ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಅರಬ್ಬೀ ಸಮುದ್ರದಲ್ಲಿ ಜೈವಿಕದೀಪ್ತಿಯಿಂದ ಹೊಳೆಯುವ ಪಾಚಿಗೂ, ದೂರದ ಹಿಮಾಲಯದಲ್ಲಿ ಕರಗುವ ಹಿಮಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ?

Bengaluru
7 Oct 2020
ಅರಬ್ಬೀ ಸಮುದ್ರದಲ್ಲಿ ಜೈವಿಕದೀಪ್ತಿಯಿಂದ ಹೊಳೆಯುವ ಪಾಚಿಗೂ, ದೂರದ ಹಿಮಾಲಯದಲ್ಲಿ ಕರಗುವ ಹಿಮಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ?

ಆಗಸ್ಟ್ ೨೦೧೯ ರಲ್ಲಿ ಚೆನ್ನೈ ಕಡಲತೀರದ ಉದ್ದಕ್ಕೂ ‘ನೋಕ್ಟಿಲುಕಾ’ ಎಂಬ ಪ್ಲ್ಯಾಂಕ್ಟನ್ (ಪ್ರವಾಹಕ್ಕೆ ವಿರುದ್ಧವಾಗಿ ಈಜಲಾಗದ ಸಣ್ಣ ಸಣ್ಣ ಸಮುದ್ರಜೀವಿಗಳು)ನ ಹರಡುವಿಕೆ ಗೋಚರಿಸಿದ್ದು, ಅವು ಕತ್ತಲಿನಲ್ಲಿ ಆಕರ್ಷಕವಾದ ನಿಯಾನ್ ನೀಲಿ ಬಣ್ಣದಲ್ಲಿ ಪ್ರಕಾಶಿಸುತ್ತಿದ್ದವು. ನೋಡುಗರನ್ನು ಮೂಕವಿಸ್ಮಿತವಾಗಿಸುವ ಈ ಸಣ್ಣ ಜೀವಿಗಳ ಜೈವಿಕದೀಪ್ತಿಯು, ಅಲೆಗಳ ಮೇಲೆ ಬೆಳಕಿನ ನೃತ್ಯದಂತೆ ಕಂಡುಬರುತ್ತದೆ, ಈ ವಿದ್ಯಮಾನದ ಸುಂದರ ಛಾಯಾ ಚಿತ್ರಗಳನ್ನು ಜನರು ಯಥೇಚ್ಚವಾಗಿ ಹಂಚಿಕೊಂಡಿದ್ದಾರೆ. ಆದರೆ, ಸಮುದ್ರವನ್ನು ಹೊಳೆಯುವಂತೆ ಮಾಡುವ ಈ ‘ಬ್ಲೂಮ್ಸ್’ ಅಥವಾ ಈ ಜೀವಿಗಳ ತ್ವರಿತ ಹರಡುವಿಕೆಯು ಅಷ್ಟೇನೂ ಸಂತೋಷ ಕೊಡುವ ವಿಷಯವಲ್ಲ. ಆದಾಗ್ಯೂ ಇದು ಹವಾಮಾನ ಬದಲಾವಣೆಯು ಸಮುದ್ರದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಬಿಂಬಿಸುವ ಸೂಕ್ತ ಸೂಚಕವಾಗಿದೆ. ಹೌದು, ಕಳೆದ ಹಲವು ವರ್ಷಗಳ ಹಿಂದಿನಿಂದಲೂ ನೋಕ್ಟಿಲುಕಾ ಜೀವಿಯು ಸಮುದ್ರದ ದ್ವಿಕೋಶಿಗಳು, ಅಂದರೆ ಡಯಾಟಮ್ಗಳನ್ನು ನಾಶಮಾಡಿದೆ. ಇದರಿಂದಾಗಿ ನೀರಿನೊಳಗಿನ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಿದೆ. ಈ ವಿದ್ಯಮಾನಕ್ಕೂ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದಲ್ಲಿ ಕರಗುತ್ತಿರುವ ಹಿಮಕ್ಕೂ ಸಂಬಂಧವಿರಬಹುದು ಎಂದು ಇತ್ತೀಚೆಗೆ ನಡೆದ ಈ ಅಧ್ಯಯನವು ಸೂಚಿಸುತ್ತದೆ. ಈ ಅಧ್ಯಯನವು ‘ಸೈಂಟಿಫಿಕ್ ರಿಪೋರ್ಟ್ಸ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಹಿಮಾಲಯ-ಟಿಬೆಟ್ ಪ್ರಸ್ಥಭೂಮಿಯಲ್ಲಿ ಕಾಣೆಯಾಗುತ್ತಿರುವ ಹಿಮದ ಹೊದಿಕೆಯಿಂದಾಗಿ, ಆ ಪರ್ವತಗಳಿಂದ ಹೊರಡುವ ಗಾಳಿಯ ತೇವಾಂಶ ಮತ್ತು ತಾಪಮಾನ ಹೆಚ್ಚಿದೆ ಎಂದು ಅಮೇರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದಲ್ಲಿ ನಡೆಸಲಾದ ಈ ಅಧ್ಯಯನವು ತಿಳಿಸುತ್ತದೆ.  ಈ ಬಿಸಿಗಾಳಿಯು, ಉತ್ತರ ಭಾಗದ ಅರಬ್ಬೀ ಸಮುದ್ರದ ಮೇಲ್ಮೈ ನೀರನ್ನು ಬೆಚ್ಚಗಾಗಿಸಿ, ನೀರನ್ನು ವಿವಿಧ ತಾಪಮಾನದ ಎರಡು ಪದರಗಳನ್ನಾಗಿ ವಿಂಗಡಿಸಿತ್ತದೆ. ಆಳವಾದ ನೀರಿನಲ್ಲಿ ಪೌಷ್ಠಿಕಾಂಶಗಳ ಪರಿಚಲನೆಯನ್ನು ಇದು ತಡೆಯುತ್ತದೆ. ಈ ಏರು  ಪೇರಿನಿಂದಾಗಿ ಬೇರೆ ಎಲ್ಲಾ ಶೈವಲ ಅಥವಾ ಪಾಚಿಗಳಿಗಿಂತಾ(ಆಲ್ಗೆ) ನೋಕ್ಟಿಲುಕಾ ಸಿನ್ಟಿಲಾನ್ಸ್  ಎಂಬ ಒಂದೇ ಬಗೆಯ ಶೈವಲಕ್ಕೆ ವಾತಾವರಣವು ಅನುಕೂಲಕರವಾಗಿ ಒದಗಿಬರುತ್ತದೆ.

