ಬ್ಯಾಕ್ಟೀರಿಯಾದಿಂದ ಉಂಟಾಗುವ ಪ್ರತಿಜೀವಕ ನಿರೋಧಕತೆಯ ಬಗ್ಗೆ ಮೂರು ಭಾಗಗಳಲ್ಲಿ ಮೂಡಲಿದೆ. ಮೊದಲ ಭಾಗದಲ್ಲಿ ಅದರ ಕಾರಣಗಳು, ಪ್ರತಿಜೀವಕ ನಿರೋಧಕತೆಯಿಂದ ಉಂಟಾಗುವ ತೊಂದರೆಗಳು ಹಾಗು ಭಾರತದಲ್ಲಿ ಈ ಸಮಸ್ಯೆಯ ತೀವ್ರತೆಯ ಬಗ್ಗೆ ತಿಳಿಯಬಹುದು.
೨೦೦೮ರಲ್ಲಿ, ಒಬ್ಬ ವ್ಯಕ್ತಿಯು ಮೂತ್ರಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದನು; ಈ ಮೂತ್ರಕೋಶದ ಸೋಂಕು ಎಂಬುದು ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯುವ ಸಂವೇದನೆಗೆ ಕಾರಣವಾಗುವ ಬ್ಯಾಕ್ಟೀರಿಯಾದಿಂದ ಉಂಟಾದ ಸಾಮಾನ್ಯ ಸಮಸ್ಯೆ. ಸಾಮಾನ್ಯವಾಗಿ, ಒಂದು ಸುತ್ತು ಪ್ರತಿಜೀವಕಗಳು, ರೋಗಿಯನ್ನು ಈ ಸಮಸ್ಯೆಯಿಂದ ಮುಕ್ತವಾಗಿಸಬೇಕು. ಆದರೆ ಈ ಪ್ರಕರಣದಲ್ಲಿ ಗಮನಾರ್ಹ ಎನಿಸಿದ್ದು ಏನೆಂದರೆ, ಈಗ ಅಸ್ತಿತ್ವದಲ್ಲಿರುವ ಬೃಹತ್ ವ್ಯಾಪ್ತಿಯ ಪ್ರತಿಜೀವಕಗಳೊಂದಿಗೆ ಚಿಕಿತ್ಸೆ ನೀಡುತ್ತಿದ್ದರೂ ಸಹ, ಸೋಂಕು ಹಾಗೇ ಉಳಿದುಕೊಂಡಿತ್ತು! ಆಶ್ಚರ್ಯಚಕಿತರಾದ ವೈದ್ಯರು, ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕೂಲಂಕುಶವಾಗಿ ಪರೀಕ್ಷಿಸಿದರು.
ಹೀಗೆ ಪರೀಕ್ಷಿಸಲಾದ ಬ್ಯಾಕ್ಟೀರಿಯಾದಲ್ಲಿ ಒಂದು ಹೊಸ ಜೀನ್ ಇರುವುದನ್ನು ಅವರು ಕಂಡುಕೊಂಡರು; ಈ ಜೀನ್ ಇರುವ ಕಾರಣದಿಂದ, ಪ್ರತಿಜೀವಕಗಳನ್ನು ಮೆಟ್ಟಿ ನಿಲ್ಲಲು ಆ ಬ್ಯಾಕ್ಟೀರಿಯಾಗೆ ಸಾಧ್ಯವಾಯಿತು. ಇಂತಹಾ ರೋಗಾಣುಗಳಿಗೆ 'ಸೂಪರ್ ಬಗ್' ಎಂಬ ಹೆಸರಿದೆ. ಈ 'ಸೂಪರ್ ಬಗ್'ಗಳು ಪ್ರತಿಜೀವಕಗಳ ಪರಿಣಾಮಗಳಿಗೆ ಪ್ರತಿರೋಧಕ ಗುಣವನ್ನು ಬೆಳೆಸಿಕೊಂಡುಬಿಡುತ್ತವೆ. ಹಾಗಾಗಿ, ಅವುಗಳನ್ನು ಹಲವಾರು ಬಗೆಯ ಪ್ರತಿಜೀವಕಗಳ ಬಳಕೆಯಿಂದಲೂ ನಾಶ ಮಾಡಲು ಆಗುವುದಿಲ್ಲ. ಪ್ರತಿ ವರ್ಷ ಸುಮಾರು ೨ ದಶಲಕ್ಷ ಜನರು ಇಂತಹ 'ಸೂಪರ್ ಬಗ್' ಸೋಂಕುಗಳಿಗೆ ಒಳಪಟ್ಟು, ಅವರಲ್ಲಿ ಸುಮಾರು ೨೩,೦೦೦ ಜನರು ತಮ್ಮ ಪ್ರಾಣವನ್ನೇ ತೆತ್ತಬೇಕಾಗಿ ಬಂದಿದೆ ಎನ್ನುತ್ತದೆ ಅಮೆರಿಕಾದ 'ರೋಗ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕೇಂದ್ರ'ದ ದತ್ತಾಂಶ.
