ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಸ್ವಾಭಾವಿಕ ಕಾಡುಗಳು ಅಥವಾ ಒಂದೇ ಜಾತಿಯ ಗಿಡಗಳ ಮಾನವ ನಿರ್ಮಿತ ಕಾಡುಗಳು: ವಾಯುಗುಣ ಬದಲಾವಣೆಯನ್ನು ನಿಭಾಯಿಸುವಲ್ಲಿ ಯಾವುದು ಉತ್ತಮ?

Read time: 1 min
ಬೆಂಗಳೂರು
31 Jul 2020
ಸ್ವಾಭಾವಿಕ ಕಾಡುಗಳು ಅಥವಾ ಒಂದೇ ಜಾತಿಯ ಗಿಡಗಳ ಮಾನವ ನಿರ್ಮಿತ ಕಾಡುಗಳು: ವಾಯುಗುಣ ಬದಲಾವಣೆಯನ್ನು ನಿಭಾಯಿಸುವಲ್ಲಿ ಯಾವುದು ಉತ್ತಮ?

ಮನುಷ್ಯ ತನ್ನ ನೂರಾರು ಆಸೆಗಳನ್ನು ಪೂರೈಸಿಕೊಳ್ಳುವ ಮತ್ತು ಆಧುನಿಕ ಜೀವನಶೈಲಿಯನ್ನು ಹೊಂದುವ ಭರಾಟೆಯಲ್ಲಿ ಅರಣ್ಯಗಳು/ಕಾಡುಗಳು ನಾಶವಾಗುತ್ತಿವೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದನ್ನು ತಗ್ಗಿಸಲು ಇರುವ ಪರಿಹಾರೋಪಾಯವೆಂದರೆ  ಗಿಡಗಳನ್ನು ಬೆಳೆಸಿ ಅವನತಿಗೊಳಗಾದ ಕಾಡುಗಳನ್ನು ಮರುಸ್ಥಾಪಿಸುವುದು. ಅರಣ್ಯಗಳಲ್ಲಿನ ವೃಕ್ಷಗಳು  ಹಸಿರುಮನೆ ಅನಿಲವಾದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಂಡು ತನ್ನೊಳಗೆ ಹಾಗೂ ಮಣ್ಣಿನೊಳಗೆ ಸಂಗ್ರಹಿಸಿಟ್ಟುಕೊಳ್ಳಬಲ್ಲವು, ಹಾಗಾಗಿ ಯಾವುದೇ ಒಂದು ಪ್ರದೇಶದ ನೈಸರ್ಗಿಕ ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ಮಹತ್ವವುಳ್ಳದ್ದಾಗಿರುವ ಗಿಡ ಮರಗಳನ್ನು ಬೆಳೆಸಿ ಕಾಡುಗಳನ್ನು ಮರುಸ್ಥಾಪಿಸುವಂತಹ ತಂತ್ರವನ್ನು ಹಲವು ಕಾರ್ಯಸೂಚಿಗಳು ಬಳಸುತ್ತಿವೆ. ಆದಾಗ್ಯೂ ಎಲ್ಲಾ ಅರಣ್ಯಗಳು ಕಾರ್ಬನ್-ಡೈ-ಆಕ್ಸೈಡ್ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಂದೇ ತರಹ ಇರುವುದಿಲ್ಲ. ಈ ದೃಷ್ಟಿಕೋನದಲ್ಲಿ, ನಿಸರ್ಗದತ್ತವಾಗಿ ಬೆಳೆದ ಸ್ವಾಭಾವಿಕ ಅರಣ್ಯಗಳಿಗಿಂತ ಮಾನವನಿರ್ಮಿತ ಕಾಡುಗಳು ತಾಪಮಾನವನ್ನು ಸಮತೋಲನಗೊಳಿಸಿ ಹವಾಮಾನ ವೈಪರೀತ್ಯಗಳನ್ನು ನಿಭಾಯಿಸುವಲ್ಲಿ ಎಷ್ಟು ವಿಭಿನ್ನ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಇತ್ತೀಚೆಗೆ “ಎನ್ವಿರಾನ್ಮೆಂಟಲ್ ರೀಸರ್ಚ್ ಲೆಟರ್ಸ್” ಎಂಬ ನಿಯತಕಾಲಿಕೆಯಲ್ಲಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ದಿ ನೇಚರ್ ಕಂಸರ್ವೆನ್ಸಿಯ ಸಂಶೋಧಕರು ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಶನ್ನಿನ ಸಹಯೋಗದಲ್ಲಿ ಕೈಗೊಂಡ  ಅಧ್ಯಯನವು ಪ್ರಕಟವಾಗಿದ್ದು, ಅದರಲ್ಲಿ ನಿಸರ್ಗದತ್ತವಾಗಿ ಬೆಳೆದ ಸ್ವಾಭಾವಿಕ ಕಾಡುಗಳು ಮತ್ತು ಒಂದೇ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಿದ ಮಾನವ ನಿರ್ಮಿತ ಕಾಡುಗಳು ಹೇಗೆ ಕಾರ್ಬನ್ ಡೈಆಕ್ಸೈಡ್ ಅನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಬಗ್ಗೆ ಮೌಲ್ಯಮಾಪನ ಕೈಗೊಂಡಿದ್ದಾರೆ. ಈ ಅದ್ಯಯನಕ್ಕಾಗಿ ಧನಸಹಾಯವನ್ನು ‘ದಿ ನೇಚರ್ ನೆಟ್ ಸೈನ್ಸ್ ಫೆಲೋಸ್’ ಮತ್ತು ‘ಅರ್ಥ್ ಇನ್ಸ್ಟಿಟ್ಯೂಟ್ ಫೆಲೋಸ್’ ಎಂಬ ಕಾರ್ಯಕ್ರಮದಿಂದ ಒದಗಿಸಲಾಗಿದೆ.

