ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಭೂಮಿಯ ಮಣ್ಣಿನ ಸುಗಂಧ ಹಾಗೂ ಅದನ್ನು ಸೇವಿಸಬೇಕೆಂಬ ಹಂಬಲ

ಬೆಂಗಳೂರು
20 Feb 2019

ಒಮ್ಮೆ ಕಲ್ಪಿಸಿಕೊಳ್ಳಿ. ಆ ಮೋಡ ಕವಿದ ಮುಸ್ಸಂಜೆ. ಮೇಘ ತುಂಬಿದ ಬಾನು. ಆ ಬಾನಿನಿಂದ ನಿಧಾನವಾಗಿ ಕೆಳಗಿಳಿದು ಭೂಮಿಯನ್ನು ತಾಕಿದ ಮಳೆಹನಿಗಳು. ಈ ಮಳೆಹನಿಗಳ ಸ್ಪರ್ಷದಿಂದ ಹಸಿಯಾದ ಭೂಮಿಯ ಮಣ್ಣು. ಮಣ್ಣಿನಿಂದ ಹೊರಸೂಸುವ ಆ ಭೂಮಿಯ ಸುಗಂಧ. ಎಂತಹ ಅದ್ಭುತ ಅನುಭವವಲ್ಲವೆ? ಈ ಹೊಸ-ಮಳೆಹನಿಯ ಹಸಿಯಾದ ಭೂಮಿಯ ಸುವಾಸನೆ ನಿಮಗೆ ಎಂದಾದರೂ ಅದನ್ನು ತಿನ್ನಬೇಕೆನ್ನುವ ಪ್ರಚೋದನೆಯನ್ನು ನೀಡಿದೆಯೆ? ಗಾಬರಿ ಪಡಬೇಡಿ, ಅನೇಕ ಸಸ್ತನಿಗಳಲ್ಲಿ ಇದು ಸಾಮಾನ್ಯ. 

ಭೂಮಿಗೆ ಮಳೆಹನಿಗಳು ಸ್ಪರ್ಶಿಸಿದಾಗ, ‘ಮಣ್ಣಿನ’ ಸುಗಂಧವು ಮಣ್ಣನ್ನು ತಿನ್ನಲು ಅನೇಕರನ್ನು ಪ್ರಚೋದಿಸುತ್ತದೆ. ‘ಜಿಯೋಫಜಿ’ ಅಥವಾ ‘ಮಣ್ಣನ್ನು ತಿನ್ನುವುದು’ ಜೀವಿಗಳಲ್ಲಿ ಸಾಮಾನ್ಯವಾದ ಅನುಭವ; ಅಂಬೆಗಾಲಿಡುವ ಮಗು ಇಂದಿಗೂ ಕೂಡ ಇದನ್ನು ಮಾಡುವುದನ್ನು ನೀವು ನೋಡಿರಬಹುದು. ಈ ವರ್ತನೆಯು ಮಾನವರಲ್ಲಿ ಮಾತ್ರ ಕಂಡುಬರುತ್ತದೆ ಎಂದುಕೊಳ್ಳಬೇಡಿ. ಏಕೆಂದರೆ ಮನುಷ್ಯನನ್ನು ಹೊರತುಪಡಿಸಿ, ಅನೇಕ ಸಸ್ತನಿ ಮತ್ತು ಇತರ ಕಶೇರುಕಗಳಲ್ಲಿ ಕೂಡ ಕಂಡುಬರುತ್ತದೆ. ಇತ್ತೀಚಿನ ಅಧ್ಯಯನದಲ್ಲಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ (ಎನ್ಐಎಎಸ್), ಬೆಂಗಳೂರು, ಕ್ಯೋಟೋ ಯುನಿವರ್ಸಿಟಿ, ಜಪಾನ್, ಯುನಿವರ್ಸಿಟಿ ಆಫ್ ಕೊಲೊರಾಡೋ ಮತ್ತು ಅಮೇರಿಕಾದ ನಾರ್ಥ-ವೆಸ್ಟ್ ಯುನಿವರ್ಸಿಟಿಯ ಸಂಶೋಧಕರು ಇತರ ಪ್ರಾಣಿಗಳಲ್ಲಿಯೂ ಈ ಕುತೂಹಲಕಾರಿ ವರ್ತನೆಯನ್ನು ದಾಖಲಿಸಿದ್ದಾರೆ. ಅಮೇರಿಕನ್ ಜರ್ನಲ್ ಆಫ್ ಫಿಸಿಕಲ್ ಆಂತ್ರೊಪಾಲಜಿ (American Journal of Physical Anthropology) ಯಲ್ಲಿ ಪ್ರಕಟವಾದ ಅಧ್ಯಯನವು ಈ ವಿಚಿತ್ರ ಸ್ವಭಾವದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ.

