ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತದಲ್ಲಿನ ಹುಲಿಗಳ ಸಂಖ್ಯೆಯ ನಿಖರತೆ ಎಷ್ಟು?

Read time: 1 min
ಬೆಂಗಳೂರು
2 Apr 2020
ಭಾರತದಲ್ಲಿನ ಹುಲಿಗಳ ಸಂಖ್ಯೆಯ ನಿಖರತೆ ಎಷ್ಟು?

ವರ್ಚಸ್ವಿ ಪ್ರಾಣಿಗಳಲ್ಲಿ ಒಂದಾದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಪ್ರಪಂಚದಾದ್ಯಂತ ಪ್ರಾಣಿಸಂರಕ್ಷಣೆಯ ಮುಖವಾಗಿ ಬಳಸಲಾಗುತ್ತಿದೆ. 2019 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತರ್ರಾಷ್ಟ್ರೀಯ ಹುಲಿ ದಿನವಾದ ಜುಲೈ 29 ರಂದು 2018 ರ ರಾಷ್ಟ್ರೀಯ ಹುಲಿ ಗಣತಿ (ಎನ್‌ಟಿಇ) ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದರು. ಉದ್ದೇಶಿತ ಗಡುವಿಗೆ ನಾಲ್ಕು ವರ್ಷಗಳ ಮೊದಲೇ ಭಾರತವು ತನ್ನ ಹುಲಿ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಹುಲಿಗಳ ಸಂಖ್ಯೆ 2967 ಕ್ಕೆ ಏರಿದ್ದು, ಇದು ಪರಿಷ್ಕೃತ ಮೇಲ್ವಿಚಾರಣಾ ವಿಧಾನದಡಿಯಲ್ಲಿ 2006 ರಲ್ಲಿ ನಡೆಸಿದ ಮೊದಲ ಸಮೀಕ್ಷೆಯ ನಂತರ, ಹುಲಿಗಳ ಸಂಖ್ಯೆ ದ್ವಿಗುಣಗೊಂಡಿರುವುದನ್ನು ಸೂಚಿಸುತ್ತದೆ. ಈ ಬದಲಾವಣೆಯು ಜನಸಾಮಾನ್ಯರಿಗೆ ಉತ್ತೇಜನಕಾರಿಯೆನಿಸಿದರೂ, ಹುಲಿ ಸಂಖ್ಯೆಯಲ್ಲಾದ ಈ ಬದಲಾವಣೆಗಳ ಬಗ್ಗೆ ಕೆಲವು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

‘ಕನ್ಸರ್ವೇಶನ್ ಸೈನ್ಸ್ ಅಂಡ್ ಪ್ರಾಕ್ಟೀಸ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವೊಂದರಲ್ಲಿ, ಭಾರತ ಮತ್ತು ನಾರ್ವೆಯ ಸಂಶೋಧಕರು ಪ್ರಮುಖ ಗಣಿತ, ಸಂಖ್ಯಾಶಾಸ್ತ್ರೀಯ ಮತ್ತು ಪರಿಸರ ವಿಜ್ಞಾನದ ತತ್ವಗಳನ್ನು ಉಲ್ಲೇಖಿಸುತ್ತಾರೆ ಮತ್ತು ಭಾರತದ ಹುಲಿ ಸಮೀಕ್ಷೆಯ ಫಲಿತಾಂಶಗಳು ಈ ತತ್ವಗಳಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಭಾರತದ ಹುಲಿಗಳ ಸಂಖ್ಯೆಯಲ್ಲಿ ಇಷ್ಟೊಂದು ಹೆಚ್ಚಳವಾಗಿದೆ ಎಂದು ಬಿಂಬಿಸುವುದರ ಹಿಂದೆ ‘ರಾಜಕೀಯ ಜನಸಂಖ್ಯೆಯ’ ಪರಿಣಾಮ ಇರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ; ಏಕೆಂದರೆ, ವೈಜ್ಞಾನಿಕ ಸಂಶೋಧನೆಗಳ ಆಧಾರದ ಮೇಲೆ ಕಂಡುಕೊಂಡ ನೈಜ ಸಂಖ್ಯೆಗಳಿಗೆ ಹೋಲಿಸಿದರೆ, ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯಲ್ಲಿನ ಬದಲಾವಣೆಗಳನ್ನು ಇಲ್ಲಿ ಉತ್ಪ್ರೇಕ್ಷಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

2006, 2010 ಮತ್ತು 2014ರಲ್ಲಿ ನಡೆಸಲಾದ ಮೊದಲ ಮೂರು ರಾಷ್ಟ್ರೀಯ ಹುಲಿ ಗಣತಿ ಸಮೀಕ್ಷೆಗಳು, ಹುಲಿಯ ಜನಸಂಖ್ಯೆಯ ಹೆಚ್ಚಳದ ಬಗ್ಗೆ ವ್ಯತಿರಿಕ್ತ ಮಾದರಿಗಳನ್ನು ತೋರಿಸಿದೆ. 2006 ರಿಂದ 2010 ರ ಅವಧಿಯಲ್ಲಿ, ಹುಲಿಗಳ ಆವಾಸಸ್ಥಾನದ ವ್ಯಾಪ್ತಿಯಲ್ಲಿ 12.9% ಅಥವಾ 11,400 ಚದರ ಕಿ.ಮೀ ಇಳಿಕೆಯಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಈ ಬದಲಾವಣೆಗಳ ಪ್ರಕಾರ, ಭಾರತದಲ್ಲಿ, ಬೇಟೆಪ್ರಾಣಿಗಳು ಕಡಿಮೆ ಸಾಂದ್ರತೆಯಲ್ಲಿ ಲಭ್ಯವಿರುವ, ವಿಶಾಲವಾದ, ಕಳಪೆ - ಸಂರಕ್ಷಿತ ಭೂಪ್ರದೇಶಗಳಲ್ಲಿನ ಹುಲಿಗಳನ್ನು, ‘ಹುಲಿಗಳ ಮೂಲ ಜನಸಂಖ್ಯೆ’ ಎಂದು ಪರಿಗಣಿಸಲಾಗಿದ್ದು, ಇದು ವೈಜ್ಞಾನಿಕ ತಿಳುವಳಿಕೆಗೆ ವ್ಯತಿರಿಕ್ತವಾಗಿದೆ. ಆದಾಗ್ಯೂ, 2010 ರಿಂದ 2014 ರ ಅವಧಿಯಲ್ಲಿ, ಈ ಮಾದರಿಯು ಸಂಪೂರ್ಣವಾಗಿ ತಿರುಗುಮುರುಗಾಗಿದೆ.

"ಭಾರತೀಯ ಹುಲಿ ಸಮೀಕ್ಷೆಗಳ ಬಗೆಗಿನ ಈ ಹೇಳಿಕೆಗಳು, ಜನಸಂಖ್ಯಾ ಜೀವಶಾಸ್ತ್ರದಲ್ಲಿನ ‘ಸೋರ್ಸ್-ಸಿಂಕ್’ ಸಿದ್ಧಾಂತದಿಂದ ಪಡೆದ ವೈಜ್ಞಾನಿಕ ತಿಳುವಳಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿವೆ" ಎನ್ನುತಾರೆ ಸಂಶೋಧಕರು.

ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸಂರಕ್ಷಣೆಗಾಗಿ ವಿಶ್ವಾದ್ಯಂತ ಅನುಸರಿಸಿದ ಒಂದು ಮೂಲ ಸಿದ್ಧಾಂತವಾದ 'ಸೋರ್ಸ್-ಸಿಂಕ್' ಸಿದ್ಧಾಂತವು ವಿವರಿಸುವ ಪ್ರಕಾರ, ಅನುಕೂಲಕರ ಆವಾಸಸ್ಥಾನಗಳು (ಅಥವಾ ಮೂಲಗಳು) ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಸಾಧ್ಯ ಮಾಡುತ್ತವೆ ಮತ್ತು ಬೆಳೆದ ನಂತರ ಆ ಪ್ರಾಣಿಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಬಹುದು; ಆದರೆ ಅಪೇಕ್ಷಣೀಯವಲ್ಲದ ಆವಾಸಸ್ಥಾನಗಳಿಗೆ ಅಥವಾ ಆ ಪ್ರಾಣಿಯ ಇರುವಿಗೆ ಮುಳುವಾಗಬಹುದು ಎಂಬಂತಹ ಆವಾಸಸ್ಥಾನಗಳಿಗೆ ಕಾಲಾನಂತರದಲ್ಲಿ ಹೊಸದಾಗಿ ಜನಿಸಿದ, ಹೆಚ್ಚಳವಾದ ಪ್ರಾಣಿಗಳನ್ನು ಉಳಿಸಿಕೊಳ್ಳುವ ಶಕ್ತಿ ಇರುವುದಿಲ್ಲ.

ಅಖಿಲ ಭಾರತ ರಾಷ್ಟ್ರೀಯ ಹುಲಿ ಗಣತಿ ಸಮೀಕ್ಷೆಗಳು ಅಳವಡಿಸಿಕೊಂಡ ವಿಧಾನದಲ್ಲಿನ ಕೆಲವು ಕೊರತೆಗಳನ್ನು ಅಧ್ಯಯನವು ತೋರಿಸುತ್ತದೆ. ಎನ್‌ಟಿಇ ಸಮೀಕ್ಷೆಗಳು ‘ಡಬಲ್-ಸ್ಯಾಂಪ್ಲಿಂಗ್’ ಎಂದು ಕರೆಯಲ್ಪಡುವ ಒಂದು ವಿಧಾನವನ್ನು ಬಳಸಿಕೊಂಡಿವೆ ಎನ್ನಲಾಗಿದೆ; ಈ ವಿಧಾನವು, ವ್ಯಾಪಕವಾದ ಪ್ರದೇಶಗಳಲ್ಲಿ ಪ್ರಾಣಿಗಳ ಸಂಖ್ಯೆಯಲ್ಲಿನ ಸಮೃದ್ಧಿಯನ್ನು ಅಂದಾಜು ಮಾಡಲು ಬಳಸುವ ಪ್ರಸಿದ್ಧ ವಿಧಾನವಾಗಿದೆ. ಈ ವಿಧಾನದಲ್ಲಿ,  ಪ್ರಮಾಣಿತ ವಿನ್ಯಾಸವನ್ನು ಬಳಸಿಕೊಂಡು ಎರಡು ಹಂತಗಳಲ್ಲಿ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. ಆದರೆ, ಅನುಷ್ಠಾನದ ಸಮಯದಲ್ಲಿ, ಈ ಸಮೀಕ್ಷೆಗಳು, ತಮ್ಮ ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯಲ್ಲಿ ಸಂಖ್ಯೆಗಳನ್ನು ಅಂದಾಜು ಮಾಡುವ ನಿರ್ಣಾಯಕ ಹಂತವನ್ನು, ಅಂದರೆ,  “ಪ್ರಾದೇಶಿಕ ಮಾದರಿ ಹಂತ” ವನ್ನೇ ಬಿಟ್ಟುಬಿಟ್ಟಿವೆ!

"ಹಾಗಾಗಿ, ಈ ಮಾರ್ಪಡಿಸಿದ ವಿಧಾನವು ಈಗ ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಿರದ ಹೊಸ ವಿಧಾನವೆಂದೇ ಹೇಳಬಹುದು" ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ಸೊಸೈಟಿಯ ವಿಜ್ಞಾನ ಸಲಹೆಗಾರ ಮತ್ತು ಅಧ್ಯಯನದ ಪ್ರಮುಖ ಲೇಖಕ ಡಾ. ಅರ್ಜುನ್ ಎಂ. ಗೋಪಾಲಸ್ವಾಮಿ.

