ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಮಕ್ಕಳ ಆರೈಕೆ ಯಾರು ಮಾಡುತ್ತಾರೆ? ತಂದೆಯೋ ಅಥವಾ ತಾಯಿಯೋ?

Read time: 1 min
ಬೆಂಗಳೂರು
10 Sep 2020
ಮಕ್ಕಳ ಆರೈಕೆ ಯಾರು ಮಾಡುತ್ತಾರೆ? ತಂದೆಯೋ ಅಥವಾ ತಾಯಿಯೋ?

ಮೊಟ್ಟೆಯೊಂದಿಗೆ ಜೋಡಿ ಕ್ರೆಸ್ಟೆಡ್ ಟ್ರೀಸ್ವಿಫ್ಟ್ಗಳು [ಚಿತ್ರ: ಆದಿತ್ಯ ಪಾಲ್ / ಸಿಸಿ ಬೈ-ಎಸ್‌ಎ 4.0]

ಮನುಷ್ಯರು ಹೇಗೆ ತಮ್ಮ ಮಕ್ಕಳನ್ನು ಪೋಷಿಸಿ ದೊಡ್ಡವರನ್ನಾಗಿ ಮಾಡುತ್ತಾರೊ ಹಾಗೆಯೇ ಪ್ರಾಣಿಗಳಲ್ಲೂ ಈ ಗುಣವನ್ನು ಕಾಣಬಹುದು. ಅನೇಕ ಪ್ರಭೇದಗಳಲ್ಲಿ ಮನುಷ್ಯರಂತೆಯೇ ಪ್ರಾಣಿಗಳು ತಮ್ಮ ಮರಿಗಳ ಉತ್ತಮ ಬೆಳೆವಣಿಗೆಗೆ ಮತ್ತು ಸುರಕ್ಷೆತೆಗೆ ಅಗತ್ಯವಾದ ವಿವಿಧ ಸೌಲಭ್ಯಗಳನ್ನು ಒದಗಿಸುತ್ತವೆ. ಆಹಾರ ನೀಡುವುದು, ಗೂಡು ಕಟ್ಟುವುದು, ಕಾವು ಕೂರುವುದು, ಪರಭಕ್ಷರಿಂದ ರಕ್ಷಿಸುವುದು, ಬದುಕಲು ಅಗತ್ಯವಿರುವ ಪಾಠ ಹೇಳಿಕೊಡುವುದು ಇತ್ಯಾದಿ ಪ್ರಾಣಿಗಳಲ್ಲಿ ಕಂಡುಬರುವ ಪೋಷಣೆಯ ಕೆಲವು ವಿಧಾನಗಳಾಗಿವೆ.

ಪ್ರಾಣಿ ಪ್ರಭೇದಗಳಲ್ಲಿ ಪೋಷಕರ ಆರೈಕೆಯಲ್ಲಿ ಲಿಂಗವು ಬಹುಮುಖ್ಯ ಪಾತ್ರವಹಿಸುತ್ತದೆ. ಹೆಚ್ಚಿನ ಸಂಖ್ಯೆಯ ಮೀನುಗಳಲ್ಲಿ, ಸರೀಸೃಪಗಳಲ್ಲಿ ಮತ್ತು ಆಕಶೇರುಗಳಲ್ಲಿ ಯಾವುದೇ ಬಗೆಯ ಆರೈಕೆ ಕಂಡು ಬರುವುದಿಲ್ಲ. ಶೇಕಡಾ ೯೦ಕ್ಕಿಂತ ಹೆಚ್ಚು ಪಕ್ಷಿಗಳು ಉಭಯ ಪೋಷಕರ ಆರೈಕೆ ಹೊಂದಿವೆ ಮತ್ತು ಶೇಕಡಾ ೯೦ರಷ್ಟು ಸಸ್ತನಿಗಳಲ್ಲಿ ಹೆಣ್ಣು ಮಾತ್ರ ಆರೈಕೆ ಮಾಡುತ್ತಾಳೆ. ಈ ವೈವಿಧ್ಯತೆಯ ಹೊರತಾಗಿಯೂ ಒಟ್ಟಾರೆ ಪ್ರಾಣಿ ಪ್ರಪಂಚದಲ್ಲಿ ಸಂತತಿಗಳ ಆರೈಕೆಯಲ್ಲಿ ಹೆಣ್ಣು ಪ್ರಾಣಿಗಳು ಗಂಡು ಪ್ರಾಣಿಗಳಿಗಿಂತ ಹೆಚ್ಚಿನ ಕಾಳಜಿ ವಹಿಸುತ್ತವೆ. ಈ ಮಾದರಿಯನ್ನು ವಿವರಿಸಲು ಟ್ರಿವೆರ್ಸ್ ಎಂಬ ವಿಜ್ಞಾನಿ ಒಂದು ಪ್ರಭಾವಶಾಲಿ ಕಲ್ಪನೆಯನ್ನು (ಹೈಪೊಥೆಸಿಸ್) 1972ರಲ್ಲಿ ಮಂಡಿಸಿದ್ದಾನೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಹೊಸದೊಂದು ಅಧ್ಯಯನವು ಟ್ರಿವೆರ್ಸ್ನ ಈ ಕಲ್ಪನೆಯನ್ನು ಪ್ರಶ್ನಿಸುತ್ತದೆ. ಎವೊಲ್ಯೂಷನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಮುಂದಾಳತ್ವವನ್ನು ಪ್ರಿಯ ಅಯ್ಯರ್ ಎಂಬ ಸಂಶೋಧಕಿಯು ವಹಿಸಿದ್ದಾರೆ. 

ಗಂಡು ಮತ್ತು ಹೆಣ್ಣು ಉತ್ಪಾದಿಸುವ ಲಿಂಗಾಣುಗಳ ಗಾತ್ರದ ವ್ಯತ್ಯಾಸವನ್ನು ಅನಿಸೋಗಾಮಿ ಎಂದು ವ್ಯಾಖ್ಯಾನಿಸುತ್ತಾರೆ. ಟ್ರಿವೆರ್ಸ್ನ ಕಲ್ಪನೆಯ ಪ್ರಕಾರ ಅನಿಸೋಗಾಮಿ ಪ್ರಾಣಿಗಳಲ್ಲಿ ಕಂಡುಬರುವ ಪೋಷಕರ ಆರೈಕೆಯ ಮಾದರಿಗೆ ಕಾರಣವಾಗಿರುತ್ತದೆ. ಈ ಕಲ್ಪನೆಗೆ ‘ಪೇರೆಂಟಲ್ ಇನ್ವೆಸ್ಟ್ಮೆಂಟ್ ಹೈಪೊಥೆಸಿಸ್’ (ಪೋಷಕರ ಹೂಡಿಕೆ ಕಲ್ಪನೆ) ಯೆಂದು ಕರೆಯಲಾಗಿದೆ. ಟ್ರಿವೆರ್ಸ್ ಎರಡು ವಾದಗಳನ್ನು ಮಂಡಿಸುತ್ತಾನೆ. ಅವುಗಳನ್ನು ನಂತರದಲ್ಲಿ 'ಗಂಡು' ಮತ್ತು 'ಹೆಣ್ಣು' ವಾದಗಳೆಂದು ಕರೆಯಲಾಗಿದೆ. ಹೆಣ್ಣಿನ ಲಿಂಗಾಣುವಿನ ಗಾತ್ರ ದೊಡ್ಡದಾಗಿರುತ್ತದೆ. ಇದನ್ನೇ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಪ್ರಾಣಿಗಳಲ್ಲಿ ಯಾವುದರ ಲಿಂಗಾಣುವಿನ ಗಾತ್ರ ದೊಡ್ಡದಾಗಿರುತ್ತದೆಯೋ ಅದನ್ನು ಹೆಣ್ಣೆಂದು ಮತ್ತು ಯಾವುದರ ಲಿಂಗಾಣು ಚಿಕ್ಕದಾಗಿರುತ್ತದೆಯೋ ಅದನ್ನು ಗಂಡೆಂದು ವ್ಯಾಖ್ಯಾನಿಸಿದ್ದಾರೆ. ಆದ್ದರಿಂದ ಯುಗ್ಮಜದಲ್ಲಿ (ಜೈಗೋಟ್) ಹೆಣ್ಣಿನ ಹೂಡಿಕೆಯು ಗಂಡಿಗಿಂತ ಹೆಚ್ಚಾಗಿರುತ್ತದೆ. ಹಾಗಾಗಿ ಸಂತತಿಗಳು ಬದುಕುಳಿಯದಿದ್ದರೆ ಹೆಣ್ಣು ತನ್ನೆಲ್ಲಾ ಹೂಡಿಕೆಯನ್ನು ಕಳೆದುಕೊಳ್ಳುತ್ತಾಳೆ ಮತ್ತು ಅವಳ ನಷ್ಟ ಗಂಡಿಗಿಂತ ಹೆಚ್ಚು. ಈ ಕಾರಣಕ್ಕಾಗಿ ಹೆಣ್ಣು ಸದಾ ತನ್ನ ಮಕ್ಕಳನ್ನು ಪೋಷಿಸುತ್ತಾಳೆಂಬುದು ‘ಹೆಣ್ಣು ವಾದ’ವಾಗಿದೆ.

