ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಮಾನವನಿಗೆ ಬಂದಷ್ಟೂ ಹತ್ತಿರ, ಸಿಂಗಳೀಕಗಳ ಬದುಕು ದುಸ್ತರ!

Read time: 1 min
ಬೆಂಗಳೂರು
14 Oct 2020
ಮಾನವನಿಗೆ ಬಂದಷ್ಟೂ ಹತ್ತಿರ,  ಸಿಂಗಳೀಕಗಳ ಬದುಕು ದುಸ್ತರ!

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ  ಸ್ಥಳೀಯ ಸಸ್ತನಿ ಪ್ರಭೇದವಾದ ಸಿಂಗಳೀಕ (ಲಯನ್-ಟೈಲ್ಡ್ ಮಕಾಕ್.) [ಚಿತ್ರ ಕೃಪೆ: ಗಣೇಶ್ ರಘುನಾಥನ್]

ಎಚ್ಚರಿಕೆ: ಈ ಲೇಖನವು, ಕೆಲವು ಓದುಗರಿಗೆ ಕಿರಿಕಿರಿಯೆನಿಸಬಹುದಾದ ಗಾಯಗೊಂಡ ಪ್ರಾಣಿಗಳ ಚಿತ್ರಗಳನ್ನು ಒಳಗೊಂಡಿದೆ.

​​ವಾಲ್ಪರೈನ ಅಣ್ಣಾಮಲೈ ಬೆಟ್ಟಗಳು ಮತ್ತು ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ, ಬೇರೆಲ್ಲಿಯೂ ಕಂಡುಬರದ ಒಂದು ಜಾತಿಯ ಸಸ್ತನಿಗಳು ವಾಸಿಸುತ್ತವೆ; ಅವೇ ಸಿಂಗಳೀಕಗಳು ( ಸಿಂಹ ಬಾಲದ ಕೋತಿಗಳು - ಲಯನ್ ಟೇಲ್ಡ್ ಮಕಾಕ್). ಸಾವಿರಾರು ವರ್ಷಗಳಿಂದಲೂ, ಅವು ಮಳೆಕಾಡಿನ ಮೇಲಾವರಣದಲ್ಲಿ ಮರದಿಂದ ಮರಕ್ಕೆ ಹಾರುತ್ತಾ, ತಮ್ಮ ನೆಚ್ಚಿನ ಹಣ್ಣುಗಳನ್ನು ತಿನ್ನುತ್ತಾ ಬದುಕಿವೆ. ಆದರೆ, ಕಳೆದ ಎರಡು ಶತಮಾನಗಳಲ್ಲಿ ಎಲ್ಲವೂ ಬದಲಾಗಿದೆ. ಮರದ ದಿಮ್ಮಿಗಳಿಗಾಗಿ ಈ ಹಳೆಯ ಕಾಡಿನ ಬಹುಪಾಲು ಮರಗಳ ಹನನ ನಡೆದುಹೋಗಿದೆ ಮತ್ತು ಅದೇ ಸ್ಥಳವು ಈಗ ವಾಣಿಜ್ಯಿಕ ಉದ್ದೇಶಗಳಿಗಾಗಿ ತೋಟಗಳಾಗಿ ಪರಿವರ್ತನೆ ಹೊಂದಿವೆ. ನೋಡನೋಡುತ್ತಲೇ, ಅಲ್ಲಿ ಒಂದು ಸಣ್ಣ ಕುಗ್ರಾಮವು ಸೃಷ್ಟಿಯಾಗಿ, ನಂತರ ಅದು ಹಳ್ಳಿಯಾಗಿ ಬೆಳೆದು, ಈಗ ಮಾರುಕಟ್ಟೆಗಳು, ಆಸ್ಪತ್ರೆಗಳು ಮತ್ತು ಜನರ ಗಲಗಲದಿಂದ ತುಂಬಿರುವ ಪುಟ್ಟ ಪಟ್ಟಣವಾಗಿ ಮಾರ್ಪಾಡಾಗಿದೆ.

