ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಭಾರತದಲ್ಲಿನ ಅಪೌಷ್ಟಿಕತೆಯನ್ನು ಅರಿತುಕೊಳ್ಳಲು ಒಂದು ಹೊಸ ಮಾರ್ಗ

Mumbai
17 Mar 2021
ಭಾರತದಲ್ಲಿನ ಅಪೌಷ್ಟಿಕತೆಯನ್ನು ಅರಿತುಕೊಳ್ಳಲು ಒಂದು ಹೊಸ ಮಾರ್ಗ

ಫೋಟೋ: ಜೈಕಿಶನ್ ಪಟೇಲ್. 

ಇಂದು ನಮ್ಮ ದೇಶದಲ್ಲಿ ಕಂಡುಬರುವ ಅತ್ಯಂತ ದೊಡ್ಡ ವಿಪರ್ಯಾಸಗಳಲ್ಲಿ ನಾವು ತಿನ್ನುವ ಆಹಾರವೂ ಒಂದು. 2018–19ರಲ್ಲಿ ನಮ್ಮ ದೇಶದ  ವ್ಯವಸಾಯೋತ್ಪನ್ನವು 285 ಮಿಲಿಯನ್ ಟನ್ನುಗಳಾಗಿದ್ದು, ಜಗತ್ತಿನಲ್ಲೇ ಅತಿ ಹೆಚ್ಚಿನ ಉತ್ಪಾದನೆಗಳಲ್ಲಿ ಒಂದು. ಆದರೂ, ಜಗತ್ತಿನಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಮೂರನೇ ಒಂದು ಭಾಗ ನಮ್ಮ ದೇಶದಲ್ಲಿಯೇ ಕಂಡುಬರುತ್ತಾರೆ. ಐದು ವರ್ಷ ತುಂಬುವುದರೊಳಗೆ ಸಾವನ್ನಪ್ಪುವ ಅರ್ಧಕ್ಕಿಂತ ಹೆಚ್ಚು ಮಕ್ಕಳು ಪೌಷ್ಟಿಕತೆಯ ಕೊರತೆಯಿಂದ ಸಾಯುತ್ತಾರೆ. ಇಂದು, ನಮ್ಮ ದೇಶದ ಮಕ್ಕಳಲ್ಲಿ ಅಪೌಷ್ಟಿಕತೆ ಎನ್ನುವುದು ಮೂರು ವಿವಿಧ ಸಮಸ್ಯೆಗಳನ್ನೊಳಗೊಂಡಿದೆ - ಕಡಿಮೆ ಪೌಷ್ಟಿಕತೆ, ಸೂಕ್ಷ್ಮಪೌಷ್ಟಿಕಾಂಶಗಳ ಕೊರತೆ, ಮತ್ತು ಬೊಜ್ಜು. 

ಮಕ್ಕಳ ಪೋಷಣೆಯನ್ನು ಉತ್ತಮಗೊಳಿಸಲು ಭಾರತವು  ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆರು ವರ್ಷದೊಳಗಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡು ಬರುವ ಕಡಿಮೆ ಹುಟ್ಟುತೂಕ, ರಕ್ತಹೀನತೆ ಹಾಗೂ ಕುಂಠಿತ ಬೆಳವಣಿಗೆ ಇವುಗಳನ್ನು 2022ರ ಹೊತ್ತಿಗೆ ಕಡಿಮೆ ಮಾಡುವ ಉದ್ದೇಶದಿಂದ 2018ರಲ್ಲಿ ಪ್ರಾರಂಭವಾದ ಪೋಷಣ್ ಅಭಿಯಾನ್ ಅಥವಾ ನ್ಯಾಷನಲ್ ನ್ಯೂಟ್ರಿಷನ್ ಮಿಷನ್(NNM), ಇಂತಹ ಯೋಜನೆಗಳಲ್ಲಿ ಒಂದಾಗಿದೆ. ಈ ರೀತಿಯ ಯೋಜನೆಗಳನ್ನು ಜಾರಿ ಮಾಡುವುದರೊಂದಿಗೆ ಅವುಗಳನ್ನು ಉತ್ತಮಗೊಳಿಸಲು ಹಾಗೂ ಪರಿಷ್ಕರಿಸಲು, ಅವುಗಳ ಪರಿಣಾಮಕಾರಿತ್ವವನ್ನು ಪರಿವೀಕ್ಷಿಸುವುದೂ ಬಹಳ ಮುಖ್ಯ. ನಮ್ಮ ದೇಶದಲ್ಲಿನ ಅಪೌಷ್ಟಿಕತೆಯ ಮೂರು ಮುಖಗಳನ್ನು ಅರ್ಥಮಾಡಿಕೊಳ್ಳಲು, ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (Indian Institute of Science)  ಸಂಶೋಧಕರು ಅಧ್ಯಯನದಲ್ಲಿ ಉಪಯೋಗಿಸಿರುವ ಮಾನುಷ್ ಎಂಬ, ಶ್ರೇಣೀಕರಿಸುವ ಒಂದು ಹೊಸ ವಿಧಾನವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಕ್ವಿಟಿ ಇನ್ ಹೆಲ್ತ್ ನಲ್ಲಿ ಪ್ರಕಟಿಸಲಾಗಿದೆ.

