ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಪಶ್ಚಿಮ ಘಟ್ಟಗಳಿಂದ ೨೬ ಮಿಲಿಯನ್ ವರುಷಗಳ ಇತಿಹಾಸ ಹೊಂದಿರುವ ಹೊಸ ಬಳ್ಳಿ ಹಾವು ಪತ್ತೆ

ಬೆಂಗಳೂರು
27 Jul 2019
ಪಶ್ಚಿಮ ಘಟ್ಟಗಳಿಂದ ೨೬ ಮಿಲಿಯನ್ ವರುಷಗಳ ಇತಿಹಾಸ ಹೊಂದಿರುವ ಹೊಸ ಬಳ್ಳಿ ಹಾವು ಪತ್ತೆ

ಇತಿಹಾಸವೆಂದರೆ ಹಗುರವಾದ ಮಾತಲ್ಲ. ಇತಿಹಾಸದ ಜಾಡನ್ನು ಹುಡುಕಿಕೊಂಡು, ದೊರೆತ ಕುರುಹುಗಳನ್ನು ಜೋಡಿಸಿಕೊಂಡು ಯಾವುದಾದರೂ ಪ್ರಾಣಿಗೆ ಸಾಧ್ಯವಾಗಬಹುದಾದಂತಹ ಸಂಬಂಧ ಕಲ್ಪಿಸುವುದು ಕ್ಲಿಷ್ಟಕರ ಕಾರ್ಯ. ಕೆಲವೊಮ್ಮೆ ಪ್ರಕೃತಿಯೇ ನಮಗೆ ದಯೆತೋರಿ, ಕೇವಲ ಶತಮಾನಗಳಲ್ಲದೇ, ಎಷ್ಟೋ ಮಿಲಿಯನ್ ವರುಷಗಳ ಅಚ್ಚರಿ ಮೂಡಿಸುವಂತಹ ಇತಿಹಾಸದ ಪುಸ್ತಕ ತೆರೆದಿಡುತ್ತದೆ. ಅಂತೆಯೇ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸರೀಸೃಪ ತಜ್ಞರ ಒಂದು ಸಂಶೋಧನಾ ತಂಡಕ್ಕೆ ಅಕಸ್ಮಾತಾಗಿ ಕಂಡುಬಂದ ಒಂದು ಬಳ್ಳಿ ಹಾವಿನ ಪ್ರಭೇದಕ್ಕೆ ಸುಮಾರು ೨೬ ಮಿಲಿಯನ್ ವರುಷಗಳ ಇತಿಹಾಸವಿದೆ ಎಂದು ತಿಳಿದುಬಂದಿದೆ. ಈ ಹೊಸ ಪ್ರಭೇದಕ್ಕೆ ಪ್ರೋಹೆಟುಲ್ಲಾ ಆಂಟಿಕಾ ಎಂದು ನಾಮಕರಣ ಮಾಡಲಾಗಿದೆ.

“2011ರಲ್ಲಿ, ಅಗಸ್ತ್ಯಮಲೈ ಪರ್ವತ ಶ್ರೇಣಿಗಳಲ್ಲಿ ಅಹೇಟುಲ್ಲಾ ಡಿಸ್ಪಾರ್ ಎಂಬ ಚಿಕ್ಕ ಬಳ್ಳಿ ಹಾವಂತೆ ಕಾಣುವ ಒಂದು ಬಳ್ಳಿ ಹಾವನ್ನು ಕಂಡೆವು. ಇದೊಂದು ಹೊಸ ಪ್ರಭೇದವೆಂದು ತಕ್ಷಣವೇ ಗುರುತು ಹಿಡಿದರೂ, ಇದಕ್ಕೆ ಇಷ್ಟು ಆಳವಾದ ಅನುವಂಶಿಕ ವಿಭಿನ್ನತೆ ಇರುವುದೆಂದು ಅಂದಾಜಿಸಿರಲಿಲ್ಲ” ಎಂದು ಈ ಸಂಶೋಧನೆಯ ಪ್ರಮುಖ ಲೇಖಕರಾದ ಡಾ. ಅಶೋಕ್ ಕುಮಾರ್ ಮಲಿಕ್ ನುಡಿಯುತ್ತಾರೆ. 

