ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ನಾವು ಭಾರತೀಯರು ಎಲ್ಲಿಂದ ಬಂದವರು?

Read time: 1 min
ಬೆಂಗಳೂರು
20 Nov 2019
ನಾವು ಭಾರತೀಯರು ಎಲ್ಲಿಂದ ಬಂದವರು?

ನಾವೆಲ್ಲರೂ ಸಿಂಧೂ ನಾಗರಿಕತೆಯ ಬಗ್ಗೆ ಕೇಳಿದ್ದೇವೆ. ಸುಮಾರು ಕ್ರಿಸ್ತ ಪೂರ್ವ ಮೂರನೇ ಸಹಸ್ರಮಾನದ ಅವಧಿಯಲ್ಲಿ ಈ ಪುರಾತನ ಕಂಚಿನ ಯುಗದ ನಾಗರಿಕತೆಯು, ವಾಯುವ್ಯ ಏಷ್ಯಾದಲ್ಲಿ ಅಭಿವೃದ್ಧಿ ಹೊಂದಿತು. ಈ ನಾಗರಿಕತೆಯು ಉತ್ತಮವಾದ ಹಗೇವು (ಧಾನ್ಯಾಗಾರ)ಗಳು, ಒಳಚರಂಡಿ ವ್ಯವಸ್ಥೆ ಮತ್ತು ವ್ಯವಸ್ಥಿತವಾಗಿ ನಿರ್ಮಿಸಲಾಗಿದ್ದ ನಗರಗಳಾದ ಹರಪ್ಪಾ ಮತ್ತು ಮೊಹೆಂಜೊದಾರೊಗಳಿಗೆ ಪ್ರಸಿದ್ಧವಾಗಿದೆ. ಇದರ ಅಭಿವೃದ್ಧಿ ಮತ್ತು ಅವನತಿಗಳ ಬಗ್ಗೆ ವಿಸ್ತಾರವಾಗಿ ಗೊತ್ತಿಲ್ಲದಿದ್ದರೂ, ಇದರ ಕುರಿತಾದ ಅನೇಕ ಸಿದ್ಧಾಂತಗಳಿವೆ. ಈ ಕಾರಣಕ್ಕಾಗಿ ಇತಿಹಾಸಕಾರರು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಿಂಧು ಕಣಿವೆಯ ಜನರು ಮತ್ತು ಅವರ ಉತ್ತರಾಧಿಕಾರಿಗಳ ಜೀವನದ ಹಲವು ಆಯಾಮಗಳು ರಹಸ್ಯವಾಗಿಯೇ ಉಳಿದುಹೋಗಿವೆ.

ಸೈನ್ಸ್’ ಮತ್ತು ‘ಸೆಲ್’ ಎಂಬ ಎರಡು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾದ ಹೊಸ ಅಧ್ಯಯನಗಳ ಪ್ರಕಾರ, ಕೆಲವು ಭಾರತೀಯರನ್ನೂ ಒಳಗೊಂಡ ಅಂತರಾಷ್ಟ್ರೀಯ ಸಂಶೋಧಕರ ಒಕ್ಕೂಟವು ಈಗಿನ ಏಷ್ಯಾದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿರುವ ಜನರ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದೆ. ಅವರು ಈಗ ಲಭ್ಯವಿರುವ ಸುಧಾರಿತ ತಳೀಯ ವಿಜ್ಞಾನದ ಸಹಾಯ ಪಡೆದು, ಅಳಿದುಳಿದ ಪಳೆಯುಳಿಕೆಯ ಒಳಗಿನಿಂದ ಡಿ.ಎನ್.ಎ ಸಂಗ್ರಹಿಸಿ,  ಸಿಂಧೂ ನಾಗರಿಕತೆಯ ಜನರನ್ನೂ ಒಳಗೊಂಡಂತೆ ಹಲವು ಪ್ರಾಚೀನ ನಾಗರಿಕತೆಗಳ ಸದಸ್ಯರ ಮೂಲದ ಬಗ್ಗೆ, ಜೀವನದ ಬಗ್ಗೆ ವಿಶ್ಲೇಷಿಸಿದ್ದಾರೆ.

