ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಮಾನವ ದೇಹದ ಸಂಪೂರ್ಣ ನಕ್ಷೆ- ಇದನ್ನು ರಚಿಸಲು ವಿದ್ಯಾರ್ಥಿಗಳ ಮುಖ್ಯ ಪಾತ್ರ

Pune
21 Oct 2020
ಮಾನವ ದೇಹದ ಸಂಪೂರ್ಣ ನಕ್ಷೆ- ಇದನ್ನು ರಚಿಸಲು ವಿದ್ಯಾರ್ಥಿಗಳ ಮುಖ್ಯ ಪಾತ್ರ

2019 ರಲ್ಲಿ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಪುಣೆ (ಐಐಎಸ್ಇಆರ್ ಪುಣೆ), ರಾಷ್ಟ್ರೀಯ ಕೋಶ ವಿಜ್ಞಾನ ಕೇಂದ್ರ, ಪುಣೆ (ಎನ್‌ಸಿಸಿಎಸ್) ಮತ್ತು ಪುಣೆಯ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್, ಸಂಸ್ಥೆಗಳ ಸಹಯೋಗದೊಂದಿಗೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು (ಡಿಬಿಟಿ) ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಪ್ರಾರಂಭಿಸಿದೆ.  ಮಾನವ್ - ದಿ ಹ್ಯೂಮನ್ ಅಟ್ಲಾಸ್ ಇನಿಶಿಯೇಟಿವ್ ಎಂದು ಕರೆಯಲ್ಪಡುವ ಇದು, ದೇಶದ ಮೊದಲ ಇಂತಹ ಯೋಜನೆಯಾಗಿದೆ. ವೈಜ್ಞಾನಿಕ ಲೇಖನಗಳು ಮತ್ತು ಸಾರ್ವಜನಿಕ ಡೇಟಾಬೇಸ್ ಅಂದರೆ, ಅಂಕಿ ಸಂಖ್ಯೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಬಳಸಿಕೊಂಡು  ಅಂಗಾಂಶ, ಕೋಶ ಮತ್ತು ಆಣ್ವಿಕ ಮಟ್ಟದಲ್ಲಿ ಮಾನವ ದೇಹದ ಸಂಪೂರ್ಣ ನಕ್ಷೆಯನ್ನು ರಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆರೋಗ್ಯಕರ ಮತ್ತು ರೋಗಪೀಡಿತ ಪರಿಸ್ಥಿತಿಗಳಲ್ಲಿ ನಮ್ಮ ಅಂಗಗಳು ಮತ್ತು ಅಂಗಾಂಶಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಅಧ್ಯಯನ ಮಾಡುವ ಮೂಲಕ ಮಾನವ ದೇಹದ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯಲು ಈ ಅಟ್ಲಾಸ್ ಅಥವಾ ನಕ್ಷೆ ಸಹಾಯ ಮಾಡುತ್ತದೆ. ಮಾನವನ ದೇಹ, ಮತ್ತು ಅದಕ್ಕೆ ತಕ್ಕಂತಹ ಉತ್ತಮ ಔಷಧಿ ಮತ್ತು ಚಿಕಿತ್ಸೆಗಳನ್ನು ಕಂಡುಕೊಳ್ಳಲು ನಮ್ಮಲ್ಲಿರುವ ತಿಳುವಳಿಕೆಯನ್ನು ಹೆಚ್ಚಿಸುತ್ತದೆ.  

