ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಬೆಂಗಳೂರಿನ ವಸಾಹತುಶಾಹಿ ಯೋಜನೆಗಳ ಇತಿಹಾಸದ ಕಥೆ- ವ್ಯಥೆ

Read time: 1 min
ಬೆಂಗಳೂರು
24 Apr 2019

ನಮ್ಮ ಬೆಂಗಳೂರಿನ ವಾಹನಗಳು ಟ್ರಾಫಿಕ್ ನ ಸಮಸ್ಯೆಯಿಂದ ವೇಗವಾಗಿ ಚಲಿಸದೇ ಇರಬಹುದು. ಆದರೆ ಬೆಳವಣಿಗೆಯ ದೃಷ್ಟಿಯಿಂದ ಬೆಂಗಳೂರು ಇಂದಿಗೂ ಕೂಡ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು.ಹೀಗೆ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ, ‘ನಗರ ಸುಧಾರಣೆಯ’ ಮೂಲ ಅರ್ಥ ನಮ್ಮೆಲ್ಲರ ದೃಷ್ಟಿಯಲ್ಲಿ ರಸ್ತೆ, ನೀರು , ನೈರ್ಮಲ್ಯಾಭಿವೃದ್ಧಿ, ಅನಿಯಮಿತ ವಸತಿಗಳ ನಿರ್ಮೂಲನೆ ಇತ್ಯಾದಿ ಆಗಿರಬಹುದು. ಇಂತಹ ಯೋಜನೆಗಳನ್ನು ನಾವು ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ವ್ಯಾಪಕವಾಗಿ ನೋಡುತ್ತೇವೆ ಕೂಡ. ಇಂತಹ ಯೋಜನೆಗಳು ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಮತ್ತು ನಾಗರಿಕರ ಸುತ್ತಲಿನ ಸಮಾಜವನ್ನು ಸಬಲವಾಗಿಸಿ  ಅದರ ಮೂಲಕ ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಪ್ರಮುಖ ಅಧಾರ ಸ್ಥಂಬಗಳಾಗಿ ನಮಗೆ ಕಂಡುಬರುತ್ತವೆ. ಆದರೆ,  ಅಮೆರಿಕದ ಅಮೇರಿಕನ್ ವಿಶ್ವವಿದ್ಯಾನಿಲಯದ ನಗರ ಭೂಗೋಳಶಾಸ್ತ್ರಜ್ಞೆ ಪ್ರೊ. ಮಾಲಿನಿ ರಂಗನಾಥನ್ ಅವರ ಹೊಸ ಐತಿಹಾಸಿಕ ಸಂಶೋಧನೆಯು ಈ ಸಿದ್ಧಾಂತದ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ.

