ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

೨೦೨೧ ರ ಆಯ್ದ ಲೇಖನಗಳು

Read time: 1 min
Bengaluru
31 Dec 2021
೨೦೨೧ ರ ಆಯ್ದ ಲೇಖನಗಳು

ಒಂದು ಅದ್ಭುತವಾದ ವರ್ಷದ ಅಂತ್ಯದಲ್ಲಿದ್ದೇವೆ ನಾವು! ೨೦೨೧ ವರ್ಷದಲ್ಲಿ ಸಂಶೋಧನೆ ವಿಷಯದಲ್ಲಿ ಭಾರತದಲ್ಲಿ ನಡೆದ  ಘಟನೆಗಳನ್ನು ಮೆಲುಕುಹಾಕುವ ಬನ್ನಿ! ೨೦೨೧ ನೇ ಇಸವಿ ಬಹಳಷ್ಟು ಜನರಿಗೆ  ಏರುಪೇರಾಗಿತ್ತು. ಕೋವಿಡ್ -೧೯ ಹರಡುವಿಕೆಯ ಅಲೆ ಶಿಖರದಲ್ಲಿದ್ದರೂ ೨೦೨೦ರಲ್ಲಿ ಕಂಡುಹಿಡಿದ ಲಸಿಕೆಯನ್ನು ಭಾರತದಲ್ಲಿ ೨೦೨೧ ರಲ್ಲಿ ಪರಿಚಯಿಸಿದ್ದು ಒಂದು ಸಾಧನೆ. ಹೀಗೆ ವಿಜ್ಞಾನ, ಇಂಜಿನಿಯರಿಂಗ್, ಗಣಿತ, ಔಷಧಿ ಇನ್ನೂ ಇತರೆ ವಿಷಯಗಳಲ್ಲಿ ಸಂಶೋಧನೆ ಎಲ್ಲೆಮೀರಿದೆ. ನಾವು ಸಂಶೋಧನೆಯ ಹಾದಿಯಲ್ಲಿ ಮಾಡಿದ ಸಾಧನೆಗಳನ್ನು, ಮತ್ತು ಖ್ಯಾತಿಗಳನ್ನು ಒಮ್ಮೆ ಮೆಲುಕು ಹಾಕುವ ಸಮಯ ಇದು!

ಭಾರತದಲ್ಲಿ ಇತ್ತೀಚಿಗೆ ಪ್ರಕಟವಾದ ಸಂಶೋಧನೆಯ ಲೇಖನಗಳನ್ನು ಸಾರಾಂಶದ ಮೂಲಕ ನಮ್ಮ ರಿಸರ್ಚ್ ಮ್ಯಾಟರ್ಸ್ ನಲ್ಲಿ ಆಂಗ್ಲ ಮತ್ತು ಬಹುಭಾಷೆಗಳಲ್ಲಿ ಸಂವಹನ ಮಾಡಲಾಗುತ್ತಿದೆ, ಕನ್ನಡಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ನಾವು ಕನ್ನಡ, ತಮಿಳು, ಮರಾಠಿ, ಹಿಂದಿ, ಅಸ್ಸಾಮಿ ಭಾಷೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತೇವೆ. ಬಹಳಷ್ಟು ವಿಜ್ಞಾನ ಸಂವಹನ ವೇದಿಕೆಗಳಲ್ಲಿ ರಿಸರ್ಚ್ ಮ್ಯಾಟರ್ಸ್ ಒಂದು ಪ್ರಖ್ಯಾತ ಬಹುಭಾಷಾ ವೇದಿಕೆಯಾಗಿದೆ.

ಪ್ರಕಟಿಸಲಾದ ಕನ್ನಡ ಲೇಖನಗಳನ್ನು ನೀವು ತುಂಬಾ ಪ್ರೀತಿಯಿಂದ ಓದಿ, ಹೊಗಳಿ  ಅದರ ಲೇಖಕರ ಪ್ರತಿಭೆಯನ್ನು ಸ್ವೀಕರಿಸಿದ್ದೀರಿ. ಕನ್ನಡದಲ್ಲಿ ಬರುವ ಲೇಖನಗಳನ್ನು ನೋಡಿದಾಗ ಮತ್ತು ವಿಶ್ಲೇಷಿಸಿದಾಗ ವ್ಯಾಪಕ ವಿಷಯಗಳ ತಿಳಿವು  ದೊರೆಯುತ್ತದೆ. ಬನ್ನಿ ರಿಸರ್ಚ್ ಮ್ಯಾಟರ್ಸ್ ನ ೨೦೨೧ ರ ಬಹು ಪ್ರಸಿದ್ಧ ಲೇಖನಗಳ ಸಾರಾಂಶವನ್ನು ಒಮ್ಮೆ ಓದುವ.

