ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಕಂದು ಮುಂಗುಸಿಗಳ ಆಹಾರ ಭಕ್ಷಿಸುವ ನಡವಳಿಕೆಯ ಬಗ್ಗೆ ಒಂದು ಕುತೂಹಲಕಾರಿ ಕಿರು ಚಿತ್ರಣ

ಬೆಂಗಳೂರು
26 Feb 2020
ಕಂದು ಮುಂಗುಸಿಗಳ ಆಹಾರ ಭಕ್ಷಿಸುವ  ನಡವಳಿಕೆಯ ಬಗ್ಗೆ  ಒಂದು ಕುತೂಹಲಕಾರಿ ಕಿರು ಚಿತ್ರಣ

2016 ರಲ್ಲಿ, ಒಂದು ದಿನ,  ಕ್ಷೇತ್ರ ಪರಿಸರ ವಿಜ್ಞಾನಿ ವಿಘ್ನೇಶ್ ಕಾಮತ್ ಅವರು ತಮಿಳುನಾಡಿನ ಕಾಲಕ್ಕಾಡ್ ಮುಂಡಂತುರೈ ಹುಲಿ ಅಭಯಾರಣ್ಯದಲ್ಲಿ  (ಕೆಎಂಟಿಆರ್) ಕಪ್ಪೆಗಳನ್ನು ಅಧ್ಯಯನ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಕಾಡಿನ ಮಧ್ಯೆ ನೀಲಗಿರಿ ಲಂಗೂರಿನ (ಬುಕ್ಕ/ಮುಸುವ/ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಉದ್ದನೆಯ ಬಾಲಹೊಂದಿರುವ ಕರಿಮೂತಿಯ ಕಪಿ)  ಭಾಗಶಃ ತಿನ್ನಲಾಗಿದ್ದ ಶವವನ್ನು  ಗಮನಿಸಿದರು. ಕುತೂಹಲಕಾರಿಯಾದ ಅವರು, ಈ ಕಪಿಯನ್ನು ಯಾವ ಪ್ರಾಣಿ ಈ ರೀತಿ ಭಕ್ಷಿಸಿದೆ ಎಂದು ನೋಡಬಯಸಿದರು.

"ನಾನು ಆ ಅರೆ ತಿನ್ನಲಾಗಿದ್ದ ಶವದ ಮುಂದೆ ಕ್ಯಾಮೆರಾ ಇರಿಸಿ, ಯಾವುದಾದರೂ ಪರಭಕ್ಷಕ ಪ್ರಾಣಿ ಮೃತದೇಹದ ಕಡೆಗೆ ಆಹಾರಕ್ಕಾಗಿ ಬರುವುದೇ ಎಂದು ನೋಡಲು ಕಾತುರನಾಗಿದ್ದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಅನೇಕ ಚಿಕ್ಕ ಪ್ರಾಣಿಗಳು (ಸಸ್ತನಿಗಳು) ಶವದ ಹತ್ತಿರ ಬಂದರೂ, ನಿರ್ದಿಷ್ಟವಾಗಿ, ಕಂದು ಮುಂಗುಸಿ (ಹರ್ಪೆಸ್ಟೆಸ್ ಫುಸ್ಸ್ಕುಸ್) ಅಥವಾ ಬ್ರೌನ್ ಮಂಗೂಸ್ ನ ವರ್ತನೆ ನೋಡಲು ಆಶ್ಚರ್ಯಕರ ಹಾಗೂ ವಿಚಿತ್ರವಾಗಿತ್ತು.

