ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಬೆಂಗಳೂರಿನ ಉದ್ಯಾನವನಗಳಲ್ಲಿ ಹಕ್ಕಿ ಚಿಟ್ಟೆಗಳ ಕಲರವ!

ಬೆಂಗಳೂರು
21 Aug 2019
ಬೆಂಗಳೂರಿನ ಉದ್ಯಾನವನಗಳಲ್ಲಿ ಹಕ್ಕಿ ಚಿಟ್ಟೆಗಳ ಕಲರವ!

 

ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದೇ ಪ್ರಸಿದ್ಧಿ ಪಡೆದ ಬೆಂಗಳೂರು ಈಗ ಗಚ್ಚುಗಾರೆಯ ಅಡವಿಯಾಗಿರುವುದರ ಬಗ್ಗೆ ನಾವು ಆಶ್ಚರ್ಯ ಪಡಬೇಕಾಗಿಲ್ಲ. ಬೆಂಗಳೂರಿನ ಇಂದಿನ ಸ್ಥಿತಿ ನಗರದ ಜೀವವೈವಿಧ್ಯತೆಯ ಬಗ್ಗೆ ಒಂದು ಸೊಮ್ಮುಕೆಟ್ಟ ದೃಶ್ಯವನ್ನು ನಮ್ಮ ಮುಂದೆ ಚಿತ್ರಿಸುತ್ತದೆ. ಛಾವಣಿ ಮೇಲೆ ಗುಬ್ಬಿಗಳು ಗೂಡು ಕಟ್ಟುವುದು, ರಸವತ್ತಾದ ಹಣ್ಣುಗಳೊಂದಿಗೆ ತಮ್ಮ ಕೆಂಪಾದ ಮೂಗನ್ನು ಉಜ್ಜುವ ಗಿಳಿಗಳ ದೃಶ್ಯ ಅಥವಾ ನಮ್ಮ ಮನೆಗಳಲ್ಲಿನ ಚಿಕ್ಕ ಉದ್ಯಾನವನಗಳಲ್ಲಿ ಚಿಟ್ಟೆಗಳನ್ನು ಅತ್ತಿತ್ತ ಹಾರುವ ದೃಶ್ಯಗಳು ಇತ್ತೀಚಿಗೆ ಹೆಚ್ಚಾಗಿ ನಮ್ಮ ಕಲ್ಪನೆಗಳಲ್ಲಿ ಮಾತ್ರ ರಾರಾಜಿಸುತ್ತವೆ. ಆದರೆ, ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ಇಕಾಲಜಿ ಅಂಡ್ ಎಂವೈರ್ನಮೆಂಟ್ ನ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಬೆಂಗಳೂರಿನ ಉದ್ಯಾನವನಗಳೇ ನಗರದ ಹಕ್ಕಿ ಚಿಟ್ಟೆಗಳಿಗೆ ಸುರಕ್ಷಿತವಾದ ಆಶ್ರಯ ಸ್ಥಾನಗಳಾಗುತ್ತಿವೆ!

ಅಂತರರಾಷ್ಟ್ರೀಯ ಪತ್ರಿಕೆಯಾದ ಪ್ಲಾಸ್ ಒನ್ ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಬೆಂಗಳೂರಿನಾದ್ಯಂತ ವಾಣಿಜ್ಯ ಹಾಗೂ ಜನವಸತಿ ಪ್ರದೇಶಗಳನ್ನು ಒಳಗೊಂಡಿರುವ ಸುಮಾರು 37 ಹಸಿರು ಉದ್ಯಾನವನಗಳ ಜೀವವೈವಿಧ್ಯತೆಯನ್ನು ಅಧ್ಯಯನ ಮಾಡಲಾಯಿತು. ಈ ಉದ್ಯಾನವನಗಳಲ್ಲಿ ಚಿಟ್ಟೆಗಳು, ಹುಳಗಳು, ಪಕ್ಷಿಗಳು ಹಾಗೂ ಗಿಡಮರಗಳನ್ನು ಪರಿಗಣಿಸಲಾಯಿತು.ಈ ಅಧ್ಯಯನದಲ್ಲಿ ಒಟ್ಟು 55 ಮರದ ಪ್ರಭೇದಗಳು, 45 ಪಕ್ಷಿಗಳ ಪ್ರಭೇದಗಳು, 41 ಚಿಟ್ಟೆಗಳ ಪ್ರಭೇದಗಳು ಮತ್ತು 68 ಹುಳಗಳ ಪ್ರಭೇದವನ್ನು ಗುರುತಿಸಲಾಗಿದೆ.

