ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತೀಯ ದ್ರಾವಿಡ ಭಾಷಾ ಕುಟುಂಬದ ವಯಸ್ಸು ೪೫೦೦ ವರ್ಷಗಳು!

Read time: 1 min
ಬೆಂಗಳೂರು
21 ಮೇ 2018

ವೈವಿಧ್ಯತೆಯಲ್ಲಿ ಶ್ರೀಮಂತವೆನಿಸಿದ ತಾಣವಾದ ಭಾರತದಲ್ಲಿ ಹಲವಾರು ಬಗೆಯ ಸಂಸ್ಕೃತಿಗಳನ್ನು ನಾವು ಕಾಣಬಹುದು. ಇಲ್ಲಿ ಮಾತನಾಡಲಾಗುವ ಹೆಚ್ಚಿನ ಸಂಖ್ಯೆಯ ಭಾಷೆಗಳೇ ಇದಕ್ಕೆ ಒಂದು ಪ್ರಮಾಣಪತ್ರವಾಗಿದೆ. ಈ ಭಾಷೆಗಳನ್ನು ಕಲಿಯುವುದು ಆಸಕ್ತಿಕರವೇನೋ ಹೌದು; ಜೊತೆಗೇ, ಅವುಗಳನ್ನು ಅಧ್ಯಯನ ಮಾಡುವುದು ಇನ್ನೊಂದು ಕಾರಣಕ್ಕಾಗಿ ಆಕರ್ಷಕವಾಗಿದೆ; ಅದೇನೆಂದರೆ ಭಾರತೀಯ ಆರ್ಯ ಭಾಷಿಕರು ಕ್ರಿಸ್ತ ಪೂರ್ವ ೧೫೦೦ರಲ್ಲಿ ಆಗಮಿಸುವ ಮೊದಲು, ಭಾರತೀಯ ಉಪಖಂಡದಲ್ಲಿ ವಾಸವಾಗಿದ್ದ ದ್ರಾವಿಡರ ಅಲ್ಪ-ಪ್ರಸಿದ್ಧ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಈ ಭಾಷೆಗಳು ನಮಗೆ ಸಹಾಯ ಮಾಡುತ್ತವೆ. ಇಲ್ಲಿಯವರೆಗೆ, ದ್ರಾವಿಡರ ಮೂಲ ಮತ್ತು ದೇಶದಾದ್ಯಂತ ಅವರ ಪ್ರಸರಣದ ಬಗ್ಗೆ ಹೆಚ್ಚು ತಿಳಿದಿಲ್ಲ. ಈಗ, ನೆದರ್ಲೆಂಡ್ಸ್ನ 'ಮ್ಯಾಕ್ಸ್ ಪ್ಲ್ಯಾಂಕ್ ಮನೋವೈಜ್ಞಾನಿಕ ಭಾಷಾಶಾಸ್ತ್ರ ಸಂಸ್ಥೆ'ಯ ಸಂಶೋಧಕರು ನಡೆಸಿದ  ಒಂದು ಅಧ್ಯಯನದಲ್ಲಿ, ದ್ರಾವಿಡ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ದ್ರಾವಿಡ ಭಾಷಾವೃಕ್ಷವನ್ನು ಪುನರ್ನಿರ್ಮಿಸಿದ್ದಾರೆ. ಆಗ ದೊರೆತ ಅಚ್ಚರಿಯ ಫಲಿತಾಂಶವೆಂದರೆ, ದ್ರಾವಿಡ ಭಾಷೆಗಳು ೪೫೦೦ ವರ್ಷಗಳಷ್ಟು ಹಳೆಯದಾಗಿದೆ! ಇದರ ಅರ್ಥವೇನು ಗೊತ್ತೇ?