ವೀರ್ಯಾಣು ಅಗ್ಗವಾದ್ದರಿಂದ ಒಂದಕ್ಕಿಂತ ಹೆಚ್ಚು ಹೆಣ್ಣಿನ ಗರ್ಭಧಾರಿಸುವ ಉದ್ದೇಶ ಹೊಂದಿರುವ ಗಂಡು ಪ್ರಾಣಿಗಳ ಮಧ್ಯ ಸ್ವರ್ಧೆ ಏರ್ಪಟ್ಟಿರುತ್ತದೆ. ಸ್ಪರ್ಧೆಯು ಅನೇಕ ರೂಪಗಳಲ್ಲಿ ಕಾಣಸಿಗುತ್ತದೆ. ಹೆಣ್ಣಿಗೆ ತಾನು ಬಲಶಾಲಿಯೆಂದು ಪ್ರದರ್ಶಿಸಲು ಗಂಡು ಜಿಂಕೆಗಳು ಬಲವಾದ ಕೊಂಬುಗಳನ್ನು ಹೊಂದಿರುತ್ತವೆ, ಹೆಣ್ಣನ್ನು ಆಕರ್ಷಿಸಲು ಗಂಡು ನವಿಲು ಗರಿ ಬಿಚ್ಚಿ ಕುಣಿಯುತ್ತದೆ ಮತ್ತು ಹೆಣ್ಣನ್ನು ಆಕರ್ಷಿಸಲು ಹಾಗೂ ಹೆಣ್ಣಿಗೆ ತನನ್ನು ಹುಡುಕಲು ಸಹಾಯವಾಗಲೆಂದು ಮಿಂಚು ಹುಳ ಹೊಳೆಯುತ್ತದೆ. ಹೀಗಾಗಿ ಗಂಡು ಪ್ರಾಣಿಗಳು ಹೆಚ್ಚಿನ ಸಮಯವನ್ನು ಆರೈಕೆಗೆ ಮೀಸಲಿಟ್ಟರೆ ಇನ್ನಷ್ಟು ಹೆಣ್ಣುಗಳನ್ನು ಆಕರ್ಷಿಸುವ ಮತ್ತು ಗರ್ಭಧಾರಿಸುವ ಅವಕಾಶವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಗಂಡು ಪ್ರಾಣಿಗಳು ತಮ್ಮ ಸಂತಾನಗಳಿಗೆ ಪೋಷಣೆ ಒದಗಿಸುವುದಿಲ್ಲವೆಂದು, ಅದರ ಬದಲಾಗಿ ತಮ್ಮೆಲ್ಲಾ ಹೂಡಿಕೆಯನ್ನು ಹೆಣ್ಣನ್ನು ಆಕರ್ಷಿಸಲು ಮತ್ತು ಬಲಶಾಲಿಯೆಂದು ಪ್ರದರ್ಶಿಸಲು ಉಪಯುಕ್ತವಾಗುವ ಲಕ್ಷಣಗಳಿಗೆ ವಿನಿಯೋಗಿಸುತ್ತವೆಂದು, 'ಗಂಡು ವಾದ' ತಿಳಿಸಿಕೊಡುತ್ತದೆ.

ಡಾಕಿನ್ಸ್  ಮತ್ತು ಚಾರ್ಲಿಸ್ಲೆ ಪ್ರಾಣಿಗಳು ತಮಗೆ ಮುಂದೆ ದೊರೆಯಬಹುದಾದ ಲಾಭವನ್ನು ಗಮನಿಸಿ ಕಾರ್ಯತಂತ್ರವನ್ನು ರೂಪಿಸಬೇಕೇ ವಿನಃ ಹಿಂದೆ ಮಾಡಿದ ವೆಚ್ಚದ ಮೇಲಲ್ಲವೆಂದು 'ಹೆಣ್ಣು’ ವಾದವನ್ನು ಟೀಕಿಸುತ್ತಾರೆ. 1977ರಲ್ಲಿ ಮಯ್ನಾರ್ಡ್ ಸ್ಮಿಥ್  ಪ್ರಾಣಿಗಳು ನಿರೀಕ್ಷಿತ ‘ಲಾಭ’ವನ್ನು ಪರಿಗಣಿಸಿ ‘ತಂತ್ರ’ವನ್ನು ರೂಪಿಸಿದರೆ ಏನಾಗುವುದೆಂದು ತಿಳಿಯಲು ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸುತ್ತಾನೆ.

ಪ್ರಾಣಿಗಳು ತಮ್ಮ ಮರಿಗಳಿಗೆ ಪೋಷಣೆ ಒದಗಿಸುವುದಕ್ಕೂ, ಗಣಿತಕ್ಕೂ, ಯಾವ ಸಂಭಂದವೆಂಬ ಪ್ರಶ್ನೆ ಮೂಡಿರಬೇಕಲ್ಲವೇ?

ಒಂದು ಜೀವಸಮುದಾಯದಲ್ಲಿ ಲಕ್ಷಣಗಳಲ್ಲಿ (characteristic, ಒಂದು ರೀತಿಯ ತಂತ್ರ) ಅಂತರ್ಗತ ವೈವಿಧ್ಯತೆಯನ್ನು ಕಾಣುತ್ತೇವೆ. ಉದಾಹರಣೆಗೆ, ವಿವಿಧ ಬಣ್ಣಗಳಲ್ಲಿ (ಬಣ್ಣ ಒಂದು ಲಕ್ಷಣ) ಕಾಣಸಿಗುವ ಬೆಕ್ಕುಗಳು. ಸಹಜ ಸ್ಥಿತಿಯಲ್ಲಿ (ಹವಮಾನ, ಆಹಾರ, ದೈಹಿಕ ಅಂಶಗಳು, ಇತ್ಯಾದಿ) ಬದುಕುಳಿಸುವ ಲಕ್ಷಣಗಳನ್ನು ಪಡೆದಿರುವ ಜೀವಿಗಳು ಅದೇ ಸಹಜ ಸ್ಥಿತಿಯಲ್ಲಿ ಬದುಕುಳಿಯಲಾರದ ಜೀವಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಸುತ್ತವೆ ಮತ್ತು ದೀರ್ಘಕಾಲ ಬದುಕುತ್ತವೆ. ಇದನ್ನೇ ವ್ಯಕ್ತಿಯ ಆಥವ ಜೀವಸಮೂಹದ ಕ್ಷಮತೆಯನ್ನುತ್ತಾರೆ. ಹಾಗಾಗಿ ಹೆಚ್ಚು ಕ್ಷಮತೆಯುಳ್ಳ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬದುಕುಳಿಯುವ ಮರಿಗಳನ್ನು ಪಡೆದಿರುತ್ತವೆ (ಇದು ಲಾಭ) ಹಾಗೂ ಈ ಸಂತತಿಗಳು ಬಹಳ ಕಾಲ ಬದಕುಳಿಯಲು ಕಾರಣವಾದ ಲಕ್ಷಣಗಳು ಪ್ರಕೃತಿಯಿಂದ ಆಯ್ಕೆಯಾಗುತ್ತವೆ. ಇದನ್ನು ಡಾರ್ವಿನ್ 'ನೈಸರ್ಗಿಕ ಆಯ್ಕೆ' ಎಂದು ಕರೆದ.