ಕಂದು ಮುಂಗುಸಿ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮತ್ತು ಶ್ರೀಲಂಕಾ ದೇಶದಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಸಣ್ಣ ಸಸ್ತನಿ. ಇದು ವಿರಳವಾಗಿ ಕಂಡುಬರುವ ಒಂದು ಪ್ರಭೇದವಾಗಿದ್ದು, ಇದರ ವಿತರಣಾ ವ್ಯಾಪ್ತಿಯಲ್ಲಿನ ಸಂಖ್ಯೆಯ ಅಂದಾಜು ಸಹ ಇದುವರೆಗೆ ಸರಿಯಾಗಿ ತಿಳಿದುಬಂದಿಲ್ಲ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ನಿಯಮಿತ ವೀಕ್ಷಣೆಗಳು ಮತ್ತು ಕ್ಯಾಮೆರಾ ಟ್ರ್ಯಾಪ್ ಚಿತ್ರಗಳ ವಿಶ್ಲೇಷಣೆಗಳಿಂದಾಗಿ, ಇದರ ಸಧ್ಯದ ಸ್ಥಿತಿಯನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್)ಇಂದ 'ಅಳಿವಿನಂಚಿಗೆ ಇರುವ ಸಾಧ್ಯತೆ’ ಸ್ಥಿತಿಯಿಂದ  'ಕಡಿಮೆ ಕಾಳಜಿ' ಸ್ಥಿತಿಗೆ ಇಳಿಸಲಾಗಿದೆ. ಆದರೂ, ಅದರ ಪರಿಸರ ವಿಜ್ಞಾನ, ನಡವಳಿಕೆ ಮತ್ತು ಅದು ಎದುರಿಸುತ್ತಿರುವ ಅಳಿವು-ಉಳಿವಿನ ಬೆದರಿಕೆಗಳ ಬಗ್ಗೆ ಕಡಿಮೆ ಮಾಹಿತಿ ಲಭ್ಯವಿರುವುದರಿಂದ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಇತ್ತೀಚಿನ ಅಧ್ಯಯನವೊಂದರಲ್ಲಿ, ಗುಬ್ಬಿ ಲ್ಯಾಬ್ಸ್‌ನ ಸಂಶೋಧಕರಾದ ವಿಘ್ನೇಶ್ ಕಾಮತ್, ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್ ಮತ್ತು ತಮಿಳುನಾಡಿನ ಸೆಂಟರ್ ಫಾರ್ ಹರ್ಪಿಟಾಲಜಿಯ ಸಂಶೋಧಕ ಡಾ.ಶೇಷಾದ್ರಿ ಕೆ.ಎಸ್ ಅವರೊಂದಿಗೆ  ಮುಂಗುಸಿಯ ಆಹಾರದ ತಿನ್ನುವ ಅಪರೂಪದ ಆಶ್ಚರ್ಯಕರ  ನಡವಳಿಕೆಯನ್ನು ವರದಿ ಮಾಡಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಆಫ್ ತ್ರೆತಂಡ್ ಟಾಕ್ಸಾನಲ್ಲಿ ಪ್ರಕಟಗೊಳಿಸಲಾಗಿದೆ. ಆಕಸ್ಮಿಕವಾಗಿದ್ದರೂ, ಈ ಅಷ್ಟಾಗಿ ಕಾಣಸಿಗದ ಮುಂಗುಸಿಗಳ ಈ ಹಿಂದೆ ತಿಳಿದಿಲ್ಲದ ಕೆಲವು ವರ್ತನೆಯ ಅಂಶಗಳ ಬಗ್ಗೆ ಅಧ್ಯಯನವು ಬೆಳಕು ಚೆಲ್ಲುತ್ತದೆ.

ಕ್ಯಾಮೆರಾ ಟ್ರ್ಯಾಪ್ ಮತ್ತು ಹಸ್ತಚಾಲಿತ ಅವಲೋಕನಗಳನ್ನು ಬಳಸಿಕೊಂಡು ಸಂಶೋಧಕರು ಮೂರು ವಿಭಿನ್ನ ಸಂದರ್ಭಗಳಲ್ಲಿ ಕಂದು ಮುಂಗುಸಿಯ ವರ್ತನೆಯನ್ನು ಗಮನಿಸಿದ್ದಾರೆ.

ಕ್ಯಾಮೆರಾ ಟ್ರ್ಯಾಪ್ಗಳು ಅಪರೂಪದ ಪ್ರಭೇದಗಳನ್ನು ಅಧ್ಯಯನ ಮಾಡಲು ಸೂಕ್ತ. ಪ್ರಾಣಿಗಳ ಜೀವನದ ಬಗ್ಗೆ ಸಂಶೋಧಕರಿಗೆ ಕೆಲ ಒಳನೋಟಗಳನ್ನು ನೀಡುವಲ್ಲಿ ಸಹಾಯಕ ಹಾಗಾಗಿ, ಇದು ಕೆಲ ಪ್ರಭೇದಗಳ ಸಂಖ್ಯೆ, ವಿತರಣಾ ವ್ಯಾಪ್ತಿ ಮತ್ತು ನಡವಳಿಕೆಯ ಮೇಲೆ ಬೆಳಕು ಚೆಲ್ಲುವಲ್ಲಿ ಸಹಾಯ ಮಾಡುತ್ತದೆ "ಎಂದು ವಿಘ್ನೇಶ್ ಕಾಮತ್ ಹೇಳುತ್ತಾರೆ.