"ನೋಕ್ಟಿಲುಕಾ ಜೀವಿಯ ತ್ವರಿತ ಹರಡುವಿಕೆಯು, ಭಾರತದ ಸಮುದ್ರಗಳಲ್ಲಿ ಸುಮಾರು ಒಂದು ದಶಕದ ಹಿಂದೆಯೇ ಆರಂಭಗೊಂಡಿದೆ.” ಎನ್ನುತ್ತಾರೆ ಸಮುದ್ರದ ವಿಷಯದಲ್ಲಿ ಸಂಶೋಧಕರಾಗಿರುವ ಮಹಿ ಮಂಕೇಶ್ವರ್. ಅವರು ಈ ಅಧ್ಯಯನದ ಭಾಗವಾಗಿಲ್ಲದಿದ್ದರೂ, ಅರಬ್ಬೀ ಸಮುದ್ರದಲ್ಲಿ ಪೌಷ್ಟಿಕಾಂಶಗಳಿಗೆ ಸಂಬಂಧಿಸಿದಂತೆ ಆಗುವ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತರಾಗಿದ್ದಾರೆ. ಈ ವಿಷಯದ ಬಗ್ಗೆ ಮಾತನ್ನು ಮುಂದುವರೆಸುತ್ತಾ, “ ಇಷ್ಟು ವರ್ಷಗಳು ಗಮನಿಸದೇ ಇದ್ದ ವಾಯುಗುಣ ಬದಲಾಣೆಯ ಪರಿಣಾಮಗಳನ್ನು, ಸತ್ತ ಮೀನುಗಳ ರಾಶಿ ಮತ್ತು ಜೈವಿಕದೀಪ್ತಿಯಂತಹ ಕಣ್ಣಿಗೆ ಕಾಣಿಸುವ ಬದಲಾವಣೆಗಳ ಕಾರಣದಿಂದ  ಈಗ ಗಮನಿಸುತ್ತಿದ್ದೇವೆ ”ಎನ್ನುತ್ತಾರೆ ಮಹಿ ಮಂಕೇಶ್ವರ್.