ವಿಶ್ವದ ಬೃಹತ್ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದ ಪ್ರದೇಶದಲ್ಲಿರುವ ಐದು ಹುಲಿ ಮೀಸಲು ಪ್ರದೇಶಗಳಲ್ಲಿ ಸಂಶೋಧಕರು ತಮ್ಮ ಅಧ್ಯಯನವನ್ನು ಕೈಗೊಂಡಿದ್ದಾರೆ. ಹಿಂದೆ ಬೃಹತ್ ಪ್ರಮಾಣದಲ್ಲಿ ಕಾಡನ್ನು ಕಡಿದು ವಾಣಿಜ್ಯ ಬೆಳೆಗಳ ತೋಟಗಳನ್ನು, ತೇಗ (ಟೆಕ್ಟೋನ ಗ್ರಾಂಡಿಸ್) ಮತ್ತು ನೀಲಗಿರಿ ಮರಗಳನ್ನು ಸ್ಥಾಪಿಸಲಾಯಿತು. ಇದು ಹೀಗೇ ಮುಂದುವರಿದು ಪಶ್ಚಿಮ ಘಟ್ಟಗಳ ಬಹುಪಾಲು ಕಾಡು ಪ್ರದೇಶಗಳು ಕೃಷಿಭೂಮಿಗಳಾಗಿ ಬದಲಾವಣೆ ಕಂಡಿತು. ವನ್ಯ ಜೀವಿಗಳ ಸಂರಕ್ಷಣೆಯು ಸೇರಿದಂತೆ ಭಾರತದ ಸಂರಕ್ಷಣಾ ಕಾಯಿದೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ 1950 ರಿಂದ 1980 ರವರೆಗೂ ವಾಣಿಜ್ಯ ಉದ್ದೇಶಕ್ಕಾಗಿ ಮರಮುಟ್ಟುಗಳನ್ನು ಬೆಳೆಯುವುದರ ಬದಲಾಗಿ ಅರಣ್ಯ ಸಂರಕ್ಷಣೆಯ ಬಗ್ಗೆ ಕೇಂದ್ರೀಕರಿಸಲಾಯಿತು.  ಈ ಪ್ರಯತ್ನದ ಫಲವಾಗಿ ಸ್ವಾಭಾವಿಕ ಅರಣ್ಯದ (ನಿತ್ಯ ಹರಿಧ್ವರ್ಣ ಮತ್ತು ತೇವವಾದ ಎಲೆ ಉದುರುವ ಕಾಡುಗಳು) ಜೊತೆಗೆ ಬಲಿತ ತೇಗ ಮತ್ತು ನೀಲಗಿರಿ ಮರಗಳು ವ್ಯಾಪಿಸಿಕೊಂಡಿವೆ.

