶವಾಗಿದ್ದು, ದನಗಾಹಿ ಕುರಿಗಾಹಿ ಕೃಷಿಕರ ನಾಡಾಗಿದೆ. ಇವರ ಜೀವನದ ಪ್ರಮುಖ ಕೇಂದ್ರಬಿಂದುವಾದ ಜಾನುವಾರಿಗೇ ಅಪಾಯ ಒದಗುವ ಸಂದರ್ಭಗಳು ಅನೇಕವಾದ್ದರಿಂದ, ತಮ್ಮ ಜಾನುವಾರಿಗೆ ಅಲ್ಲಿನ ಜನರು ವಿಮೆಯನ್ನು ಅವಶ್ಯವಾಗಿ ಮಾಡಿಸಿಕೊಂಡಿದ್ದಾರೆ. ಹೀಗಿರುವಾಗ, ಜಾನುವಾರುಗಳ ಹೆಚ್ಚುತ್ತಿರುವ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕುರಿ, ಆಡು, ಕತ್ತೆ, ದನ, ಯಾಕ್, ಕುದುರೆಗಳಷ್ಟೇ ಅಲ್ಲದೇ ದನ-ಯಾಕ್ಗಳ ಮಿಶ್ರತಳಿಗಳಾದ ಜೊಮೊಗಳನ್ನೊಳಗೊಂಡ ಇಲ್ಲಿನ ಜಾನುವಾರು, ಇಲ್ಲಿನ ಅಲ್ಪೈನ್ ಅಥವಾ ಮೆಲ್ಪರ್ವತದ ಹುಲ್ಲುಗಾವಲಿನ ಮಾಂಸಾಹಾರಿ ವನ್ಯಜೀವಿಗಳಾದ ಹಿಮಚಿರತೆ ಹಾಗೂ ಟಿಬೆಟಿಯನ್ ತೋಳದ ಬಾಯಿಗೆ ಆಹಾರವಾಗುತ್ತವೆ. ಆದರೆ, ಈ ಹಿಮಚಿರತೆ ಹಾಗೂ ಟಿಬೆಟಿಯನ್ ತೋಳದ ಕೈಚಳಕಕ್ಕೆ ಇಷ್ಟೊಂದು ಅಪಾರ ಪ್ರಮಾಣದ ಜಾನುವಾರು ನಷ್ಟ ಸಾಧ್ಯವೇ ಎಂದು ಕೂಲಂಕುಶವಾಗಿ ಪರೀಕ್ಷಿಸಿದಾಗ, ಶ್ವಾನಗಳ ಪ್ರಮುಖ ಪಾತ್ರ ಕಂಡುಬಂದಿದೆ.

ಅಧ್ಯಯನ ನಡೆಸಲಾದ ೨೫ ಹಳ್ಳಿಗಳಲ್ಲಿ ೫೭೦ ನಾಯಿಗಳು ಕಂಡುಬಂದಿದ್ದು, ಇವುಗಳಲ್ಲಿ ಸಾಕು ನಾಯಿಗಳಿಗಿಂತಾ ಬೀದಿ ನಾಯಿಗಳೇ ಹೆಚ್ಚಿದ್ದವು. ಈ ನಾಯಿಗಳ ಸಂಖ್ಯೆ ಇಷ್ಟು ಹೆಚ್ಚಿರಬೇಕಾದರೆ, ಇವುಗಳಿಗೆ ಸುಲಭವಾಗಿ ಆಹಾರ ದೊರೆಯಲೇಬೇಕಲ್ಲವೇ? ಈ ಭೂಪ್ರದೇಶಗಳಿಗೆ ಬರುವ ಪ್ರವಾಸಿಗರು ಎಗ್ಗಿಲ್ಲದಂತೆ ಯಥೇಚ್ಚವಾಗಿ ಎಸೆದು ಹೋಗುವ ತ್ಯಾಜ್ಯವೇ ಈ ನಾಯಿಗಳ ಹೊಟ್ಟೆ ತುಂಬಿಸುತ್ತದೆಯಂತೆ. ಹಾಗಿದ್ದರೆ, ಜಾನುವಾರುಗಳ ಮೇಲೆ ಇವು ದಾಳಿ ಮಾಡುವ ಹಿಂದಿನ ಕಾರಣವೇನು ಎಂಬ ಪ್ರಶ್ನೆಗೆ, ಈ ಅಧ್ಯಯನದ ಲೇಖಕಿಯಾದ ಸಂಶೋಧಕಿ ಚಂದ್ರಿಮಾ ಹೋಮೆ, 'ರಿಸರ್ಚ್ ಮ್ಯಾಟರ್ಸ್'ನೊಂದಿಗಿನ ಸಂದರ್ಶನದಲ್ಲಿ, "ಮುಂಗಾರಿನ ಹಿಂದುಮುಂದಿನ ತಿಂಗಳುಗಳಲ್ಲಿ, ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿರುವ ಕಾರಣ, ನಾಯಿಗಳಿಗೆ ಆಹಾರ ಸಾಲದು ಬರುತ್ತದೆ. ಆಗ ಜಾನುವಾರಿನ ಮೇಲೆ ದಾಳಿ ನಡೆಸುತ್ತವೆ", ಎನ್ನುತ್ತಾರೆ.