‘ಫಯ್ಟೋಪ್ಲ್ಯಾಂಕ್ಟನ್’ಗಳು (Phytoplanktons) (ನೀರಿನಲ್ಲಿ ತೇಲುವ ಶೈವಲ ಅಥವಾ ಪಾಚಿಗಳು), ಏಕಕೋಶೀಯ ಸೂಕ್ಷ್ಮಾಣುಜೀವಿಗಳಾಗಿದ್ದು, ನೀರಿನ ಮೇಲೆ ತೇಲುತ್ತಿರುತ್ತವೆ. ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಂಡು ಇತರ ಗಿಡಮರಗಳಂತೆಯೇ ಸ್ವತಃ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಆದ್ದರಿಂದ ಆಹಾರ ಸರಪಳಿಯಲ್ಲಿ ಕೆಳಗಿನ ಆಧಾರಪ್ರಾಯ ಹಂತದಲ್ಲಿ ಇವು ಇರುತ್ತವೆ ಮತ್ತು ತಮ್ಮ ಆಹಾರ ತಾವೇ ತಯಾರಿಸಿಕೊಳ್ಳಲಾಗದ ಸಮುದ್ರದ ಇತರ ಜೀವಿಗಳಾದ ಚಿಕ್ಕ ಚಿಕ್ಕ ಮೀನುಗಳಿಂದ ಮೊದಲ್ಗೊಂಡು ದೊಡ್ಡದಾದ ಶಾರ್ಕ್‌ನಂತಹ ಪರಭಕ್ಷಕ ಪ್ರಾಣಿಗಳಿಗೂ ಇವು  ಆಹಾರ ಒದಗಿಸುತ್ತವೆ.

ಆದಾಗ್ಯೂ, ‘ನೋಕ್ಟಿಲುಕಾ’ದಂತಹ ನೀರಿನಲ್ಲಿ ತೇಲುವ ಶೈವಲಗಳು, ಸ್ವತಃ ಆಹಾರ ತಯಾರಿಸಿಕೊಳ್ಳುವುದಲ್ಲದೇ ತೇಲುವ ಇತರೆ ಪಾಚಿಗಳು, ಚಿಕ್ಕ ಚಿಕ್ಕ ಮೊಟ್ಟೆಗಳು ಮತ್ತು ಅವುಗಳ  ಸುತ್ತಲೂ ಇರುವ ಪೋಷಕಾಂಶಯುಕ್ತ ಕಣಗಳನ್ನು ತಿನ್ನುತ್ತವೆ. ಹಾಗಾಗಿ, ಇವು ಶ್ರೇಣೀಕೃತ ಹಾಗೂ ಪೋಷಕಾಂಶಗಳ ಕೊರತೆಯಿರುವ ನೀರಿನಲ್ಲೂ ವಾಸಿಸಲು ಸಾಧ್ಯವಾಗುತ್ತದೆ. ಸಮುದ್ರಗಳಲ್ಲಿ ಸಾಮಾನ್ಯವಾಗಿ ಪೋಷಕಾಂಶಗಳ ಕೊರತೆಯಿರುವ ಬಿಸಿ ನೀರು ಮೇಲ್ಮೈಯಲ್ಲಿದ್ದು, ಪೋಷಕಾಂಶವು ಹೆಚ್ಚಿರುವ ತಣ್ಣಗಿನ ನೀರು ಆಳದಲ್ಲಿರುತ್ತದೆ. ಆದ್ದರಿಂದ ಮೇಲ್ಭಾಗದ ನೀರಿನಲ್ಲಿ ಅಧಿಕ ಪೋಷಕಾಂಶ, ಅಂದರೆ ಸಾರಜನಕ (ನೈಟ್ರೋಜನ್) ಮತ್ತು ಫಾಸ್ಫೇಟ್ಗಳು ಸಿಗದ ಕಾರಣ, ಫಯ್ಟೋಪ್ಲ್ಯಾಂಕ್ಟನ್ಗಳು ಬೆಳೆಯುವುದಿಲ್ಲ. ಆದರೆ ಇದು ಬೇರೆ ಫಯ್ಟೋಪ್ಲ್ಯಾಂಕ್ಟನ್ಗಳನ್ನು ಆಹಾರವನ್ನಾಗಿ ಸೇವಿಸುವ ಹಾಗೂ ಸಾರಜನಕ ಕಡಿಮೆಯಿರುವ ನೀರಿನಲ್ಲಿ ಬದುಕಬಲ್ಲ ನೋಕ್ಟಿಲುಕಾಗೆ ಹೇಳಿ ಮಾಡಿಸಿದಂತಹಾ ವಾತಾವರಣವಾಗಿದೆ.