ಉದಾಹರಣೆಗೆ, ಇಂಗ್ಲೆಂಡಿನಲ್ಲಿ ಒಂದೇ ಪ್ರಭೇದದ ಕಪ್ಪು ಮತ್ತು ಬಿಳಿ ಬಣ್ಣದ ಪತಂಗಗಳಿವೆ. ಕೈಗಾರಿಕರಣದ ಪ್ರಾರಂಭಕ್ಕು ಮುಂಚೆ ನಗರಗಳಲ್ಲಿ ಬಿಳಿ ಬಣ್ಣದ ಪತಂಗಗಳ ಸಂಖ್ಯೆ ಹೆಚ್ಚಾಗಿದ್ದರೆ ಕೈಗಾರಿಕರಣದ ನಂತರದಲ್ಲಿ ಕಪ್ಪು ಬಣ್ಣದ ಪತಂಗಗಳು ಹೆಚ್ಚಾದವು. ಕೈಗಾರಿಕರಣದ ಮೊದಲು ಬಿಳಿ ಬಣ್ಣದ ಶಿಲಾವಲ್ಕಗಳು (lichens) ದಟ್ಟವಾಗಿ ಮರದಕಾಂಡವನ್ನು ಆವರಿಸಿರುತಿದ್ದವು. ಪತಂಗಗಳನ್ನು ತಿನ್ನುತ್ತಿದ್ದ ಭಕ್ಷಜೀವಿಗಳಿಗೆ ಶಿಲಾವಲ್ಕಗಳ ಮೇಲೆ ಆಶ್ರಯ ಪಡೆಯುತ್ತಿದ್ದ ಬಿಳಿ ಬಣ್ಣದ ಪತಂಗಗಳನ್ನು ಗುರುತಿಸುವುದು ಕಷ್ಟಸಾಧ್ಯ, ಆದರೆ ಅವು ಕಪ್ಪು ಬಣ್ಣದ ಪತಂಗಗಳನ್ನು ಸುಲಭವಾಗಿ ಗುರುತಿಸಿ ತಿನ್ನುತ್ತಿದ್ದವು. ಹಾಗಾಗಿ ಕೈಗಾರಿಕರಣದ ಮೊದಲು ಕಪ್ಪು ಬಣ್ಣದ ಪತಂಗಗಳ ಕ್ಷಮತೆ ಕಡಿಮೆಯಾಗಿತ್ತು. ಕೈಗಾರಿಕರಣದ ನಂತರ ಕಾರ್ಖಾನೆಗಳ ಹೊಗೆ ಮತ್ತು ಮಸಿಯ ದೆಸೆಯಿಂದ ಮರದ ಕಾಂಡಗಳು ಕಪ್ಪು ಬಣ್ಣಕ್ಕೆ ತಿರುಗಿದವು. ಈ ಹಿನ್ನಲೆ ಕಪ್ಪು ಪತಂಗಗಳು ಭಕ್ಷಜೀವಿಗಳಿಂದ ಪಾರಾದರೆ ಬಿಳಿ ಪತಂಗಗಳು ಸುಲಭದ ಬೇಟೆಯಾದವು. ಈಗ ಕಪ್ಪು ಬಣ್ಣದ ಪತಂಗಗಳ ಕ್ಷಮತೆ ಹೆಚ್ಚಾದರಿಂದ ಅವುಗಳ ಸಂಖ್ಯೆಯು ಹೆಚ್ಚಾಯಿತು ಅಥವ ಇನ್ನೊಂದು ಅರ್ಥದಲ್ಲಿ ಕಪ್ಪು ಪತಂಗಗಳು ನೈಸರ್ಗಿಕವಾಗಿ ಆಯ್ಕೆಯಾದವು.

