ಬಾವಲಿಗಳು ತಮ್ಮ ಪಾಡಿಗೆ ತಾವು ರಾತ್ರಿಯಲ್ಲಿ ಹಾರಾಡುವ ಸಸ್ತನಿಗಳು. ಇವು ಪ್ರಪಂಚದಾದ್ಯಂತ ಹರಡಿದ್ದು, ಇವುಗಳಲ್ಲಿ ಸುಮಾರು ೧೨೦೦ ಪ್ರಭೇದಗಳಿವೆ. ಈಗಿನ ಲಾಕ್ ಡೌನ್ ಗೆ ಕಾರಣವಾಗಿರುವ ಕೋವಿಡ್-೧೯ ಸಾಂಕ್ರಾಮಿಕವನ್ನು ಬಾವಲಿಗಳು ಹರಡುತ್ತಿವೆ ಎಂದು ಜನರು ತಿಳಿದಿದ್ದಾರೆ. ಇದಕ್ಕೆ ಪೂರಕವಾಗಿ, ಕೆಲವೇ ದಿನಗಳ ಹಿಂದೆ, ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್)ನ ಅಧ್ಯಯನವೊಂದು ದಕ್ಷಿಣ ಭಾರತದಲ್ಲಿ ಕಂಡುಬರುವ ಬಾವಲಿಗಳಲ್ಲಿ “ಬ್ಯಾಟ್-ಕೊರೊನ ವೈರಸ್” ಇದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೆಲ್ಲಾ ಓದಿದ ಜನ, ಭಯಭೀತರಾಗಿ ಕೆಲವೆಡೆ ಬಾವಲಿಗಳನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಕೆಲವರಂತೂ ಮನೆ ಅಂಗಳದಲ್ಲಿರುವ ಸಪೋಟಾ, ಮಾವು ಹಾಗೂ ಬಾವಲಿಗಳು ಬರುವ ಇತರ ಗಿಡ-ಮರಗಳನ್ನು ಕಡಿಯುತ್ತಿದ್ದಾರೆ.
ಬಾವಲಿಯಂತಹ ಹಲವಾರು ಸಸ್ತನಿಗಳು ಸೋಂಕುಹರಡುವ ವಿವಿಧ ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಗೆ ನೈಸರ್ಗಿಕವಾದ ಆಶ್ರಯತಾಣವಾಗಿವೆ. ಆದರೂ ಈ ಪರೋಪಜೀವಿಗಳು ಮಾನವರಿಗೆ ರೋಗಗಳನ್ನು ಹರಡುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಒಂದು ಪ್ರಭೇದದ ವೈರಸ್, ಮತ್ತೊಂದು ಜೀವಿಯ ಜೊತೆಗೆ ವಿಕಸನಗೊಂಡಿರುತ್ತದೆ. ಏನಾದರೋ ಸೋಂಕನ್ನು ಹರಡುವುದಾದರೆ ಆ ಪ್ರಾಣಿಗೆ ಮಾತ್ರ ಕಂಟಕ. ICMR ಅಧ್ಯಯನದಲ್ಲಿ ಬೆಳಕಿಗೆ ಬಂದ ಬ್ಯಾಟ್ ಕರೋನಾ ವೈರಸ್ ಸಹ ಇದೇ ರೀತಿ ಬಾವಲಿಗಳಲ್ಲಿ ನೈಸರ್ಗಿಕವಾಗಿ ವಾಸಿಸುತ್ತವೆ. ಇದರಿಂದ ನಮಗೆ ತೊಂದರೆ ಇಲ್ಲವಾದರೂ, ಆಕಸ್ಮಿಕವಾಗಿ ಕೆಲವು ಬಾರಿ ಈ ವೈರಸ್ ಗಳು ಮತ್ತೊಂದು ಜೀವಿಯ ಮೂಲಕ ಮನುಷ್ಯರಿಗೆ ಸೋಂಕು ಹರಡಬಹುದು.