“ನಮ್ಮ ಈ ಅಧ್ಯಯನವನ್ನು ಕೈಗೊಂಡ ಪ್ರದೇಶವು ಈ ಹಿಂದೆ ಮರಮುಟ್ಟುಗಳಿಗೋಸ್ಕರ ಸಸ್ಯವರ್ಗವನ್ನು ಬಳಕೆ ಮಾಡಲಾಗುತಿತ್ತು. ನಂತರ ಇವುಗಳನ್ನು ರಾಷ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಾಗಿ 40-50 ವರ್ಷಗಳ ಹಿಂದೆ ಕಟ್ಟುನಿಟ್ಟಿನ ರಕ್ಷಣೆಗೆ ತರಲಾಯಿತು” ಎಂದು ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಶನ್ ನ ವಿಜ್ಞಾನಿ ಮತ್ತು ಈ ಅಧ್ಯಯನದ ಲೇಖಕರಾದ ಡಾ. ಆನಂದ್ ಒಸೂರಿಯವರು ಹೇಳುತ್ತಾರೆ.

ಈ ಪ್ರಕ್ರಿಯೆಯಿಂದ ನೈಸರ್ಗಿಕ ಕಾಡುಗಳು ಮತ್ತು ಮಾನವ ನಿರ್ಮಿತ ಸಸ್ಯವರ್ಗಗಳು ಹೇಗೆ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡನ್ನು ತನ್ನೊಳಗೆ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೋಲಿಕೆ ಮಾಡುವ ಅಪರೂಪದ ಅವಕಾಶವನ್ನು ಸೃಷ್ಟಿಸಿದೆ ಎಂದು ಅವರು ಹೇಳುತ್ತಾರೆ.

ಸಂಶೋಧಕರು ಕೈಗೊಂಡ ಅಧ್ಯಯನದಲ್ಲಿ ಊಹಿಸಿದಂತೆ ವಿವಿಧ ಜಾತಿಯ ಸಸ್ಯವರ್ಗವನ್ನು ಹೊಂದಿರುವ ಸ್ವಾಭಾವಿಕ ಕಾಡುಗಳು, ಒಂದೇ ಜಾತಿಯ ಸಸ್ಯವರ್ಗವಿರುವ ಮಾನವನಿರ್ಮಿತ ಕಾಡುಗಳಿಗಿಂತ ಕಾರ್ಬನ್ನನ್ನು ಹೆಚ್ಚು ಹೀರಿಕೊಂಡು ದೀರ್ಘಕಾಲದವರೆಗೂ ಸಂಗ್ರಹಿಸಿಟ್ಟುಕೊಳ್ಳಬಲ್ಲವು, ಮತ್ತು ನೈಸರ್ಗಿಕ ವಿಕೋಪವಾದ ಬರಗಾಲಕ್ಕೆ ತುತ್ತಾಗುವ ಸಂಭವ ಕಡಿಮೆ ಇರುತ್ತದೆ. ವಾರ್ಷಿಕವಾಗಿ ಈ ಅಧ್ಯಯನವನ್ನು ಕೈಗೊಳ್ಳಲಾಗಿದ್ದು, ಪ್ರಾರಂಭಿಕ ಹಂತದಲ್ಲಿ ಅಣ್ಣಾಮಲೈ ಹುಲಿಮೀಸಲು ಪ್ರದೇಶದಲ್ಲಿ ಪರೀಕ್ಷಿಸಲಾಗಿ ಕಂಡುಬಂದ ವರದಿಯ ಪ್ರಕಾರ ಎಲೆ ಉದುರುವ ಕಾಡುಗಳು, ತೇಗ ಮತ್ತು ನೀಲಗಿರಿ ಸಸ್ಯವರ್ಗಗಳಿಗಿಂತ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹಲವು ಜಾತಿಯ ಗಿಡಗಳನ್ನು ಹೊಂದಿವೆ. ಅಧ್ಯಯನದಲ್ಲಿನ ಅಂಶಗಳನ್ನು ನಕ್ಷೆಯ ಮೂಲಕ ಗುರುತಿಸಿದಾಗ ಹೆಚ್ಚಿನ ವೈವಿಧ್ಯತೆಯನ್ನು ಹೊಂದಿರುವ ಸ್ವಾಭಾವಿಕ ಸಸ್ಯವರ್ಗಗಳು ಹೆಚ್ಚಿನ ಕಾರ್ಬನ್ನಿನ ಸಂಗ್ರಹಣೆ ಹೊಂದಿದ್ದು, ನಿತ್ಯ ಹರಿದ್ವರ್ಣ ಕಾಡುಗಳು ಅತೀ ಹೆಚ್ಚಿನ ಸಂಗ್ರಹವನ್ನು ಹೊಂದಿವೆ ಎಂದು ಸಾಬೀತುಪಡಿಸಿವೆ.

ನಂತರದಲ್ಲಿ 2000 ನೇ ಇಸವಿಯಿಂದ 2018 ರವರೆಗೆ ಅಣ್ಣಾಮಲೈ ಹುಲಿಮೀಸಲು ಪ್ರದೇಶ, ಪರಂಬಿಕುಲಂ ಹುಲಿಮೀಸಲು ಪ್ರದೇಶ, ವಯನಾಡ್ ವನ್ಯಜೀವಿಧಾಮ, ರಾಜೀವ್ ಗಾಂಧಿ ಹುಲಿಮೀಸಲು ಪ್ರದೇಶ, ಮತ್ತು ಭದ್ರಾ ಹುಲಿಮೀಸಲು ಪ್ರದೇಶಗಳಲ್ಲಿ, ದೂರ ಸಂವೇದಿ ಅಧ್ಯಯನದ ಅಂಕಿ ಅಂಶಗಳನ್ನು ಆಧರಿಸಿ ಸಸ್ಯವರ್ಗವು ದ್ಯುತಿಸಂಶ್ಲೇಷಣೆ ಕ್ರಿಯೆಯ ಮುಖಾಂತರ ಕಾರ್ಬನ್ನಿನ ಹೀರುಕೊಳ್ಳುವಿಕೆಯನ್ನು ಅಭ್ಯಸಿಸಿ ಅಂದಾಜಿಸಲಾಗಿದೆ.

ಕಾರ್ಬನ್ನಿನ ಹೀರಿಕೊಳ್ಳುವಿಕೆಯಲ್ಲಿನ ವ್ಯತ್ಯಾಸವನ್ನು ವರ್ಷದಲ್ಲಿ ಎರಡು ಬಾರಿ, ಅಂದರೆ ತೇವ(ಸೆಪ್ಟೆಂಬರ್-ಡಿಸೆಂಬರ್) ಮತ್ತು ಶುಷ್ಕ(ಜನವರಿ-ಏಪ್ರಿಲ್) ಕಾಲದಲ್ಲಿ ಅಧ್ಯಯನವನ್ನು ಕೈಗೊಳ್ಳಲಾಗಿದೆ.  ಸಸ್ಯವರ್ಗವು ಕಾರ್ಬನ್ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೇಗೆ ಋತುಗಳ ಬದಲಾವಣೆಯಂತೆ ವ್ಯತ್ಯಾಸವನ್ನು ಹೊಂದಬಲ್ಲವು ಎನ್ನುವುದನ್ನು ತಿಳಿದುಕೊಂಡಾಗ ನೈಸರ್ಗಿಕ ವಿಕೋಪಗಳನ್ನು ದಖನ್ ಪೀಠಭೂಮಿಯಲ್ಲಿ ಹೇಗೆ ನಿಭಾಯಿಸಬಲ್ಲವು ಎಂಬುದನ್ನು ತಿಳಿಯಲು ನಿರ್ಣಾಯಕ ಅಂಶವಾಗುತ್ತದೆ.