ಇದರ ಫಲವಾಗಿ, ತಮ್ಮ ಮೂಲ ಆವಾಸಸ್ಥಾನವನ್ನು ಕಳೆದುಕೊಂಡ ಸಿಂಹ-ಬಾಲದ ಕೋತಿಗಳು (ಮಕಾಕಾ ಸೈಲೆನಸ್) ಅಳಿವಿನಂಚಿನಲ್ಲಿರುವ ಪ್ರಭೇದವೆನಿಸಿಕೊಂಡಿದೆ ಮತ್ತು ಅವುಗಳ ಜನಸಂಖ್ಯೆಯು ಈಗ ಕೆಲವೇ ಸಾವಿರಗಳಲ್ಲಿದೆ ಎಂಬುದು ಅವುಗಳ ದುರಂತಮಯ ಬದುಕಿಗೆ ಹಿಡಿದ ಕನ್ನಡಿಯಾಗಿದೆ. "ಪಶ್ಚಿಮ ಘಟ್ಟದಾದ್ಯಂತದ ಸಿಂಹ-ಬಾಲದ ಕೋತಿಗಳ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಇತ್ತೀಚಿನ ಅಧ್ಯಯನವು, ಅವುಗಳ ಸಂಖ್ಯೆಯು ಕೇವಲ 3000–4500ದ ನಡುವೆ ಇರಬಹುದೆಂದು ಅಂದಾಜಿಸುತ್ತದೆ" ಎಂದು ಆಶ್ನಿ ಧಾವಳೆ ಹೇಳುತ್ತಾರೆ. ಇವರು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಸಂಶೋಧಕರಾಗಿದ್ದು, ಕಳೆದ ಐದು ವರ್ಷಗಳಿಂದ ಈ ಕೋತಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.

ಇದೇ ಪ್ರಭೇದದ ಬಗ್ಗೆ ನಡೆಸಲಾದ ಆಳವಾದ ಅಧ್ಯಯನವೊಂದರಲ್ಲಿ, ವಾಲ್ಪರೈ ಬಳಿಯ ಪುದುತೋಟ್ಟಮ್ ಪ್ರದೇಶದಲ್ಲಿನ ಸಿಂಗಳೀಕಗಳ ವರ್ತನೆಗಳನ್ನು ಗಮನಿಸುತ್ತಿದ್ದ ಆಶ್ನಿ ಅವರು, ಅವುಗಳ ನಡವಳಿಕೆಯಲ್ಲಿ ಅತ್ಯಾಕರ್ಷಕ ಮತ್ತು ಆತಂಕಕಾರಿ ಎನಿಸುವಂತಹ ಸಂಗತಿಯನ್ನು ಪತ್ತೆ ಹಚ್ಚಿದರು. ಅಲ್ಲಿದ್ದ ಕಾಡುಸಿಂಗಳೀಕಗಳ ನಾಲ್ಕು ಗುಂಪುಗಳಲ್ಲಿ, ೨೬ ಸದಸ್ಯರನ್ನು ಹೊಂದಿದ್ದ  ಒಂದು ಗುಂಪನ್ನು ಅವರು, ಪ್ರತಿದಿನವೂ, ಸುಮಾರು ನಾಲ್ಕು ತಿಂಗಳವರೆಗೆ ನಿಕಟವಾಗಿ ಗಮನಿಸಿದರು; ಅರಣ್ಯದ ಒಳಾಂಗಣ, ಕಾಫಿ ತೋಟಗಳು, ಅರಣ್ಯದ ಅಂಚುಗಳು ಮತ್ತು ಮಾನವನ ವಸಾಹತುಗಳಲ್ಲಿ ಸಂಚರಿಸುವಾಗ ಸಿಂಗಳೀಕಗಳು ತಮ್ಮ ನಡವಳಿಕೆ ಮತ್ತು ಸಾಮಾಜಿಕ ಸಂವಹನಗಳಲ್ಲಿ ಅನೇಕ ವ್ಯತ್ಯಾಸಗಳನ್ನು ತೋರಿಸಿದವು ಎಂದು ಅವರು ಕಂಡುಕೊಂಡರು. ಈ ಅಧ್ಯಯನದ ಆವಿಷ್ಕಾರಗಳನ್ನು ಪ್ಲಾಸ್ ಒನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಕೋತಿಗಳೂ ಸೇರಿದಂತೆ ಅನೇಕ ಪ್ರಾಣಿಗಳು,  ಹೆಚ್ಚಿದ ಮಾನವ ಸಂವಹನಗಳಿಗೆ ಪ್ರತಿಕ್ರಿಯೆಯಾಗಿ, ತಮ್ಮ ನಡವಳಿಕೆಗಳಲ್ಲಿ ಬದಲಾವಣೆಗಳನ್ನು ಪ್ರದರ್ಶಿಸಿವೆ. ಪ್ರವಾಸಿಗರು ಹೆಚ್ಚಿಗೆ ಕಂಡುಬರುವ ಪ್ರದೇಶಗಳಲ್ಲಿ, ರೀಸಸ್ ಮಕಾಕ್ ಪ್ರಭೇದದ ಕೋತಿಗಳು ​​ತಮ್ಮ ಆಹಾರಶೈಲಿಯನ್ನೇ ಬದಲಾಯಿಸಿಕೊಂಡಿವೆ ಎಂದು ಅಧ್ಯಯನಗಳು ತೋರಿಸಿವೆ. ಪ್ರವಾಸಿಗರು ಏನು ನೀಡುತ್ತಾರೆ ಎಂಬುದರ ಆಧಾರದ ಮೇಲೆ ಅವುಗಳ ಆಹಾರ ಪದ್ಧತಿ ಬದಲಾಗುತ್ತದೆ. ಬಂಡೀಪುರದಲ್ಲಿ ಕೂಡ, ಬಾನೆಟ್ ಮಕಾಕ್ ಪ್ರಭೇದದ ಕೋತಿಗಳು, ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಆಹಾರವನ್ನು ಬೇಡುತ್ತಾ ​​ಕೈ ಚಾಚುವುದನ್ನು ಗಮನಿಸಲಾಗಿದೆ. ಇದು ಅವುಗಳ ಚತುರ ನಡೆ ಎನ್ನುತ್ತೀರಾ?  ಇದು ಅಪಾಯಕಾರಿ ನಡೆ ಎಂಬುದು ಸಂಶೋಧಕರ ವಾದ!

