ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ದಕ್ಷಿಣ ಏಷ್ಯಾದಲ್ಲಿ ಸಮೃದ್ಧಿ, ಅಭಿವೃದ್ಧಿಯ ಜೊತೆಗೆ ಮಧುಮೇಹದ ವೃದ್ಧಿ

Read time: 1 min
ಬೆಂಗಳೂರು
21 Mar 2019
ದಕ್ಷಿಣ ಏಷ್ಯಾದಲ್ಲಿ ಸಮೃದ್ಧಿ, ಅಭಿವೃದ್ಧಿಯ ಜೊತೆಗೆ ಮಧುಮೇಹದ ವೃದ್ಧಿ

ದಕ್ಷಿಣ ಏಷ್ಯಾ, ಅದರಲ್ಲೂ ವಿಶೇಷವಾಗಿ ಭಾರತವನ್ನು, ವಿಶ್ವದ ಸಕ್ಕರೆ ‘ಹಬ್’ ಎಂದು ಕರೆಯುತ್ತಾರೆ; ಹಾಗೆಂದು ಈ ಹೆಸರು ಬಂದಿರುವುದು ನಾವು ಬೆಳೆಯುವ ಕಬ್ಬಿನಿಂದ ಎಂದು ಹೆಮ್ಮೆ ಪಡಬೇಕಾಗಿಲ್ಲ; ಈ ಹೆಸರಿನ ಹಿಂದಿನ ಕಾರಣ ನಮ್ಮ ದೇಶದಲ್ಲಿ ಟೈಪ್ 2 ಡಯಬಿಟಿಸ್ ಇರುವ ಜನರ ಸಂಖ್ಯೆಯಲ್ಲಿ ಆಗಿರುವ ಅಪಾರ ಏರಿಕೆ ಎಂಬುದು ಖೇದಕರ. ಟೈಪ್ 2  ಮಧುಮೇಹ ಇರುವವರಲ್ಲಿ, ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಜೀವಕೋಶಗಳನ್ನು ಉತ್ಪಾದಿಸುವುದಿಲ್ಲ ಅಥವಾ ಉತ್ಪತ್ತಿಯಾಗುವ ಇನ್ಸುಲಿನ್ಗೆ  ದೇಹದ ಜೀವಕೋಶಗಳು ಯೋಗ್ಯ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಸರಿಯಾಗಿ ನಿರ್ವಹಿಸಿದ ಹೊರತು ಸಮಯದೊಂದಿಗೆ ಸಕ್ಕರೆ ಖಾಯಿಲೆಯು ಹೆಚ್ಚುತ್ತಾ ಸಾಗುತ್ತದೆ. ಈ ಡಯಬಿಟಿಸ್ಗೂ ಆನುವಂಶಿಕ ಅಂಶಗಳಿಗೂ ಅಥವಾ ಕುಟುಂಬದ ಇತಿಹಾಸಕ್ಕೂ ಬಲವಾದ ಸಂಬಂಧ ಇದೆ. ವರದಿಗಳ ಪ್ರಕಾರ ಮಧುಮೇಹದ ಚಿಕಿತ್ಸೆಯು ಬಹಳ ದುಬಾರಿಯಾಗಿದ್ದು, ಮಧುಮೇಹಿಯು ವಾರ್ಷಿಕವಾಗಿ 6000-10000 ರೂಪಾಯಿಗಳನ್ನು ಚಿಕಿತ್ಸೆಗಾಗಿಯೇ ಖರ್ಚು ಮಾಡುತ್ತಾನೆ. ಅನಿಯಂತ್ರಿತ ಮಧುಮೇಹವು 2030ನೆಯ ಇಸವಿಗೂ ಮುನ್ನ ಭಾರತಕ್ಕೆ 150 ಶತಕೋಟಿ ಡಾಲರ್ ಹಣವನ್ನು ವೆಚ್ಚಮಾಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ದಿ ಲಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೋಕ್ರೈನಾಲಜಿ’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನಗಳ ಸರಣಿಯಲ್ಲಿ, ಭಾರತ, ಯು.ಕೆ ಮತ್ತು ಆಸ್ಟ್ರೇಲಿಯಾದ ಸಂಶೋಧಕರ ತಂಡವು ಸಾಂಕ್ರಾಮಿಕವೆಂಬಂತೆ ಹೆಚ್ಚುತ್ತಿರುವ ಟೈಪ್ 2 ಮಧುಮೇಹದ ಬಗ್ಗೆ, ಅದರ ಪ್ರಚಲಿತ ಚಿಕಿತ್ಸೆಯ ಬಗ್ಗೆ, ಜೊತೆಗೆ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಈ ನಿಟ್ಟಿನಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಪ್ ಟು ಡೇಟ್ ಮಾಹಿತಿ ನೀಡುತ್ತದೆ. ಈ ದೇಶಗಳಲ್ಲಿ ಒಂದೇ ರೀತಿಯ ಸಾಂಸ್ಕೃತಿಕ-ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಇರುವ ಕಾರಣ, ಈ ದೇಶಗಳಲ್ಲಿ  ಮಧುಮೇಹದ ಇರುವಿನ ಲಕ್ಷಣಗಳೂ ಒಂದೇ ರೀತಿಯವು.