ಪಶ್ಚಿಮ ಘಟ್ಟಗಳಲ್ಲಿನ ಶ್ವೇತ-ಪೃಷ್ಠ ರಣಹದ್ದುಗಳ ನಿಗೂಢ ಜೀವನ - ಒಂದು ಅಧ್ಯಯನ

ಒಂದು ಸಣ್ಣ ಪ್ರಮಾಣದ ಔಷಧಿಯಿಂದ ನಮ್ಮ ಅನಾರೋಗ್ಯ ಗುಣವಾಗುವುದು, ಆದರೆ ಅದೇ ಔಷಧ ೩ ದಶಕಗಳಿಂದ ಪಕ್ಷಿಗಳ ನಾಶಕ್ಕೆ ಕಾರಣವಾಗಿದೆ. ಈ ನಿಗೂಢವನ್ನು ಈ ಲೇಖನದಲ್ಲಿ ಲೇಖಕರು ಬಿಡಿಸಿಡುತ್ತಾರೆ. ಸತ್ತ ಪ್ರಾಣಿಗಳನ್ನು ತಿಂದು, ಪೋಷಕಾಂಶಗಳು ಮರುಬಳಕೆ ಆಗುವ ಪ್ರಕ್ರಿಯೆಯಲ್ಲಿ ಸ್ವಚ್ಛತಾ ಕರ್ಮಚಾರಿಗಳಾಗಿ ರಣಹದ್ದುಗಳ ಪಾತ್ರ ಮಹತ್ವದ್ದು.

ಆದರೆ ಡೈಕ್ಲೋಫೆನಾಕ್ ಚುಚ್ಚುಮದ್ದು ಕೊಡಲಾದಪ್ರಾಣಿಗಳ ಕಳೇಬರವನ್ನು ರಣಹದ್ದುಗಳು ತಿಂದಾಗ ಅವುಗಳ ಅಂಗಾಂಗಗಳಲ್ಲಿ ಸಂಧಿವಾತ ರೋಗ ಉಂಟಾಗಿ ಸಾಯುತ್ತವೆ.   ಡೈಕ್ಲೋಫೆನಾಕ್ ಉಪಯೋಗದ ನಿಷೇಧ, ಬಂಧಿತ ಪ್ರಜನನ ಕೇಂದ್ರಗಳ ಸ್ಥಾಪನೆ, ಹಾಗೂ ರಣಹದ್ದು ಸುರಕ್ಷಣಾ ವಲಯಗಳ ಆಯ್ಕೆ,  ಅವುಗಳಿಗಾಗಿ ಪಕ್ಷಿಧಾಮವನ್ನು ಸ್ಥಾಪಿಸಲು ಪ್ರಶಸ್ತವಾದ ಪ್ರದೇಶ, ಹೀಗೆ ರಣಹದ್ದುಗಳ ಜೀವನದ ಬಗ್ಗೆ, ಅವುಗಳ ಬದಲಾಗುತ್ತಿರುವ ಸಂಖ್ಯೆ ಮತ್ತು ಸಾಕಷ್ಟು ವಿಷಯವನ್ನು ಈ  ಲೇಖನದಲ್ಲಿ ತಿಳಿಸಿದೆ.

ದಕ್ಷಿಣ ಭಾರತದ ಅಂತರ್ಜಲ ಬಿಕ್ಕಟ್ಟನ್ನು ಪರಿಹರಿಸುವುದರ ಬಗ್ಗೆ ಒಂದು ನೋಟ

ನಮ್ಮ ದಕ್ಷಿಣ ಭಾರತದಲ್ಲಿ ನೀರಿನ ಟ್ಯಾಂಕರ್ ಗಳು, ಖಾಲಿ ಬಕೆಟ್ ಗಳು, ನೊಂದ  ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು ಸರ್ವೇ ಸಾಮಾನ್ಯವಲ್ಲವೇ? ಅನಿಯಮಿತ ಮಳೆ ಸೇರಿದಂತೆ ಕೃಷಿಗಾರಿಕೆಯನ್ನೇ ತೀವ್ರವಾಗಿ ಅವಲಂಬಿಸಿರುವ ಭಾರತ ದೇಶದಲ್ಲಿ ನೀರಾವರಿಗಾಗಿ ಅಂತರ್ಜಲವನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಪ್ರತೀ ವರುಷ ಬರುವ ಬರಗಾಲವೇ ಅಂತರ್ಜಲದಲ್ಲಿ ನೀರು ಬತ್ತುಹೋಗಲು ಪರೋಕ್ಷ ಕಾರಣವೆಂದು ಮುಂಬಯಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT Bombay) ಸಂಶೋಧಕರ ಮಾತು.  