ಯೋಜನೆಗಳನ್ನು ನಿರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುವವರಿಗೆ ಅವುಗಳನ್ನು ಯೋಜಿಸುವುದಲ್ಲದೆ ಸಂಪನ್ಮೂಲಗಳನ್ನೂ ಹಣವನ್ನೂ ನಿಗದಿಪಡಿಸಲು ನೆರವಾಗಲು,  ಯೋಜನೆಗಳ ಪರಿಣಾಮಕಾರಿತ್ವವನ್ನು ಬಿಂಬಿಸುವ - SDG ಸೂಚ್ಯಂಕ, ಆಹಾರ ಮತ್ತು ಪೋಷಣಾ ಭದ್ರತೆಯ ವಿಶ್ಲೇಷಣೆ, ಮತ್ತು ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಮುಂತಾದ ಹಲವಾರು ಆರೋಗ್ಯ ಮತ್ತು ಪೋಷಣೆಯ ಸೂಚ್ಯಂಕಮಾಪಕಗಳನ್ನು ನಿರ್ಮಿಸಲಾಗಿದೆ. ಈ ಸೂಚ್ಯಂಕಗಳನ್ನು ಪರಿಶೀಲಿಸಿದರೆ, ರೇಖೀಯ ಒಟ್ಟುಗೂಡಿಸುವಿಕೆ ಅಥವಾ ಸರಳ ಸರಾಸರಿ ವಿಧಾನವು ಪ್ರಚಲಿತವಾಗಿರುವುದು ಕಂಡು ಬರುತ್ತದೆ. ಈ ವಿಧಾನದಲ್ಲಿ, ಪಾಲಿಸಿಯ ಎಲ್ಲಾ ಕಾರ್ಯಾಚರಣೆಗಳನ್ನು ವಿವಿಧ ಮಾನದಂಡಗಳಲ್ಲಿ ಅಳೆದು, ಅವೆಲ್ಲವನ್ನೂ ಒಟ್ಟುಗೂಡಿಸಿ ತೆಗೆದ ಒಂದು ಸಂಯೋಜಿತ ಸೂಚ್ಯಂಕವನ್ನು  ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳ ಸೂಚಿಗಳಾಗಿ ನಿರೂಪಿಸುತ್ತಾರೆ. ಆದರೆ, ಇದು ಕೆಲವು ಕ್ಷೇತ್ರಗಳಲ್ಲಿನ  ಕಳಪೆ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮರೆಮಾಡಿ, ಅಸಮ ಬೆಳವಣಿಗೆಯನ್ನು ಮುಚ್ಚಿಹಾಕುತ್ತದೆ.

“ಅಂಕಗಣಿತದ ಸರಾಸರಿ ಲೆಕ್ಕವನ್ನಾಧರಿಸಿ ತೆಗೆದ ಸಂಯೋಜಿತ ಸೂಚ್ಯಂಕದಲ್ಲಿ, ಒಂದು ಆಯಾಮದಲ್ಲಿನ ಕಳಪೆ ಕಾರ್ಯಾಚರಣೆಯು - ಉದಾ: ಕೃಶವಾಗುವಿಕೆ - ಕುಂಠಿತ ಬೆಳವಣಿಗೆಯ ಆಯಾಮದಲ್ಲಿನ ಉತ್ತಮ ಕಾರ್ಯಾಚರಣೆಯಿಂದ  ಮುಚ್ಚಿಹೋಗಬಹುದು.” ಎಂದು  ಮುಂಬೈ ಐಐಟಿಯ ಸೆಂಟರ್ ಫಾರ್ ಟೆಕ್ನಾಲಜಿ ಆಲ್ಟರ್ನೆಟಿವ್ಸ್  ಫಾರ್ ರೂರಲ್ ಏರಿಯಾಸ್ (CTARA) ನಡೆಸುತ್ತಿರುವ ಅಧ್ಯಯನದಲ್ಲಿ ಹಿರಿಯ ಸಂಶೋಧಕರಾಗಿರುವ ಆಯುಷಿ ಜೈನ್ ಹೇಳುತ್ತಾರೆ. ಮಾನವ ಅಭಿವೃದ್ಧಿ ಸೂಚ್ಯಂಕವನ್ನು (HDI) ಲೆಕ್ಕ ಹಾಕುವಲ್ಲಿ ಉಪಯೋಗಿಸಿರುವ ಜಾಮಿತೀಯ ಸರಾಸರಿ ಕೂಡ ಇದಕ್ಕೆ ಹೊರತಲ್ಲ. “ಒಂದು ದೇಶದ ಆರ್ಥಿಕವಲಯದ ಪ್ರಗತಿ, ಆರೋಗ್ಯ ರಕ್ಷಣೆಯ ನೀರಸ ಕಾರ್ಯಚಟುವಟಿಕೆಯನ್ನು  ಮರೆಮಾಡಿಬಿಡಬಹುದು” ಎನ್ನುತ್ತಾರೆ.  

