ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತದ ಮೇಲ್ಮೈ ನೀರಿನ ಪ್ರಮಾಣದಲ್ಲಿ ಹೆಚ್ಚಳ!

Read time: 1 min
ಬೆಂಗಳೂರು
2 Nov 2018

ಒಂದು ಕಾಲದಲ್ಲಿ ಶ್ವೇತವರ್ಣದ ಹಿಮವರ್ಷಗಳಿಂದ ಕಂಗೊಳಿಸುತ್ತಿದ್ದ, ಚಳಿಗಾಲದಲ್ಲಿ ತನ್ನದೆ ಆದ ವೈಶಿಷ್ಟ್ಯತೆಗಳಿಂದ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಶಿಮ್ಲಾದ ಪ್ರಖ್ಯಾತ ಪಟ್ಟಣ ಇಂದು ಇತಿಹಾಸದಲ್ಲೇ ಕಂಡು ಕೇಳರಿಯದ ನೀರಿನ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ೨೦೧೫-೧೬ ಅವಧಿಯಲ್ಲಿ ಆವರಿಸಿದ ಬರಗಾಲವು ಮರಾಠಾವಾಡಾದ ರೈತರ ಜೀವನವನ್ನು ಸಂಪೂರ್ಣವಾಗಿ ದಿಕ್ಕೆಟ್ಟಿಸಿತ್ತು. ಇಂತಹ ಅನೇಕ ಸಂದರ್ಭಗಳು, ಸನ್ನಿವೇಶಗಳು, ಭಾರತದಲ್ಲಿ ನದಿಗಳ ಮಹತ್ವ ಏನೆಂಬುದನ್ನು ತೋರಿಸಿಕೊಟ್ಟಿವೆ. ನದಿಗಳು ನಮ್ಮ ದೇಶದೊಂದಿಗೆ ಕೇವಲ ನೈಸರ್ಗಿಕವಾದ ಸಂಬಂಧವನ್ನು ಹೊಂದಿಲ್ಲ; ನಾಡಿನ ಜನರ ನಾಡಿಮಿಡಿತದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನೂ ಹೊಂದಿವೆ. ನೀರಿನ ಪ್ರಾಮುಖ್ಯತೆ ಇಂದು ವಿಶ್ವದೆಲ್ಲೆಡೆ ಹೆಚ್ಚುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಇಂತಹ ಸಂದರ್ಭದಲ್ಲಿ, ನೈಸರ್ಗಿಕವಾಗಿ ನದಿ-ಸರೋವರಗಳ ನೀರಿನ ಮಟ್ಟವು ಕಾಲಾಂತರದಲ್ಲಿ ಹೇಗೆ ಬದಲಾಗುತ್ತದೆ? ಇದರ ಹಿಂದಿನ ಕಾರಣಗಳೇನು? ನಿಸರ್ಗದ ಒಡಲೊಳಗೆ ಅವಿತಿರುವ ಇಂತಹ ರಹಸ್ಯಗಳನ್ನು ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವೊಂದರದಲ್ಲಿ, ನಿಖರವಾಗಿ ಇಂತಹ ಒಂದು ರಹಸ್ಯವನ್ನು ಅರ್ಥೈಸಿಕೊಳ್ಳುವ ಕಾರ್ಯವನ್ನು ಮಾಡುವಲ್ಲಿ ಅವರು ಸಫಲರಾಗಿದ್ದಾರೆ. ಕಳೆದ ೧೩ ವರ್ಷಗಳಿಂದ, ಭಾರತವೆಂಬ ಈ ಪರ್ಯಾಯ ದ್ವೀಪದ ನೀರಿನ ಮಟ್ಟವು ಹೇಗೆ ಬದಲಾಗಿದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ.

