ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಡಿಎನ್ಎ ಬೆರಳಚ್ಚು ತಂತ್ರಜ್ಞಾನದ ಸ್ಥೂಲ ಪರಿಚಯ

24 February, 2018 - 09:30

ನೀವು ಪತ್ತೇದಾರಿ ಕಾದಂಬರಿಗಳ, ಟಿವಿ ಕಾರ್ಯಕ್ರಮಗಳ ಅಭಿಮಾನಿಯೇ? ಹಾಗಿದ್ದಲ್ಲಿ, ಅಪರಾಧಿಯನ್ನು ಗುರುತಿಸಲು ಡಿಎನ್ಎ ಬೆರಳಚ್ಚು ವಿಧಾನವು ಅತ್ಯುಪಯುಕ್ತ ಸಾಧನ ಎಂದು ನೀವು ಖಂಡಿತ ತಿಳಿದಿರುತ್ತೀರಿ.

ಪ್ರತಿಯೊಬ್ಬರ ಜೀವಕೋಶಗಳಲ್ಲಿ ಇರುವ  ಡಿಎನ್ಎ ವಂಶವಾಹಿಯು, ಪ್ರತಿಯೊಬ್ಬರ ಬೆರಳಚ್ಚಿನಂತೆ ಅನನ್ಯವಾಗಿರುತ್ತದೆ; ಅಂದರೆ, ಹೇಗೆ ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರದ್ದು ಇರುವುದಿಲ್ಲವೋ, ಹಾಗೇ ಒಬ್ಬರ ಡಿಎನ್ಎ ವಂಶವಾಹಿಯಂತೆ ಮತ್ತೊಬ್ಬರದ್ದು ಇರುವುದಿಲ್ಲ. ಪ್ರತಿಯೊಬ್ಬರ ಡಿಎನ್ಎಯ ಒಳಗೆ, ಜೀನ್ ಗಳ ನಡುವೆ ಪುನರಾವರ್ತಿತ ಸರಣಿಗಳು ಇರುತ್ತವೆ; ಇವನ್ನು 'ತಾಂಡೆಮ್ ಪುನರಾವರ್ತನೆ' ಎನ್ನುತ್ತಾರೆ. ಪ್ರತಿ ಪುನರಾವರ್ತನೆಯ ಅನುಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವಿಶೇಷ ಪ್ರಯೋಗಾಲಯ ತಂತ್ರಗಳನ್ನು ಬಳಸಿಕೊಂಡು, ಪ್ರತಿ ವ್ಯಕ್ತಿಗೆ ಒಂದು ಅನನ್ಯ ಪುನರಾವರ್ತನೆಯ ಮಾದರಿಯನ್ನು ನಾವು ಕಂಡುಕೊಳ್ಳಬಹುದು. ಆದರೆ, ಅನುರೂಪ ಅವಳಿಗಳು ಇದಕ್ಕೆ ಒಂದು ಅಪವಾದವಾಗಿದ್ದು, ಒಂದೇ ಬಗೆಯ ಪುನರಾವರ್ತನೆಯ ಅನುಕ್ರಮವನ್ನು ಹೊಂದಿರುತ್ತಾರೆ.

ರಕ್ತ ಸಂಬಂಧಿಕರ ನಡುವೆ ಡಿಎನ್ಎ ಅನುಕ್ರಮಗಳು, ಪರಸ್ಪರ ಸಂಬಂಧವಿಲ್ಲದ ವ್ಯಕ್ತಿಗಳಿಗಿಂತ, ಹೆಚ್ಚು ಪ್ರಮಾಣದಲ್ಲಿ ಹೋಲುತ್ತವೆ. ಇದು ಹಲವಾರು ಪ್ರಕರಣಗಳಲ್ಲಿ ರಕ್ತ ಸಂಬಂಧಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಒಂದು ವ್ಯಕ್ತಿಯ ಡಿಎನ್ಎ ಹೊರತೆಗೆಯಲು ಆ ವ್ಯಕ್ತಿಯ ದೇಹದ ಸಣ್ಣ ಪ್ರಮಾಣದ ಜೀವಕೋಶ ಸಾಕು; ಸಣ್ಣ ಪ್ರಮಾಣದ ರಕ್ತ, ಕೂದಲು, ಚರ್ಮ, ಅಥವಾ ಕೆನ್ನೆಯ ಒಳಪದರದ ಕಣಗಳು - ಹೀಗೆ ಯಾವುದೇ ಜೀವಕೋಶವು ಡಿಎನ್ಎಯನ್ನುನಮಗೆ ಕೊಡಮಾಡುತ್ತದೆ. ಇಂತಹ ಜೀವಕೋಶಗಳಿಂದ ಡಿಎನ್ಎ ಯನ್ನು ಹೊರತೆಗೆದು, ಹಲವಾರು ಜೀವರಾಸಾಯನಿಕ ಪ್ರಕ್ರಿಯೆಗಳಿಗೆ ಒಳಪಡಿಸಿದ ನಂತರ, ಕೇವಲ ಪತ್ತೇದಾರಿಕೆ ನಡೆಸುವುದಷ್ಟೇ ಅಲ್ಲದೆ, ಅನುವಂಶಿಕ ಕಾಯಿಲೆಗಳ ಬಗ್ಗೆ ಭವಿಷ್ಯ ನುಡಿಯಬಹುದು ಕೂಡ; ಹೌದು! ಹಂಟಿಂಗ್ಟನ್ಸ್ ಕಾಯಿಲೆ, ಹೀಮೋಫಿಲಿಯಾ, ಸಿಸ್ಟಿಕ್ ಫೈಬ್ರೋಸಿಸ್ ಮತ್ತು ಕುಡಗೋಲು ಕೋಶ ರಕ್ತಹೀನತೆ ಮುಂತಾದ ಅನುವಂಶಿಕ ಕಾಯಿಲೆಗಳನ್ನು ಗುರುತಿಸಲು ಡಿಎನ್ಎ ಬೆರಳಚ್ಚು ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರ ಮುಖಾಂತರ, ಆ ರೋಗದ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಮುಂಚೆಯೇ ರೋಗನಿರ್ಣಯ ಮಾಡಲು ಸಾಧ್ಯವಾಗುತ್ತದೆ; ಇದರ ಫಲವಾಗಿ, ರೋಗದ ಉತ್ತಮ ನಿರ್ವಹಣೆಗೆ ಕೂಡ ಡಿಎನ್ಎ ಬೆರಳಚ್ಚು ತಂತ್ರಜ್ಞಾನ ಸಹಕಾರಿಯಾಗುತ್ತದೆ.