ಮೇಲ್ಕಂಡ ವಿಧಾನಗಳ ಇತಿ ಮಿತಿಗಳನ್ನು ಪರಿಹರಿಸಿ, ಸೂಚ್ಯಂಕವನ್ನು ಲೆಕ್ಕಹಾಕಲು ಸಂಶೋಧಕರು ಮಾನುಷ್ ತಂತ್ರವನ್ನು ಬಳಸಿದರು. ಈ ಅಧ್ಯಯನದಲ್ಲಿ ಪಾಲ್ಗೊಂಡಿರುವ CTARAನ ಪ್ರೊ. ಸತೀಶ್ ಅಗ್ನಿಹೋತ್ರಿ ಅವರು, “ಅಪೌಷ್ಟಿಕತೆ ಎಂಬುದು, ಕುಂಠಿತ ಬೆಳವಣಿಗೆ, ಕಡಿಮೆ ತೂಕ, ಬೊಜ್ಜು ಹಾಗೂ ರಕ್ತಹೀನತೆಯಿಂದಾದ ಅನೀಮಿಯಾ ಮುಂತಾದ ಅನೇಕ ಮುಖಗಳುಳ್ಳ ‘ಬಹುಆಯಾಮ’ ಸಮಸ್ಯೆ. ಮಾನುಷ್ ತಂತ್ರವು ಎಲ್ಲಾ ಸೂಚ್ಯಂಕದ ಬಿಡಿ ಒಳಗೊಳ್ಳುತ್ತದೆ. ಜಾರಿಗೊಳಿಸಿದ ಯೋಜನೆಯು ಎಲ್ಲಾ ಅಂಶಗಳನ್ನೂ ಉತ್ತಮಗೊಳಿಸುತ್ತಾ ಒಂದು ಅಂಶವನ್ನು ಕಡೆಗಣಿಸಿದರೆ  ಸೂಚ್ಯಂಕವು ದಂಡ ವಿಧಿಸುತ್ತದೆ. 

ಉದಾಹರಣೆಗೆ HDI ವಿಷಯದಲ್ಲಿ, ಆರೋಗ್ಯರಕ್ಷಣೆಯಂತಹ ಕಳಪೆಕಾರ್ಯಸೂಚಿಯನ್ನು ಆರ್ಥಿಕ ಬೆಳವಣಿಗೆಯಂತಹ ಉತ್ತಮಕಾರ್ಯಸೂಚಿಯೊಂದಿಗೆ ಹೋಲಿಸಿ ಅದನ್ನು ತ್ವರಿತಗತಿಯಲ್ಲಿ ಉತ್ತಮಗೊಳಿಸಬೇಕು, ಇದರಿಂದ ವಿವಿಧ ಸೂಚಿಗಳ ನಡುವಿನ ಅಂತರ ಕಡಿಮೆಯಾಗಿ ಬೆಳವಣಿಗೆ ಸಮತೋಲಿತವಾಗುತ್ತದೆ ಎಂದು  ಮಾನುಷ್  ಸೂಚಿಸುತ್ತದೆ.