‘ಮಿಕ್ಸೊಟ್ರೋಫ್’ ಅಂದರೆ ಕೆಲವೊಮ್ಮೆ ಸ್ವಪೋಷಕ ಮತ್ತು ಕೆಲವೊಮ್ಮೆ ಪರಭಕ್ಷಕವಾಗಿರುವ ನೋಕ್ಟಿಲುಕಾ ಸಿಂಟಿಲ್ಲನ್ಸ್ ಜೀವಿಗೆ ಈ ರೀತಿಯಾದ ಅಸಾಧಾರಣ ಬದಲಾವಣೆಗಳು ವಿಶೇಷವಾಗಿ ಅನುಕೂಲಕರವಾಗಿ ಒದಗಿಬಂದಿದ್ದು, ಅವು ತಮ್ಮ ವಸಾಹತು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಪ್ರಬಲ ಚಳಿಗಾಲದಲ್ಲಿ ವೃದ್ಧಿಸುವ ಜೀವಿಯಾದ ದ್ವಿಕೋಶಗಳನ್ನು (ಡಯಾಟಮ್), ಇತ್ತೀಚಿಗೆ, ಈ ನೋಕ್ಟಿಲುಕಾ ಸಿಂಟಿಲ್ಲನ್ಸ್ ಜೀವಿಯು ಹೊಗಲಾಡಿಸಿ, ತಾನು ಆ ಸ್ಥಾನ ಆಕ್ರಮಿಸಿದೆ ಎಂಬುದು ಸಂಶೋಧಕರ ಅಂಬೋಣ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕರಗುತ್ತಿರುವ ಹಿಮಾಲಯ- ಟಿಬೇಟಿನ ಹಿಮದ ಹೊದಿಕೆಯು, ಸಾಮಾನ್ಯವಾಗಿ ಚಳಿಗಾಲದಲ್ಲಿ ಅರಬ್ಬೀ ಸಮುದ್ರದಲ್ಲಿ ಬೀಸುವ ತಂಪಾದ ಈಶಾನ್ಯದ  ಗಾಳಿಯನ್ನು ಬಿಸಿ ಮಾಡಿದೆ ಮತ್ತು ಅದರ ವೇಗವನ್ನೂ ತಗ್ಗಿಸಿದೆ. ಹಿಮಾಲಯಾದಲ್ಲಿ ಕರಗುತ್ತಿರುವ ಹಿಮದ ಹೊದಿಕೆಗೂ, ಅರಬ್ಬೀ ಸಮುದ್ರದಲ್ಲಿ ೧೯೬೦ರಿಂದ ಉಂಟಾಗಿರುವ ಅಕಾರ್ಬನಿಕ ನೈಟ್ರೈಟ್ಗಳ ಇಳಿತಕ್ಕೂ ನೇರವಾದ ಸಂಬಂಧವಿದೆ ಎಂಬುದು ಈ ಅಧ್ಯಯನದ ಭಾಗವಾಗಿ ಕಂಡುಹಿಡಿಯಲಾಗಿದೆ. “ ಕಳೆದ ೪ ದಶಕಗಳಿಂದ ಅರಬ್ಬೀ ಸಮುದ್ರವು ಅಕಾರ್ಬನಿಕ ನೈಟ್ರೈಟ್ಗಳ ತೀವ್ರವಾದ ಇಳಿಕೆಯನ್ನು ಅನುಭವಿಸಿದೆ. ಎಲ್ಲಾ ಸಾಧ್ಯತೆಗಳನ್ನು ಗಮನಿಸಿದಾಗ, ಇದಕ್ಕೆ ಕಾರಣ, ಶಾಶ್ವತ ಆಮ್ಲಜನಕ-ಕನಿಷ್ಠ ವಲಯದ (Parmanent oxygen minimum zone) ವಿಸ್ತಾರಗೊಳ್ಳುವಿಕೆಯಿಂದ ಉಂಟಾದ ಅನೈಟ್ರೀಕರಣ (denitrification) ಎಂದು ಹೇಳಬಹುದು ಎನ್ನುತ್ತಾರೆ ಸಂಶೋಧಕರು.