ಬಾನೆಟ್ ಮತ್ತು ರೀಸಸ್ ಮಕಾಕ್ ಗಳಂತಹ  ಸಾಮಾನ್ಯ ಪ್ರಭೇದದ ಕೋತಿಗಳು, ಬದಲಾಗುತ್ತಿರುವ ಭೂಪ್ರದೇಶಗಳಿಗೆ ಯಶಸ್ವಿಯಾಗಿ ಹೊಂದಿಕೊಂಡಿವೆ. ಅವು ‘ಸಾಮಾನ್ಯವಾದಿಗಳು’ ಅಂದರೆ  ಅವು ಏನು ಬೇಕಾದರೂ ತಿನ್ನಬಹುದು ಮತ್ತು ಎಲ್ಲಿಯಾದರೂ ಬದುಕಬಹುದು. ಆದರೆ, ಸಿಂಗಳೀಕಗಳು ಅವುಗಳಿಗಿಂತಾ ​​ವಿಭಿನ್ನ! ಅವು ಕಾಡಿನ ಮೇಲಾವರಣವನ್ನು ಅವಲಂಬಿಸಿ ಆಹಾರವನ್ನು ಹುಡುಕಿಕೊಂಡು ಬದುಕುವ ಜೀವಿಗಳು. ಅವು ಸ್ಥಳೀಯ ಹಣ್ಣುಗಳನ್ನು ತಿನ್ನುತ್ತವೆ ಮತ್ತು ಪಶ್ಚಿಮ ಘಟ್ಟದ ​​ಕಾಡುಗಳಲ್ಲಿ ಮಾತ್ರ ಕಂಡುಬರುವ ಕೀಟಗಳನ್ನು ಸೇವಿಸುತ್ತವೆ. ಈ ಪ್ರಭೇದದ ಗುಂಪಿನ ಸಾಮಾಜಿಕ ಸಂರಚನೆಯೂ ವಿಭಿನ್ನವಾಗಿದೆ; ಒಂದೇ ಗಂಡು ಮತ್ತು ಅನೇಕ ಹೆಣ್ಣುಗಳಿಂದ ಕೂಡಿದ ಕಟ್ಟುನಿಟ್ಟಾದ ಕ್ರಮಾನುಗತವನ್ನು ಈ ಸಂರಚನೆಯಲ್ಲಿ ಕಾಣಬಹುದು. ಮನುಷ್ಯರು ಇವುಗಳ ಆವಾಸಸ್ಥಾನಗಳಲ್ಲಿ ವಾಸಿಸುತ್ತಿರುವುದು, ಅನಿರೀಕ್ಷಿತ ರೀತಿಯಲ್ಲಿ ಸಿಂಗಳೀಕಗಳ ಮೇಲೆ ಪರಿಣಾಮ ಬೀರಿದೆ.