ಈ ಸರಣಿಯ ಮೊದಲ ಭಾಗವು, ಈ ದೇಶಗಳಲ್ಲಿ ಮಧುಮೇಹವು ಸಾಂಕ್ರಾಮಿಕದಂತೆ ಹೆಚ್ಚಾಗಲು ಕಾರಣಗಳೇನಿರಬಹುದು ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಪೌಷ್ಟಿಕಾಂಶದ ಗುಣಮಟ್ಟದಲ್ಲಿ ಇಳಿಕೆ, ಕಡಿಮೆ ದೈಹಿಕ ಚಟುವಟಿಕೆ, ಅಗತ್ಯ ವೈದ್ಯಕೀಯ ಆರೈಕೆಯ ಕೊರತೆ ಮತ್ತು ಹೆಚ್ಚುತ್ತಿರುವ ಜಡ ಜೀವನಶೈಲಿಯು ಡಯಬಿಟಿಸ್ ಹೆಚ್ಚಲು ಕಾರಣಗಳು ಎಂದು ಕಂಡುಬಂದಿದೆ. ಅಂತರಾಷ್ಟ್ರೀಯ ಡಯಬಿಟಿಸ್ ಫೆಡರೇಷನ್ ಪ್ರಕಟಿಸಿದ 2017ನೇ ಸಾಲಿನ ಡಯಬಿಟಿಸ್ ಅಟ್ಲಾಸ್ನ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಸುಮಾರು 4%-8.8%ರಷ್ಟು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಲ್ಲಿ ಭಾರತೀಯರು ಅತ್ಯಧಿಕ ಪ್ರಮಾಣದಲ್ಲಿದ್ದು, ಅವರಲ್ಲಿ ಸುಮಾರು 16·7%ರಿಂದ 26·1% ವ್ಯಕ್ತಿಗಳು ಅಧಿಕ ತೂಕವುಳ್ಳವರಾಗಿದ್ದು, 2.9%ರಿಂದ 6·8%ರಷ್ಟು ಜನರು ಬೊಜ್ಜಿನ ಅಪರಾವತಾರವಾಗಿದ್ದಾರೆ.

"ಹೆಚ್ಚಿನ ಸಂಖ್ಯೆಯ ಮಕ್ಕಳು, ಹದಿಹರೆಯದವರು ಮತ್ತು ಮಹಿಳೆಯರು ಅತಿಯಾದ ತೂಕ ಅಥವಾ ಬೊಜ್ಜುಳ್ಳವರಾಗಿದ್ದಾರೆ; ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ" ಎನ್ನುತ್ತಾರೆ ಸಂಶೋಧಕರು.

