ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ತೋಟದ ಸುತ್ತ ಜೀವವೈವಿಧ್ಯವುಳ್ಳ ಪರಿಸರವಿದ್ದಲ್ಲಿ ಬೆಳೆಯ ಇಳುವರಿ ಹೆಚ್ಚಾಗುತ್ತದೆ ಎಂದು ಸಾಬೀತು ಪಡಿಸಿದ ಅಧ್ಯಯನ!

Read time: 1 min
ಬೆಂಗಳೂರು
31 Jan 2020
ತೋಟದ ಸುತ್ತ ಜೀವವೈವಿಧ್ಯವುಳ್ಳ ಪರಿಸರವಿದ್ದಲ್ಲಿ ಬೆಳೆಯ ಇಳುವರಿ ಹೆಚ್ಚಾಗುತ್ತದೆ ಎಂದು ಸಾಬೀತು ಪಡಿಸಿದ ಅಧ್ಯಯನ!

ಪಂಜಾಬ್ ನಲ್ಲಿ ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಲಕ್ಷಾಂತರ ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ ಭತ್ತವನ್ನು ಕೊಯ್ಲು ಮಾಡುವ ನೂರಾರು ಯಂತ್ರಗಳ ಸದ್ದನ್ನು ಕೇಳಬಹುದು. ಇನ್ನು, ಮಹಾರಾಷ್ಟ್ರದಲ್ಲಿನ ವಿದರ್ಭದ ಹಳ್ಳಿಗಳು ತಮ್ಮ ಹಿಮದಷ್ಟು ಬಿಳಿಯ ಹತ್ತಿರಾಶಿಯನ್ನು ಲೆಕ್ಕವಿಲ್ಲದಷ್ಟು ಮೂಟೆಗಳಲ್ಲಿ ತುಂಬಿ  ಮಾರುಕಟ್ಟೆಗೆ ಕಳಿಸುತ್ತಿರುತ್ತವೆ. ಹಲವು ವರ್ಷಗಳ ಹಿಂದೆ, ಇದೇ ಕೃಷಿಭೂಮಿಗಳು ವಿಸ್ತಾರವಾದ ಕಾಡುಗಳು, ಹುಲ್ಲುಗಾವಲುಗಳು, ಗದ್ದೆಗಳು ಮತ್ತು ಅನೇಕ ಬೆಳೆಗಳನ್ನುಆವರ್ತಿಯ ಆಧಾರದ ಮೇಲೆ ಬೆಳೆಸಲಾಗುವಂತಹ ಪ್ರದೇಶಗಳಾಗಿದ್ದವು. ಆದರೆ ಕಳೆದ ಐದರಿಂದ ಆರು ದಶಕಗಳಿಂದ ಈ ಪ್ರದೇಶಗಳನ್ನು, ನೀರಿನಂತಹ ಸಂಪನ್ಮೂಲಗಳು ಮತ್ತು ರಾಸಾಯನಿಕ  ಕೀಟನಾಶಕಗಳು ಹಾಗೂ ಕಳೆನಾಶಕಗಳನ್ನು ವ್ಯಾಪಕವಾಗಿ ಬಳಸುತ್ತಾ, ಕೇವಲ ಒಂದು ಅಥವಾ ಎರಡು ಬೆಳೆಗಳನ್ನು ಬೆಳೆಯುವ ತೋಟ/ಹೊಲಗಳಾಗಿ ಪರಿವರ್ತಿಸಲಾಗಿದೆ.

ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ, ಇಂತಹ ತೀವ್ರತರನಾದ ಕೃಷಿಯನ್ನು ಎಲ್ಲೆಡೆ ಪುನರಾವರ್ತಿಸಲಾಯಿತು. ಆದಾಗ್ಯೂ, ಇಂದು ಇದು ಕೃಷಿ ಬಿಕ್ಕಟ್ಟನ್ನು ಸೃಷ್ಟಿಸಿದೆ; ಕೃಷಿಗಾಗಿ ಭೂಮಿಯನ್ನು ಅತಿಯಾಗಿ ಬಳಸುವುದರಿಂದ ಬೆಳೆ ಇಳುವರಿಯ ಮಟ್ಟ ತಟಸ್ಥವಾಗುತ್ತಿದೆ ಅಥವಾ ಕಡಿಮೆಯಾಗುತ್ತಿದೆ ಮತ್ತು ರೈತರು ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚವನ್ನು ಭರಿಸಬೇಕಾಗುತ್ತಿದೆ.   ಇದಲ್ಲದೆ, ಕಾಡುಗಳು, ಹುಲ್ಲುಗಾವಲುಗಳು, ಗದ್ದೆಗಳು ಮತ್ತು ಇತರ ನೈಸರ್ಗಿಕ ಆವಾಸಸ್ಥಾನಗಳ ಅನನ್ಯ ಶ್ರೇಣಿಯು ಕೃಷಿಭೂಮಿಯ ಏಕತಾನತೆಯಲ್ಲಿ ಕಳೆದುಹೋಗುತ್ತಿದೆ; ಇದರಿಂದಾಗಿ ಜೀವವೈವಿಧ್ಯ ಕಡಿಮೆಯಾಗುತ್ತಿದೆ. ಅದು ತೋಟ/ಕೃಷಿಭೂಮಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಮತ್ತು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿ,ಜಗತ್ತಿನ ಎಂಭತ್ತು ಸಂಸ್ಥೆಗಳ ನೂರಕ್ಕೂ ಹೆಚ್ಚು ಸಂಶೋಧಕರು ತಮ್ಮ  ಇತ್ತೀಚಿನ ಅಧ್ಯಯನವೊಂದರಲ್ಲಿ, ಭೂಮಿಯನ್ನು ಮಾನವ ಕೃಷಿಗಾಗಿ/ಮತ್ತಿತರ ಕಾರಣಗಳಿಗಾಗಿ ಎಗ್ಗಿಲ್ಲದೆ ಬಳಸುತ್ತಿರುವುದು ಪ್ರಪಂಚದಾದ್ಯಂತ ತೋಟ/ಕೃಷಿಭೂಮಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ,

ನೈಸರ್ಗಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಪರಿಸರವು, 'ಪರಿಸರ ವ್ಯವಸ್ಥೆಯ ಸೇವೆಗಳನ್ನು' ನಮಗೆ ಅನೇಕ ರೀತಿಯಲ್ಲಿ ಒದಗಿಸಿ ಪ್ರಯೋಜನಕಾರಿ ಎನಿಸುತ್ತದೆ. ಉದಾಹರಣೆಗೆ, ಜೇನುನೊಣಗಳು ಮತ್ತು ಜೀರುಂಡೆಗಳಂತಹ ಪರಾಗಸ್ಪರ್ಶಕಗಳಿಂದ ಮತ್ತು ನಮ್ಮ ಸಸ್ಯಗಳಿಗೆ ತೊಂದರೆದಾಯಕವೆನಿಸಿದ ಇತರ ಕೀಟಗಳನ್ನು ಕೊಲ್ಲುವ ಜೇಡಗಳು ಹಾಗೂ ಇರುವೆಗಳಂತಹ ಕೀಟಗಳಿಂದ ರೈತರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಆದರೆ, ಕಾಡು, ಹುಲ್ಲುಗಾವಲುಗಳನ್ನು ಇನ್ನಿಲ್ಲವಾಗಿಸಿ ತೋಟ, ಕೃಷಿಭೂಮಿಗಾಗಿ ಭೂಪ್ರದೇಶಗಳನ್ನು ಸರಳೀಕರಿಸಿದಾಗ, ಅಂತಹ ಕೀಟಗಳ ಜೀವವೈವಿಧ್ಯದಲ್ಲಿ ಬದಲಾವಣೆ ಕಂಡುಬರುತ್ತದೆ; ಅಂದರೆ ಅವುಗಳ ಸಂಖ್ಯೆ ಮತ್ತು ಪ್ರಭೇದಗಳ ಸಮೃದ್ಧಿಯು ಕುಸಿಯುತ್ತದೆ. ಕಾಲ ಕಳೆದಂತೆ, ಕೀಟ ಸಮುದಾಯದ ಸಂಯೋಜನೆಯೇ ಬದಲಾಗುತ್ತದೆ. ಒಂದು ಕಾಲದಲ್ಲಿ ಹೇರಳವಾಗಿ ಅಥವಾ ಪ್ರಬಲವಾಗಿದ್ದ ಕೀಟಜಾತಿಗಳು, ಈಗ ಕಡಿಮೆ ಸಂಖ್ಯೆಗೆ ಇಳಿದು ತಮ್ಮ ಮಹತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ.