ಈ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದಲ್ಲಿ ಇರುವ ಆ ನಿರೋಧಕ ಜೀನನ್ನು 'ನ್ಯೂ ಡೆಲ್ಲಿ-ಮೆಟಾಲೋ-ಬೀಟಾ-ಲ್ಯಾಕ್ಟಮಾಸ್' ಎಂದು ಹೆಸರಿಸಲಾಯಿತು; ಇದಕ್ಕೆ ಕಾರಣ, ಆ ಸ್ವೀಡಿಷ್ ವ್ಯಕ್ತಿ ನವದೆಹಲಿಗೆ ಭೇಟಿ ನೀಡಿದ ನಂತರವೇ ಆತನಿಗೆ ಈ ಸೋಂಕು ಕಾಡಿದ್ದು; ಆ ಪ್ರಕರಣದ ನಂತರ, ದೇಶಾದ್ಯಂತ ಅನೇಕ ಸೋಂಕುಕಾರಕ ಬ್ಯಾಕ್ಟೀರಿಯಾದಲ್ಲಿ ಎನ್.ಡಿ.ಎಂ-೧ ಎಂಬ ಈ ಜೀನನ್ನು ಗುರುತಿಸಲಾಗಿದೆ; ಈ ಜೀನ್ ನ ಕಾರಣದಿಂದ ಅನೇಕ ಪ್ರಬಲ ಮತ್ತು ಪ್ರಸಿದ್ಧವಾದ ಪ್ರತಿಜೀವಕಗಳು ಅಪ್ರಯೋಜಕಗಳೆನಿಸಿವೆ.
ಪ್ರತಿಜೀವಕಗಳು - ಎರಡು ಅಲಗಿನ ಬಾಕು
ಕಳೆದ ಶತಮಾನದಿಂದ, ಬ್ಯಾಕ್ಟೀರಿಯಾದ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚುತ್ತಿರುವ ಕಾರಣದಿಂದ, ಅವುಗಳ ವಿರುದ್ಧವಾಗಿ ಹೆಚ್ಚು ಪರಿಣಾಮಕಾರಿಯಾದ ಔಷಧಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಯಿತು. 'ಪ್ರತಿಜೀವಕ - ಪೂರ್ವ' ಯುಗದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಟೈಫಾಯಿಡ್, ಕ್ಷಯ, ಕಾಲರಾ, ಮತ್ತು ನ್ಯುಮೋನಿಯಂತಹ ಬ್ಯಾಕ್ಟೀರಿಯಾದ ಸೋಂಕುಗಳನ್ನು, ಇಂದು, ಪ್ರತಿಜೀವಕಗಳ ಮೂಲಕ ಪರಿಣಾಮಕಾರಿಯಾಗಿ ಗುಣಪಡಿಸಬಹುದಾಗಿದೆ. ಇದರ ಪರಿಣಾಮವಾಗಿ, ಪ್ರತಿಜೀವಕದ ಬಳಕೆಯಿರುವ ಈ ಯುಗದಲ್ಲಿ ಜನಿಸಿದ ವ್ಯಕ್ತಿಯ ಸರಾಸರಿ ಜೀವಿತಾವಧಿ ೭೧ ವರ್ಷಗಳು; ೧೯೫೦ರ ದಶಕಕ್ಕೂ ಮುಂಚೆ ಜನಿಸಿದ ವ್ಯಕ್ತಿಯ ಸರಾಸರಿ ಜೀವಿತಾವಧಿಯು ಕೇವಲ ೪೭ ವರ್ಷಗಳಿದ್ದು, ಇದಕ್ಕೆ ಹೋಲಿಸಿದರೆ, ೫೦% ನಷ್ಟು ಜೀವಿತಾವಧಿಯಲ್ಲಿನ ಹೆಚ್ಚಳವು ದಿಗ್ಭ್ರಮೆಯುಂಟುಮಾಡುತ್ತದೆ; ಇದಕ್ಕೆ ಕಾರಣವಾದ 'ಪ್ರತಿಜೀವಕ'ಗಳೆಂದು ಕರೆಯಲ್ಪಡುವ ಪವಾಡಕ್ಕೆ ಧನ್ಯವಾದಗಳನ್ನು ಹೇಳಲೇಬೇಕು.
ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ಅವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ 'ಪೆನಿಸಿಲಿನ್'ನ ಸಂಶೋಧನೆಯು 'ಪ್ರತಿಜೀವಕಗಳ ಯುಗದ' ಆರಂಭವನ್ನು ಘೋಷಿಸಿತು. ಅಂದಿನಿಂದ, ನಾವು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುವ ರೋಗಗಳ ಬೃಹತ್ ಶ್ರೇಣಿಯನ್ನು ಸುಲಭವಾಗಿ ಗುಣಪಡಿಸುವ ಸುಮಾರು ೧೦೦ ವಿಭಿನ್ನ ಪ್ರತಿಜೀವಕಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಪ್ರತಿಜೀವಕಗಳು ಸುಲಭವಾಗಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರಣದಿಂದ ಸರ್ವತ್ರವಾಗಿ ಮತ್ತು ವ್ಯಾಪಕವಾಗಿ ಬಳಕೆಯಾಗುತ್ತಿದ್ದು ಅದ್ಭುತ ಪರಿಣಾಮಕಾರಿತ್ವವನ್ನೂ ಹೊಂದಿವೆ.
ಕೇವಲ ಮಾನವನನ್ನು ಕಾಡುವ ಕಾಯಿಲೆಗಳನ್ನು ನಿವಾರಿಸಲು ಮಾತ್ರ ಪ್ರತಿಜೀವಕಗಳನ್ನು ಬಳಸುವುದಷ್ಟೇ ಅಲ್ಲ; ಹಸು, ಎಮ್ಮೆ, ಕೋಳಿ, ಹಂದಿ ಮತ್ತು ಮೀನುಗಳಂತಹ ಇತರ ಪ್ರಾಣಿಗಳಲ್ಲೂ ಸಹ ನಿಯಮಿತವಾಗಿ ರೋಗಗಳ ವಿರುದ್ಧ ಹೋರಾಡಲು ಅಥವಾ ಅವುಗಳನ್ನು ತಡೆಯಲು, ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದು ಇಳುವರಿಯನ್ನು ಸುಧಾರಿಸಲು ಮತ್ತು ನಮ್ಮ ಪ್ರಾಣಿಗಳನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ; ಆದರೆ ಈ ಪ್ರತಿಜೀವಕಗಳು ಆಹಾರ ಸರಪಳಿಯ ಭಾಗವಾಗಿ ಪ್ರಾಣಿಜನ್ಯ ಉತ್ಪನ್ನಗಳ ಮೂಲಕ ನಮ್ಮ ದೇಹಗಳನ್ನು ಪ್ರವೇಶಿಸುತ್ತವೆ.
ಪ್ರತಿಜೀವಕಗಳ ಬಳಕೆಗೆ ಅಥವಾ ದುರ್ಬಳಕೆಗೆ ಮತ್ತೊಂದು ದುರಂತದ ಉಪಕಥೆ ಇದೆ. ಎಲ್ಲಾ ವಿಧದ ಪ್ರತಿಜೀವಕಗಳಿಗೆ ಹೆಚ್ಚು ಹೆಚ್ಚು ಬ್ಯಾಕ್ಟೀರಿಯಾಗಳು ನಿರೋಧಕವಾಗುತ್ತಿರುವುದರಿಂದ, ರೋಗ ಗುಣಪಡಿಸುವ ದಕ್ಷತೆಯು ಕಡಿಮೆಯಾಗುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ಯಾಕ್ಟೀರಿಯಾಗಳು ಪ್ರಬಲವಾಗುತ್ತಿವೆ ಮತ್ತು ಪ್ರತಿಜೀವಕಗಳು ಸೋಲೊಪ್ಪಿಕೊಳ್ಳಲು ಪ್ರಾರಂಭಿಸಿವೆ. ಆದರೆ ಒಮ್ಮೆ ಅವುಗಳನ್ನು ಕೊಲ್ಲಲು ಬಳಸಿದ ಔಷಧಿಗಳಿಗೇ ಈ ಬ್ಯಾಕ್ಟೀರಿಯಾಗಳು ಹೇಗೆ ಪ್ರತಿರೋಧವನ್ನು ಉಂಟುಮಾಡುತ್ತಿವೆ? ಇದಕ್ಕೆ ಉತ್ತರವು ಜೀವ ವಿಕಾಸದಲ್ಲಿದೆ.