ಸಾಮಾನ್ಯವಾಗಿ ಕೃಷಿಕರು ನಾಯಿಗಳನ್ನು ಜಾನುವಾರಿನ ಕಾವಲಿಗೆ ಇರಿಸಿಕೊಳ್ಳುವ ಪದ್ಧತಿಯ ಬಗ್ಗೆ ಪ್ರಸ್ತಾಪಿಸಿ, ಸ್ಪಿತಿ ಕಣಿವೆಯಲ್ಲಿಯೂ ಹೀಗೇ ಇದೆಯೇ ಎಂದು ಪ್ರಶ್ನಿಸಿದಾಗ "ಅಲ್ಲಿರುವ ಕೃಷಿಕರು ಪ್ರಮುಖವಾಗಿ ದನಗಾಹಿ-ಕುರಿಗಾಹಿಗಳಾಗಿದ್ದು, ನಾಯಿಗಳನ್ನು ಜಾನುವಾರಿನ ಕಾವಲಿಗೆ ಇರಿಸುವುದಿಲ್ಲ. ಇಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿರುವ ಬೀದಿನಾಯಿಗಳು, ಜಾನುವಾರಿನ ಹಾಗೂ ಅದರ ಕಾವಲಿಗಿರುವ ಜನರ ಚಲನವಲನಗಳನ್ನು ಗಮನಿಸಿಕೊಂಡು, ಅವಕಾಶ ದೊರೆತ ಮರುಕ್ಷಣವೇ ದಾಳಿ ನಡೆಸಿ, ಜಾನುವಾರನ್ನು ಆಹಾರವನ್ನಾಗಿಸಿಕೊಳ್ಳುತ್ತವೆ”, ಎಂದು ವಿವರಿಸುತ್ತಾರೆ. ಕೇವಲ ಆಡು, ಕುರಿಗಳಂತಹ ಸಣ್ಣ ಪ್ರಾಣಿಗಳ ಮೇಲೆ ಮಾತ್ರವಲ್ಲದೇ, ದನ, ಕುದುರೆ, ಕತ್ತೆಗಳಂತಹ ದೊಡ್ಡ ಪ್ರಾಣಿಗಳನ್ನೂ ನಾಯಿಗಳು ಕೊಲ್ಲುತ್ತವೆ ಎಂಬುದು ಈ ಸಂಶೋಧನೆಯ ಮೂಲಕ ದಾಖಲಾಗಿದೆ.

ಈ ಸಂಶೋಧನೆಯು ಕಂಡುಕೊಂಡ ಪ್ರಕಾರ, ಜಾನುವಾರುಗಳಿಗೆ ವನ್ಯಜೀವಿ ಹಿಮಚಿರತೆಗಳಿಂದಾಗುವ ಹಾನಿಯು ಶೇಕಡಾ ೨೮.೫ ಹಾಗೂ ತೋಳಗಳಿಂದಾಗುವ ಹಾನಿಯು ಶೇಕಡಾ ೮. ಆದರೆ, ನಾಯಿಗಳಿಂದಾಗುವ ಹಾನಿಯು ಇವೆಲ್ಲಾವುಕ್ಕಿಂತಲೂ ಹೆಚ್ಚಿದ್ದು, ಶೇಕಡಾ ೬೩.೫ ಜಾನುವಾರು ನಾಶಕ್ಕೆ ನಾಯಿಗಳೇ ಕಾರಣ ಎಂದು ಸಾಬೀತಾಗಿದೆ. ಈ ಅಧ್ಯಯನ ನಡೆಸಲಾದ ಒಂದು ವರ್ಷದ ಅವಧಿಯಲ್ಲಿಯೇ, ಕೇವಲ ನಾಯಿಗಳಿಂದ ಆದ ಜಾನುವಾರುಗಳ ಸಾವು, ಅಲ್ಲಿನ ಕೃಷಿಕರಿಗೆ ಸುಮಾರು ೧೨ ಲಕ್ಷ ರೂಪಾಯಿಗಳಷ್ಟು ನಷ್ಟವನ್ನು ಉಂಟುಮಾಡಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇಂತಹ ಪ್ರಮುಖ ಸಮಸ್ಯೆಯಾದ ನಾಯಿಗಳ ಬಗ್ಗೆ ಬೆಳಕು ಚೆಲ್ಲುವುದು ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಈ ಸಂಶೋಧನೆಯು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಎರಡು ಕಾರಣಗಳಿವೆ; ಮೊದಲನೆಯದಾಗಿ, ನಾಯಿಗಳು ಕೊಂದ ಜಾನುವಾರಿನ ಲೆಕ್ಕವನ್ನೂ, ವಿಮೆಗಾಗಿ ಅಥವಾ  ಮಾಹಿತಿ ಕೊರತೆಯ ಕಾರಣದಿಂದ, ವನ್ಯಜೀವಿಗಳಾದ ಹಿಮಚಿರತೆ ಹಾಗೂ ತೋಳಗಳ ಖಾತೆಗೆ ಸೇರಿಸಲಾಗುತ್ತಿದ್ದು, ಅಳಿವಿನಂಚಿಗೆ ಸರಿಯುತ್ತಿರುವ ಈ ಪ್ರಾಣಿಗಳ ಮೇಲೆ ಮತ್ತಷ್ಟು ಒತ್ತಡ ಬೀಳುತ್ತಿದೆ. ಎರಡನೆಯ ಕಾರಣವೇನೆಂದರೆ, ಜಾನುವಾರುಗಳನ್ನು ಕೊಲ್ಲುತ್ತಿರುವ ನಾಯಿಗಳ ಬಗ್ಗೆ ಅರಿವು ಮೂಡಿ, ಅವುಗಳ ಸಂಖ್ಯೆಯನ್ನು ಹತೋಟಿಯಲ್ಲಿಡುವ ಪ್ರಯತ್ನ ನಡೆದರೆ, ನಾಯಿಗಳ ಬಾಯಿಗೆ ಆಹಾರವಾಗುತ್ತಿರುವ ನಿರುಪದ್ರವಿ ವನ್ಯಜೀವಿಗಳಾದ ನೀಲಿ ಕುರಿ, ಐಬೆಕ್ಸ್, ಹಿಮಾಲಯನ್ ಮರ್ಮೂತ್ನಂತಹಾ ಜೀವಿಗಳ ಸಂರಕ್ಷಣೆಯೂ ಸಾಧ್ಯವಾಗುತ್ತದೆ ಹಾಗೂ ಮೇಲ್ಪರ್ವತದ ಹುಲ್ಲುಗಾವಲಿನ ಪರಿಸರೀಯ ವ್ಯವಸ್ಥೆಯಲ್ಲಿ ಸಮತೋಲನ ಮೂಡುತ್ತದೆ. ಈ ಕಾರಣಗಳಿಂದ ಪರಿಸರೀಯವಾಗಿ ಹಾಗೂ ಆರ್ಥಿಕವಾಗಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ ಈ ಸಂಶೋಧನೆಯು, ವಿವಿಧ ಪರಿಸರೀಯ ವ್ಯವಸ್ಥೆಗಳ ಪ್ರತ್ಯಕ್ಷ/ ಪರೋಕ್ಷ ಭಾಗವಾಗಿರುವ ನಾಯಿಗಳ ಸಂಖ್ಯೆಯ ನಿಯಂತ್ರಣ, ಹಿಮಾಲಯ ಕಣಿವೆಯ ಹಳ್ಳಿಗಳಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ, ಜಾನುವಾರು ರಕ್ಷಣೆಯ ಸುಧಾರಿತ ವಿಧಾನಗಳ ಅಗತ್ಯತೆ, ಅನೇಕ ಅಳಿವಿನಂಚಿನ ವನ್ಯಪ್ರಾಣಿಗಳು ಎದುರಿಸುತ್ತಿರುವ ಕಂಡುಕೇಳರಿಯದ ಬೆದರಿಕೆಗಳಂತಹ ಇಲ್ಲಿಯವರೆಗೂ ನಿರ್ಲಕ್ಷಿತ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದು, ಮುಂದಿನ ಹಲವು ಸಂಶೋಧನೆಗಳು ಹಾಗೂ ನೀತಿಸಂಹಿತೆ ರಚನೆಗಳಿಗೆ ದಾರಿದೀಪವಾಗಿದೆ.

Tags: