ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನೇಕ ವಿಪತ್ತುಗಳ ಪೈಕಿ, ಮಣ್ಣಿನ ಲವಣಾಂಶದ ಹೆಚ್ಚಳವೂ ಒಂದು. 2050 ರ ಹೊತ್ತಿಗೆ, ಪ್ರಪಂಚದಾದ್ಯಂತ ಲಭ್ಯವಿರುವ ಇಂದಿನ ಕೃಷಿಯೋಗ್ಯ ಭೂಮಿಯ ಅರ್ಧದಷ್ಟು ಭಾಗವು ಲವಣಾಂಶದ ಏರುಪೇರಿನಿಂದ ಪ್ರಭಾವಿತವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಲವಣಾಂಶದ ಹೆಚ್ಚಳವು, ಭಾರತದ ಭತ್ತದ ಬಟ್ಟಲೆಂದೇ ಪ್ರಸಿದ್ಧವಾಗಿರುವ ಸಿಂಧೂ - ಗಂಗಾ ನದಿಗಳ ಒಡಲಿನ ಬಯಲು ಪ್ರದೇಶಕ್ಕೂ ಅಪಾರವಾದ ಹಾನಿ ಮಾಡಲಿದ್ದು, ಬೆಳೆ ಇಳುವರಿಯಲ್ಲಿ ಸುಮಾರು 45% ನಷ್ಟವನ್ನು ನಿರೀಕ್ಷಿಸಬಹುದಾಗಿದೆ. ಲವಣಾಂಶವು ಹೆಚ್ಚಾದಾಗ, ಸಸ್ಯಗಳು ಕಡಿಮೆ ನೀರನ್ನು ಹೀರಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತವೆ; ಅದು ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕೃಷಿಯ ಪ್ರಮುಖ ಬೆಳೆಗಳು ಈ ಹೆಚ್ಚಿದ ಲವಣಾಂಶವನ್ನು ನಿಭಾಯಿಸಲು ನಾವು ಹೇಗೆ ಸಹಾಯ ಮಾಡಬಹುದು ಎಂಬ ಪ್ರಶ್ನೆಗೆ ಬೆಂಗಳೂರಿನ ವಿವಿಧ ಸಂಸ್ಥೆಗಳ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ಸೂಕ್ಷ್ಮಾಣುಜೀವಿಗಳಲ್ಲಿ ಉತ್ತರವನ್ನು ಕಂಡುಕೊಂಡ ಹಾಗಿದೆ!
ಕೇರಳದ ಕರಾವಳಿಯ ಕೆಲವು ಭಾಗಗಳಲ್ಲಿ, ಸೀಗಡಿಗಳು, ಭತ್ತದ ಸಸ್ಯಗಳು ಮತ್ತು ಸೂಕ್ಷ್ಮಾಣುಜೀವಿಗಳ ನಡುವೆ ಒಂದು ಆಸಕ್ತಿದಾಯಕ ಸಂಬಂಧವಿರುವುದು ಕಂಡುಬಂದಿದೆ. ಪೊಕ್ಕಲಿ ಅಕ್ಕಿ ಎಂದು ಕರೆಯಲ್ಪಡುವ ಸ್ಥಳೀಯ ವೈವಿಧ್ಯವಾದ ಭತ್ತದ ಬೆಳೆಯು, ಸೀಗಡಿಗಳ ಮಲವಿಸರ್ಜನೆಯಿಂದ ಪೌಷ್ಠಿಕಾಂಶವನ್ನು ಪಡೆಯುವ ಮೂಲಕ ಉಪ್ಪುನೀರಿನಲ್ಲಿ ಬೆಳೆಯುತ್ತದೆ. ಭತ್ತದ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ, ಸೀಗಡಿಮರಿಗಳು ಅಲ್ಲಿ ಉಳಿದಿರುವ ಭತ್ತದ ರುಚಿಯಾದ ಮೃಷ್ಟಾನ್ನ ಭೋಜನ ಸವಿಯುತ್ತವೆ. ಸೀಗಡಿಯ ಸಹಾಯದ ಜೊತೆಗೇ ಮತ್ತೊಂದು ಕುತೂಹಲದ ಸಂಗತಿಯೆಂದರೆ, ಈ ಸಸ್ಯದಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿಶಿಷ್ಟ ಮಿಶ್ರಣವು, ಹೆಚ್ಚಿನ ಉಪ್ಪಿನಂಶದ ಉಪಸ್ಥಿತಿಯಲ್ಲೂ ಪೊಕ್ಕಳಿ ಅಕ್ಕಿ ಬೆಳೆಯಲು ಸಹಾಯಕ ಎಂದು ಕಂಡುಬಂದಿದೆ. ಹೀಗೆ ಒಂದು ಸಸ್ಯದ ಒಳಗೆ ಸಹಾಯಕವಾಗಿ ಬದುಕುವ ಈ ಸೂಕ್ಷ್ಮಾಣುಜೀವಿಗಳನ್ನು ಒಟ್ಟಾಗಿ ಎಂಡೋಫೈಟ್ಸ್ ಎಂದು ಕರೆಯಲಾಗುತ್ತದೆ.