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಒಂದು ತಂಡ ಪಶ್ಚಿಮ ಘಟ್ಟಗಳ ಹಾವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಲು ಪ್ರಯತ್ನಿಸುತ್ತಿದ್ದರು. ಈ ಕ್ರಮಬದ್ಧ ಅಧ್ಯಯನ ನಡೆಸುವಾಗ ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವಾದ “ಪ್ರೊಹೇಟುಲ್ಲಾ ಆಂಟಿಕಾ” ಎನ್ನುವ ಒಂದು ಬಳ್ಳಿಹಾವನ್ನು ಅಕಸ್ಮಾತಾಗಿ ಕಂಡರು. ಇದು ಒಂದು ಪುರಾತನ ಪ್ರಭೇದವೆಂದು, ಸುಮಾರು ೨೬ ಮಿಲಿಯನ್ ವರುಷಗಳ ಹಿಂದೆ ಮಧ್ಯ ಒಲಿಗೋಸೀನ್ ಯುಗದಲ್ಲಿ ವಿಕಸನಗೊಂಡಿತೆಂದು ಅಂದಾಜಿಸಲಾಗಿದೆ.

“ಈ ಬಳ್ಳಿ ಹಾವುಗಳ ಇರುನೆಲೆಗಳನ್ನು ಹಾಗೂ ವೈವಿಧ್ಯತೆಯನ್ನು ಅರ್ಥೈಸಿಕೊಳ್ಳಲು ಈ ಪ್ರಭೇದಗಳ ರೂಪುರೇಷೆಗಳ ಹಾಗೂ ಜೀವಕೋಶಗಳ ಮಾದರಿಯನ್ನು ಸಂಗ್ರಹಿಸುತ್ತಾ ನಾವು ಭಾರತಾದ್ಯಂತ ವಿಸ್ತಾರವಾದ ಕ್ಷೇತ್ರ ಕಾರ್ಯಗಳನ್ನು ಕೈಗೊಂಡೆವು” ಎಂದು ಡಾ. ಮಲಿಕ್ ಈಕುರಿತಾದ ತಮ್ಮ ಕ್ಷೇತ್ರಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.

ಅಂತರರಾಷ್ಟ್ರೀಯ ಪತ್ರಿಕೆಯಾದ “ಪ್ಲಾಸ್ ಒನ್” ನಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಚೆನ್ನೈನ ಚೆನ್ನೈ ಸರ್ಪೋದ್ಯಾನ ಮತ್ತು ಮುಂಬೈನ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯೊಂದಿಗಿನ ಸಹಭಾಗಿತ್ವದಲ್ಲಿ ಸಂಶೋಧಕರ ಈ ತಂಡದಿಂದ ಈ ಹಾವಿನ ಅನನ್ಯ ವೈಶಿಷ್ಯಗಳನ್ನು ವರ್ಣಿಸಲಾಗಿದೆ. ಈ ಅಧ್ಯಯನವು ಜೈವಿಕ ತಂತ್ರಜ್ಞಾನ ವಿಭಾಗ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ, (ಮಿನಿಸ್ಟ್ರಿ ಆಫ್ ಏನ್ವೈರ್ನಮೆಂಟ್, ಫಾರೆಸ್ಟ್ಸ್ ಅಂಡ್ ಕ್ಲೈಮೇಟ್ ಚೇಂಜ್), ಜೈವಿಕ ತಂತ್ರಜ್ಞಾನ ವಿಭಾಗ - ಭಾರತೀಯ ವಿಜ್ಞಾನ ಸಂಸ್ಥೆ ಪಾಲುದಾರಿಕೆ ಕಾರ್ಯಕ್ರಮ ಹಾಗೂ ನಿರ್ಣಾಯಕ ಪರಿಸರ ವ್ಯವಸ್ಥೆ ಪಾಲುದಾರಿಕೆ ನಿಧಿ (ಕ್ರಿಟಿಕಲ್ ಇಕೋಸಿಸ್ಟಮ್ ಪಾರ್ಟ್ನರ್ಶಿಪ್ ಫಂಡ್) ಇಂದ ಪ್ರಾಯೋಜಿಸಲಾಗಿದೆ.

