ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಏಷ್ಯಾದ ಚಿನ್ನದ ಕಾಡುಬೆಕ್ಕಿನ ಆರು ರೂಪಾಂತರಗಳು!

Read time: 1 min
ಬೆಂಗಳೂರು
26 Jun 2019
Image: Tightly rosetted morph of Asiatic golden cat by Sahil Nijhawan/Panthera/APFD

2014ರಲ್ಲಿ, ಡಾ. ಸಾಹಿಲ್ ನಿಝಾವಾನ್ ನೇತೃತ್ವದ ಸ್ಥಳೀಯ ಇಡು-ಮಿಷ್ಮಿ ಜನಾಂಗದ ಒಂದು ಸಂಶೋಧನಾ ತಂಡ ಮಧ್ಯಮ ಹಾಗೂ ದೊಡ್ಡ ಗಾತ್ರದ ಸಸ್ತನಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ, ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯ ಕಾಡುಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು. ೨೦ ತಿಂಗಳುಗಳ ನಂತರ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ವಿಚಿತ್ರ ಹಾಗೂ ಅನಿರೀಕ್ಷಿತ ದೃಶ್ಯಗಳನ್ನು ಕಂಡು ನಿಬ್ಬೆರಗಾದರು. ಒಂದೇ ಪ್ರಭೇದದ ಆರು ಪ್ರತ್ಯೇಕ ಬಣ್ಣ ವಿಧಗಳ, ಮಧ್ಯಮ ಗಾತ್ರದ ಏಷ್ಯಾದ ಕಾಡು ಬೆಕ್ಕುಗಳು ಈ ಕಣಿವೆಯಲ್ಲಿ ಇರುವುದು ಈ ಕ್ಯಾಮೆರಾಗಳ ಮುಖೇನ ತಿಳಿದು ಬಂದಿದೆ.

ಈ ಆವಿಷ್ಕಾರ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯ ಕಾಡುಗಳಲ್ಲಿ ಪ್ರಪಂಚದಲ್ಲೇ ಒಂದೇ ಪ್ರಭೇದದ ಅತಿ ಹೆಚ್ಚು ಬಣ್ಣವಿಧಗಳ ಕಾಡು ಬೆಕ್ಕುಗಳು ಕಂಡುಬರುತ್ತವೆ ಎಂದು ದೃಢಪಡಿಸುತ್ತದೆ. ಈ ಅಧ್ಯಯನವನ್ನು “ಇಕಾಲಜಿ” ಎಂಬ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಗೊಳಿಸಲಾಗಿದೆ. ಈ ಅಧ್ಯಯನವು ದಿಬಾಂಗ್ ಕಣಿವೆಯಲ್ಲಿ, ಪರಿಸರ ವಿಜ್ಞಾನ ಹಾಗೂ ಮಾನವಶಾಸ್ತ್ರೀಯ ವಿಧಾನಗಳನ್ನು ಅಳವಡಿಸಿ ನಡೆಸಲಾಗುತ್ತಿರುವ ಮಾನವ-ವನ್ಯಜೀವಿಗಳ ನಡುವಿನ ಪರಸ್ಪರ ಕ್ರಿಯೆಗಳು ಹಾಗೂ ಹೊಂದಾಣಿಕೆಗಳ ದೊಡ್ಡ ಅಧ್ಯಯನದ ಒಂದು ಭಾಗ. ಕಾಡುಬೆಕ್ಕುಗಳ ಬಗೆಗಿನ ಈ ಅಧ್ಯಯನ ಏಷ್ಯಾದ ಚಿನ್ನದ ಕಾಡುಬೆಕ್ಕುಗಳ 6 ರೂಪಾಂತರಗಳನ್ನು ಹೊರತಂದಿದೆ. ಅವು --  ಚಿನ್ನದ ಬಣ್ಣ, ಬೂದಿ ಬಣ್ಣ, ಕಡುಗಂದು ಅಥವಾ ಕಪ್ಪು (ಮೆಲನಿಸ್ಟಿಕ್), ಚುಕ್ಕೆಯುಳ್ಳ ಅಥವಾ ಬಟ್ಟುಗಳುಳ್ಳ, ದಾಲ್ಚಿನ್ನಿ ಬಣ್ಣದ ಮತ್ತು ಬಿಗಿಯಾಗಿರುವ ಗುಲಾಬಿ ಮಾದರಿಯ ಗಾಢ ಬಣ್ಣವುಳ್ಳ ಬೆಕ್ಕು. ಇಂತಹ ಒಂದು ಪ್ರಕ್ರಿಯೆಗೆ ಪಾಲಿಮಾರ್ಫಿಸಮ್ ಎಂದು ಕರೆಯಲಾಗುತ್ತದೆ.