ಎಂಡೋಫೈಟ್‌ಗಳು ರೋಗಗಳನ್ನು ಉಂಟುಮಾಡದ, ಬದಲಿಗೆ, ಸಸ್ಯದ ಬೆಳವಣಿಗೆಯನ್ನು ಉತ್ತೇಜಿಸುವ ‘ಒಳ್ಳೆಯ’ ಸೂಕ್ಷ್ಮಾಣುಜೀವಿಗಳು. ಹೊಸ ಅಧ್ಯಯನವೊಂದರಲ್ಲಿ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಐಸಿಎಆರ್- ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ , ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ - ಅಶೋಕ ಟ್ರಸ್ಟ್, ಜರ್ಮನಿಯ ಸಾಮಾನ್ಯ ಸಸ್ಯವಿಜ್ಞಾನ ಮತ್ತು ಸಸ್ಯ ಶರೀರವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸಹಯೋಗದೊಂದಿಗೆ ಸಂಶೋಧಕರು, ಪೊಕ್ಕಲಿ ಅಕ್ಕಿಯಲ್ಲಿ ಕಂಡುಬರುವ ಎಂಡೋಫೈಟ್ನ ಸಹಾಯದಿಂದ ಉಪ್ಪು-ಸೂಕ್ಷ್ಮ ಅಕ್ಕಿ ಪ್ರಭೇದಗಳು ಹೇಗೆ ಉಪ್ಪು-ಸಹಿಷ್ಣುವಾಗಿ ಪರಿವರ್ತನೆಗೊಂಡಿವೆ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನಕ್ಕೆ, ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅನುದಾನ ನೀಡಿವೆ.
“ಅಜೀವಕ ಒತ್ತಡಗಳಿಗೆ ಸಸ್ಯದ ಪ್ರತಿಕ್ರಿಯೆಗಳನ್ನು ಮಾರ್ಪಾಡು ಮಾಡುವಲ್ಲಿ ಎಂಡೋಫೈಟ್‌ಗಳ ಬೃಹತ್ ಪಾತ್ರವನ್ನು ಮತ್ತು ಕೃಷಿಯಲ್ಲಿ ಪ್ರಮುಖವಾದಂಥ ಬೆಳೆಗಳಲ್ಲಿ, ಒತ್ತಡ-ಸೂಕ್ಷ್ಮ ಸಸ್ಯಗಳ್ಯಾವುವೆಂದು ಗುರುತಿಸಿ, ಈ ಒತ್ತಡ ಸಹಿಷ್ಣುತೆಯನ್ನುಅವುಗಳಿಗೆ ವಿಸ್ತರಿಸಲು ಸಾಧ್ಯವೇ ಎಂಬುದನ್ನು ಅನ್ವೇಷಿಸಲು ನಾವು ಬಯಸಿದ್ದೇವೆ;" ಎಂದು ಈ ಅಧ್ಯಯನದ ವಕ್ತಾರ ಲೇಖಕ ಡಾ. ಉಮಾ ಶಂಕರ್ ಹೇಳುತ್ತಾರೆ. ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಬೆಳೆ ಶರೀರವಿಜ್ಞಾನ ಮತ್ತು ಪರಿಸರ ವಿಜ್ಞಾನ ಹಾಗೂ ಸಂರಕ್ಷಣಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಶಿಲೀಂಧ್ರಗಳ ಶಕ್ತಿಯ ಬಳಕೆ!
ಟೊಮೆಟೊ ಮತ್ತು ಕಡಲೆಯಂತಹ ಸಸ್ಯಗಳಲ್ಲಿ ಎಂಡೋಫೈಟ್‌ಗಳ ಬಳಕೆಯು ಉಪ್ಪು ಸಹಿಷ್ಣುತೆಯನ್ನು ಪ್ರೇರೇಪಿಸುತ್ತದೆ ಎಂದು ಹಿಂದಿನ ಅಧ್ಯಯನಗಳು ತೋರಿಸಿವೆ.
"ಬ್ಯಾಕ್ಟೀರಿಯಾ ಎಂಡೋಫೈಟ್‌ಗಳು ಕಡಲೆಗಿಡಕ್ಕೆ ಉಪ್ಪು ಸಹಿಷ್ಣುತೆಯನ್ನು ನೀಡುತ್ತವೆ ಎಂದು ವರದಿಯಾಗಿದೆ, ಆದರೆ ಆಸ್ಪರ್ಜಿಲಸ್ ಫ್ಲೇವಸ್ ಎಂಬ ಶಿಲೀಂಧ್ರ ಎಂಡೋಫೈಟ್‌ಗಳು ಸೋಯಾಬೀನ್‌ನಲ್ಲಿ ಲವಣಾಂಶ ಸಹಿಷ್ಣುತೆಯ ಮಾರ್ಪಾಡು ತರಲು ಮಧ್ಯಸ್ಥಿಕೆ ವಹಿಸುತ್ತದೆ ಎಂದು ತಿಳಿದುಬಂದಿದೆ" ಎನ್ನುತ್ತಾರೆ ಡಾ ಶಂಕರ್.
ಆದಾಗ್ಯೂ, ಪ್ರಸ್ತುತ ಅಧ್ಯಯನವು ಉಪ್ಪು-ನಿರೋಧಕ ವಿಶಿಷ್ಟ ಅಕ್ಕಿಯಿಂದ ಎಂಡೋಫೈಟ್‌ಗಳನ್ನು ತೆಗೆದು ಇತರ ವಿಧಗಳಲ್ಲಿ ಉಪ್ಪು-ಸಹಿಷ್ಣುತೆಯನ್ನು ಉಂಟುಮಾಡಲು ಹೇಗೆ ಬಳಸಬಹುದೆಂದು ತೋರಿಸಿದ ಮೊದಲ ಅಧ್ಯಯನವಾಗಿದೆ.
ಸಂಶೋಧಕರು, ಹಲವಾರು ಪ್ರಭೇದಗಳ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಎರಡು ವಿಧದ ಅಕ್ಕಿಯಿಂದ ಪ್ರತ್ಯೇಕಿಸಿದರು- ಉಪ್ಪು-ಸಹಿಷ್ಣು ಪೊಕ್ಕಲಿ ಅಕ್ಕಿ ಮತ್ತು ಉಪ್ಪು-ಸೂಕ್ಷ್ಮ ಐಆರ್ -64. ಸೂಕ್ಷ್ಮಾಣುಜೀವಿಗಳ ಉಪಸ್ಥಿತಿಯಲ್ಲಿ, ವಿವಿಧ ಪ್ರಮಾಣದಲ್ಲಿ ಉಪ್ಪಿನಂಶ ಇರುವ ಪರಿಸ್ಥಿತಿಗಳಲ್ಲಿ ಈ ಸಸ್ಯಗಳ ಬೆಳವಣಿಗೆಯನ್ನು ವಿಶ್ಲೇಷಿಸಿದ ನಂತರ, ಉಪ್ಪಿನಂಶ ಹೆಚ್ಚಿರುವಾಗ ಸಮರ್ಪಕವಾದ ಬೆಳವಣಿಗೆ ತೋರುವ ಫ್ಯುಸೇರಿಯಮ್ ಎಂಬ ಒಂದು ಬಗೆಯ ಶಿಲೀಂಧ್ರವನ್ನು ಗುರುತಿಸಿದರು; ನಂತರ ಸಂಶೋಧಕರು ಐಆರ್ -64 ರ ಬೀಜಗಳನ್ನು ಈ ಶಿಲೀಂಧ್ರದೊಂದಿಗೆ ಸಂಸ್ಕರಿಸಿದರು ಮತ್ತು ಹೆಚ್ಚಿನ ಹಾಗೂ ಕಡಿಮೆ ಲವಣಾಂಶದ ಸ್ಥಿತಿಯಲ್ಲಿ ಅವುಗಳ ಬೆಳವಣಿಗೆಯನ್ನು ಗಮನಿಸಿದರು.
ಫ್ಯುಸೇರಿಯಮ್ ವರ್ಟಿಸಿಲಿಯೊಯಿಡ್ಸ್ - ಈ ಚಿತ್ರ ಕೇವಲ ಪ್ರಾತಿನಿಧಿಕ ಉದ್ದೇಶಕ್ಕಾಗಿ. ಕೃಪೆ-ವಿಕಿಮೀಡಿಯಾ ಕಾಮನ್ಸ್ ಮೂಲಕ, ಸಾರ್ವಜನಿಕ ಡೊಮೇನ್
ಹೆಚ್ಚು ಉಪ್ಪಿನಂಶ ಇರುವ ಸ್ಥಿತಿಯಲ್ಲಿಯೂ, ಶಿಲೀಂಧ್ರದೊಂದಿಗೆ ಸಂಸ್ಕರಿಸಿದ ಬೀಜಗಳಲ್ಲಿ ಬೇರುಗಳು ಮತ್ತು ಚಿಗುರುಗಳ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದ್ದು, ಸಂಸ್ಕರಿಸದ ಬೀಜಗಳು ಕಡಿಮೆ ಉಪ್ಪಿನಂಶದ ಪರಿಸ್ಥಿತಿಯಲ್ಲೂ ಇಷ್ಟು ಒಳ್ಳೆಯ ಬೆಳವಣಿಗೆ ಹೊಂದಿರುವುದಿಲ್ಲ ಎಂದು ಈ ಅಧ್ಯಯನವು ಕಂಡುಹಿಡಿದಿದೆ. ಕುತೂಹಲಕಾರಿ ಅಂಶವೆಂದರೆ, ಶಿಲೀಂಧ್ರದೊಂದಿಗೆ ಸಂಸ್ಕರಿಸಿದ ಬೀಜಗಳನ್ನು ಕಡಿಮೆ ಉಪ್ಪು ಸಾಂದ್ರತೆಯ ಪರಿಸ್ಥಿತಿಗಳಲ್ಲಿ ಬೆಳೆಸಿದಾಗ, ಶಿಲೀಂಧ್ರವು ಅವುಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರಲಿಲ್ಲ! ಸಾಮಾನ್ಯ ಹಾಗೂ ಹೆಚ್ಚು ಉಪ್ಪಿನಂಶದ ಪರಿಸ್ಥಿತಿಗಳಲ್ಲಿ, ಶಿಲೀಂಧ್ರದೊಂದಿಗೆ ಸಂಸ್ಕರಿಸಿದ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಪತ್ರಹರಿತ್ತು (ಕ್ಲೋರೊಫಿಲ್ - ದ್ಯುತಿಸಂಶ್ಲೇಷಣೆಯ ಪ್ರಮುಖ ವರ್ಣದ್ರವ್ಯ) ಇರುವುದು ಗೋಚರವಾಗಿದೆ. ಸಾಮಾನ್ಯವಾಗಿ, ಹೆಚ್ಚಿನ ಉಪ್ಪಿನಂಶವಿರುವ ಪರಿಸ್ಥಿತಿಯಲ್ಲಿ ಜೀವಕೋಶದ ಪೊರೆಯ ಸ್ಥಿರತೆಯು ಕಡಿಮೆಯಾಗುತ್ತದೆ; ಆದರೆ ಶಿಲೀಂಧ್ರಗಳಿರುವ ಸಸ್ಯಗಳಲ್ಲಿ ಇದು ಗಮನಾರ್ಹವಾಗಿ ಹೆಚ್ಚಿರುವುದು ಕೂಡ ಆಶ್ಚರ್ಯಕರ!
ಶಿಲೀಂಧ್ರಗಳೊಂದಿಗೆ ಸಂಸ್ಕರಿಸಲಾದ ಐಆರ್ -64 ಸಸ್ಯಗಳ ಆನುವಂಶಿಕ ನೆಲೆಗಟ್ಟಿನಲ್ಲಿ ಹಲವಾರು ವ್ಯತ್ಯಾಸಗಳನ್ನು ಸಂಶೋಧಕರು ಗಮನಿಸಿದ್ದಾರೆ.