ಮಾನವ ಮೂಲದ ಆಹಾರದ ಆಮಿಷ - ವಿವಾದದ ಅಡ್ಡವಾಸನೆ!

ಪ್ರಾಕೃತಿಕವಾಗಿ, ಸಿಂಗಳೀಕಗಳು ಮರಗಳ ಮೇಲೆ ಅಥವಾ ನೆಲದ ಮೇಲೆ ಬಿದ್ದ ಎಲೆಗಳು ಮತ್ತು ತೊಗಟೆಗಳ ನಡುವೆ ಆಹಾರವನ್ನು ಹುಡುಕುವಲ್ಲಿ ಗಮನಾರ್ಹ ಸಮಯವನ್ನು ಕಳೆಯುತ್ತವೆ ಮತ್ತು ಶಕ್ತಿಯನ್ನು ವ್ಯಯಿಸುತ್ತವೆ. ಆದರೆ, ಮಾನವನ ಉಪಸ್ಥಿತಿಯಿರುವ ಪ್ರದೇಶಗಳಲ್ಲಿ, ಹಣ್ಣುಗಳು, ತರಕಾರಿಗಳು, ಬೇಯಿಸಿದ ಅಥವಾ ಪ್ಯಾಕ್ ಮಾಡಿದ ಕ್ಯಾಲೋರಿ ಭರಿತ ಆಹಾರವು ಸುಲಭವಾಗಿ ಲಭ್ಯವಿದೆ. ಈ ಆಮಿಷವು, ಅವುಗಳ ನೈಸರ್ಗಿಕ ನಡವಳಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿದೆ ಎಂದು ಕಂಡುಬರುತ್ತದೆ. "ಮಾನವನು ಮಾರ್ಪಡಿಸಿದ ಆವಾಸಸ್ಥಾನಗಳಲ್ಲಿ, ಸಿಂಗಳೀಕಗಳು ಪ್ರದರ್ಶಿಸಿದ ಆಕ್ರಮಣಶೀಲತೆ (ಗಂಡುಗಳಲ್ಲಿ) ಮತ್ತು ಆಪ್ತತೆ (ಹೆಣ್ಣುಗಳಲ್ಲಿ)ಯಂತಹ ವರ್ತನೆಗಳಲ್ಲಿ ಒಟ್ಟಾರೆಯಾಗಿ ಹೆಚ್ಚಳವನ್ನು ನಾವು ಗಮನಿಸಿದ್ದೇವೆ" ಎಂದು ಆಶ್ನಿ ತಮ್ಮ ಸಂಶೋಧನೆಗಳ ಬಗ್ಗೆ ವಿವರಿಸುತ್ತಾರೆ.


ಫೈಕಸ್ ಮರದ ಮೇಲೆ ತಾಯಿ ಮತ್ತು ಮಗುವಿನ ಆಹಾರ ಸೇವನೆ (ಚಿತ್ರ ಕೃಪೆ: ಆಶ್ನಿ ಧಾವಳೆ)