ಪ್ರಾಣಿಗಳಲ್ಲಿ ಜಿಯೋಫಜಿಗೆ ಆಧಾರವಾಗಿರುವ ಕಾರಣಗಳ ಬಗ್ಗೆ ಯಾವುದೇ ಒಮ್ಮತವಿಲ್ಲ. ಆದರೆ ವಿಜ್ಞಾನಿಗಳು ಹಲವಾರು ಸಿದ್ಧಾಂತಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವುದು ‘ರಕ್ಷಣಾ ಸಿದ್ಧಾಂತ’, ಈ ಸಿದ್ಧಾಂತವು ಮಣ್ಣನ್ನು ತಿನ್ನುವ ಗುಣ ಮೂಲತಃ ತನ್ನನ್ನು ವಿಭಿನ್ನ ಜೀವಾಣು, ಪರಾವಲಂಬಿಗಳು ಮತ್ತು ರೋಗಕಾರಕಗಳಿಂದ ರಕ್ಷಿಸಿಕೊಳ್ಳಲು ಮಾಡುವ ಹೊಂದಾಣಿಕೆಯ ನಡವಳಿಕೆ ಎಂದು ಹೇಳುತ್ತದೆ. ಈ ಜೀವಾಣುಗಳು ಅವು ಸೇವಿಸುವ ಸಸ್ಯಗಳಲ್ಲಿಯೂ ಇರಬಹುದು. ಆದರೂ ಈ ಗುಣ ಮಣ್ಣಿನ ಸುಗಂಧದಿಂದ ಪ್ರಚೋದಿತಗೊಳ್ಳುತ್ತದೆ ಎನ್ನುವುದು ಇದರ ವಾದ. ಹಾಗೆಯೆ ಇನ್ನೊಂದು ಪ್ರಮುಖವಾದದ್ದು  ‘ಪೂರಕ ಸಿದ್ಧಾಂತ’, ಇದರ ಪ್ರಕಾರ ಜೀವಿಗಳು ಸೇವಿಸುವ ಆಹಾರದಲ್ಲಿ ಕೆಲವೊಂದು ಅಂಶಗಳು ಇರುವುದಿಲ್ಲವಾದ್ದರಿಂದ, ಆ ಅವಶ್ಯಕ ಅಂಶಗಳನ್ನು ಪಡೆಯಲು ಜೀವಿಗಳು ಈ ಸ್ವಭಾವವನ್ನು ತೋರಿಸುತ್ತವೆ. ಇನ್ನು ಮೂರನೇಯ ಸಿದ್ದಾಂತವು, ‘ಜಿಯೋಫಜಿ’ ಒಂದು ಹೊಂದಾಣಿಕೆಯಲ್ಲದ ನಡವಳಿಕೆಯಾಗಿರಬಹುದು ಮತ್ತು ಮಣ್ಣನ್ನು ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸೂಚಿಸುತ್ತದೆ.