1890 ರಿಂದ 2010 ರವರೆಗೆ ಬೆಂಗಳೂರಿನಲ್ಲಿ ನಡೆದ ವಿದ್ಯಮಾನಗಳನ್ನು, ಜಾರಿಗೆ ಬಂದ ಯೋಜನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಡೆಸಿದ ‘ಎನ್ವಿರಾನ್ಮೆಂಟ್ ಅಂಡ್ ಪ್ಲಾನಿಂಗ್’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಅಧ್ಯಯನವು: (ಎಕಾನಮಿ & ಸ್ಪೇಸ್) ಹೊಸದೊಂದು ದಾರಿಯನ್ನು ತೋರಿಸಿದೆ. ಇದರ ಪ್ರಕಾರ ನಗರ ಸುಧಾರಣೆ ಎಂಬುದು  ಒಟ್ಟು ಜನಸಂಖ್ಯೆಯ  ಅತೀ ಹೆಚ್ಚು ಭಾಗವನ್ನು ತಲುಪುವ ಪ್ರಯತ್ನವಾಗಿರಬೇಕು. ಆಡಳಿತಗಾರರು ಇದಕ್ಕನುಗುಣವಾಗಿ ಯೋಜನೆಗಳನ್ನು ಪ್ರಜ್ಞಾಪೂರ್ವಕವಾಗಿ ಜಾರಿಗೊಳಿಸಬೇಕು. ಹೀಗಾದಾಗ ಮಾತ್ರ, ಇದರ ಪರಿಣಾಮವಾಗಿ ಅನೇಕ ಜ್ವಲಂತ ಸಮಸ್ಯೆಗಳಿಂದ ಸಮಾಜ ಮುಕ್ತವಾಗಲು ಸಾಧ್ಯ. ಯಾವಾಗ ಯೋಜನೆಗಳು ಸಮಾಜದ ಪ್ರತೀ ಮೂಲೆಗಳನ್ನು ತಲುಪಿ ಎಲ್ಲಾ ರೀತಿಯ ಜನರನ್ನು ಆಕರ್ಷಿಸುತ್ತದೆಯೋ ಆಗ ಮಾತ್ರ ಆ ಯೋಜನೆಯನ್ನು ಒಂದು  ಯಶಸ್ವಿ ಯೋಜನೆ ಎನ್ನಲು ಸಾಧ್ಯ ಎಂಬುದು ಈ ಅಧ್ಯಯನದ ಸಾರಾಂಶ.

ಅಧ್ಯಯನವು ಪ್ರಮುಖವಾಗಿ ಇತಿಹಾಸದ ಮೂರು ಘಟ್ಟಗಳನ್ನು ಅಭ್ಯಸಿಸಿದೆ. ವಸಾಹತುಶಾಹಿ ಆಡಳಿತ, ರಾಷ್ಟ್ರವಾದಿ ಆಡಳಿತ ಹಾಗೂ ನವ ಉದಾರವಾದದ ಅವಧಿಗಳ ಪ್ರಮುಖ ಯೋಜನೆಗಳನ್ನು ಅಧ್ಯಯನ ಮಾಡಿ ಅವುಗಳು ನಗರೀಕರಣಕ್ಕೆ ಹಾಗೂ ನಗರಗಳ ನಿಜವಾದ ಅಭಿವೃದ್ಧಿಗೆ ಯಾವ ರೀತಿ ಸಹಾಯಕವಾಗಿವೆ ಎಂಬುದನ್ನು ತೋರಿಸಿಕೊಟ್ಟಿದೆ. ಪ್ರತಿಯೊಂದು ಆಡಳಿತ ಕೂಡ ತನ್ನದೇ ಆದ ವಿಭಿನ್ನ ಹಾಗೂ ವಿಶಾಲವಾದ ನೀತಿಗಳಿಂದ ಹಾಗೂ ಉದ್ದೇಶಗಳಿಂದ ನಿರೂಪಿಸಲ್ಪಟ್ಟಿದೆ ಎಂಬುದು ವಿಶೇಷ.