ಎನ್‌ಟಿಇ ಸಮೀಕ್ಷೆಗಳು, ತಮ್ಮ ಮಾದರಿ ಸಂಗ್ರಹಣಾ ಕ್ಷೇತ್ರದಿಂದ, ಹುಲಿಯ ಸಮೃದ್ಧಿಯ ಚಿಹ್ನೆಗಳಾದ ಹುಲಿಯ ಹೆಜ್ಜೆ ಗುರುತುಗಳು (ಪಗ್ ಮಾರ್ಕ್) ಮತ್ತು ಹುಲಿಯ ಮಲದಂತಹ ಚಿಹ್ನೆಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ಮಾದರಿಗಳ ಆಧಾರದ ಮೇಲೆ, ದೇಶದ ಉಳಿದ ಭಾಗಗಳ ಹುಲಿಯ ಜನಸಂಖ್ಯೆಯನ್ನು ಅಂದಾಜಿಸಲಾಗುತ್ತದೆ. ಈ ಅಧ್ಯಯನದ ಸಂಶೋಧಕರು, ಹುಲಿಯ ಜನಸಂಖ್ಯೆಯನ್ನು ನಿರ್ಣಯಿಸಲು ಹುಲಿಯ ಹೆಜ್ಜೆ ಗುರುತುಗಳು  ಮತ್ತು ಹುಲಿಯ ಮಲದಂತಹ ಚಿಹ್ನೆಗಳನ್ನು ಒಳಗೊಂಡಂತೆ, ಎರಡು ಪ್ರಯೋಗಗಳನ್ನು ನಡೆಸಿದರು ಮತ್ತು ಅತ್ಯಂತ ವ್ಯತಿರಿಕ್ತ ಫಲಿತಾಂಶಗಳನ್ನು ಪಡೆದರು. ಇವೆರಡೂ ದೊಡ್ಡ ಜನಸಂಖ್ಯೆಯ ಪ್ರತಿನಿಧಿ ಮಾದರಿಗಳಲ್ಲ ಎಂದು ಅವರು ಕಂಡುಕೊಂಡರು, ಅಂದರೆ, ಈ ಪ್ರಯೋಗಗಳಿಗೆ ಆಯ್ಕೆ ಮಾಡಲಾದ ಮಾದರಿ ಗಾತ್ರವು ತುಂಬಾ ಚಿಕ್ಕದಾಗಿದೆ ಎಂದು ಇದು ಸೂಚಿಸುತ್ತದೆ.

“ವಿಪರ್ಯಾಸವೆಂದರೆ, ಸೂಚ್ಯಂಕ-ಮಾಪನಾಂಕ ನಿರ್ಣಯದ ಪ್ರಯೋಗವೊಂದರ ಫಲಿತಾಂಶವು ತುಂಬಾ ಉತ್ತಮವಾಗಿದ್ದು, ಕೇವಲ ಒಂದು ಚಿಕ್ಕ ಪ್ರದೇಶದಲ್ಲಿನ ಹುಲಿ ಚಿಹ್ನೆಗಳಾದ ಹೆಜ್ಜೆ ಗುರುತು ಮತ್ತು ಹುಲಿಯ ಮಲಗಳಂತಹ ಸೂಚ್ಯಂಕಗಳೇ ಹುಲಿಯ ಗಣತಿಗೆ ಸಾಕಾಗುವಷ್ಟು ಮಾಹಿತಿ ಒದಗಿಸುತ್ತದೆ ಎಂದೂ, ಮತ್ತು, ಇನ್ನಷ್ಟು ಮಾಪನಾಂಕ ನಿರ್ಣಯ ನಮಗೆ ಅಗತ್ಯವಿಲ್ಲ ಎಂದೂ ಅದು ಸೂಚಿಸಿದೆ; ಆದರೆ, ಹೊಸ ಸಮೀಕ್ಷೆಯ ಫಲಿತಾಂಶಗಳು ಸೂಚಿಸುವಂತೆ, ಈ ಹಿಂದಿನ ಫಲಿತಾಂಶವು ತಪ್ಪುದಾರಿಗೆಳೆಯುವಂತಿತ್ತು ”ಎಂದು ವಿವರಿಸಿದ್ದಾರೆ ಡಾ ಗೋಪಾಲಸ್ವಾಮಿ.

ಹೀಗಾಗಿ, ಹುಲಿ ಚಿಹ್ನೆಗಳ ಬಗೆಗಿನ ದತ್ತಾಂಶದಲ್ಲಿನ ಏರುಪೇರಿನಿಂದಾಗಿ, ಈ ದತ್ತಾಂಶದ ಆಧಾರದ ಮೇಲೆ ಅಂದಾಜಿಸಲಾದ ಸಂಖ್ಯೆಯಲ್ಲೂ ಏರುಪೇರು ಕಂಡುಬಂದಿದ್ದು, ಆ ಲೆಕ್ಕಾಚಾರವು ತಪ್ಪುದಾರಿಗೆಳೆಯುವಂತಿದೆ.