ಇಂದು ಭಾರತದ ಸುಮಾರು 7.2 ಕೋಟಿ ವಯಸ್ಕರು ಮಧುಮೇಹ ಪೀಡಿತರಾಗಿದ್ದು, 1990ರಲ್ಲಿ ಮಧುಮೇಹಿಗಳ ಸಂಖ್ಯೆ 2.6 ಕೋಟಿ ಇದ್ದದ್ದಕ್ಕೆ ಹೋಲಿಸಿದರೆ ಈಗಾಗಲೇ ವಿಪರೀತವಾಗಿ ಏರಿದೆ. ಈ ಸಂಖ್ಯೆಯು 2045ರ ಹೊತ್ತಿಗೆ 13 ಕೋಟಿಗಳಿಗೆ ಏರಿಕೆಯಾಗಲಿದೆ ಎಂಬುದು ಸಂಶೋಧಕರ ಅಂಬೋಣ! ಮತ್ತೊಂದು ಅಧ್ಯಯನವು, ಮಧುಮೇಹಿಗಳ ಸಂಖ್ಯೆಯಲ್ಲಿನ ಏರಿಕೆ ಮತ್ತು ರಾಜ್ಯಗಳ ಸಮೃದ್ಧಿಯ ನಡುವೆ ಸ್ಪಷ್ಟವಾದ ಸಂಬಂಧ ಇದೆ ಎಂದು ತೋರಿಸುತ್ತದೆ. ಬಹುಪಾಲು ಮಧುಮೇಹಿಗಳು ತಮಿಳುನಾಡು, ಕೇರಳ ಮತ್ತು ದೆಹಲಿಯಂತಹ ಹೆಚ್ಚು ಶ್ರೀಮಂತ ರಾಜ್ಯದವರೇ! ಆದರೆ, ಕಳೆದ 20 ವರ್ಷಗಳಲ್ಲಿ ದೇಶದ ಪ್ರತಿ ರಾಜ್ಯದಲ್ಲಿ ಮಧುಮೇಹವು ಹೆಚ್ಚಾಗಿದ್ದು, ಈಗ ಹಿಂದುಳಿದ ರಾಜ್ಯಗಳಲ್ಲೂ ಈ ಸಂಖ್ಯೆಯು ಅಪಾರವಾಗಿ ಹೆಚ್ಚುತ್ತಿದೆ.

ಮಧುಮೇಹಕ್ಕೆ ಕಾರಣವಾದ ಮತ್ತೊಂದು ಪ್ರಮುಖ ಅಂಶವೆಂದರೆ ಆನುವಂಶಿಕತೆ. ದಕ್ಷಿಣ ಏಷ್ಯಾದ ಅಥವಾ ಭಾರತೀಯ ಫಿನೋಟೈಪ್ ಎಂದೇ ಕರೆಯಲಾಗುವ ಇಲ್ಲಿನ ಜನರ ಅನುವಂಶಿಕ ಲಕ್ಷಣಗಳು, ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದ ಬೊಜ್ಜಿರುವವರನ್ನು ಮಾತ್ರವಲ್ಲದೇ ಇಲ್ಲಿನ ಕಡಿಮೆ BMI (ಬಾಡಿ ಮಾಸ್ ಇಂಡೆಕ್ಸ್) ಇರುವ ಜನರನ್ನೂ ಮಧುಮೇಹ ಕಾಡುವುದುಂಟು. ಅನುವಂಶಿಕ ಅಂಶದ ಕಾರಣದಿಂದ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಉಂಟಾಗುತ್ತದೆ ಮತ್ತು ಕಾಲಕ್ರಮೇಣ ಹೆಚ್ಚು ಅಪಾಯಕಾರಿಯಾಗುತ್ತಾ ಸಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಇಂತಹ ಅನೇಕ ಅಂಶಗಳು ಮಧುಮೇಹಕ್ಕೆ ಕಾರಣವಾದ್ದರಿಂದ ಮಧುಮೇಹದ ತಡೆಗಟ್ಟುವಿಕೆಗಾಗಿ ವಿಶೇಷ ಕಾರ್ಯಕ್ರಮಗಳು ಇಲ್ಲಿ ಹೆಚ್ಚು ಅಗತ್ಯವೆಂದು ಸಂಶೋಧಕರು ವಾದಿಸುತ್ತಾರೆ.