ಜೀವವೈವಿಧ್ಯದ ನಷ್ಟವು ಕೃಷಿಭೂಮಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಈ ಅಧ್ಯಯನದ ಸಂಶೋಧಕರು ಹಿಂದಿನ 90 ಅಧ್ಯಯನಗಳನ್ನು ಮತ್ತು 27 ದೇಶಗಳ 1480 ಕೃಷಿಭೂಮಿಗಳನ್ನು ವಿಶ್ಲೇಷಿಸಿದ್ದಾರೆ. ಬಯೋಡೈವರ್ಸಿಟಿ ಇಂಟರ್ನ್ಯಾಷನಲ್ ಮತ್ತು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎನ್ವೈರ್ನ್ಮೆಂಟ್ (ATREE) - ಬೆಂಗಳೂರಿನಲ್ಲಿರುವ ಈ ಎರಡೂ ಸಂಸ್ಥೆಗಳೂ ಕೂಡ ಈ ಅಧ್ಯಯನದ ಭಾಗವಾಗಿದ್ದು, ಪ್ರಮುಖ ಪಾತ್ರ ನಿರ್ವಹಿಸಿವೆ.

" ಪರಿಸರ ವ್ಯವಸ್ಥೆಗಳಲ್ಲಿರುವ ಜೀವವೈವಿಧ್ಯವು ನಿಜಜೀವನದಲ್ಲಿ ಪರಿಸರ ವ್ಯವಸ್ಥೆಯ ಸೇವೆಗಳನ್ನು ಹೇಗೆ ಉಳಿಸಿಕೊಳ್ಳುತ್ತವೆ ಮತ್ತು ಒದಗಿಸುತ್ತವೆ ಎಂಬ ಜಾಗತಿಕ ಮಟ್ಟದ ಪ್ರಶ್ನೆಗೆ ಉತ್ತರಿಸಲು ಪ್ರಪಂಚದ ವಿವಿಧ ಪ್ರದೇಶಗಳು, ಭೂದೃಶ್ಯಗಳು ಮತ್ತು ಸಂಬಂಧಿತ ಸ್ಥಳಗಳಿಂದ ಮಾಹಿತಿ ಬೇಕಾಗುತ್ತದೆ" ಎನ್ನುತ್ತಾರೆ ಈ ಅಧ್ಯಯನದ ಲೇಖಕರಲ್ಲೊಬ್ಬರಾದ ಇಟಲಿಯ ಇನ್‌ಸ್ಟಿಟ್ಯೂಟ್ ಫಾರ್ ಆಲ್ಪೈನ್ ಎನ್ವೈರ್ನ್ಮಂಟ್ನ ಡಾ. ಮ್ಯಾಟಿಯೊ ಡೈನೀಸ್.

ಸಾಂಪ್ರದಾಯಿಕ ಕೃಷಿ ಮತ್ತು ಸಾವಯವ ಕೃಷಿಯಂತಹ ವಿಭಿನ್ನ ಕೃಷಿ ಪದ್ಧತಿಗಳನ್ನು ಬಳಸಿಕೊಂಡು ಬೆಳೆದ ಹಣ್ಣು, ಬೇಳೆಕಾಳುಗಳು ಮತ್ತು ಆಹಾರವಾಗಿ ಸೇವಿಸಲು ಯೋಗ್ಯವಾದ ಬೀಜ(ನಟ್)ಗಳಂತಹ ಸುಮಾರು ಮೂವತ್ತು ಬೆಳೆಗಳನ್ನು, ಅಧ್ಯಯನ ತಂಡವು ಅಭ್ಯಸಿಸಿದೆ. ಆ ಜಮೀನಿನ ಸುತ್ತ ಒಂದು ಕಿಲೋಮೀಟರ್ ತ್ರಿಜ್ಯದೊಳಗಿನ, ಅಂದರೆ, ಕೀಟಗಳು ಸಂಚರಿಸುವಷ್ಟು ನಿರ್ದಿಷ್ಟ ಅಂತರದ ನೈಸರ್ಗಿಕ ಭೂಪ್ರದೇಶವನ್ನು ಅಧ್ಯಯನ ಮಾಡಿದೆ. ಸಂಶೋಧಕರು, ಯಾವ ಕೀಟ ಪ್ರಭೇದಗಳು ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಅರಿತು, ಒಟ್ಟಾರೆ ಕೀಟಸಮೃದ್ಧಿಯ ಮಟ್ಟವೇನು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ವ್ಯಾಪಕವಾದ ವಿಧಾನಗಳನ್ನು ಬಳಸಿದರು. ಹಣ್ಣು ಅಥವಾ ಬೀಜದ ಇಳುವರಿಯನ್ನು ವಿಶ್ಲೇಷಿಸುವ ಮೂಲಕ ಪರಾಗಸ್ಪರ್ಶಕಗಳ ಪರಿಣಾಮಕಾರಿತ್ವ ಮತ್ತು ಬೆಳೆ ಹಾನಿಯನ್ನು ಅಳೆಯುವ ಮೂಲಕ ನೈಸರ್ಗಿಕ ಶತ್ರುಗಳ ಉಪಸ್ಥಿತಿಯ ಬಗ್ಗೆಯೂ ಅವರು ಮಾಹಿತಿ ಸಂಗ್ರಹಿಸಿದರು.