ಮೇಲಿನ ಉದಾಹರಣೆ ತಿಳಿಸಿಕೊಟ್ಟಂತೆ ವಿಕಾಸನ ಸಿದ್ಧಾಂತದ ಮುಖ್ಯ ಉದ್ದೇಶ,  ಲಕ್ಷಣಗಳಲ್ಲಿನ ವ್ಯತ್ಯಾಸವನ್ನು ಹಾಗೂ ಸಮಯದೊಂದಿಗೆ ಲಕ್ಷಣಗಳ ಆವರ್ತನಗಳಲ್ಲಿನ (frequency) ಬದಲಾವಣೆಯನ್ನು ಅಧ್ಯಯನ ಮಾಡುವುದಾಗಿರುವುದರಿಂದ ಗಣಿತ ಸಹಜವಾಗಿಯೇ ವಿಕಾಸನ ಸಿದ್ಧಾಂತದ ಭಾಗವಾಗಿದೆ. ಆದ್ದರಿಂದ ವಿಕಾಸವನ್ನು ಅಧ್ಯಯನ ಮಾಡಲು ಗಣಿತದಲ್ಲಿ ಲಭ್ಯವಿರುವ ಸಾಧನಗಳನ್ನು ಬಳಸುತ್ತಾರೆ. ಗಂಡು ಮತ್ತು ಹೆಣ್ಣು ನೈಸರ್ಗಿಕವಾಗಿ ಪೋಷಣೆ ಒದಗಿಸಲು ಆಯ್ಕೆಯಾಗಿವೆಯೇ ಅಥವಾ ಮರಿಗಳನ್ನು ತೊರೆಯಲೋ ಎಂದು ತಿಳಿಯಲು ಪ್ರಸ್ತುತ  ಅಧ್ಯಯನದಲ್ಲಿ ಇಂತಹ ಗಣಿತದ ಮಾದರಿಯ ಮೊರೆ ಹೋಗುತ್ತೇವೆ.

ಪೋಷಣೆ ನೀಡದೆ ಮರಿಗಳನ್ನು ತೊರೆಯುವ ಹೆಣ್ಣು ಪ್ರಾಣಿಗಳು ಹೆಚ್ಚಿನ ಮೊಟ್ಟೆಗಳನ್ನು ಹಾಕುತ್ತವೆ ಹಾಗೂ ಮರಿಗಳನ್ನು ತ್ಯಜಿಸಿದ ಗಂಡು ಇನ್ನಷ್ಟು ಮರಿಗಳಿಗೆ ತಂದೆಯಾಗುತ್ತಾನೆ. ಕೇವಲ ತಂದೆ ಅಥವ ತಾಯಿಯ ಪೋಷಣೆಗಿಂತ ಉಭಯ ಪೊಷಕರ ಆರೈಕೆಯಿದ್ದರೆ ಮರಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತದ್ದೆ ಹಾಗೂ ಯಾವುದೇ ಪೊಷಣೆಯಿಲ್ಲದಿದ್ದರೆ ಮರಿಗಳು ಸಾಯುವ ಅಪಾಯ ಹೆಚ್ಚೆಂಬುದು ಮಯ್ನಾರ್ಡ್ ಸ್ಮಿಥ್ ಮಾಡೆಲ್ಲಿನ  ಪ್ರಮುಖ ಊಹೆಗಳು.

ಈ ಅಧ್ಯಯನದ ಮೂಲಕ ಅವನು ಎಲ್ಲಾ ಬಗೆಯ ಪೋಷಣೆಯ ಮಾದರಿಯೂ ನೈಸರ್ಗಿಕವಾಗಿ ಆಯ್ಕೆಯಾಗಬಹುದೆಂದು ಅರಿತುಕೊಂಡ. ಮಯ್ನಾರ್ಡ್ ಸ್ಮಿಥ್ನ ಸರಳ ಮಾದರಿಯು, ಪರಿಸರದಲ್ಲಿ ಕಂಡುಬರುವ ವೈವಿಧ್ಯತೆಯನ್ನು ವಿವರಿಸುವಲ್ಲಿ ಯಶಸ್ವಿಯಾದರೂ ವೇಡ್ ಮತ್ತು ಶುಸ್ಟರ್ ಇದರಲ್ಲಿ ಲೋಪವಿದೆಯಂದು ತಿಳಿಸಿಕೊಡುತ್ತಾರೆ.

ಮಯ್ನಾರ್ಡ್ ಸ್ಮಿಥ್ನ ಮಾದರಿಯನ್ನು ಅಡಿಪಾಯವನ್ನಾಗಿಟ್ಟುಕೊಂಡು ಅದರ ತಪ್ಪುಗಳನ್ನು ಈ ಸಂಶೋಧನೆಯಲ್ಲಿ ಸರಿಪಡಿಸಲಾಗಿದೆ ಹಾಗೂ ಅನಿಸೋಗಾಮಿಯಿಂದ ಉಂಟಾಗುವ ಪರಿಣಾಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಅವುಗಳೆಂದರೆ, ಮೊಟ್ಟೆ ಉತ್ಪಾದನೆಯು ದುಬಾರಿಯಾದ್ದರಿಂದ ಹೆಣ್ಣು ತನ್ನ ಜೀವಿತಾವಧಿಯಲ್ಲಿ ಉತ್ಪಾದಿಸುವ ಒಟ್ಟು ಮೊಟ್ಟೆಗಳ ಸಂಖ್ಯೆ ಸೀಮಿತ; ವೀರ್ಯಾಣು ಉತ್ಪಾದನೆಯ ವೆಚ್ಚ ತುಂಬಾ ಕಡಿಮೆ; ಮೊಟ್ಟೆಗಳ ಉತ್ಪಾದನೆಯು ದುಬಾರಿಯಾದ್ದರಿಂದ ಹೆಣ್ಣು ತನ್ನ ಮರಿಗಳಿಗೆ ಪೋಷಣೆ ಒದಗಿಸಿದರೆ ಮುಂದೆ ಆ ಋತುವಿನಲ್ಲಿ ಹೆಚ್ಚಿನ ಮೊಟ್ಟೆಗಳನ್ನಿಡಲು ಸಾಧ್ಯವಾಗುವುದಿಲ್ಲ; ವೀರ್ಯಾಣು ಉತ್ಪಾದನೆಯು ಅಗ್ಗವಾದ್ದರಿಂದ ಗಂಡು ತನ್ನ ಮರಿಗಳಿಗೆ ಪೋಷಣೆ ಒದಗಿಸುತ್ತಲೇ ಬೇರೆ ಹೆಣ್ಣಿನ ಮೊಟ್ಟೆಗಳನ್ನು ಫಲವತ್ತಾಗಿಸಬಹುದು; ಗಂಡು ಮತ್ತು ಹೆಣ್ಣು ಎರಡಕ್ಕೂ ಸಂಗಾತಿ ಸಿಗುವುದು ಕಷ್ಟವಾಗಬಹುದಾದರೂ, ಗಂಡಿಗೆ ಹೆಣ್ಣು ಸಿಗುವುದು ಹೆಚ್ಚು ಕಷ್ಟಕರವಾಗಿರುತ್ತದೆ.

