Novel scheme by IIT Bombay researchers to control drones can enable complex formation flying using only camera data, without GPS or inter-drone communication.

ಪ್ರಾಣಿ-ಪಕ್ಷಿ-ಕೀಟಗಳ ಅಧ್ಯಯನಕ್ಕೆ ನೈಟ್ ವಿಝನ್

ಫೋಟೋ: ಗ್ರೆಗ್ ಹ್ಯೂಮ್

ಸೂರ್ಯೋದಯವದಂತೆ ಬೆಳಕು ಮೂಡುವುದರ ಜೊತೆ, ಸಂಜೆ ಸೂರ್ಯಾಸ್ತವಾದ ಮೇಲೆ ಕತ್ತಲಾದಂತೆ ನಾವು ಮನುಷ್ಯರು ನಮ್ಮ ಜೀವನಶೈಲಿಯನ್ನು ರೂಪಿಸಿಕೊಂಡಿದ್ದೇವೆ. ರಾತ್ರಿಯೆಲ್ಲ ಎದ್ದಿರುವವವರಿಗೆ ನಿಶಾಚಾರಿ ಎಂದೂ ಹೇಳುತ್ತೇವೆ. ಹಾಗೆಯೇ ಗೂಬೆಯೂ ನಿಶಾಚಾರಿ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ಹಾಗಾದರೆ ಗೂಬೆ ಮತ್ತು ಇನ್ನು ಹಲವು ಪ್ರಾಣಿ-ಪಕ್ಷಿ-ಕೀಟಗಳಿಗೆ ರಾತ್ರಿ ಹೊತ್ತು ಹೇಗೆ ಕಾಣುವುದುದು ಎಂಬುದು ಸ್ವಾಭಾವಿಕವಾದ ಪ್ರಶ್ನೆ.

ಇನ್ನೊಂದೆಡೆ ನಾವೇನಾದರೂ ಕೆಲವು ಪ್ರಾಣಿಗಳಿಗೆ ರಾತ್ರಿ ಹೊತ್ತು ಟಾರ್ಚ್ ಅಲ್ಲಿ ಬೆಳಕು ಹಾರಿಸಿದರೆ, ಅವುಗಳ ಕಣ್ಣು ಫಳಫಳ ಹೊಳೆಯುತ್ತವೆ. ಇದಕ್ಕೆ ಇವುಗಳಲ್ಲಿ ಟಪೆಟಮ್ ಲುಸಿಡಮ್ ಎಂಬ ರೆಟಿನಾದ ಹಿಂದೆ ಕೆಲವು ವಿಶೇಷ ಪ್ರತಿಫಲಕದೊಂದಿಗೆ ಕೆಲ ಪ್ರಾಣಿ-ಪಕ್ಷಿಗಳು ವಿಕಸನಗೊಂಡಿವೆ. ಇದು ಯಾವುದೇ ಗೋಚರಿಸಿದ ಬೆಳಕನ್ನು ರೆಟಿನಾದ ಮೂಲಕ ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ ಮತ್ತು ದ್ಯುತಿಗ್ರಾಹಕ (ಫೋಟೋ ರಿಸೆಪ್ಟರ್) ಗಳಿಗೆ ಬೆಳಕಿನ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಕಡಿಮೆ ಬೆಳಕಿನಲ್ಲಿಯೂ ರಾತ್ರಿಯ ದೃಷ್ಟಿಯನ್ನು ಸುಗಮಗೊಳಿಸುತ್ತದೆ.

ಹಾಗಾಗಿ ರಾತ್ರಿಯಲ್ಲಿ ನಾವು ಕೆಲವು ಪ್ರಾಣಿಗಳಲ್ಲಿ ನೋಡುವ ಕಣ್ಣಿನ ಹೊಳಪು ಅವುಗಳ ಟಪೆಟಮ್ ಲೂಸಿಡಮ್ ನಿಂದ. ಇದರಿಂದ ಅವುಗಳ ಪ್ಯುಪಿಲ್ ಬೆಳಕಿನಿಂದ ಹೊಳೆಯುವಂತೆ ಕಾಣುತ್ತದೆ. ಮೂಲಭೂತವಾಗಿ ಇದು ನೋಟದ ಪ್ರಕ್ರಿಯೆಗೆ ಲಭ್ಯವಿರುವ ಬೆಳಕಿನ ತೀವ್ರತೆಯನ್ನು ಹೆಚ್ಚಿಸುತ್ತದೆ. ಅಂದ ಹಾಗೆ ಮನುಷ್ಯರಲ್ಲಿ ಟಪೆಟಮ್ ಲುಸಿಡಮ್ ಇಲ್ಲ, ಹಾಗಾಗಿ ನಮಗೆ ರಾತ್ರಿ ಹೊತ್ತು ನೋಡುವುದಕ್ಕೆ ಬೆಳಕು ಸಾಕಾಗುವುದಿಲ್ಲ.