ಹೆಚ್ಚಿನ ಕೀಟ ಪ್ರಭೇದಗಳ ಸಮೃದ್ಧಿ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಪರಾಗಸ್ಪರ್ಶಕ ಮತ್ತು ನೈಸರ್ಗಿಕ ಶತ್ರುಗಳು ಇದ್ದರೆ, ಪರಾಗಸ್ಪರ್ಶ ಮತ್ತು ಕೀಟ ನಿಯಂತ್ರಣವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.  ಇದಲ್ಲದೆ, ಕೃಷಿಭೂಮಿಗಾಗಿ ಕಾಡು - ಹುಲ್ಲುಗಾವಲುಗಳನ್ನು ಸಪಾಟುಗೊಳಿಸಿ ಸರಳೀಕರಿಸುವುದು, ಪರಾಗಸ್ಪರ್ಶಕ ಮತ್ತು ನೈಸರ್ಗಿಕ ಶತ್ರುಗಳ ಸಮೃದ್ಧಿಯನ್ನು ಕಡಿಮೆಗೊಳಿಸಿ, ಇದರಿಂದಾಗಿ ಪರೋಕ್ಷವಾಗಿ ಬೆಳೆ ಇಳುವರಿ ಕೂಡ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ.  ಕೀಟ ಪ್ರಭೇದಗಳ ಸಮೃದ್ಧಿ ಹಾಗೂ ಬೆಳೆ ಇಳುವರಿಯ ನಡುವೆಯೂ ಇಂತಹದ್ದೇ ಮಾದರಿಯ ಸಂಬಂಧ ಕಂಡುಬಂದಿದೆ. ಇದಲ್ಲದೆ, ಕೀಟನಾಶಕಗಳನ್ನು ಬಳಸಿದ ಹೊಲಗಳಲ್ಲಿ, ನೈಸರ್ಗಿಕ ಶತ್ರುಗಳ ಸಮೃದ್ಧಿಯು ಯಾವುದೇ ಪರಿಣಾಮವನ್ನು ಬೀರಲಿಲ್ಲ ಏಕೆಂದರೆ ಕೀಟನಾಶಕದ ಬಳಕೆಯು ನೈಸರ್ಗಿಕ ಶತ್ರುಗಳ ಪ್ರಭಾವವನ್ನು ಮರೆಮಾಡುತ್ತಿತ್ತು. ಜೊತೆಗೆ, ಈ ಅಧ್ಯಯನದ ಸಮಯದಲ್ಲಿ ಕಂಡುಬಂದ ಮತ್ತೊಂದು ವಿಚಾರವೆಂದರೆ, ನೈಸರ್ಗಿಕ ಶತ್ರುಗಳು ಹೆಚ್ಚು ಕಡಿಮೆ ಕೀಟನಾಶಕಗಳಂತೆಯೇ ಪರಿಣಾಮವನ್ನು ಬೀರಿ ಕೀಟಗಳ ನಿಯಂತ್ರಣ ಮಾಡುತ್ತದೆ ಎಂದು; ಅಂದರೆ, ಹಾನಿಕಾರಕ ರಾಸಾಯನಿಕ ಕೀಟನಾಶಕಗಳನ್ನು ಬಳಸುವ ಬದಲು ನೈಸರ್ಗಿಕ ಕೀಟನಿಯಂತ್ರಣದ ಮೊರೆಹೋಗುವುದೇ ಸರ್ವರೀತಿಯಲ್ಲೂ ಲಾಭದಾಯಕವಲ್ಲವೇ?

