ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಚುಚ್ಚುಮದ್ದಿನ ನೋವಿಗಿನ್ನು ಗುಡ್-ಬೈ, ವೈದ್ಯ ಜಗತ್ತಿನಲ್ಲೊಂದು ಹೊಸ ಆವಿಷ್ಕಾರ

Read time: 1 min
ಬೆಂಗಳೂರು
15 ಮೇ 2019
ಚುಚ್ಚುಮದ್ದಿನ ನೋವಿಗಿನ್ನು ಗುಡ್-ಬೈ, ವೈದ್ಯ ಜಗತ್ತಿನಲ್ಲೊಂದು ಹೊಸ ಆವಿಷ್ಕಾರ

ವೈದ್ಯರ ಬಳಿ ಹುಶಾರಿಲ್ಲದೆ ತೆರಳಿದಾಗ ನನಗೆ ಇಂಜೆಕ್ಷನ್ (ಚುಚ್ಚುಮದ್ದು) ಬೇಡವೇ, ಬೇಡ ಎಂದು ಹಠ ಮಾಡಿದ್ದೀರ? ನೀವು ಬೇಡವೆಂದರೂ ರೋಗಕ್ಕೆ ಚುಚ್ಚುಮದ್ದು ಅನಿವಾರ್ಯ ಎಂದು ವೈದ್ಯರು ಕಥೆ ಹೇಳಿ ನಿಮಗೆ ಚುಚ್ಚಿ ನೋವುಂಟು ಮಾಡಿದ್ದಾರಾ? ಮಿತ್ರರೆ, ನಿಮಗೊಂದು ಶುಭಸುದ್ದಿ ಕಾದಿದೆ. ‘ಹಳೆಯ ನೋವನ್ನು’ ಮರೆಯುವ ಸಲುವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ವಿಜ್ಞಾನಿಗಳು ಸೂಜಿ-ಮುಕ್ತ, ನೋವುರಹಿತ ಔಷಧಿ ವಿತರಣೆಯ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಆಶ್ಚರ್ಯವಾಗುತ್ತಿದೆಯೆ? ಈ ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸಿದಲ್ಲಿ ಅತೀ ಶೀಘ್ರದಲ್ಲೆ ಔಷಧಿ ವಿತರಣೆಯಲ್ಲಿ ಬಳಸುವ ಚುಚ್ಚುಮದ್ದುಗಳನ್ನು ಬದಲಿಸಬಹುದು.

ಸೂಜಿಯ ಸಹಾಯದಿಂದ ಚರ್ಮವನ್ನು ಬೇಧಿಸಿ, ಬೇಕಾಗಿರುವ ಔಷಧಿಯನ್ನು ದೇಹಕ್ಕೆ ನೀಡುವುದು ಚುಚ್ಚುಮದ್ದಿನ ಮೂಲ ವಿಧಾನ. ಈ ವಿಧಾನಕ್ಕೆ ತನ್ನದೆ ಆದ ಕೆಲವು ಸಮಸ್ಯೆಗಳಿವೆ. ಸೂಜಿಯ ಬಳಕೆ ಮಾಲಿನ್ಯದ ಹಾಗೆಯೆ. ಬಳಸಿದ ಸೂಜಿಗಳ ತ್ಯಾಜ್ಯ ಶೇಖರಣೆ ಒಂದು ಸಮಸ್ಯೆಯಾದರೆ, ಬಳಕೆಯ ಸಮಯದಲ್ಲಿ ರೋಗಿಗೆ ಆಗುವ ನೋವು ಹಾಗೂ ಸೂಜಿಯ ಬಗೆಗಿರುವ ಹೆದರಿಕೆ ಇನ್ನೊಂದು ಸಮಸ್ಯೆ. ಇದೇ ಕಾರಣಗಳಿಂದಾಗಿ ಇಂದಿನ ವೈದ್ಯ ಜಗತ್ತು ಹಾಗೂ ಜಗತ್ತಿನ ಸಂಶೋಧಕರು ಸೂಜಿ ಮತ್ತು ಚುಚ್ಚುಮದ್ದನ್ನು ಬದಲಾಯಿಸಬಹುದಾದ ಸೂಜಿ-ಮುಕ್ತ ಮತ್ತು ಸ್ಥಳೀಯ ಔಷಧ-ವಿತರಣಾ ವ್ಯವಸ್ಥೆಯನ್ನು ಹುಡುಕುತ್ತಿದ್ದಾರೆ.