ದಕ್ಷಿಣ ಮತ್ತು ಮಧ್ಯ ಏಷ್ಯಾ ಮಾನವ ಜನಾಂಗದ ರಚನೆ" ಎಂಬ ಅಧ್ಯಯನದಲ್ಲಿ, ಸಂಶೋಧಕರು ಸಿಂಧೂ ನಾಗರಿಕತೆಯ ಜನ  ಯಾವ ಭಾಗದಿಂದ ಬಂದವರು ಮತ್ತು ಈಗಿನ ಭಾರತೀಯರ ಪೂರ್ವಿಕರು ಯಾರು ಎಂಬುದನ್ನು ತನಿಖೆ ಮಾಡಿದ್ದಾರೆ. ಸುಮಾರು ೫೨೩ ಮಧ್ಯ ಹಾಗೂ ದಕ್ಷಿಣ ಏಷ್ಯಾದ ಪ್ರಾಚೀನ ಜನರ ಅನುವಂಶಿಕ (ಡಿಎನ್ಎ) ಮಾಹಿತಿಯನ್ನು ಆಧರಿಸಿ ಈಗಿನ ದಕ್ಷಿಣ ಏಷ್ಯಾದ ಜನರ ಮೂಲವನ್ನು ಸಮಗ್ರವಾಗಿ ಚಿತ್ರಿಸಿದ್ದಾರೆ.

ಈ ಅಧ್ಯಯನದ ಪ್ರಕಾರ, ಸಿಂಧೂ ಕಣಿವೆ ನಾಗರೀಕತೆಯ ಜನರು, ಫಲವತ್ತಾದ ಅರ್ಧಚಂದ್ರಾಕಾರದಂತೆ ಇರುವ ಪ್ರದೇಶದ (ಈಗಿನ ಪ್ಯಾಲೆಸ್ಟೈನ್, ಇರಾನ್, ಇರಾಕ್ ಮುಂತಾದ ಮಧ್ಯ-ಪ್ರಾಚ್ಯ ದೇಶಗಳಿರುವ ಸ್ಥಳ) ರೈತರ ಅನುವಂಶಿಕರಲ್ಲ. ಬದಲಿಗೆ, ಇರಾನ್ ಗೆ ಸಂಬಂಧಿಸಿದ ಇನ್ನೊಂದು ಬೇಟೆಗಾರ ಜನಾಂಗವೇ ಇವರ ಪೂರ್ವಜರು ಎಂದು ಕಂಡುಕೊಂಡಿದ್ದಾರೆ.

"ನಮಗೆ ಈ ಜನರು ಯಾವ ಪ್ರದೇಶದಲ್ಲಿ ಬದುಕಿದ್ದರು ಎನ್ನುವುದು ತಿಳಿದಿಲ್ಲ. ಈ ಪ್ರದೇಶ ದಕ್ಷಿಣ ಏಷ್ಯಾದ ಒಂದು ಭಾಗ ಅಥವಾ ಇನ್ನೂ ಅಧ್ಯಯನಕ್ಕೆ ಒಳಪಡದ ಇರಾನಿನ ಪ್ರಸ್ಥಭೂಮಿಯಲ್ಲಿನ(ಎತ್ತರದ ಮೈದಾನದಲ್ಲಿ) ಒಂದು ಭಾಗವಾಗಿರಬಹುದು" ಎಂದು ಡಾ.   ವಾಘೀಶ್ ನರಸಿಂಹನ್ ಅವರು ರಿಸರ್ಚ್ ಮ್ಯಾಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಡಾ. ನರಸಿಂಹನ್ ಅವರು ಅಮೆರಿಕಾದ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ತಳೀಯ ವಿಜ್ಞಾನ ವಿಭಾಗದ ಸಂಶೋಧಕರಾಗಿದ್ದು ಈ ಎರಡು ಅಧ್ಯಯನಗಳ ಮುಂದಾಳತ್ವವನ್ನು ವಹಿಸಿದ್ದಾರೆ.