'ಬಗ್' ನಿಂದ 'ಸೂಪರ್ ಬಗ್' ವಿಕಸನ
ಸಾಮಾನ್ಯ ರೋಗಾಣುವನ್ನು ಆಂಗ್ಲ ಆಡುಭಾಷೆಯಲ್ಲಿ 'ಬಗ್' ಎಂದೂ, ಪ್ರತಿಜೀವಕ ನಿರೋಧಕ ರೋಗಾಣುವನ್ನು 'ಸೂಪರ್ ಬಗ್' ಎಂದೂ ಕರೆಯುತ್ತಾರೆ. 'ಬಗ್'ಗಳು 'ಸೂಪರ್ ಬಗ್'ಗಳು ಹೇಗಾದವು ಎಂದು ತಿಳಿದುಕೊಳ್ಳುವ ಸಲುವಾಗಿ, ವಿಕಸನಕ್ಕೆ ಒಳಪಡುವ ಮೊದಲು, ಬ್ಯಾಕ್ಟೀರಿಯ ವಿರುದ್ಧ ಪ್ರತಿಜೀವಕಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಕೆಲವೊಂದು ಪ್ರತಿಜೀವಕಗಳು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವುದರ, ಮೂಲಕ ಅವುಗಳ ಸಂತತಿ ನಾಶ ಮಾಡುತ್ತವೆ; ಮತ್ತೂ ಕೆಲವು ಪ್ರತಿಜೀವಕಗಳು, ಬ್ಯಾಕ್ಟೀರಿಯ ತಮ್ಮ ಉಳಿವಿಗಾಗಿ ಉತ್ಪಾದಿಸುವ ಅಗತ್ಯ ಪ್ರೋಟೀನ್ಗಳ ಉತಾದನೆಯಲ್ಲಿ ಮಧ್ಯಪ್ರವೇಶಿಸುವುದರ ಮೂಲಕ, ಅವುಗಳನ್ನು ಕೊಲ್ಲುತ್ತವೆ. ಅನೇಕ ಬ್ಯಾಕ್ಟೀರಿಯ, ಶಿಲೀಂಧ್ರ ಮತ್ತು ಇತರ ಸೂಕ್ಷ್ಮಾಣು ಜೀವಿಗಳು ನೈಸರ್ಗಿಕವಾಗಿ ಪ್ರತಿಜೀವಕಗಳನ್ನು ಉತ್ಪತ್ತಿ ಮಾಡುತ್ತವೆ. ವಾಸ್ತವವಾಗಿ, ಪೆನ್ಸಿಲಿನ್ ಎಂಬ ಮೊದಲ ಪ್ರತಿಜೀವಕವು 'ಪೆನ್ಸಿಲಿಯಂ ನೋಟೆಟಂ' ಎಂಬ ಶಿಲೀಂಧ್ರವು ಸ್ರವಿಸಲಾದ ದ್ರವದಲ್ಲೆ ಕಂಡುಹಿಡಿಯಲ್ಪಟ್ಟಿತು.
ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ನಾಶಮಾಡಬಹುದಾದ ಪ್ರತಿಜೀವಕಗಳು ಬಹಳ ಪ್ರಬಲವಲ್ಲವೇ? ಇಂತಹ ಪ್ರತಿಜೀವಕಗಳಿಗೆ ಬ್ಯಾಕ್ಟೀರಿಯಾವು ಹೇಗೆ ಪ್ರತಿರೋಧವನ್ನು ಹುಟ್ಟಿಸಿಕೊಳ್ಳುತ್ತದೆ? ಕೆಲವು ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ಪ್ರತಿಜೀವಕಗಳಿಗೆ ನಿರೋಧಕವಾಗಿದ್ದು, ಮತ್ತೂ ಕೆಲವು ಕಾಲಾಂತರದಲ್ಲಿ ಪ್ರತಿರೋಧವನ್ನು ಪಡೆದುಕೊಳ್ಳುತ್ತವೆ. ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಪ್ರಕಾರ, ಜೀವಿಗಳು ನೈಸರ್ಗಿಕವಾಗಿ ಅವುಗಳ ಪರಿಸರದಲ್ಲಿ ಬದುಕುಳಿಯಲು ಅವಶ್ಯಕವಾದ ಗುಣಲಕ್ಷಣಗಳನ್ನು ಅಭಿವೃದ್ಧಿಪಡಿಸಲು, ಕಾಲಕಾಲಕ್ಕೆ ವಿಕಸನಗೊಳ್ಳುತ್ತವೆ. ಪ್ರತಿಜೀವಕಗಳು ಇಂತಹ ಸವಾಲಿನ ಪರಿಸರವನ್ನು ಬ್ಯಾಕ್ಟೀರಿಯಾಕ್ಕೆ ಒದಗಿಸುತ್ತವೆ; ಹಾಗಾಗಿ ಅಲ್ಲಿ ಬದುಕುಳಿಯುವುದು ಕೇವಲ ಪ್ರತಿಜೀವಕಗಳಿಗೆ ನಿರೋಧಕವಾಗಿರುವ ಬ್ಯಾಕ್ಟೀರಿಯ ಅಥವಾ ಬದುಕುವ ಸಲುವಾಗಿ ಕಾಲಾಂತರದಲ್ಲಿ ಪ್ರತಿರೋಧವನ್ನು ಬೆಳೆಸಿಕೊಳ್ಳುವ ಬ್ಯಾಕ್ಟೀರಿಯ.
