ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ನೈಸರ್ಗಿಕ ಹುಲ್ಲುಗಾವಲುಗಳನ್ನು ಕಾಡನ್ನಾಗಿ ಮಾಡುವುದು ಸರಿ ಎಂಬ ತಪ್ಪುಕಲ್ಪನೆ!

ಬೆಂಗಳೂರು
17 Apr 2019
ನೈಸರ್ಗಿಕ ಹುಲ್ಲುಗಾವಲುಗಳನ್ನು ಕಾಡನ್ನಾಗಿ ಮಾಡುವುದು ಸರಿ ಎಂಬ ತಪ್ಪುಕಲ್ಪನೆ!

ನಾವು ಯಾರನ್ನಾದರೂ “ಹೆಚ್ಚು ಅರಣ್ಯಗಳನ್ನು ಬೆಳೆಸಬೇಕೆ” ಎಂದು ಕೇಳಿದರೆ, ಸಾಮಾನ್ಯವಾಗಿ "ಖಂಡಿತವಾಗಲೂ ಬೆಳೆಸಬೇಕು; ಅರಣ್ಯಗಳು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ" ಎಂದೋ, "ಕಾಡು ಸಾವಿರಾರು ಜೀವಿಗಳ ಆವಾಸಸ್ಥಾನ" ಎಂದೋ ಉತ್ತರ ಕೇಳಿಬರುತ್ತದೆ. ಆದರೆ, ಈಗಿರುವ ಒಂದು ಬಗೆಯ ಭೂದೃಶ್ಯವನ್ನು ಕೃತಕವಾಗಿ ಕಾಡನ್ನಾಗಿ ಬದಲಾಯಿಸುವುದು ಎಲ್ಲಾ ಸಂದರ್ಭಗಳಲ್ಲಿ ಅತ್ಯುತ್ತಮ ಆಯ್ಕೆಯಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕಾಡು ಬೆಳೆಸುವುದೆಂದರೆ ಒಳ್ಳೆಯದೇ ಎಂಬ ನಮ್ಮ ದೃಢವಾದ ನಂಬಿಕೆಗೆ ವ್ಯತಿರಿಕ್ತವಾಗಿ, ಕೃತಕವಾಗಿ ಕಾಡುಗಳನ್ನು ಬೆಳೆಸುವುದು ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನೇ ಮಾಡುತ್ತದೆ.

ಈ ಹಿಂದೆ, ನೀಲಗಿರಿಯಲ್ಲಿನ ಶೋಲಾ ಹುಲ್ಲುಗಾವಲುಗಳ ಬಗ್ಗೆ ತೆಗೆದುಕೊಳ್ಳಲಾದ ಇಂತಹ ಕೆಲವು ತಪ್ಪು ನಿರ್ಧಾರಗಳ ಬೆನ್ನುಹತ್ತಿ, ಅವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರ (ಎನ್.ಸಿ.ಬಿ.ಎಸ್), ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಿನ ಸಂಶೋಧಕರು. ಅವರು ಇತ್ತೀಚೆಗೆ ನಡೆಸಿದ ಈ ಅಧ್ಯಯನವು ಬಯಾಲಾಜಿಕಲ್ ಕಾನ್ಸರ್ವೇಶನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಹುಲ್ಲುಗಾವಲುಗಳು ತಮ್ಮ ಹೆಸರಿಗೆ ತಕ್ಕಂತೆ ಪೊದೆಗಳು ಅಥವಾ ಮರಗಳಿಗಿಂತ ಹೆಚ್ಚಾಗಿ ಹುಲ್ಲಿನಿಂದ ಆವೃತವಾಗಿರುತ್ತವೆ. ಹುಲ್ಲುಗಾವಲುಗಳು ತಮ್ಮದೇ ರೀತಿಯಲ್ಲಿ ಸಂಪೂರ್ಣ ಮತ್ತು ವಿಶಿಷ್ಟವಾದ ಪರಿಸರ ವ್ಯವಸ್ಥೆಗಳಾಗಿದ್ದು, ವಿವಿಧ ಸಸ್ಯ ಮತ್ತು ಪ್ರಾಣಿಗಳ, ಅದರಲ್ಲೂ ವಿಶೇಷವಾಗಿ ಹಲವು ಸ್ಥಳೀಯ ಪ್ರಭೇದಗಳಿಗೆ ಆವಾಸಸ್ಥಾನಗಳಾಗಿರುತ್ತವೆ. ಶೋಲಾ-ಹುಲ್ಲುಗಾವಲು ಕೂಡ ಅಪಾರ ಪ್ರಮಾಣದ ಹುಲ್ಲಿನ ಜೊತೆಗೆ ಅಲ್ಲಲ್ಲಿ ಕಡಿಮೆ ಎತ್ತರದ, ಉಷ್ಣವಲಯದ ಮರಗಳಿರುವ ಶೋಲಾ ಕಾಡುಗಳನ್ನು ಒಳಗೊಂಡಿರುತ್ತದೆ. ಇವು ದಕ್ಷಿಣ ಭಾರತದ ನೀಲಗಿರಿಗಳ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಶೋಲಾ ಕಾಡು ಹಾಗೂ ಹುಲ್ಲುಗಾವಲಿನ ಪರಿಸರ ವ್ಯವಸ್ಥೆಯು ಸುಮಾರು 20,000 ವರ್ಷಗಳ ಕಾಲ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಆದರೆ, ಇಷ್ಟು ಹಳೆಯ ಪರಿಸರ ವ್ಯವಸ್ಥೆಯಲ್ಲಿ ಮಾನವನ ಎಗ್ಗಿಲ್ಲದ ಚಟುವಟಿಕೆಗಳು ಇತ್ತೀಚಿನ ಶತಮಾನಗಳಲ್ಲಿ ಹೆಚ್ಚಾಗಿದೆ ಮತ್ತು ತೀವ್ರತರನಾದ ಹಾನಿಯುಂಟುಮಾಡಿದೆ.