ಕೃಶವಾದ ದೇಹ, ಬಳ್ಳಿಯಂತೆ ಕಾಣುವುದರಿಂದ ಈ ಹಾವುಗಳಿಗೆ ಬಳ್ಳಿಹಾವುಗಳು ಅಥವಾ ವೈನ್ ಸ್ನೇಕ್ಸ್ ಎನ್ನಲಾಗುತ್ತದೆ. ಇದರಂತೆಯೇ ಇರುವ ಪ್ರಭೇದಗಳು ಆಫ್ರಿಕಾ ಹಾಗೂ ದಕ್ಷಿಣ ಅಮೇರಿಕಾ ಖಂಡಗಳಲ್ಲಿ ಕಾಣಸಿಕ್ಕರೂ ಏಷ್ಯಾ ಖಂಡದಲ್ಲಿ ವ್ಯಾಪಕವಾಗಿ ಕಂಡುಬರುವಂತಹ ಏಷ್ಯಾ ಬಳ್ಳಿಹಾವುಗಳು ಅಹೇಟುಲ್ಲಾ ಕುಲದ ಸದಸ್ಯರು. ಭಾರತದಲ್ಲಿ ಈ ಕುಲದ ೪ ಪ್ರಭೇದಗಳು ವ್ಯಾಪಕವಾಗಿ ಕಂಡುಬರುತ್ತವೆ. ಇದರಲ್ಲಿನ ಒಂದು ಪ್ರಭೇದವನ್ನು ಇತ್ತೀಚಿಗೆ ಒಡಿಶಾ ರಾಜ್ಯದಿಂದ ಪತ್ತೆ ಮಾಡಿ ವರ್ಣಿಸಲಾಯಿತು.

ಸಂಶೋಧಕರು, ಈ ಹೊಸದಾಗಿ ವರ್ಣಿಸಲಾಗಿರುವ ಬಳ್ಳಿಹಾವಿನ ವಂಶವೃಕ್ಷವನ್ನು ಅಧ್ಯಯನ ನಡೆಸುತ್ತಿದ್ದಾಗ, ಈ ಪ್ರೋಹೆಟುಲ್ಲಾ ಅಂಟಿಕಾ ಎಂಬ ಪ್ರಭೇದವು ಸುಮಾರು ೨೬ ಮಿಲಿಯನ್ ವರುಷಗಳ ಹಿಂದೆಯೇ ಅನ್ಯ ಬಳ್ಳಿ ಹಾವುಗಳಿಂದ ಬೇರೆಯಾಗಿ, ಕೇವಲ ಹೊಸ ಪ್ರಭೇದ ಮಾತ್ರವಲ್ಲದೇ, ಒಂದು ಹೊಸ ಕುಲಕ್ಕೆ (ಪ್ರೋಹೆಟುಲ್ಲಾ) ಸೇರ್ಪಡೆಯಾಯಿತೆಂದು ಹೇಳುತ್ತಾರೆ. ‘ಅಂಟಿಕಾ’ ಎಂಬ ಪ್ರಭೇದದ ಹೆಸರು ಲ್ಯಾಟಿನ್ ಭಾಷೆಯ ಮೂಲವಾದ ‘ಆಂಟಿಕ್’, (ಅಂದರೆ ಪುರಾತನ ಅಥವಾ ಪ್ರಾಚೀನ) ಎಂಬ ಪದದಿಂದ ಬಂದಿದೆ.

“ಈ ಪ್ರಭೇದದ ಉನ್ನತ ಮಟ್ಟದ ಅನುವಂಶಿಕ ವೈವಿಧ್ಯತೆ ಅಲ್ಲದೇ ಇದರ ರೂಪುರೇಷೆಯ ವೈಶಿಷ್ಟ್ಯಗಳು ಅನ್ಯ ಬಳ್ಳಿ ಹಾವುಗಳಿಗಿಂತ ವಿಭಿನ್ನವಾಗಿದ್ದವು. ಇದರಲ್ಲಿ ಚಾಕ್ಷುಷ ಮಾಪಕಗಳು ಕ್ರಕಚೀಕೃತವಾಗಿದ್ದವು, ಹೆಚ್ಚಿನಸಂಖ್ಯೆಯಲ್ಲಿ  ಕುಕ್ಷಿಯ ಮತ್ತು ಪೃಷ್ಠದ ಮಾಪಕಗಳಿದ್ದವು. ಹಾಗೆಯೇ, ಹೆಚ್ಚಿನ ಸಂಖ್ಯೆಯಲ್ಲಿ ದವಡೆ ಹಲ್ಲುಗಳಿದ್ದವು. ಅಲ್ಲದೇ, ಈ ಪ್ರದೇಶವನ್ನು ಅತಿಕ್ರಮಿಸುವ ಅನ್ಯ ಬಳ್ಳಿಹಾವುಗಳಿಗಿಂತ ಈ ಪ್ರಭೇದವು ಸ್ವಲ್ಪ ಉದ್ದವಾಗಿದ್ದವು” ಎಂದು ಡಾ. ಮಲಿಕ್ ಈ ಪ್ರಭೇದದ ರೂಪುರೇಷೆಗಳ ಬಗ್ಗೆ ವಿವರಿಸುತ್ತಾರೆ.