ಕೋವಿಡ್-೧೯ ಸಹ ಹೀಗೆ ಆಗಿರಬಹುದು. ಒಂದು ಅಧ್ಯಯನದ ಪ್ರಕಾರ ಚಿಪ್ಪುಹಂದಿ (Pangolin) ಮುಖಾಂತರ ಮನುಷ್ಯನಿಗೆ ಈ ಕೊರೋನ ವೈರಸ್ ನೆಗೆದಿದೆ. ಹೊಸ ಅಧ್ಯಯನಗಳು ಬಂದಂತೆ ಈ ಮಧ್ಯಂತರ ಜೀವಿ ಯಾವುದೆಂದು ಗುರುತಿಸುವುದೇ ಯಕ್ಷ ಪ್ರಶ್ನೆಯಾಗಿದೆ. ಈ ಪ್ರಕ್ರಿಯೆಯನ್ನು ‘ಸ್ಪಿಲ್-ಓವರ್’ ಎನ್ನುತ್ತಾರೆ. ಮನುಷ್ಯರಿಗೆ ಬಂದಿರುವ ಹಲವಾರು ರೋಗಗಳು, ಇತರ ಪ್ರಾಣಿಗಳಿಂದ ನೆಗೆದು ಬಂದಂತಹ ರೋಗಗಳೇ! ಹೆಚ್.ಐ.ವಿ, ಸಾರ್ಸ್, ಮೆರ್ಸ್, ಎಬೋಲಾ ಎಲ್ಲವೂ ಇದಕ್ಕೆ ಉದಾಹರಣೆ. ಒಂದು ಪ್ರಭೇದದ ಪ್ರಾಣಿಯಿಂದ ಮತ್ತೊಂದು ಪ್ರಭೇದಕ್ಕೆ ಈ ರೋಗಗಳು ಬರುವುದರಲ್ಲಿ ಈ ಪರೋಪಜೀವಿಗಳ ವಿಕಸನ ಬಹುಮುಖ್ಯ. ಅಲ್ಲದೇ ಪ್ರಾಣಿಗಳೊಡನೆ ಮನುಷ್ಯರ ಸಾಂಗತ್ಯ ಹೆಚ್ಚಾದರೆ ಇಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚು. ಅಭಿವೃದ್ಧಿ ಹೆಸರಿನಲ್ಲಿ ನಾವು ಕಾಡನ್ನು ಕಡಿಯುವುದು, ಆಹಾರಕ್ಕಾಗಿ ಅಥವಾ ಸಾಕಲು ನಡೆಸುವ ಕಾಡುಪ್ರಾಣಿಗಳ ವಹಿವಾಟು, ಇವೆಲ್ಲದರಿಂದ ನಮ್ಮಲ್ಲಿ ಇಂತಹ ಭೀಕರ ಸೋಂಕು ಬರಬಹುದು. ದುರದೃಷ್ಟವಶಾತ್, ಇದರ ಹೊಣೆಯನ್ನು ನಾವು ಬಾವಲಿಗಳ ತಲೆಗೆ ಕಟ್ಟುತ್ತೇವೆ!
ಇದು ಸರಿಯೇ? ಬಾವಲಿಗಳ ಪಾತ್ರ ಇದರಲ್ಲಿ ನಿಜವಾಗಿಯೂ ಇದೆಯೇ? ವಿಜ್ಜ್ಞಾನ ಇದರ ಬಗ್ಗೆ ಏನು ಹೇಳುತ್ತದೆ? ಬಾವಲಿಗಳ ಜೀವನಶೈಲಿ ಏನು? ಇಲ್ಲಿದೆ ಉತ್ತರಗಳು.
ಬಾವಲಿಗಳು ಎಲ್ಲಿರುತ್ತವೆ?