ಈ ಅಧ್ಯಯನದ ಫಲಿತಾಂಶಗಳು ತಿಳಿಸುವುದೇನೆಂದರೆ, ತೇವ ಕಾಲದಲ್ಲಿ ನಿತ್ಯ ಹರಿಧ್ವರ್ಣ ಮತ್ತು ತೇವವಾದ ಎಲೆ ಉದುರುವ ಕಾಡುಗಳಿಗಿಂತ ತೇಗ ಮತ್ತು ನೀಲಗಿರಿ ಸಸ್ಯವರ್ಗವು ಕಾರ್ಬನ್ನನ್ನು ಹಿಡಿದಿಟ್ಟುಕೊಳ್ಳುವಿಕೆಯಲ್ಲಿ ಶೇಖಡಾ 4-9 ರಷ್ಟು ಹೆಚ್ಚಳವನ್ನು ಹೊಂದಿವೆ. ಆದರೆ ಶುಷ್ಕ(ಒಣ ಹವೆ) ಕಾಲದಲ್ಲಿ ಸರಾಸರಿ ಕಾರ್ಬನ್ನನ್ನು ಹಿಡಿದಿಟ್ಟುಕೊಳ್ಳುವಿಕೆಯಲ್ಲಿ ನಿತ್ಯ ಹರಿಧ್ವರ್ಣ ಮತ್ತು ತೇವವಾದ ಎಲೆ ಉದುರುವ ಕಾಡುಗಳಿಗಿಂತ ನೀಲಗಿರಿ ಮತ್ತು ತೇಗ ಸಸ್ಯವರ್ಗವು ಶೇಖಡಾ 3-29 ರಷ್ಟು ಕಡಿಮೆ ಫಲಿತಾಂಶವನ್ನು ಹೊಂದಿವೆ. ಆದ್ದರಿಂದ ತೇವ ಕಾಲದಲ್ಲಿ ಅಂದರೆ ಮಳೆಗಾಲದಲ್ಲಿ ಹೆಚ್ಚಿನ ಕಾರ್ಬನ್ ಸಂಗ್ರಹವಾಗಲಿದೆ. ನೈಸರ್ಗಿಕ ಸಸ್ಯವರ್ಗವು ಯಾವಾಗಲೂ ಕಾರ್ಬನ್ನಿನ ಸಂಗ್ರಹಣೆಯಲ್ಲಿ ಹೆಚ್ಚಿನ ಸ್ಥಿರತೆಯನ್ನು ಹೊಂದಿವೆ. (ನಿತ್ಯ ಹರಿಧ್ವರ್ಣ ಕಾಡುಗಳು> ಎಲೆ ಉದುರುವ ಕಾಡುಗಳು, ನೀಲಗಿರಿ ಸಸ್ಯವರ್ಗ >ತೇಗ ಸಸ್ಯವರ್ಗ). ನಾವು ಗಿಡಮರಗಳನ್ನು ನೆಡಬಹುದು, ಆದರೆ ಅವು ವೈಪರೀತ್ಯಗಳನ್ನು ತಡೆಯುವ ಸಾಮರ್ಥ್ಯವನ್ನು ಅಷ್ಟಾಗಿ ಹೊಂದಿರುವುದಿಲ್ಲ.

ಒಟ್ಟಾರೆಯಾಗಿ ಅಧ್ಯಯನದ ಫಲಿತಾಂಶವಾಗಿ ತಿಳಿದು ಬಂದ ಅಂಶವೇನೆಂದರೆ ಅತೀವ ಸಸ್ಯ ವೈವಿಧ್ಯವನ್ನು ಹೊಂದಿರುವ ಸ್ವಾಭಾವಿಕ ಕಾಡುಗಳು ಮಾನವ ನಿರ್ಮಿತ ಕಾಡುಗಳಿಗಿಂತ  ಹೆಚ್ಚಿನ ಕಾರ್ಬನ್ನನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ವೈಪರೀತ್ಯಗಳಿಗೆ ಕಡಿಮೆ ತೀವ್ರತೆಯನ್ನು ಹೊಂದಿರುತ್ತವೆ.