ನಮ್ಮ ಅಧ್ಯಯನದ ಭಾಗವಾಗಿರುವ ಸ್ಥಳಗಳಲ್ಲಿ, ಹೆಚ್ಚು ಮಾನವ ಉಪಸ್ಥಿತಿಯನ್ನು ಹೊಂದಿರುವ ಸ್ಥಳವಾದ ಪುದುತೋಟ್ಟಂನ ಆಸ್ಪತ್ರೆಯ ಆವರಣದಲ್ಲಿ, ಸಿಂಗಳೀಕಗಳು ಕಡಿಮೆ ಸಮಯವನ್ನು ಆಹಾರ ಹುಡುಕಲು ಮತ್ತು ಹೆಚ್ಚಿನ ಸಮಯವನ್ನು ವಿಶ್ರಾಂತಿ ಪಡೆಯಲು ಬಳಸುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಏಕೆಂದರೆ, ಅವು ಸದಾಕಾಲ ಆಹಾರವನ್ನು ಹೊಂದಿರುವ ಮನುಷ್ಯರನ್ನು ಹುಡುಕುತ್ತಿದ್ದವಂತೆ! ಮಾನವ ಪ್ರಾಬಲ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಂಶೋಧಕರು ಸಿಂಗಳೀಕಗಳ ಆಹಾರದ ಅಂಶಗಳನ್ನು ಅಳೆಯಲು ಸಾಧ್ಯವಾಗಲಿಲ್ಲ. ಏಕೆಂದರೆ, ತಮಗೆ ದೊರೆತ ಮಾನವ ಮೂಲದ ವಿವಿಧ ಆಹಾರಗಳನ್ನು ಅವು ಸೇವಿಸುತ್ತಿದ್ದವು. ಮೇಲಾವರಣವನ್ನು ಕಳೆದುಕೊಂಡ, ಕಡಿಮೆ ಸಾಂದ್ರತೆಯಿರುವ ಕಾಡುಗಳ ಸಣ್ಣ ಸಣ್ಣ ತೇಪೆಗಳಂತಹ ಪ್ರದೇಶಗಳಲ್ಲಿ, ಸಿಂಗಳೀಕಗಳು ಹಣ್ಣುಗಳು ಮತ್ತು ಇತರ ಸಸ್ಯಾಧಾರಿತ ಆಹಾರಗಳಿಗಿಂತಾ ಕೀಟಗಳನ್ನು ಸೇವಿಸಲು ಒಲವು ತೋರುತ್ತವೆ ಎಂದು ಕಂಡುಬಂದಿದೆ.

ಇತರ ಸಸ್ತನಿಗಳಂತೆಯೇ, ಸಿಂಗಳೀಕಗಳು ಕೂಡ ತಮ್ಮ ​​ಗುಂಪಿನೊಳಗೆ ಬಲವಾದ ಸಾಮಾಜಿಕ ಶ್ರೇಣಿಯ ವ್ಯವಸ್ಥೆಯನ್ನು ಹೊಂದಿವೆ. ಈ ಗುಂಪುಗಳಲ್ಲಿ ಪ್ರಬಲ, ಮಧ್ಯಮ ಮತ್ತು ಅಧೀನ ಎಂಬ ಮೂರು ಬಗೆಯ ಹೆಣ್ಣುಗಳಿರುತ್ತವೆ. "ಈ ಸಾಮಾಜಿಕ ಕ್ರಮಾನುಗತವು ಅವುಗಳ ದೈನಂದಿನ ಚಟುವಟಿಕೆಗಳನ್ನು ನಿರ್ದೇಶಿಸುತ್ತದೆ; ಅವು ಆಹಾರವನ್ನು ಹೇಗೆ ಸಂಪಾದಿಸುತ್ತವೆ, ಪರಸ್ಪರ ಸಹಿಷ್ಣುತೆ ಹೇಗಿರುತ್ತದೆ ಮತ್ತು ಅವುಗಳ ಚಲನವಲನ ಹೇಗಿರುತ್ತದೆ ಎಂಬುದನ್ನು ಈ ಕ್ರಮಾಗತವು ನಿರ್ಧರಿಸುತ್ತದೆ" ಎಂದು ಆಶ್ನಿ ವಿವರಿಸುತ್ತಾರೆ. ನೈಸರ್ಗಿಕ ಆವಾಸಸ್ಥಾನಗಳಲ್ಲಿ, ಈ ಗುಂಪುಗಳ ಪ್ರಬಲ ಹೆಣ್ಣುಗಳು ಹೆಚ್ಚು ಆಹಾರವನ್ನು ಸಂಪಾದಿಸುತ್ತವೆ ಮತ್ತು ಸೇವಿಸುತ್ತವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಮಾನವನ ಉಪಸ್ಥಿತಿ ಹೆಚ್ಚಿಗೆ ಇರುವ ಪ್ರದೇಶಗಳಲ್ಲಿ, ಪ್ರಬಲ ಹೆಣ್ಣುಗಳಿಗಿಂತಾ ಅಧೀನ ಹೆಣ್ಣುಗಳು ಹೆಚ್ಚು ಆಹಾರ ಪಡೆದು, ಸೇವಿಸುವುದನ್ನು ಈ ಅಧ್ಯಯನವು ಬೆಳಕಿಗೆ ತಂದಿದೆ. ಈ ರೀತಿಯ ಮಾರ್ಪಾಡು,ಅವುಗಳ ಸಾಮಾಜಿಕ ಕ್ರಮದ ಸಮತೋಲನವನ್ನು ಹಾಳುಗೆಡವುತ್ತದೆ.