ಷ್ನೇಯ್ಡರ್ಸ್ ಲೀಫ್-ನೋಸ್ಡ್ ಬ್ಯಾಟ್ (ಹಿಪೊಸಿಡೆರೋಸ್ ಸ್ಪೋರಿಸ್). ಚಿತ್ರ - ಶೇಷಾದ್ರಿ ಕೆ. ಎಸ್
ಕತ್ತಲಿರುವ ಗುಹೆಗಳಂತಹ ಪ್ರದೇಶಗಳು ಮತ್ತು ದೊಡ್ಡ ಮರಗಳು ಬಾವಲಿಗಳ ನೆಲೆ. ಇವು ಬೆಳಗಿನ ಹೊತ್ತು ಜೋತುಬಿದ್ದು ನಿದ್ದೆ ಮಾಡುತ್ತಿರುತ್ತವೆ. ಕತ್ತಲಾದ ಮೇಲೆ ಆಹಾರ ಹುಡುಕಿಕೊಂಡು ಹಾರಿಹೋಗುತ್ತವೆ. ಹಿಂದೆ ದೇವಾಲಯಗಳ ಗೋಪುರಗಳು ಕತ್ತಲಾಗಿ ನಿರ್ಜನವಾಗಿರುತ್ತಿದ್ದವು. ಹಾಗಾಗಿ ಬಹಳಷ್ಟು ಬಾವಲಿಗಳು ನೆಲೆಸಿದ್ದವು. ಆದರೆ ಇಂದು ದೇವರನ್ನು ಸುಖವಾಗಿಡುವ ನಮ್ಮ ಪ್ರಯತ್ನದಲ್ಲಿ ದೇವಸ್ಥಾನಗಳಲ್ಲಿ ಹವಾನಿಯಂತ್ರಣ ಯಂತ್ರಗಳನ್ನೂ, ಎಲ್ ಈ ಡಿ (LED) ಲೈಟುಗಳನ್ನೂ ಹಾಕಿ, ಗೋಡೆಗಳಿಗೆ, ಸುಣ್ಣ-ಬಣ್ಣ ಬಳಿದು ಸಂದುಗೊಂದುಗಳಿಗೆ ಕಾಂಕ್ರೀಟ್ ಮೆತ್ತಿದ್ದೇವೆ. ಅಷ್ಟೇ ಏಕೆ, ಬಾವಲಿಗಳು ಸೇರಬಾರದೆಂದು, ಗೋಪುರದೊಳಕ್ಕೆ ಹೋಗುವ ಸಣ್ಣ-ಪುಟ್ಟ ರಂಧ್ರಗಳನ್ನು ಜಾಲರಿ ಹಾಕಿ ಮುಚ್ಚಿದ್ದೇವೆ. ಇನ್ನು ಕೆಲವೆಡೆ, ಬಾವಲಿಗಳನ್ನು ಓಡಿಸಲು, ಗೋಡೆಗಳಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಅವುಗಳ ಜೀವಂತ ಮಾರಣಹೋಮ ಮಾಡಿದ್ದೇವೆ. ಬಾವಲಿಗಳ ನಿಗೂಢ ಜೀವನವನ್ನು ಅರಿಯದೆ, ಹೆದರಿ, ಅಮಾನುಷ ಕ್ರೌರ್ಯವೆಸಗಿದ್ದೇವೆ.
ಬಾವಲಿಗಳನ್ನು ದ್ವೇಷಿಸಲು ನಮ್ಮ ಸಾಮೂಹಿಕ ಮೌಢ್ಯ ಒಂದು ಬಹುದೊಡ್ಡ ಕಾರಣ.
