![ಮೈಕ್ರೊಹೈಲಾ ಡಾರ್ರೆಲಿ | ಚಿತ್ರ: ಎಸ್. ಡಿ. ಬಿಜು ಮೈಕ್ರೊಹೈಲಾ ಡಾರ್ರೆಲಿ | ಚಿತ್ರ: ಎಸ್. ಡಿ. ಬಿಜು](/sites/researchmatters.in/files/styles/large_800w_scale/public/1_6.jpg?itok=wFsc7G5a)
ಇತ್ತೀಚಿನ ಅಧ್ಯಯನವೊಂದರ ಭಾಗವಾಗಿ, ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಹೊಸ ಪ್ರಭೇದದ ಕಪ್ಪೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ‘ಮೈಕ್ರೊಹೈಲಾ ಡಾರ್ರೆಲಿ’ ಎಂಬ ಹೆಸರಿನ ಈ ಕಪ್ಪೆ, ‘ಮೈಕ್ರೊಹೈಲಾ’ ಕುಲಕ್ಕೆ ಸೇರಿದ ಜೀವಿಯಾಗಿದೆ; ಈ ಕುಲದ ಕಪ್ಪೆಗಳಿಗೆ ‘ಕಿರಿ ಮೂತಿಯ ಕಪ್ಪೆ’ (ನ್ಯಾರೋ ಮೌಥ್ಡ್ ಫ್ರಾಗ್) ಎಂಬ ಸಾಮಾನ್ಯ ಹೆಸರಿದ್ದು, ಇದಕ್ಕೆ ಕಾರಣ ಅವುಗಳ ತ್ರಿಕೋನಾಕಾರದ ಪುಟ್ಟ ದೇಹ ಮತ್ತು ಕಿರಿದಾದ ಮೂತಿ. ಈ ಕುಲದ ಕಪ್ಪೆಗಳು ಜಪಾನ್, ಚೀನಾ, ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಸಂಶೋಧಕರು ತಮ್ಮ ಅಧ್ಯಯನದ ಭಾಗವಾಗಿ, ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಮೈಕ್ರೊಹೈಲಾ ಕಪ್ಪೆಗಳ ಸಮಗ್ರ ವರ್ಗೀಕರಣದ ಪರಿಷ್ಕರಣೆ ಮಾಡುತ್ತಿರುವಾಗ, ಈ ಹೊಸ ಜಾತಿಯ ಕಪ್ಪೆಗಳನ್ನು ಪತ್ತೆಹಚ್ಚಿದರು. ಈ ತಂಡದಲ್ಲಿ ಭಾರತ, ಶ್ರೀಲಂಕಾ, ಚೀನಾ, ಇಂಡೋನೇಷಿಯಾ ಮತ್ತು ಯುಎಸ್ಎಗಳ ಸಂಶೋಧಕರಿದ್ದರು. ಭಾರತೀಯ ಸಂಸ್ಥೆಗಳಾದ ದೆಹಲಿ ವಿಶ್ವವಿದ್ಯಾಲಯ, ಭಾರತೀಯ ವನ್ಯಜೀವಿ ಸಂಸ್ಥೆ (WII), ಮಂಗಳೂರು ವಿಶ್ವವಿದ್ಯಾಲಯ ಹಾಗೂ ಪರಿಸರ ಮತ್ತು ಪರಿಸರ ವಿಜ್ಞಾನದ ಸಂಶೋಧನೆಗಾಗಿ ಕಾರ್ಯನಿರ್ವಹಿಸುವ ಅಶೋಕ ಟ್ರಸ್ಟ್ (ATREE) ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.