ಇವುಗಳ ಆಧಾರದ ಮೇಲೆ ಈ ಅಧ್ಯಯನದಲ್ಲಿ ಮೂರು ಮಾಡೆಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲನೆಯದರಲ್ಲಿ ತನ್ನ ಮರಿಗಳನ್ನು ತೊರೆದ ಗಂಡು ಪ್ರಾಣಿಗಳು ಮಾತ್ರ ಪುನಃ ಸಂಭೋಗಿಸಬಹುದು. ಹಾಗಾಗಿ ಗಂಡು ಮತ್ತು ಹೆಣ್ಣು ಸಮನಾಗಿ ತಮ್ಮ ಸಂತತಿಗಳಿಗೆ ಪೋಷಣೆ ಒದಗಿಸಲು ಆಯ್ಕೆಯಾಗುತ್ತವೆ.

ಎರಡನೆ ಮಾಡೆಲ್ನಲ್ಲಿ ತನ್ನ ಮರಿಗಳನ್ನು ನೋಡಿಕೊಳ್ಳುವ ಗಂಡು ಕೂಡ, ತನ್ನ ಸಂತತಿಯನ್ನು ತೊರೆದು ಮತ್ತೆ ಮೊಟ್ಟೆಯಿಡುವ ಹೆಣ್ಣಿನೊಂದಿಗೆ ಸಂಭೋಗಿಸಬಹುದು. ಆದರೆ ಈ ಹೆಣ್ಣು, ತನ್ನ ಸಂತತಿಯನ್ನು ತೊರೆದ ಗಂಡಿಗೆ ಹೆಚ್ಚಿನ ಆದ್ಯತೆ ನೀಡುತ್ತಾಳೆ. ಹಾಗಾಗಿ ಕೇವಲ ಗಂಡು ತನ್ನ ಮರಿಗಳಿಗೆ ಪೋಷಣೆ ಒದಗಿಸಲು ಅಥವಾ ಗಂಡು ಮತ್ತು ಹೆಣ್ಣು ಸಮನಾಗಿ ಆರೈಕೆ ಮಾಡಲು ಆಯ್ಕೆಯಾಗಿತ್ತವೆ.

ಕೊನೆಯ ಮಾಡೆಲ್ನಲ್ಲಿ ಋತುವಿನ ಮೊದಲನೆಯ ಸಂಭೋಗದಲ್ಲಿ ತಮ್ಮ ಮರಿಗಳನ್ನು ತ್ಯಜಿಸುವ ಹೆಣ್ಣು ಪ್ರಾಣಿಗಳು ಪೋಷಣೆ ಒದಗಿಸುವ ಹೆಣ್ಣುಗಳಿಗಿಂತ ಹೆಚ್ಚು ಮೊಟ್ಟೆಯನ್ನಿಡುತ್ತವೆ. ಹಾಗಾಗಿ ಇದರಲ್ಲೂ ಕೇವಲ ಗಂಡು ಅಥವಾ ಉಭಯ ಪೋಷಕರು ಸಮನಾಗಿ ಆರೈಕೆ ಮಾಡಲು ಆಯ್ಕೆಯಾಗಿರುತ್ತವೆ. ಈ ಎಲ್ಲಾ ಮಾದರಿಗಳಲ್ಲೂ ಪ್ರಾಣಿಗಳು ಸಮಕಾಲಿಕವಾಗಿ ಸಂಭೋಗಿಸುತ್ತವೆಂದು ಊಹಿಸಲಾಗಿದೆ. ಅಂದರೆ ಋತುವಿನ ಪ್ರಾರಂಭದಲ್ಲಿ ಎಲ್ಲ ಹೆಣ್ಣಿಗೂ ಒಬ್ಬ ಸಂಗಾತಿಯಿರುತ್ತಾನೆ. ಸಂಭೋಗದ ನಂತರ ಮರಿಗಳಿಗೆ ಆರೈಕೆ ನೀಡುವುದೋ ಬೇಡವೋ ಎಂದು ಸ್ವತಂತ್ರವಾಗಿ ನಿರ್ಧರಿಸುತ್ತವೆ. ಹಾಗಾಗಿ ಮರಿಗಳನ್ನು ತೊರೆದು ಬೇರೆ ಸಂಗಾತಿಯನ್ನು ಹುಡುಕುವ ಗಂಡು ಪ್ರಾಣಿಯೂ ಕೇವಲ ಮರಿಗಳನ್ನು ತ್ಯಜಿಸಿರುವ ಹೆಣ್ಣಿನೊಂದಿಗೆ ಮಾತ್ರ ಸಂಭೋಗಿಸಲು ಸಾಧ್ಯ. ಆದರೆ ಪರಿಸರದಲ್ಲಿ ಈ ನಿರ್ಬಂಧನೆ ಇರುವುದಿಲ್ಲ. ಹಾಗಾಗಿ ಇನ್ನೊಂದು ಮಾಡೆಲ್ನಲ್ಲಿ ಈ ನಿಬಂಧನೆಯನ್ನು ಸಡಿಲಗೊಳಿಸಿ, ತನ್ನ ಮರಿಗಳನ್ನು ತೊರೆದಿರುವ ಗಂಡು ಇನ್ನೂ ಒಮ್ಮೆಯೂ ಮೊಟ್ಟೆಯಿಡದ ಹೆಣ್ಣಿನೊಂದಿಗೆ ಸಂಭೋಗಿಲು ಸಾಧ್ಯವಾಗುವಂತೆ ಮಾರ್ಪಡಿಸಲಾಗಿದೆ.