"ಎಂಡೋಫೈಟ್ ಚಿಕಿತ್ಸೆಯು ವಂಶವಾಹಿಗಳ ಅಭಿವ್ಯಕ್ತಿಯನ್ನು ಗಮನಾರ್ಹವಾಗಿ ಬದಲಿಸಿದೆ" ಎಂದು ವಿವರಿಸುತ್ತಾರೆ ಡಾ. ಶಂಕರ್. ಕೆಲವು ಜೀನ್‌ಗಳು ಅತಿಯಾದ ಅಭಿವ್ಯಕ್ತಿಯನ್ನು ಮತ್ತು ಇತರವು ಕಡಿಮೆ ಅಭಿವ್ಯಕ್ತಿಯನ್ನು ತೋರಿದ್ದವು. "ಶಿಲೀಂಧ್ರದೊಡನೆ ಸಂಸ್ಕರಿಸಿದ ಕಾರಣದಿಂದಾಗಿ ವಿಭಿನ್ನವಾಗಿ ಅಭಿವ್ಯಕ್ತಿ ತೋರಿದ ವಂಶವಾಹಿಗಳಿಗೆ, ಉಪ್ಪು ಸಹಿಷ್ಣುತೆಯನ್ನು ನೀಡುವ ಗುಣಲಕ್ಷಣಗಳೊಂದಿಗೆ ಸಂಬಂಧವಿದೆ" ಎಂದು ಅವರು ವಿವರಿಸುತ್ತಾರೆ.
ತಳೀಯ ಮಟ್ಟದಲ್ಲಿ ಈ ವ್ಯತ್ಯಾಸಗಳು ಉಂಟಾಗುವುದರ ಹಿಂದಿನ ಕಾರ್ಯವಿಧಾನವು ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲವಾದರೂ, ಹೆಚ್ಚಿನ ಲವಣಾಂಶದಿಂದ ಉಂಟಾಗುವ ಸಂಕೇತಗಳ ಗ್ರಹಿಕೆಯಲ್ಲಿನ ಬದಲಾವಣೆಗಳನ್ನು ಮತ್ತು ಸಂಬಂಧಿತ ಪ್ರೋಟೀನ್‌ಗಳ ಉತ್ಪಾದನೆಯನ್ನು ಸಂಶೋಧಕರು ಗಮನಿಸಿದ್ದಾರೆ.
"ಈ ವಿಧಾನವು, ಸಸ್ಯಗಳಲ್ಲಿನ ಒತ್ತಡ- ಸಂಬಂಧೀ ರೂಪಾಂತರಗಳನ್ನು ಸುಧಾರಿಸಲು, ಸಾಂಪ್ರದಾಯಿಕ ಸಸ್ಯ ಸಂತಾನೋತ್ಪತ್ತಿ ಮತ್ತು ತಳೀಯ ಮಾರ್ಪಾಟು ಆಧಾರಿತ ಪರಿಹಾರಗಳಿಗೆ ಒಂದು ಉತ್ತೇಜಕ ಪರ್ಯಾಯವನ್ನು ನೀಡುತ್ತದೆ" ಎಂದು ಸಂಕ್ಷಿಪ್ತವಾಗಿ ವಿವರಿಸುತ್ತಾರೆ ಡಾ. ಶಂಕರ್.
ಎಂಡೋಫೈಟ್‌ಗಳು - ಆಹಾರ-ಸುರಕ್ಷಿತ ಭವಿಷ್ಯದತ್ತ ನಮ್ಮ ಭರವಸೆಯೇ?
ಹೆಚ್ಚಿನ ಉಪ್ಪಿನಂಶದಂತಹ ಒತ್ತಡದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಣ್ಣ ಸೂಕ್ಕ್ಷ್ಮಾಣುಜೀವಿಗಳು ಕೃಷಿಯ ಪ್ರಮುಖ ಬೆಳೆಗಳಿಗೆ ಹೇಗೆ ಸಹಾಯ ಮಾಡುತ್ತವೆ ಎಂದು ಈ ಅಧ್ಯಯನವು ತೋರಿಸಿಕೊಟ್ಟಿದೆ. ಸಸ್ಯಗಳಲ್ಲಿ ಉಪ್ಪು ಸಹಿಷ್ಣುತೆ ಹೆಚ್ಚಿಸಲು ಬ್ಯಾಕ್ಟೀರಿಯಾ ಸಹಾಯ ಮಾಡುತ್ತದೆ ಮತ್ತು ವೈವಿಧ್ಯಮಯ ಉಪ್ಪು-ಸಹಿಷ್ಣು ಸಸ್ಯಗಳನ್ನು ವಿನ್ಯಾಸಗೊಳಿಸಲು ತಳೀಯ ಎಂಜಿನಿಯರಿಂಗ್ ಅನ್ನು ಬಳಸಬಹುದು ಎಂದು ಅಧ್ಯಯನಗಳು ತೋರಿಸಿವೆಯಾದರೂ, ಈ ಅಧ್ಯಯನದಲ್ಲಿ ಬಳಸಿದ ವಿಧಾನವು ಹೆಚ್ಚು ಸರಳವಾಗಿದೆ.