ಬ್ಯಾಕ್ಟೀರಿಯಾದ ಮೇಲೆ ಈ 'ಆಯ್ಕೆಯ ಒತ್ತಡ'ವು ಚೆನ್ನಾಗಿ ಕೆಲಸ ಮಾಡುತ್ತದೆ. ಪ್ರತಿ ಬಾರಿಯೂ ಬ್ಯಾಕ್ಟೀರಿಯಾದ ವಿಭಜನೆಯಾದಾಗ, ಸ್ವಾಭಾವಿಕವಾಗಿ ಜೀನುಗಳ ರೂಪಾಂತರ ಆಗುತ್ತದೆ. ಅಂದರೆ, ಅದರ ಡಿಎನ್ಎ ಅನುಕ್ರಮದಲ್ಲಿ ಯಾದೃಚ್ಛಿಕ ಬದಲಾವಣೆ ಆಗುತ್ತದೆ. ಹೀಗೆ ರೂಪಾಂತರ ಪ್ರಕ್ರಿಯೆಯಲ್ಲಿರುವಾಗ ಆ ಬ್ಯಾಕ್ಟೀರಿಯಾದ ಮೇಲೆ ನೀವು ಪ್ರತಿಜೀವಕವನ್ನು ಸಿಂಪಡಿಸಿದರೆ, ಆಗ ಬ್ಯಾಕ್ಟೀರಿಯಾದ ಡಿಎನ್ಎ ಆನುವಂಶಿಕ ರೂಪಾಂತರಕ್ಕೆ ಒಳಗಾಗುತ್ತದೆ; ಪ್ರತಿಜೀವಕಗಳನ್ನು ನಿಷ್ಪರಿಣಾಮಕಾರಿಯಾಗಿ ಮಾಡುವ ಜೀವರಾಸಾಯನಿಕ ವಸ್ತುವನ್ನು ಉತ್ಪತ್ತಿ ಮಾಡಲು ಅಥವಾ ಆ ಪ್ರತಿಜೀವಕವನ್ನು ಜೀವಕೋಶದಿಂದ ಹೊರಹಾಕಲು ಬೇಕಾದ ವಸ್ತುವನ್ನು ಉತ್ಪತ್ತಿ ಮಾಡಲು ಶಕ್ತಗೊಳಿಸುತ್ತದೆ. ಈ ರೂಪಾಂತರಗಳನ್ನು ಅನುವಂಶಿಕವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವ ಬ್ಯಾಕ್ಟೀರಿಯಾ, ಉಳಿಯುತ್ತವೆ ಮತ್ತು ಬೆಳೆಯುತ್ತವೆ; ಆದರೆ ಇತರ ಬ್ಯಾಕ್ಟೀರಿಯಾ ಸಾಯುತ್ತವೆ. ಕಾಲಾಂತರದಲ್ಲಿ, ಪ್ರತಿಜೀವಕ ನಿರೋಧಕ ಬ್ಯಾಕ್ಟೀರಿಯಾ ನಿರೋಧಕವಲ್ಲದ ಬ್ಯಾಕ್ಟೀರಿಯಾವನ್ನು ಮೀರಿಸುತ್ತವೆ ಮತ್ತು ಪ್ರತಿಜೀವಕಗಳನ್ನು ನಿಷ್ಪರಿಣಾಮಕಾರಿಯಾಗಿಸುತ್ತವೆ.