ಪ್ರಸ್ತುತ ಅಧ್ಯಯನದ ಸಂಶೋಧಕರು ಮನುಷ್ಯನನ್ನು ಹೊರತುಪಡಿಸಿ ಉಳಿದ ಸಸ್ತನಿಗಳ ಈ ಸ್ವಭಾವದ ಬಗ್ಗೆ ಈಗಾಗಲೆ ಮಾಡಲಾಗಿರುವ ಅಧ್ಯಯನಗಳನ್ನು ಪರಿಶೀಲಿಸಿದ್ದಾರೆ ಮತ್ತು ಮೇಲಿನ ಸಿದ್ದಾಂತಗಳನ್ನು ಮೌಲ್ಯೀಕರಿಸಲು ಪ್ರಯತ್ನಿಸಿದ್ದಾರೆ. ‘ಜಿಯೋಫಜಿ’ ಮಾನವರಲ್ಲದ ಸಸ್ತನಿಗಳಲ್ಲಿನ ಪ್ರಚಲಿತ ಹಾಗೂ ಸಾಮಾನ್ಯ ವರ್ತನೆ ಎಂದು ಅವರು ತೀರ್ಮಾನಿಸಿದ್ದಾರೆ.

“ನಾವು 136 ಜಾತಿಗಳಲ್ಲಿ 287 ಬಾರಿ ಈ ಗುಣವನ್ನು ಗುರುತಿಸಿದ್ದೇವೆ. ಈ ಮೊದಲು ನಡೆಸಿದ ಅಧ್ಯಯನಗಳ ತುಲನೆಯಲ್ಲಿ 79 ಹೊಸ ಜಾತಿಗಳನ್ನು ಈ ಗುಂಪಿಗೆ ಸೇರಿಸಿಕೊಂಡಿದ್ದೇವೆ”, ಎಂದು ಲೇಖಕರು ತಮ್ಮ ಸಂಶೋಧನೆಯ ಬಗ್ಗೆ ವಿವರಿಸುತ್ತಾರೆ.

ಹಾಗಾದರೆ ನಿಜವಾಗಿಯೂ ಮಾನವರಲ್ಲದ ಸಸ್ತನಿಗಳು ಮಣ್ಣನ್ನು ತಿನ್ನುವುದು ಏಕೆ?

“ಜಿಯೊಫಜಿ ಮಾನವೇತರ ಸಸ್ತನಿಗಳಲ್ಲಿನ ಒಂದು ಹೊಂದಾಣಿಕೆಯ ವರ್ತನೆ. ‘ರಕ್ಷಣಾ ಸಿದ್ದಾಂತ’ಕ್ಕೆ ಪೂರಕವಾಗಿರುವ ಅನೇಕ ಸಾಕ್ಷ್ಯಗಳನ್ನು, ಪುರಾವೆಗಳನ್ನು ನಾವು ಕಂಡುಹಿಡಿದಿದ್ದೇವೆ. ಜೊತೆಗೆ ‘ಪೂರಕ ಸಿದ್ದಾಂತ’ದ ಪರವಾಗಿಯೂ ಕೆಲವು ಬಲವಾದ ಸಾಕ್ಷ್ಯವನ್ನು ನಾವು ಕಂಡುಕೊಂಡಿದ್ದೇವೆ” ಎಂದು ಲೇಖಕರು ವಿವರಿಸುತ್ತಾರೆ.

ಆದರೆ ಲಭ್ಯವಿರುವ ಮಾಹಿತಿಯು ಅನಿಯಮಿತ ಮತ್ತು ಸೀಮಿತ ಪ್ರಮಾಣದ್ದಾಗಿರುವುದರಿಂದ ‘ಜಿಯೋಫಜಿ’ ಮಾನವೇತರ ಜೀವಿಗಳಲ್ಲಿ ನಿಖರವಾಗಿ ಹೇಗೆ ಪ್ರಯೋಜನಕಾರಿ ಎಂಬುದನ್ನು ದೃಢಪಡಿಸಲು ಸಾಧ್ಯವಾಗುತ್ತಿಲ್ಲ.