ಮೇಲ್ಮೈಜಲ ಮತ್ತು ಅಂತರ್ಜಲದ ಬಗ್ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ನಾವು ಉಪಯೋಗಿಸಲು ಯೋಗ್ಯವಾದ ನೀರು ಎಷ್ಟಿದೆ ಎಂಬುದನ್ನು ಲೆಕ್ಕಹಾಕಬಹುದು. ಆದರೆ, ಇಷ್ಟು ಬೃಹತ್ ಮಟ್ಟದ ಮಾಹಿತಿಯನ್ನು ಸರಿಯಾದ ಉಪಕರಣಗಳಿಲ್ಲದೆ ಸಂಗ್ರಹಿಸುವುದು ಬಹುದೊಡ್ಡ ಸವಾಲಿನ ಸಂಗತಿಯೇ;  ಆದ್ದರಿಂದ, ಸಂಶೋಧಕರು ವಿಶ್ವಾಸಾರ್ಹವಾದ, ನಿಖರತೆಯೊಂದಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ, ಉಪಗ್ರಹ ಆಧಾರಿತ ಅಧ್ಯಯನದೆಡೆಗೆ ಮುಖ ಮಾಡಿದರು. ಇಂತಹ ಮಾಹಿತಿಯನ್ನು ಒದಗಿಸುವ ಒಂದು ಅದ್ಭುತ ಪ್ರಯೋಗವೇ, ಗ್ರಾವಿಟಿ ರಿಕವರಿ ಮತ್ತು ಕ್ಲೈಮೇಟ್ ಎಕ್ಸ್ಪರಿಮೆಂಟ್ (GRACE). ಇದು ತಕ್ಕಡಿಯ ಹಾಗಿರುವ ಅವಳಿ ಉಪಗ್ರಹಗಳನ್ನು ಹೊಂದಿದ್ದು, ಭೂಮಿಯ ಗುರುತ್ವ ಕ್ಷೇತ್ರದಲ್ಲಿನ ವ್ಯತ್ಯಾಸವನ್ನು ಗುರುತಿಸಿ, ಭೂಮಿಯ ಮೇಲಿನ ನೀರಿನ ವಿತರಣೆಯಲ್ಲಾದ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. 

ಈ ಹಿಂದಿನ ಅಧ್ಯಯನಗಳೂ ಸಹ GRACEನಿಂದ ಲಭ್ಯವಾಗುವ ಮಾಹಿತಿಯನ್ನು ಉಪಯೋಗಿಸಿವೆ. ಇದಕ್ಕೂ ಮೊದಲು, ಉತ್ತರಭಾರತದಲ್ಲಿ ಅತಿಯಾದ  ಅಂತರ್ಜಲ ಬಳಕೆಯಿಂದ ಆಗುತ್ತಿರುವಂತಹ ಸವಕಳಿಯ ಬಗ್ಗೆ ಕೂಡ ಒಂದು ಅಧ್ಯಯನವು ವರದಿ ಮಾಡಿತ್ತು. ಈಗಿನ ಅಧ್ಯಯನದಲ್ಲಿ ವಿಜ್ಞಾನಿಗಳು, ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಹಿಡಿದು ಕೃಷ್ಣಾ ನದಿಯವರೆಗೆ ಅಲ್ಲಲ್ಲಿ ಹರಡಿರುವ ಜಲಾಶಯಗಳ ಬಗ್ಗೆ GRACEನ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ.

“ಸಾಮಾನ್ಯವಾಗಿ, ಮೇಲ್ಮೈ ನೀರಿನ ಪ್ರಮಾಣವನ್ನು, ನೀರು ಆವರಿಸಿರುವ ಭೂಮಿಯ ವಿಸ್ತೀರ್ಣ ಹಾಗೂ ಅಲ್ಲಿನ ಮಣ್ಣಿನಲ್ಲಿರುವ ತೇವಾಂಶದ ಆಧಾರದ ಮೇಲೆ ಕಂಡುಹಿಡಿಯಲಾಗುತ್ತದೆ. ಆದರೆ ಮಣ್ಣಿನ ತೇವಾಂಶವನ್ನು ಕಂಡುಹಿಡಿಯಲು ಸಾಕಷ್ಟು ಹೊರಾಂಗಣ ಮಾಪಕ ಕೇಂದ್ರಗಳು ಇಲ್ಲ. ಜೊತೆಗೇ, ಆ ಪ್ರದೇಶದಲ್ಲಿ ಹೊಳೆಗಳು, ಅಣೆಕಟ್ಟುಗಳು, ಕೊಳಗಳು ಮತ್ತು ಸರೋವರಗಳು ಎಷ್ಟು ಮೇಲ್ಮೈ ಪ್ರದೇಶವನ್ನು ಆವರಿಸಿದೆ ಎಂಬುದರ ಸಂಪೂರ್ಣ ಚಿತ್ರಣವೂ ಇಲ್ಲ.” ಎಂದು ಅಧ್ಯಯನ ನಡೆದ ಜಾಗದ ಸ್ಥಿತಿಗತಿಗಳನ್ನು ‘ರಿಸರ್ಚ್ ಮ್ಯಾಟರ್ಸ್’ನೊಂದಿಗಿನ ಸಂದರ್ಶನದಲ್ಲಿ, ಅಧ್ಯಯನದ ಪ್ರಮುಖ ಲೇಖಕರೂ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರೂ ಆದ  ಪ್ರೊ. ನಾಗೇಶ್ ಕುಮಾರ್ ವಿವರಿಸುತ್ತಾರೆ.