“ನಗರಗಳಲ್ಲಿನ ಹಸಿರು ಉದ್ಯಾನವನಗಳ ಮಹತ್ವದ ಮೇಲೆ ಬೆಳಕು ಚೆಲ್ಲುವುದು ನಮ್ಮ ಈ ಸಂಶೋಧನೆಯ ಮುಖ್ಯ ಉದ್ದೇಶ. ನಗರಗಳ ಕ್ಷಿಪ್ರಗತಿಯ ಬೆಳವಣಿಗೆಯಿಂದಾಗಿ ಈ ಉದ್ಯಾನವನಗಳನ್ನು ಮತ್ತವುಗಳ ಮಹತ್ವವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ” ಎಂದು ಉದ್ಯಾನವನಗಳ ಮಹತ್ವದ ಕುರಿತು ಈ ಅಧ್ಯಯನದ ಪ್ರಮುಖ ಲೇಖಕರಾದ ಡಾ. ಸವಿತಾ ಸ್ವಾಮಿ ವಿವರಿಸುತ್ತಾರೆ. ನಗರಾಡಳಿತ ಯೋಜನೆಗಳನ್ನು ರೂಪಿಸುವ ಮುನ್ನ ಇಂತಹ ಹಸಿರೋದ್ಯಾನಗಳ ಪ್ರಚಲಿತ ಸ್ಥಿತಿ ಹಾಗೂ ಅದರ ಜೀವವೈವಿಧ್ಯತೆಯನ್ನು ಅರ್ಥೈಸಿಕೊಳ್ಳುವುದು ಅತ್ಯವಶ್ಯಕ ಎಂದು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಸಂಶೋಧಕರು ಬೆಂಗಳೂರಿನ ಹಸಿರು ತಾಣಗಳಲ್ಲಿ “ಬಯೋಡೈವರ್ಸಿಟಿ ಫಾಂಡ್ನೆಸ್ ಸರ್ವೇ” (ಜೀವವೈವಿಧ್ಯತೆ ಒಲವು ಸಮೀಕ್ಷೆ) ಯನ್ನು ನಡೆಸಿದರು. ಹಾಗೆಯೇ, ಈ ಉದ್ಯಾನವನಗಳಲ್ಲಿ ಪ್ರಭೇದಗಳ ಸಮೃದ್ಧಿ ಹಾಗೂ ಶ್ರೀಮಂತಿಕೆಯನ್ನು ಅಧ್ಯಯನ ಮಾಡಿದರು. ನೆಲಗಾಣ್ಕೆಯ ವೈಶಿಷ್ಟ್ಯಗಳಾದ ಮೇಲಾವರಣ, ಪೊದೆಗಳ ಆವರಣ, ಮತ್ತು ಹಲವು ಇರುನೆಲೆ ವೈಶಿಷ್ಟ್ಯಗಳನ್ನೂ ಪರಿಗಣಿಸಲಾಯಿತು.

ಅಧ್ಯಯನದ ಫಲಿತಾಂಶಗಳ ಪ್ರಕಾರ, ಮಧ್ಯಮ (1000-5000 ಚ. ಮೀ)  ಹಾಗೂ ಚಿಕ್ಕ ಉದ್ಯಾನವನ (300-1000 ಚ. ಮೀ) ಗಳಿಗಿಂತಲೂ ದೊಡ್ಡ ಉದ್ಯಾನವನಗಳಲ್ಲಿ (5000 ಚ. ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿ ಇರುವ ಉದ್ಯಾನವನಗಳಲ್ಲಿ) ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು, ಚಿಟ್ಟೆಗಳು ಹಾಗೂ ಹುಳಗಳ ಪ್ರಭೇದಗಳು ಕಂಡುಬಂದಿವೆ. ಮರ ಪ್ರಭೇದಗಳಾದ ಸಿಲ್ವರ್ ಓಕ್ (ಗ್ರಿವೆಲ್ಲಿಯ ರೊಬಸ್ಟಾ), ಫಾಲ್ಸ್ (ತೋರಿಕೆ) ಅಶೋಕ ಮರ (ಪಾಲಿಆಲ್ತೀಯ ಲಾಂಜಿಫಾಲಿಯ), ಬಹೂನಿಯಾಗಳು ಇತ್ಯಾದಿ, ಪೊದೆ ಪ್ರಭೇದಗಳಾದ ಗೋಲ್ಡನ್ ಡ್ಯೂಡ್ರಾಪ್ (ದುರಂತ), ಕ್ರೋಟಾನ್ ಮತ್ತು ಫೈರ್ಬುಷ್ (ಹಮೆಲಿಯಾ ಪಟೆನ್ಸ್) ಮೊದಲಾದ ಸಾಮಾನ್ಯ ಪ್ರಭೇದಗಳನ್ನು ದಾಖಲಿಸಲಾಯಿತು. ಉದ್ಯಾನವನದಿಂದ ಉದ್ಯಾನವನಕ್ಕೆ ಹಾರುವಂತಹ ಬೆಂಗಳೂರಿಗೆ ವಲಸೆ ಬರುವ ಬ್ಲೀತ್ ಲೀಫ್ ವಾರ್ಬ್ಲರ್ ಮತ್ತು ಗ್ರೀನಿಷ್ ಲೀಫ್ ವಾರ್ಬ್ಲರ್ ಗಳನ್ನೂ ದಾಖಲಿಸಲಾಯಿತು.