ಟ್ರಿವರ್ಸ್ನ ಮಾದರಿಯಲ್ಲಿ  ‘ಆವರ್ತನ ಅವಲಂಬಿತ’ ಆಯ್ಕೆ ಸಾಧ್ಯವಾಗಿರುವುದಿಲ್ಲ. ಅಂದರೆ ಮರಿಗಳನ್ನು ತೊರೆದು ಬೇರೆ ಹೆಣ್ಣಿನ ಮೊಟ್ಟೆಗಳನ್ನರಿಸಿ ಹೊರಡುವ ಗಂಡು ಪ್ರಾಣಿಗಳ ಸಂಖ್ಯೆ ಹೆಚ್ಚಿದಂತೆ, ಸಂಭೋಗಕ್ಕಾಗಿ ಅವುಗಳ ನಡುವೆ ಏರ್ಪಡುವ ಸ್ವರ್ಧೆಯೂ ಹೆಚ್ಚಾಗುತ್ತದೆ ಹಾಗೂ ಅವುಗಳು ಹೆಚ್ಚುವರಿ ಮೊಟ್ಟೆಗಳಿಂದ ಪಡೆಯುತ್ತಿದ್ದ ಲಾಭವೂ ಕಡಿಮೆಯಾಗುತ್ತದೆ. ಹೆಚ್ಚುವರಿ ಮೊಟ್ಟೆಗಳು ಸಿಗದಿದಲ್ಲಿ, ಗಂಡು ಈಗಿರುವ ಮೊಟ್ಟೆಗಳನ್ನೇ ಸರಿಯಾಗಿ ಆರೈಕೆ ಮಾಡಿದರೆ ಹೆಚ್ಚು ಮರಿಗಳನ್ನು ಉಳಿಸಿ ಹೋಗಬಲ್ಲ. ಹಾಗಾಗಿ ಗಂಡು ಪ್ರಾಣಿಗಳು ಪೋಷಣೆ ಒದಗಿಸುವುದಕ್ಕೆ ಆಯ್ಕೆಯಾಗುತ್ತವೆ. ಸಂಭೋಗಗಳು ಸಮಕಾಲಿಕವಾದಾಗ ಬಹುತೇಕವಾಗಿ ಗಂಡು ಪ್ರಾಣಿಗಳೇ ಮರಿಗಳಿಗೆ ಪೋಷಣೆ ಒದಗಿಸಲು ಆಯ್ಕೆಯಾಗುತ್ತವೆ. ಯಾವಾಗ ಸಂಭೋಗಗಳು ಅಸಮಕಾಲಿಕವಾಗುತ್ತದೋ, ಆಗ ಮರಿಗಳನ್ನು ತೊರೆಯುವ ಗಂಡಿಗೆ ಹೆಚ್ಚು ಮೊಟ್ಟೆಗಳನ್ನು ಫಲವತ್ತಾಗಿಸುವ ಅವಕಾಶ ದೊರೆಯುತ್ತದೆ. ಹಾಗಾಗಿ ಗಂಡು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮರಿಗಳನ್ನು ತ್ಯಜಿಸುವುದನ್ನು ಕಾಣುತ್ತೇವೆ.