ಮೊದಲನೆಯದಾಗಿ, ಸಂಶೋಧಕರು ಈ ಅಧ್ಯಯನದಲ್ಲಿ,  ಪರ್ಯಾಯ ದ್ವೀಪದ ನದಿ-ಜಲಾಶಯಗಳ ಮೇಲ್ಮೈ ನೀರಿನ ಶೇಖರಣೆಯ ಬಗ್ಗೆ ಮಾಹಿತಿ ಕಲೆಹಾಕಿದರು. ೨೦೦೨ರಿಂದ ೨೦೧೪ರವರೆಗಿನ ೧೩ ವರ್ಷಗಳ ಮಾಹಿತಿಯನ್ನು ಅಧ್ಯಯನ ಮಾಡಿ, ಅದರ ಜೊತೆಗೆ, ಮಣ್ಣಿನ ತೇವಾಂಶ ಹಾಗೂ ನೀರಿನಿಂದ ಅವೃತವಾದ ಪ್ರದೇಶದ ವಿಸ್ತೀರ್ಣವನ್ನು ಲೆಕ್ಕಹಾಕಲು ಉಪಗ್ರಹದ ಸಹಾಯ ಪಡೆಯಲಾಯಿತು. ಭಾರತೀಯ ಹವಾಮಾನ ಇಲಾಖೆಯಿಂದ ನಿರ್ವಹಿಸಲ್ಪಡುವ ಮಳೆ ಮಾಪನದ ಸಹಾಯದಿಂದ, ಮಳೆಯ ಪ್ರಮಾಣದ ಬಗ್ಗೆ ಮಾಹಿತಿಯನ್ನು ಪಡೆದರು. ಈ ಅಧ್ಯಯನದ ಫಲಿತಾಂಶಗಳನ್ನು ಜಲವಿಜ್ಞಾನದ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ; ಸಂಶೋಧಕರು ಕೇವಲ ನದಿಗಳ ಅಧ್ಯಯನ ನಡೆಸದೇ, ಅದರ ಸುತ್ತಮುತ್ತಲಿನ ಪ್ರದೇಶವನ್ನು, ಉಳಿದ ಜಲಮೂಲಗಳು ಹಾಗೂ ಅವುಗಳ ಜಲ-ಸಂಗ್ರಹಣಾ ಸಾಮರ್ಥ್ಯವನ್ನು ಕೂಡ ಅಭ್ಯಸಿಸಿದ್ದಾರೆ.

"ಇಲ್ಲಿ ಅನುಸರಿಸಿರುವ ಪ್ರದೇಶ-ಆಧಾರಿತ ಅಧ್ಯಯನ ವಿಧಾನದ ಪ್ರಕಾರ, ನೀರಿನ ಪ್ರಮಾಣದ ಏರಿಕೆ ಹಾಗೂ ಇಳಿಕೆಯ ವಿನ್ಯಾಸವು, ಜಲಾಶಯಕ್ಕನುಗುಣವಾಗಿ ಬದಲಾಗಬಹುದು ಮತ್ತು ಇಲ್ಲಿರುವಂತಹದ್ದೇ ವಿನ್ಯಾಸ ಬೇರೆ ಯಾವುದೋ--ನದಿ-ಜಲಾಶಯಗಳ ಪ್ರದೇಶಗಳಲ್ಲೂ ಇರಬಹುದು. ಈ ಸಾಧ್ಯತೆಗಳನ್ನೂ ನಾವು ಅಲ್ಲಗಳೆಯುವಂತಿಲ್ಲ" ಎನ್ನುತ್ತಾರೆ ಪ್ರೊಫೆಸರ್ ನಾಗೇಶ್ ಕುಮಾರ್.