ದ್ರಾವಿಡ ಭಾಷಾ ಕುಟುಂಬವು, ವಿಶ್ವದ ಪ್ರಾಥಮಿಕ ಭಾಷಾ ಕುಟುಂಬಗಳಲ್ಲಿ ಒಂದಾಗಿದೆ. ಇದು ದಕ್ಷಿಣ, ಮಧ್ಯ ಮತ್ತು ಉತ್ತರ ಭಾರತದ ಸುಮಾರು ೨೦೦ ದಶಲಕ್ಷ ಜನರು ಮಾತನಾಡುವ ೮೦ ಭಾಷೆಗಳನ್ನು ಹೊಂದಿದೆ. ಅಚ್ಚರಿಯ ವಿಚಾರವೆಂದರೆ, ನೇಪಾಳದ 'ಕುರುಖ್' ಭಾಷೆ ಮತ್ತು ಪಾಕಿಸ್ತಾನ-ಅಫ್ಘಾನಿಸ್ತಾನದ 'ಬ್ರಾಹುಯಿ' ಭಾಷೆಗಳೂ, ದ್ರಾವಿಡ ಕುಟುಂಬಕ್ಕೆ ಸೇರಿದವು. ದ್ರಾವಿಡ ಭಾಷಾ ಕುಟುಂಬದ ಕೆಲವು ಭಾಷೆಗಳು ಸುಮಾರು ೨೦೦೦ ವರ್ಷಗಳ ಹಿಂದೆಯೇ ಬರೆಯಲ್ಪಟ್ಟಿವೆ; ಅಷ್ಟೇ ಅಲ್ಲದೇ, ವೈದಿಕ ಸಂಸ್ಕೃತ ಮತ್ತು ಆಧುನಿಕ ಭಾರತೀಯ ಆರ್ಯ ಭಾಷೆಗಳ ಮೇಲೆ ಪ್ರಭಾವ ಬೀರಿವೆ ಎಂದೂ ತಿಳಿದುಬಂದಿದೆ; ಹೀಗಾಗಿ ಭಾರತೀಯ-ಯುರೋಪಿಯನ್ ಮತ್ತು ಆಸ್ಟ್ರೋಏಷಿಯಾಟಿಕ್ ಭಾಷಾ ಕುಟುಂಬಗಳ ನಡುವಿನ ಸಂಪರ್ಕದಲ್ಲಿ ಕೊಂಡಿಯಾಗಿ ಮಹತ್ವದ ಪಾತ್ರ ವಹಿಸುತ್ತವೆ.

ಈ ಹಿಂದೆ ನಡೆದ ಭಾಷಾ ಅಧ್ಯಯನಗಳು, ವಿವಿಧ ದ್ರಾವಿಡ ಭಾಷೆಯ ಉಪಗುಂಪುಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿವೆ ಮತ್ತು ಭಾಷಾ ಕುಟುಂಬದ ನಾಲ್ಕು ಪ್ರಮುಖ ಶಾಖೆಗಳನ್ನು ಗುರುತಿಸಿವೆ. 'ದಕ್ಷಿಣ ದ್ರಾವಿಡ ೧' ಉಪವಿಭಾಗವು ತಮಿಳು, ಮಲಯಾಳಂ, ಇರುಲಾ, ಕೊಡವ, ಕುರುಂಬ, ಕೋಟಾ, ತೋಡಾ, ಬಡಗಾ, ಕನ್ನಡ, ಕೋರಗಾ ಮತ್ತು ತುಳುಗಳನ್ನು ಒಳಗೊಂಡಿದೆ. 'ದಕ್ಷಿಣ ದ್ರಾವಿಡ ೨' ಉಪಗುಂಪು ತೆಲುಗು, ಗೊಂಡಿ ಮತ್ತು ಕುವಿ ಮತ್ತಿತರ ಭಾಷೆಗಳನ್ನು ಒಳಗೊಂಡಿದೆ. 'ಮಧ್ಯ ದ್ರಾವಿಡ' ಉಪಗುಂಪು ಗಡಾಬಾ, ಪಾರ್ಜಿ ಮತ್ತು ಕೋಲಾಮಿಗಳನ್ನೂ ಒಳಗೊಂಡಿದ್ದು 'ಉತ್ತರ ದ್ರಾವಿಡ' ಉಪಗುಂಪು ಬ್ರಾಹುಯಿ, ಕುರುಖ್ ಮತ್ತು ಮಾಲ್ಟೋ ಭಾಷೆಗಳನ್ನು ಹೊಂದಿದೆ.