ಮುಂಬರುವ ಅಪಾಯದ ಸೂಚಕ - ಶೈವಲ ಪದರದ ವೃದ್ಧಿ ( ಆಲ್ಗಲ್ ಬ್ಲೂಮ್ಸ್)

ಜಾಗತಿಕ ಮಟ್ಟದಲ್ಲಿ, ಸಮುದ್ರದಲ್ಲಿ ವಾಸಿಸುವ ಸ್ವಪೋಷಕ ಜೀವಿಗಳು ನೀರಿನಲ್ಲಿನ ಭೌತಿಕ ಮತ್ತು ಜೀವರಾಸಾಯನಿಕ ಬದಲಾವಣೆಗಳಿಗೆ ಹೇಗೆ ಪ್ರತಿಕ್ರಯಿಸುತ್ತವೆ ಎಂಬುದನ್ನು ತ್ವರಿತವಾಗಿ ವೃದ್ಧಿಸುವ ನೋಕ್ಟಿಲುಕಾ ಪ್ರಭೇದವು ತೋರಿಸಿದೆ. ವಾಯುಗುಣ ಬದಲಾವಣೆಯನ್ನು ಸೂಚಿಸಲು ಕರಗುತ್ತಿರುವ ಹಿಮನದಿಗಳು ಮತ್ತು ಹಿಮ ರೇಖೆಗಳು ಮಾತ್ರವೇ ಸಾಲದು. "ನನ್ನ ಪ್ರಕಾರ, ಈ ಸೂಚಕಗಳ ಜೊತೆಯಲ್ಲಿ, ನಮಗೆ ಹತ್ತಿರವೇ ಲಭ್ಯವಿರುವ ಈ ಜೈವಿಕದೀಪ್ತಿಯಿಂದ ಹೊಳೆಯುವ ಶೈವಲಗಳೂ, ವಾಯುಗುಣ ಬದಲಾವಣೆ ಸೂಚಿಸುವುದರಲ್ಲಿ ಹಿಂದಿಲ್ಲ. ಸಮುದ್ರ ತೀರದಲ್ಲಿ ಒದಗುವ ಮುನ್ಸೂಚನೆಗಳನ್ನೂ ನಾವು ತಿಳಿದುಕೊಳ್ಳಬೇಕು" ಎಂದು ದ್ವನಿಗೂಡಿಸುತ್ತಾರೆ ಮಹಿ ಮಂಕೇಶ್ವರ್ ಅವರು.
ಕಡಿಮೆ ಆಮ್ಲಜನಕದ ಪರಿಸ್ಥಿತಿಯು ಅರಬ್ಬೀ ಸಮುದ್ರದ ಶಾಶ್ವತ ಲಕ್ಷಣವಾಗುತ್ತಿದೆ. ಈ ಕಾರಣದಿಂದ, ಈ ಪರಿಸರದಲ್ಲಿ ಉತ್ತಮವಾಗಿ ಬೆಳೆಯಬಲ್ಲ ಇತರ ಪ್ರಭೇದಗಳೂ ಹೆಚ್ಚಾಗುವ ಸಾಧ್ಯತೆ ಇದೆ.  ಋತುವಿಗೆ ತಕ್ಕಂತೆ ಆಗಾಗ ಪ್ರತ್ಯಕ್ಷವಾಗುತ್ತಿದ್ದ ಜೀವಿಯಾದ ಜೆಲ್ಲಿಮೀನುಗಳು, ಈಗ ಅರಬ್ಬೀಸಮುದ್ರದ ನೀರಿನಲ್ಲಿ ನೋಕ್ಟಿಲುಕಾಗಳೊಂದಿಗೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಶೈವಲದ ತ್ವರಿತ ಹೆಚ್ಚಳವು ವಿಷಪೂರಿತವಲ್ಲದಿದ್ದರೂ, ಇದರ ಹರಡುವಿಕೆಯು ಸಮುದ್ರದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಗಲಿಬಿಲಿಗೆ ಒಡ್ಡುತ್ತದೆ. ಪಾಚಿಗಳನ್ನು ಮೇಯುವ ಜೆಲ್ಲಿಮೀನುಗಳು, ವಾಣಿಜ್ಯಿಕವಾಗಿ ಅಮೂಲ್ಯವಾದ ಮೀನುಗಳಾದ ಸಾರ್ಡೀನ್ ಮತ್ತು ಅಂಕೋವಿಸ್‌ಗಳ ಲಾರ್ವಾಗಳನ್ನು ತಿನ್ನುತ್ತವೆ ಹಾಗೂ ವಾಣಿಜ್ಯಿಕ ನಷ್ಟ ತಂದೊಡ್ಡುತ್ತವೆ ಕೂಡ.

ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ ತೀರದಲ್ಲಿ ನೋಕ್ಟಿಲುಕಾ ಹೀಗೆ ಹರಡುತ್ತದೆ [ಚಿತ್ರ ಕೃಪೆ: ಮಹಿ ಮಂಕೇಶ್ವರ]

ಅರಬ್ಬೀ ಸಮುದ್ರದಲ್ಲಿ ಈ ಪಾಚಿಯ ಹರಡುವಿಕೆಯಿಂದಾಗಿ ಸಣ್ಣದಾಗಿ ಮೀನುಗಾರಿಕೆ ಮಾಡುವ ಮೀನುಗಾರರ ಜೀವನೋಪಾಯಕ್ಕೆ ಕಲ್ಲುಬಿದ್ದಿದೆ. ಕಡಲ ತೀರದ ಗಾಳಗಳು ಮತ್ತು ಗಿಲ್ ನೆಟ್ಟರ್ಗಳು ದೊಡ್ಡ ಪ್ರಮಾಣದಲ್ಲಿ ಜೆಲ್ಲಿ ಮೀನುಗಳನ್ನು ಹಿಡಿಯುತ್ತವೆ ಎಂಬುದೇನೋ ನಿಜ; ಆದರೆ ಈ ಜೆಲ್ಲಿಮೀನುಗಳಿಗೆ ಯಾವುದೇ ಮರುಕಟ್ಟೆ ಮೌಲ್ಯವಿಲ್ಲ ಎಂಬುದು ಕಹಿಸತ್ಯ.

"ಭಾರತೀಯ ಜಲಪಾತ್ರಗಳ ಬಗೆಗಿನ ನಮ್ಮ ಅಧ್ಯಯನಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ. ಆದರೆ ದೀರ್ಘಾವಧಿಯಲ್ಲಿ ಗಮನಿಸಿದರೆ, ಈ ಪಾಚಿಗಳು ಇತರೆ ವಾಣಿಜ್ಯಿಕವಾಗಿ ಪ್ರಮುಖವಾದ ಕೆಲವು ಪ್ರಭೇದಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು" ಎನ್ನುತ್ತಾರೆ ಮಹಿ ಮಂಕೇಶ್ವರ.