“ಜನರಿಗೆ ಬಾವಲಿಗಳ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲ. ಏನೋ ಸ್ವಲ್ಪ ಗೊತ್ತಿದೆ ಎಂದು ಹೇಳುವವರು ಕೂಡ ಹುಸಿಯನ್ನು ನಂಬಿರುತ್ತಾರೆ. ಉದಾಹರಣೆಗೆ, ತುಂಬಾ ಜನ, ಬಾವಲಿಗಳು ರಕ್ತ ಹೀರುತ್ತವೆ ಆಥವ ಕಣ್ಣು ಕುಕ್ಕುತ್ತವೆ, ಮನೆಯೊಳಗೆ ಬಂದರೆ ಅಪಶಕುನ, ಎಂದು ನಂಬಿರುತ್ತಾರೆ,” ಎನ್ನುತ್ತಾರೆ ರಾಜೇಶ್ ಪುಟ್ಟಸ್ವಾಮಯ್ಯ. ಇವರು ವೃತ್ತಿಯಲ್ಲಿ ವಕೀಲರಾದರೂ, ಬಾವಲಿಗಳನ್ನ ಸಂರಕ್ಷಿಸುವ ಆಸಕ್ತಿ ಹೊಂದಿದ್ದು, ೨೦೧೪ರಲ್ಲಿ ಬ್ಯಾಟ್ ಕನ್ಸರ್ವೇಷನ್ ಟ್ರಸ್ಟ್ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. “ಮೂಡನಂಬಿಕೆ ಜನರಲ್ಲಿ ಸಾಮಾನ್ಯ. ಆದರೆ ಅಧಿಕಾರಿಗಳು ಹಾಗೂ ನೀತಿನಿರೂಪಕರು ಇವುಗಳನ್ನು ನಂಬುವುದು ತಪ್ಪಾಗುತ್ತದೆ,” ಎನ್ನುತ್ತಾರೆ.
ಬಾವಲಿಗಳ ಜೊತೆ ನಾವು ಬದುಕಬಹುದೇ?
“ಬಾವಲಿಗಳು ಅನಾದಿ ಕಾಲದಿಂದ ಮನುಷ್ಯರೊಂದಿಗೆ ಬದುಕಿಬಂದಿರುವ ಪ್ರಾಣಿ. ಅವು ಮನುಷ್ಯರೊಂದಿಗೆ ಚೆನ್ನಾಗಿಯೇ ಹೊಂದಿಕೊಂಡಿವೆ”, ಎನ್ನುತ್ತಾರೆ ರೋಹಿತ್ ಚಕ್ರವರ್ತಿ. ಇವರು ಜರ್ಮನಿಯ ಲೈಪ್ಝಿಗ್ ಇನ್ಸ್ಟಿಟ್ಯೂಟ್ ಫಾರ್ ಜೂ ಅಂಡ್ ವೈಲ್ಡ್ಲೈಫ್ ರಿಸರ್ಚ್ ಎಂಬಲ್ಲಿ ಬಾವಲಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ. “ನಮ್ಮ ನಾಗಪುರ ಮನೆಯ ಆಸುಪಾಸಿನಲ್ಲಿ ಹಲವಾರು ಪ್ರಭೇದದ ಬಾವಲಿಗಳು ಇವೆ. ಪೈಪ್ಸ್ಟ್ರೆಲ್ಸ್ (Pipestrells) ಎಂಬ ಸಣ್ಣ ಬಾವಲಿಗಳು ಗೋಡೆಯಲ್ಲಿ ಅಥವಾ ಮಾಡಿನ ಅಂಚಿನಲ್ಲಿ ಅಡಗಿದ್ದು, ಸಂಜೆಯ ವೇಳೆಗೆ ಹೊರಬಂದು, ಸೊಳ್ಳೆ, ನೊಣಗಳನ್ನು ತಿನ್ನುತ್ತವೆ.” ಹೌದು, ಬಾವಲಿಗಳು ನಮಗೆ ಇಂತಹ ಕ್ರಿಮಿ-ಕೀಟಗಳನ್ನು ತಿಂದು ನಮ್ಮನ್ನೂ ನಮ್ಮ ಬೆಳೆಯನ್ನೂ ರಕ್ಷಿಸುತ್ತವೆ.
