ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಪಕ್ಷಿ ವೀಕ್ಷಣೆ - ಒಂದು ಹಬ್ಬ! ಬನ್ನಿ, ಆಚರಿಸೋಣ!

Read time: 1 min
ಬೆಂಗಳೂರು
19 Feb 2020
ಪಕ್ಷಿ ವೀಕ್ಷಣೆ - ಒಂದು ಹಬ್ಬ! ಬನ್ನಿ, ಆಚರಿಸೋಣ!

ಪಕ್ಷಿ ವೀಕ್ಷಣೆ, ಪಕ್ಷಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಗಮನಿಸುವ ಒಂದು ಕಲೆ. ಪಕ್ಷಿ ವೀಕ್ಷಣೆ, ಕೇವಲ ಪಕ್ಷಿಗಳನ್ನು ನೋಡುವುದಲ್ಲದೇ, ನಮ್ಮ ಆರಾಮ ವಲಯವನ್ನು ಮೀರಿ, ಅವುಗಳ ವೈವಿಧ್ಯಮಯ ಜಗತ್ತನ್ನು, ಅವುಗಳ  ವರ್ತನೆಯನ್ನು ತಾಳ್ಮೆಯಿಂದ ಗಮನಿಸುವುದು ಮತ್ತು ಕೆಲ ನಿಯಮಗಳನ್ನು ಪಾಲಿಸುವುದೂ ಒಳಗೊಂಡಿದೆ.  ಪಕ್ಷಿ ವೀಕ್ಷಣೆಯಲ್ಲಿ ವಯಸ್ಸು ಅಥವಾ ಅರ್ಹತೆಯ ನಿರ್ಬಂಧನೆಗಳಿಲ್ಲ ಹಾಗಾಗಿ ಎಲ್ಲರೂ ಆನಂದಿಸಬಹುದು. ಕೇವಲ ಅರಣ್ಯಗಳಲ್ಲದೇ, ನಮ್ಮ ಕಿಟಕಿಗಳೂ ಸಹ ಪಕ್ಷಿಗಳ ಜಗತ್ತಿನಲ್ಲಿ ಒಂದು ಇಣುಕು ನೋಟವನ್ನು ನೀಡಬಹುದು. ಸರಿಯಾದ ಮನಃಸ್ಥಿತಿಯೊಂದಿಗೆ ಕೆಲ ನಿಯಮಗಳನ್ನು ಪಾಲಿಸಿದಲ್ಲಿ ಪಕ್ಷಿ ವೀಕ್ಷಣೆ ದಿನನಿತ್ಯವೂ ಆಚರಿಸಬಲ್ಲಂತಹ ಒಂದು ಹಬ್ಬವಾಗಬಹುದು!

ಪ್ರತಿವರ್ಷ, 12 ನವೆಂಬರ್ ಅಂದು, ಪಕ್ಷಿವೀಕ್ಷಣೆಯ ದಿಗ್ಗಜರಾದ ಡಾ.ಸಲೀಂ ಅಲಿಯ ಹುಟ್ಟುಹಬ್ಬವನ್ನು ರಾಷ್ಟ್ರೀಯ ಪಕ್ಷಿವೀಕ್ಷಣೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ‘ಬರ್ಡ್‌ಮ್ಯಾನ್ ಆಫ್ ಇಂಡಿಯಾ’ ಎಂದೂ ಕರೆಯಲ್ಪಡುವ ಅವರು, ಭಾರತ ಉಪಖಂಡದ ಪಕ್ಷಿಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಪಕ್ಷಿವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸಿದ್ದಾರೆ. ಇದಲ್ಲದೇ, ಮುಂಬೈನ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸ್ಥಾಪಿಸುವಲ್ಲಿ ಮತ್ತು ದೇಶದಲ್ಲಿನ ಅನೇಕ ವನ್ಯಜೀವಿ ಅಭಯಾರಣ್ಯಗಳನ್ನು ಸ್ಥಾಪಿಸುವಲ್ಲಿ ಮತ್ತು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಕೆಲಸದ ಮೂಲಕ, ಅನೇಕ ಯುವ ಪಕ್ಷಿವಿಜ್ಞಾನಿಗಳಿಗೆ ಭಾರತದಲ್ಲಿನ ಪಕ್ಷಿಗಳ ಸಮೃದ್ಧ ವೈವಿಧ್ಯತೆಯನ್ನು ಅಧ್ಯಯನ ಮಾಡಲು ಇವರು ಒಬ್ಬ ಪ್ರೇರಣೆ.

ವಾಸಿಸುವ ಮತ್ತು ವಲಸೆ ಬರುವ ಪಕ್ಷಿಗಳು ಸೇರಿ, ಭಾರತದಲ್ಲಿ ಸುಮಾರು 1250 ಪಕ್ಷಿ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ನಮ್ಮ ಸುತ್ತ ಮುತ್ತ ಕಣ್ಣು ಹಾಯಿಸಿದರೂ, ಸುಮಾರು 100 ಪ್ರಭೇದಗಳನ್ನು ನಾವು ಕಾಣಬಹುದು. ಮಹಾನಗರಗಳಲ್ಲಿ, ಪಕ್ಷಿಗಳು ಕಡಿಮೆಯಾಗುತ್ತಿದ್ದರೂ, ಕೆಲ ಪ್ರಭೇದಗಳ ಸಂಖ್ಯೆಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಇತ್ತೀಚಿನ ನಾಗರೀಕ ವಿಜ್ಞಾನ ಮಾಹಿತಿಯ ಆಧಾರದ ಮೇಲೆ, ಭಾರತದ ಕೆಲ ಸಂಶೋಧನಾ ಹಾಗೂ ಸಂರಕ್ಷಣಾ ಸಂಸ್ಥೆಗಳ ಶೋಧಕರು ನಡೆಸಿದ ಒಂದು ಅಧ್ಯಯನ ಬಹಿರಂಗಪಡಿಸುತ್ತದೆ.

ನಾವು ಎಲ್ಲಿ ಅಥವಾ ಯಾವಾಗ ಪಕ್ಷಿಗಳನ್ನು ನೋಡುತ್ತಿದ್ದರೂ, ಪ್ರಕೃತಿಯೊಂದಿಗೆ ನಿಕಟ ಸಂಪರ್ಕವನ್ನು ಅನುಸರಿಸುತ್ತೇವೆ. ಹಾಗಾಗಿ, ಪಕ್ಷಿ ವೀಕ್ಷಣೆಗೆ ಹೋದಲ್ಲಿ, ಈ ಕೆಳಕಂಡ ಮೂಲಭೂತ ನಿಯಮಗಳನ್ನು ಪಾಲಿಸುವುದು ಒಳಿತು.