ಈ ಅಧ್ಯಯನದ ಮೂಲಕ ಟ್ರಿವರ್ಸ್ನ ವಾದದ ಸಾರ್ವತ್ರಿಕತೆಯನ್ನು ಅಲ್ಲಗಳೆಯುತ್ತೇವೆ. ಮೊಟ್ಟೆಗಳ ಉತ್ಪಾದನೆ ದುಬಾರಿಯಾಗಿರುವುದರ ಹಾಗೂ ವೀರ್ಯಾಣು ಅತಿ ಅಗ್ಗವಾಗಿರುವುದರ ಅನೇಕ ಪರಿಣಾಮಗಳು ಪ್ರಸ್ತುತ ಮಾದರಿಯಲ್ಲಿ ಅಡಕವಾಗಿದ್ದರೂ ಕೇವಲ ಹೆಣ್ಣು ಮಾತ್ರ ಪೋಷಣೆ ಮಾಡಲು ಆಯ್ಕೆಯಾಗುವುದನ್ನು ಕಾಣುವುದಿಲ್ಲ. ಬದಲಾಗಿ ಕೇವಲ ಗಂಡು ತನ್ನ ಮರಿಗಳ ಆರೈಕೆ ಮಾಡುವುದೇ ಆಯ್ಕೆಯಾಗಿರುತ್ತದೆ. ಆದ್ದರಿಂದ ಕೇವಲ ಹೆಣ್ಣು ತನ್ನ ಸಂತತಿಗಳಿಗೆ ಪೋಷಣೆ ಒದಗಿಸುವದಕ್ಕೂ, ಅನಿಸೋಗಾಮಿಗೂ ಯಾವುದದೇ ಬಗೆಯ ಸಂಭಂದ ಹೊಂದಿರುವುದಕ್ಕೆ ಪುರಾವೆಗಳಿಲ್ಲವೆಂದು ವಾದಿಸುತ್ತದೆ. 

ಅನಿಸೋಗಾಮಿಯ ಎರಡು ಪರಿಣಾಮಗಳು ಪ್ರಸ್ತುತ ಮಾದರಿಯಲ್ಲಿ ಗಂಡು ಆರೈಕೆಗಾಗಿ ಆಯ್ಕೆ ಆಗುತ್ತವೆ: ಪೋಷಣೆ ಒದಗಿಸುವ ಗಂಡುಗಳು ತನ್ನ ಮರಿಗಳನ್ನು ತ್ಯಜಿಸಿರುವ ಹೆಣ್ಣಿನೊಂದಿಗೆ ಸಂಭೋಗಿಸಲು ಸಾಧ್ಯವಾಗಿರುವುದು ಮತ್ತು ಆರೈಕೆ ಮಾಡದ ಹೆಣ್ಣು ಋತುವಿನ ಮೊದಲನೆಯ ಸಂಭೋಗಕ್ಕೆ ಹೆಚ್ಚಿನ ಮೊಟ್ಟೆಗಳನ್ನು ಮಿಸಲಿಡುವುದು. ಪರಿಸರದಲ್ಲಿ ಮೀನು, ಕಪ್ಪೆ ಮತ್ತು ಪಕ್ಷಿಗಳಲ್ಲಿ ಕಂಡುಬರುವ ಗಂಡು ಆರೈಕೆಗೆ ಇವೆ ಕಾರಣಗಳಾಗಿರಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಎಷ್ಟೋ ಮೀನು ಮತ್ತು ಪಕ್ಷಿ ಪ್ರಭೇದಗಳು ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡಾಗ ಅವುಗಳ ಮರಿಗಳಿಗೆ ಯಾವುದೇ ಬಗೆಯ ಆರೈಕೆ ದೊರೆಯುತ್ತಿರಲ್ಲಿಲ್ಲವೆಂದು ಹಾಗೂ ನಂತರದಲ್ಲಿ ವಿಕಾಸಗೊಂಡು ಗಂಡು ಪ್ರಾಣಿಗಳು ಮಾತ್ರ ಪೋಷಣೆ ಒದಗಿಸಲು ಆಯ್ಕೆಯಾಗಿದ್ದಿರಬಹುದೆಂದು ಗಣಿತದ ಮಾದರಿಗಳು ತೊರಿಸಿಕೊಟ್ಟಿವೆ. ಇದಕ್ಕೆ ನಾವು ಸೂಚಿಸುವ ಕಾರ್ಯವಿಧಾನಗಳು ಕಾರಣವಾಗಿರಬಹುದೆಂದು ಈ ಅಧ್ಯಯನವು ತಿಳಿಸುತ್ತದೆ.

ಗಂಡು ಮತ್ತು ಹೆಣ್ಣಿನ ನಡುವಳಿಕೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಟ್ರಿವರ್ಸ್ನ ಸಿದ್ಧಾಂತದ ಪ್ರಭಾವವು ಪ್ರಬಲವಾಗಿದೆ. ಪ್ರಾಣಿಗಳಲ್ಲಷ್ಟೇ ಅಲ್ಲದೆ ಮಾನವಶಾಸ್ತ್ರ ಮತ್ತು ಮನೋವಿಜ್ಞಾನದಲ್ಲೂ ಇದರ ಕೊಡುಗೆ ಅಪಾರ. ಕೆಲವೊಮ್ಮೆ ಅವನ ಸಿದ್ಧಾಂತವನ್ನು ತಪ್ಪಾಗಿ ಗ್ರಹಿಸಿ ಪಿತೃಪ್ರಭುತ್ವಗಳಂತ ಗೊಡ್ಡು ಸಂಪ್ರದಾಯಗಳನ್ನೂ ಜನರು ಸಮರ್ಥಿಸಿದ್ದಾರೆ. ಇಷ್ಟು ಪ್ರಭಾವಬೀರಿರುವ ಸಿದ್ಧಾಂತವನ್ನು ನಾವು ಸರಿಯಾಗಿ ಪರೀಕ್ಷಿಸುವುದು ಮತ್ತು ವಿಮರ್ಶಿಸುವುದು ಅನಿವಾರ್ಯವಾಗಿದೆ.