ಈ ಹೊಸ ಜಾತಿಯ ಕಪ್ಪೆ ಮೊದಲೆಂದೂ ಪತ್ತೆಯಾಗಿರಲಿಲ್ಲ ಎಂಬುದನ್ನು ‘ಮೈಕ್ರೋಹೈಲಾ’ ಕುಲದ ಇತರ ಕಪ್ಪೆಗಳ ಡಿಎನ್ಎ, ಭೌತಿಕ ಗುಣಲಕ್ಷಣಗಳು ಮತ್ತು ಕರೆಗಳನ್ನು ಸಂಯೋಜಿತ ಜೀವಿವರ್ಗೀಕರಣ ವಿಧಾನದ ಮೂಲಕ ಹೋಲಿಸಿ, ದೃಢಪಡಿಸಲಾಯಿತು. ವಿಶ್ವದ ಉಭಯಚರ ಪ್ರಭೇದಗಳ ಬಗ್ಗೆ ‘ಆಂಫೀಬಿಯನ್ ಸ್ಪೀಷೀಸ್ ಆಫ್ ದ ವರ್ಲ್ಡ್, ಆನ್ ಆನ್ಲೈನ್ ರೆಫರೆನ್ಸ್’ ಎಂಬ ಅನನ್ಯ ಆನ್ಲೈನ್ ಡೇಟಾಬೇಸನ್ನು ತಯಾರಿಸಿದ ಅಮೆರಿಕಾದ ಉಭಯಜೀವಿತಜ್ಞ ಡಾ. ಡಾರೆಲ್ ಆರ್. ಫ್ರಾಸ್ಟ್ ರವರ ಗೌರವಾರ್ಥವಾಗಿ, ಈ ಕಪ್ಪೆಗೆ ‘ಮೈಕ್ರೊಹೈಲಾ ಡಾರ್ರೆಲಿ’ ಅಥವಾ ‘ಡಾರೆಲ್’ನ ಕೋರಸ್ ಕಪ್ಪೆ’ ಎಂದು ಹೆಸರಿಡಲಾಗಿದೆ. ಈ ದತ್ತಾಂಶವು, ವಿಶ್ವದಾದ್ಯಂತ ಇಲ್ಲಿಯವರೆಗೂ ಪತ್ತೆಯಾಗಿರುವ ಎಲ್ಲಾ ಉಭಯಚರಗಳ ವರ್ಗೀಕರಣದ ಕ್ಯಾಟಲಾಗ್ ಎನ್ನಬಹುದು.
‘ಮೈಕ್ರೊಹೈಲಾ ಡಾರ್ರೆಲಿ’ ಕಪ್ಪೆಯು ಕೆಲವು ಗುಣಲಕ್ಷಣಗಳಲ್ಲಿ ‘ಮೈಕ್ರೊಹೈಲಾ’ ಕುಲದ ಅನೇಕ ಇತರ ಪ್ರಭೇದಗಳನ್ನು ಹೋಲುತ್ತದೆ. ಈ ಕಪ್ಪೆಯ ಕರೆಯು ‘ಮೈಕ್ರೊಹೈಲಾ ಝೆಲಾನಿಕ’ ಎಂಬ ಶ್ರೀಲಂಕಾದಲ್ಲಿ ಸ್ಥಳೀಯವಾಗಿ ಕಂಡುಬರುವ ಮತ್ತೊಂದು ಕಿರಿ ಮೂತಿ ಕಪ್ಪೆಯ ಕರೆಯನ್ನು ಹೋಲುತ್ತದೆ. ‘ಮೈಕ್ರೊಹೈಲಾ ಡಾರ್ರೆಲಿ’ ಕಪ್ಪೆಯು ಸಧ್ಯಕ್ಕೆ ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಪತ್ತೆಯಾಗಿದ್ದು, ಇದರ ಆವಾಸಸ್ಥಾನದ ವ್ಯಾಪ್ತಿಯಲ್ಲೇ, ದಕ್ಷಿಣಏಷ್ಯಾದಲ್ಲಿ ಕಂಡುಬರುವ ‘ಮೈಕ್ರೊಹೈಲಾ ಆರ್ನೇಟಾ’ ಅಥವಾ ಆರ್ನೇಟ್ ನ್ಯಾರೋ ಮೌಥ್ಡ್ ಕಪ್ಪೆಗಳೂ ಇರುವುದನ್ನು ಸಂಶೋಧಕರು ಗಮನಿಸಿದ್ದಾರೆ.
ಈ ಹೊಸ ಕಪ್ಪೆಯ ಆವಿಷ್ಕಾರದಿಂದ, ಇಲ್ಲಿಯವರೆಗೂ ಪತ್ತೆಯಾಗಿರುವ ‘ಕಿರಿ ಮೂತಿಯ ಕಪ್ಪೆ’ಗಳ ಒಟ್ಟು ಸಂಖ್ಯೆಯು 45ಕ್ಕೆ ಏರುತ್ತದೆ. ವಿಜ್ಞಾನಿಗಳ ಸಹಾಯಕ್ಕಿರುವ ಸುಧಾರಿತ ವರ್ಗೀಕರಣದ ವಿಧಾನಗಳು ಮತ್ತು ಉಭಯಚರಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯ ಕಾರಣದಿಂದ, ಮುಂಬರುವ ವರ್ಷಗಳಲ್ಲಿ ಇಂತಹ ವಿನೂತನ ಆವಿಷ್ಕಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಬಹುದು ಎಂದು ನಮ್ಮಲ್ಲಿ ಭರವಸೆ ಮೂಡುವುದಂತೂ ಖಂಡಿತ.