ದ್ರಾವಿಡ ಭಾಷಾ ಕುಟುಂಬದ ಕುರಿತಾಗಿ ಒಂದು ಕುತೂಹಲಕಾರಿ ಸಂಗತಿಯೆಂದರೆ, ಇಲ್ಲಿ ಹಲವು ಬಹಳ ಸಣ್ಣ ಗುಂಪುಗಳು ಮಾತನಾಡುವ ಭಾಷೆಗಳಿದ್ದು, ಅವನ್ನು ಉತ್ತಮವಾಗಿ ಅಧ್ಯಯನ ಮಾಡಲಾಗಿಲ್ಲ. 'ರಾಯಲ್ ಸೊಸೈಟಿ ಓಪನ್ ಸೈನ್ಸ್' ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನದ ಸಂಶೋಧಕರು, ದ್ರಾವಿಡ ಭಾಷಾ ಕುಟುಂಬದ ವಂಶವೃಕ್ಷವನ್ನು ಪ್ರಾಥಮಿಕ ದತ್ತಾಂಶ ಬಳಸಿಕೊಂಡು ಪುನರ್ನಿರ್ಮಿಸಿದ್ದಾರೆ; ಈ ಕಾರಣಕ್ಕಾಗಿ ಅವರು ಈ ಭಾಷೆಗಳ ಪ್ರತಿನಿಧಿಗಳಾದ ಭಾಷಾ ಮಾದರಿಯ ಮೇಲೆ ತಮ್ಮ ಅಧ್ಯಯನವನ್ನು ಕೇಂದ್ರೀಕರಿಸಿದ್ದಾರೆ.

"ದ್ರಾವಿಡ ಭಾಷೆಗಳ ವೈವಿಧ್ಯಮಯ ಮಾದರಿಯ ಸ್ಥಳೀಯ ಭಾಷಿಕರಿಂದ ೧೦೦ ಮೂಲಭೂತ ಶಬ್ದಗಳನ್ನು ನಾವು ಸಂಗ್ರಹಿಸಿದೆವು" ಎಂದು ಈ ಅಧ್ಯಯನದ ಲೇಖಕಿ ಡಾ. ಆನ್ ಮೇರಿ ವರ್ಕರ್ಕ್ ವಿವರಿಸುತ್ತಾರೆ. ಹೀಗೆ ಸಂಗ್ರಹಿಸಲಾದ ಪದಗಳನ್ನು ಹೋಲಿಸಲು, ಭಾಷಾಶಾಸ್ತ್ರಜ್ಞ ಮೋರಿಸ್ ಸ್ವದೇಶ್ ಅವರು ರೂಪಿಸಿದ, ಕಾಲಕ್ರಮೇಣ ಬದಲಾವಣೆಗಳೊಂದಿಗೆ ಅಸ್ತಿತ್ವದಲ್ಲಿರುವ ಭಾಷೆಗಳ ನಡುವಿನ ಸಂಬಂಧವನ್ನು ನಿರ್ಣಯಿಸುವಲ್ಲಿ ಸಹಾಯ ಮಾಡುವ, 'ಸ್ವದೇಶ್ ಯಾದಿ' ಎಂಬ ಪ್ರಾಥಮಿಕ ಶಬ್ದಕೋಶದ ಸಂಕಲನವನ್ನು ಬಳಸಿಕೊಂಡರು.