ಆಶ್ನಿಯವರು, ತಮ್ಮ ಅಧ್ಯಯನದ ಭಾಗವಾಗಿ, ‘ಆಲೋಗ್ರೂಮಿಂಗ್’ ಎಂಬ ವರ್ತನೆಯನ್ನು  ಗಮನಿಸಿದರು; ಇದು ಸಾಮಾಜಿಕ ಶ್ರೇಣಿಯನ್ನು ಅವಲಂಬಿಸಿರುವಂತಹ ಸಸ್ತನಿಗಳ ನಡುವಿನ ಸಾಮಾಜಿಕ ಸಂವಹನವಾಗಿದೆ. "ಸಾಮಾಜಿಕ ಶ್ರೇಣಿಯಲ್ಲಿ ಹೆಚ್ಚಾಗಿ ಒಂದೇ ಮಟ್ಟಕ್ಕೆ ಸೇರಿದ ಜೋಡಿಗಳ  ನಡುವೆ ‘ಆಲೋಗ್ರೂಮಿಂಗ್’ ಅನ್ನು ಗಮನಿಸಲಾಗಿದೆ; ಅಂದರೆ, ಇದರಲ್ಲಿ ಒಂದು ಸಿಂಗಳೀಕವು ತನ್ನದೇ ಶ್ರೇಣಿಯ ಮತ್ತೊಂದು ಸಿಂಗಳೀಕದ ತುಪ್ಪಳದಲ್ಲಿರುವ ಹೇನು ಮತ್ತು ಕೊಳಕನ್ನು ಹೆಕ್ಕಿ ತೆಗೆದು ಸ್ವಚ್ಚಗೊಳಿಸುತ್ತದೆ.  ಈ ವಿದ್ಯಮಾನವು ಎರಡು ಸಿಂಗಳೀಕಗಳ ನಡುವಿನ ಸಾಮಾಜಿಕ ಬಂಧದ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ. ”ಎಂದು ಅವರು ವಿವರಿಸುತ್ತಾರೆ. ಆದರೆ, ಮಾನವ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ತಮ್ಮ ಪ್ರಾಕೃತಿಕ ನಡವಳಿಕೆಗೆ ವ್ಯತಿರಿಕ್ತವಾಗಿ, ವಿವಿಧ ಶ್ರೇಣಿಯ ಸಿಂಗಳೀಕಗಳು ಇಂತಹ ಅಲಂಕಾರ ಮತ್ತು ಉಪಚಾರದಲ್ಲಿ ಪರಸ್ಪರ ತೊಡಗಿರುವುದು ಕಂಡುಬಂದಿದೆ. ಅಧೀನ ಶ್ರೇಣಿಯ ಸಿಂಗಳೀಕಗಳು ಪ್ರಬಲ ಶ್ರೇಣಿಯ ಸಿಂಗಳೀಕಗಳನ್ನು ಅಲಂಕರಿಸಲು ಹೆಚ್ಚು ಸಮಯವನ್ನು ಮೀಸಲಿಡುತ್ತಿರುವುದು ಈ ಅಧ್ಯಯನದ ಮೂಲಕ ತಿಳಿದುಬಂದಿದೆ. ಈ ನಡವಳಿಕೆಯು, ಆಹಾರವನ್ನು ಒದಗಿಸಿದ ಕಾರಣಕ್ಕಾಗಿ ಸಿಗುವ ಬಹುಮಾನವಿರಬಹುದು ಎಂಬುದು  ಸಂಶೋಧಕರ ಅಂಬೋಣ. ಮತ್ತೊಂದು ಗಮನಾರ್ಹ ಅಂಶವೆಂದರೆ, ಸಿಂಗಳೀಕಗಳು ​​ಮಾನವ ಪ್ರಾಬಲ್ಯದ ಪ್ರದೇಶಗಳಲ್ಲಿ  ಅನೇಕ ಬಾರಿ, ಹೆಚ್ಚಿನ ಆವರ್ತನಗಳಲ್ಲಿ ಇಂತಹ ಅಂದಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗುವುದು ಕಂಡುಬಂದರೂ, ಅದಕ್ಕಾಗಿ ಮೀಸಲಿಟ್ಟ ಒಟ್ಟಾರೆ ಸಮಯವು ಕಡಿಮೆಯೇ ಎಂದು ಕಂಡುಬಂದಿದೆ. ಮಾನವ ಪ್ರಾಬಲ್ಯದ ಪ್ರದೇಶಗಳು, ಬಾನೆಟ್ ಮಕಾಕ್ ಪ್ರಭೇದದ ಕೋತಿಗಳಂತೆಯೇ ಸಿಂಗಳೀಕಗಳ ಕುಟುಂಬ ಸಂಯೋಜನೆಗೂ ಅಡ್ಡಿಪಡಿಸಿವೆ

