The specimen was collected and sent to ZSI who confirmed that this was the first-ever record of Euthyrrhapha pacifica in India

ಬೆಳಗಾವಿಯಲ್ಲಿ ಹೊಸದೊಂದು ಹಾತೆಯ ಪತ್ತೆ.

Belagavi
26 Feb 2025
Euthyrrhapha pacifica species

ಬೆಳಗಾವಿಯ ವೈದ್ಯ ಡಾ ದೀಪಕ್‌ ದೇಶಪಾಂಡೆ ತಮ್ಮ ಮನೆಯ ಮೂರನೆಯ ಮಹಡಿಯಲ್ಲಿ ವಿಚಿತ್ರವಾದೊಂದು ಜಿರಲೆ ಅಥವಾ ಹಾತೆ ಹುಳುವನ್ನು ಕಂಡಾಗ, ಅದನ್ನು ಹಿಡಿದು, ಭಾರತೀಯ ಪ್ರಾಣಿಗಳ ಸರ್ವೆ ಸಂಸ್ಥೆಗೆ ಯಾವುದೆಂದು ಪತ್ತೆ ಮಾಡಲು ಕಳಿಸಿದರು. ಅಲ್ಲಿ ಅದನ್ನು ಯೂತಿರ್ರಾಫಾ ಪೆಸಿಫಿಕಾ ಎಂಬ ಪ್ರಭೇದದ ಜಿರಲೆ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಈ ಪ್ರಭೇದವು ಸಿಕ್ಕಿದ್ದು ಇದೇ ಮೊದಲು. ಇದಕ್ಕೂ ಮೊದಲು ಈ ಜೀವಿಯು ಆಫ್ರಿಕಾದಿಂದ ಶ್ರೀಲಂಕಾವರೆಗೆ ವ್ಯಾಪಿಸಿದೆ ಎಂದು ತಿಳಿದಿತ್ತು. ಈಗ ಅದರ ನೆಲೆ ಇನ್ನಷ್ಟು ವಿಶಾಲವಾಗಿದೆ. ಭಾರತೀಯ ಉಪಖಂಡಕ್ಕೂ ವಿಸ್ತರಿಸಿದೆ. ಇದು ಕೀಟವಿಜ್ಞಾನದಲ್ಲಿ ಒಂದು ಗುರುತರವಾದ ಬೆಳೆವಣಿಗೆ.

ದೇಶಪಾಂಡೆಯವರಿಗೆ ದೊರೆತ ಹುಳುವಿನ ಒಟ್ಟಾರೆ ಉದ್ದ ಎಂಟು ಪಾಯಿಂಟ್‌ ಐದು ಮಿಲಿಮೀಟರು.  ರೆಕ್ಕೆಯನ್ನು ಬಿಟ್ಟರೆ ದೇಹದ ಉದ್ದ ಆರು ಪಾಯಿಂಟ್‌ ಎರಡು ಮಿಲಿಮೀಟರು. ಬೆರಳಿನ ತುದಿಯಲ್ಲಿ ಕುಳಿತುಕೊಳ್ಳಬಹುದಾದ ಪುಟ್ಟ ಕೀಟ. ವೈದ್ಯರಿಗೆ ಸಿಕ್ಕಿದ್ದು ಹೆಣ್ಣು ಕೀಟ. ಇದಕ್ಕೆ ಅಚ್ಚಕಪ್ಪು ಬಣ್ಣದ ಶಿರಸ್ತ್ರಾಣದಂತಹ ಕವಚವೊಂದು ಇದೆ.ಇದು ತಲೆಯನ್ನು ರಕ್ಷಿಸುತ್ತದೆ. ಮುಂಭಾಗದ ರೆಕ್ಕೆಗಳೂ ಅಚ್ಚಕಪ್ಪು ಬಣ್ಣದವಾಗಿದ್ದು, ಮೇಲ್ಭಾಗದಲ್ಲಿ ಎದ್ದು ಕಾಣುವಂತೆ ಹೊಳೆಯುವ ಹಳದಿ ಬಣ್ಣದ ಮಚ್ಚೆ ಇದೆ. ಹಿಂಭಾಗದ ರೆಕ್ಕೆಗಳು, ಮುಂಭಾಗದ ರೆಕ್ಕೆ ಹಾಗೂ ದೇಹಕ್ಕಿಂತಲೂ ಉದ್ದವಾಗಿದ್ದು, ಹಾರಾಟಕ್ಕೆ ಅನುಕೂಲವಾಗಿ ವಿಕಾಸವಾಗಿವೆ. ಈ ಕೀಟ ಪ್ರಭೇದವು ಆಫ್ರಿಕಾದ ಯೂತಿರೇಫಾ ನಿಗ್ರಾವನ್ನು ಹೋಲುತ್ತಿದ್ದರೂ, ಶಿರಸ್ತ್ರಾಣದ ಅಂಚಿನಲ್ಲಿ ಎದ್ದು ತೋರುವ ಹಳದಿ ಪಟ್ಟೆ ಹಾಗೂ ಮುಂಭಾಗದ ರೆಕ್ಕೆಯ ಮೇಲೆ ಹಳದಿ ಬಣ್ಣದ ಮಚ್ಚೆಗಳಿಂದಾಗಿ ಬೇರೆ ಎನ್ನಿಸಿದೆ.