ಎನ್‌ಟಿಇ ಸಮೀಕ್ಷೆಯ ವರದಿಗಳಲ್ಲಿ ತಿಳಿಸಲಾದ ಸಂಖ್ಯೆಗಳ ಬಗೆಗಿನ ಕಳವಳಗಳು ಹೊಸತೇನಲ್ಲ! ಹಲವಾರು ವರ್ಷಗಳಿಂದ, ಅನೇಕ ವಿಜ್ಞಾನಿಗಳು ಈ ಸಮೀಕ್ಷೆಗಳಲ್ಲಿನ ಅಸಂಗತತೆಗಳನ್ನು ಗಮನಿಸಿ ಮಾಹಿತಿ ನೀಡಿದ್ದಾರೆ ಮತ್ತು ಅದರ ನಿಖರತೆಯನ್ನು ಪ್ರಶ್ನಿಸಿದ್ದಾರೆ. ಅದರ ಹೊರತಾಗಿಯೂ, ಅಂತರರಾಷ್ಟ್ರೀಯ ಸಂರಕ್ಷಣಾ ಸಂಸ್ಥೆಗಳಾದ ಗ್ಲೋಬಲ್ ಟೈಗರ್ ಫೋರಮ್ (ಜಿಟಿಎಫ್), ಗ್ಲೋಬಲ್ ಟೈಗರ್ ಇನಿಶಿಯೇಟಿವ್ (ಜಿಟಿಐ), ಮತ್ತು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್), ಭಾರತದ ಯಶಸ್ಸನ್ನು ಸಾರುವ ಹೇಳಿಕೆಗಳನ್ನು ಅನುಮೋದಿಸುತ್ತಲೇ ಇವೆ ಮತ್ತುಈ ಮೂಲಕ  ಸಂಶೋಧಕರಿಗೆ ಅಸಮಾಧಾನವುಂಟು ಮಾಡುತ್ತಿವೆ. ಇದರ ಪರಿಣಾಮವಾಗಿ, ಹುಲಿಗಳ ಸಂರಕ್ಷಣೆಗೆ ಮೀಸಲಾದ ಬಜೆಟ್‌ನಲ್ಲಿ ಸಾಕಷ್ಟು ಹಣವನ್ನು ಹೂಡಲಾಗಿದೆ ಮತ್ತು ಆ ಹಣದ ಬಳಕೆಯು ದಿಕ್ಕುತಪ್ಪುವ ಸಾಧ್ಯತೆಗಳು ಇಲ್ಲದಿಲ್ಲ. ದಟ್ಟ ಕಾಡುಗಳಲ್ಲಿನ ಬೃಹತ್ ಹುಲಿ ಸಮೀಕ್ಷೆಗಳಿಗೆ ಅಪಾರ ಸಂಪನ್ಮೂಲಗಳು ಬೇಕಾಗುತ್ತವೆ. ಉದಾಹರಣೆಗೆ, 2018 ರ ಎನ್‌ಟಿಇ ಸಮೀಕ್ಷೆಗೆ 593,882 ವ್ಯಕ್ತಿ-ದಿನಗಳ ಪ್ರಯತ್ನದ ಅಗತ್ಯವಿತ್ತು ಎಂದು ಕಂಡುಬಂದಿದೆ. ಇದರ ಹೊರತಾಗಿಯೂ ಇಂತಹ ಸಮೀಕ್ಷೆಗಳಲ್ಲಿನ ವಿನ್ಯಾಸದ ನ್ಯೂನತೆಗಳಿಂದಾಗಿ ತಪ್ಪುಗಳು ತಲೆದೋರಿದರೆ, ಪರಿಸರ ವಿಜ್ಞಾನದ ದೃಷ್ಟಿಕೋನದಿಂದ ವಿರೋಧಾಭಾಸದ ಅನುಮಾನಗಳಿಗೆ ಕಾರಣವಾಗುತ್ತದೆ ಮತ್ತು ಅಪಾರ ಪ್ರಮಾಣದ ಸಂಪನ್ಮೂಲಗಳು ವ್ಯರ್ಥವಾಗುತ್ತವೆ ಕೂಡ.