ಚಿತ್ರ 1: ಸಿಂಧೂ ಕಣಿವೆ ನಾಗರಿಕತೆಯ ಭೌಗೋಳಿಕ ವ್ಯಾಪ್ತಿ. [ಛಾಯಾ ಚಿತ್ರ ಕೃಪೆ : ವಸಂತ್ ಶಿಂಧೆ]

ಈಗಿನ ದಕ್ಷಿಣ ಭಾರತದ ಜನರಲ್ಲಿ ಬಹುಪಾಲು ಜನರ ಪೂರ್ವಜರು ಸಿಂಧೂ ಕಣಿವೆಯ ನಾಗರಿಕತೆಯವರು. ಸುಮಾರು ಕ್ರಿಸ್ತ ಪೂರ್ವ ೨೦೦೦ರಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಅವನತಿಯ ನಂತರ ಇವರ ಸಮುದಾಯವು ಎರಡು ಪ್ರಮುಖ ಗುಂಪುಗಳಾಗಿ ವಿಭಜಿಸಲಾಗಿ, ಆ ಗುಂಪುಗಳಿಗೆ ಇತರ ಜನರೂ ಸೇರಿ ಹೊಸ ಜನಸಮುದಾಯ ರಚನೆಯಾಯಿತು.

ಮೊದಲನೆಯ ಗುಂಪು ದಕ್ಷಿಣ ಭಾರತದ ಪೂರ್ವಜರದ್ದು. ಇವರು ಸಿಂಧೂ ನಾಗರಿಕತೆಯ ಜನರು ಮತ್ತು ದಕ್ಷಿಣ ಭಾರತದ ಪ್ರಾಚೀನ ಜನರ ಗುಂಪಿನ ಮುಂದುವರಿಕೆ. ಎರಡನೆಯ ಗುಂಪು ಉತ್ತರ ಭಾರತದ ಪೂರ್ವಜರದ್ದು. ಇವರು ಸಿಂಧೂ ನಾಗರಿಕತೆಯ ಜನರು ಮತ್ತು ಯುರೇಶಿಯನ್ ಹುಲ್ಲುಗಾವಲಿನಿಂದ ಬಂದ ದನಗಾಹಿ, ಕುರಿಗಾಹಿ ಜನರ ಗುಂಪಿನ ಮುಂದುವರಿಕೆ. ಈ ಹುಲ್ಲುಗಾವಲಿನ ದನಗಾಹಿಗಳು, ಈಗಿನ ಬಲ್ಗೇರಿಯಾದ ಪಶ್ಚಿಮದಿಂದ ಮಂಚೂರಿಯಾದ ಪೂರ್ವದವರೆಗೂ ಹಬ್ಬಿದ್ದ ಸಮಶೀತೋಷ್ಣ ವಲಯದ ಅಲೆಮಾರಿಗಳು. ಈ ಹುಲ್ಲುಗಾವಲಿನ ಮನೆತನಗಳು ಕ್ರಿಸ್ತ ಪೂರ್ವ ಸುಮಾರು ೧೯೦೦-೧೫೦೦ಕ್ಕೆ ದಕ್ಷಿಣ ಏಷ್ಯಾಕ್ಕೆ ಬಂದವು.

ಈಗ ನಾವು ಕಾಣುವ ಭಾರತದ ಜನರು,  ದಕ್ಷಿಣ ಭಾರತದ ಪೂರ್ವಜರು ಮತ್ತು ಉತ್ತರ ಭಾರತದ ಪೂರ್ವಜರು ಎಂಬ ಎರಡು ಮೂಲದವರು.

