ಭಾರತ - ಜಗತ್ತಿನ ಅತೀ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗಳಲ್ಲಿ ಅಗ್ರ ರಾಷ್ಟ್ರ. ಜೊತೆಗೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರ. ಆದರೆ ದುರದೃಷ್ಟದ ಸಂಗತಿಯೇನು ಗೊತ್ತೆ? ಭಾರತದ ಸುಮಾರು 15% ಜನ ಇಂದಿಗೂ ಕತ್ತಲೆಯಲ್ಲೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕೇವಲ ಸರ್ಕಾರ ಎಂದರೆ ತಪ್ಪಾಗಬಹುದು. ಭಾರತದ ವಿದ್ಯುತ್ ಪೂರೈಕೆಗೆ ಒಂದೆಡೆ ಅರ್ಥಿಕ ಹಾಗೂ ನೈಸರ್ಗಿಕ ಸಂಪನ್ಮೂಲದ ಕೊರತೆ ಇದ್ದರೆ, ಇನ್ನೊಂದೆಡೆ ಪರಿಸರ ರಕ್ಷಣೆಯ ದೊಡ್ಡ ಜವಾಬ್ದಾರಿಯೂ ತಡೆಯಾಗಿ ನಿಂತಿದೆ. ವಿಶ್ವದ ಅನೇಕ ದೇಶಗಳು ಈಗಾಗಲೆ ನವೀಕರಿಸಬಹುದಾದ ಇಂಧನಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳತೊಡಗಿವೆ. ಸೌರಶಕ್ತಿ, ವಾಯುಶಕ್ತಿ ಹಾಗೂ ಜೈವಿಕಶಕ್ತಿಗಳಿಂದ ಭಾರತ ಕೂಡ ಇಂದು 67033 ಮೆಗಾವ್ಯಾಟ್ ಗಳಷ್ಟು ವಿದ್ಯುತನ್ನು ತಯಾರಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದಾಗ್ಯೂ ಇದು ಭಾರತದ ಒಟ್ಟು ವಿದ್ಯುತ್ತಿನ ಕೇವಲ 20% ಮಾತ್ರ ಎಂದರೆ ಹತಾಶೆಯೂ ಆಗಬಹುದು. ದಿನದಿಂದ ದಿನಕ್ಕೆ ವಿದ್ಯುತ್ತಿನ ಅವಶ್ಯಕತೆ ಹೆಚ್ಚಾಗುತ್ತಿರುವ ಕಾಲದಲ್ಲಿ, ಇದಕ್ಕೆ ಪರಿಹಾರ ಹುಡುಕುವ ಅಗತ್ಯತೆ ಇಂದು ನಮ್ಮೆದುರಿಗಿದೆ.
ಇತ್ತೀಚಿನ ದಿನಗಳಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಹೊಸದೊಂದು ಅಧ್ಯಯನ ಮಾಡಿದ್ದಾರೆ. ಸೌರಶಕ್ತಿ ಹಾಗೂ ವಾಯುಶಕ್ತಿಯ ದೊಡ್ಡ ಪ್ರಮಾಣದ ಸಂಯೋಜನೆ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದನ್ನು ಮನ ಮುಟ್ಟುವಂತೆ ತಿಳಿಸಿದ್ದಾರೆ. ಎನರ್ಜಿ ಸ್ಟ್ರಾಟೆಜಿ ರಿವ್ಯೂಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನವು ಪರಿಸರ ಸ್ನೇಹಿಯಾದ ನವೀಕರಿಸಬಹುದಾದ ಇಂಧನಗಳನ್ನು ಬಳಸಿಕೊಂಡು ದೇಶವನ್ನು ವಿದ್ಯುತ್ ಉತ್ಪಾದನೆಯ ದೃಷ್ಟಿಯಲ್ಲಿ ಸ್ವಾವಲಂಬಿಯನ್ನಾಗಿ ಹೇಗೆ ಮಾಡಬಹುದು ಎನ್ನುವುದನ್ನು ವಿವರಿಸಿದೆ.