ಈ ಯೋಜನೆಯ ಮೊದಲ ಹಂತವು ೨೦೨೧ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ತಂಡವು ಮಾನವನ ಚರ್ಮ- ಒಂದು ಅಂಗವೆಂದು ಪರಿಗಣಿಸಿ, ಚರ್ಮದ ಬಗ್ಗೆ ಮಾಹಿತಿಯನ್ನೂ ಸಹ ಸಂಗ್ರಹಿಸುತ್ತದೆ. ಈ ಮಾಹಿತಿ ಸುಲಭ ಹಾಗೂ ಸಮಗ್ರವಾಗಿ ಲಭಿಸುವ ಜ್ಞಾನ ಭಂಡರವನ್ನಾಗಿಸುವುದು ತಂಡದ ಉದ್ದೇಶ. ಜನಸಮೂಹವನ್ನವಲಂಭಿಸಿ, ಈ ಯೋಜನೆಯು ವಿಜ್ಞಾನ ಮತ್ತು ವೈದ್ಯಕೀಯ ಸಮುದಾಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಇರುವ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು, ವೈಜ್ಞಾನಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಸಹಾಯವಾಗುವ ಸಲುವಾಗಿ, ಡೇಟಾಬೇಸ್ ಅಂದರೆ ಅಂಕಿ ಅಂಶಗಳ ಮಾಹಿತಿಗೆ ಮತ್ತಷ್ಟು ಕೊಡುಗೆ ನೀಡಲು ಆಮಂತ್ರಿಸುತ್ತದೆ. ಈ ಯೋಜನೆಯ ಪ್ರಯತ್ನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ವೈಜ್ಞಾನಿಕ ಲೇಖನಗಳನ್ನು ಓದುವ ಮತ್ತು ಸಂಬಂಧಿತ ವಿಷಯಗಳನ್ನು ಓದಿ, ಅರ್ಥೈಸಿಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬಹುದು.

ಸಮಾನ್ಯವಾಗಿ, ಹೊಸ ಸಂಶೋಧನೆಯನ್ನು ಹಳೆಯ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಮಾಡಲಾಗುತ್ತದೆ, ಈ ಬಗ್ಗೆಗಿನ ಮಾಹಿತಿಯು ಬಹಳಷ್ಟು ಸಂಶೋಧನೆಗಳ ಲೇಖನಗಳಲ್ಲಿ, ವಿಮರ್ಶೆಗಳಲ್ಲಿ ಹಾಗೂ ಬೇರೆ ಬೇರೆ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಅಂಕಿ ಮಾಹಿತಿಗಳಲ್ಲಿ ಚದುರಿವೆ. ಒಂದು ನಿರ್ದಿಷ್ಟ ಲೇಖನ ಓದುವಾಗ, ಒಂದು ಪ್ರಮುಖ ವಾಕ್ಯ ಅಥವಾ ಪದವನ್ನು ಗುರುತು ಮಾಡುವುದನ್ನು ಟಿಪ್ಪಣಿ ಎಂದು ಕರೆಯಲಾಗುತ್ತದೆ; ಇದು ಸಾಮಾನ್ಯವಾಗಿ ಮುದ್ರಣವಾದ ಪುಸ್ತಕ ಅಥವಾ ಲೇಖನವನ್ನು ಓದುವಾಗ ಲೇಖನಿಯಿಂದ ಹೈಲೈಟ್/ ಗುರುತು ಮಾಡಿದಹಾಗೆ. ಸಂಶೋಧಕರು ಸಾಮಾನ್ಯವಾಗಿ, ಅವರು ಓದಿದ ಪುಸ್ತಕಗಳಿಂದ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಮುಖ್ಯವಾಗಿ ಸಂಪರ್ಕಿಸಲು ಟಿಪ್ಪಣಿಯನ್ನು ಉಪಯೋಗಿಸುತ್ತಾರೆ. "ಪ್ರಕಟವಾದ ವಿಜ್ಞಾನ ಪತ್ರಿಕೆಗಳಲ್ಲಿನ ವೈಜ್ಞಾನಿಕ ವಿಷಯಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಮತ್ತು ಅಧ್ಯಯನದಲ್ಲಿ ಉಪಯೋಗವಾದ ಪ್ರಮುಖ ವಿಧಾನ ಮತ್ತು ಸಾಧನೆಗಳನ್ನು ತಿಳಿಯಲು ಈ ಟಿಪ್ಪಣಿಗಳು ಸಹಾಯಕವಾಗಿವೆ" ಎನ್ನುತ್ತಾರೆ ನಾಗರಾಜ್ ಬಾಲಸುಬ್ರಮಣಿಯನ್. ಇವರು ಐಐಎಸ್ಇಆರ್ ಪುಣೆಯಲ್ಲಿ ಅಧ್ಯಾಪಕರಾಗಿದ್ದು, ಅವರ ಸಂಸ್ಥೆಯಲ್ಲಿ ಮಾನವ್ ಯೋಜನೆಯನ್ನು ಪ್ರಾರಂಭಿಸಿದ ತಂಡದ ಪ್ರಮುಖ ವ್ಯಕ್ತಿ. 