ಈ ಅಧ್ಯಯನವು, ಹೇಗೆ ಹುಲ್ಲುಗಾವಲಿನ ದನಗಾಹಿಗಳು ದಕ್ಷಿಣ ಏಷ್ಯಾದೆಡೆಗೆ ಹಾದಿ ಬೆಳೆಸಿದರು ಎಂಬುದರ ಮೇಲೂ ಬೆಳಕು ಚೆಲ್ಲುತ್ತದೆ. ಸಂಶೋಧಕರು ವೈ-ಕ್ರೋಮೋಸೋಮ್ (ವರ್ಣತಂತು) ನ ಆನುವಂಶಿಕತೆಯನ್ನು ಗಮನಿಸಿದರು. (ವೈ-ಕ್ರೋಮೋಸೋಮ್ ಕೇವಲ ಗಂಡು ಜೀವಿಗಳಲ್ಲಿ ಮಾತ್ರ ಇರುವುದು ಮತ್ತು ತಂದೆಯಿಂದ ಮಗನಿಗೆ ವರ್ಗಾಯಿಸಲ್ಪಡುವುದು). ಅವರು ವೈ-ಕ್ರೋಮೋಸೋಮ್ ಮತ್ತು ಲಿಂಗೇತರ ವರ್ಣತಂತುವನ್ನು ವಿಶ್ಲೇಷಿಸಿ ದಕ್ಷಿಣ ಏಷ್ಯಾದಲ್ಲಿ ಈ ಹುಲ್ಲುಗಾವಲಿನ ಮನೆತನಗಳು ಪರಿಚಯವಾದದ್ದು ಪ್ರಧಾನವಾಗಿ ಪುರುಷರಿಂದಲೇ ಎಂಬುದನ್ನು ಕಂಡುಕೊಂಡರು.

ಈ ಸಂಶೋಧನೆಗಳ ಗಮನಾರ್ಹ ಪರಿಣಾಮವೆಂದರೆ, ಇಂಡೋ-ಯುರೋಪಿಯನ್ ಭಾಷಾ ಕುಟುಂಬಗಳ ಹಬ್ಬುವಿಕೆಯನ್ನು ವಿವರವಾಗಿ ತಿಳಿಯಪಡಿಸುತ್ತದೆ.  ಈ ಕುಟುಂಬಗಳಲ್ಲಿ ಲ್ಯಾಟಿನ್‌‌ನಿಂದ ಬಂದ ಭಾಷೆಗಳಾದ ಸ್ಪ್ಯಾನಿಷ್ ಹಾಗೂ ಸಂಸ್ಕೃತದಿಂದ ಬಂದ ಭಾಷೆಗಳಾದ ಹಿಂದಿ ಮತ್ತು ಇಂಗ್ಲಿಷ್‌ಗಳೂ ಒಳಗೊಂಡಿವೆ.

"ಕಂಚಿನ ಯುಗದಲ್ಲಿ ಯುರೋಪ್ ಮತ್ತು ದಕ್ಷಿಣ ಏಷ್ಯಾಕ್ಕೆ ಜನರ ಗಮನಾರ್ಹ ವಲಸೆಯ ಬಗ್ಗೆ ಪುರಾವೆಗಳನ್ನು ನಮ್ಮ ಅಧ್ಯಯನದ ಫಲಿತಾಂಶಗಳು ಒದಗಿಸುತ್ತವೆ; ಅವು ಕೆಲವು ಇಂಡೋ-ಯುರೋಪಿಯನ್ ಭಾಷೆಗಳು ಇತರ ಭಾಷೆಗಳೊಂದಿಗೆ, ಭಾಷಿಕರೊಂದಿಗೆ ಹಂಚಿಕೆಯಾದ ವಿದ್ಯಮಾನಗಳನ್ನೂ ಪ್ರತಿಬಿಂಬಿಸುತ್ತವೆ. ವಿವಿಧ ಇಂಡೋ ಯುರೋಪಿಯನ್ ಭಾಷಾ ಕುಟುಂಬಗಳ ನಿರ್ದಿಷ್ಟ ಹಂಚಿಕೆಗೆ  ಸಮಾನಾಂತರವಾಗಿ ಕಂಚಿನ ಯುಗದಲ್ಲಿ ಹುಲ್ಲುಗಾವಲಿನ ದನಗಾಹಿಗಳಿಗೆ ಸಂಬಂಧಿತ ಮನೆತನವೂ ಯುರೇಷಿಯಾದಲ್ಲಿ ಹಂಚಿಕೆಯಾಗಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ." ಎಂದು ಡಾ.ನರಸಿಂಹನ್ ವಿವರಿಸುತ್ತಾರೆ.