"ನಾವು ಪರಿಸರ ವಿಜ್ಞಾನಿಗಳಾಗಿ, ಮಾನವನ ಹಸ್ತಕ್ಷೇಪದ ಇತಿಹಾಸವಿರುವ ಅನೇಕ ಪರಿಸರ ವ್ಯವಸ್ಥೆಗಳನ್ನು ಕಾಣುತ್ತಿರುತ್ತೇವೆ. ಸಾವಿರಾರು ವರ್ಷಗಳಿಂದ ಮಾನವರು ವಾಸಿಸುತ್ತಿರುವ ಭಾರತದಲ್ಲಂತೂ, ಇಂದು ನಾವು ನೋಡುವುದನ್ನು ಸರಿಯಾಗಿ ಅರ್ಥೈಸಿಕೊಳ್ಳಲು, ಮಾನವನ ಹಸ್ತಕ್ಷೇಪದ ಇತಿಹಾಸವನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗುತ್ತದೆ" ಎಂದು ಎನ್.ಸಿ.ಬಿ.ಎಸ್ನ ವನ್ಯಜೀವಿ ಜೀವವಿಜ್ಞಾನ ಮತ್ತು ಸಂರಕ್ಷಣೆ ಕಾರ್ಯಕ್ರಮದ ಸಹಾಯಕ ನಿರ್ದೇಶಕಿ ಡಾ. ಜಯಶ್ರೀ ರತ್ನಂ ಹೇಳುತ್ತಾರೆ. ಇವರು ಈ ಅಧ್ಯಯನದ ಸಹಲೇಖಕಿಯೂ ಹೌದು.