“ಈ ರೀತಿಯ ಪ್ರಚೋದನೆಗೆ ಕೇವಲ ಖನಿಜ ಪೂರೈಕೆ ಅಥವಾ ರಕ್ಷಣೆ ಆಗಿರದೆ, ಎರಡೂ ಕೂಡ ಆಗಿರಬಹುದು", ಎಂದು ಸಂಶೋಧಕರು ವಿವರಿಸುತ್ತಾರೆ. ಲಭ್ಯವಿರುವ ಮಣ್ಣಿನ ಅಧ್ಯಯನದ ಪ್ರಕಾರ, ಪ್ರಾಣಿಗಳ ಆಹಾರ ಮತ್ತು ಅದರ ದೈಹಿಕ ಅಗತ್ಯಗಳು ಈ ಮಣ್ಣಿನಲ್ಲಿರುವುದು ನಿಜ ಎಂದು ಅವರು ಸೂಚಿಸುತ್ತಾರೆ.

“ಜೀವಿಗಳ ಈ ವಿಚಿತ್ರವಾದ ವರ್ತನೆಗೆ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾದುದು ಏಕೆಂದರೆ ಈ ಅಧ್ಯಯನದಿಂದ ಪ್ರಾಣಿಗಳಿಗೆ ಅಗತ್ಯವಿರುವ ಆಹಾರ ಸಂಪನ್ಮೂಲಗಳು ಯಾವವು ಎಂಬುದನ್ನು ಇದು ತಿಳಿಸುತ್ತದೆ. ಜೀವಿಗಳ ಆವಾಸಸ್ಥಾನದ ವಿನಾಶ, ಹವಾಮಾನದ ಬದಲಾವಣೆ ಮತ್ತು ಸೀಮಿತ ಆಹಾರ ಸಂಪನ್ಮೂಲದ ಸಲುವಾಗಿ ಜೀವಿಗಳ ನಡುವೆ ನಡೆಯುವ ಸ್ಪರ್ಧೆಯ ಕಾರಣದಿಂದಾಗಿ ಆಹಾರ ಸಂಪನ್ಮೂಲದ ಸಂರಕ್ಷಣೆ ಇಂದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಅಧ್ಯಯನವು ಸಂರಕ್ಷಣಾ ಉಪಕ್ರಮಗಳ ಬಗೆಗಿನ ಒಳನೋಟವನ್ನು ನೀಡುತ್ತದೆ” ಎಂದು ಲೇಖಕರು ಹೇಳುತ್ತಾರೆ.

ಅದೇ ರೀತಿ ಮೃಗಾಲಯಗಳಲ್ಲಿರುವ ಪ್ರಾಣಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಅಧ್ಯಯನಗಳು ನೆರವಾಗುತ್ತವೆ ಎಂದು ಅವರು ನಂಬುತ್ತಾರೆ.

“ವನ್ಯಜೀವಿಗಳ ಮತ್ತು ಮೃಗಾಲಯದ ಜೀವಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಯೋಫಜಿಯ ಸಾಧ್ಯತೆಗಳ ಬಗ್ಗೆ ನಾವು ಮತ್ತಷ್ಟು ಅಧ್ಯಯನ ನಡೆಸಬೇಕಾದ ಅವಶ್ಯಕತೆಯಿದೆ ಮತ್ತು ಜಿಯೋಫಜಿ ಸ್ಥಳಗಳ ಸಂರಕ್ಷಣೆಗೆ ಪ್ರೋತ್ಸಾಹ ನೀಡಬೇಕು” ಎಂದು ಸಂಶೋಧಕರು ತಮ್ಮ ಮಾತಿಗೆ ಪೂರ್ಣವಿರಾಮ ಹೇಳುತ್ತಾರೆ.

Kannada