“ನಾವು ದಿಬಾಂಗ್ ಕಣಿವೆಯ ಇಡು-ಮಿಷ್ಮಿ ಜನಾಂಗವಿರುವ ಪ್ರದೇಶವನ್ನು ಮತ್ತು ರಕ್ಷಿತಾರಣ್ಯಗಳನ್ನು ಸ್ಥಳೀಯ ಇಡು-ಮಿಷ್ಮಿ ಜನರೊಂದಿಗೆ ಸೇರಿ ಸಮೀಕ್ಷೆ ನಡೆಸಿದೆವು. ಸ್ಥಳೀಯರು ಹಾಗೂ ವಿಜ್ಞಾನಿಗಳು ಸೇರಿ ಹೊಸ ವಿಷಯಗಳನ್ನು  ಪ್ರಪಂಚಕ್ಕೆ ಪರಿಚಯಿಸುವ ಈ ವಿಧಾನ ನವೀನ. ಈವರೆಗೆ ಪ್ರಕಟವಾಗಿರುವ ನನ್ನ ಎಲ್ಲ ಪತ್ರಿಕೆಗಳಲ್ಲಿ ಸಹ ಲೇಖಕರಾಗಿ, ಮತ್ತು ಅದರ ಹಿಂದಿನ ಅಧ್ಯಯನಗಳಲ್ಲಿ ಸಹಯೋಗಿಗಳಾಗಿ ಸ್ಥಳೀಯ ಇಡು-ಮಿಷ್ಮಿ ಜನರು ನನ್ನ ಜೊತೆಗೂಡಿದ್ದಾರೆ.” ಎಂದು ಈ ಅಧ್ಯಯನದ ಪ್ರಮುಖ ಲೇಖಕರಾದ, ಲಂಡನ್ನಿನ ಪ್ರಾಣಿಶಾಸ್ತ್ರ ಸಮಾಜ ಹಾಗೂ ಲಂಡನ್ನಿನ ವಿಶ್ವವಿದ್ಯಾಲಯ ಕಾಲೇಜಿನ ಡಾ. ಸಾಹಿಲ್ ನಿಝಾವಾನ್ ನುಡಿಯುತ್ತಾರೆ.

ಈ ಇಡು-ಮಿಷ್ಮಿ ಜನಾಂಗವು ಈ ಚಿನ್ನದ ಕಾಡುಬೆಕ್ಕು, ಅದರಲ್ಲೂ, ಕಡುಗಂದು ಬಣ್ಣದ ಬೆಕ್ಕು ವಿಶೇಷ ಶಕ್ತಿಗಳ ವಾಹಕಗಳೆಂದು ನಂಬುತ್ತದೆ. ಹಾಗಾಗಿ, ಈ ಬೆಕ್ಕುಗಳನ್ನು ಬೇಟೆಯಾಡುವುದನ್ನು ನಿಷೇಧಿಸಿದೆ.