ನಾಸಾದ (NASA) ಗ್ರೇಸ್ (Gravity Recovery and Climate Experiment) ಉಪಗ್ರಹದಿಂದ ಪಡೆದ ಅಂತರ್ಜಲ ಮಾಹಿತಿ ಹಾಗೂ ಕೇಂದ್ರ ಅಂತರ್ಜಲ ಮಂಡಳಿಯಿಂದ (Central Ground Water Board) ಪಡೆದ ಮಾಹಿತಿಯನ್ನು ೨೦೦೯ರ ಮಳೆಯ ಮಾಹಿತಿ ಪಡೆದು ಬಹಳ ಸರಳವಾಗಿ ಸಂಶೋಧಕರು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೆ ಭೂ-ಸಂಯೋಜನೆಯು ಮಳೆನೀರಿನ ಒರಸುವಿಕೆಗೆ ಮತ್ತು ಅಂತರ್ಜಲ ಮಟ್ಟದ ಸವಕಳಿಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಹೇಗೆ ಅಂತರ್ಜಲ ಬಿಕ್ಕಟ್ಟಿಗೆ ಕಾರಣವೆಂದು ಲೇಖಕರು ತಿಳಿಸಿದ್ದಾರೆ.  ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಅಂತರ್ಜಲದ ನೀರಿನ ಮಟ್ಟ ಹೆಚ್ಚಾಗಲು ಅಳವಡಿಸಿದ ಕ್ರಮವನ್ನು ದಕ್ಷಿಣ ಭಾರತದಲ್ಲೂ ಅಳವಡಿಸಬೇಕೆಂದು, ಇದರಿಂದ ನೀರಿನ ಸಮಸ್ಯೆಗೆ ಪರಿಣಾಮ ಸಿಗುವಿದೆಂದು ಈ ಅಧ್ಯಯನದಲ್ಲಿ ತಿಳಿಸಲಾಗಿದೆ.

ಕಾಸ್ಮಿಕ್ ಕಿರಣಗಳ ಹಿಂದಿನ ರಹಸ್ಯವನ್ನು ವಿವರಿಸುವ ತಾರಾಗಣ ಜಲಜನಕದ ಬೃಹತ್ ಮೋಡಗಳು

ಕಾಸ್ಮಿಕ್ ಕಿರಣಗಳು – ಇವು ಭೂಮಿಯನ್ನು ತಲುಪುವ ಮುನ್ನ ಬೆಳಕಿನ ವೇಗದ ಸಮೀಪದ ವೇಗದಲ್ಲಿ ಬಾಹ್ಯಾಕಾಶದೊಳಗೆ ಬಹಳ ದೂರ ಸಂಚರಿಸುತ್ತವೆ. ಇವುಗಳ ಬಗ್ಗೆ ನಿಮಗಷ್ಟೇ ಅಲ್ಲ,  ಖಗೋಳ ವಿಜ್ಞಾನಿಗಳಿಗೂ ಸಾಕಷ್ಟು ಪ್ರಶ್ನೆಗಳಿವೆ.
ಬೃಹತ್ ದ್ರವ್ಯರಾಶಿಯ ನಕ್ಷತ್ರಗಳ ಕೊನೆಗಾಲದಲ್ಲಿ ಉಂಟಾಗುವ ‘ಸೂಪರ್ನೋವಾ’ ಸ್ಫೋಟಗಳಲ್ಲಿ ಈ ಕಾಸ್ಮಿಕ್ ಕಿರಣಗಳು ಹುಟ್ಟುತ್ತವೆಯಂತೆ. ಎಲೆಕ್ಟ್ರಾನ್ ಹಾಗೂ ಪಾಸಿಟ್ರಾನ್ ಸೇರಿದಂತೆ ಹಲವು ಬೀಜಾಣುಗಳನ್ನೂ ಸಹ ಈ ಕಾಸ್ಮಿಕ್ ಕಿರಣಗಳು ಒಳಗೊಂಡಿವೆ ಎಂದು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ (RRI) ಸಂಶೋಧಕರು ಕಾಸ್ಮಿಕ್ ಕಿರಣಗಳ ಬಗ್ಗೆ ಸರಳವಾಗಿ ವಿವರಿಸುವುದನ್ನು ಈ ಲೇಖನದಲ್ಲಿ ಓದಬಹುದು.