ನೈಸರ್ಗಿಕ ಪರಿಸರ ವ್ಯವಸ್ಥೆಗಳಲ್ಲಿ, ಕೆಲವು ಪ್ರಬಲ ಪ್ರಭೇದಗಳಿರುತ್ತವೆ ಮತ್ತು ಅನೇಕ ಅಪರೂಪದ ಪ್ರಭೇದಗಳಿರುತ್ತವೆ. ಆದರೆ, ಪರಾಗಸ್ಪರ್ಶ ಮತ್ತು ಕೀಟ ನಿಯಂತ್ರಣವ ನಡೆಸಲು ಈ ಪ್ರಬಲ ಪ್ರಭೇದಗಳೇ ಸಾಕಾಗುತ್ತದೆಯೇ ಇಲ್ಲವೇ? - ಎಂದು ಇದುವರೆಗೂ ತಿಳಿದಿರಲಿಲ್ಲ. ಪ್ರಸ್ತುತ ಅಧ್ಯಯನವು, ಭೂದೃಶ್ಯದ ಸರಳೀಕರಣವು ಈ ಸಮತೋಲನವನ್ನು ಬದಲಾಯಿಸುತ್ತದೆ ಮತ್ತು ಕೆಲವು ನಿರ್ದಿಷ್ಟ ಬೆಳೆಗಳನ್ನು ಪರಾಗಸ್ಪರ್ಶ ಮಾಡುವಲ್ಲಿ ಪರಿಣತಿ ಹೊಂದಿರುವ ಅಪರೂಪದ ಪ್ರಭೇದಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿದಿದೆ. ಈ ಭೂದೃಶ್ಯದಲ್ಲಿ ಮಾಡಲಾದ ಬದಲಾವಣೆಯು, ಅನೇಕ ಸಸ್ಯಗಳಿಗೆ ಭೇಟಿ ನೀಡುವ ಮತ್ತು ಹೆಚ್ಚು ಹೇರಳವಾಗಿರುವ ಕೀಟಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿಲ್ಲ ಎಂಬುದೂ ಕಂಡುಬಂದಿದೆ.

ಹಾಗಾದರೆ, ಕೃಷಿ ಭೂಮಿಯಲ್ಲಿ ಜೀವವೈವಿಧ್ಯವನ್ನು ನಾವು ಹೇಗೆ ತರಬಹುದು?