ನೋಟ ಅಥವಾ ದೃಷ್ಟಿಯನ್ನು ವೃದ್ಧಿಡಿಸಲು ಇನ್ನೊಂದು ಮಾರ್ಗವಿದೆ. ಈ ಹಿಂದೆ ತಿಳಿಸಿದಂತೆ ನಾವು ಮನುಷ್ಯರು ಕಾಣುವ ಬೆಳಕು ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್ ಅಲ್ಲಿ ವಿಸಿಬಲ್ ಬ್ಯಾಂಡ್ ಗೆ ಸೇರಿದ ಬಣ್ಣಗಳು ಮಾತ್ರ. ಇದನ್ನು ಜನಪ್ರಿಯವಾಗಿ VIBGYOR ಎಂದು ಕರೆಯಲಾಗುತ್ತದೆ (ನೇರಳೆ, ಇಂಡಿಗೊ, ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳಿಗೆ). ಮನುಷ್ಯರ ಕಣ್ಣುಗಳು ಈ ಬಣ್ಣಗಳ ಸಮ್ಮಿಶ್ರಿತ ತರಂಗಾಂತರದ ಮಾಹಿತಿಯನ್ನು ಗ್ರಹಿಸಲು ವಿನ್ಯಾಸಗೊಂಡಿದೆ. ಅಂದರೆ ಸೂರ್ಯಾಸ್ತದೊಡನೆ ಬೆಳಕಿನ ಮೂಲ ಕ್ಷೀಣಿಸಿದಂತೆ ನಮ್ಮ ನೋಟಕ್ಕೆ ಬೆಳಕು ಸಾಕಾಗುವುದಿಲ್ಲ, ಹಾಗಾಗಿ ನಾವು ಕೃತಕವಾಗಿ ದೀಪಗಳ (ಬೀದಿ ದೀಪಗಳು - ಮನೆಯಲ್ಲಿನ ದೀಪಗಳು) ಮೊರೆ ಹೋಗುತ್ತೇವೆ.

ಜನಪ್ರಿಯವಾಗಿ ಮಾನವರಂತೆ ಇತರೆ ಪ್ರಾಣಿ-ಪಕ್ಷಿ-ಕೀಟಗಳ ದೃಷ್ಟಿಗೋಚರ ಗ್ರಹಿಕೆ ವಿಸಿಬಲ್ ಬ್ಯಾಂಡ್ ಗೆ ಸೀಮಿತವಾಗಿರಬೇಕು  ಎಂದು ನಾವು ಭಾವಿಸುತ್ತೇವೆ. ಆದರೆ ಕೆಲ ಪ್ರಾಣಿ-ಪಕ್ಷಿ-ಕೀಟಗಳು ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್ ಅನ್ನು ವಿಭಿನ್ನವಾಗಿ ಸೆರೆಹಿಡಿಯಬಹುದು ಎಂದು ತಿಳಿದುಬಂದಿದೆ.

ಕೆಲವು ಬಹುಶಃ ಕೇವಲ ಎರಡು ಬಣ್ಣಗಳನ್ನು ಮಾತ್ರ ನೋಡಬಹುದು, ಕೆಲವು ನೇರಳಾತೀತದಲ್ಲಿ ನೋಡಬಹುದು (ನೇರಳೆ ಬಣ್ಣಕ್ಕಿಂತ ಕಡಿಮೆ ತರಂಗಾಂತರಗಳು) ಮತ್ತು ಕೆಲವರು ಅತಿಗೆಂಪು ಬಣ್ಣದಲ್ಲಿ (ಕೆಂಪು ಬಣ್ಣಕ್ಕಿಂತ ಹೆಚ್ಚಿನ ತರಂಗಾಂತರಗಳು) ನೋಡಬಹುದು. ಹಾವುಗಳು ಅತಿಗೆಂಪು ಬೆಳಕಿನಲ್ಲಿ ನೋಡಬಹುದು. ಹಾಗಾಗಿ ಕೆಲವು ಜೀವಿಗಳಿಗೆ ನಮಗೆ ರಾತ್ರಿಯಾದರೂ ಸಹ ಸಕ್ರಿಯವಾಗಿ ಬೇರೆ ವಸ್ತು - ಜೀವಿಗಳನ್ನು ನೋಡಬಲ್ಲವು.