ಈ ಪ್ರಭೇದವನ್ನು ತಮಿಳು ನಾಡಿನ ಕಾಲಕ್ಕಾಡ್ ಮುಂಡನ್ತುರೈ ಹುಲಿ ಅಭಯಾರಣ್ಯ ಹಾಗೂ ಕೇರಳದ ಶೆಂದೂರ್ನೀ ವನ್ಯಜೇವಿ ಅಭಯಾರಣ್ಯದ ರಕ್ಷಿತ ಇರುನೆಲೆಗಳಿಂದ ವರ್ಣಿಸಲಾಗಿದೆ.

“ಈ ಪ್ರಭೇದವನ್ನು ಒಂದು ಸಣ್ಣ ರಕ್ಷಿತ  ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡೆವು. ಹಾಗಾಗಿ, ಇವು ಹೆಚ್ಚಾಗಿ ಇಂತಹ ಸೀಮಿತ ಪ್ರದೇಶಗಳಲ್ಲಿ ಕಾಣಸಿಗುವಂತಹ ಸಾಧ್ಯತೆಗಳು ಇವೆ” ಎಂದು ಡಾ. ಮಲಿಕ್ ವಿವರಿಸುತ್ತಾರೆ.

ಈ ಆವಿಷ್ಕಾರ ಬಳ್ಳಿ ಹಾವುಗಳ ವಿಕಸನದ ಬಗ್ಗೆ ಬೆಳಕು ಚೆಲ್ಲುವುದಲ್ಲದೇ, ಹಿಮಾಲಯ ಪರ್ವತ ಶ್ರೇಣಿಗಳಿಗಿಂತಲೂ ಪುರಾತನವಾದ ನಮ್ಮ ಪಶ್ಚಿಮ ಘಟ್ಟಗಳ ಭೂರಾಶಿಯ ಬಗ್ಗೆ ಎಷ್ಟೋ ಮಾಹಿತಿಯನ್ನು ನಮ್ಮ ಮುಂದಿಡಬಹುದು. ಎಷ್ಟೋ ವರುಷಗಳಿಂದ ಅನ್ವೇಷಿಸಲ್ಪಡುತ್ತಿರುವಂತಹ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಇಂತಹ ಐತಿಹಾಸಿಕ ಮಹತ್ವವಿರುವಂತಹ ಈ ಪ್ರಭೇದವು ಇಷ್ಟು ತಡವಾಗಿ ಬೆಳಕಿಗೆ ಬಂದದ್ದು ಆಶ್ಚರ್ಯವಲ್ಲವೇ?