 • ಪ್ರಕಾಶಮಾನ ಬಣ್ಣದ ಬಟ್ಟೆಗಳನ್ನು ಧರಿಸದೇ, ಮರೆಮಾಚುವಂತಹ, ಬೂದು ಅಥವಾ ಕಪ್ಪು ಬಣ್ಣಗಳಂತಹ ನೈಸರ್ಗಿಕ ಬಣ್ಣದ ಬಟ್ಟೆಗಳನ್ನು ಧರಿಸಿ ಪಕ್ಷಿ ವೀಕ್ಷಣೆಗೆ ತೆರಳುವುದು ಒಳ್ಳೆಯದು.
 • ಹಗುರವಾದ ಬೈನಾಕ್ಯುಲರ್ (ದೂರದ ಪ್ರಾಣಿ-ಪಕ್ಷಿಗಳನ್ನು ನೋಡುವಂತಃಹ ಒಂದು ಸಾಧನ) ಪಡೆಯಿರಿ. ವಿಶಾಲ ವೀಕ್ಷಣೆಯ ಕ್ಷೇತ್ರ  ಅಥವಾ ಫೀಲ್ಡ್ ಆಫ್ ವ್ಯೂ (ಎಫ್‌.ಒ.ವಿ) ಹೊಂದಿರುವ ಮಸೂರವನ್ನು ಆರಿಸುವುದು ಸೂಕ್ತ. ಎಫ್‌.ಒ.ವಿ, ಕ್ಯಾಮೆರಾದ ಒಂದು ಬಿಂದುವಿನಿಂದ ಪಕ್ಷಿಗಳನ್ನು ಗಮನಿಸುವ ವ್ಯಾಪ್ತಿ. ವಿಶಾಲ ನೋಟವಿದ್ದಷ್ಟೂ, ಪಕ್ಷಿಗಳನ್ನು ಸ್ಪಷ್ಟವಾಗಿ ಕಾಣಬಹುದು.
 • ಪಕ್ಷಿಗಳನ್ನು ಬೆಚ್ಚಿಬೀಳಿಸುವಂತಹ ಹಠಾತ್ ಚಲನೆಯನ್ನು ತಪ್ಪಿಸಿ. ಇಂತಹ ಚಲನೆಯಿಂದ ಪಕ್ಷಿಗಳು ಹಾರಿಹೋಗುತ್ತವೆ. ನಿಮ್ಮ ಬೈನಾಕ್ಯುಲರ್ ಅನ್ನು ನಿಧಾನವಾಗಿ ತೆಗೆದು ಪಕ್ಷಿಗಳನ್ನು ಗಮನಿಸಿ. ಪಕ್ಷಿಗಳ ಹತ್ತಿರ ಹೋದಷ್ಟು ನಿಶಬ್ಧವಾಗಿರುವುದು ಒಳ್ಳೆಯದು.
 • ಹೆಚ್ಚಿನ ಪಕ್ಷಿಗಳು ಸೂರ್ಯೋದಯದ ಸಮಯದಲ್ಲಿ ಹೊರಬರುತ್ತವೆ, ಏಕೆಂದರೆ ಇದು ಕೀಟಗಳನ್ನು ಬೆಚ್ಚಗಾಗಿಸಿ, ಪಕ್ಷಿಗಳಿಗೆ ಬೇಟೆಯನ್ನು ನೀಡುತ್ತದೆ. ಆದ್ದರಿಂದ, ಈ ಸಮಯದಲ್ಲಿ ವೈವಿಧ್ಯಮಯ ಪಕ್ಷಿಗಳನ್ನು ನೋಡುವ ಸಾಧ್ಯತೆಗಳು ಹೆಚ್ಚು.
 • ಒಂದು ಪಕ್ಷಿ ಮಾರ್ಗದರ್ಶಿ ಪಡೆಯಿರಿ. ಪಕ್ಷಿ ಮಾರ್ಗದರ್ಶಿಗಳು ಒಂದು ಪ್ರದೇಶದಲ್ಲಿ ಕಂಡುಬರುವ ಪಕ್ಷಿಗಳು, ಅವುಗಳ ಶಬ್ಧಗಳು, ಅವು ತಿನ್ನುವ ಆಹಾರ ಮತ್ತು ವಲಸೆಯ ಸಮಯದ ಬಗ್ಗೆ ಮಾಹಿತಿಯನ್ನು ಹೊಂದಿರುವ ಪುಸ್ತಕಗಳು.
 • ಪಕ್ಷಿಗಳನ್ನು ನೋಡುವಾಗ ನಿಮ್ಮ ಜ್ಞಾನವನ್ನು ಹೆಚ್ಚಿಸಲು ಮಾರ್ಗದರ್ಶಿಯನ್ನು ಹೊಂದಿರುವುದು ಉತ್ತಮ.
 • ನೋಟ್‌ಪ್ಯಾಡ್ ಅಥವಾ ಬರೆಯುವ ಪುಸ್ತಕ ಇಟ್ಟುಕೊಂಡು, ವೀಕ್ಷಿಸಿದ ಪಕ್ಷಿಗಳ ವಿವರಗಳನ್ನು ಮತ್ತು ಅವುಗಳ ಕರೆಗಳ ಧ್ವನಿಯ ಬಗ್ಗೆ ಬರೆಯುವುದು ಉತ್ತಮ. ಈ ವಿವರಗಳು ನಿಖರವಾದ ಗುರುತಿಸುವಿಕೆಗೆ ಸಹಾಯ ಮಾಡುತ್ತವೆ, ಮತ್ತು ಈ ಅಭ್ಯಾಸ ನಮ್ಮ ಜ್ಞಾಪಕ ಶಕ್ತಿಯನ್ನು  ಹೆಚ್ಚಿಸುತ್ತದೆ.
 • ಪಕ್ಷಿ ವೀಕ್ಷಣೆ ಎಂದರೆ ತಾಳ್ಮೆ. ಸುಂದರವಾದ ಪಕ್ಷಿ ಹಿಂಡುಗಳು ಸರಿಯಾದ ಸಮಯ ಮತ್ತು ಹವಾಮಾನದಲ್ಲಿ ಮಾತ್ರ ಬರುವುದರಿಂದ ಪಕ್ಷಿಗಳು ಬರುವವರೆಗೆ ತಾಳ್ಮೆಯಿಂದ ಕಾಯಿರಿ.