ಕೆಲವೊಮ್ಮೆ, ಬಾವಲಿಗಳಿಂದ ನಮಗೆ ರೋಗಗಳು ಹರಡಿರುವುದು ಸತ್ಯ. “ತೊಗಲು ಬಾವಲಿ (ಫ್ಲಲ್ಯಿಂಗ್ ಫಾಕ್ಸ್) ಯಂತಹ ಬಾವಲಿಗಳು ನೀಫಾ, ಹೆಂಡ್ರ, ಮಾರ್ಬುರ್ಗ್ ಮತ್ತು ಎಬೋಲಾದಂತಹ ವೈರಸ್ ಗಳನ್ನು ಹರಡಬಹುದು. ಹಾಗಾಗಿ ನಾವು ಇವುಗಳಿಂದ ಸುರಕ್ಷಿತವಾಗಿರಲು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಉದಾಹರಣೆಗೆ, ಕೆಳಗೆಬಿದ್ದ ಹಣ್ಣುಗಳನ್ನು ತಿನ್ನದಿರುವುದು ಮತ್ತು ಬಾವಲಿಗಳಿರುವ ಜಾಗಗಳಿಂದ ಸಾಕುಪ್ರಾಣಿಗಳನ್ನು ದೂರವಿಡುವುದು,” ಎಂದು ರೋಹಿತ್ ಸ್ಪಷ್ಟಪಡಿಸುತ್ತಾರೆ. ಬಾವಲಿಗಳ ಮಲ ಮೂತ್ರಗಳ ಸಂಪರ್ಕಕ್ಕೆ ಬಾರದಿರುವುದು ಕ್ಷೇಮ.
ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ನ ವಸಾಹತು (ಟೆರೊಪಸ್ ಜೈಗ್ಯಾಂಟಿಕಸ್) ಚಿತ್ರ - ಶೇಷಾದ್ರಿ ಕೆ. ಎಸ್
ಹಾಗಿದ್ದರೂ ಇಂದು ನಾವು ಎದುರಿಸುತ್ತಿರುವ ಕೊರೋನ ಮಹಾಮಾರಿಗೂ, ನಮ್ಮ ತೋಟಗಳಲ್ಲಿರುವ ಬಾವಲಿಗಳಿಗೂ ಯಾವ ನಂಟೂ ಇಲ್ಲ. ಜೀವವಿಕಸನ ಕ್ರಮದಲ್ಲಿ ಯಾವಾಗಲೋ ಒಂದು ಕೊರೋನ ವೈರಸ್ ಬಾವಲಿಗಳಿಂದ ಮತ್ತೊಂದು ಪ್ರಾಣಿಯೊಳಗೆ ಬಂದು ನಾವು ಆ ಪ್ರಾಣಿಗಳನ್ನು ತಿಂದೋ, ಸಾಕೋ ಸಾಂಗತ್ಯ ಬೆಳೆಸಿ, ಈ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ಈ ಅವಿವೇಕಕ್ಕೆ ಇವು ಹೇಗೆ ಹೊಣೆ?
ಬಾವಲಿಗಳನ್ನು ಪ್ರೀತಿಸುವುದೋ ದ್ವೇಷಿಸುವುದೋ?
ಬಾವಲಿಗಳು ಪರಿಸರದ ಸಮತೋಲನ ಕಾಪಾಡುವುದರಲ್ಲಿ ಅನುವಾಗುತ್ತವೆ. ಇವುಗಳು ಎರಡು ಪರಿಸರದಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತವೆ—ಪರಾಗಸ್ಪರ್ಶ ಹಾಗು ಪ್ರಸರಣ, ಮತ್ತು ಕೀಟ ನಿಯಂತ್ರಣ. ೧೯೯೩ರಲ್ಲಿ ಬರೆದ ಒಂದು ಪ್ರಬಂಧದಲ್ಲಿ ಡಾ. ಎಸ್. ಸುಬ್ರಮಣ್ಯ ಹಾಗು ಟಿ. ರ್ ರಾಧಾಮಣಿ, ಬಾವಲಿಗಳ ಪರಾಗಸ್ಪರ್ಷಕ್ಕೆಂದೇ ವಿಕಸನವಾಗಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗಿಡಗಳನ್ನು ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಆಹಾರ ಹಾಗು ನಗದು ಬೆಳೆಯಾದ ಮಾವು, ನೇರಳೆ, ಸಪೋಟ, ನೀಲಗಿರಿ ಮರಗಳು ಸೇರಿವೆ. ಬಾವಲಿಗಳ ಸಂಖ್ಯೆ ಕುಸಿದರೆ ಈ ಗಿಡಗಳು ಪರಾಗಸ್ಪರ್ಶವಾಗದೆ ಫಲ ಕೊಡುವುದಿಲ್ಲ.