“ಪ್ರಪಂಚದಾದ್ಯಂತ ಅನೇಕ ವಸಾಹತುಶಾಹಿ ನಗರಗಳು 1800 ರ ದಶಕದ ಕೊನೆಯಲ್ಲಿ ಮತ್ತು 1900 ರ ದಶಕದ ಅಂತ್ಯದಲ್ಲಿ ‘ಅಭಿವೃದ್ಧಿ ಹೊಂದುತ್ತಿರುವ ನಗರಗಳು’ ಎಂದು ಕರೆಯಲ್ಪಡುತ್ತಿದ್ದವು. ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟ ಭಾರತೀಯ ನಗರಗಳು ಕೂಡ ಈ  ಬಿರುದಿನಿಂದ ಭಿನ್ನವಾಗಿರಲಿಲ್ಲ. ಭಾರತೀಯರ ಭೂಮಿಯಲ್ಲಿ ಬೇರೂರಿದ ಬ್ರಿಟಿಷ್ ಸಾಮ್ರಾಜ್ಯ ಭೂಮಿಯನ್ನು ಕೇವಲ ತೆರಿಗೆಯ ವಸ್ತುವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿತು. ಆದರೆ ಭೂಮಿಯ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಭಾರತೀಯರನ್ನು ಈ ಪ್ರಯೋಗ ನಿರಾಸೆಗೊಳಿಸಿತು” ಎಂದು ಪ್ರೊಫೆಸರ್ ರಂಗನಾಥನ್ ವಿವರಿಸಿತ್ತಾರೆ. “ಪಾಶ್ಚಿಮಾತ್ಯ ಪದ್ದತಿಗಳನ್ನು ರೂಪಿಸಿ, ತಮ್ಮ ಯೋಜನೆಗಳನ್ನು ಭಾರತೀಯರ ಮೇಲೆ ಹೇರಿದ ಬ್ರಿಟೀಷರು ಸ್ಥಳೀಯರ ಭೂಮಿ ಮತ್ತು ಸ್ಥಳೀಯರ ಮನೆಗಳನ್ನು ಕಿತ್ತುಕೊಂಡರು. ನಗರೀಕರಣದ ಭಾಗವಾಗಿ ವಸತಿ ವಿಸ್ತರಣೆ ಮತ್ತು ಕೊಳಚೆ ಪ್ರದೇಶದ ನಿವಾರಣೆ ಎಂಬ ಹೆಸರಿನಡಿಯಲ್ಲಿ ಭಾಷೆ, ಜಾತಿ ಮತ್ತು ಅಂತಸ್ತಿನ ಆಧಾರದ ಮೇಲೆ ಜನರನ್ನು ವಿಭಜಿಸುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಅವರು ನಡೆಸಿದರು. ಇದು ತಥಾಕಥಿತ ಮೇಲ್ವರ್ಗದ ಮತ್ತು ಮೇಲ್ಜಾತಿಯ ಜನರಿಗೆ ಉತ್ತಮ ವಸತಿ ಮತ್ತು ಮೂಲಭೂತ ಸೌಕರ್ಯವನ್ನು ಸೃಷ್ಟಿಸಿರಬಹುದು, ಆದರೆ  ಇದರ ಫಲಿತಾಂಶವಾಗಿ ಸಮಾಜವು ಒಡೆದು ನುಚ್ಚುನೂರಾಯಿತು, ಸಮಾಜದಲ್ಲಿ ಪ್ರತ್ಯೇಕತೆ ಮತ್ತೆ ಸರಿಪಡಿಸಲಾರದಷ್ಟು ಬಿಗಡಾಯಿಸಿತು; ದಕ್ಷಿಣ ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಭಾರತದ ಇತಿಹಾಸದಲ್ಲಿ ನಗರಗಳು ಸರಿಯಾಗಿ ಇಬ್ಭಾಗವಾಗಿದ್ದನ್ನು ನಾವು ನೋಡಬಹುದು.  ಬಿಳಿ ಯುರೋಪಿಯನ್ನರ ಶ್ರೀಮಂತ ಪಟ್ಟಣವಾಗಿ ಒಂದು ಭಾಗ ಮಾರ್ಪಟ್ಟರೆ ಇನ್ನೊಂದು ಭಾಗ ಸ್ಥಳಿಯರ ಬಡತನದಿಂದ ಬಳಲಿತು”.

