ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಮುಂತಾದ ಸಾಂಕ್ರಾಮಿಕವಲ್ಲದ ರೋಗಗಳು, ಅಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡದ ರೋಗಗಳು, ಇಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳಾಗಿವೆ. ಭಾರತದಲ್ಲಿ, ಸುಮಾರು ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿರುತ್ತದೆ ಮತ್ತು ೮% ರಷ್ಟು ಜನರಿಗೆ ಮಧುಮೇಹ ಇರುತ್ತದೆ ಎಂದು ತಿಳಿದುಬಂದಿದೆ. ದಿನೇದಿನೇ ಹೆಚ್ಚುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವೆಂದರೆ, ಸರ್ಕಾರದ ಬೆಂಬಲದೊಂದಿಗೆ ಬಲವಾದ ಆರೋಗ್ಯ ಸೇವೆ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಅದರ ಮುಖಾಂತರ, ಇಂತಹ ಖಾಯಿಲೆಗಳಿಗೆ ಔಷಧಿಗಳನ್ನು ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಲಭ್ಯವಿರುವಂತೆ ಮಾಡುವುದು. ಇದೇ ಕಾರಣಕ್ಕಾಗಿಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಲ್ಲೆಲ್ಲೂ ಸ್ಥಾಪಿತವಾಗಿವೆ; ಆದರೆ ಅವು ಎಷ್ಟು ಪರಿಣಾಮಕಾರಿ? ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಾಯೋಜಿತ ಹೊಸ ಅಧ್ಯಯನವೊಂದು ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
"ಭಾರತವು ೨೦೧೦ರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಹಲವಾರು ಸಾಂಕ್ರಾಮಿಕವಲ್ಲದ ರೋಗಗಳನ್ನು ಪರಿಹರಿಸಲು ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇಂತಹ ಖಾಯಿಲೆಗಳ ನಿರ್ವಹಣಾ ಕಾರ್ಯತಂತ್ರದ ಸಮಗ್ರತೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಇದು ಈ ರೋಗಗಳ ತಡೆಗಟ್ಟುವಿಕೆ, ಆರಂಭಿಕ ರೋಗನಿರ್ಣಯ, ಸೂಕ್ತ ನಿರ್ವಹಣೆ ಮತ್ತು ವಿವಿಧ ಹಂತಗಳಲ್ಲಿ ಬಳಸಬೇಕಾಗುವ ನಿರ್ದಿಷ್ಟ ಆರೋಗ್ಯ ತಂತ್ರಗಳ ಸೇವೆಯನ್ನು ಒಳಗೊಂಡಿರುತ್ತದೆ." ಎನ್ನುತ್ತಾರೆ ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಕೇಂದ್ರದ 'ಆರೋಗ್ಯನೀತಿ ಮತ್ತು ಮೌಲ್ಯಮಾಪನ ತಂಡ'ದ ಮುಖ್ಯಸ್ಥ ಮತ್ತು ಈ ಸಂಶೋಧನೆಯ ಪ್ರಮುಖ ಸಂಶೋಧಕರಾದ ಡಾ. ಎನ್. ಎಸ್. ಪ್ರಶಾಂತ್.
'ಬಿ.ಎಂ.ಜೆ. ಗ್ಲೋಬಲ್ ಹೆಲ್ತ್' ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು, ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಎದುರಿಸಲು ಆರೋಗ್ಯ ಸೇವೆಯ ವಿತರಣಾ ವ್ಯವಸ್ಥೆಯಲ್ಲಿನ ಅನೇಕ ಲೋಪದೋಷಗಳನ್ನು ಅಧ್ಯಯನ ಮಾಡಿದೆ. "ನಾವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನೇ ಆಯ್ಕೆ ಮಾಡಲು ಕಾರಣ, ಸಾಂಕ್ರಾಮಿಕವಲ್ಲದ ರೋಗಗಳಲ್ಲಿ ಇವು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದದ್ದು ಎಂದು ಪರಿಗಣಿಸಲಾಗಿದೆ ಮತ್ತು ಇವೆರಡೂ ರೋಗಗಳ ನಿವಾರಣೆಗೆ ಜಾಗತಿಕವಾಗಿ, ಪ್ರಾಥಮಿಕ ಆರೈಕೆಯ ಮಟ್ಟದಲ್ಲೇ ಉತ್ತರ ಲಭ್ಯವಿದೆ ಎಂದು ನಿರೀಕ್ಷಿಸಲಾಗಿದೆ" ಎನ್ನುತ್ತಾರೆ ಡಾ. ಪ್ರಶಾಂತ್.