ಪ್ರಸ್ತುತ ಅಧ್ಯಯನದಲ್ಲಿ, ಅಪೌಷ್ಟಿಕತೆಯ ತ್ರಿಮುಖ ಸಮಸ್ಯೆಗೆ ಸೂಚ್ಯಂಕವನ್ನು ತಯಾರಿಸಲು ಸಂಶೋಧಕರು ನಾಲ್ಕು ಮಾನದಂಡಗಳನ್ನು ಪರಿಗಣಿಸಿದರು  - ಕಡಿಮೆ ಪೌಷ್ಟಿಕತೆಯನ್ನು ಸೂಚಿಸುವ ಕುಂಠಿತ ಬೆಳವಣಿಗೆ ಮತ್ತು ಕೃಶ ದೇಹ ಪ್ರಮಾಣ, ಸೂಕ್ಷ್ಮಪೌಷ್ಟಿಕಾಂಶಗಳ  ಕೊರತೆಯನ್ನು ಸೂಚಿಸುವ ಅನೀಮಿಯಾದ  ಪ್ರಮಾಣ, ಹಾಗೂ WHO ಸೂಚಿಸುವ, ಮಗುವಿನ ಬೆಳವಣಿಗೆಯ ಮಾನದಂಡದ ತೂಕ ಮತ್ತು ಎತ್ತರದ ನಡುವಿನ ಅನುಪಾತವು ಎರಡಕ್ಕಿಂತ ಹೆಚ್ಚಿರುವುದನ್ನು ಸೂಚಿಸುವ ಬೊಜ್ಜು. 2005–06 ಮತ್ತು 2015–16ರಲ್ಲಿ ಕ್ರಮವಾಗಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ೩ ಮತ್ತು ೪ (NFHS 3 & 4) ಹಾಗೂ 2016–18ರಲ್ಲಿ ನಡೆಸಿದ ವ್ಯಾಪಕ ರಾಷ್ಟ್ರೀಯ ಪೌಷ್ಟಿಕತೆ ಸಮೀಕ್ಷೆಯಲ್ಲಿ (CNNS) ಪಾಲ್ಗೊಂಡ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ಕುಟುಂಬ ಆರೋಗ್ಯದ ದತ್ತಾಂಶವನ್ನು ಸಂಗ್ರಹಿಸಿ, ಮಾನುಷ್ ಆಧರಿತ, ೦ ಇಂದ 1 ಶ್ರೇಣಿಯ ಸೂಚ್ಯಂಕದಲ್ಲಿ ಲೆಕ್ಕ ಹಾಕಿದರು. ಅಂಕಗಳು ಕಡಿಮೆ ಇದ್ದರೆ ಅಪೌಷ್ಟಿಕತೆಯ ಸಮಸ್ಯೆ ಕಡಿಮೆ ಎಂದು ಮಾನುಷ್  ಸೂಚಿಸುತ್ತದೆ.

ಸಂಶೋಧಕರು, ಮಾನುಷ್ ಅಂಕಗಳ ಪ್ರಕಾರ ಅಪೌಷ್ಟಿಕತೆಯ ತೀವ್ರತೆಯನ್ನು ಆಧರಿಸಿ, ರಾಜ್ಯಗಳು ಹಾಗೂ ಜಿಲ್ಲೆಗಳನ್ನು - ಅಲ್ಪ, ಮಧ್ಯಮ, ಗಂಭೀರ, ಆತಂಕಕರ ಮತ್ತು ತೀವ್ರಆತಂಕಕರ ಎಂದು ಐದು ವರ್ಗಗಳಾಗಿ ವಿಂಗಡಿಸಿದರು. ಆಯುಷಿ ಅವರು,  “ಜಾಗತಿಕ ಹಸಿವೆ ಸೂಚ್ಯಂಕದ ಪ್ರಕಾರ ಹಸಿವಿನ ಅಳತೆಗೋಲಿನಮೇಲೆ ದೇಶಗಳನ್ನು ಹೇಗೆ ವಿಂಗಡಿಸಿದ್ದಾರೋ ಹಾಗೆಯೇ ತೀವ್ರತೆಯ ಅಳತೆಗೋಲಿನ ಮೇಲೆ ಈ ವಿಂಗಡನೆಯನ್ನು ಮಾಡಲಾಗಿದೆ; ಏಕೆಂದರೆ ಇದು ವ್ಯಾಪಕವಾಗಿ ಅಂಗೀಕರಿಸಲಾದ ಹಾಗೂ ಯೋಜನೆ  ನಿರೂಪಕರಿಗೆ   ಅರ್ಥವಾಗುವ ವಿಧಾನ” ಎನ್ನುತ್ತಾರೆ. “ಆದರೆ ರಾಜ್ಯಗಳು ಹಾಗೂ ಜಿಲ್ಲೆಗಳ ವಿಂಗಡಣೆಯು ಮಾನುಷ್ ಸೂಚ್ಯಂಕದ ವ್ಯಾಪ್ತಿ ಹಾಗೂ ವಿಸ್ತಾರವನ್ನು ಆಧರಿಸಿದೆ” ಎಂದರು. NFHSನ ಎರಡು ಸಮೀಕ್ಷೆಗಳಲ್ಲಿ, ಕೇರಳ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ರಾಜ್ಯಗಳೂ ಮಾನುಷ್ ಅಂಕದಲ್ಲಿ ಶೇ. 2 ರಿಂದ 25 ರವರೆಗೂ ಇಳಿತವನ್ನು  ತೋರಿಸಿರುವುದನ್ನು  ಗಮನಿಸಿದರು.  2005 ರಿಂದ  2016ರ ವರೆಗೆ, ಈ ವಿಶ್ಲೇಷಣೆಯಲ್ಲಿ ಪರಿಗಣಿಸಲಾದ ಬಹಳಷ್ಟು ಸೂಚಿಗಳಲ್ಲಿ ಸುಧಾರಣೆಯಾಗಿರುವುದನ್ನು ಇದು ತೋರಿಸುತ್ತದೆ. ಮೇಘಾಲಯವು ಮಾನುಷ್ ಅಂಕದಲ್ಲಿ ಅತಿಹೆಚ್ಚಿನ ಸುಧಾರಣೆ ತೋರಿಸಿತು. ಅದಾದನಂತರ ದೇಶದಲ್ಲೇ ಅತಿ ಹೆಚ್ಚು ಅಪೌಷ್ಟಿಕತೆಯ ಸಮಸ್ಯೆಯನ್ನು ಹೊಂದಿದ್ದ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳು ಸುಧಾರಣೆ ತೋರಿದವು.

ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರತೆಯ ಮಾನದಂಡದಲ್ಲಿ ಒಳ್ಳೆಯ ಕಾರ್ಯಕ್ಷಮತೆ ತೋರಿದರೂ ಕರ್ನಾಟಕ ಮಾತ್ರ ಗಂಭೀರ ವರ್ಗದಿಂದ ಆತಂಕಕರ ವರ್ಗಕ್ಕೆ ಇಳಿಯಿತು. ಗೋವಾ ರಾಜ್ಯವು ಮಧ್ಯಮದಿಂದ ಗಂಭೀರ ವರ್ಗಕ್ಕೆ ಇಳಿಯಿತು ಅಂದರೆ ಕಳಪೆ ಕಾರ್ಯಕ್ಷಮತೆ ಇದ್ದ ಅಂಶಗಳಲ್ಲಿ ಪ್ರಗತಿ ಸಾಧಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಕೇರಳ ಹಾಗೂ ಜಮ್ಮು ಮಾತು ಕಾಶ್ಮೀರ ರಾಜ್ಯಗಳು ಮಾನುಷ್ ಅಂಕಗಳಲ್ಲಿ ಸುಧಾರಣೆ ತೋರಿದರೂ ಕ್ರಮವಾಗಿ ಮಧ್ಯಮ ಹಾಗೂ ಗಂಭೀರ ವರ್ಗಗಳಲ್ಲೇ ಮುಂದುವರೆದವು. 

“ಒಂದು ರಾಜ್ಯವು ಆತಂಕಕರ ವರ್ಗದಿಂದ ಅಲ್ಪ ವರ್ಗಕ್ಕೆ ಸರಿದರೆ, ಅಪೌಷ್ಠಿಕತೆಯಲ್ಲಿ ವೇಗವಾದ ತ್ವರಿತ ಇಳಿತವಾಗಿರುವುದನ್ನು ಸೂಚಿಸುತ್ತದೆ. ಅದನ್ನು ಪ್ರಶಂಸಿಸಬೇಕು  ಹಾಗೂ ಆ ರಾಜ್ಯವನ್ನು ಬೇರೆ ರಾಜ್ಯಗಳಿಗೆ ಮಾದರಿ ಎಂದು ಪರಿಗಣಿಸಬೇಕು. ಆದರೆ ಒಂದು  ರಾಜ್ಯವು ಆತಂಕಕರ ವರ್ಗದಿಂದ ಗಂಭೀರ ವರ್ಗಕ್ಕೆ ಸರಿದರೆ, ಇಳಿತ ನಿಧಾನ ಹಾಗೂ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಇನ್ನೂ ಹೆಚ್ಚಿನ ಪ್ರಯತ್ನಗಳು ಆಗಬೇಕು ಎಂದು ಸೂಚಿಸುತ್ತದೆ” ಎಂದು ಆಯುಷಿ ವಿವರಿಸುತ್ತಾರೆ. “ಹಾಗೆಯೇ  ಒಂದು ರಾಜ್ಯವು ಅದೇ ವರ್ಗದಲ್ಲಿ ಮುಂದುವರೆದರೆ ಅಥವಾ ಕೆಳವರ್ಗಕ್ಕೆ ಜಾರಿದರೆ, (ಮಧ್ಯಮದಿಂದ ಆತಂಕಕರ) ಅದರ ಕಾರಣವನ್ನು ತಿಳಿಯಲು ಆಳವಾದ ಅಧ್ಯಯನವನ್ನು ಮಾಡಬೇಕು ಹಾಗೂ ರಾಜ್ಯ/ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ತೀವ್ರತರ ಪ್ರಯತ್ನಗಳನ್ನು ಮಾಡಬೇಕು” ಎಂದು ಹೇಳುತ್ತಾರೆ.