ಮುಸುವದ ಮೃತದೇಹವನ್ನು ತೆಗೆಯುವಾಗ ನಾಲ್ಕು ವಿಭಿನ್ನ ನಡವಳಿಕೆಯ ಅಂಶಗಳಾದ ಆಹಾರ , ಜಾಗರೂಕತೆ, ನಡೆತ ಮತ್ತು ಅಂದಗೊಳಿಸುವಿಕೆಯನ್ನು  ಈ ಅಧ್ಯಯನವು, ಅನೇಕ ರಾತ್ರಿಗಳಿಂದ ಸೆರೆಹಿಡಿದಿದ್ದ ನಿಖರವಾದ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಆಧಾರದ ಮೇಲೆ ವರದಿ ಮಾಡಿದೆ.

ಎರಡನೆಯ ಸಂದರ್ಭದಲ್ಲಿ, ಬೈನಾಕ್ಯುಲರ್‌ಗಳು ಮತ್ತು ವಿಡಿಯೋ ಕ್ಯಾಮೆರಾಗಳೊಂದಿಗೆ ಹಸ್ತಚಾಲಿತ ಅವಲೋಕನಗಳನ್ನು ಬಳಸಿಕೊಂಡು, ಸಂಶೋಧಕರು ಅಭಯಾರಣ್ಯದ ಒಳಗೆ,  ರಸ್ತೆಗೆ ಹತ್ತಿರವಿದ್ದ, ದಟ್ಟವಾದ ಅರಣ್ಯ ಪ್ರದೇಶದಿಂದ ಹೊರಬಂದ ಒಂದು ಜೋಡಿ ಕಂದು ಮುಂಗುಸಿಗಳ ವರ್ತನೆಯನ್ನು ದಾಖಲಿಸಿದ್ದಾರೆ. ಮುಂಗುಸಿಗಳು ಹೋದ ನಂತರ ಅವರು ಈ ಪ್ರದೇಶವನ್ನು ಪರಿಶೀಲಿಸಿದಾಗ, ಮುಂಗುಸಿಗಳು ಮಣ್ಣನ್ನು ಅಗೆದು ಹೋಗಿರುವುದು ಕಂಡುಬಂದಿದೆ . ಬಹುಶಃ ಆ ಪ್ರದೇಶದಲ್ಲಿ ಅಕಶೇರುಕಗಳನ್ನು ಈ ಮುಂಗುಸಿಗಳು ಹುಡುಕುತ್ತಿದ್ದವು ಎಂದು ಸಂಶೋಧಕರು ಅಂದಾಜಿಸುತ್ತಾರೆ. ಮತ್ತೊಂದು ಸಂದರ್ಭದಲ್ಲಿ,  ಒಂಟಿ ಕಂದು ಮುಂಗುಸಿ ಮನೆಯ ಕಸದ ರಾಶಿಯಲ್ಲಿ ತನ್ನ ಆಹಾರವನ್ನು ತಿನ್ನುತ್ತಿದ್ದದ್ದು ಕಂಡುಬಂದಿದೆ.

ಆಹಾರದ ನಡವಳಿಕೆಯಲ್ಲದೇ, ಸಂಶೋಧಕರು ಅಭಯಾರಣ್ಯದ ಒಳಗೆ ರಸ್ತೆ ಮೇಲಾದ ಒಂದು ಕಂದು ಮುಂಗುಸಿಯ ಸಾವನ್ನೂ ಸಹ ದಾಖಲಿಸಿದ್ದಾರೆ. ಎಷ್ಟೇ ಸೀಮಿತ ವಾಹನ ಚಲನೆಯನ್ನು ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದರೂ, ಇಂತಹ ಘಟನೆಗಳು ಇಲ್ಲಿರುವ ಅಪರೂಪದ ವನ್ಯಜೀವಿಗಳಿಗೆ ಹಾನಿಕಾರಕಎಂದು ಸಂಶೋಧಕರು ಹೇಳುತ್ತಾರೆ.