ಪ್ರತಿಜೀವಕ ನಿರೋಧಕ ಸೂಪರ್ ಬಗ್ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣ ಮತ್ತು ಆಸಕ್ತಿದಾಯಕ ವಿಷಯವನ್ನಾಗಿ ಮಾಡುವುದು ಏನೆಂದರೆ, ತಮ್ಮ ವಂಶವಾಹಿಯನ್ನು ತಮ್ಮ ಸಂತತಿಗೆ ಮಾತ್ರ ವರ್ಗಾಯಿಸುವ ಮಾನವರಂತಲ್ಲದ ಬ್ಯಾಕ್ಟೀರಿಯ, ಯಾವುದೇ ಬ್ಯಾಕ್ಟೀರಿಯ ಅಥವಾ ಮತ್ತಿತರ ಸೂಕ್ಷ್ಮಾಣು ಜೀವಿಗೆ ತಮ್ಮ ಆನುವಂಶಿಕ ಸಾಮಗ್ರಿಯನ್ನು ವರ್ಗಾಯಿಸುತ್ತದೆ. ಒಂದು ಸೂಪರ್ ಬಗ್ ಇರುವ ಸಮುದಾಯದಲ್ಲಿ ಕಾಲಾಂತರದಲ್ಲಿ, ಜೀನ್-ವರ್ಗಾವಣೆಯ ಮೂಲಕ, ಹೆಚ್ಚಿನ ಸಂಖ್ಯೆಯಲ್ಲಿ 'ಸೂಪರ್ ಬಗ್'ಗಳು ತಯಾರಾಗುತ್ತವೆ.
ಪ್ರತಿಜೀವಕಗಳ ಪ್ರತಿರೋಧದ ಪ್ರಮಾಣವನ್ನು ಪ್ರಮಾಣೀಕರಿಸುವ ಸಲುವಾಗಿ, 'ಯೂರೋಪ್ನ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ' ಹಾಗೂ 'ಅಮೆರಿಕಾದ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ'ದ ಅಂತರರಾಷ್ಟ್ರೀಯ ತಜ್ಞರ ಗುಂಪೊಂದು, ಪ್ರತಿಜೀವಕ ನಿರೋಧಕ 'ಸೂಪರ್ ಬಗ್'ಗಳನ್ನು ಬಹು-ಔಷಧಿ ನಿರೋಧಕ (MDR), ವ್ಯಾಪಕ ಔಷಧಿ-ನಿರೋಧಕ (XDR) ಮತ್ತು ಪ್ಯಾನ್-ಔಷಧಿ ನಿರೋಧಕ (PDR) ಎಂಬ ಮೂರು ಗುಂಪುಗಳಾಗಿ ವಿಂಗಡಿಸಿದೆ. ಬಹು-ಔಷಧಿ ನಿರೋಧಕ 'ಸೂಪರ್ ಬಗ್'ಗಳು ಒಂದಕ್ಕಿಂತ ಹೆಚ್ಚು ವರ್ಗದ ಪ್ರತಿಜೀವಕಗಳಿಗೆ ನಿರೋಧಕವಾಗಿದ್ದು, ವ್ಯಾಪಕ ಔಷಧಿ-ನಿರೋಧಕ 'ಸೂಪರ್ ಬಗ್'ಗಳು ಹೆಚ್ಚಿನ ಸಂಖ್ಯೆಯ ಪ್ರತಿಜೀವಕಗಳಿಗೆ ನಿರೋಧಕವಾಗಿದ್ದು, ಎಲ್ಲಾ 'ಸೂಪರ್ ಬಗ್'ಗಳಲ್ಲಿ ಅತ್ಯಂತ ಮಾರಕವಾದ ಪ್ಯಾನ್-ಔಷಧಿ ನಿರೋಧಕ 'ಸೂಪರ್ ಬಗ್'ಗಳು, ಲಭ್ಯವಿರುವ ಎಲ್ಲಾ ಪ್ರತಿಜೀವಕಗಳಿಗೂ ನಿರೋಧಕವಾಗಿರುತ್ತವೆ.
'ಸೂಪರ್ ಬಗ್' ವಿರುದ್ಧ ಭಾರತದ ಯುದ್ಧ
ಭಾರತವು ವಿಶ್ವದ ಅತಿ ಹೆಚ್ಚು ಬ್ಯಾಕ್ಟೀರಿಯಾದ ಸೋಂಕುಗಳನ್ನು ಹೊಂದಿರುವ ದೇಶವಾಗಿದೆ. ಕ್ಷಯ, ಕಾಲರಾ, ಟೈಫಾಯಿಡ್, ನ್ಯುಮೋನಿಯಾ ಮತ್ತಿತರ ಸೋಂಕುಗಳು ಇಲ್ಲಿ ಹೆಚ್ಚು ಕಂಡುಬರುತ್ತವೆ. ವಾಸ್ತವವಾಗಿ, ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕ್ಷಯರೋಗಿಗಳು ಇರುವ ತಾಣ ಭಾರತ. ಪ್ರಪಂಚದ ಎಲ್ಲಾ ಕ್ಷಯ ರೋಗಿಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನ ಇಲ್ಲೇ ಇದ್ದಾರೆ ಎಂಬುದು ಕಹಿಸತ್ಯ. ಅದರಲ್ಲೂ ಇತ್ತೀಚಿಗೆ ಬಹು-ಔಷಧಿ ನಿರೋಧಕ ಮತ್ತು ವ್ಯಾಪಕ ಔಷಧಿ-ನಿರೋಧಕ ಕ್ಷಯರೋಗ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ.