ಇದರ ಜೊತೆ ಕೆಲ ಪ್ರಾಣಿ-ಪಕ್ಷಿ-ಕೀಟಗಳಲ್ಲಿ ಇನ್ನೊಂದು ವಿಶೇಷ ಗುಣಲಕ್ಷಣ ಇದೆ. ಅದರ ಚರ್ಮ ಕೂಡ ವಿಶೇಷವಾಗಿ ವಿಕಸನಗೊಂಡಿದೆ. ಇವು ಸಾಧಾರಣ ಬೆಳಕಿನಲ್ಲಿ ಏನೂ ವಿಶೇಷವಾಗಿ ಕಾಣದಿದ್ದರೂ ಬೇರೆ ತರಂಗಾಂತರಗಳ ಬೆಳೆಕಿಗೆ ವಿಭಿನ್ನವಾಗಿ ಪ್ರತಿಫಲಿಸುತ್ತದೆ. ಕೆಲವು ಕೀಟಗಳು ಮತ್ತು ಜೇಡಗಳು ನೇರಳಾತೀತ ಬೆಳಕಿನಲ್ಲಿ ಹೊಳೆಯುತ್ತದೆ. ಉದಾಹರಣೆಗೆ, ಚೇಳಿಗೆ ನೇರಳಾತೀತ ಬೆಳಕನ್ನು ಹಾರಿಸಿದರೆ, ಅದು ವಿಶೇಷವಾಗಿ ಹೊಳೆಯುತ್ತದೆ.

ಕೀಟಗಳಲ್ಲಂತೂ ಇದರಿಂದ ಬೇರೆ ಕೀಟಗಳಿಗೆ ಅವುಗಳ ಇರುವಿಕೆ ನಮಗೆ ರಾತ್ರಿಯಾದರೂ ಚೆನ್ನಾಗಿ ಗೋಚರಿಸುವುದು. ಬಹುಶಃ ಈ ಗುಣಲಕ್ಷಣಗಳನ್ನು ಆಧರಿಸಿ ಪ್ರಾಣಿ-ಪಕ್ಷಿ-ಕೀಟಗಳಲ್ಲಿ ಅದರ ಆಹಾರ ವ್ಯವಸ್ಥೆ ಕೂಡ ರೂಪುಗೊಂಡಿರಬಹುದು. ಇದನ್ನೇ ಒಂದು ರೀತಿಯಲ್ಲಿ ನೈಟ್ ವಿಝನ್ ಎಂದೆನ್ನ ಬಹುದು. ಇದನ್ನು ಆಧರಿಸಿ ಈಗ ವಿಜ್ಞಾನಿಗಳು ರಾತ್ರಿ ಹೊತ್ತು ನೇರಳಾತೀತ ಮತ್ತು ಅತಿಗೆಂಪು ಬೆಳಕನ್ನು ಹಾರಿಸಬಲ್ಲ ಟಾರ್ಚ್ ಬಳಸುತ್ತಿದ್ದಾರೆ. ಇದರಿಂದ ಅವುಗಳ ಚಲನ-ವಲನ ಮತ್ತು ಇತರೆ ಚಟುವಟಿಕೆಯನ್ನು ಅಧ್ಯಯನ ಮಾಡಲು ಅನುಕೂಲವಾಗಿದೆ.

ಅಂದಹಾಗೆ ಇರುವೆಗಳಿಗೂ ನೈಟ್ ವಿಝನ್ ಇದೆಯಂತೆ. ಯಾವ ಜೀವಿಗಳು ಯಾವ ಬಣ್ಣಗಳು ಮತ್ತು ಯಾವ ತರಂಗಾಂತರಗಳಲ್ಲಿ ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್ ಅನ್ನು ಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು ಎಂದು ನಮಗೆ ಇನ್ನೂ ಪೂರ್ತಿ ತಿಳಿದಿಲ್ಲ. ಆದರೆ ಬೆಳಕಿನ ಆಟ ಮತ್ತು ಅವು ಜಗತ್ತನ್ನು ಎಷ್ಟು ವಿಭಿನ್ನವಾಗಿ ನೋಡುತ್ತವೆ ಎಂಬುದನ್ನು ಊಹಿಸುವುದು ಖಂಡಿತವಾಗಿಯೂ ರೋಮಾಂಚನಕಾರಿಯಾದ ಸಂಗತಿ.  

Search Research Matters