ಬೆಂಗಳೂರು ಕೂಡ ಈ ಪ್ರಜ್ಞಾಶೂನ್ಯ ಯೋಜನೆಯಿಂದ ಹೊರತಾಗಿರಲಿಲ್ಲ. ಈಶಾನ್ಯದಲ್ಲಿ ಯುರೋಪಿಯನ್ನರು ಪ್ರತ್ಯೇಕ ನಗರ ಸೃಷ್ಟಿಯಾಯಿತು. ಇಂದಿಗೂ ಕೂಡ ಅಲ್ಲಿನ ಉಪನಗರಗಳ ಹೆಸರನ್ನು ನಾವು ನೋಡಿ ಇದನ್ನು ಅಂದಾಜಿಸಬಹುದು. ಆದರೆ ಸ್ಥಳೀಯರು ಪಶ್ಚಿಮದ ಪೇಟೆಗೆ ಮಾತ್ರ (ಈಗ ಶಿವಾಜಿನಗರ) ಸೀಮಿತಗೊಂಡರು. ಇಂದಿಗೂ ಕೂಡ ಎರಡು ಪ್ರದೇಶಗಳ ನಡುವೆ ಸಂಪರ್ಕ ಇದ್ದರೂ, ಎರಡು ಪ್ರದೇಶಗಳ ನಗರದ ಪರಿಸರದಲ್ಲಿ ಸಂಪೂರ್ಣವಾಗಿ ವ್ಯತ್ಯಾಸಗಳಿವೆ. ಸ್ಥಳೀಯ ಪೇಟೆ ಇಂದಿಗೂ ಕೂಡ ಅಸ್ವಾಭಾವಿಕ ಸ್ಥಿತಿಗತಿಯಲ್ಲಿಯೇ ಬೆಳೆಯುತ್ತಿದೆ. ಒಳಚರಂಡಿ ಮತ್ತು ಅನಿಯೋಜಿತ ರಸ್ತೆಗಳಂತಹ ಅನೇಕ ಸಮಸ್ಯೆಗಳನ್ನು ಇಂದಿಗೂ ನಾವಿಲ್ಲಿ ಕಾಣಬಹುದು. ಯುರೋಪಿಯನ್ನರು ವಾಸಿಸುತ್ತಿದ್ದ ಪ್ರದೇಶಗಳಿಗೆ ಹೋಲಿಸಿದರೆ ಈ ಪ್ರದೇಶದಲ್ಲಿನ ಸಾರ್ವಜನಿಕ ಕಾರ್ಯಗಳ ಮೇಲೆ ವಸಾಹತುಶಾಹಿ ಸರ್ಕಾರವು ಅರ್ಧದಷ್ಟು ಕೂಡ ಖರ್ಚು ಮಾಡಿಲ್ಲ ಎಂಬುದು ಇದರ ಪ್ರಮುಖ ಕಾರಣ ಎಂಬುದನ್ನು ಅಧ್ಯಯನವು ವಿವರಿಸುತ್ತದೆ.

1898 ರ ಆಸುಪಾಸಿನಲ್ಲಿ ನಡೆದ ಕ್ರೂರ ಕೃತ್ಯಗಳು ಹಾಗೂ ಪ್ಲೇಗ್ ರೋಗದ ಹರಡುವಿಕೆಯಿಂದಾಗಿ ಬೆಂಗಳೂರಿನ ಜನಸಂಖ್ಯೆಯ ಸುಮಾರು 10% ನಷ್ಟು ಜನರು ಅಸುನೀಗಿದರು . ಆ ಸಮಯದಲ್ಲಿ, ವಸಾಹತು ಸರ್ಕಾರ ಜನರನ್ನು "ಪ್ಲೇಗ್ ಶಿಬಿರ" ಗಳಿಗೆ ಬಲವಂತವಾಗಿ ತಂದು ದೂಡಿತು. ಇದೇ ಸಮಯದಲ್ಲಿ ನಡೆದ ನಗರ ವಿಸ್ತರಣೆಯು ಬಸವನಗುಡಿಯನ್ನು ಸ್ಥಾಪಿಸಿದಾಗ, ಬಡವರಲ್ಲಿ ಕೆಲವರು ಮತ್ತು ಸ್ಥಳಾಂತರಿಸಲ್ಪಟ್ಟ ಸ್ಥಳೀಯರು ಅಲ್ಲಿ ವಸತಿಯನ್ನು ಪಡೆಯಲು ಸಾಧ್ಯವಾಯಿತು. ಈ ಕಾರಣಕ್ಕಾಗಿಯೇ ಸರ್ಕಾರ ತೆರಿಗೆಯ ಆದಾಯದ ಹೊಸ ನಿಯಮಗಳನ್ನು ರಚಿಸಿತು. ಇದರಿಂದ ಇನ್ನೊಂದು