"ಕೆಲವು ಮಾನವ ಪ್ರಾಬಲ್ಯದ ಪ್ರದೇಶಗಳಲ್ಲಿ, ಬಾನೆಟ್ ಮಕಾಕ್ ಪ್ರಭೇದದ ಕೋತಿಗಳು, ತಮ್ಮ ಪ್ರಾಕೃತಿಕ  ನಡವಳಿಕೆಗೆ ವ್ಯತಿರಿಕ್ತವಾಗಿ, ಒಂದೇ ಗಂಡು ಮತ್ತು ಹಲವು ಹೆಣ್ಣುಗಳನ್ನು ಹೊಂದಿರುವ ಸಣ್ಣ ಗುಂಪುಗಳಾಗಿ ವಿಭಜನೆಗೊಳ್ಳಲು ಪ್ರಾರಂಭಿಸಿವೆ. ಸಿಂಗಳೀಕಗಳಲ್ಲಿ ಇದೇ ರೀತಿಯ ರೂಪಾಂತರವು ಕಂಡುಬರುತ್ತಿದೆ. ಈಗೀಗ, ಮನುಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಸಿಂಗಳೀಕಗಳ ಗುಂಪುಗಳು, ಅನೇಕ ಗಂಡು ಮತ್ತು ಅನೇಕ ಹೆಣ್ಣುಗಳನ್ನು ಒಳಗೊಂಡಿವೆ; ಈ ಪ್ರಭೇದದಲ್ಲಿ ಇದು ಹಿಂದೆಂದೂ ಕಂಡುಕೇಳರಿಯದ ವಿದ್ಯಮಾನ.” ಎಂದು ಈ ಅಚ್ಚರಿಯ ಕಡೆಗೆ ಆಶ್ನಿ ಅವರು ಗಮನಸೆಳೆಯುತ್ತಾರೆ.

ಕಾಡಿನ ಅಂಚುಗಳ ಮೂಲಕ ಹಾದುಹೋಗುವ ಪ್ರವಾಸಿಗಳು,  ಸಿಂಗಳೀಕಗಳಿಗೆ ಹೆಚ್ಚಾಗಿ ಆಹಾರ ನೀಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದರ ಫಲವಾಗಿ, ಅವು ವಾಹನಗಳು ಮತ್ತು ಪ್ರವಾಸಿಗರ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು, ಮಾನವನ ಮತ್ತು ಅವುಗಳ ನಡುವಿನ ಸಾಮಾಜಿಕ ಅಂತರ ಕಡಿಮೆಯಾಗಿದೆ. ಇದು ಸಿಂಗಳೀಕ-ಮಾನವ ಸಂಘರ್ಷಗಳನ್ನು ಸಹ ಹೆಚ್ಚಿಸಬಹುದು ಎಂದು ಸಂಶೋಧಕರು ಹೇಳುತ್ತಾರೆ. ಆದರೆ, ದುರಂತವೆಂದರೆ, ಈಗಾಗಲೇ ಅಳಿವಿನಂಚಿನಲ್ಲಿರುವ ಈ ಸಿಂಗಳೀಕಗಳು,  ನಮ್ಮ ಆಹಾರದಿಂದ ಆಮಿಷಕ್ಕೊಳಗಾಗಿ ಓಡಿಬಂದು, ರಸ್ತೆಯಲ್ಲಿ ಅತಿವೇಗದ ವಾಹನಗಳಿಗೆ ಬಲಿಯಾಗುತ್ತಿವೆ.