GRACE ನಿಂದ ದೊರೆತ ಮಾಹಿತಿಯನ್ನು ಬಳಸಿಕೊಂಡು, ಸಂಶೋಧಕರು ನರ್ಮದಾ, ತಪತಿ, ಮಾಹಿ, ಗೋದಾವರಿ ಮತ್ತು ಕೃಷ್ಣ ನದಿಗಳ ಹರಿವಿನ ಆಧಾರದ ಮೇಲೆ, ಪರ್ಯಾಯ ದ್ವೀಪವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಮೂರು ವಿಭಾಗಗಳು ಕೃಷ್ಣ ಮತ್ತು ಗೋದಾವರಿ ಜಲಾಶಯಗಳ ಸುತ್ತಲಿನ ಪ್ರದೇಶವನ್ನು ಒಳಗೊಂಡರೆ, ಒಂದು ವಿಭಾಗವು ಪಶ್ಚಿಮಾಭಿಮುಖವಾಗಿ ಹರಿಯುವ ಉಳಿದ ನದಿಗಳನ್ನು ಒಳಗೊಂಡಿದೆ. ಎಲ್ಲ ಭಾಗಗಳಲ್ಲಿಯೂ ಅಂತರ್ಜಲ ಹಾಗೂ ಮೇಲ್ಮೈ ನೀರಿನ ಪ್ರಮಾಣ ಹೆಚ್ಚುತ್ತಿರುವುದು ಕಂಡುಬಂದರೂ, ಅದು ಎಲ್ಲೆಡೆಯೂ ಏಕರೂಪವಾಗಿರಲಿಲ್ಲ ಎಂಬುದು ಕುತೂಹಲಕಾರಿ ಸಂಗತಿ. ಗೋದಾವರಿ ನದಿಯ ಜಲಾನಯನ ಭೂಮಿಯ ನೀರಿನ ಸಂಗ್ರಹದಲ್ಲಿ, ನದಿಯ ಪಶ್ಚಿಮ ಭಾಗಕ್ಕಿಂತಲೂ ಆಗ್ನೇಯ ಭಾಗದಲ್ಲಿ ಗಮನಾರ್ಹವಾದ ಏರಿಕೆ ಕಂಡುಬಂದರೆ, ಕೃಷ್ಣಾ ನದಿಯ ಪಶ್ಚಿಮ ಪ್ರದೇಶದಲ್ಲಿ ಯಾವುದೇ ಗಮನಾರ್ಹವಾದ ಹೆಚ್ಚಳ ಕಂಡುಬಂದಿಲ್ಲ.  ಆದರೆ ನದಿಯ ಪೂರ್ವದ ಕೆಳಭಾಗದ ಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

ಈ ಪ್ರದೇಶಗಳಲ್ಲಿನ ನೀರಿನ ಸಂಗ್ರಹವು, ಒಟ್ಟಾರೆಯಾಗಿ ೭೪ ಕ್ಯೂಬಿಕ್ ಕಿಲೋಮೀಟರ್ ಪರಿಮಾಣಕ್ಕಿಂತಲೂ (Volume) ಹೆಚ್ಚಾಗಿದೆ ಎಂಬುದು ಗಮನಾರ್ಹ ಸಂಗತಿ. ಇದರ ಅರ್ಥ, ಏರಿಕೆಯಾಗಿರುವ ನೀರಿನ ಪ್ರಮಾಣವು, ಭಾರತದ ಅತಿದೊಡ್ಡ ಅಣೆಕಟ್ಟಿಗಿಂತ (ಸುಮಾರು ೩.೫ ಕ್ಯೂಬಿಕ್ ಕಿಲೋಮೀಟರ್) ಸುಮಾರು ೨೦ಪಟ್ಟು ಹೆಚ್ಚಿನದು.