ಕಾಂಪಾ (CAMPA) ದಂತಹ ಅರಣ್ಯೀಕರಣ ಯೋಜನೆಯಲ್ಲಿ ನೆಡುತ್ತಿರುವ ಸಸ್ಯವರ್ಗದ ಮೇಲೂ ಈ ಅಧ್ಯಯನದ ಫಲಿತಾಂಶಗಳು ಪರಿಣಾಮವನ್ನು ಬೀರಬಲ್ಲಬಹುದಾಗಿವೆ. ಹಲವು ವೈವಿಧ್ಯತೆಯನ್ನು ಹೊಂದಿರುವ ಕಾಡುಗಳನ್ನು ನಿರ್ಮಾಣ ಯೋಜನೆಗಳಿಗಾಗಿ ನಾಶಮಾಡಿ ಅವುಗಳನ್ನು ಸರಿದೂಗಿಸಲು ಸಸ್ಯಗಳನ್ನು ನೆಡುವುದರಿಂದ ಖಂಡಿತ ಸಮಾನವಾಗಿರಿಸಲು ಸಾಧ್ಯವಿಲ್ಲ ಎಂದು ಸಂಶೋಧಕರು ಸಲಹೆ ನೀಡುತ್ತಾರೆ. ಬದಲಾಗಿ ಸ್ವಾಭಾವಿಕ ಸಸ್ಯವರ್ಗವನ್ನು, ಅರಣ್ಯಗಳನ್ನು ಸಂರಕ್ಷಿಸುವುದು ನಮ್ಮ ಆದ್ಯತೆಯಾಗಬೇಕು, ಗುರಿಯಾಗಬೇಕು ಮತ್ತು ಒಂದೇ ಜಾತಿಯ ಸಸ್ಯಗಳನ್ನು ನೆಡುವುದರ ಬದಲಾಗಿ ವಿವಿಧ ಜಾತಿಯ ಸಸ್ಯಗಳನ್ನು ನೆಡುವಂತಾಗಬೇಕು.

“ಒಂದೇ ಜಾತಿಯ ಸಸ್ಯಗಳನ್ನು ನೆಡುವುದರ ಬದಲಾಗಿ ಇರುವ ಎಲ್ಲಾ ಪರ್ಯಾಯ ವ್ಯವಸ್ಥೆಗಳನ್ನು, ಸಾಧ್ಯಾಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಅತೀ ತುರ್ತಾಗಿ ಮಾಡಬೇಕಿದೆ. ಪಶ್ಚಿಮಘಟ್ಟದಲ್ಲಿನ ಕಾಡುಗಳು ಸಂಕೀರ್ಣವ್ಯವಸ್ಥೆಯನ್ನು ಹೊಂದಿದ್ದು ಹಲವು ಜೀವಿಗಳಿಗೆ ಆವಾಸಸ್ಥಾನವಾಗಿದ್ದು, ಜೀವ ವೈವಿಧ್ಯತೆಯತಾಣವಾಗಿ ವಾತಾವರಣದಲ್ಲಿನ ಕಾರ್ಬನ್ನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮುಖ್ಯಪಾತ್ರವನ್ನು ವಹಿಸಿ, ಪರಿಸರವನ್ನು ಸಮದೂಗಿಸುತ್ತಾ, ನೀರಿಗೆ ಕೊರತೆಯಾಗದಂತೆ ಒಂದಕ್ಕೊಂದು ಪೂರಕವಾಗಿ ಜೀವಸೆಲೆಯಂತೆ ಇವೆ ಎನ್ನುವುದು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ”ಎನ್ನುತ್ತಾರೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ, ಡಾ. ಆನಂದ್ ಒಸೂರಿ.