ಈ ಸಂಶೋಧನೆಯಲ್ಲಿ, ಹುಲ್ಲುಗಾವಲುಗಳ ಇತಿಹಾಸವನ್ನು ತಿಳಿಯಲು ಭಾರತವು ವಸಾಹತುಶಾಹಿಗಳ ಕೈವಶವಾಗಿದ್ದ ಕಾಲದ ಐತಿಹಾಸಿಕ ದಾಖಲೆಗಳು ಮತ್ತು ಸಾಹಿತ್ಯವನ್ನು ಬಳಸಲಾಗಿದೆ. ಆಗಿನ ವಸಾಹತುಶಾಹಿ ಅರಣ್ಯ ಅಧಿಕಾರಿಗಳು ಅಕೇಶಿಯ, ಪೈನ್, ಸಿಲ್ವರ್ ಓಕ್ ಮತ್ತು ನೀಲಗಿರಿಯಂತಹ ನಲವತ್ತು ಅನ್ಯದೇಶದ ಹೊಸ ಪ್ರಭೇದಗಳನ್ನು ನೀಲಗಿರಿ ಪ್ರಸ್ಥಭೂಮಿಗೆ ಪರಿಚಯಿಸಿದರು ಮತ್ತು ಅವುಗಳನ್ನು 1820ರಿಂದ 1937ರವರೆಗೆ ವ್ಯಾಪಕವಾಗಿ ಬೆಳೆದರು ಎಂದು ಕಂಡುಬಂದಿದೆ. 1856ರಲ್ಲಿ ಹೆಚ್ಚುವರಿ 600 ಎಕರೆಗಳ ಹುಲ್ಲುಗಾವಲು ಇವರ ತೋಟಗಾರಿಕೆಗೆ ದೊರೆತಾಗ ಈ ಪ್ರಕ್ರಿಯೆಯು ಮತ್ತಷ್ಟು ವೇಗವನ್ನು ಪಡೆದುಕೊಂಡಿತು. 1950ರ ಹೊತ್ತಿಗೆ, ನೀಲಗಿರಿಯಲ್ಲಿನ 4500 ಎಕರೆಗಳು ತೋಟಗಳಾಗಿ ಬದಲಾಗಿದ್ದವು. ಆ ಹುಲ್ಲುಗಾವಲುಗಳಲ್ಲಿ ನೆಡಲಾದ ಸ್ಥಳೀಯ ಮರಗಳೂ ಕೂಡ ಅಷ್ಟೇನೂ ಚೆನ್ನಾಗಿ ಬೆಳೆಯಲಿಲ್ಲವಾದರೂ, ಹುಲ್ಲುಗಾವಲಿನಲ್ಲಿ ಮರಗಳನ್ನು ಬೆಳೆಸುವ ಅವಶ್ಯಕತೆ ಏನಿದೆ ಅಥವಾ ಮರಗಳು ಆ ಸ್ಥಳಕ್ಕೆ ಹೇಳಿ ಮಾಡಿಸಿದ ಸಸ್ಯಗಳಲ್ಲವೇನೋ ಎಂಬ ಪ್ರಶ್ನೆ ಅವರನ್ನು ಕಾಡಲಿಲ್ಲವೆನಿಸುತ್ತದೆ.

"ಬ್ರಿಟಿಷರಿಗೆ ನೀಲಗಿರಿಯ ಭೂದೃಶ್ಯವು ಅವರ ತಾಯ್ನಾಡನ್ನು ನೆನಪಿಸುವಂತಿತ್ತು; ಹಾಗಾಗಿ ಅವರು ಅಲ್ಲೇ ನೆಲೆಸಲು ಬಯಸಿದರು. ಸ್ಥಳೀಯ ಬುಡಕಟ್ಟು ಜನಾಂಗದವರ ಜಾನುವಾರುಗಳು ನಿರಂತರವಾಗಿ ಮೆದ್ದ ಕಾರಣ ಮತ್ತು ಕಾಡ್ಗಿಚ್ಚಿನ ಕಾರಣ ಹಾಳಾಗಿರುವ ಪರಿಸರ ವ್ಯವಸ್ಥೆಯೇ ಈ ಹುಲ್ಲುಗಾವಲುಗಳು ಎಂದು ಅವರು ತಪ್ಪಾಗಿ ಗ್ರಹಿಸಿದರು. ಇದು, ಈ ಹುಲ್ಲುಗಾವಲುಗಳಿಗೆ ಮರಗಳು ಹಿಂದಿರುಗಬೇಕು ಎಂಬ ಕಲ್ಪನೆಗೆ ಕಾರಣವಾಯಿತು. ಅಷ್ಟೇ ಅಲ್ಲದೇ, ವಸಾಹತುಗಳಲ್ಲಿನ ಜನರಿಗೆ ಮರ ಮತ್ತು ಉರುವಲು ಬೇಕಾದ ಕಾರಣ, ಸ್ಥಳೀಯ ಮರಗಳ ಬದಲು ವಾಣಿಜ್ಯಿಕವಾಗಿ ಪ್ರಮುಖವಾದ ಸಸ್ಯ ಪ್ರಭೇದಗಳನ್ನು ಬೆಳೆಸಿದರು" ಎಂದು ಎನ್.ಸಿ.ಬಿ.ಎಸ್ನ ಭಾಗವಾಗಿದ್ದು, ಲಂಡನ್ನಿನ ಇಂಡಿಯಾ ಆಫೀಸ್ನಲ್ಲಿ ಇತಿಹಾಸದ ದಾಖಲೆಗಳನ್ನು ವಿವರವಾಗಿ ಅಧ್ಯಯನ ಮಾಡಿದ ಅತುಲ್ ಜೋಷಿಯವರು ವಿವರಿಸುತ್ತಾರೆ.