ಈ ಸಮೀಕ್ಷೆಯ ಮುಖೇನ ಜನರಿಗೆ ಪಕ್ಷಿ ಹಾಗೂ ಚಿಟ್ಟೆಗಳ ಮೇಲೆ ಹೆಚ್ಚು ಒಲವಿರುವುದು ಕಂಡುಬಂದಿತು. ಹುಳ ಪ್ರಭೇದಗಳ ಮೇಲೆ ಒಂದು ರೀತಿಯ ಭಯ - ಹೇಸಿಕೆಯ ಭಾವನೆಗಳನ್ನು ವ್ಯಕ್ತಪಡಿಸುವುದು ಕಂಡುಬಂದಿತು. ಮನೆ ಉದ್ಯಾನವನಗಳನ್ನು ನಿರ್ವಹಿಸುವ ಅಭ್ಯಾಸ ಒಂದು ಕಡೆಯಾದರೆ, ಹಿತ್ತಲಿನ ಅಂಗಳ ಜೀವವೈವಿಧ್ಯತೆಯೊಂದಿಗಿನ ಪರಸ್ಪರ ಸಂವಹನ ಕಡಿಮೆಯಾಗುತ್ತಾ ಬಂದಿದೆ. ಆದ್ದರಿಂದಲೇ, ಹುಳಗಳ ಮತ್ತು ಕೀಟಗಳ ಮೇಲಿನ ಒಲವು ಕಡಿಮೆಯಾಗಿದೆ ಎಂದು ಸಮೀಕ್ಷೆ ಸೂಚಿಸುತ್ತದೆ.

ಈ ಅಧ್ಯಯನ, ದಟ್ಟವಾದ ಮೇಲಾವರಣ ಹಕ್ಕಿಗಳನ್ನು,  ಚಿಟ್ಟೆಗಳನ್ನು  ಹಾಗೂ ಹುಳಗಳನ್ನು ಆಕರ್ಷಿಸುತ್ತದೆ ಎಂದು ಸೂಚಿಸಿತ್ತದೆ. ಹಕ್ಕಿಗಳನ್ನು ಹಾಗೂ ಚಿಟ್ಟೆಗಳನ್ನು ಮೇಲಾವರಣ ಆಕರ್ಷಿಸಿದರೆ ಹುಲ್ಲು ಹಾಸು ಕೀಟಗಳನ್ನು ಹಾಗೂ ಹುಳಗಳನ್ನು ಆಕರ್ಷಿಸುತ್ತದೆ ಎಂದು ಈ ಅಧ್ಯಯನ ಸೂಚಿಸುತ್ತದೆ.

ಕೆಲವೆಡೆ, ಪರದೇಶದ ಮರ ಪ್ರಭೇದಗಳು ನಮ್ಮ ಸ್ವಂತದ ಮರ ಪ್ರಭೇದಗಳ ಉಳಿವಿಗೆ ಮಾರಕವಾಗಬಹುದು. ಆದರೆ, ಈ ಅಧ್ಯಯನದ ಫಲಿತಾಂಶಗಳ ಪ್ರಕಾರ, ಮರಗಳ ಸ್ವದೇಶದ ಪ್ರಭೇದಗಳು ಹಾಗೂ ಪರದೇಶದ ಪ್ರಭೇದಗಳೂ ಎರಡೂ ಪರಸ್ಪರ ಹೊಂದಾಣಿಕೆಯಲ್ಲಿ ಬಾಳುತ್ತಿರುವುದು ಹಾಗೂ ಅಭಿವೃದ್ಧಿ ಹೊಂದುತ್ತಿರುವುದು ಕಂಡುಬಂದಿದೆ. ಹಾಗೆಯೇ,  ಪ್ರಭೇದಗಳ ಈ ಮಿಶ್ರಣ ಬೆಂಗಳೂರಿನ ಜೀವವೈವಿಧ್ಯತೆಯನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ.