ಕುತೂಹಲಕಾರಿ ವಿಷಯವೆಂದರೆ, ಈ ಹುಲ್ಲುಗಾವಲಿನ ಮನೆತನಗಳಲ್ಲಿ ಹೆಚ್ಚಾಗಿ ಬ್ರಾಹ್ಮಣ ಹಾಗೂ ಭೂಮಿಹಾರ ಗುಂಪುಗಳನ್ನು ಕಾಣಬಹುದು. ಬ್ರಾಹ್ಮಣರು ಸಂಸ್ಕೃತದಲ್ಲಿ ಪ್ರಾರ್ಥನೆ ಮಾಡುವ ಸಂಪ್ರದಾಯದ ಪಾಲಕರಾಗಿದ್ದರಿಂದ, ಉನ್ನತ ಹುಲ್ಲುಗಾವಲಿನ ಮನೆತನಗಳು ಕಂಚಿನ ಯುಗದ  ಹುಲ್ಲುಗಾವಲಿನ ಜನರ ಮೂಲವನ್ನಷ್ಟೇ ಅಲ್ಲದೆ ದಕ್ಷಿಣ ಏಷ್ಯಾದ ಇಂಡೋ-ಯುರೋಪಿಯನ್ ಭಾಷೆಗಳ ಮೂಲವನ್ನೂ ಸೂಚಿಸುತ್ತದೆ.

ಈ ಎರಡು ಅಧ್ಯಯನಗಳು ನಮಗೆ ಸಮಂಜಸವಾದ ನಿಖರ ಕಾಲಗಣನೆಯನ್ನು ಒದಗಿಸಿವೆ. ಇದಕ್ಕಾಗಿ ನಾವು ರೇಡಿಯೋ ಕಾರ್ಬನ್ ಡೇಟಿಂಗ್‌ಗೆ ಧನ್ಯವಾದಗಳನ್ನು ತಿಳಿಸಬೇಕು. ಇದು ವಿಕಿರಣಶೀಲ ಇಂಗಾಲದ ಸಮಸ್ಥಾನಿಗಳನ್ನು (Isotopes) ಬಳಸುವುದರ ಮೂಲಕ ಒಂದು ವಸ್ತುವಿನ ವಯಸ್ಸನ್ನು ನಿರ್ಧರಿಸುವ ತಂತ್ರವಾಗಿದೆ.ವಿಕಿರಣಶೀಲ ಇಂಗಾಲ(ಸಿ -14) ಮತ್ತು ಸಾಮಾನ್ಯ ಇಂಗಾಲದ (ಸಿ -12) ಅನುಪಾತವು ಒಂದು ಸಾವಯವ ವಸ್ತು ಎಷ್ಟು ದಿನಗಳ ಹಿಂದೆ ಸತ್ತಿದೆ ಎಂದು ಹೇಳಬಹುದು. ಏಕೆಂದರೆ, ಅದು ಸತ್ತ ನಂತರ ಪರಿಸರದೊಡನೆ ತನ್ನ ಇಂಗಾಲದ ವಿನಿಮಯವನ್ನು ಸಂಪೂರ್ಣವಾಗಿ ನಿಲ್ಲಿಸಿರುತ್ತದೆ.