ಇದರಲ್ಲಿ ಒಂದು ವಿಶೇಷವೆಂದರೆ, ಸಮುದ್ರ ಮಟ್ಟದಿಂದ ಸುಮಾರು 3000 ಮೀಟರ್ ಗಳ ಮೇಲಿನ ಪ್ರದೇಶಗಳಲ್ಲಿ  ಚುಕ್ಕೆಯುಳ್ಳ ಮತ್ತು ಬಿಗಿಯಾದ ಗುಲಾಬಿ ಮಾದರಿಯುಳ್ಳ ಬೆಕ್ಕುಗಳು ಕಂಡುಬಂದರೆ, ಏಕಬಣ್ಣ ಬೆಕ್ಕುಗಳಾದ ಚಿನ್ನದ, ದಾಲ್ಚಿನ್ನಿ, ಕಡುಗಂದು ಮತ್ತು ಬೂದು ಬಣ್ಣವುಳ್ಳ ಬೆಕ್ಕುಗಳನ್ನು ಸಮುದ್ರ ಮಟ್ಟದಿಂದ 1700ಮೀ ಮೇಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಹಾಗೆಯೇ, ಅದರದರ ಬಣ್ಣಗಳ ಪ್ರಕಾರ, ಅದರ ವರ್ತನೆಗಳಲ್ಲಿಯೂ ವ್ಯತ್ಯಾಸಗಳು ಕಂಡುಬಂದಿವೆ. ಮಾದರಿಯುಳ್ಳ ಮತ್ತು ಬೂದು ಬಣ್ಣದ ಬೆಕ್ಕುಗಳು ನಿಶಾಚರರಾದರೆ, ಬೇರೆ ಏಕಬಣ್ಣ ಬೆಕ್ಕುಗಳು ಹಗಲು ಹೊತ್ತಿನಲ್ಲಿ ಸಕ್ರಿಯರಾಗಿರುತ್ತವೆ.

“ಈ ಹಿಂದೆ, ರೂಪಾಂತರಕ್ಕೆ ಅನುಗುಣವಾಗಿ ಎಷ್ಟೋ ಪ್ರಭೇದಗಳು ತಮ್ಮ ಇರುನೆಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದರು. ಈ ಅಧ್ಯಯನ ಇಂತಹ ಒಂದು ಕಲ್ಪನೆಯನ್ನು ಪ್ರಮಾಣೀಕರಿಸುತ್ತದೆ. ಇಂತಹ ರೂಪಾಂತರಗಳು ಈ ಬೆಕ್ಕುಗಳಿಗೆ ಸುತ್ತಲಿನ ಪರಿಸರದ ಪ್ರಯೋಜನಗಳನ್ನು ಒದಗಿಸುತ್ತಾ, ತಮ್ಮ ಇರುನೆಲೆಗಳಿಗೆ ಹೊಂದಿಕೊಳ್ಳಬಲ್ಲಂತಹ ಸಾಮರ್ಥ್ಯವನ್ನು ನೀಡುತ್ತವೆ” ಎಂದು ಡಾ. ನಿಝಾವಾನ್ ನುಡಿಯುತ್ತಾರೆ.

ಏಷ್ಯಾದ ಚಿನ್ನದ ಕಾಡುಬೆಕ್ಕು, ಆಂಗ್ಲಭಾಷೆಯಲ್ಲಿ ಏಷಿಯನ್ ಗೋಲ್ಡನ್ ಕ್ಯಾಟಿನ ವೈಜ್ಞಾನಿಕ ನಾಮ ಕ್ಯಾಟೋಪುಮಾ ಟೆಂಮಿಂಕೀ (Catopuma temminckii) ಈಶಾನ್ಯ ಭಾರತ ಹಾಗೂ ಆಗ್ನೇಯ ಏಷ್ಯಾ ದೇಶಗಳಿಗೆ ಸೀಮಿತ. ಆದರೆ ಅರಣ್ಯ ವಿನಾಶದ ಹಿನ್ನಲೆಯಲ್ಲಿ, ಇದರ ಇರುನೆಲೆ ಶ್ರೇಣಿಗಳು ವಿನಾಶಕ್ಕೆ ತುತ್ತಾಗುತ್ತಾ ಬಂದಿವೆ. ಹಾಗಾಗಿ ಇದರ ಸ್ಥಿತಿ ವಿನಾಶಕ್ಕೆ ಹತ್ತಿರವಾಗುತ್ತಿದೆಯೆಂದು ಹೇಳಲಾಗುತ್ತಿದೆ.