 

ಈ ಯೋಜನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವೈಜ್ಞಾನಿಕ ಪತ್ರಿಕೆ ಮತ್ತು ಲೇಖನಗಳನ್ನು (ಮೊದಲ ಹಂತದಲ್ಲಿ ಅಧ್ಯಯನವನ್ನು ವಿಶೇಷವಾಗಿ ಮಾನವನ ಚರ್ಮದ ಬಗ್ಗೆ ಕೇಂದ್ರೀಕರಿಸಲಾಗಿದೆ) ಓದಲು ನಿಯೋಜಿಸಲಾಗುತ್ತದೆ. ಹೀಗೇ ಭಾಗವಹಿಸುವರು, ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ಲೇಖನವನ್ನು ಓದಿ, ಟಿಪ್ಪಣಿಯನ್ನು ಗುರುತಿಸಿದಾಗ,  ಸಾಫ್ಟ್‌ವೇರ್ ಅದನ್ನು ಸೆರೆಹಿಡಿದು, ಅಂಕಿ ಮಾಹಿತಿಯಲ್ಲಿ (ಡಾಟಾಬೇಸ್) ಸಂಗ್ರಹಿಸುತ್ತದೆ. ಬಹಳಷ್ಟು ಪ್ರಕಟಿತ ಮಾಹಿತಿಯ ಸಂಗ್ರಹಣೆ ಹಾಗೂ ಸಂಪರ್ಕಿಸುವುದರಲ್ಲಿ ಅಧಿಕ ಸಮಯ ವ್ಯರ್ಥಿಸದೇ, ಈ ಸಂಯೋಜಿತ ಮಾಹಿತಿಯನ್ನು ಸಂಶೋಧಕರು ಸುಲಭವಾಗಿ ಗಳಿಸಬಹುದು. ಈ ಯೋಜನೆಯಲ್ಲಿ ಭಾಗಿಯಾಗಲು ಸುಮಾರು ೧೫೦೦೦ ವಿದ್ಯಾರ್ಥಿಗಳು, ೨೫೦ ಶಿಕ್ಷಕ ಸಿಬ್ಬಂದಿ ಹಾಗು ೧೬೦ ವಿಮರ್ಶಕರು, ೧೪೦ ತಜ್ಞರು ಸಹಿಮಾಡಿರುತ್ತಾರೆ.

“ವಿದ್ಯಾರ್ಥಿಗಳು ಟಿಪ್ಪಣಿಸಿದ ಲೇಖನಗಳು ೨ ಹಂತದ ವಿಮರ್ಶೆಗೆ ಒಳಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಕೊಡುಗೆಯ ಹೊರತುಪಡಿಸಿ, ನಮಗೆ ಒಟ್ಟಾಗಿ ಪಾಲ್ಗೊಳ್ಳಲು ವಿಮರ್ಶಕರ ಮತ್ತು ನುರಿತ ವಿಮರ್ಶಕರ ಅವಶ್ಯಕತೆ ಇದೆ” ಎಂದು ಯೋಜನೆಯ ವ್ಯೆವಸ್ಥಾಪಕಿ ಅರ್ಚನಾ ಬೆರಿಯವರು ಸೂಕ್ಷ್ಮವಾಗಿ ಹೇಳುತ್ತಾರೆ. “ಅಂತಿಮ ವರ್ಷದ ಪಿ.ಎಚ್.ಡಿ ವಿದ್ಯಾರ್ಥಿಗಳು, ಡಾಕ್ಟರೇಟ್ ಮುಗಿಸಿದವರು, ವಿಜ್ಞಾನಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ವಿಮರ್ಶೆಗಳನ್ನು ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ”, ಎಂದು ಅವರ ಅಭಿಪ್ರಾಯ.