"ನಮ್ಮ ಅಧ್ಯಯನದ ಪ್ರಮುಖ ಫಲಿತಾಂಶವೆಂದರೆ, ಪ್ರಾಚೀನ ಡಿಎನ್ಎ ಅಂಶಗಳು ಮತ್ತು ಪುರಾತತ್ತ್ವ ಸಂದರ್ಭಗಳ ಮಾದರಿಗಳ ಒತ್ತಾಸೆಯನ್ನು ಪಡೆದು, ೨೬೯ ಹೊಸ ರೇಡಿಯೋ ಕಾರ್ಬನ್ ದಿನಾಂಕಗಳನ್ನು ನೇರವಾಗಿ ಮಾನವನ ಮೂಳೆಯ ಆಧಾರದ ಮೇಲೆ ವರದಿ ಮಾಡಿರುವುದು." ಎನ್ನುತ್ತಾರೆ ಡಾ.ನರಸಿಂಹನ್.

ಈ ರೀತಿಯಲ್ಲಿ ಪ್ರಾಚೀನ ಡಿಎನ್ಎ ಮಾದರಿಗಳನ್ನು ಬಳಸಿ ಇಂದಿನ ಭಾರತೀಯರ ಇತಿಹಾಸವನ್ನು ಚಿತ್ರಿಸಿರುವುದು ಇದೇ ಮೊದಲನೆಯ ಬಾರಿ.

"ಪ್ರಪಂಚದ ಈ ಭಾಗಗಳಲ್ಲಿ ಇಲ್ಲಿಯವರೆಗೂ ಇಂತಹ ದಿನಾಂಕಗಳ ಕೊರತೆಯಿದ್ದು, ಇಲ್ಲಿ ಈ ಹೊಸ ಮಾಹಿತಿಯು ಈ ವಿಶಾಲ ಪ್ರದೇಶದ ವಿವಿಧ ಭಾಗಗಳ ಕಾಲಗಣನೆಯನ್ನು ಕ್ರೂಢೀಕರಿಸಲು ಮತ್ತು  ಪುರಾತತ್ವ ವಿಜ್ಞಾನದ ಹಾಗೂ ತಳೀಯ ವಿಜ್ಞಾನದ ತಳಹದಿಯ ಮೇಲೆ ಅವುಗಳನ್ನು ವಿವರಿಸಲು ನಮಗೆ ಸಹಾಯ ಮಾಡುತ್ತದೆ" ಎನ್ನುತ್ತಾರೆ ಡಾ.ನರಸಿಂಹನ್.

 

ಚಿತ್ರ 2: ಪ್ರಾಚೀನ ಡಿಎನ್‌ಎಯನ್ನು ನೀಡುವ ಅಸ್ಥಿಪಂಜರದ ತಲೆಯ ಬಳಿ ಇರಿಸಿರುವ ಕೆಂಪು ಗೋಲಾಕಾರದ ಮಡಕೆ [ಛಾಯಾ ಚಿತ್ರ ಕೃಪೆ: ವಸಂತ್ ಶಿಂಧೆ]

 