ಇವು  ವ್ಯಾಪಕ ಇರುನೆಲೆ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಇವು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ, ಕುರುಚಲು ಕಾಡುಗಳಲ್ಲಿ, ಜನವಸತಿ ಇರುವ ದ್ವಿತೀಯ ಶ್ರೇಣಿಯ ಕಾಡುಗಳಲ್ಲಿ, ಎತ್ತರವಿರುವ ಬೆಟ್ಟಗುಡ್ಡಗಳಲ್ಲಿ, ಪಕ್ಷಿಗಳನ್ನು, ದಂಶಕಗಳನ್ನು, ಸರೀಸೃಪಗಳನ್ನು ಮತ್ತು ಚಿಕ್ಕ ಸಸ್ತನಿಗಳನ್ನು ಬೇಟೆಯಾಡುತ್ತವೆ. ಸಂಶೋಧಕರು ಈ ರೂಪಾಂತರಗಳು ಕಡಿಮೆ ಎತ್ತರದ ಪ್ರದೇಶಗಳಲ್ಲಿ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡಲು ಮತ್ತು ಹಿಮಾಲಯದ ಅಲ್ಪೈನ್ ಕಾಡುಗಳಲ್ಲಿ ಹಿಮಾಲಯನ್ ಪಿಕಾಗಳನ್ನು ಬೇಟೆಯಾಡಲು ಸಹಾಯವಾಗುವಂತೆ ಒಳ್ಳೆಯ ಮರೆಮಾಚುವಿಕೆಯನ್ನು ನೀಡಬಲ್ಲದು,  ಬೇರೆ ಪರಭಕ್ಷಕಗಳಾದ ಚಿರತೆಗಳಂತಹ ಪ್ರಾಣಿ ಸ್ಪರ್ಧೆಯನ್ನು ತಪ್ಪಿಸಲು ಸಹಾಯಕವಾಗುತ್ತವೆ ಎಂದು ಅಂದಾಜಿಸುತ್ತಾರೆ.

“ಪೂರ್ವ ಹಿಮಾಲಯದಂತಹ ಸ್ಪರ್ಧಾತ್ಮಕ ಪರಿಸರದಲ್ಲಿ ಅಭಿವೃದ್ಧಿಗೆ ಹೊಂದಾಣಿಕೆಯ ಸಾಮರ್ಥ್ಯ ಅಗತ್ಯ ಮತ್ತು ಈ ಕಾಡುಬೆಕ್ಕುಗಳು ಇದನ್ನು ಪ್ರದರ್ಶಿಸುವತ್ತ ಸಫಲವಾಗಿವೆ. ಇದು ಬೇರೆ ರೂಪಾಂತರವಿರುವ ಪ್ರಭೇದಗಳಿಗೂ ಅನ್ವಯಿಸಬಹುದು. ಆದರೆ, ಇದನ್ನು ಪ್ರಮಾಣೀಕರಿಸಲು ವಿಸ್ತಾರವಾದ ಅಧ್ಯಯನಗಳ ಅವಶ್ಯಕತೆ ಇದೆ”  ಎಂದು ಅಭಿಪ್ರಾಯ ಪಡುತ್ತಾರೆ.

“ಸಧ್ಯಕ್ಕೆ ಈ ರೂಪಾಂತರಗಳು ಸಂಕರಿಸುತ್ತವೆ (ಇಂಟರ್-ಬ್ರೀಡ್) ಎಂದು ನಮ್ಮ ನಂಬಿಕೆ. ಒಂದು ವೇಳೆ, ಯಾವುದೋ ಕಾರಣಕ್ಕೆ ಈ ಆಂತರಿಕ ಸಂಕರಣೆ ನಿಂತು ಹೋದರೆ, ಇದು ಒಂದು ಹೊಸ ಪ್ರಭೇದ ಅಥವಾ ಉಪಪ್ರಭೇದಗಳಾಗುವ ಮುಖೇನ ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸಬಹುದು!” ಎಂದು ಈ ದಿಕ್ಕಿನಲ್ಲಿ ಸಾಗಬಹುದಾದಂತಹ ಉತ್ಸಾಹಕಾರಿ ಅಧ್ಯಯನದತ್ತ ತೋರಿಸುತ್ತಾ ಡಾ.ನಿಝಾವಾನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.