ಕಾಸ್ಮಿಕ್ ಕಿರಣಗಳಲ್ಲಿ ಹೆಚ್ಚಿನ ಪಾಸಿಟ್ರಾನ್‌ಗಳನ್ನು ಏಕೆ ಗಮನಿಸಲಾಗಿದೆ ಎಂಬುದನ್ನು ಅಧ್ಯಯನವು ಬಿಚ್ಚಿಡುತ್ತದೆ - ಕಿರಣಗಳು ಗ್ಯಾಲಕ್ಸಿಯ ಕಣಗಳ ಎಲೆಕ್ಟ್ರಾನ್‌ಗಳು ಮತ್ತು ಪಾಸಿಟ್ರಾನ್‌ಗಳೊಂದಿಗೆ ಸಂವಹನ ನಡೆಸುವುದರಿಂದ ಉಂಟಾಗುವ ಕ್ಯಾಸ್ಕೇಡಿಂಗ್ ಪರಿಣಾಮವು ಹೆಚ್ಚು ಕಾಸ್ಮಿಕ್ ಕಿರಣಗಳನ್ನು ಉತ್ಪಾದಿಸುತ್ತವೆ.

ಭಾರತ ದೇಶದಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಹೊಸ ಬಲವರ್ಧಿತ ಆಹಾರ ಪದಾರ್ಥಗಳು

ಮಕ್ಕಳಲ್ಲಿ ಅಪೌಷ್ಟಿಕತೆ ಸರ್ವೇ ಸಾಮಾನ್ಯ! ಇದರಿಂದಾಗಿ ದೈಹಿಕ ಹಾಗೂ ಮಾನಸಿಕ ದೌರ್ಬಲ್ಯಗಳು, ತೀವ್ರವಾದ ತೂಕ ಇಳಿಕೆಗೆ ಅಥವಾ , ಸಾವನ್ನು ಕೂಡ ನಾವು ಕಾಣಬಹುದು. ಗ್ರಾಮೀಣ ಪ್ರದೇಶದ ಮತ್ತು ನಗರದ ಕೊಳೆಗೇರಿ ನಿವಾಸಿಗಳ ಮಕ್ಕಳಲ್ಲಿನ ಅಪೌಷ್ಟಿಕತೆಯಲ್ಲಿ ವೆತ್ಯಾಸವಿದೆ. ಮಕ್ಕಳ ಈ ಸಮಸ್ಯೆಗೆ ಬಾಂಬೆಯಲ್ಲಿನ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ ಬಾಂಬೆ, IIT-Bombay) ಸಂಶೋಧಕರು ತಯಾರಿಸಿದ ಸೂಕ್ಷ್ಮ ಪೋಷಕಾಂಶಗಳನ್ನೊಳಗೊಂಡ  ಬಲವರ್ಧಿತ ಆಹಾರ ಇದಕ್ಕೆ ಪರಿಹಾರ. ಸರ್ಕಾರ ನೀಡುವ ಪಡಿತರ ಆಹಾರಕ್ಕೆ ಹೋಲಿಸಿದರೆ, ಬಹಳಷ್ಟು ಬಗೆಯ ಸೂಕ್ಷ್ಮ ಪೋಷಕಾಂಶಗಳಿಂದ ಒಳಗೊಂಡಿರುವ ಬಲವರ್ಧಿತ ಆಹಾರವು ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆಯೆಂದು ಈ ಅಧ್ಯಯನದಲ್ಲಿ ಸಾಬೀತಾಗಿದೆ.  ಮನೆಗೆ-ಒಯ್ಯುವ ಪಡಿತರ ದಿನಸಿಗೆ ಬದಲಾಗಿ ಈ ಪೌಷ್ಟಿಕ ಪದಾರ್ಥಗಳನ್ನು ನೀಡುವಲ್ಲಿ ಸರ್ಕಾರ ಹೇಗೆ ಅಳವಡಿಸಿ, ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಯಲು ಈ ಲೇಖನವನ್ನು ಓದಿ.