ಆದಾಗಿಯೂ, ಜನತೆಯ ದೃಷ್ಟಿಕೋನದಲ್ಲಿ ಉದ್ಯಾನವನಗಳ ಕುರಿತು ಬೇರೆ ಬೇರೆ ಆಯಾಮಗಳಿವೆ. “ಕೆಲವರಿಗೆ, ತಾವು ಹಿಂದೆ ಕಂಡಂತಹ ಜೀವವೈವಿಧ್ಯತೆಯನ್ನು ಇಂದು ನೋಡುವ ಅವಕಾಶ ಇಲ್ಲದಿದ್ದರೂ, ತಮ್ಮ ಚಟುವಟಿಕೆಗಳಿಗೆ ಬೇಕಾಗುವ ಹಾಗೆ ಉದ್ಯಾನವನಗಳನ್ನು, ಜೀವವೈವಿಧ್ಯತೆಯನ್ನು ಬೆಂಬಲಿಸುವ ಮರಗಳು ಮತ್ತು ಪೊದೆಗಳೊಂದಿಗೆ ಮರುವಿನ್ಯಾಸಗೊಳಿಸಬಯಸುತ್ತಾರೆ. ಆದರೆ, ಸಂರಕ್ಷಣಾ ತಜ್ಞರು ಉದ್ಯಾನವನಗಳನ್ನು ಮೇಲಾವರಣ ವ್ಯಾಪ್ತಿಯ ದೃಷ್ಟಿಕೋನದಿಂದ ನೋಡುತ್ತಾರೆ. ಉದ್ಯಾನವನಾಭಿವೃದ್ಧಿ ಅಧಿಕಾರಿಗಳು ಈ ಉದ್ಯಾನವನಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಜವಾಬ್ದಾರಿ ಹೊತ್ತರೂ ಅವರು ಉದ್ಯಾನವನಗಳ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಬೆಂಗಳೂರಿನ ‘ಉದ್ಯಾನ ನಗರಿ’ ಸ್ವರೂಪವನ್ನು ಉಳಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಬೆಂಗಳೂರಿನ ಜೀವವೈವಿಧ್ಯತೆಯನ್ನು ಆಕರ್ಷಿಸುವ ಇರುನೆಲೆ ವೈಶಿಷ್ಟ್ಯಗಳನ್ನು ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ” ಎಂದು ಡಾ. ಸವಿತಾ ಸ್ವಾಮಿ ಅಭಿಪ್ರಾಯ ಪಡುತ್ತಾರೆ.

ನಾಗರೀಕರ ಸಹಭಾಗಿತ್ವದಲ್ಲಿ ಮತ್ತು ಜೀವವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರಿಯಾದ ನಿರ್ವಹಣಾ ಕಾರ್ಯಕ್ರಮವನ್ನು ರೂಪಿಸುವುದು ಅವಶ್ಯಕ ಎಂದು ಈ ಅಧ್ಯಯನ ಸೂಚಿಸುತ್ತದೆ. “ಉದ್ಯಾನವನಗಳನ್ನು ಮರುವಿನ್ಯಾಸಗೊಳಿಸುವುದರಿಂದ ನಗರದ ಪುರಸಭೆಯು ನಾಗರೀಕರಿಗೆ ಮತ್ತು ನಗರವಾಸಿ ಜೀವರಾಶಿಗಳಿಗೆ (ಪ್ರಾಣಿಗಳು, ಪಕ್ಷಿಗಳು, ಚಿಟ್ಟೆಗಳು ಇತ್ಯಾದಿ) ಉಪಯೋಗ ಆಗುವ ಹಾಗೆ ಸಹಾಯ ಮಾಡಬಹುದು” ಎಂದು ಡಾ. ಸವಿತಾ ನುಡಿಯುತ್ತಾರೆ.

ನಗರಗಳಲ್ಲಿ ಸೀಮಿತವಾದರೂ, ಉದ್ಯಾನವನಗಳು ಜೀವವೈವಿಧ್ಯತೆಯನ್ನು ಉಳಿಸುವ ಮತ್ತು ಆಕರ್ಶಿಸುವ ಕಾರ್ಯ ನಿರ್ವಹಿಸುತ್ತಿವೆ ಎಂದು ಈ ಸಂಶೋಧನೆ ದೃಢಪಡಿಸುತ್ತದೆ. “ಓಣಿಯ ಕಲ್ಪನೆಯೊಂದಿಗೆ ಅಸ್ತಿತ್ವದಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಉದ್ಯಾನವನಗಳನ್ನು ಮರುವಿನ್ಯಾಸಗೊಳಿಸುವುದು ಮತ್ತು ಹೊಸ ಜನವಸತಿ ಪ್ರದೇಶಗಳನ್ನು ನಿರ್ಮಿಸುವಾಗ ಹೆಚ್ಚಾದ ಹಸಿರು ತಾಣಗಳನ್ನು ನಿರ್ಮಿಸುವ ಅವಶ್ಯಕತೆ ಮೇಲೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ.” ಎಂದು ಡಾ. ಸವಿತಾ ಸ್ವಾಮಿ ತಮ್ಮ  ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

 

Kannada