ದ್ರಾವಿಡ ಭಾಷಾ ಕುಟುಂಬದ ಬಗ್ಗೆ ಈ ಹಿಂದೆ ನಡೆದ ಅಧ್ಯಯನಗಳು, ನಿಘಂಟಿನಿಂದ ಪಡೆದ ದತ್ತಾಂಶವನ್ನುಬಳಸಿದ್ದರೂ, ಈ ಅಧ್ಯಯನದಲ್ಲಿ, ಆ ಹಳೆಯ ದತ್ತಾಂಶದೊಂದಿಗೆ, ಸುಧಾರಿತ ಅಂಕಿಅಂಶಗಳ ವಿಶ್ಲೇಷಣೆಯೊಂದಿಗೆ ಸಂಗ್ರಹಿಸಲಾದ ಪ್ರಾಥಮಿಕ ದತ್ತಾಂಶವನ್ನೂ ಬಳಸಿಕೊಳ್ಳಲಾಗಿದೆ. "ಸ್ವದೇಶ್ ಅವರ ೧೦೦ 'ಪರಿಕಲ್ಪನೆ ಪರಿಶೀಲನೆ ಪದಗಳ ಯಾದಿ'ಯನ್ನು ೨೦ ಭಾಷೆಗಳ ಶಾಬ್ದಿಕ ದತ್ತಾಂಶವನ್ನು ಸಂಗ್ರಹಿಸಿ ಪರಿಶೀಲಿಸಲು ಬಳಸಲಾಯಿತು. ಸಾಧ್ಯವಾದಲ್ಲೆಲ್ಲಾ, ಪ್ರತಿಸ್ಪಂದನಗಳ ಶ್ರವ್ಯ ಮತ್ತು ಲಿಖಿತ ದಾಖಲೆಯನ್ನು ಇರಿಸಿಕೊಳ್ಳಲಾಗಿದೆ. ಕೆಲವು ಭಾಷೆಗಳ ಮಾಹಿತಿದಾರರು, ತಮ್ಮ ಭಾಷೆಯಲ್ಲದೇ ಮತ್ತೊಂದು ಭಾಷೆಯ ಲಿಪಿಯನ್ನು ಉಪಯೋಗಿಸಿ ಮಾಹಿತಿ ದಾಖಲಿಸಲು ಒಪ್ಪಲಿಲ್ಲ. ಹೀಗೆ ದೊರೆತ ಶ್ರವ್ಯ ಮತ್ತು ಲಿಖಿತ ದಾಖಲೆಗಳನ್ನು ಅಂತರರಾಷ್ಟ್ರೀಯ ಫೋನೆಟಿಕ್ ಅಕ್ಷರಕ್ಕೆ ನಕಲು ಮಾಡಲಾಯಿತು. ನಂತರ, 'ದ್ರಾವಿಡ ವ್ಯುತ್ಪತ್ತಿಶಾಸ್ತ್ರ ನಿಘಂಟ'ನ್ನು ಬಳಸಿ ಪ್ರತಿಕ್ರಿಯೆಗಳನ್ನು ತೌಲನಿಕವಾಗಿ ಕೋಡಿಂಗ್ ಮಾಡಲಾಗಿದೆ" ಎಂದು ಈ ಅಧ್ಯಯನದಲ್ಲಿ ಬಳಸಿದ ವಿಧಾನಗಳನ್ನು ವಿವರಿಸುತ್ತಾರೆ ಡಾ. ವರ್ಕರ್ಕ್.

ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳದಲ್ಲಿನ ದ್ರಾವಿಡ ಭಾಷೆಗಳ ನಕ್ಷೆ ಎಥ್ನೋಲಾಗ್ ನಿಂದ ಅಳವಡಿಸಿಕೊಂಡಿದೆ (Source:rsos.royalsocietypublishing.org R. Soc. open sci. 5: 171504)

ಸಂಶೋಧಕರು 'ಬೇಯೆಸಿಯನ್ ಜಾತಿವಿಕಸನೀಯ ನಿರ್ಣಯ ವಿಧಾನ'ವನ್ನು ಬಳಸಿದರು; ಇದು ಒಂದು ಸಂಭವನೀಯತೆ ಮತ್ತು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಕಾರ್ಯನಿರ್ವಹಿಸುವ ವಿಧಾನವಾಗಿದ್ದು, ಲಭ್ಯ ದತ್ತಾಂಶ ಆಧರಿಸಿ ಜೀವಪ್ರಭೇದಗಳ ಅಥವಾ ಭಾಷೆಗಳ ವಿಕಸನೀಯ ಇತಿಹಾಸ ಮತ್ತು ಸಂಬಂಧಗಳನ್ನು ಅಂದಾಜಿಸುತ್ತದೆ. ಪರಿಸರ ವಿಜ್ಞಾನದಲ್ಲಿ ಸಾಮಾನ್ಯವಾಗಿ ಬಳಸಲ್ಪಟ್ಟಿರುವ ಈ ವಿಧಾನವು, ಏಕೈಕ 'ಉತ್ತಮ' ಭಾಷಾವೃಕ್ಷಕ್ಕಿಂತಾ, ಹಲವು  ಸಂಭವನೀಯ ಭಾಷಾವೃಕ್ಷಗಳನ್ನು ತಯಾರಿಸುತ್ತದೆ.

ನಂತರ, ಈ ಶೋಧನೆಗಳನ್ನು ಸಾಮಾನ್ಯವಾಗಿ ಬಳಸುವ ಕೃಷ್ಣಮೂರ್ತಿ ಅವರ ಭಾಷಾವೃಕ್ಷಕ್ಕೆ ಹೋಲಿಸಲಾಗಿದೆ. ಕೃಷ್ಣಮೂರ್ತಿ ಅವರು ದ್ರಾವಿಡ ಭಾಷೆಗಳನ್ನು 'ದಕ್ಷಿಣ ೧ ಮತ್ತು ೨ ಉಪವಿಭಾಗ', 'ಮಧ್ಯ ಉಪವಿಭಾಗ' ಹಾಗೂ 'ಉತ್ತರ ಉಪವಿಭಾಗ' ಎಂಬ ಮೂರು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಿದ್ದಾರೆ. ಬಿ.ಕೃಷ್ಣಮೂರ್ತಿಯವರು ಒಬ್ಬ ಅತ್ಯುತ್ತಮ ಭಾಷಾಶಾಸ್ತ್ರಜ್ಞರಾಗಿದ್ದು, ದ್ರಾವಿಡ ಭಾಷೆಗಳ ಅಧ್ಯಯನದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರು ವಿವಿಧ ದ್ರಾವಿಡ ಭಾಷೆಗಳನ್ನು ಮತ್ತು ಅವುಗಳ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡಲು, ಆಧುನಿಕ ತೌಲನಿಕ ಭಾಷಾ ಸಿದ್ಧಾಂತವನ್ನು ಅನ್ವಯಿಸಿದ್ದಾರೆ. ದ್ರಾವಿಡ ಭಾಷೆಗಳ ಕುರಿತು ಹೆಚ್ಚಿನ ಅಧ್ಯಯನಗಳಲ್ಲಿ ಅವರ ಕೆಲಸದ ಫಲಿತಾಂಶಗಳನ್ನು ನಿರ್ಣಯಕರ್ತ ಎಂದು ಪರಿಗಣಿಸಲಾಗುತ್ತದೆ.