"ರಸ್ತೆಯ ಮೇಲಾಗುವ ಪ್ರಾಣಿಗಳ ಸಾವುಗಳನ್ನು ತಪ್ಪಿಸಲು ವನ್ಯ ಜೀವಿ  ಅಭಯಾರಣ್ಯಗಳ ಒಳಗೆ ರಾತ್ರಿಯ ವಾಹನ ಸಂಚಾರ ನಿಷೇಧವು ಅವಶ್ಯಕ. ಎಷ್ಟೇ ಕಡಿಮೆ ಸಂಖ್ಯೆಯ ವಾಹನಗಳು ಓಡಾಡಿದರೂ, ರಸ್ತೆ ಮೇಲಾಗುವ ಪ್ರಾಣಿಗಳ ದುರ್ಮರಣಕ್ಕೆ ಕಾರಣವಾಗಬಹುದು. ಕಪ್ಪೆಗಳಂತಹ ಸಣ್ಣ ಪ್ರಾಣಿಗಳ ಮೇಲೆ ಇದರ ಪರಿಣಾಮಗಳು ಹೆಚ್ಚು" ಎಂದು ಡಾ. ಶೇಷಾದ್ರಿ ಹೇಳುತ್ತಾರೆ. ರಸ್ತೆಗಳಂತಹ ಅಡೆತಡೆಗಳು ನೈಸರ್ಗಿಕ ಆವಾಸಸ್ಥಾನಗಳನ್ನು ಛಿದ್ರಗೊಳಿಸಿ, ಪ್ರಾಣಿಗಳ ಚಲನೆಯನ್ನು ಬದಲಾಯಿಸುತ್ತವೆ. ಆದ್ದರಿಂದ, ನಾವು ಅಂತಹ ರಸ್ತೆಗಳು, ರೈಲ್ವೆ ಮತ್ತು ವಿದ್ಯುತ್ ಮಾರ್ಗಗಳನ್ನು ನೈಸರ್ಗಿಕ ಭೂದೃಶ್ಯಗಳಲ್ಲಿ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಮಿತಗೊಳಿಸಬೇಕಾಗಿದೆ" ಎಂದು ಅವರು ಸೂಚಿಸುತ್ತಾರೆ.

ಕ್ಷೇತ್ರ ಜೀವಶಾಸ್ತ್ರಜ್ಞರಿಂದ ಕುತೂಹಲ ಹುಟ್ಟಿಸುವಂತಹ ಪರಿಸರ ವಿಷಯಗಳು ಮತ್ತು ಸಾಮೂಹಿಕ ಅವಲೋಕನಗಳು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಅಪರೂಪದ ಮತ್ತು ಕಡಿಮೆ ಪರಿಶೋಧಿಸಲಾದ ಪ್ರಾಣಿಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುವುದರ ಬಗ್ಗೆ  ಈ ಅಧ್ಯಯನವು ತೋರಿಸುತ್ತದೆ. ಇಂತಹ ನೈಸರ್ಗಿಕ ಇತಿಹಾಸದ ಮಾಹಿತಿ, ಭಾರತದ ವನ್ಯಜೀವಿಗಳ ಸಂರಕ್ಷಣಾ ಸ್ಥಿತಿಯನ್ನು ಮರುಪರಿಶೀಲಿಸುವ ಆಧಾರವಾಗಿದ್ದು  ಈ ರೀತಿಯ ಅಧ್ಯಯನಗಳು ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ನಮ್ಮ ದೇಶದ ವಿವಿಧ ಪ್ರಭೇದಗಳ ಪರಿಸರ ವಿಜ್ಞಾನ ಮತ್ತು ನಡವಳಿಕೆಯ ಬಗ್ಗೆ, ಮುಖ್ಯವಾಗಿ ಇಂತಹ ಅಪರೂಪದ ಪ್ರಭೇದಗಳ ಕುರಿತಾಗಿ ಇನ್ನೂ ಆಳವಾದ ಅಧ್ಯಯನ ನಡೆಯಬೇಕಾಗಿದೆ. ಇಂತಹ ಪ್ರಾಣಿಗಳ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ, ಇವುಗಳ  ಸಂರಕ್ಷಣೆಗೆ ಸಹಾಯಕ ಎಂಬುದು ವಿಘ್ನೇಶ್ ಕಾಮತರ ಅಭಿಪ್ರಾಯಗಳು.

 

Kannada