ವಸಾಹತುಶಾಹಿ ಅರಣ್ಯಾಧಿಕಾರಿಗಳು 'ವೈಜ್ಞಾನಿಕ ಅರಣ್ಯೀಕರಣ' ಮತ್ತು 'ಸಂರಕ್ಷಣೆ' ಎಂಬ ಹೆಸರಿನಲ್ಲಿ ನೈಸರ್ಗಿಕ ಭೂದೃಶ್ಯವನ್ನು ನಿಯಂತ್ರಿಸಲು ಹೇಗೆ ಪ್ರಯತ್ನಿಸಿದರು ಮತ್ತು ಇಂತಹ ಹೆಚ್ಚಿನ ಪ್ರಯತ್ನಗಳು ಅವರ ಹೆಚ್ಚೆಚ್ಚು ಮರದ ಅವಶ್ಯಕತೆಗಳಿಂದ ಹೇಗೆ ಪ್ರೇರೇಪಿಸಲ್ಪಟ್ಟವು ಎಂಬುದನ್ನು ಈ ಅಧ್ಯಯನವು ದಾಖಲಿಸುತ್ತದೆ. ಈ ಹುಲ್ಲುಗಾವಲುಗಳ 20,000 ವರ್ಷಗಳ ಇತಿಹಾಸದಲ್ಲಿ, ಮರಗಳೇ ಇಲ್ಲದಿರುವುದನ್ನು ಅರ್ಥಮಾಡಿಕೊಳ್ಳದೇ, ಶೋಲಾ-ಹುಲ್ಲುಗಾವಲುಗಳನ್ನು ಮತ್ತೆ ಅರಣ್ಯವಾಗಿಸುತ್ತೇವೆ ಎಂದು ನಿರ್ಧರಿಸಿ ಮರಗಳನ್ನು ಬೆಳೆಸಲು ಪ್ರಾರಂಭಿಸಿದರು.

ಇದಕ್ಕೆ ನಾವು ದೂಷಿಸಬೇಕಾಗಿರುವುದು ಕೇವಲ ವಸಾಹತುಶಾಹಿ ಅರಣ್ಯಾಧಿಕಾರಿಗಳನ್ನಲ್ಲ; ಸ್ವತಂತ್ರ ಭಾರತದ ಪ್ರಜೆಗಳೂ ತುಂಬಾ ಬುದ್ಧಿವಂತರೇನಾಗಿರಲಿಲ್ಲ! ಹುಲ್ಲುಗಾವಲುಗಳನ್ನು ತೋಟವನ್ನಾಗಿಸುವ ಪ್ರಕ್ರಿಯೆ ಇವರಿಂದಲೂ ಮುಂದುವರಿದು, 20ನೆಯ ಶತಮಾನದ ಅಂತ್ಯದ ವೇಳೆಗೆ ಸುಮಾರು 32,500 ಎಕರೆಗಳಷ್ಟು ಶೋಲಾ-ಹುಲ್ಲುಗಾವಲುಗಳು ತೋಟಗಳಾಗಿ ಬದಲಾಗಿದ್ದವು. ಇಂತಹ ಪರಿಸರ ವ್ಯವಸ್ಥೆಯಲ್ಲಿ ಮಾನವನ ಮಧ್ಯಸ್ಥಿಕೆಯು ತಪ್ಪು ದಿಕ್ಕಿನಲ್ಲಿ ಹೀಗೇ ಮುಂದುವರಿದರೆ, ಆ ಪರಿಸರ ವ್ಯವಸ್ಥೆಯ ಗತಿಯೇನಾದೀತು ಎಂಬುದರ ಉದಾಹರಣೆಯಾಗಿ, ಇಂದು ಶೋಲಾ ಹುಲ್ಲುಗಾವಲುಗಳು ನಮ್ಮೆದುರಿಗೆ ನಿಂತಿವೆ.