ಸಾಂಪ್ರದಾಯಿಕವಾಗಿ ವರ್ಗೀಕರಿಸುವ ಪರೀಕ್ಷೆಗಳ ಜೊತೆಗೆ, ವಿನೂತನ ಪರೀಕ್ಷೆಗಳನ್ನು  ಪರೀಕ್ಷೆಗಳನ್ನು ನಡೆಸಿದ ನಂತರ ಇದು ಯೂತಿರೇಫಾ ಪೆಸಿಫಿಕಾ ಎನ್ನುವ  ಪ್ರಬೇಧದ ಕೀಟವೆಂದು ಗುರುತಿಸಲಾಗಿದೆ. ಮೊದಲಿಗೆ ಕೀಟದ ಚಿತ್ರಗಳನ್ನು ಲೈಕಾ ಸೂಕ್ಷ್ಮದರ್ಶಕದ ಕ್ಯಾಮೆರಾವನ್ನು ಬಳಸಿ ತೆಗೆಯಲಾಯಿತು. ಅನಂತರ ಈ ಚಿತ್ರಗಳನ್ನು ಅಡೋಬಿ ತಂತ್ರಾಶವನ್ನು ಬಳಸಿ ಜೋಡಿಸಲಾಯಿತು. ಈ ಹಿಂದೆ ರಾತ್‌ ಎಂಬಾತ  2003ರಲ್ಲಿ ನಿಗದಿ ಪಡಿಸಿದ್ದ ವರ್ಗೀಕರಣ ನಿಯಮವನ್ನು ದೇಹರಚನೆಯನ್ನು ವಿಶ್ಲೇಷಿಸಲು ಸಂಶೋಧಕರು ಅಳವಡಿಸಿಕೊಂಡಿದ್ದರು.

ವಿಶ್ಲೇಷಣೆಗೆಂದು ಚಿತ್ರಗಳನ್ನು ತೆಗೆದ ನಂತರ, ಮುಂದಿನ ಅಧ್ಯಯನಗಳಿಗೆ ಅನುಕೂಲವಾಗಲೆಂದು ಕೀಟವನ್ನು ಭಾರತೀಯ ಪ್ರಾಣಿಗಳ ಸರ್ವೆ ಸಂಸ್ಥೆಯ, ತಮಿಳುನಾಡಿನ ಚೆನ್ನೈನಲ್ಲಿರುವ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.  

ಈ ಜಿರಲೆಯ ನೆಲೆಯು ಗಮನಾರ್ಹವಾಗಿ ವಿಸ್ತರಿಸಿದೆ ಎಂದು ಈ ಶೋಧ ಸೂಚಿಸಿದೆ. ಕೀಟವು ಇನ್ನೂ ವಿಸ್ತಾರವಾದ ನೆಲೆಗಳಲ್ಲಿ ಹಾಗೂ ಪರಿಸರ ಪ್ರದೇಶದಲ್ಲಿ ಇರಬಹುದು. ಭಾರತದಲ್ಲಿ ಯೂತಿರೇಫ ಕುಲದ ಕೀಟಗಳು ದೊರಕಿದ್ದೇ ಮೊದಲು. ಹೀಗೆ ದೇಶದ ಜೈವಿಕ ವೈವಿಧ್ಯಕ್ಕೆ ಇನ್ನೂ ಒಂದು ಕೀಟ ಸದಸ್ಯ ಸೇರ್ಪಡೆಯಾದಂತಾಗಿದೆ. ಭಾರತದ ಕೀಟ ಸಂಪತ್ತನ್ನು ಗುರುತಿಸಿ ದಾಖಲಿಸುವ ಅಗತ್ಯವಿದೆ ಎನ್ನುವ ಅರಿವನ್ನು ಇದು ಹೆಚ್ಚಿಸಿದೆ.