ಅದೇ ರೀತಿ, ಇತ್ತೀಚಿನ CNN ಸಮೀಕ್ಷೆಯೊಂದಿಗೆ ಹೋಲಿಸಿದಾಗ ಯಾವ ರಾಜ್ಯಗಳೂ ತೀವ್ರ ಆತಂಕಕರ ವರ್ಗದಲ್ಲಿ ಬರುವುದಿಲ್ಲ ಎಂದು ಕಂಡುಬಂದಿತು. NFHS-4 ಮತ್ತು  CNN ಸಮೀಕ್ಷೆಗಳ ನಡುವಿನ ಸಮಯದಲ್ಲಿ ಮಣಿಪುರ, ತ್ರಿಪುರ, ಮಿಝೋರಾಂ ಮತ್ತು ಅಸ್ಸಾಂ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ರಾಜ್ಯಗಳೂ ಮಾನುಷ್ ಅಂಕದಲ್ಲಿ ಗಮನಾರ್ಹವಾಗಿ ಇಳಿದಿರುವುದು ಕಂಡುಬರುತ್ತದೆ. ಈ ಸುಧಾರಣೆಗಳಿಗೆ ಉತ್ತಮ ಆಡಳಿತ ಮತ್ತು ಮೊದಲ ಸಮೀಕ್ಷೆಯ ನಂತರದ ವರ್ಷಗಳಲ್ಲಿ ಅಪೌಷ್ಟಿಕತೆಯನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳೇ ಕಾರಣ ಎಂದು ಹೇಳಬಹುದು.

ರಾಜ್ಯಗಳ ಉತ್ತಮ ಕಾರ್ಯಾಚರಣೆಗೆ ನೆರವಾದ ಕ್ರಮಗಳ ಬಗ್ಗೆ ಮಾತನಾಡುತ್ತಾ, ಪ್ರೊ. ಅಗ್ನಿಹೋತ್ರಿ ಅವರು,  “ಮೂರು ವರ್ಷವಯಸ್ಸಿನ ಮೇಲ್ಪಟ್ಟ ಮಕ್ಕಳ ಪೂರಕ ಪೋಷಣೆಯ ಮೇಲೆ ಎಷ್ಟು ಹಣ ವೆಚ್ಚ ಮಾಡುವಿರಿ ಎನ್ನುವುದಕ್ಕಿಂತ ತಾಯಿಯ ವಿದ್ಯಾಭ್ಯಾಸ, ಆಕೆಯ ಕಾರ್ಯಭಾರ, ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಹಾಗೂ ಬಯಲು ಶೌಚಾಲಯ ಮುಕ್ತ ಪರಿಸರ ಮೊದಲಾದ ಅಂಶಗಳು ಹೆಚ್ಚು ಪ್ರಸ್ತುತ” ಎನ್ನುತ್ತಾರೆ. “ಅಪೌಷ್ಟಿಕತೆಯ ತಡೆಗೆ ಉತ್ತಮ ಸಮಯವೆಂದರೆ ಜೀವನದ ಮೊದಲ 1000 ದಿನಗಳು: ಅಂದರೆ ಗರ್ಭಾವಸ್ಥೆಯ ಒಂಬತ್ತು ತಿಂಗಳುಗಳು ಹಾಗೂ ಜನನದ ನಂತರದ ಎರಡು ವರ್ಷಗಳು. ಇದನ್ನು ಅನುಸರಿಸಿದ ರಾಜ್ಯಗಳಲ್ಲಿ ಹೆಚ್ಚು ಸಮತೋಲನ ಬೆಳವಣಿಗೆ ಕಂಡುಬಂದಿದೆ” ಎಂದು ಹೇಳುತ್ತಾರೆ.