"ಕಾಡುಹೂವು - ಬೇಲಿಯ ಹೂ, ಪೊದೆ, ಮುಳ್ಳುಗಿಡ, ಮರಗಳನ್ನು ಅಲ್ಲಲ್ಲಿ ಕೃಷಿಭೂಮಿಯ ಅಂಚಿನಲ್ಲಿ ಬೆಳೆಯಲು ಅನುವು ಮಾಡಿಕೊಟ್ಟರೂ ಸಾಕು, ಸರಳವಾಗಿ ವೈವಿಧ್ಯೀಕರಣವು ಸಾಧ್ಯವಾಗುತ್ತದೆ. ಈ ಪ್ರಯೋಜನಕಾರಿ ಪ್ರಭೇದಗಳಿಗೆ ನಮ್ಮ ಹೊಲಗಳಲ್ಲಿ ವಾಸಿಸಲು ತಾವು(ಸ್ಥಳ) ನೀಡುವ ಮೂಲಕ, ಈ ಅರೆ ನೈಸರ್ಗಿಕ ಆವಾಸಸ್ಥಾನಗಳ ಜಾಲವನ್ನು ರಚಿಸುವುದು ಸಾಧ್ಯವಾಗುತ್ತದೆ; ಇದರ ಮೂಲಕ, ಹೆಚ್ಚು ಸುಸ್ಥಿರ ಕೃಷಿಯತ್ತ ಜಗತ್ತು ಇಡಲೇಬೇಕಾದ ಹೆಜ್ಜೆಯನ್ನು ಮುಂದಿಟ್ಟು, ಆಹಾರ ಉತ್ಪಾದನೆ ಮತ್ತು ಪರಿಸರ ಸಂರಕ್ಷಣೆ - ಈ ಎರಡರ ಸಮನ್ವಯ ಸಾಧಿಸುವ ಗುರಿ ಈಡೇರುತ್ತದೆ. ಇದಕ್ಕೆ ರೈತರು, ನಾಗರಿಕರು, ಲಾಭೋದ್ದೇಶವಿಲ್ಲದ  ಸರ್ಕಾರೇತರ ಮತ್ತು ಸರ್ಕಾರಿ ಸಂಸ್ಥೆಗಳ ಸಾಮೂಹಿಕ ಭಾಗವಹಿಸುವಿಕೆ ಅಗತ್ಯವಿರುತ್ತದೆ ”ಎಂದು ಡಾ ಡೈನೀಸ್ ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಭೂದೃಶ್ಯಗಳನ್ನು ವೈವಿಧ್ಯಗೊಳಿಸುವುದರಿಂದ ಪರಿಸರಕ್ಕೆ ಅಗತ್ಯವಾದ ಜೀವವೈವಿಧ್ಯವನ್ನು ಹೇಗೆ ತರಬಹುದು ಎಂದು ಅಧ್ಯಯನವು ತೋರಿಸಿದ್ದು, ಸಂಶೋಧಕರು ಮುಂದಿನ ದಿನಗಳಲ್ಲಿ ಈ ಸಂಬಂಧವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಭರವಸೆ ಹೊಂದಿದ್ದಾರೆ.

" ಕೃಷಿಭೂಮಿಗಳ ಸುತ್ತ ಜೀವವೈವಿಧ್ಯತೆಯನ್ನು ಉತ್ತೇಜಿಸಲು ಬೇಕಾದ ವೆಚ್ಚಗಳನ್ನು ನಿಭಾಯಿಸುವುದು ಹೇಗೆ? -  ಎಂಬಂತಹ ರೈತರಿಗೆ ಹೆಚ್ಚು ಪ್ರಸ್ತುತವಾದ ಪ್ರಶ್ನೆಗಳ ಬಗ್ಗೆ  ಭವಿಷ್ಯದ ಅಧ್ಯಯನಗಳು ಗಮನಹರಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ತಾತ್ತ್ವಿಕವಾಗಿ, ವೆಚ್ಚಗಳು ಮತ್ತು ಪ್ರಯೋಜನಗಳ ‘ಸಂದರ್ಭ-ಅವಲಂಬನೆ’ಯನ್ನು ಅರಿಯಲು, ಇದನ್ನು ಹಲವಾರು ಸನ್ನಿವೇಶಗಳ ಅಡಿಯಲ್ಲಿ ಅಧ್ಯಯನ ಮಾಡಬೇಕು" ಎಂದು ತಮ್ಮ ಮಾತು ಮುಗಿಸುತ್ತಾರೆ ಡಾ ಡೈನೀಸ್. 

ಸೌಹಾರ್ದಯುತ ನೆರೆಹೊರೆಯವರು ಯಾರಿಗೆ ಬೇಡ ಹೇಳಿ? ಅವರಿಗೆ ನಾವು - ನಮಗೆ ಅವರು ಕಷ್ಟಸುಖಕ್ಕೆ ಆದಾಗ ತಾನೇ ನೆಮ್ಮದಿಯ ಸಿಹಿಹೂರಣದ ಸೇವನೆ ಸಾಧ್ಯ? ಹಾಗೇ, ಜೀವವೈವಿಧ್ಯ ಬಿಂಬಿಸುವ ಅನೇಕ ಕಾಡುಮರ, ಕುರುಚಲು ಪೊದೆಗಳಂತಹ ನೆರೆಹೊರೆಯವರ ಬೇಲಿಯ ನಡುವೆ ಅರಳುವ ಬೆಳೆಯ ಇಳುವರಿಯ ಹೆಚ್ಚಳ ಜೊತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯ ಎಂದು ತಿಳಿಸಿದ ಈ ಅಧ್ಯಯನ ನಿಜಕ್ಕೂ ಶ್ಲಾಘನೀಯವೇ ಸರಿ.