ಕೋರಿಡಿಡೇ ಅಥವಾ ಮರಳುಜಿರಲೆ ಎನ್ನುವ ಕೀಟ ಕುಟುಂಬಕ್ಕೆ ಸೇರಿದ ಯೂಥಿರೇಫ ಪೆಸಿಫಿಕಾ ನಿಶಾಚರಿ ಹುಳು. ಬೆಳಕಿನಿಂದ ಸೆಳೆಯಲ್ಪಟ್ಟು ದೀಪಗಳನ್ನು ಮುತ್ತುತ್ತದೆ. ಬೆಳಗಾವಿಯಂತ ನಗರ ಪ್ರದೇಶದಲ್ಲಿ ಇದು ಪತ್ತೆಯಾಗಿರುವುದು, ನಗರೀಕರಣ ಹಾಗೂ ಪರಿಸರದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಜಿರಲೆ ತನ್ನ ನೆಲೆಯನ್ನು ಬದಲಿಸುತ್ತಿರುವ ಸಾಧ್ಯತೆಗಳನ್ನು ಸೂಚಿಸಿದೆ.

ಈ ಪತ್ತೆ ಮುಂದೆ ಇನ್ನೂ ಹಲವು ಸಂಶೋಧನೆಗಳನ್ನು ಕೈಗೊಳ್ಳಲು ದಾರಿ ಮಾಡಿಕೊಟ್ಟಿದೆ. ಈ ಪ್ರಭೇದದ ವಿಕಾಸದ ಹಾದಿಯನ್ನು ಹಾಗೂ ಇತರೆ ಕೀಟಗಳ ಜೊತೆಗಿನ ತಳಿ ಸಂಬಂಧವನ್ನು ಗುರುತಿಸುವ ಆಣವಿಕ ಅಧ್ಯಯನಗಳು ಆಗಬೇಕಿದೆ. ಯೂರಿರೇಫಾದ ಈ ಪ್ರಭೇದದ ಕೀಟಗಳ ಗಂಡುಗಳ ಲಿಂಗಾಂಗಗಳ ವಿವರಣೆ ಇಲ್ಲ. ಇದನ್ನೂ ಮಾಡಬೇಕಿದೆ. ಅಲ್ಲದೆ ಇನ್ನಷ್ಟು ಕೀಟಗಳು ದೊರೆತ ನಂತರ, ಇದರ ವರ್ಗೀಕರಣ ಹಾಗೂ ವ್ಯಾಪ್ತಿಯ ಬಗ್ಗೆ ಹೊಸ ಮಾಹಿತಿಗಳು ದೊರಕಬಹುದು.
ಕೀಟಗಳ ವರ್ಗೀಕರಣದ ಬಗ್ಗೆ ನಮ್ಮ ಅರಿವನ್ನು ವಿಸ್ತರಿಸುವುದರ ಜೊತೆಗೆ ಈ ಶೋಧವು ಕ್ಷಿಪ್ರವಾಗಿ ಬದಲಾಗುತ್ತಿರುವ ಭಾರತೀಯ ಪರಿಸರದಲ್ಲಿ, ಎಷ್ಟು ವೇಗವಾಗಿ ಪಲ್ಲಟಗಳಾಗುತ್ತಿವೆ ಎಂದು ಒತ್ತಿ ಹೇಳಿದೆ. ನಾಳೆ ನೀವು ಯಾವುದಾದರೂ ಕೀಟವನ್ನು ಕಂಡಾಗ, ಅದರ ಫೋಟೋ ತೆಗೆಯುವುದನ್ನು ಮರೆಯಬೇಡಿ. ಯಾರಿಗೆ ಗೊತ್ತು. ನೀವೂ ಹೊಸದೊಂದು ಕೀಟದ ಅನ್ವೇಷಕರಾಗಬಹುದು.

 


ರೀಸರ್ಚ್‌ ಮ್ಯಾಟರ್ಸ್‌ ರಚಿಸಿದ ವರದಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ.


Kannada