"ಪ್ರಾಚೀನ ಹರಪ್ಪರ ವಂಶವಾಹಿಗಳಲ್ಲಿ ಹುಲ್ಲುಗಾವಲಿನ ದನಗಾಹಿಗಳು ಅಥವಾ ಇರಾನಿನ ರೈತರ ಮನೆತನಗಳ ಮೂಲವಿಲ್ಲ" ಎಂಬ ಹೆಸರಿನ ಇನ್ನೊಂದು ಅಧ್ಯಯನದಲ್ಲಿ, ಸಂಶೋಧಕರು ಇಂದಿನ ಹರಿಯಾಣಾದ ಭಾಗವಾಗಿರುವ ರಾಖಿಗಡಿ ನಗರದ ಸ್ಮಶಾನದಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳಿಂದ ಪಡೆದ ಡಿಎನ್ಎ‌ಯನ್ನು ವಿಶ್ಲೇಷಿಸಿದ್ದಾರೆ. ಈ ರಾಖಿಗಡಿಯು ಸಿಂಧೂ ನಾಗರಿಕತೆಯ ಭಾಗವಾಗಿದ್ದ ದೊಡ್ಡ ನಗರಗಳಲ್ಲಿ ಒಂದಾಗಿತ್ತು. ಈ  ಸಂಶೋಧನೆಯು, ದಕ್ಷಿಣ ಏಷ್ಯಾದಲ್ಲಿ ಕೃಷಿಯ ಮೂಲದ ಬಗ್ಗೆ ಒಳನೋಟವನ್ನು ಒದಗಿಸುತ್ತದೆ.

ಮಾನವನ ಇತಿಹಾಸದಲ್ಲಿ, ಮಾನವ ಅಲೆಮಾರಿ ಬೇಟೆಗಾರರಿಂದ ಕೃಷಿಕರಾಗಿ ನೆಲೆಗೊಂಡಿದ್ದು ಅತ್ಯಂತ ಖಚಿತವಾದ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಈ ಬದಲಾವಣೆ ಕೇವಲ ತಾಂತ್ರಿಕ ಪ್ರಗತಿಯ ಮೇಲೆ ಮಾತ್ರವಲ್ಲದೆ ಜನರು ಹೇಗೆ ವಾಸಿಸುತ್ತಿದ್ದರು ಮತ್ತು ಪರಸ್ಪರ ಸಂಬಂಧ ಹೊಂದಿದ್ದರು ಎಂಬುದರ ಮೇಲೂ ಅವಲಂಬಿತವಾಗಿದೆ.

ಕೃಷಿಯು, ಫಲವತ್ತಾದ ಅರ್ಧಚಂದ್ರಾಕಾರದ ಪ್ರಸ್ಥಭೂಮಿಯಲ್ಲಿ ಹುಟ್ಟಿಕೊಂಡಿದೆ ಎಂದು ತಿಳಿದುಬಂದಿದೆ. ಈ ಅರ್ಧಚಂದ್ರಾಕಾರದ ಪ್ರದೇಶವು ಮಧ್ಯಪ್ರಾಚ್ಯದ ಮೆಡಿಟರೇನಿಯನ್ ಸಮುದ್ರದಿಂದ ಪರ್ಷಿಯನ್ ಕೊಲ್ಲಿಯವರೆಗಿನ ಅರ್ಧವೃತ್ತಾಕಾರದ ಸ್ಥಳ. ಆದರೆ ಅಲ್ಲಿಂದ ಕೃಷಿಯು ಹೇಗೆ ವಿಶ್ವದ ಇತರ ಭಾಗಗಳಿಗೆ ಹರಡಿತು? ಇದು ಮಾನವನ ಬೃಹತ್ ಪ್ರಮಾಣದ  ವಲಸೆಯ ಮೂಲಕವೇ ಅಥವಾ ಸ್ವತಂತ್ರವಾಗಿ ವಿವಿಧೆಡೆ ಅಭಿವೃದ್ಧಿ ಹೊಂದಿತೇ? ಎಂದು ಇತಿಹಾಸಕಾರರು ಯೋಚಿಸುತ್ತಲೇ ಇದ್ದಾರೆ.

ಸಿಂಧೂ ಕಣಿವೆಯ ವ್ಯಕ್ತಿಯ ಡಿಎನ್‌ಎ ವಿಶ್ಲೇಷಣೆಯು ಫಲವತ್ತಾದ ಅರ್ಧಚಂದ್ರಾಕಾರ ಪ್ರಸ್ಥಭೂಮಿಯ ರೈತರೊಂದಿಗೆ ಯಾವುದೇ ಪೂರ್ವಜ ಸಂಬಂಧವನ್ನೂ ಸೂಚಿಸುವುದಿಲ್ಲ.