ಭಾರತದ ನೀತಿ ಆಯೋಗವು ಭಾರತವನ್ನು ಈ ನಿಟ್ಟಿನಲ್ಲಿ ಸ್ವಾವಲಂಬಿಯಾಗಿಸಲು ನಾಲ್ಕು ಬಗೆಯ ಶಕ್ತಿ ಪೂರೈಕೆಯ ಸನ್ನಿವೇಶಗಳನ್ನು ನಮ್ಮೆಲ್ಲರ ಮುಂದಿಟ್ಟಿದೆ. ಈ ಅಧ್ಯಯನವು, ಈ ನಾಲ್ಕು ಬಗೆಯ ಸನ್ನಿವೇಶಗಳನ್ನು ಸವಿಸ್ತಾರವಾಗಿ ವಿವರಿಸುವುದರ ಜೊತೆಗೆ ಭಾರತದ ಈಗಿನ ಪರಿಸ್ಥಿತಿಯ ಬಗ್ಗೆ ಅವಲೋಕನವನ್ನೂ ಮಾಡಿದೆ.
ದೇಶದಲ್ಲಿ ಯಾವುದೇ ತರಹದ ಸನ್ನಿವೇಶಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬೇಕು ಎನ್ನುವುದು ಇದರ ಮೂಲ ಆಶಯ. ಮೊದಲನೆಯದಾಗಿ 'ಕನಿಷ್ಠ ಪ್ರಯತ್ನದ ಸನ್ನಿವೇಶ’. ದೇಶದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆದಷ್ಟು ಕಡಿಮೆ ಹೊಸದಾದ ಮೂಲಭೂತ ಸೌಕರ್ಯಗಳ ಸ್ಥಾಪನೆ ಮಾಡುವುದು. ಎರಡನೆಯದು 'ನಿಶ್ಚಿತ ಪ್ರಯತ್ನದ ಸನ್ನಿವೇಶ’. ಈ ಸನ್ನಿವೇಶವು ತುಲನಾತ್ಮಕವಾಗಿ ಆಶಾವಾದಿಯಾಗಿದೆ. ಅನಿಲ, ಕಲ್ಲಿದ್ದಲು, ಪರಮಾಣು ಮತ್ತು ಜಲವಿದ್ಯುತ್ ಉತ್ಪಾದನೆಗಳ ಸೌಕರ್ಯಗಳ ಸೇರ್ಪಡೆಗೆ ಅವಕಾಶವನ್ನು ನೀಡುತ್ತದೆ. ಮೂರನೇಯದಾದ 'ಆಕ್ರಮಣಕಾರಿ ಪ್ರಯತ್ನದ ಸನ್ನಿವೇಶ'ವು, ನವೀಕರಿಸಬಹುದಾದ ಮೂಲಗಳಿಂದ ಭಾರತದಲ್ಲಿ ಶಕ್ತಿಯ ಉತ್ಪಾದನೆ ಹೆಚ್ಚಿಸಲು ಆಕ್ರಮಣಕಾರಿ ರೀತಿಯಲ್ಲಿ ಹೆಚ್ಚಿನ ಪ್ರಯತ್ನವನ್ನು ಹಾಕುವ ಯೋಜನೆಯನ್ನು ಸಮರ್ಥಿಸುತ್ತದೆ.
ಇನ್ನು ಅತ್ಯಂತ ಆಶಾವಾದಿಯಾದ ನಾಲ್ಕನೇ ಸನ್ನಿವೇಶವನ್ನು 'ವೀರೋಚಿತ ಪ್ರಯತ್ನದ ಸನ್ನಿವೇಶ' ಎಂದು ಕರೆಯಬಹುದು. ಇದು ಅಂತರಾಷ್ಟ್ರೀಯ ತೈಲ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ತಯಾರಿರುವ ಸಂದರ್ಭವನ್ನು ತೋರಿಸುವ ಪ್ರಯತ್ನವನ್ನು ಮಾಡುತ್ತದೆ. ಈ ಸನ್ನಿವೇಶದಲ್ಲಿ ಜನರಿಗೆ ಉಚಿತವಾದ ಅನಿಲ ಮಾರುಕಟ್ಟೆ ಲಭ್ಯವಿರುತ್ತದೆ. ಜೊತೆಗೆ ಈ ಮಾರುಕಟ್ಟೆಗಳ ಮೇಲೆ ಸರ್ಕಾರದ ಹಿಡಿತ ಇರುವುದಿಲ್ಲ ಎಂದೇ ಹೇಳಬಹುದು. ಈ ಪ್ರಯತ್ನದಲ್ಲಿ ನಾವೇನಾದರೂ ಮುಂದುವರೆದರೆ, 2032ರ ವರೆಗೆ ಸುಮಾರು 450 GW (ಗಿಗಾವ್ಯಾಟ್) ನಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಬಹುದಾಗಿದೆ.
ಮೊದಲೆರಡು ಸನ್ನಿವೇಶಗಳಲ್ಲಿ ವಿದ್ಯುತ್ತಿನ ಬೇಡಿಕೆ ಉತ್ಪಾದನೆಗಿಂತ ಹೆಚ್ಚಿದೆ. ಆ ಕಾರಣದಿಂದ ಈ ಎರಡು ಸನ್ನಿವೇಶಗಳನ್ನು ಉಪಯೋಗಿಸುವುದು ಇಂದಿನ ನವ ಭಾರತಕ್ಕೆ ಅಸಾಧ್ಯವಾದ ಮಾತು. ಆದರೆ ಕೊನೆಯ ಎರಡು ಸನ್ನಿವೇಶಗಳು ಈಗಿನ ಸ್ಥಿತಿ-ಗತಿಗೆ ಸಮಂಜಸವಾಗಿವೆ. ಆದರೆ ಆ ಪ್ರಮಾಣದ ಮೂಲಸೌಕರ್ಯಗಳನ್ನು ಒದಗಿಸಿ ಒಂದು ವೇಳೆ ವಿದ್ಯುತ್ ಉತ್ಪಾದನೆ ಮಾಡಿದರೂ ಸಹ, ಅದನ್ನು ಮನೆ ಮನೆಗಳಿಗೆ ತಲುಪಿಸಲು ಬೇಕಾಗುವ ಪ್ರಸರಣ ಹಾಗೂ ವಿತರಣ ಸೌಕರ್ಯಗಳು ಭಾರತದ ಬಳಿ ಇಲ್ಲ. ಈ ಅಧ್ಯಯನದಲ್ಲಿ ಅಧ್ಯಯನಕಾರರು ಕೊನೆಯ ಎರಡು ಸನ್ನಿವೇಶಗಳನ್ನು ಯಾವ ರೀತಿ ಆಧುನೀಕರಿಸಬಹುದು ಹಾಗೂ ಈಗಿನ ಭಾರತದ ಪರಿಸ್ಥಿತಿಗೆ ತಕ್ಕಂತೆ ಅವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು National Electricity System Sustainability Index (NESSI)ಯ ಅಂಕಿ-ಅಂಶಗಳ ಮೂಲಕ ವಿವರಿಸುತ್ತಾರೆ.
NESSI ಮೌಲ್ಯವು ದೇಶದಲ್ಲಿನ ಸಂಪನ್ಮೂಲಗಳ ವಿಶ್ವಸಾರ್ಹತೆ, ಲಭ್ಯತೆ, ದೇಶದ ಬೆಳವಣಿಗೆಯ ದರ, ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮತ್ತು ವಿದ್ಯುತ್ ಹೊರಸೂಸುವಿಕೆಯ ತೀವ್ರತೆಯನ್ನು ಸೂಚಿಸುವ ಮೌಲ್ಯಮಾಪನವಾಗಿದೆ. ಜೊತೆಗೆ ಈ ಮಾಪನವು ವಿದ್ಯುತ್ ಉತ್ಪಾದನೆ ಹಾಗೂ ಅಭಾವವು ಭಾರತದ ಜಿಡಿಪಿಯ (ಒಟ್ಟು ದೇಶಿಯ ಉತ್ಪನ್ನ) ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತದೆ. ಒಂದು ವೇಳೆ ವ್ಯವಸ್ಥೆಗಳೆಲ್ಲವೂ ಪರಿಪೂರ್ಣವಾಗಿದ್ದು, ಆದರ್ಶ ವ್ಯವಸ್ಥೆಯಾಗಿದ್ದರೆ ಅಂತಹ ಸಮರ್ಥವಾದ ವ್ಯವಸ್ಥೆಯ NESSI ಮೌಲ್ಯವನ್ನು 1 ಎಂದು ಪರಿಗಣಿಸಲಾಗುತ್ತದೆ. ಇಂದಿನ ಭಾರತದ ಸ್ಥಿತಿಯ ಬಗ್ಗೆ ಹೇಳುವುದಾದರೆ ಇದರ ಮೌಲ್ಯ 0.3777.