ಸ್ಥಳೀಯ ಸಿಂಗಳೀಕಗಳು ವೇಗವಾಗಿ ಬದಲಾಗುತ್ತಿರುವ ಆವಾಸಸ್ಥಾನಗಳಿಗೆ ತ್ವರಿತವಾಗಿ ಹೇಗೆ ಹೊಂದಿಕೊಳ್ಳುತ್ತಿವೆ ಮತ್ತು ಮಾನವರೊಂದಿಗೆ ಸಂವಹನ ನಡೆಸಲು ವಿನೂತನ ತಂತ್ರಗಳನ್ನು ಹೇಗೆ ವಿನ್ಯಾಸಗೊಳಿಸಿಕೊಂಡಿವೆ ಎಂಬುದನ್ನು ಈ ಸಂಶೋಧನೆಯ ಫಲಿತಾಂಶಗಳು ತೋರಿಸುತ್ತಿವೆ. ಅವುಗಳ ಈ ಬದಲಾದ ಪ್ರತಿಕ್ರಿಯೆಗಳ ಹಿಂದಿನ ವೈಯಕ್ತಿಕ ಮಟ್ಟದ ಪ್ರೇರೇಪಣೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತೂ ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ; ಆದಾಗ್ಯೂ, ಪ್ರಸ್ತುತ ಸಂಶೋಧನೆಗಳು, ಈ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗೆ ಬೇಕಾದ ಮಾರ್ಗದರ್ಶನ ಒದಗಿಸಲು ಸಹಾಯ ಮಾಡುತ್ತಿವೆ ಮತ್ತು ಆ ಸಂರಕ್ಷಣಾ ಕ್ರಮಗಳಲ್ಲಿ ಕೆಲವು ಈಗಾಗಲೇ ಪ್ರಾರಂಭವಾಗಿವೆ.

"ಸಿಂಗಳೀಕಗಳ ದೀರ್ಘಕಾಲೀನ ಉಳಿವನ್ನು ಖಾತರಿಪಡಿಸಲು, ನಾವು ರಾಜ್ಯ ಅರಣ್ಯ ಇಲಾಖೆ, ಸುತ್ತಮುತ್ತಲಿನ ತೋಟದ ಮಾಲೀಕರೂ ಸೇರಿದಂತೆ ವಿವಿಧ ಸ್ಥಳೀಯ ಪಾಲುದಾರರೊಂದಿಗೆ, ಜೊತೆಗೆ, ನೇಚರ್ ಕನ್ಸರ್ವೇಶನ್ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆಯೊಂದಿಗೆ ನಿಯಮಿತವಾಗಿ ಕಾರ್ಯಪ್ರವೃತ್ತರಾಗಿದ್ದೇವೆ." ಎಂದು ಆಶ್ನಿ ಭರವಸೆದಾಯಕ ಮಾತುಗಳನ್ನಾಡುತ್ತಾರೆ.


 

ವಿವೇಚನೆ ಮರೆತ ಮನುಷ್ಯ, ಈ ‘ವಿಶಿಷ್ಟ’ ಪ್ರಭೇದವನ್ನು ಎಲ್ಲಿಯಾದರೂ ಹೇಗೆಬೇಕಾದರೂ ಹೊಂದಿಕೊಳ್ಳಬಲ್ಲ 'ಸಾಮಾನ್ಯ' ಪ್ರಭೇದವಾಗಿ ಪರಿವರ್ತಿಸಿದ್ದಾನೆಯೇ? ಇದು ಈಗ ನಮ್ಮ ಮುಂದಿರುವ ಯಕ್ಷಪ್ರಶ್ನೆ! ಅಚ್ಚರಿಯೆಂದರೆ, ಇದಕ್ಕೆ ಉತ್ತರ ಕಂಡುಕೊಳ್ಳಲು, ತಾನು ಮರೆತ ವಿವೇಚನೆಯನ್ನೊಮ್ಮೆ ನೆನಪಿಸಿಕೊಂಡರೆ ಸಾಕು; ಪ್ರಕೃತಿ ಮಾತೆ ಕಳೆದುಹೋದ ಸಮತೋಲನವನ್ನು ಮತ್ತೆ ಹಿಂದಿರುಗಿಸಿಯಾಳು!