ಲೇಖನ ಸರಣಿಯ ಎರಡನೆಯ ಭಾಗದಲ್ಲಿ, ಸಂಶೋಧಕರು, ದಕ್ಷಿಣ ಏಷ್ಯಾದಲ್ಲಿ ಮಧುಮೇಹವನ್ನು ಪ್ರಾಯೋಗಿಕವಾಗಿ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಗಮನಿಸುತ್ತಾರೆ ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಸುಧಾರಿಸುವ ಮಾರ್ಗವನ್ನು ಸೂಚಿಸುತ್ತಾರೆ. ಈ ಅಧ್ಯಯನದ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಮಧುಮೇಹವು ಹೆಚ್ಚು ಅಪಾಯಕಾರಿಯಾಗಿರುವುದಕ್ಕೆ ಕಾರಣ, ರೋಗದ ಮತ್ತು ಅದರ ಚಿಕಿತ್ಸೆಯ ಬಗ್ಗೆ ಜನರಿಗೆ ಸರಿಯಾದ ಅರಿವಿಲ್ಲದಿರುವುದು. ಬಹುಪಾಲು ಸಂದರ್ಭಗಳಲ್ಲಿ ರೋಗನಿರ್ಣಯ ವಿಳಂಬವಾಗುವುದು ಮತ್ತು ಚಿಕಿತ್ಸೆಯು ಅಸಮರ್ಪಕವಾಗಿರುವುದು ಇಲ್ಲಿನ ದೊಡ್ಡ ಸಮಸ್ಯೆಗಳು. ವೈದ್ಯರು ಸೂಚಿಸಿದಂತೆ ಜೀವನಶೈಲಿ ಮತ್ತು ಔಷಧಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಬದಲು, ಅನೇಕರು ಪರಿಣಾಮಕಾರಿಯಲ್ಲದ ಮತ್ತು ಹಾನಿಕಾರಕ ಪರ್ಯಾಯ ಔಷಧಿಗಳನ್ನು ಆಶ್ರಯಿಸುವುದರಿಂದ, ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹದ ಅಪಾಯಗಳನ್ನು ಹೆಚ್ಚಿಸಿಕೊಂಡು, ಅಸುನೀಗುತ್ತಾರೆ.

ಈ ಲೇಖನ ಸರಣಿಯ ಎರಡನೆಯ ಭಾಗದ ಲೇಖಕರಾದ ಡಾ. ಅನೂಪ್ ಮಿಶ್ರಾ ಅವರ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಮಧುಮೇಹದ ಚಿಕಿತ್ಸೆಯನ್ನು ವೈವಿಧ್ಯಮಯ ಜೀವನಶೈಲಿ, ಫಿನೋಟೈಪ್, ಪರಿಸರ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಂಶಗಳ ಆಧಾರದ ಮೇಲೆ ವೈಯಕ್ತೀಕರಿಸಬೇಕು. ಅವರ ಪ್ರಕಾರ ಮಕ್ಕಳು ೫ನೆಯ ತರಗತಿ ತಲುಪುವ ವೇಳೆಗಾಗಲೇ ಅವರಿಗೆ ದೈಹಿಕ ಚಟುವಟಿಕೆ ಮತ್ತು ಪೌಷ್ಟಿಕಾಂಶಕ್ಕೆ ಆದ್ಯತೆ ನೀಡಲು ಕಲಿಸಬೇಕು; ಮದುವೆ ಆಗಲಿರುವ ಯುವಜನಾಂಗದವರು ಸರಿಯಾದ ಜೀವನಶೈಲಿ ಮತ್ತು ಪೌಷ್ಟಿಕಾಂಶ ಪದ್ಧತಿಗಳ ಬಗ್ಗೆ ಕಿರು ಕೋರ್ಸ್ಗಳನ್ನು ಮಾಡಿ, ನಂತರದ ಜೀವನದಲ್ಲಿ ಅಳವಡಿಸಿಕೊಂಡು, ಇಡೀ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು.

ಎಲ್ಲಾ ದೇಶಗಳಲ್ಲಿಯೂ ಒಂದೇ ವಿಧಾನವು ಪರಿಣಾಮಕಾರಿಯಾಗದೇ ಇರಬಹುದು; ಆದರೂ ಪ್ರಾಥಮಿಕ ಅರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು, ರೋಗನಿರ್ಣಯ ವ್ಯವಸ್ಥೆ ಮತ್ತು ವೈದ್ಯರ ಕೌಶಲ್ಯವನ್ನು ಉತ್ತಮಗೊಳಿಸುವುದು, ಜೊತೆಗೆ, ಮಧುಮೇಹವನ್ನು ನಿಭಾಯಿಸುವುದರ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳಿಗೆ ತರಬೇತಿ ನೀಡುವ ಮೂಲಕ ಮಧುಮೇಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗದಿದ್ದರೂ, ಮಧುಮೇಹಿಗಳ ಸಂಖ್ಯೆಯನ್ನು ತಗ್ಗಿಸಬಹುದು.