ಸಂಶೋಧಕರು ಈ ಅಧ್ಯಯನಕ್ಕಾಗಿ ೧೧೫೭ ಮಧುಮೇಹ / ಅಧಿಕ ರಕ್ತದೊತ್ತಡದ ರೋಗಿಗಳ ಯಾದೃಚ್ಛಿಕ ಮಾದರಿಯನ್ನು ಆಯ್ಕೆ ಮಾಡಿದರು; ಜೊತೆಗೇ ಅವರ ದಿನನಿತ್ಯದ ಜೀವನದ ಬಗ್ಗೆ ಸಮೀಕ್ಷೆಯನ್ನು ನಡೆಸಿ, ರೋಗಿಗಳನ್ನು ಸಂದರ್ಶಿಸಿದರು. ಅಷ್ಟೇ ಅಲ್ಲದೇ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಪರಿಹರಿಸಲು ಬೇಕಾದ ಸ್ಥಳೀಯ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಮೌಲ್ಯಮಾಪನ ಮಾಡುವ ಸಲುವಾಗಿ ರೋಗಿಗಳು, ಆರೋಗ್ಯ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿಗಳು ಮತ್ತು ಔಷಧಕಾರರೊಂದಿಗೆ ಚರ್ಚೆ ನಡೆಸಿದರು.
ಸಮೀಕ್ಷೆಯಿಂದ ತಿಳಿದುಬಂದ ಅಂಶವೇನೆಂದರೆ, ೧೦%ಕ್ಕಿಂತಲೂ ಕಡಿಮೆ ಜನರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಮ್ಮ ಔಷಧಿಗಳನ್ನು ಪಡೆಯುತ್ತಿದರು ಮತ್ತು ೭೬%ರಷ್ಟು ಜನ ತಮ್ಮ ಔಷಧಿಗಳನ್ನು ಖಾಸಗಿ ಔಷಧಾಲಯದಿಂದ ಕೊಳ್ಳುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯು ದುಬಾರಿಯಾಗಿದ್ದರೂ, ಅದು ಉತ್ತಮ ಗುಣಮಟ್ಟದ್ದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೈಕೆಯು ಅಸಮಂಜಸವಾಗಿದೆ ಎಂದು ಸಂದರ್ಶಿತ ವ್ಯಕ್ತಿಗಳು ಭಾವಿಸಿದ್ದರು. ಅಷ್ಟೇ ಅಲ್ಲದೆ, ಅವರ ಪ್ರಕಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಔಷಧಿಗಳು ಲಭ್ಯವಿರಲಿಲ್ಲ ಅಥವಾ ಲಭ್ಯವಿದ್ದರೂ ಕಳಪೆ ಗುಣಮಟ್ಟದ್ದಾಗಿದ್ದವು. ತನಿಖೆ ನಡೆಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಮೂರನೇ ಒಂದು ಭಾಗದಷ್ಟು ಕೇಂದ್ರಗಳು ವೈದ್ಯರು, ಔಷಧಿಕಾರರು ಅಥವಾ ಸೂಕ್ತ ಪ್ರಯೋಗಾಲಯವನ್ನು ಹೊಂದಿರಲಿಲ್ಲ. ಇದು ಖಾಸಗಿ ಆರೋಗ್ಯ ಸೇವೆಯ ಮೇಲಿನ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಆಡಳಿತ ಮಟ್ಟದಲ್ಲಿ ವೈದ್ಯಕೀಯ ಅಧಿಕಾರಿಗಳು ಅಥವಾ ಆರೋಗ್ಯ ನಿರ್ವಾಹಕರ ಪ್ರಮುಖ ಆದ್ಯತೆಗಳಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ರೋಗಗಳು ಕಂಡುಬರುವುದಿಲ್ಲ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ. ಅವರ ಗಮನ ಸಾಮಾನ್ಯವಾಗಿ ತಾಯಿ-ಮಗುವಿನ ಆರೈಕೆ ಮತ್ತು ಸಾಂಕ್ರಾಮಿಕ ರೋಗಗಳ ಕಡೆಗೆ ಇರುತ್ತದೆ; ಜೊತೆಗೇ, ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳಿಗೆ ಆರ್ಥಿಕ ಮತ್ತು ವ್ಯವಸ್ಥಾಪನ ಸಂಪನ್ಮೂಲಗಳ ಹಂಚಿಕೆ ಹೆಚ್ಚಿಗೆ ಇದ್ದು, ನಿರ್ದಿಷ್ಟವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಡೆಗೆ ಕಡಿಮೆಯಿದೆ.