ಹಾಗಾದರೆ, ಈ ರೀತಿಯ ಮೇಲ್ಮೈ ನೀರಿನ ಹೆಚ್ಚಳಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರವಾಗಿ, ಸಂಶೋಧಕರು ಹಲವಾರು ಸನ್ನಿವೇಶಗಳನ್ನು ಅವಲೋಕಿಸಿ, ಕೆಲವು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಮಳೆಯಲ್ಲಿ ಆಗಿರಬಹುದಾದ ಹೆಚ್ಚಳ, ಆವಿಯಾಗುವಿಕೆಯಲ್ಲಿ ಆಗಿರಬಹುದಾದ ಇಳಿಕೆ, ಹೊಸ ಆಣೆಕಟ್ಟುಗಳ ನಿರ್ಮಾಣದಿಂದ ನದಿ ನೀರಿನಲ್ಲಿ ಆಗಿರಬಹುದಾದ ಇಳಿಕೆ ಇತ್ಯಾದಿ. ಇವೆಲ್ಲಾ ಕಾರಣಗಳಲ್ಲಿ, ಮಳೆಯ ಪ್ರಮಾಣದಲ್ಲಿ ಆಗಿರುವ ಹೆಚ್ಚಳವು ಅತೀ ಮುಖ್ಯವಾದುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಈ ಅಧ್ಯಯನವು ಮಳೆಯ ಪ್ರಮಾಣದ ಪರಿಣಾಮವನ್ನು ಪರಿಶೀಲಿಸಿ, ಅಧ್ಯಯನದ ಅವಧಿಯಲ್ಲಿ ಮಳೆಯ ಪ್ರಮಾಣವು ಮೇಲ್ಮೈಜಲ ಮತ್ತು ಅಂತರ್ಜಲ ಎರಡರ ಏರಿಕೆಯಲ್ಲಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ತೀರ್ಮಾನಿಸಿತು.

೨೦೦೨ರಲ್ಲಿ ತೀವ್ರವಾಗಿ ಅಪ್ಪಳಿಸಿದ ಬರಗಾಲವನ್ನು ಮುಂದಿಟ್ಟುಕೊಂಡು, ಈ ಫಲಿತಾಂಶಗಳನ್ನು ನಾವು ಅವಲೋಕಿಸಬೇಕು ಎಂದು ಸಂಶೋಧಕರು ಸೂಚಿಸುತ್ತಾರೆ. ಏಕೆಂದರೆ ಆ ಬರಗಾಲವು ಅಂತರ್ಜಲದ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿತ್ತು. GRACE ಮಾಹಿತಿಯು ೨೦೦೨ರ ಮೊದಲು ಲಭ್ಯವಿಲ್ಲದಿರುವುದರಿಂದ, ಈ ಇಳಿಕೆಯನ್ನು ಅರ್ಥಮಾಡಿಕೊಳ್ಳಲು ಯಾವುದೇ ಪ್ರಮಾಣಗಳು ನಮಗೆ ಲಭ್ಯವಿಲ್ಲ. "೨೦೦೨ರಿಂದಲೂ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಂತರ್ಜಲ ಮತ್ತು ಮೇಲ್ಮೈ ನೀರಿನ ಮಟ್ಟವು ತೀವ್ರ ಬರ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸಹಾಯಕವಾಗಿದೆ." ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಪಿ.ಎಚ್.ಡಿ ವಿದ್ಯಾರ್ಥಿ ಹಾಗೂ ಈ ಅಧ್ಯಯನದ ಸಹ ಲೇಖಕರಾಗಿರುವ ಶ್ರೀಯುತ ಚಂದನ್.

ಈ ಸಂಶೋಧನಾ ಅಧ್ಯಯನವು, ಮಳೆಯ ನೀರಿನ ಮೇಲೆ ಭಾರತೀಯ ಪರ್ಯಾಯ ದ್ವೀಪದ ಜನರ ಅತಿಯಾದ ಅವಲಂಬನೆಯ ಜೊತೆಗೆ, ನೀರನ್ನು ಸಮರ್ಥವಾಗಿ, ಸಂವೇದನಾಶೀಲವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಬೇಕಾಗಿರುವ ಅಗತ್ಯತೆಯನ್ನು ಕೂಡ ಎತ್ತಿಹಿಡಿಯುತ್ತದೆ.

Audio
The SoundCloud content at https://soundcloud.com/researchmatters/study-shows-an-increase-in-surface-water-in-peninsular-india is not available, or it is set to private.