ಲೇಖನ ಸರಣಿಯ ಕೊನೆಯ ಭಾಗವು, ಮಧುಮೇಹವನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯ ಪಾತ್ರದ ಮೇಲೆ ಕೇಂದ್ರೀಕೃತವಾಗಿದೆ. ಮಧುಮೇಹದ ಚಿಕಿತ್ಸೆಯು ದುಬಾರಿಯಾಗಿದ್ದು, ದಕ್ಷಿಣ ಏಷ್ಯಾದ ದೇಶಗಳಲ್ಲಿ ಅನೇಕರಿಗೆ ಇದು ಕೈಗೆಟಕುವುದಿಲ್ಲ. ಆದರೆ ಒಂದು ಸಿಹಿಸುದ್ದಿಯೆಂದರೆ, ಶಿಸ್ತಿನಿಂದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯವನ್ನು ನಿರ್ವಹಿಸಿಕೊಂಡರೆ ಮಧುಮೇಹವನ್ನು ತಡೆಗಟ್ಟಬಹುದಾಗಿದೆ. ಪ್ರಸವಪೂರ್ವ, ಶೈಶವಾವಸ್ಥೆ, ಬಾಲ್ಯ ಮತ್ತು ಹದಿಹರೆಯದ ಹಂತಗಳಲ್ಲಿ ಮಧುಮೇಹವನ್ನು ತಡೆಗಟ್ಟುವ ಸರ್ವಪ್ರಯತ್ನಗಳನ್ನು ಮಾಡಲೇಬೇಕು ಎನ್ನುತ್ತಾರೆ ಸಂಶೋಧಕರು.

ಈ ಪ್ರಮುಖ ಸವಾಲನ್ನು ಎದುರಿಸುವುದಕ್ಕೆ ಅತ್ಯಂತ ಸಮರ್ಥ ಮಾರ್ಗವೆಂದರೆ, ಸಮುದಾಯದ ಮಟ್ಟದಲ್ಲಿ ಸಾಮಾನ್ಯ ಜನರಿಗೆ ಮಧುಮೇಹ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಮತ್ತು ತರಬೇತಿ ನೀಡುವುದು ಎನ್ನುತ್ತಾರೆ ಸಂಶೋಧಕರು. ಇದರಲ್ಲಿ ಸರ್ಕಾರಗಳು ಗಮನಾರ್ಹ ಪಾತ್ರ ವಹಿಸಬೇಕಾಗಿದ್ದು, ಮಧುಮೇಹ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಅಗತ್ಯವಾದ ಹಣವನ್ನು ಒದಗಿಸಲೇಬೇಕಾಗಿದೆ.

ಡಾ. ಮಿಶ್ರಾರವರ ಪ್ರಕಾರ ಮಧುಮೇಹವು ಎಲ್ಲರನ್ನೂ ಕಾಡಬಹುದಾದರೂ ಕೆಳ ಮತ್ತು ಮಧ್ಯಮ ವರ್ಗದ ಜನರನ್ನು, ಜೊತೆಗೆ, ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಹಾಗಾಗಿ, ಮಧುಮೇಹವು ಸಾಂಕ್ರಾಮಿಕದಂತೆ ಬೆಳೆಯುವುದನ್ನು ತಡೆಯಲು ಈ ಜಾಗೃತಿ ಅಭಿಯಾನವು ಕನಿಷ್ಟಪಕ್ಷ ಒಂದು ದಶಕವಾದರೂ ನಿರಂತರವಾಗಿ ನಡೆಯಬೇಕು. ಆಗ ಮಾತ್ರ, ಮಧುಮೇಹದ ಕಬಂಧಬಾಹುಗಳಿಂದ ದಕ್ಷಿಣಏಷ್ಯಾಕ್ಕೆ ಮುಕ್ತಿ ಸಾಧ್ಯ.