ಆದಾಗ್ಯೂ, ಈ ಸನ್ನಿವೇಶಕ್ಕೆ ತಕ್ಕಂತಹ ಒಂದು ಒಳ್ಳೆಯ ಸುದ್ದಿಯೂ ಇಲ್ಲಿದೆ. ಆಮ್ಲಜನಕದ ಮಟ್ಟ ಕಡಿಮೆಯಾಗುವುದರಿಂದ ಮೀನಿನ ಮರಣವು ಹೆಚ್ಚಾಗುತ್ತದೆ, ಇದರ ಫಲಿತಾಂಶವಾಗಿ, ಸಾಮೂಹಿಕವಾಗಿ ಮೀನುಗಳು ಸಾಯುತ್ತವೆ. ಈ ಘಟನೆಗಳು ಸ್ಥಳೀಯ ಮೀನುಗಾರರಿಗೆ ಅಲ್ಪಾವಧಿಗಾದರೂ ಸರಿ, ಆರ್ಥಿಕ ಲಾಭವನ್ನು ತಂದುಕೊಡುತ್ತವೆ; ಇದು ಹೇಗೆಂದರೆ, ಅಂತಹ ಮೀನಿನ ಸಾಮೂಹಿಕ ಮರಣದ ಸಮಯದಲ್ಲಿ, ಮೀನುಗಾರರ ಬಲೆಯಲ್ಲಿ ಭಾರೀ ಮೀನುಗಳ ರಾಶಿ ಬೀಳುತ್ತವೆಯಂತೆ!

ವಾಯುಗುಣ ಬದಲಾವಣೆಯು ಬಾರಿಸಿದ ಎಚ್ಚರಿಕೆಯ ಘಂಟೆಯನ್ನು ಗಮನಿಸದೆಯೇ ನಾವು ಮುಂದುವರೆದಿದ್ದೇವೆ ಎನ್ನುತ್ತದೆ ಈ ಅಧ್ಯಯನ. ಈಗ, ಹವಾಮಾನದ ಏರಿಳಿತದ ಮುಂದುವರೆದ ಭಾಗವಾಗಿ, ಅದರ ದುಷ್ಪರಿಣಾಮವನ್ನು ನಾವು ಸಮುದ್ರದಲ್ಲಿನ ವ್ಯೆವಿಧ್ಯಮಯ ಜೀವಿಗಳ ಮೇಲೂ ಕಾಣಬಹುದಾಗಿದೆ. ಇದನ್ನು ನಾವು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಹೆಚ್ಚಿನ ದತ್ತಾಂಶ ಬೇಕಾಗುತ್ತದೆ. 

"ಜೈವಿಕದೀಪ್ತಿಯಿಂದ ಹೊಳೆಯುವ ಈ ಶೈವಲಗಳು ಅಥವಾ ಪಾಚಿಗಳ ಜೈವಿಕ ದೀಪ್ತಶೀಲತೆಯ ಸ್ವಭಾವ, ಭಾರತೀಯ ಕಡಲ ತೀರಗಳ ಉದ್ದಕ್ಕೂ ಅವುಗಳ ಹರಡುವಿಕೆ - ಇವೇ ಮುಂತಾದ ವಿಷಯಗಳ ಬಗೆಗಿನ ಮಾಹಿತಿಯು ಪ್ರಸ್ತುತವಾಗಿ ಅಸಮರ್ಪಕವಾಗಿದೆ. ಅವುಗಳ ಕಾಲೋಚಿತ ಪ್ರವೃತ್ತಿಯನ್ನು ಸ್ಥಾಪಿಸಲು ಈ ಮಾಹಿತಿಯು ಅವಶ್ಯವಾದದು. ‘ಸಿಟಿಜ಼ನ್ ಸೈನ್ಸ್’ ಅಂದರೆ ವಿಜ್ಞಾನವನ್ನು ಸಾಮಾನ್ಯ ನಾಗರಿಕರಲ್ಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಮುಂದಾಳುಗಳು ಈ ವಿದ್ಯಮಾನಗಳ ಬಗ್ಗೆ ಸುವ್ಯವಸ್ಥಿತವಾಗಿ  ಮಾಹಿತಿ ಸಂಗ್ರಹಿಸಿದಲ್ಲಿ, ಈ ಪಾಚಿಗಳ ಹರಡುವಿಕೆಯ ಮಾರ್ಗವನ್ನು ಮೇಲ್ವಿಚಾರಣೆ ಮಾಡಲು ಸಹಾಯಕವೆನಿಸುತ್ತದೆ" ಎಂದು ವಿಜ್ಞಾನಾಸಕ್ತರನ್ನು ಪ್ರೇರೇಪಿಸುತ್ತಾರೆ ಮಹಿ ಅವರು.

Kannada