ಬಹು-ಔಷಧಿ ನಿರೋಧಕ ಮತ್ತು ವ್ಯಾಪಕ ಔಷಧಿ-ನಿರೋಧಕ ಕ್ಷಯರೋಗ ಪ್ರಕರಣಗಳಲ್ಲಿ, ಸಾಮಾನ್ಯ ಕ್ಷಯರೋಗ ಪ್ರಕರಣಗಳಿಗಿಂತಾ ಭಿನ್ನವಾಗಿ, ರೋಗನಿರ್ಣಯ ಪರೀಕ್ಷೆಗಳು ಮತ್ತು ಚಿಕಿತ್ಸೆಯನ್ನು ನಡೆಸಬೇಕಾಗುತ್ತದೆ. ಇಲ್ಲಿ, ವಿಶೇಷ ಮತ್ತು ಅಪರೂಪದ ಪ್ರತಿಜೀವಕಗಳ ಸಂಯೋಜನೆಯನ್ನು ಒಳಗೊಂಡಿರುವ ಚಿಕಿತ್ಸೆಯನ್ನು, ದೀರ್ಘಕಾಲದವರೆಗೆ ನೀಡಬೇಕಾಗುತ್ತದೆ. ಇದು ರೋಗನಿರ್ಣಯವನ್ನು ಕಷ್ಟಕರವನ್ನಾಗಿಸಿ, ಚಿಕಿತ್ಸೆಯನ್ನು ದುಬಾರಿಯಾಗಿಸುತ್ತದೆ. ಭಾರತದಲ್ಲಿ ಇನ್ನೂ ೨೨%ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದು, ಚಿಕಿತ್ಸೆಗೆ ಹೆಚ್ಚಿದ ವೆಚ್ಚವು, ಸರಿಯಾದ ಚಿಕಿತ್ಸೆಯನ್ನು ಪಡೆಯುವ ಸಂಭವನೀಯತೆಯನ್ನು ಕಡಿಮೆಗೊಳಿಸುತ್ತದೆ; ಹಾಗಾಗಿ ಸೋಂಕಿಗೆ ಒಳಪಟ್ಟವರು, ಸೋಂಕಿನ ಸಮೇತ ಬದುಕಿ, ಬಲಿಯಾಗುತ್ತಾರೆ. ಕ್ಷಯರೋಗವು ವಾಯುಗಾಮಿ ಕಾಯಿಲೆಯಾಗಿರುವುದರಿಂದ, ಒಬ್ಬರಿಂದ ಅನೇಕ ಜನರಿಗೆ ಈ ಸೋಂಕು ಸುಲಭವಾಗಿ ಹರಡಬಹುದು ಮತ್ತು ಇದು ಅಪಾಯಕಾರಿ ಸಾಂಕ್ರಾಮಿಕಕ್ಕೆ ಕಾರಣವಾಗಬಹುದು. ಅದರಲ್ಲೂ ಬಹು-ಔಷಧಿ ನಿರೋಧಕ ಮತ್ತು ವ್ಯಾಪಕ ಔಷಧಿ-ನಿರೋಧಕ ಕ್ಷಯರೋಗ ಪ್ರಕರಣಗಳಲ್ಲಿ ಹೀಗಾದರೆ, ಗುಣಪಡಿಸಲಾಗದ ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟು, ಪ್ರಬಲ ಸಮಸ್ಯೆ ತಲೆದೋರುತ್ತದೆ.