ಹೊಸ ಸಾಮಾಜಿಕ ವರ್ಗ ಸೃಷ್ಟಿಯಾಗಿ, ಪ್ರತ್ಯೇಕತೆ ಇನ್ನಷ್ಟು ತೀವ್ರವಾಯಿತು. ಆದ್ದರಿಂದ, ಅಂತಹ ಸುಧಾರಣೆಗಳ ಪ್ರಯೋಜನಗಳನ್ನು ಯುರೋಪಿಯನ್ನರು ಮತ್ತು ಅಂದಿನ ಮೇಲ್ವ್ರರ್ಗದ ಭಾರತೀಯರು ಮಾತ್ರ ಪಡೆದುಕೊಂಡರು ಎಂಬುದು ಕಟು ಸತ್ಯ. ಜೊತೆಗೆ ಈ ವಸತಿ ವಿಸ್ತರಣೆಯು ಅಲ್ಲಿನ ಮೂಲ ನಿವಾಸಿಗಳಾದ ಬಡ ಜನರನ್ನು ಹಾಗೂ ಸಮಾಜದ ಒಂದು ಮೂಲ ಭಾಗವನ್ನು ನಿರಾಶ್ರಿತರನ್ನಾಗಿಸಿತು.

ಮುಂದಿನ ಹಂತದ ಅಭಿವೃದ್ಧಿಯನ್ನು ವಿವರಿಸುವ ಪ್ರೊಫೆಸರ್ ರಂಗನಾಥನ್, “ಸ್ವಾತಂತ್ರ್ಯಾನಂತರ, ಸುಧಾರಣೆಯು ಭಾರತದಲ್ಲಿ ಮುಂದುವರೆಯಿತು, ವಸಾಹತುಶಾಹಿ-ನಂತರದ ನಗರ ಸರ್ಕಾರಗಳು ಸುಧಾರಿತ ಕಾನೂನುಗಳನ್ನು, ಅನೇಕ  ಸಂಸ್ಥೆಗಳನ್ನು ಮತ್ತು ಜನರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದವು”. ಉತ್ತರದಲ್ಲಿ ಜಯಮಹಲ್, ದಕ್ಷಿಣದಲ್ಲಿ ಜಯನಗರ ಮತ್ತು ಪಶ್ಚಿಮದಲ್ಲಿ ರಾಜಾಜಿನಗರವನ್ನು ನಿರ್ಮಿಸಲಾಯಿತು. ವಸತಿ ನಿರ್ಮಾಣ ಸಾರ್ವಜನಿಕ ಕ್ಷೇತ್ರದಲ್ಲಿ ಹೊಸ ಉದ್ಯಮವಾಗಿ ಮಾರ್ಪಟ್ಟಿತು. "ಆದರೆ ಇಲ್ಲಿಯೂ ಕೂಡ ಒಂದು ಕಡೆ ನಗರದ ಕೆಲವು ಪ್ರದೇಶಗಳು ಸುಧಾರಣೆಗೆ ಪೂರಕವಾಗಿ ಬೆಳೆಯುತ್ತಲೆ ಹೋದರೆ, ಮತ್ತೊಂದೆಡೆ, ಕೆಳ-ವರ್ಗ ಮತ್ತು ಬಹಿಷ್ಕೃತ ಜಾತಿ ಎಂಬ ಅಜ್ಞಾನಗಳ ಸಂಕೋಲೆಯಲ್ಲಿ ಕೆಲ ಭಾಗಗಳನ್ನು ಕಡೆಗಣಿಸಲಾಯಿತು. ಕೆಲ ಕಾನೂನುಗಳು  ಮತ್ತು ನಂಬಿಕೆಗಳು ಕೂಡ ಈ ಪ್ರತ್ಯೆಕತೆಗಳನ್ನು ಪೋಷಿಸಿ ಸಮಾಜಕ್ಕೆ ಹಾನಿಯುಂಟು ಮಾಡಿದವು” ಎಂದು ಪ್ರೊ. ರಂಗನಾಥನ್ ಹೇಳುತ್ತಾರೆ. ಉದಾಹರಣೆಗೆ, ಮಧ್ಯಮ ವರ್ಗದ ಸಂಸ್ಕೃತಿ ಮತ್ತು ನಂಬಿಕೆಗಳಿಗೆ ಅನುಗುಣವಾಗಿ ವಸತಿ ಯೋಜನೆಗಳು ಜಾರಿಗೆ ಬಂದವು. ಭಿನ್ನ ಆಚರಣೆಗಳನ್ನು