ಹಾಗಾದರೆ, ಭಾರತದಲ್ಲಿನ ಹುಲಿಗಳ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ನಾವು ಏನನ್ನು ಸರಿಪಡಿಸಬಹುದು? ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಸ್ಥೂಲವಾಗಿ ಕಚ್ಚಾ ಬದಲಾವಣೆಗಳನ್ನು ಪತ್ತೆಹಚ್ಚುವುದರ ಬದಲಿಗೆ, ಹುಲಿಯ ಆವಾಸ್ಥಾನದ ಶ್ರೇಣಿಗಳಲ್ಲಿನ ವಿಸ್ತರಣೆ ಮತ್ತು ಸಂಕುಚನದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಿದರೆ, ಹುಲಿಯ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ ಎಂದು ಈ ವಿಧಾನವನ್ನು ಸಂಶೋಧಕರು ಶಿಫಾರಸು ಮಾಡುತ್ತಾರೆ. ಅಷ್ಟೇ ಅಲ್ಲದೇ, ಸಮೀಕ್ಷೆಯ ವರದಿಗಳಲ್ಲಿ ಮತ್ತು ವಿಧಾನಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು ಮತ್ತು ಉತ್ತಮವಾಗಿ ವ್ಯಾಖ್ಯಾನಿಸಲಾದ ವೈಜ್ಞಾನಿಕ ಮತ್ತು ನಿರ್ವಹಣಾ ಉದ್ದೇಶಗಳನ್ನು ಆಧರಿಸಿದ ವಿಧಾನಗಳನ್ನು ಬಳಸಬೇಕು ಎಂದು ಅವರು ಒತ್ತಾಯಿಸುತ್ತಾರೆ. ಇಂತಹ ಪ್ರಯತ್ನಗಳು ಸಾಧ್ಯವಾದಾಗಲೇ, ನಿಜವಾದ ಅರ್ಥದಲ್ಲಿ ಪರಿಸರ ಸಂರಕ್ಷಣೆ ಮಾಡುತ್ತಿರುವವರಿಗೆ ಸಹಾಯವಾಗುತ್ತದೆ ಮತ್ತು ಅಪ್ರತಿಮವಾದ ಈ ಸಸ್ತನಿ ಜನಸಂಖ್ಯೆಯು ‘ರಾಜಕೀಯ ಜನಸಂಖ್ಯೆ’ ಎಂಬ ಹೆಸರಿನಲ್ಲಿ ಕಳಂಕಿತವಾಗುವುದೂ ತಪ್ಪುತ್ತದೆ.

"ವನ್ಯಜೀವಿ ನಿರ್ವಹಣೆಯು, ಸಾಧ್ಯವಾದಷ್ಟೂ ಉತ್ತಮವಾದ ವಿಜ್ಞಾನವನ್ನು ಆಧರಿಸಿರಬೇಕೇ ಹೊರತು, ಅಧಿಕಾರಿಗಳನ್ನು ಉತ್ತಮವಾಗಿ ಬಿಂಬಿಸುವ ಸಲುವಾಗಿ ರಾಜಕೀಯದೊಂದಿಗೆ ಬೆರೆಯಬಾರದು ಎಂಬುದು ನನ್ನ ಅಭಿಪ್ರಾಯ" ಎನ್ನುತ್ತಾರೆ  ಈ ಅಧ್ಯಯನದ ಸಹಲೇಖಕರಾಗಿರುವ ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದ ವಿಕಸನೀಯ ಜೀವಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ, ಡಾ. ನಿಲ್ಸ್ ಕ್ರಿ. ಸ್ಟೆನ್‌ಸೆತ್.

ವನ್ಯಜೀವಿಗಳಿಗೂ, ಅದರ ಸಂರಕ್ಷಕರಿಗೂ ಸಿಗಬೇಕಾದ ಗೌರವ ಸಿಕ್ಕಾಗಲಷ್ಟೇ ನಾವು ವಿಕಸನ ಚಕ್ರದ ಸರಿದಾರಿಯಲ್ಲಿದ್ದೇವೆ ಎಂದು ಖಾತ್ರಿ. ಪರಿಸರದಿಂದ ನಾವೇ ಹೊರತೂ ನಮ್ಮಿಂದ ಪರಿಸರವಲ್ಲ ಎಂಬುದು ರಾಜಕೀಯ ಮೇಲಾಟದಲ್ಲಿ ತನ್ನನ್ನು ತಾನು ಮರೆತ ಮಾನವನಿಗೆ ಅರ್ಥವಾಗದ ಹೊರತೂ, ವಿನಾಶಕಾಲೇ ವಿಪರೀತಬುದ್ಧಿ ಎಂಬ ಮಾತು ಜಗದ ಆಗುಹೋಗುಗಳಲ್ಲಿ ಅನುರಣಿಸುತ್ತಲೇ ಇರುತ್ತದೆ.