"ಎಲ್ಲಾ ಹುಲ್ಲುಗಾವಲುಗಳು ಹಾಳಾಗಿರುವ ಪರಿಸರ ವ್ಯವಸ್ಥೆಗಳೇ ಎಂಬ ತಪ್ಪುಗ್ರಹಿಕೆಯು ಬದಲಾಗಬೇಕಿದೆ. ನೈಸರ್ಗಿಕ ಹುಲ್ಲುಗಾವಲುಗಳಲ್ಲಿ  ವಿಶಿಷ್ಟವಾದ ಜೀವವೈವಿಧ್ಯವಿದ್ದು, ತಮ್ಮದೇ ಆದ ರೀತಿಯಲ್ಲಿ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುತ್ತಿರುತ್ತವೆ. ನೈಸರ್ಗಿಕ ಅರಣ್ಯ ಪರಿಸರ ವ್ಯವಸ್ಥೆಗಳಂತೆ ಇವುಗಳನ್ನೂ ಪ್ರಮುಖವೆಂದು ಪರಿಗಣಿಸಬೇಕು. ಭೂ-ಬಳಕೆಯಲ್ಲಿ ಐತಿಹಾಸಿಕ ಬದಲಾವಣೆಗಳಾದ್ದರಿಂದ ಮತ್ತು ಅನ್ಯದೇಶದ ಸಸ್ಯ ಪ್ರಭೇದಗಳ ಪ್ರಾಬಲ್ಯದಿಂದ, ಶೋಲಾ-ಹುಲ್ಲುಗಾವಲುಗಳು ಭಾರಿ ಹಾನಿಗೆ ಒಳಗಾಗಿವೆ. ಇನ್ನಾದರೂ ಅಳಿದುಳಿದ ಹುಲ್ಲುಗಾವಲುಗಳನ್ನು ಅತಿಕ್ರಮಣ ಮತ್ತು ತೋಟವಾಗಿ ಮಾರ್ಪಾಟು ಮಾಡುವ ಪ್ರಕ್ರಿಯೆಯಿಂದ ರಕ್ಷಿಸಬೇಕು" ಎಂದು ಡಾ.ರತ್ನಮ್ ಮನವಿ ಮಾಡುತ್ತಾರೆ.

ಕೇವಲ ಶೋಲಾ-ಹುಲ್ಲುಗಾವಲುಗಳು ಮಾತ್ರ ಇಂತಹ ಅನ್ಯಾಯಕ್ಕೆ ಒಳಗಾಗಿಲ್ಲ; ಇಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಅವೈಜ್ಞಾನಿಕ ಊಹೆಗಳು ಇಡೀ ಪರಿಸರ ವ್ಯವಸ್ಥೆಗಳ ಅಸ್ತಿತ್ವಕ್ಕೇ ಹೇಗೆ ಬೆದರಿಕೆ ಒಡ್ಡುತ್ತವೆ ಎಂಬುದರ ಅನೇಕ ಉದಾಹರಣೆಗಳಲ್ಲಿ ಇದು ಪ್ರಮುಖವೆನಿಸಿದೆ. ಎರಡು ಶತಮಾನಗಳ ನಂತರವೂ, ಕಾರ್ಯನೀತಿಗಳನ್ನು ರೂಪಿಸುವ ಅಧಿಕಾರಿಗಳು ಮತ್ತು ಅರಣ್ಯ ವ್ಯವಸ್ಥಾಪಕರು ಹುಲ್ಲುಗಾವಲುಗಳನ್ನು ಹಾಳಾಗಿರುವ ಪರಿಸರ ವ್ಯವಸ್ಥೆಗಳೆಂದೇ ಪರಿಗಣಿಸುತ್ತಾರೆ ಮತ್ತು ಸ್ಥಳೀಯವಲ್ಲದ, ಪ್ರಾಬಲ್ಯ ಸಾಧಿಸುವ ಸಸ್ಯ ಪ್ರಭೇದಗಳನ್ನು ಹುಲ್ಲುಗಾವಲುಗಳಲ್ಲಿ ಪರಿಚಯಿಸುತ್ತಾರೆ. ಪರಿಸ್ಥಿತಿಯು ಮತ್ತಷ್ಟು ಹದಗೆಡುವ ಮುನ್ನ ನಾವು ನಮ್ಮ ದೀರ್ಘಕಾಲೀನ, ವ್ಯಾಪಕ ಮತ್ತು ಹಳೆಯ ತಪ್ಪುಗ್ರಹಿಕೆಗಳಿಂದ ಮುಕ್ತರಾಗಬೇಕಿದೆ.

Kannada