ಅಧ್ಯಯನದ ಪ್ರಕಾರ, ಈ ರೀತಿ ಆಧುನೀಕರಿಸಿದ ‘ಆಕ್ರಮಣಕಾರಿ ಪ್ರಯತ್ನದ ಸನ್ನಿವೇಶ’ದ ಪ್ರಕಾರ ಅಭಿವೃದ್ಧಿ ಸಾಧಿಸಿದಲ್ಲಿ. 2031ರ ಒಳಗಾಗಿ ಭಾರತ 0.51 NESSI ಮೌಲ್ಯವನ್ನು ಮುಟ್ಟಲಿದೆ. 2024ರ ವರೆಗೆ ಹೇರಳವಾಗಿ ಸಿಗಲಿರುವ ಬೈಜಿಕ ಶಕ್ತಿಯ ಸಹಕಾರ ಕೂಡ ಇದಕ್ಕೆ ದಕ್ಕಲಿದೆ. ಜೊತೆಗೆ 60,000 MW ಗಳಷ್ಟು ವಾಯುಶಕ್ತಿ, 1,00,000 ಲಕ್ಷ MW ಗಳಷ್ಟು ಸೌರಶಕ್ತಿಯ ಸಾಮರ್ಥ್ಯದ ಉತ್ಪಾದನೆ ಕೂಡ ಆಗಬೇಕಿದೆ. ಅದೇ ರೀತಿ ಈ ಗುರಿಯನ್ನು ಸಾಧಿಸಲು ನಗರದ ನೂರು ಪ್ರತಿಶತ ಮನೆಗಳಿಗೆ ವಿದ್ಯುತ್ ತಲುಪಬೇಕು. ಅದೇ ರೀತಿ ಗ್ರಾಮೀಣ ಭಾಗದ 80% ಮನೆಗಳಿಗಾದರೂ ವಿದ್ಯುತ್ ತಲುಪಬೇಕು.
ಈಗಾಗಲೇ ಎಲ್ಲ ಗ್ರಾಮಗಳೂ ವಿದ್ಯುತೀಕರಣಗೊಂಡಿವೆಯಲ್ಲ? ಎಂದು ನೀವು ಪ್ರಶ್ನಿಸಬಹುದು. ಆದರೆ ಅಲ್ಲೊಂದು ಗಮನಿಸಬೇಕಾದ ಅಂಶವಿದೆ. ಎಲ್ಲ ಗ್ರಾಮಗಳಿಗೂ ವಿದ್ಯುತ್ ತಲುಪಿದೆಯೇ ಹೊರತು ಗ್ರಾಮದ ಎಲ್ಲ ಮನೆಗೂ ಇನ್ನೂ ವಿದ್ಯುತ್ ತಲುಪಿಲ್ಲ. ಹಲವಾರು ಗ್ರಾಮಗಳ 10% ಮನೆಗಳಷ್ಟೆ ವಿದ್ಯುತೀಕರಣಗೊಂಡಿವೆ. ದೇಶದ ಸುಮಾರು 80 ಲಕ್ಷ ಮನೆಗಳು ಇಂದಿಗೂ ಸೂರ್ಯಾಸ್ತವಾದ ನಂತರ ಕತ್ತಲೆಯಲ್ಲೆ ಕಾಲ ಕಳೆಯುತ್ತಾರೆ. ಮೇಘಾಲಯ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಸ್ಸಾಮ್, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಮುಂಬರುವ ದಿನಗಳಲ್ಲಿ ಈ ಕಾರ್ಯಗಳನ್ನು ಪೂರ್ಣಗೊಳಿಸುವತ್ತ ಭಾರತ ಸಾಗಬೇಕಾಗಿದೆ.
ಆದರೆ ಈ ಗುರಿಯನ್ನು ಸಾಧಿಸಲು ಅಷ್ಟೇ ಬಲು ದೊಡ್ಡ ಮಟ್ಟದ ವೆಚ್ಚವೂ ಇದೆ. ಅಧ್ಯಯನಕಾರರು ಈ ರೀತಿಯ ಆಕ್ರಮಣಕಾರಿ ಸನ್ನಿವೇಶದ ಒಟ್ಟು ಖರ್ಚನ್ನು 63.5 ಟ್ರಿಲಿಯನ್ ಎಂದು ಅಂದಾಜಿಸಿದ್ದಾರೆ. ಈ ಮೊತ್ತದ ಹಣದ ಸಹಾಯದಿಂದ ಸುಮಾರು 924 GW ನಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು. ಇದರಲ್ಲಿ ಸುಮಾರು 723 GW ನಷ್ಟನ್ನು ಈ ಮಧ್ಯಂತರ ವರ್ಷಗಳಲ್ಲಿ ಉತ್ಪಾದಿಸಬೇಕಾಗುತ್ತದೆ. ಹಾಗೂ ಅದರಲ್ಲಿ ಸುಮಾರು 160 GW ರಷ್ಟನ್ನು ಸೌರ ಹಾಗೂ ವಾಯಶಕ್ತಿಯ ಮೂಲದಿಂದ ಉತ್ಪಾದಿಸಬೇಕಾಗುತ್ತದೆ. ಈ ವಿಧಾನವು ಪರಿಸರ ಸ್ನೇಹಿ ಕೂಡ ಆಗಿರುವುದರಿಂದ, ಈ ವಿಧಾನವು ಭಾರತದ ಇಂಗಾಲದ ಬಳಕೆಯನ್ನು ಕೂಡ ಕಡಿಮೆ ಮಾಡಬಹುದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಆದರೆ ಇನ್ನೊಂದೆಡೆ ಸೌರಶಕ್ತಿ ಹಾಗೂ ವಾಯುಶಕ್ತಿಯ ಬಳಕೆಯಾಗುತ್ತಿರುವುದರಿಂದ ವಿದ್ಯುಚ್ಛಕ್ತಿಯ ಮೇಲಿನ ತೆರಿಗೆ ಕೂಡ ಹೆಚ್ಚಾಗಬಹುದು. ಜೊತೆಗೆ ನವೀಕರಿಸಬಹುದಾದ ಸಂಪನ್ಮೂಲಗಳು ನೈಸರ್ಗಿಕವಾದದ್ದಾಗಿರುವುದರಿಂದ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಬಹುದು.