ಭಾರತದಲ್ಲಿ ಸಾಮಾನ್ಯವಾಗಿ ಸಿಗುವ ಬಾವಲಿಗಳ ಪ್ರಭೇದಗಳು ಹೆಚ್ಚಾಗಿ ‘ಫ್ರೂಟ್ ಬ್ಯಾಟ್ಸ್’ ಎಂಬ ಗುಂಪಿಗೆ ಸೇರಿವೆ. ಲೆಸ್ಚೆನಾಲ್ಟ್ಸ್ ಫ್ರೂಟ್ ಬ್ಯಾಟ್ (Rousettus leschenaultii); ಗ್ರೇಟರ್ ಶಾರ್ಟ್ ನೋಸ್ಡ್ ಫ್ರೂಟ್ ಬ್ಯಾಟ್ (Cynopterus sphinx) ಹಾಗು ಇಂಡಿಯನ್ ಫ್ಲೈಯಿಂಗ್ ಫಾಕ್ಸ್ (Pteropus giganticus), ಹೂವಿನ ಮಕರಂದವನ್ನು ಹೀರಲು ಬಂದಾಗ ಪರಾಗಸ್ಪರ್ಶ ಮಾಡುವುವು.
ಕೀಟಾಹಾರಿ ಬಾವಲಿಗಳಾದ ಇಂಡಿಯನ್ ಪಿಫೇಸ್ಟ್ರೆಲ್ (Pipistrellus coromandra) ಹಾಗೂ ಷ್ನೇಯ್ಡರ್ ರೌಂಡ್ ಲೀಫ್ ಬ್ಯಾಟ್ (Hipposideros speoris) ಬೆಳೆಗಳಿಗೆ ಹಾನಿ ಮಾಡುವ ಸೊಳ್ಳೆ, ನುಸಿ, ಹಾಗು ನೊಣಗಳನ್ನೂ ತಿನ್ನುತ್ತವೆ. ಬಾವಲಿಗಳು ನಮ್ಮ ಅಚಾತುರ್ಯದಿಂದ ಮಾಯವಾದರೆ, ಪ್ರಪಂಚವನ್ನು ಕೀಟಗಳು ಆಕ್ರಮಿಸುವ ಸಾಧ್ಯತೆ ಇದೆ.
ಬಾವಲಿಯನ್ನು ಕಾಪಾಡಲು ನಾವೇನು ಮಾಡಬಹುದು?
ಬ್ಯಾಟ್ಮ್ಯಾನ್ ಕಾಮಿಕ್ಸ್ ಹಾಗು ಚಲನಚಿತ್ರವನ್ನು ಪ್ರೀತಿಸುವ ನಾವು, ಜೀವಂತ ಬಾವಲಿಯನ್ನು ದ್ವೇಷಿಸಿದರೆ ನಾವು ಕಪಟಿಗಳಾಗುವುದಿಲ್ಲವೇ? ಬಾವಲಿಗಳಿಂದ ಮನುಕುಲಕ್ಕೆ ಇಷ್ಟೆಲ್ಲಾ ಅನುಕೂಲವಿದ್ದರೆ ನಾವು ಅವುಗಳನ್ನು ಸಂರಕ್ಷಿಸಲು ಏನು ಮಾಡಬಹುದು? ಆಶ್ಚರ್ಯವೆಂದರೆ, ನಾವೇನೂ ಮಾಡದಿರುವುದು ಒಳಿತು. ಬಾವಲಿಗಳನ್ನು ಕೇವಲ ಅವುಗಳ ಬಗ್ಗೆ ಇರುವ ಅರ್ಥಹೀನ ಭಯದಿಂದಲೋ, ಅಥವಾ ವಾಸನೆಗೋ, ಅವುಗಳನ್ನು ಅಮಾನುಷ ಕೊಲ್ಲುವುದನ್ನು ನಿಲ್ಲಿಸೋಣ. ಅವುಗಳ ನೈಸರ್ಗಿಕ ನೆಲೆಗಳಾದ ಗುಹೆಗಳನ್ನು, ಮರಗಳನ್ನು ನಾಶಮಾಡದೆ ಅವುಗಳ ಪಾಡಿಗೆ ಬಿಡೋಣ. ಎಲ್ಲೋ ದೂರದ ಕಾನನದಲ್ಲಿ ತಮ್ಮ ಪಾಡಿಗೆ ತಾವು ಇರುವ ಬಾವಲಿಗಳು ಅಲ್ಲಿನ ಮರಗಳು ಮಾಯವಾದರೆ ಎಲ್ಲಿಗೆ ಹೋಗಬೇಕು? ಅಥವಾ ನಾವು ಅವುಗಳಿರುವ ಜಾಗಗಳನ್ನು ಆಕ್ರಮಿಸಿದರೆ ಅವೇನು ಮಾಡಬೇಕು? ಅವುಗಳ ಸನಿಹಕ್ಕೆ ಹೋಗಿ ರೋಗ ತಂದುಕೊಂಡರೇ, ಅದು ಯಾರ ತಪ್ಪು?
ಗ್ರೇಟರ್ ಫಾಲ್ಸ್ ವ್ಯಾಂಪೈರ್ (ಮೆಗಾಡೆರ್ಮಾ ಲೈರಾ) ಚಿತ್ರ - ಶೇಷಾದ್ರಿ ಕೆ. ಎಸ್
ಇಂತಹದೊಂದು ಪ್ರಸಂಗವನ್ನು ಮತಿವಣ್ಣನ್ ವಿವರಿಸುತ್ತಾರೆ. ಇವರು ಅಗಸ್ತ್ಯಮಲೈ ಕಮ್ಯೂನಿಟಿ-ಬೇಸ್ಡ್ ಕನ್ಸರ್ವೇಷನ್ ಸೆಂಟರ್ ನ ವ್ಯವಸ್ಥಾಪಕರು.
“ಹಲವು ವರ್ಷಗಳ ಹಿಂದೆ, ತಮಿಳುನಾಡಿನ ತಿರುನೆಲ್ವೇಲಿಯ ಬಳಿ ಅಂಬಾಸಮುದ್ರಂ ಎಂಬ ಊರಿನ ಒಂದು ಗುಡಿಯಲ್ಲಿ ಸುಮಾರು ೧೦,೦೦೦ ಸಾವಿರ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ (Pteropus giganticus) ನೆಲೆಸಿದ್ದ ಮರವೊಂದನ್ನು ಕಡಿದುಹಾಕಿದರು. ನಂತರ ಆ ಬಾವಲಿಗಳು ಹಿಂದಿರುಗಿ ಬರಲೇ ಇಲ್ಲ,” ಎಂದು ಶೋಕ ವ್ಯಕ್ತಪಡಿಸುತ್ತಾರೆ. ”
ಜನರಲ್ಲಿನ ಈ ಬಾವಲಿಗಳ ಮೇಲಿರುವ ತಪ್ಪುತಿಳುವಳಿಕೆಯನ್ನು ಹೋಗಿಸಿ, ಅವುಗಳ ಪ್ರಶಂಸಾರ್ಹ ಪಾತ್ರವನ್ನು ವಿವರಿಸುವುದು ಬಾವಲಿಗಳನ್ನು ಕಾಪಾಡಲು ಇರುವ ಒಂದೇ ದಾರಿ. ಇಲ್ಲವೇ ಒಂದು ಬಾವಲಿಮೂರ್ತಿ ಸ್ಥಾಪಿಸಿ ದೇವಾಲಯ ಕಟ್ಟಿದರೆ ಬಹುಶಃ ಜನ ಈ ವಿಸ್ಮಯಕಾರಿ ಜೀವಿಯನ್ನು ತುಸು ಭಕ್ತಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವರೋ ಏನೋ!