ಆದಾಗ್ಯೂ, ದ್ರಾವಿಡ ಭಾಷೆಗಳ ನಾಲ್ಕು ಉಪವಿಭಾಗಗಳಲ್ಲಿ, ದಕ್ಷಿಣ ೧ ಉಪವಿಭಾಗಕ್ಕೂ ಇತರ ಮೂರು ಗುಂಪುಗಳಿಗೂ ನಡುವೆ ಒಂದು ವಿಭಜನೆಯಿದೆ. ಇದು ೨೫೦೦ - ೩೦೦೦ ವರ್ಷಗಳ ಹಿಂದೆ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಕ್ರಿಸ್ತಪೂರ್ವ ೪೦೦೦ ರಿಂದ ೩೦೦೦ದ ನಡುವೆ ನಡೆದ ದಕ್ಷಿಣ ನವಶಿಲಾಯುಗ ನಾಗರಿಕತೆಯ ವಿಸ್ತರಣೆಯ ನಂತರ, ಈ ವಿದ್ಯಮಾನವು ಸಂಭವಿಸಿದೆ ಎಂದು ಈ ಅಧ್ಯಯನದ ಸಂಶೋಧಕರು ಕಂಡುಕೊಂಡಿದ್ದಾರೆ. ಆ ಅವಧಿಯಲ್ಲಿದ್ದ ಕೃಷಿ ಪದ್ದತಿಗಳು, ಈ ಅಧ್ಯಯನದ ಸಂಶೋಧನೆಗಳಿಗಾಗಿ, ಕೃಷಿ ಶಬ್ದಕೋಶದ ಮೂಲಕ ಬಾಹ್ಯ ಸಾಕ್ಷ್ಯಗಳನ್ನು ಒದಗಿಸುತ್ತವೆ.

ಸಂಶೋಧಕರು ಐತಿಹಾಸಿಕ ಮತ್ತು ಭಾಷಾಶಾಸ್ತ್ರದ ದತ್ತಾಂಶವನ್ನು ಕ್ರೂಡೀಕರಿಸಿ, ಲಿಖಿತ ದ್ರಾವಿಡ ಭಾಷೆಗಳು ಮೊದಲ ಬಾರಿಗೆ ಶಾಸನಗಳಲ್ಲಿ ಯಾವಾಗ ದೃಢೀಕರಿಸಲ್ಪಟ್ಟಿವೆ ಎಂಬುದನ್ನೂ ಪರಿಶೀಲಿಸಿ, ದ್ರಾವಿಡ ಭಾಷಾ ಕುಟುಂಬದ ವಯಸ್ಸನ್ನು ಅಂದಾಜು ಮಾಡಿ ಭಾಷಾವೃಕ್ಷವನ್ನು ರಚಿಸಿದರು. ಹೀಗೆ ರಚನೆಯಾದ ದ್ರಾವಿಡ ಭಾಷಾವೃಕ್ಷವು ಸೂಚಿಸಿವುದು, ದ್ರಾವಿಡ ಭಾಷೆಗಳು ಸರಿಸುಮಾರು ೪೫೦೦ ವರ್ಷಗಳಷ್ಟು ಹಳೆಯದು ಎಂದು! ಈ ಮಾಹಿತಿಯು ನಿಖರವಾಗಿ ಪುರಾತತ್ತ್ವ ವಿಜ್ಞಾನದ ಕಾಲಾನುಕ್ರಮದೊಂದಿಗೆ ಸಮೀಕೃತಗೊಂಡಿದ್ದು, ದಕ್ಷಿಣ ನವಶಿಲಾಯುಗಕ್ಕೆ ಸಂಬಂಧಿತ ಪುರಾತತ್ತ್ವವಿಜ್ಞಾನದ ಶೋಧನೆಗಳ ಜೊತೆಗೂಡಿ ಸಾಕ್ಷ್ಯಾಧಾರವನ್ನು ಮತ್ತಷ್ಟು ಬಲಪಡಿಸಿದೆ. ದಕ್ಷಿಣ ಭಾರತದಲ್ಲಿ ಕ್ರಿಸ್ತಪೂರ್ವ ೫೦೦೦ ವರ್ಷಗಳಿಂದ ೩೪೦೦ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ನವಶಿಲಾಯುಗದ ಕಾಲಾವಧಿಯು, ಆರಂಭಿಕ ಕೃಷಿಸಮುದಾಯಗಳಿಂದ ಉತ್ಪತ್ತಿಯಾದ ಬೂದಿ ದಿಬ್ಬಗಳಂತಹ ಮಾನವ ನಿರ್ಮಿತ ಕಲಾಕೃತಿಗಳಿಂದ ನಿರೂಪಿಸಲ್ಪಟ್ಟಿದೆ. ಆದಾಗ್ಯೂ, ಈ ವಿಶ್ಲೇಷಣೆಯು, ದ್ರಾವಿಡ ಭಾಷೆಗಳು ಯಾವಾಗ ಹುಟ್ಟಿಕೊಂಡವು ಮತ್ತು ನಂತರ ಅವು ಯಾವಾಗ  ವೈವಿಧ್ಯಮಯವಾಗುತ್ತಾ ಸಾಗಿದವು ಎಂಬುದನ್ನು ತಿಳಿಸುತ್ತದೆಯೇ ಹೊರತು  ಇದು ಎಲ್ಲಿ ಸಂಭವಿಸಿರಬಹುದು ಎಂಬುದರ ಬಗ್ಗೆ ಹೆಚ್ಚು ಮಾಹಿತಿ ನೀಡುವುದಿಲ್ಲ.