ಈ ಎಲ್ಲ ಕಾರಣಗಳ ಸಲುವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದೇಶಕ್ಕೆ ತೊಂದರೆಯಾಗಬಹುದು. ಆದರೆ ಈ ಯೋಜನೆಯು ದೀರ್ಘಾವಧಿಯವರೆಗೆ ಪರಿಸರ ಸಂರಕ್ಷಣೆಯನ್ನು ಮಾಡುವುದರಿಂದ, ಆರ್ಥಿಕ ಭಾರ ಕ್ಷುಲ್ಲಕವಷ್ಟೆ. ಅಲ್ಪಾವಧಿಯಲ್ಲಿ ಅದನ್ನು ಸರಿ ದಾರಿಗೆ ತರಬಹುದು ಎನ್ನುತ್ತಾರೆ ವಿಜ್ಞಾನಿಗಳು.
“ಭಾರತ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿರುವುದರಿಂದ ದೇಶದ ಬಡವರಿಗೂ ನ್ಯಾಯ ಸಿಗಬೇಕಿರುವುದು ಅನಿವಾರ್ಯ. ಬಡತನವವನ್ನು ಅಭಿವೃದ್ದಿ ಕಾರ್ಯಗಳಿಂದ ನಿವಾರಿಸಬೇಕು, ಅಭಿವೃದ್ಧಿ ಸಮಾಜದ ಕೊನೆಯ ವ್ಯಕ್ತಿಯನ್ನೂ ಸಹ ತಲುಪಬೇಕು. ಆದ್ದರಿಂದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಬೇಕು” ಎಂದು ಈ ಅಧ್ಯಯನದ ಲೇಖಕರಾದ ಪ್ರೊ. ಬಾಲಚಂದ್ರ ಪಾಟೀಲ್ ತಿಳಿಸುತ್ತಾರೆ.
ಕೊನೆಯದಾಗಿ ಅಧ್ಯಯನವು ಭಾರತದ ವಿದ್ಯುತ್ ವ್ಯವಸ್ಥೆಯನ್ನು ಯಾವ ರೀತಿಯಾಗಿ ಪರಿಸರ ಸ್ನೇಹಿಯನ್ನಾಗಿಸಬಹುದು ಎಂಬುದನ್ನು ವಿವರಿಸುತ್ತದೆ. ನವೀಕರಿಸಬಹುದಾದ ಇಂಧನಗಳ ಒಗ್ಗೂಡಿಕೆ ಇಂಗಾಲದ ಹೆಜ್ಜೆ ಗುರುತನ್ನು ಅಂದರೆ ದೇಶದ ಇಂಗಾಲದ ಬಳಕೆಯನ್ನು ಕಡಿಮೆ ಮಾಡುವುದರಲ್ಲಿ ಸಂಶಯವಿಲ್ಲ. ಅದೇ ರೀತಿ ಇದರಿಂದಾಗುವ ಭಾರತದ ಆರ್ಥಿಕ, ಸಾಮಾಜಿಕ ಹಾಗೂ ನೈಸರ್ಗಿಕ ಪರಿವರ್ತನೆಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳವುದು ಒಳಿತು ಎಂದು ತಮ್ಮ ಲೇಖನಿಗೆ ಅಧ್ಯಯನಕಾರರು ವಿಶ್ರಾಂತಿ ನೀಡುತ್ತಾರೆ.