ಐಐಎಸ್ಸಿಯ ಅಧ್ಯಯನಕಾರರು ದ್ರವ ಔಷಧಿಯನ್ನು ದೇಹದೊಳಗೆ ಸಾಗಿಸಲು ಆಘಾತ ತರಂಗಗಳನ್ನು (Shock Waves) ಬಳಸುವ ಹೊಸ ಸಾಧನವನ್ನು ಪ್ರದರ್ಶಿಸಿದ್ದಾರೆ. ಈ ತರಂಗಗಳ ಸಾಮರ್ಥ್ಯದಿಂದ ಲಸಿಕೆಗಳನ್ನು ನುಗ್ಗಿಸಿ, ಚರ್ಮವನ್ನು ಭೇದಿಸಬಹುದಾಗಿದೆ. ಈ ತರಂಗಗಳ ವೇಗವು ಶಬ್ದದ ವೇಗಕ್ಕಿಂತ ಹೆಚ್ಚು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಇವು ಸಾಮಾನ್ಯವಾಗಿ ಸ್ಫೋಟದ ಪರಿಣಾಮವಾಗಿ ಉತ್ಪತ್ತಿಯಾಗುವ ತರಂಗಗಳು. ಇಲ್ಲಿಯವರೆಗೂ ಏರೋಡೈನಾಮಿಕ್ಸ್ (ವಾಯುಬಲವಿಜ್ಞಾನ) ಮತ್ತು ಏರೋಸ್ಪೇಸ್ (ವಾಯುಯಾನ)ದ ಸಂಶೋಧನೆಯ ಭಾಗವಾಗಿ ಈ ತರಂಗಗಳನ್ನು ಬಳಸಲಾಗುತ್ತಿತ್ತು. ಆದರೆ ಈ ಆಘಾತ ತರಂಗಗಳನ್ನು ಈಗ ಜೀವವಿಜ್ಞಾನದ ಭಾಗವಾಗಿಯೂ ಉಪಯೋಗಿಸಲಾಗುತ್ತಿರುವುದು ಗಮನಾರ್ಹ ಸಂಗತಿ.

ಈ ಹೊಸದಾಗಿ ವಿನ್ಯಾಸಗೊಳಿಸಲಾದ ಸಾಧನ ಕೊಳವೆಯನ್ನು ಹೊಂದಿದ್ದು, ಆಕ್ಸಿಹೈಡ್ರೋಜೆನ್ (2:1 ಅನುಪಾತದಲ್ಲಿ ಜಲಜನಕ ಮತ್ತು ಆಮ್ಲಜನಕ)ವನ್ನು ಒಳಗೊಡಿದೆ. ಆಘಾತ ತರಂಗವನ್ನು ಉತ್ಪತ್ತಿ ಮಾಡಲು ಈ ಜಲಜನಕ-ಆಮ್ಲಜನಕದ ಮಿಶ್ರಣವನ್ನು ಸ್ಪಾರ್ಕ್ ಪ್ಲಗ್ ಬಳಸಿ ಸ್ಫೋಟಿಸಲಾಗುತ್ತದೆ. ಇಲ್ಲಿ ಉತ್ಪತ್ತಿಯಾದ ತರಂಗವು ಆಘಾತದ ಕೊಳವೆಯ ಉದ್ದವನ್ನು ಚಲಿಸಿ, ಆಘಾತ ಕೊಳವೆಯ ಕೊನೆಯಲ್ಲಿರುವ ದ್ರವ ಲಸಿಕೆಯ ವೇಗವನ್ನು ಹೆಚ್ಚಿಸುತ್ತದೆ. ಲಸಿಕೆಗಳಿಂದ ಆಕ್ಸಿಹೈಡ್ರೋಜನ್ ಅನ್ನು ಬೇರ್ಪಡಿಸಲು ಒಂದು ಕಾಗದದ ಪೊರೆಯನ್ನು ಬಳಸಲಾಗಿದೆ. ಈ ಸಾಧನವು ಪ್ರಬಲವಾದ ತರಂಗಗಳನ್ನು ಉತ್ಪಾದಿಸಿ, ದ್ರವ ಲಸಿಕೆಯ ವೇಗವನ್ನು ಸುಮಾರು 96 ಮೀ/ಸೆಕೆಂಡ್ ನಷ್ಟು ಹೆಚ್ಚಿಸಿ, ಸುಮಾರು 100 ಮೈಕ್ರೋ ಮೀಟರ್ ಆಳದ ಚರ್ಮವನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಕಂಡುಬಂದಿದೆ.

ತಮ್ಮ ಅಧ್ಯಯನದಲ್ಲಿ, ಸಂಶೋಧಕರು BCG ಮತ್ತು ಸಾಲ್ಮೊನೆಲ್ಲಾ ಎಂಬ ಲಸಿಕೆ ತಳಿಗಳನ್ನು ಇಲಿಗಳಿಗೆ ನೀಡಿ ಯಶಸ್ವಿಯಾಗಿ ಈ ಹೊಸ ಸಾಧನದ ಪರೀಕ್ಷೆ ಮಾಡಿದ್ದಾರೆ.

"ಈ ಸಾಧನದ ಪ್ರಮುಖ ಉದ್ದೇಶವೇ- ಆಘಾತ ತರಂಗಗಳ ಮೂಲಕ ಸುರಕ್ಷಿತವಾದ, ಸ್ವಚ್ಛವಾದ ಲಸಿಕೆಯ ವರ್ಗಾವಣೆ. ಸಾಧನದ ಮರುಬಳಕೆಯಾಗುವ ಸಾಮರ್ಥ್ಯ ಇದರ ವಿಶೇಷತೆಗಳಲ್ಲೊಂದು. ಈ ಸಾಧನವು ಜೀವವಿಜ್ಞಾನ ಹಾಗೂ ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಶೋಧನೆಗಳಿಗೆ ಅವಕಾಶಗಳನ್ನು ತೆರೆಯಲಿದೆ" ಎಂದು ಸಂಶೋಧಕರು ತಮ್ಮ ಹೊಸ ಆವಿಷ್ಕಾರದ ಬಗ್ಗೆ ವಿವರಿಸುತ್ತಾರೆ.