ಭಾಷೆಗಳ ಶಬ್ದಕೋಶದ ಒಂದು ನೇಬರ್ನೆಟ್ ದೃಶ್ಯೀಕರಣ. ಉಪಗುಂಪು ಅಂಗಸಂಸ್ಥೆಯನ್ನು ಬಣ್ಣಗಳಲ್ಲಿ ಕಾಣಬಹುದು: ಕೆಂಪು, ದಕ್ಷಿಣ I; ನೀಲಿ, ಮಧ್ಯ; ನೇರಳೆ, ಉತ್ತರ; ಹಳದಿ, ದಕ್ಷಿಣ II. (Source: rsos.royalsocietypublishing.org R. Soc. open sci. 5: 171504)

"ಪ್ರಸಕ್ತ ವಿಶ್ಲೇಷಣೆಯು, ಭಾಷೆಗಳ ವಂಶಾವಳಿಯ ತನಿಖೆಯಾಗಿದ್ದು, ಪ್ರಸ್ತುತ ಈ ಭಾಷೆಗಳನ್ನು ಭೌಗೋಳಿಕವಾಗಿ ಎಲ್ಲೆಲ್ಲಿ ಬಳಸಲಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ; ಹಿಂದೆ, ಈ ದ್ರಾವಿಡ ಭಾಷೆಗಳ ಪೂರ್ವಜರು ಭೌಗೋಳಿಕವಾಗಿ ಎಲ್ಲಿ ಈ ಭಾಷೆಗಳ ಬಳಕೆ ಮಾಡುತ್ತಿದ್ದರು ಎಂಬುದನ್ನು ಪುನರ್ನಿರ್ಮಿಸುವುದಿಲ್ಲ. ಆದಾಗ್ಯೂ, ಭೌಗೋಳಿಕ ಸಂಬಂಧ ಬೆಸೆಯುವುದು ಸಾಧ್ಯ ಮತ್ತು ಇನ್ನಿತರ ಕೆಲವು ಭಾಷಾ ಕುಟುಂಬಗಳಿಗೆ ಹೀಗೆ ಮಾಡಲಾಗಿದೆ" ಎನ್ನುತ್ತಾರೆ ಡಾ.ವರ್ಕರ್ಕ್.