NFHS-4 ದತ್ತಾಂಶದ ಜಿಲ್ಲಾಮಟ್ಟದ ವಿಶ್ಲೇಷಣೆಯಲ್ಲಿ, ದೇಶದ ಮಧ್ಯಭಾಗದಿಂದ ಸೀಮೆಗಳತ್ತ ಸರಿದಂತೆ ಅಪೌಷ್ಟಿಕತೆಯ ತೀವ್ರತೆ ಕಡಿಮೆಯಾಗುವುದು ಕಂಡುಬಂತು. ಅಪೌಷ್ಟಿಕತೆಯು  ಆತಂಕಕರ ಮತ್ತು ತೀವ್ರ ಆತಂಕಕರ ಮಟ್ಟದಲ್ಲಿರುವ ಬಹುತೇಕ ಜಿಲ್ಲೆಗಳು ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ್, ಬಿಹಾರ, ರಾಜಾಸ್ಥಾನ ಹಾಗೂ ಗುಜರಾತ್ ರಾಜ್ಯಗಳಲ್ಲಿವೆ. ಅದೇ ರಾಜ್ಯಗಳಲ್ಲಿನ ಹಲವು ಜಿಲ್ಲೆಗಳು ಮಾನುಷ್ ಅಂಕದಲ್ಲಿ ವ್ಯತ್ಯಾಸ ತೋರಿವೆ. ಒರಿಸ್ಸಾ ರಾಜ್ಯದಲ್ಲಿ ಮಾನುಷ್ ಅಂಕಿಗಳ ವ್ಯಾಪ್ತಿ 0.21 ರಿಂದ 0.60 ವರೆಗೆ ಇದ್ದು, ಅಪೌಷ್ಟಿಕತೆಯ ಇಳಿತ ಅಸಮಾನವಾಗಿರುವುದನ್ನು ಸೂಚಿಸುತ್ತದೆ.

“ಆಡಳಿತದ  ಮೂಲ ಸೌಕರ್ಯಗಳೂ ಕಾರ್ಯವಿಧಾನಗಳೂ ಒಂದೇ ಆದರೂ ರಾಜ್ಯದೊಳಗೆ ಅಸಮಾನ ಕಾರ್ಯಾಚರಣೆ ಇರುವುದು ಆಡಳಿತದಲ್ಲಿನ ಲೋಪವನ್ನು ಸೂಚಿಸುತ್ತದೆ” ಎಂದು ಆಯುಷಿ ಹೇಳುತ್ತಾರೆ. “ವಿವಿಧ ರಾಜ್ಯಗಳಲ್ಲಿ ಉತ್ತಮ ಹಾಗೂ ಕಳಪೆ ಕಾರ್ಯಾಚರಣೆ ತೋರುವ ಜಿಲ್ಲೆಗಳು ಒಂದೆಡೆ ಗುಂಪುಗೂಡುವುದು ನಮ್ಮ ಅಂತರಜಿಲ್ಲಾ  ಅಧ್ಯಯನದಲ್ಲಿ  ಕಂಡುಬಂತು. ಈ ಗುಂಪುಗಳು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (NSSO) ಏಕರೂಪ  ವಲಯಗಳೊಂದಿಗೆ ತಾಳೆಹೊಂದುವುದು ಕುತೂಹಲಕಾರಿ ಅಂಶ”ಎಂದು ಅವರು ಹೇಳಿದರು. ಈ 88 NSSO ವಲಯಗಳನ್ನು ಭೌಗೋಳಿಕ ಲಕ್ಷಣಗಳು, ಜನಸಂಖ್ಯಾ ಸಾಂದ್ರತೆ ಹಾಗೂ ಬೆಳೆ ಮಾದರಿ ಅಲ್ಲದೆ ಇನ್ನಿತರ ಅಂಶಗಳ ಸಾಮ್ಯತೆಯನ್ನು ಆಧರಿಸಿ ರೂಪಿಸಲಾಗಿತ್ತು. 