"ಹತ್ತಿರದ ಪೂರ್ವ ಅಥವಾ ಪಶ್ಚಿಮ ಇರಾನಿನ ಜನರ ಗಮನಾರ್ಹ ವಲಸೆಯು, ದಕ್ಷಿಣ ಏಷ್ಯಾದ ಕೃಷಿಯ ಆಗಮನ/ಉಗಮದಲ್ಲಿ ಯಾವುದೇ ಮಧ್ಯಸ್ಥಿಕೆ ವಹಿಸಿಲ್ಲವೆಂದು ನಮ್ಮ ಫಲಿತಾಂಶಗಳು ಸೂಚಿಸುತ್ತವೆ" ಎಂದು ಪ್ರೊ.ನರಸಿಂಹನ್ ಹೇಳುತ್ತಾರೆ.

ಈ ಅಧ್ಯಯನವು ಹುಲ್ಲಗಾವಲಿನ ದನಗಾಹಿಗಳ ವಂಶದ ಬಗ್ಗೆ ಯಾವುದೇ ಪುರಾವೆಗಳನ್ನೂ ತೋರಿಸುವುದಿಲ್ಲ; ಹುಲ್ಲುಗಾವಲಿನ ದನಗಾಹಿಗಳು ದಕ್ಷಿಣ ಏಷ್ಯಾಕ್ಕೆ ಬಹಳ ಕಾಲದ ನಂತರ ಬಂದರು ಎಂದು ಇದರ ಅರ್ಥ.

ಹಾಗಾದರೆ, ದಕ್ಷಿಣ ಏಷ್ಯಾದಲ್ಲಿ ಕೃಷಿಯನ್ನು ಸ್ವತಂತ್ರವಾಗಿ ಕಂಡುಹಿಡಿಯಲಾಯಿತೇ?

"ನಾವು ಸಂಗ್ರಹಿಸಿದ ಮಾಹಿತಿಯು ಈ ಸನ್ನಿವೇಶಕ್ಕೆ ನಿಖರವಾಗಿ ಹೊಂದಿಕೆಯಾಗಬಹುದಾದರೂ, ಸಾಂಸ್ಕೃತಿಕ ಪ್ರಸರಣದ ಮೂಲಕ ತಮ್ಮ ನೆರೆಹೊರೆಯವರಿಂದ ಕೃಷಿ ತಂತ್ರಜ್ಞಾನವನ್ನು ಒಬ್ಬರಿಂದ ಒಬ್ಬರು ಕಲಿತಿರುವ ಜನರೊಂದಿಗೂ ನಮ್ಮ ಅಧ್ಯಯನದ ಮಾಹಿತಿಯು ಹೊಂದಿಕೆಯಾಗುತ್ತದೆ." ಎಂದು ಪ್ರೊಫೆಸರ್ ನರಸಿಂಹನ್ ವಿವರಿಸುತ್ತಾರೆ.

ಸಿಂಧೂ ಕಣಿವೆಯಲ್ಲಿ ಕೃಷಿ ಹೇಗೆ ಅಭಿವೃದ್ಧಿ ಹೊಂದಿದೆಯೆಂದು ನಿರ್ಣಾಯಕವಾಗಿ ಸಾಬೀತುಪಡಿಸಲು ಈ ಪ್ರದೇಶಗಳಿಂದ ಮಾನವರು ಮತ್ತು ಸಾಕುಪ್ರಾಣಿಗಳ ಹೆಚ್ಚುವರಿ ಡಿಎನ್‌ಎ ವಿಶ್ಲೇಷಣೆಯ ಅಗತ್ಯವನ್ನು ಅವರು ಸೂಚಿಸುತ್ತಾರೆ.