ಕೊಡುಗೆದಾರರು ಮುಖ್ಯವಾದ ಪದ ಅಥವಾ ವಾಕ್ಯವನ್ನು ಬೇರೆ ಬೇರೆ ವಿಷಯದ ವಿಭಾಗಗಳಲ್ಲಿಯೂ ಟಿಪ್ಪಣಿಯಾಗಿ ಗುರುತಿಸಲು ಈ ಸಾಫ್ಟ್‌ವೇರ್ ಅನುಕೂಲಕರವಾಗಿದೆ. ಅಂಗದ ರಚನೆ, ಅದಕ್ಕೆ ಪರಿಣಾಮಬೀರುವ ರೋಗ, ಅದನ್ನು ಗುಣಪಡಿಸುವ ಔಷಧಿ, ಅಥವಾ ಜೀನ್ಸ್ (ಅನುವಂಶಿಕ ಧಾತು) ಮತ್ತು ಕೋಶ ಪ್ರತಿಕ್ರಿಯೆಗೆ ಸಂಬಂಧಿಸಿದ ಮಾರ್ಗಗಳು, ಇವುಗಳಲ್ಲಿ ಯಾವುದನ್ನಾದರೂ ಆ ಪದವು ವಿವರಿಸಬಲ್ಲದು. " ಹೀಗೆ ತಿಪ್ಪಣಿಸಿದ ಪದಗಳು ಡಾಟಾಬೇಸೀನಲ್ಲಿ ನಿರ್ದಿಷ್ಟ ಅಂಗ ಅಥವಾ ಅಂಗಾಂಶಗಳಿಗೆ ಸಂಬಂಧಿಸಿದ ವಿವಿಧ ವಿಷಯ ವಿಭಾಗಗಳಿಂದ ಪಡೆದ ಮಾಹಿತಿ ಇರುತ್ತದೆ. ಉದಾಹರಣೆಗೆ, ಯಾರಾದರೂ ಚರ್ಮದ ಫೈಬ್ರೊಬ್ಲಾಸ್ಟ್ ಎಂದು ಹುಡುಕಿದರೆ, ಚರ್ಮದ ಫೈಬ್ರೊಬ್ಲಾಸ್ಟ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಪಟ್ಟಿಯ ವಿಧದಲ್ಲಿ ಅವರಿಗೆ ಲಭ್ಯವಾಗುತ್ತದೆ. ಆ ಮಾಹಿತಿಯಲ್ಲಿ ರೆಪ್ಲಿಕೇಶನ್ ಅಂದರೆ ಫೈಬ್ರೊಬ್ಲಾಸ್ಟ್ ನ ಪುನರಾವರ್ತನೆ ಮತ್ತು ವಲಸೆಯ ಬಗ್ಗೆಯೂ ಅಂಕಿ ಸಂಖ್ಯೆ ಮಾಹಿತಿ ಒಳಗೊಂಡಿದೆ" ಎಂದು ನಾಗರಾಜ್ ಅವರ ವಿವರಣೆ.