“ಜೀವವರ್ಗೀಕರಣ ಶಾಸ್ತ್ರದಲ್ಲಿ ತುಸು ಕಡಿಮೆ ಆಸಕ್ತಿ ಇರುವುದರಿಂದ ಇದರ ಕಡೆ ಗಮನ ಹರಿಸಿರುವ ಸಾಧ್ಯತೆ ಕಡಿಮೆ. ಹಾಗೆಯೇ, ಕ್ರಮಬದ್ಧ ಅಧ್ಯಯನಗಳಿಗೆ ಅಗತ್ಯವಿರುವಂತಹ ದೊಡ್ಡ ಪ್ರಮಾಣದ ಕ್ಷೇತ್ರ ಸಮೀಕ್ಷೆ ಮತ್ತು ಹಣಕಾಸಿನ ಬೆಂಬಲದ ಅಭಾವ ಇದರ ಕಡೆ ಸಂಶೋಧಕರನ್ನು ಸೆಳೆಯುತ್ತಿಲ್ಲ. ಎರಡನೇಯದಾಗಿ, ಈ ಬಳ್ಳಿ ಹಾವು ಇನ್ನೊಂದು ಪ್ರಭೇದವಾದ ಅಹೇಟುಲ್ಲಾ ಡಿಸ್ಪಾರ್  ಎನ್ನುವ ಪ್ರಭೇದವನ್ನು ಮೇಲ್ನೋಟಕ್ಕೆ ಹೋಲುತ್ತದೆ. ಆದ್ದರಿಂದ, ಈ ಹೊಸ ಪ್ರಭೇದವನ್ನು ಕಂಡರೂ ಇದನ್ನು ಅಹೇಟುಲ್ಲಾ ಡಿಸ್ಪಾರ್ ಎಂದು ತಪ್ಪಾಗಿ ಗುರುತಿಸಿರುವಂತಹ ಸಾಧ್ಯತೆಗಳು ಹೆಚ್ಚು” ಎಂದು ಡಾ. ಮಲಿಕ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಈ ಪ್ರಭೇದದ ಆವಿಷ್ಕಾರ ನಮ್ಮ ದೇಶದಲ್ಲಿ ಇರಬಹುದಾದಂತಹ ಜೀವವೈವಿಧ್ಯತೆಯ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತದೆ.

“ನಮ್ಮ ದೇಶದ ಕಾಡುಗಳು ಇನ್ನು ಅದೆಷ್ಟು ಪ್ರಭೇದಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿವೆಯೋ!’ ಎಂದು ಸಧ್ಯದಲ್ಲೇ ಮತ್ತಷ್ಟು ಹೊಸ ಪ್ರಭೇದಗಳು ಬೆಳಕಿಗೆ ಬರುವ ನಿರೀಕ್ಷೆಯಲ್ಲಿ ಡಾ. ಮಲಿಕ್ ತಮ್ಮ ಆಶಾದಾಯಕ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.

ಈ ಪ್ರಭೇದವು ಸಧ್ಯಕ್ಕೆ ಯಾವುದೇ ಅಳಿವಿನ ಬೆದರಿಕೆಯನ್ನು ಎದುರು ನೋಡದಿರುವುದು ಸಂತಸದ ವಿಷಯ.

ನಮ್ಮ ದೇಶದಲ್ಲಿ ಅತಿ ಹೆಚ್ಚು ಅಪಾರ್ಥಕ್ಕೊಳಗಾಗಿರುವ ಹಾವುಗಳು ಪೂಜಿಸಲ್ಪಡುತ್ತವೆ, ಹಾಗೆಯೇ ಅವುಗಳ ಅಸ್ತಿತ್ವಕ್ಕೆ ಅತಿ ಹೆಚ್ಚು ಬೆದರಿಕೆಯೂ ಇದೆ.

“ನಮ್ಮ ಪರಿಸರ ವ್ಯವಸ್ಥೆಯಲ್ಲಿ ಹಾವುಗಳು ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಚಿಕ್ಕ ಪ್ರಾಣಿಗಳನ್ನು, ಪಕ್ಷಿಗಳನ್ನು ಹಾಗೂ ದಂಶಕಗಳನ್ನು ತಮ್ಮ ಆಹಾರವನ್ನಾಗಿಸಿ, ಅದರ ಸಂಖ್ಯೆಯನ್ನು ಹಿಡಿತದಲ್ಲಿಟ್ಟು ಆಹಾರ ಚಕ್ರವನ್ನು ನಿಯಂತ್ರಿಸುತ್ತವೆ. ಹಾಗಾಗಿ, ಹಾವುಗಳ ಹಾಗೂ ಅವುಗಳಿಂದ ಮಾನವ ಕುಲಕ್ಕೆ ಆಗುವಂತಹ ಲಾಭಗಳ ಬಗ್ಗೆ ಸರಿಯಾದ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ ಅವಶ್ಯಕತೆ ಇವೆ” ಎಂದು ಡಾ. ಮಲಿಕ್ ಅಭಿಪ್ರಾಯ ಪಡುತ್ತಾರೆ. 

Kannada