"ಬೀಜಗಳನ್ನು ಎಂಡೋಫೈಟ್‌ಗಳೊಂದಿಗೆ ಸಂಸ್ಕರಿಸುವುದನ್ನು ಕೃಷಿ ಮಟ್ಟದಲ್ಲಿ ಕೂಡ ಸುಲಭವಾಗಿ ಮಾಡಬಹುದಾಗಿದೆ" ಎನ್ನುತ್ತಾರೆ ಡಾ ಶಂಕರ್.
ಮುಂದಿನ ಹಂತವಾಗಿ, ಸಂಶೋಧಕರು ಕ್ಯಾಪ್ಸಿಕಂ ಮತ್ತು ಮೆಕ್ಕೆ ಜೋಳದಂತಹ ಸಸ್ಯಗಳ ಮೇಲೆ ಇದನ್ನು ಪ್ರಯೋಗಿಸುತ್ತಿದ್ದಾರೆ ಮತ್ತು ಉಪ್ಪು ಸಹಿಷ್ಣುತೆಯಲ್ಲಿ ಉತ್ತೇಜಕ ಫಲಿತಾಂಶಗಳೊಂದಿಗೆ ಸುಧಾರಣೆ ತರುತ್ತಿದ್ದಾರೆ. ಲವಣಾಂಶದ ಪ್ರಮಾಣವು ಸಸ್ಯಗಳ ಬೆಳವಣಿಗೆಯ ಪ್ರಮುಖ ಚಾಲಕ ಅಂಶಗಳಲ್ಲಿ ಒಂದು. ಹವಾಮಾನದ ಬದಲಾವಣೆಗಳಿಂದಾಗಿ ಉಪ್ಪಿನ ಮಟ್ಟದಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಈಗ ಹವಾಮಾನ-ಸೂಕ್ಷ್ಮವಾಗಿರುವ ಬೆಳೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಸೃಷ್ಟಿಸುತ್ತಿವೆ. ಹಾಗಾಗಿ ಇಂತಹ ಬದಲಾವಣೆಗಳನ್ನು ಸಮರ್ಥವಾಗಿ ಸಹಿಸಿಕೊಳ್ಳುವ ಸಸ್ಯಗಳನ್ನು ಸೃಷ್ಟಿಸುವ ದಿಕ್ಕಿನಲ್ಲಿ ಪ್ರಸ್ತುತ ಅಧ್ಯಯನದಲ್ಲಿ ಬಳಸಿದ ವಿಧಾನವು ಒಂದು ಪ್ರಮುಖ ಹೆಜ್ಜೆಯಾಗಿದೆ.
"ನಮ್ಮ ವಿಧಾನವು, ಬೆಳೆ ಸುಧಾರಣಾ ಕಾರ್ಯಕ್ರಮಗಳು ಮತ್ತು ಭಾರತೀಯ ಕೃಷಿಗೆ ಸಂಬಂಧಿಸಿದ ಒತ್ತಡವನ್ನು ತಗ್ಗಿಸುವ ತಂತ್ರಗಳ ವೇಗವರ್ಧನೆಯನ್ನು ಸಾಧ್ಯವಾಗಿಸಬಹುದು" ಎಂದು ಡಾ ಶಂಕರ್ ಭರವಸೆ ವ್ಯಕ್ತಪಡಿಸಿದರು.
ವಿವೇಕರಹಿತ ಮಾನವ ಸೃಷ್ಟಿಸುತ್ತಿರುವ ಹೊಸ ಹೊಸ ಸಮಸ್ಯೆಗಳಿಗೆ ಉತ್ತರವಾಗಿ ವಿವೇಚನೆಯ ಮೂರ್ತರೂಪಗಳಾದ ಸಂಶೋಧಕರು ಹೊಸ ಅಧ್ಯಯನಗಳನ್ನು ನಡೆಸಿ, ಹೊಸ ಭರವಸೆಗಳನ್ನು ಜಗತ್ತಿಗೆ ನೀಡುತ್ತಿದ್ದಾರೆ; ಇಂತಹ ವಿವೇಕಿಗಳ ಸಂತಿತಿ ಸಾವಿರವಾಗಲಿ ಎಂದು ಹಾರೈಸೋಣ.