ಕಪ್ಪೆಗಳಿಗೆ ಔತಣ ಕೂಟವಾದ ಬತ್ತದ ಗದ್ದೆಗಳು

ಬತ್ತದ ಮತ್ತು ಇತರೇ ಗದ್ದೆಗಳಲ್ಲಿ ಕೀಟನಾಶಕ ಸಿಂಪಡಿಸುತ್ತಾರೆ. ಇದರಿಂದಾಗಿ ಕಿಟಕಿಗಳು ಸಾಯುತ್ತವೆ ನಿಜ, ಆದರೆ ಬೆಳೆಗಳ ಮೇಲೆ ಪರಿಣಮಿಸುತ್ತದೆ. ಕಿಟಕಿಗಳು ಕಡಿಮೆಯಾದಲ್ಲಿ ಅಲ್ಲಿ ವಾಸಿಸುವ ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಅಧ್ಯಯನದಲ್ಲಿ ಕಪ್ಪೆಗಳ ಔತಣ ಸ್ಥಳವಾದ  ಗದ್ದೆಗಳಲ್ಲಿ ಕಪ್ಪೆಗಳು ಜೈವಿಕ ನಿಯಂತ್ರಣ ಸೈನಿಕ ನೆಂದು ಹೇಳಿ ಅವುಗಳ ಅಗತ್ಯವನ್ನು ಸರಳವಾಗಿ  ಬಿಡಿಸಿಡಲಾಗಿದೆ. ಲಾರ್ವ/ಮರಿಹುಳುಗಳು, ಕಣಜಗಳು ಮತ್ತು ಜೀರುಂಡೆಗಳು ಬತ್ತದ ಗದ್ದೆಗಳನ್ನು ನಾಶ ಮಾಡುವ ಕಿಟಕಿಗಳನ್ನು ಸೇವಿಸಿ ಕಪ್ಪೆಗಳು ಬೆಳೆಗಳನ್ನು ಕಾಪಾಡುತ್ತವೆ.

ಆವಾಸಸ್ಥಾನದ ಕೊರತೆ ಮತ್ತು ಅತಿಯಾದ ಕೃಷಿ ರಾಸಾಯನಿಕೆಗಳ ಬಳಕೆ, ಈ ಎರಡು ಸಂಯೋಜಿತ ವಿಷಯಗಳು ಕಪ್ಪೆಗಳ ಸಂಖ್ಯೆಯ ಇಳಿತಕ್ಕೆ ಮುಖ್ಯ ಕಾರಣವೆಂದು  ಅಶೋಕ ಟ್ರಸ್ಟ್ ಫಾರ್ ರಿಸರ್ಚ್  ಇನ್ ಎಕಾಲಜಿ ಆಂಡ್ ದಿ ಎನ್ವಿರಾನ್ಮೆಂಟ್ (ATREE), ಬೆಂಗಳೂರು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸೆಂಟರ್ ಫಾರ್ ಎಕಲಾಜಿಕಲ್ ಸೈನ್ಸೆಸ್ (CES IISC), ಬೆಂಗಳೂರು, ಇಲ್ಲಿನ ಸಂಶೋಧಕರು ಬತ್ತದ ಗದ್ದೆಗಳಲ್ಲಿನ ಕಪ್ಪೆಗಳನ್ನು ಸಮೀಕ್ಷಿಸಿ, ಅವುಗಳ ಆಹಾರ ಕ್ರಮವನ್ನು ವಿಶ್ಲೇಷಿಸಿದ್ದಾರೆ.

ನಾವು ೨೦೨೨ ರಲ್ಲಿ ಇನ್ನೂ ಬಹಳಷ್ಟು ಸ್ವಾರಸ್ಯವಾದ/ಕುತೂಹಲಕಾರಿ  ಸಂಶೋಧನೆಯ ವಿಷಯಗಳ ಲೇಖನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ನಮ್ಮ ರಿಸರ್ಚ್ ಮ್ಯಾಟರ್ಸ್ ನಲ್ಲಿ ಕನ್ನಡ ಮತ್ತು ಇತರೆ ಭಾಷೆಗಳ ಲೇಖನಗಳನ್ನು ಓದಲು ಹಾಗು ಸದಾ ಸಂಪರ್ಕದಲ್ಲಿರಲು researchmatters.in ಅನ್ನು ಕ್ಲಿಕ್ಕಿಸಿ.