ಡಾ. ಪ್ರಶಾಂತ್ ಅವರ ಪ್ರಕಾರ ಗ್ರಾಮಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳನ್ನು ಪರಿಹರಿಸಲು ಸಂಪನ್ಮೂಲಗಳು ಅಥವಾ ಚಟುವಟಿಕೆಗಳ ಹಂಚಿಕೆ ಕಡಿಮೆಯಿದ್ದು, ತೌಲನಿಕವಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇಂತಹ ಖಾಯಿಲೆಗಳ ಬಗ್ಗೆ, ಇವುಗಳನ್ನು ತಡೆಗಟ್ಟುವ ಬಗ್ಗೆ ಹೆಚ್ಚು ಕಾಳಜಿ ಕಂಡುಬಂದಿದೆ. ಇಷ್ಟೇ ಅಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಕೆಲವು ರೋಗಿಗಳಿಗೆ ಖಾಸಗಿ ವೈದ್ಯಕೀಯ ಸೇವೆಯನ್ನುಪಡೆಯುವ ಸಲಹೆಯನ್ನು ನೀಡುವುದು ಕಂಡುಬಂದಿದೆ. ಅತಿರೇಕದ ಭ್ರಷ್ಟಾಚಾರವೂ ಕಂಡುಬಂದಿದ್ದು, ಇದು ಕೂಡ ಜನರನ್ನು ಖಾಸಗಿ ವೈದ್ಯಕೀಯ ಸೇವೆ ಪಡೆಯುವ ಕಡೆಗೆ ಮುಖ ಮಾಡುವಂತೆ ಮಾಡುತ್ತಿದೆ.
ಕಡಿಮೆ ಮತ್ತು ಮಧ್ಯಮ-ಆದಾಯದ ರಾಷ್ಟ್ರಗಳಲ್ಲಿರುವ ಆರೋಗ್ಯ ವ್ಯವಸ್ಥೆಗಳು ತಮ್ಮ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಮಧುಮೇಹ / ಅಧಿಕ ರಕ್ತದೊತ್ತಡದ ಬಗ್ಗೆ ಕಾಳಜಿಯನ್ನು ಹುಟ್ಟಿಸಲು ಮತ್ತು ನಿರ್ವಹಿಸಲು ಹೆಣಗಾಡುತ್ತಿವೆ. ಅಧ್ಯಯನವು ಕಂಡುಕೊಂಡಂತೆ ಮೂಲಸೌಕರ್ಯದ ಕೊರತೆ, ಮಾನವ ಸಂಪನ್ಮೂಲದ ಅಲಭ್ಯತೆ, ಸ್ಥಳೀಯ ಆರೋಗ್ಯ ವ್ಯವಸ್ಥೆಗಳ ಕಾರ್ಯಕ್ಷಮತೆಯ ಕೊರತೆಯು ಉತ್ತಮ ಗುಣಮಟ್ಟದ ಆರೋಗ್ಯಸೇವೆಯನ್ನು ನೀಡುವುದಕ್ಕೆ ಅಡ್ಡಗಾಲಾಗಿದೆ.
ಮೂಲಭೂತ ಸೌಕರ್ಯದಲ್ಲಿ ಹೂಡಿಕೆ ಮಾಡುವುದರ ಮೂಲಕ, ಮಾನವ ಸಂಪನ್ಮೂಲಗಳ ಲಭ್ಯತೆ, ಕಾರ್ಯಕ್ಷಮತೆಯನ್ನು ಸುಧಾರಿಸುವ ಮೂಲಕ, ಸರ್ಕಾರಿ ಪ್ರಾಥಮಿಕ ಆರೋಗ್ಯ ಸೇವೆ ವ್ಯವಸ್ಥೆಗಳ ವಿಶ್ವಾಸಾರ್ಹತೆಯನ್ನು ಸುಧಾರಿಸುವಲ್ಲಿ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡದ ಬಗ್ಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಸ್ಥಳೀಯ ಆರೋಗ್ಯ ವ್ಯವಸ್ಥೆಯ ಯೋಜಕರು, ವ್ಯವಸ್ಥಾಪಕರು ಸಮರ್ಪಕವಾಗಿ ತಮ್ಮ ಪಾತ್ರ ನಿರ್ವಹಿಸಬೇಕು. ರಾಜ್ಯ ಸರ್ಕಾರವು ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕು ಎಂಬುದು ಈ ಅಧ್ಯಯನದಿಂದ ಮನದಟ್ಟಾಗಿದೆ.