ಭಾಷಾಶಾಸ್ತ್ರಕ್ಕೆ 'ಬೇಯೆಸಿಯನ್ ಜಾತಿವಿಕಸನೀಯ ನಿರ್ಣಯ ವಿಧಾನ'ವನ್ನು ಬಳಸಿರುವುದು, ಪ್ರಸ್ತುತ ಅಧ್ಯಯನವನ್ನು ಆಸಕ್ತಿದಾಯಕವಾಗಿಸುತ್ತದೆ. "ಈ ಅಧ್ಯಯನದಲ್ಲಿ ಬಳಸಿದ ವಿಧಾನವನ್ನು ೨೦೦೦ದ ಇಸವಿಯಿಂದ ಭಾಷಾಶಾಸ್ತ್ರದಲ್ಲಿ ಬಳಸಲಾಗುತ್ತಿದೆ. ಆದರೆ, ಐತಿಹಾಸಿಕ ಭಾಷಾಶಾಸ್ತ್ರಜ್ಞರು ಭಾಷೆಯ ಇತಿಹಾಸವನ್ನು ಅಧ್ಯಯನ ಮಾಡಲು 'ಪ್ರಮಾಣಿತ' ವಿಧಾನವನ್ನು ಬಳಸುತ್ತಾರಾದ್ದರಿಂದ, ಈ ಹೊಸ ವಿಧಾನದ ಬಗ್ಗೆ ಸಂದೇಹಿತರಾಗಿದ್ದಾರೆ. ಅವರು ಬಳಸುವ ಪ್ರಮಾಣಿತ ವಿಧಾನವು ತುಲನಾತ್ಮಕ ವಿಧಾನವಾಗಿದ್ದು, ಒಂದೇ ಪೂರ್ವಜ ಭಾಷೆಯನ್ನು ಹಂಚಿಕೊಂಡ ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳ ವೈಶಿಷ್ಟ್ಯವನ್ನು ಹೋಲಿಕೆ ಮಾಡುತ್ತಾ ವಿಶ್ಲೇಷಿಸುತ್ತದೆ; ಈ ಹಳೆಯ ವಿಧಾನವು, ಪೂರ್ವಜ ಭಾಷೆಯ ಗುಣಲಕ್ಷಣಗಳ ಆಧಾರದ ಮೇಲೆ, ಜನ್ಯ ಭಾಷೆಗಳ ಗುಣವಿಶೇಷಗಳನ್ನು ನಿರ್ಣಯಿಸುತ್ತದೆ. ಆದಾಗ್ಯೂ, ಈ ಹೊಸ ವಿಧಾನವು ಭಾಷಾಶಾಸ್ತ್ರಜ್ಞರ ಪ್ರಮಾಣಿತ ವಿಧಾನವನ್ನೂ ಆಧಾರವಾಗಿಸಿಕೊಂಡು ಮುನ್ನಡೆಯುತ್ತಿದ್ದು, ಅವರಿಂದ ಇತ್ತೀಚಿಗೆ ಸ್ವೀಕೃತವಾಗುತ್ತಿದೆ " ಎನ್ನುತ್ತಾರೆ ಡಾ.ವರ್ಕರ್ಕ್.

ದ್ರಾವಿಡ ಭಾಷಾ ಮೂಲದ ಅಂದಾಜು ಒದಗಿಸುವ ಕೆಲವೇ ಅಧ್ಯಯನಗಳಲ್ಲಿ, ಅತ್ಯುತ್ತಮ ಮಾಹಿತಿ ಬೆಂಬಲಿತ ವಿಶ್ಲೇಷಣೆಯ ಆಧಾರದ ಮೇಲೆ ನಡೆದ ಸಂಶೋಧನೆ ಇದಾಗಿದೆ. ಪ್ರಾಚೀನ ಏಷ್ಯಾದ ಮೂಲಕ ದಕ್ಷಿಣ ಏಷ್ಯಾಕ್ಕೆ ಸಂಚರಿಸಿದ ಜನಸಂಖ್ಯೆಯ ಬಗ್ಗೆ ಕೂಡ ಈ ಸಂಶೋಧನೆಯು ಬೆಳಕು ಚೆಲ್ಲಿದೆ. ಯುರೇಷಿಯಾದ ಇತಿಹಾಸವನ್ನು ಅರ್ಥೈಸಿಕೊಳ್ಳುವಲ್ಲಿ ಈ ದ್ರಾವಿಡ ಭಾಷೆಗಳ ಕಾಲನಿರ್ಣಯವು ಪ್ರಮುಖ ಹಂತಗಳಲ್ಲಿ ಒಂದು ಎಂಬುದನ್ನು ಈ ಸಂಶೋಧನೆಯು ಸಾಬೀತುಪಡಿಸಿದೆ.