ಮಾನವ್ ಟಿಪ್ಪಣಿಯ ಸಾಫ್ಟ್‌ವೇರ್, ಮುಕ್ತ ಸಂಪನ್ಮೂಲ ಅಂದರೆ, ಓಪನ್ ಸೋರ್ಸ್ ಹಾಗೂ ನಮ್ಮ ತಂಡವೇ ಅಭಿವೃದ್ದಿಪಡಿಸಿದ ಒಂದು ಗ್ರಾಹಕೀಯಗೊಳಿಸಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಒಂದು ಸಾಫ್ಟ್‌ವೇರ್. ಈ ಸಾಫ್ಟ್‌ವೇರ್ ಅಂತರ್ನಿರ್ಮಿತ ವಿಮರ್ಶೆಯ ವ್ಯವಸ್ಥೆಯನ್ನು ಹೊಂದಿದ್ದು ಪರಿಪಾಲಕರು ಹಸ್ತಚಾಲಿತ ಟಿಪ್ಪಣಿಯನ್ನು ನೀಡಬಹುದು.  ತಂಡವು ಒಂದು ಕಾರ್ಯಾಗಾರದ ಸಮಯದಲ್ಲಿ ೧೦೦ ವಿದ್ಯಾರ್ಥಿಗಳನ್ನು ಒಳಗೊಂಡ ಪರಿಕಲ್ಪನೆಯ ಪುರಾವೆಗಳನ್ನು ನಿರ್ವಹಿಸಿದೆ.  ಈ ಪ್ರತಿಕ್ರಿಯೆಯಲ್ಲಿ ಟಿಪ್ಪಣಿಯ ಮಾರ್ಗದರ್ಶನ, ಡಾಟಾ ಸಂಗ್ರಹಣೆ (ಸೆರೆಹಿಡಿಯುವಿಕೆ) ಮತ್ತು ಡಾಟಾ ಮೌಲೀಕರಿಸುವಿಕೆಯನ್ನು ಪರಿಶೀಲಿಸಲಾಗಿದೆ. ಮುಂದಿನ ಹಂತದಲ್ಲಿ ಲೇಖನಗಳ ವರ್ಗೀಕರಣವನ್ನು ಸ್ವಯಂಚಾಲಿತಗೊಳಿಸಿ, ಅವುಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಯೋಜನೆಯಾಗಿದೆ. 

"ವಿವರವಾದ ಹಾಗೂ ಉಪಯೋಗಕರವಾದ ಟಿಪ್ಪಣಿಗಳನ್ನು ಮಾಡುವುದು ಬಹಳ ಕಷ್ಟದ ಮತ್ತು ಸವಾಲಿನ ಕೆಲಸ. ಟಿಪ್ಪಣಿಗಳಲ್ಲಿ  ಪ್ರತಿಯೊಬ್ಬ ವ್ಯಕ್ತಿಯ ನಿಷ್ಟೆಯಿಂದಾಗುವ ಅಭಿವ್ಯಕ್ತಿಯ ವ್ಯೆವಿಧ್ಯತೆಯೇ ಇದಕ್ಕೆ ಕಾರಣ. ಮಾನವ್ ತಂಡವು ಡಾಟಾವನ್ನು ಗುರುತಿಸಿ, ಸಂಗ್ರಹಿಸಿ ಹಾಗೂ ಪ್ರತಿನಿಧಿಸಲು ಯಂತ್ರ ಕಲಿಕೆ ಮತ್ತು ಕೃತಕ ಬುದ್ದಿಮತ್ತೆ ಆಧಾರಿತ ವಿಧಾನಗಳನ್ನು ಅನ್ವೇಷಿಸುತ್ತಿದೆ" ಎನ್ನುತ್ತಾರೆ ಎನ್ಸಿಸಿಎಸ್  (NCCS) ಕೃಷ್ಣ ಶಾಸ್ತ್ರಿ. "ಈ ಸಾಫ್ಟ್‌ವೇರ್‌ನಲ್ಲಿ ಯಂತ್ರ ಕಲಿಕೆ ಆಧಾರಿತ ಸ್ವಯಂ ಟಿಪ್ಪಣಿ ಶುರು ಮಾಡಲು ಆವಕಾಶವಿದೆ" ಎಂದು ಧ್ವನಿಗೂಡಿಸುತ್ತಾರೆ ಯೋಜನೆಯ ತನಿಖಾಧಿಕಾರಿ, ಪರ್ಸಿಸ್ಟೆಂಟ್  ಸಿಸ್ಟೆಮ್ಸ್ ನ ಅನಾಮಿಕ ಕೃಶಂಪಾಲ್.

ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಷಯದಲ್ಲಿ, ಅದರಲ್ಲೂ ಜೀವಶಾಸ್ತ್ರದ ಬಗ್ಗೆ ಓದುವಿಕೆಯಲ್ಲಿ ಆಸಕ್ತಿ ಹುಟ್ಟಿಸಲು, ಮತ್ತು ಡಾಟಾ ವಿಜ್ಞಾನ, ಅವುಗಳ ಅನ್ವಯಿಸುವಿಕೆ ಪರಿಚಿಯಿಸಲು ಮಾನವ್ ತಂಡವು ಜನಸಾಮಾನ್ಯರನ್ನು ಒಳಗೊಂಡು ಹಲವಾರು ಚಟುವಟಿಕೆಗಳನ್ನು ನಡೆಸುತ್ತದೆ. "ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಆವರಣದಲ್ಲಿ ಬಹಳಷ್ಟು ಚರ್ಚಾ ಸಭೆಗಳನ್ನು ಆಯೋಜಿಸುವುದು ಮೊದಲ ಯೋಚನೆಯಾಗಿದೆ. ಆದರೆ, ಕೋವಿಡ್-೧೯ ಕಾರಣದಿಂದ ಅಂತರ್ಜಾಲದಲ್ಲಿ ಅಂದರೆ, ಕಂಪ್ಯೂಟರ್ ಮೂಲಕ ವೆಬಿನಾರುಗಳನ್ನು ಆಯೋಜಿಸವಾಗಿದೆ.  "ವೈಜ್ಞಾನಿಕ ಲೇಖನಗಳನ್ನು ಹೇಗೆ ಬರೆಯುವುದು? ಎಂಬುವುದರ ವೆಬಿನಾರ್ ೭೦ ಬಾರಿ ಆಯೋಜಿಸಲಾಗಿದ್ದು, ಇದರಲ್ಲಿ ಇದುವರೆಗೂ ಸುಮಾರು ೭೦೦ ಜನ ಭಾಗವಹಿಸಿದ್ದಾರೆ.

ಈ ರೀತಿಯಾಗಿ ಜಗತ್ತಿನಾದ್ಯಂತ ವಿಜ್ಞಾನಿಗಳು ಆರಂಭಿಸಿದ ಡಾಟಾ ಸೈನ್ಸ್, ಅಂದರೆ ಡಾಟಾ ವಿಜ್ಞಾನ ಮಾಹಿತಿ ವೆಬಿನಾರ್ ಸೀರೀಸ್ (ಸರಣಿ) ಈಗ ಮಾನವ್ ಯೋಜನೆಯ "ಮಾನವ್ಸ್ ಯೂಟ್ಯೂಬ್ ಚಾನೆಲ್" ನಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ. ಜಗತ್ತಿನಾದ್ಯಂತ ೪೦೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಒಟ್ಟಾರೆ ೧೨ ವೆಬಿನಾರುಗಳನ್ನು ಈ ವರೆಗೂ ಆಯೋಜಿಸಲಾಗಿದೆ.

"ವಿದ್ಯಾರ್ಥಿಗಳಲ್ಲಿ ಹಾಗೂ ಸಿಬ್ಬಂದಿಗಳಲ್ಲಿ ಮಾನವ್ ಯೋಜನೆಯ ಗುರಿಯನ್ನು ತಿಳಿಸುವುದು, ಅದರ ಬಗ್ಗೆ ಅರಿವು ಮೂಡಿಸುವುದು  ನಮ್ಮ ಪ್ರಸ್ತುತ ಕಾರ್ಯವಾಗಿದೆ. ಈ ರಾಷ್ಟ್ರೀಯ ಉಪಕ್ರಮ ಯೋಜನೆಯು ಅವರಲ್ಲಿ ಉತ್ಸಾಹ ಮತ್ತು ಆಸಕ್ತಿಯನ್ನೂ ಉಂಟು ಮಾಡಿದೆ ಎಂದು ಆಶಿಸುತ್ತೇವೆ" ಎಂದು ನಾಗರಾಜ್ ಹೇಳಿದರು. ಮತ್ತಷ್ಟು ಡಾಟಾಬೇಸ್ ಕಟ್ಟಲು ಶಿಕ್ಷಣ ತಜ್ಞರು, ಸಂಶೋಧಕರು, ವೈದ್ಯರು, ಫಾರ್ಮಸಿಸ್ಟ್ ಅಂದರೆ ಔಷಧಿಕಾರರು, ಇವರನ್ನೆಲ್ಲ ಸಂಪರ್ಕದಲ್ಲಿಟ್ಟುಕೊಳ್ಳುವುದು ಈ ತಂಡದ ಯೋಜನೆ.

Kannada