2018ರ ದಿ ನ್ಯಾಷನಲ್ ನ್ಯೂಟ್ರಿಷನ್ ಮಿಷನ್ (ರಾಷ್ಟ್ರೀಯ ಪೋಷಣಾ ನಿಗಮ), ವ್ಯಾಪಕವಾಗಿ ಕುಂಠಿತ ಬೆಳವಣಿಗೆ ಇರುವುದರ ಆದಾರದ ಮೇಲೆ ಜಿಲ್ಲೆಗಳನ್ನು ವರ್ಗೀಕರಿಸಿತು. ಅಲ್ಪಪೋಷಣೆ ಎನ್ನುವುದು ಕುಂಠಿತ ಬೆಳವಣಿಗೆ, ಕೃಶವಾಗುವಿಕೆ ಹಾಗೂ  ರಕ್ತಹೀನತೆಯ ಒಟ್ಟು ಪರಿಣಾಮವಾದ್ದರಿಂದ, ಕುಂಠಿತ ಬೆಳವಣಿಗೆಯೊಂದನ್ನೇ ಪರಿಗಣಿಸಿ ಯೋಜನೆ ಜಾರಿ ಮಾಡುವುದರಿಂದ ಹಣ ಹಾಗೂ ಸಂಪನ್ಮೂಲಗಳನ್ನು ಹಂಚುವುದು ಅಸಮರ್ಪಕವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. “ಎಲ್ಲಾ ರೋಗಕ್ಕೂ ಒಂದೇ ಮದ್ದು” ಎನ್ನುವ ಮಾರ್ಗವನ್ನು ಬಿಟ್ಟು, NSS ವಲಯಗಳ ಮೇಲೆ ಕೇಂದ್ರೀಕರಿಸಿ, ಸಂದರ್ಭಕ್ಕೆ ತಕ್ಕ ಕಾರ್ಯಯೋಜನೆಗಳನ್ನು ರೂಪಿಸಲು ಮಾನುಷ್ ಸಂಯೋಜಿತ ಸೂಚ್ಯಂಕವು ಸಮರ್ಥ ಬೆಂಬಲ ವ್ಯವಸ್ಥೆಯಾಗಬಹುದು ಎಂದು ಆಯುಷಿ ಅವರು ಹೇಳುತ್ತಾರೆ.

ಜಿಲ್ಲೆಗಳ ಮಾನುಷ್ ಅಂಕಗಳನ್ನು ವಿಶ್ಲೇಷಿಸಿ ಆದ್ಯತೆಯ ಆಧಾರದ ಮೇಲೆ ಅವುಗಳನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಯಿತು. ಮೊದಲನೇ ಹಂತಕ್ಕೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ. ಮಾನುಷ್ ಅಂಕಿಗಳನ್ನು ಆಧರಿಸಿದ ವರ್ಗೀಕರಣದಲ್ಲಿ ಮೊದಲನೇ ಹಂತದಲ್ಲಿ ಬರುವ 45 ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳು NNMನ 3ನೇ ಹಂತದಲ್ಲೂ ಮಿಕ್ಕ ಜಿಲ್ಲೆಗಳು NNMನ 2ನೇ ಹಂತದಲ್ಲೂ ಬಂದಿರುವುದನ್ನು ಸಂಶೋಧಕರು ಗಮನಿಸಿದರು. ಈ ಅಸಮತೆಯು, ಯೋಜನೆ ಜಾರಿಗೊಳಿಸಿರುವ ಕ್ರಮಗಳು, ನಿಯೋಜನೆಯ ಧ್ಯೇಯೋದ್ದೇಶಗಳೊಂದಿಗೆ ತಾಳೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

“ಅತ್ಯುತ್ತಮ ಹಾಗೂ ಅತಿಕಳಪೆ ಕಾರ್ಯಾಚರಣೆಯುಳ್ಳ ಸೂಚಿಗಳು, ವಿವಿಧ ವಲಯಗಳಲ್ಲಿ   ಬೆಳವಣಿಗೆಯ ವ್ಯತ್ಯಾಸಗಳು ಮತ್ತು ಸೂಚಿಗಳ ನಡುವಿನ ಅಸಮಾನ ಅಭಿವೃದ್ಧಿಯ ಹರವು ಮೊದಲಾದವನ್ನು ಗುರುತಿಸಿ, ಅವಶ್ಯಕತೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸಲು ಮಾನುಷ್ ಅಂಕಗಳು ನೆರವಾಗುತ್ತವೆ” ಎಂದು ಪ್ರೊಫೆಸರ್ ಅಗ್ನಿಹೋತ್ರಿ ಹೇಳುತ್ತಾರೆ. ಈ ರೀತಿ  ವಿಕೇಂದ್ರೀಕೃತಗೊಳಿಸಿ, ವಿಶಿಷ್ಟ ಯೋಜನೆಗಳನ್ನು ರೂಪಿಸಿ ಜಾರಿ ಮಾಡುವುದರಿಂದ ಭಾರತವು ಅಪೌಷ್ಟಿಕತೆಯ ತ್ರಿಮುಖ ಸಮಸ್ಯೆಯನ್ನು ಎದುರಿಸುವಲ್ಲಿ ಯಶಸ್ವಿಯಾಗಬಹುದು. 


ಇಲ್ಲಿ ಉಲ್ಲೇಖಿಸಲಾದ,  ಈ ಅಧ್ಯಯನದಲ್ಲಿ ನಿರತರಾಗಿರುವ ಸಂಶೋಧಕರಿಗೆ ಈ ಲೇಖನವನ್ನು ತೋರಿಸಿ  ನಿಖರತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. 

Kannada