ಹೊಂದಿರುವ ಜನರು ಇವುಗಳಿಗೆ ಹೊಂದಿಕೊಳ್ಳಬೇಕಾಯಿತು. ಕಾವೇರಿ ನೀರಿನ ಸರಬರಾಜು 1970 ರ ದಶಕದಿಂದ ಪ್ರಾರಂಭವಾದ ರಾಜ್ಯ ಯೋಜನೆಗಳ ಮೂಲಕ ಲಭ್ಯವಾದಾಗ “ಸುಧಾರಿತ ಪ್ರದೇಶ”ಗಳಲ್ಲಿ ವಾಸವಾಗಿದ್ದ ನಿವಾಸಿಗಳು ಮಾತ್ರ ಇದರ ಹೆಚ್ಚಿನ ಲಾಭವನ್ನು ಪಡೆದರು.

ನವ ಉದಾರವಾದದ ನೀತಿಗಳು ಇದರಡಿಯಲ್ಲಿ ಸ್ಥಾಪಿತವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿ.ಡಿ.ಎ.) ನಮಗೆ ಕಾಣಸಿಗುತ್ತವೆ. ಅನಿವಾಸಿ ಭಾರತೀಯರ ಕಡೆಗೆ ತನ್ನ ಗಮನ ಗಮನ ಹರಿಸಿದ ಪ್ರಾಧಿಕಾರ, ಹಳೆಯ ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡುವ ಬದಲಿಗೆ ಈ ಅಕ್ರಮಗಳನ್ನು ಕ್ರಮಬದ್ಧಗೊಳಿಸುವ (ಅಕ್ರಮಾ ಸಕ್ರಮಾ) ಎನ್ನುವ ಹೊಸ ನೀತಿಯನ್ನು ಜಾರಿಗೊಳಿಸಿತು. ವಿಷಾದದ ಸಂಗತಿ ಗೊತ್ತೇನು? ಅಕ್ರಮ ಸ್ಥಳಗಳ ಸಂಖ್ಯೆ, 1980 ಮತ್ತು 2009 ರ ನಡುವೆ ಆರು ಪಟ್ಟು ಹೆಚ್ಚಾಗಿದೆ. ಆದ್ದರಿಂದ ಈ ಯೋಜನೆ ಕೇವಲ ಬಿಡಿಎ ಯೋಜಕರು, ಕಂದಾಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಲಾಬವನ್ನುಂಟು ಮಾಡಿತು ಎನ್ನಬಹುದು. ಅನೌಪಚಾರಿಕ, ಅನಿಯೋಜಿತ ನಗರೀಕರಣದಿಂದ ಲಾಭಕ್ಕಿಂತ- ನಷ್ಟವೇ ಹೆಚ್ಚಾಯಿತು. ಇದರ ಜೊತೆಗೆ, ಯೋಜಿತ ನಗರದ ವಿಸ್ತರಣೆಗಳಿಗಾಗಿ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗಳು, ಅದಕ್ಕೆ ಸಿಗದ ಸೂಕ್ತ ಪರಿಹಾರಗಳು ಹಾಗೂ ಅಪ್ಪಿ-ತಪ್ಪಿ ಸಿಕ್ಕರೂ ನೀಡುವ ಕಾಲದಲ್ಲಿ ಆಗುವ ವಿಳಂಬ ರೈತರ ಜೀವನವನ್ನು ಕಠಿಣಗೊಳಿಸಿದವು. ಈ ಎಲ್ಲದರ ಪರಿಣಾಮವಾಗಿ ಅಕ್ರಮವಾಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಯಿತು.