ಕ್ಷಯರೋಗವು, 'ಸೂಪರ್ ಬಗ್'ಗಳ ದಾಳಿಗೊಳಗಾದ ಏಕೈಕ ಕಾಯಿಲೆಯಲ್ಲ. ಮತ್ತೊಂದು ಬ್ಯಾಕ್ಟೀರಿಯಾದ ಸೋಂಕಿನಿಂದ ಬರುವ ಕಾಯಿಲೆಯಾದ ನ್ಯುಮೋನಿಯಾ ಕೂಡ, ಈ ಪಟ್ಟಿಗೆ ಸೇರಿದೆ. ೨೦೧೭ರ ಅಧ್ಯಯನದ ಪ್ರಕಾರ, ೧೧ ರಾಜ್ಯಗಳಲ್ಲಿನ ಅನೇಕ ಆಸ್ಪತ್ರೆಗಳಲ್ಲಿ ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳ ರಕ್ತದ ಮಾದರಿಗಳಲ್ಲಿನ ಬ್ಯಾಕ್ಟೀರಿಯಾ 'ಎಸ್. ನ್ಯುಮೋನಿಯೆ', ಈಗಾಗಲೇ ಮೊದಲ-ಹಂತದ ಪ್ರತಿಜೀವಕ ನಿರೋಧಕಗಳಾಗಿವೆ. ಇವುಗಳಲ್ಲಿ ೬೬%ರಷ್ಟು ಬ್ಯಾಕ್ಟೀರಿಯ 'ಟ್ರೈಮೋಕ್ಸಸೋಲ್' ಪ್ರತಿಜೀವಕಕ್ಕೆ ನಿರೋಧಕವಾಗಿದ್ದು, ೩೭%ರಷ್ಟು 'ಎರಿಥ್ರೊಮೈಸಿನ್' ಮತ್ತು ೮%ರಷ್ಟು 'ಪೆನಿಸಿಲಿನ್'ಗೆ ನಿರೋಧಕವಾಗಿವೆ. ೨೦೧೭ರ ಮತ್ತೊಂದು ಅಧ್ಯಯನದ ಪ್ರಕಾರ, ಮತ್ತಷ್ಟು ತೀವ್ರವಾದ ನ್ಯುಮೋನಿಯಾವನ್ನು ಪರೀಕ್ಷಿಸಿದ ವೈದ್ಯರಿಗೆ ಕಂಡುಬಂದದ್ದೆಂದರೆ, ಅತೀ ಪ್ರಬಲವಾದ 'ಸೂಪರ್ ಬಗ್ 'ಕೆ. ನ್ಯುಮೋನಿಯಾ'ದ ಸೋಂಕಿಗೆ ಒಳಗಾದ ರೋಗಿಗಳಲ್ಲಿ ೬೯% ಜನ ಬದುಕುಳಿಯಲಿಲ್ಲ. ಈ 'ಸೂಪರ್ ಬಗ್'ಗಳು ಬಹು-ಔಷಧಿ ನಿರೋಧಕ ಬ್ಯಾಕ್ಟೀರಿಯಾವನ್ನು ನಿವಾರಿಸಲು ಬಳಸುವ 'ಕಾರ್ಬಪನೆಮ್' ಮತ್ತು ಯಾವುದೇ ಪ್ರತಿಜೀವಕವು ಕಾರ್ಯನಿರ್ವಹಿಸದಿದ್ದಾಗ ಬಳಸಲಾಗುವ ಕೊನೆಯ ಆಯ್ಕೆಯಾದ 'ಕೊಲಿಸ್ಟಿನ್' - ಈ ಎರಡೂ ಪ್ರತಿಜೀವಕಗಳಿಗೂ ನಿರೋಧಕವಾಗಿವೆ ಎಂದರೆ ಆಶ್ಚರ್ಯದ ಜೊತೆ ಆಘಾತವೂ ಖಂಡಿತ. ಟೈಫಾಯಿಡ್, ಕಾಲರಾ ಮತ್ತು ಗೊನೊರಿಯಾಗಳಂತಹ ಇತರ ಬ್ಯಾಕ್ಟೀರಿಯಾದ ಸೊಂಕುಗಳದ್ದೂ ಇದೇ ಕಥೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇದು ನಮ್ಮ ದೇಶವಷ್ಟೇ ಅಲ್ಲದೇ, ವಿಶ್ವವೇ ಎದುರಿಸುತ್ತಿರುವ ಪ್ರಮುಖ ಸಮಸ್ಯೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಈ ತಕ್ಷಣದ ಅನಿವಾರ್ಯತೆ. ಈ ಸಮಸ್ಯೆಯನ್ನು ನೀಗಿಸಲು ನಾವು ಯಾವ ಕಾರ್ಯಗಳನ್ನು ಕೈಗೊಳ್ಳಬೇಕು? ಈ ಬ್ಯಾಕ್ಟೀರಿಯಾದ ಸೋಂಕು ಹೆಚ್ಚಾಗಿ ಎಲ್ಲಿ ಕಂಡುಬರುತ್ತದೆ? ಇವುಗಳು ತಕ್ಷಣ ಉತ್ತರ ಬೇಡುವ ಪ್ರಶ್ನೆಗಳಾಗಿವೆ. ಆದಾಗ್ಯೂ, ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಮೊದಲ ಹಂತವು, ಪ್ರತಿಜೀವಕ-ನಿರೋಧಕ ಬ್ಯಾಕ್ಟೀರಿಯಾದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರತಿಜೀವಕಗಳ ತಡೆಯಿಲ್ಲದ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದೇ ಆಗಿದೆ.