ಪಕ್ಷಿವೀಕ್ಷಣೆಯನ್ನು ಪ್ರಾರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ಕೆಲ ಅಂಶಗಳು -

 • ಗಾತ್ರ ಮತ್ತು ಆಕಾರ - ಒಂದು ಪಕ್ಷಿಯನ್ನು ಉದಾಹರಣೆಯಾಗಿ ಹೊಂದಿರಿ ಮತ್ತು ಅದರ ಗಾತ್ರ ಮತ್ತು ಅದರ ದೇಹ ಅಥವಾ ಕೊಕ್ಕಿನ ಆಕಾರವನ್ನು ಹೊಸದರೊಂದಿಗೆ ಹೋಲಿಸಿ (ಉದಾಹರಣೆಗೆ, ಗುಬ್ಬಿಯನ್ನು ಮಚ್ಚೆಯುಳ್ಳ ಮುನಿಯಾಗೆ ಹೋಲಿಸುವುದು).
 • ಬಣ್ಣ - ಹಕ್ಕಿಯ ಪ್ರಬಲ ಬಣ್ಣವನ್ನು ಹುಡುಕಿ, ನಂತರ ಅದರ ಪ್ರಮುಖ ವೈಶಿಷ್ಠ್ಯಗಳನ್ನು ಗಮನಿಸಿ (ಉದಾಹರಣೆಗೆ, ಪಾರಿವಾಳವು ಬೂದು ಬಣ್ಣದ್ದಾಗಿರುತ್ತದೆ, ಮುಖ್ಯವಾಗಿ ಸಣ್ಣ ಕುತ್ತಿಗೆ ಮತ್ತು ಕೊಕ್ಕು ಹೊಂದಿರುತ್ತದೆ).
 • ಆವಾಸಸ್ಥಾನ - ಪಕ್ಷಿ ಎಲ್ಲಿಂದ ಬರುತ್ತದೆ ಅಥವಾ ಬಂದಿದೆ, ಮತ್ತು ನಿರ್ದಿಷ್ಟ ಪ್ರದೇಶಕ್ಕೆ ಪ್ರಯಾಣಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ತಿಳಿಯಿರಿ. ಅಲ್ಲದೆ, ಅದರ ಕಾಲಾನುಕ್ರಮ ವಲಸೆ ಸಮಯವನ್ನು ಅರ್ಥಮಾಡಿಕೊಳ್ಳಿ (ಉದಾಹರಣೆಗೆ, ಅಮುರ್ ಫಾಲ್ಕನ್ ಚಳಿಗಾಲದ ಸಮಯದಲ್ಲಿ ಮಂಗೋಲಿಯಾದಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವ, ಭಾರತ ಮತ್ತು ಶ್ರೀಲಂಕಾದ ಗಡಿಗಳನ್ನು ಹಾದುಹೋಗುವ ಸುದೀರ್ಘ ವಲಸೆಗಾರ).
 • ವರ್ತನೆಯ ಮಾದರಿಗಳು - ಯಾವುದೇ ಪಕ್ಷಿಯ ಆಸಕ್ತಿದಾಯಕ ಅಂಶಗಳೆಂದರೆ ಅದರ ಚಲನೆಗಳು, ಕಾರ್ಯಗಳು, ರೆಕ್ಕೆ-ಬೀಸುವ ಚಲನೆಗಳು, ಗೂಡುಕಟ್ಟುವಿಕೆ ಮತ್ತು ಸಂತಾನೋತ್ಪತ್ತಿ ವರ್ತನೆಗಳು, ವೇಗ ಮತ್ತು ಹಾರುವ ಪ್ರಕಾರಗಳು. ಇವುಗಳ ಬಗೆಗಿನ ಅಧ್ಯಯನ ಆಳವಾಗಿ ಗಮನಿಸಿದ ಪಕ್ಷಿಗಳ ವಿವರಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ (ಉದಾಹರಣೆಗೆ, ಪೆಂಗ್ವಿನ್‌ಗಳು ಹಾರಲು ಸಾಧ್ಯವಿಲ್ಲ ಆದರೆ ಹಮ್ಮಿಂಗ್ ಬರ್ಡ್‌ಗಳು ವಿರುದ್ಧ ದಿಕ್ಕಿನಲ್ಲಿ ಹಾರುತ್ತವೆ).

ತಾಳ್ಮೆ ಹಾಗೂ ಮೂಲಭೂತ ನಿಯಮಗಳನ್ನು ಪಾಲಿಸಿದಲ್ಲಿ, ಪಕ್ಷಿ ವೀಕ್ಷಣೆಯಲ್ಲಿ  ಪ್ರತಿಯೊಂದು ಹೆಜ್ಜೆಯೂ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಹಾಗಿದ್ದಲ್ಲಿ, ‘ಬರ್ಡಿಂಗ್’ ಪ್ರಾರಂಭಿಸಲು ತಡ ಯಾಕೆ?