ಪ್ರೊಫೆಸರ್ ರಂಗನಾಥನ್ ಅಧ್ಯಯನದ ಕವಲುಗಳನ್ನು ವಿವರಿಸುತ್ತ, “ನಾವು ಇಂದು ಭಾರತದಲ್ಲಿ ನಗರಗಳನ್ನು ನೋಡಿದಾಗ, ನಗರದಲ್ಲಿನ ಕೆಲವು ಪ್ರದೇಶಗಳು ಅಂದವಾದ ಅಚ್ಚುಕಟ್ಟಾಗಿ-ಜೋಡಿಸಲ್ಪಟ್ಟ ಬೀದಿಗಳೊಂದಿಗೆ ಏಕೆ ಯೋಜಿತವಾಗಿರುತ್ತವೆ? ನೀರಿನ ಸೌಲಭ್ಯವನ್ನು ಮತ್ತು ಸ್ವಚ್ಛತಾ ಸೌಕರ್ಯಗಳನ್ನು ಹೆಚ್ಚು ಸ್ಥಿರವಾಗಿ ಏಕೆ ಪಡೆದುಕೊಂಡಿವೆ? ಎಂದು ನಾವು ಪ್ರಶ್ನೆಗಳನ್ನು ನಾವು ಕೇಳಬಹುದು. ಹಾಗೆಯೇ ಅನೇಕ ಬೀದಿಗಳು ಅನಿಯೋಜಿತ ಮತ್ತು ಕಿರಿದಾದ ವ್ಯವಸ್ಥೆಗಳನ್ನು ಏಕೆ ಹೊಂದಿವೆ? ನಗರದ ಕೆಲವು ಪ್ರದೇಶಗಳು ಮೇಲ್ವರ್ಗದ ಅಥವಾ ಶ್ರೀಮಂತ ವರ್ಗದವರೊಂದಿಗೆ ಮಾತ್ರ ಏಕೆ ಸಂಬಂಧಿಸಿವೆ? ಮತ್ತು ಇತರ ಕೆಲವು ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಮತ್ತು ಬಡವರನ್ನು ಏಕೆ ಹೊಂದಿವೆ? ಎಂದು ನಾವು ಆಶ್ಚರ್ಯಪಡಬಹುದು. ಈ ಭೌಗೋಳಿಕ ಪ್ರತ್ಯೇಕತೆಯನ್ನು ಅರ್ಥಮಾಡಿಕೊಳ್ಳಲು, ಶತಮಾನದ ಹಿಂದೆ ನಗರವನ್ನು ಹೇಗೆ ಯೋಜಿಸಲಾಗಿದೆ ಎಂದು ನಾವು ನೋಡಬೇಕಾಗುತ್ತದೆ ಮತ್ತು ಸಮಾಜ ಇದರೆಡೆಗೆ ಯಾವ ರೀತಿ ಪ್ರತಿಕ್ರೀಯಿಸಿದೆ ಮುಂದೆ ಯಾವ ರೀತಿ ಪ್ರತಿಕ್ರೀಯಿಸಲಿದೆ ಎಂಬುದನ್ನು ಕೂಡ ನೋಡಬೇಕಾಗುತ್ತದೆ.”

ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ನಿಟ್ಟಿನಲ್ಲಿ ಈ ಅಧ್ಯಯನವು ತನ್ನ ಅಮೂಲ್ಯ ಕೊಡುಗೆಯನ್ನು ನೀಡಲಿದೆ.