ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಮುಂಗಾರಿನ ಜೊತೆ ಕಣ್ಣಾಮುಚ್ಚಾಲೆ ಆಡುವ ಮಿಕ್ರಿಲೆಟ್ಟ ಐಶಾನಿ!

ಬೆಂಗಳೂರು
19 Jun 2019
ಮುಂಗಾರಿನ ಜೊತೆ ಕಣ್ಣಾಮುಚ್ಚಾಲೆ ಆಡುವ ಮಿಕ್ರಿಲೆಟ್ಟ ಐಶಾನಿ!

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕಪ್ಪೆಗಳ ಸಾಮ್ರಾಜ್ಯ ಗೋಚರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮಳೆಗಾಲದಲ್ಲಿ ಎಷ್ಟೋ ಕಪ್ಪೆಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯತ್ತ ಮುಖ ಮಾಡುತ್ತವೆ. ಆದರೆ, ಇತ್ತೀಚೆಗಷ್ಟೇ, ಈಶಾನ್ಯ ಭಾರತದ, ಅಸ್ಸಾಂ ರಾಜ್ಯದ ಕಾಡುಗಳಲ್ಲಿ ಪತ್ತೆಯಾದ ಕಪ್ಪೆಯ ಹೊಸ ಪ್ರಭೇದವಾದ “ಮಿಕ್ರಿಲೆಟ್ಟ ಐಶಾನಿ” ಮುಂಗಾರು ಪ್ರಾರಂಭವಾಗುವ ಮುನ್ನವೇ ತನ್ನ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ನಂತರ ಮುಂದಿನ ಮಳೆಗಾಲದವರೆಗೆ ಕಾಣಿಸಿಕೊಳ್ಳುವುದಿಲ್ಲ!

ಇಂತಹ ಒಂದು ನುಣುಚಿಕೊಳ್ಳುವ ಕಪ್ಪೆಯನ್ನು ೬ ವರುಷಗಳ ಅವಿರತವಾದ ಸಂಶೋಧನೆಯ ನಂತರ ಅಸ್ಸಾಮಿನ ಕಾಡುಗಳಿಂದ, ದೆಹಲಿ ವಿಶ್ವವಿದ್ಯಾಲಯ, ಭಾರತೀಯ ವನ್ಯಜೀವಿ ಸಂಸ್ಥೆ, ಇಂಡೋನೇಷ್ಯಾ ವಿಜ್ಞಾನ ಸಂಸ್ಥೆ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರ ಒಂದು ತಂಡ ಪತ್ತೆ ಮಾಡಿದೆ. ಈ ಕಪ್ಪೆಯು ಅಸ್ಸಾಮಿನ ಕಾಚಾರ್ ಜಿಲ್ಲೆಯಲ್ಲಿ, ಜನವಸತಿ ಇರುವ ದ್ವಿತೀಯ ಶ್ರೇಣಿಯ ಅರಣ್ಯ ಪ್ರದೇಶಗಳಿಂದ ಪತ್ತೆ ಮಾಡಲಾಯಿತು.

ಇದರ ಹೆಸರು ಸಂಸ್ಕೃತ ಪದದ ‘ಐಶಾನಿ’, ಅಂದರೆ ಈಶಾನ್ಯ (North-east) ಎಂಬ ಪದದಿಂದ ಬಂದಿದೆ. ಇದರ ವೈಜ್ಞಾನಿಕ ನಾಮ ‘ಮಿಕ್ರಿಲೆಟ್ಟ ಐಶಾನಿ’ ಎಂದಾದರೆ, ಇದರ ಸಾಮಾನ್ಯ ಆಂಗ್ಲ ನಾಮ Northeast Indian Paddy Frog. ಇದು ಮಿಕ್ರಿಲೆಟ್ಟಾ ಎಂಬ ಗದ್ದೆಕಪ್ಪೆಗಳ ಕುಟುಂಬದ ಸದಸ್ಯ. ಈ ಕುಟುಂಬದ ಕಪ್ಪೆಗಳು ಆಗ್ನೇಯ ಏಷ್ಯಾ ದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ.

ಈ ಕಪ್ಪೆಯು ನೋಡಲು ಕೆಂಪು-ಕಂದು ಮಿಶ್ರಿತ ಬಣ್ಣಗಳಲ್ಲಿ ಇರುತ್ತದೆ, ಮತ್ತು ಕೇವಲ 2.2-2.8 ಸೇಂ.ಮೀ ಯಷ್ಟು ಇರುತ್ತದೆ.

“ಇದರ ವರ್ತನೆಯ ಬಗ್ಗೆ ಈವರೆಗೆ ಅಷ್ಟಾಗಿ ತಿಳಿದುಬಂದಿಲ್ಲ. ಇವು ಮುಂಗಾರಿಗೂ ಮುನ್ನವೇ, ಕೆಲವು ದಿವಸಗಳ ಮಟ್ಟಿಗೆ ಹೊರಬಂದು,  ಬೇಗನೆ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಿ, ನಂತರ ಕಣ್ಮರೆಯಾಗುತ್ತವೆ. ನಮ್ಮ 6 ವರುಷಗಳ ಸಂಶೋಧನಾ  ಅವಧಿಯಲ್ಲಿ, ನಾವು ಇದನ್ನು ಬೇರೆ ಋತುಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಲು ಸಾಧ್ಯವಾಗಲಿಲ್ಲ.” ಎಂದು ದೆಹಲಿ ವಿಶ್ವವಿದ್ಯಾಲಯದ ಪ್ರೊ. ಬಿಜು ನುಡಿಯುತ್ತಾರೆ.

ಇಂತಹ ಆವಿಷ್ಕಾರಗಳು ನಮ್ಮ ಭೂಮಿಯ ಜೈವಿಕ-ಭೌಗೋಳಿಕ ಅನೇಕ ಪ್ರಶ್ನೆಗಳನ್ನು ಉತ್ತರಾರಿಸಬಲ್ಲವು, ಹಾಗೆಯೇ, ಈ ಕಪ್ಪೆಗಳು ಪುರಾತನ ಕಾಲದಿಂದ ಹೇಗೆ ವಿಕಾಸನಗೊಂಡಿವೆ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಬಹುದು!

Kannada