ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಪಶ್ಚಿಮ ಘಟ್ಟಗಳ ಕಪ್ಪೆಗಳನ್ನು ನಾಶಮಾಡುವ ಮಾರಣಾಂತಿಕ ಶಿಲೀಂಧ್ರಗಳು

ಬೆಂಗಳೂರು
15 Sep 2018

ಮಳೆಗಾಲ ಬಂತೆಂದರೆ ಸಾಕು, ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳಲ್ಲಿ ಕಪ್ಪೆಗಳ ಕೂಗು ಅನುರಣಿಸುತ್ತದೆ! ನಿಲ್ಲದ ಮಳೆಯಲ್ಲಿ, ಕಪ್ಪೆಗಳು ಸುಂದರ ಸಮಯವನ್ನು ಅನುಭವಿಸುತ್ತಿವೆ ಎಂದು ನೀವು ಭಾವಿಸಿದರೆ, ಅದು ತಪ್ಪಿರಬಹುದು. ಅವು ತಮ್ಮ ಅಸ್ತಿತ್ವವನ್ನು ನಿರ್ಧರಿಸುವ ತೀವ್ರವಾದ ಹೋರಾಟದಲ್ಲಿ ಭಾಗಿಯಾಗಿರುವ ಸಾಧ್ಯತೆಯೇ ಹೆಚ್ಚು! ಇಲ್ಲಿ ಎದುರಾಳಿ ಕಪ್ಪೆಯು ಪರಭಕ್ಷಕ ಅಲ್ಲ, ಹಾಗಾಗಿ ಸೋತ ಕಪ್ಪೆಯು ಸಾಯದೇ ಇರಬಹುದು; ಆದರೆ ಬಿ.ಡಿ. ಎಂದು ಕರೆಯಲ್ಪಡುವ ‘ಬ್ಯಾಟ್ರಾಕೊಖೈಟ್ರಿಯಮ್ ಡೆಂಡ್ರೊಬಾಟಿಡಿಸ್’ ಎಂಬ ಶಿಲೀಂಧ್ರವು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ ಮತ್ತು ಕಪ್ಪೆಗಳನ್ನು ಸಂಕಷ್ಟಕ್ಕೆ ನೂಕುತ್ತದೆ ಎಂದು ತಿಳಿದುಬಂದಿದೆ.

ಈ ರೋಗಕಾರಕ ಶಿಲೀಂಧ್ರವು ಜಾಗತಿಕವಾಗಿ ಉಭಯಚರಗಳಲ್ಲಿ ‘ಖೈಟ್ರಿಡಿಯೋಮೈಕೋಸಿಸ್’ ಎಂಬ ಮಾರಣಾಂತಿಕ ಸೋಂಕನ್ನು ಉಂಟುಮಾಡುತ್ತದೆ. ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿನ ಬಂಡೆಗಳಿಂದಾವೃತವಾದ ಪ್ರಸ್ಥಭೂಮಿಗಳಲ್ಲಿ ‘ಬ್ಯಾಟ್ರಾಕೊಖೈಟ್ರಿಯಮ್ ಡೆಂಡ್ರೊಬಾಟಿಡಿಸ್’ನ ಪ್ರಭುತ್ವವನ್ನು ಶೋಧಿಸಿದ್ದಾರೆ.

ಪ್ರಪಂಚದಾದ್ಯಂತ ಕಪ್ಪೆಗಳ ಮರಣಕ್ಕೆ ‘ಖೈಟ್ರಿಡಿಯೋಮೈಕೋಸಿಸ್’ ಒಂದು ಪ್ರಮುಖ ಕಾರಣವಾಗಿದ್ದು, ಕಪ್ಪೆಗಳ ಸಂಭಾವ್ಯ ಅಳಿವಿನೊಂದಿಗೆ ಈ ಸೋಂಕು ಸಂಬಂಧ ಹೊಂದಿದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ಪನಾಮಾದ ಚಿನ್ನದ ಕಪ್ಪೆ (Panamanian Golden Frog); ಪನಾಮಾಕ್ಕೆ ಸ್ಥಳೀಯವಾಗಿದ್ದ ಈ ಕಪ್ಪೆಯು ೨೦೦೭ರಿಂದ ತನ್ನ ನೈಸರ್ಗಿಕ ಆವಾಸಸ್ಥಾನದಲ್ಲಿ ಕಂಡುಬಂದಿಲ್ಲ, ಅಂದರೆ, ಅದರ ಸಂತತಿ ಅಳಿದಿದೆ ಎನ್ನಬಹುದು. ಪಶ್ಚಿಮ ಘಟ್ಟಗಳಲ್ಲಿ ೨೦೧೧ರಿಂದ ಬಿ.ಡಿ.ಯ ಅಸ್ತಿತ್ವವನ್ನು ದಾಖಲಿಸಲಾಗಿದೆ ಮತ್ತು ೨೦೧೩ ರಲ್ಲಿ ಪಶ್ಚಿಮಘಟ್ಟಗಳ ಉತ್ತರ ಭಾಗದಿಂದ ‘ಖೈಟ್ರಿಡಿಯೋಮೈಕೋಸಿಸ್’ನ ಮೊದಲ ಪ್ರಕರಣ ವರದಿಯಾಗಿದೆ. ರಾಯಲ್ ಸೊಸೈಟಿ ಓಪನ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ, ಸಂಪರ್ಕ ಹಾಗೂ ಹವಾಮಾನದಲ್ಲಿ ವ್ಯತ್ಯಾಸಗಳನ್ನು ಹೊಂದಿರುವ ಮತ್ತು ಇದೀಗ ಕೃಷಿಯ ಹಾಗೂ ಪ್ರವಾಸೋದ್ಯಮದ ಪರಿಣಾಮಗಳಿಗೆ ಒಳಪಟ್ಟಿರುವ ಇಲ್ಲಿನ ಪರಿಸರ ವ್ಯವಸ್ಥೆಯಲ್ಲಿ, ಬಿ.ಡಿ.ಯ ಹರಡುವಿಕೆಗೆ ಕಾರಣವಾಗುವ ಅಂಶಗಳನ್ನು ಸಂಶೋಧಕರು ಪರಿಶೋಧಿಸಿದ್ದಾರೆ.
 
ಈ ಅಧ್ಯಯನವು ಕಂಡುಕೊಂಡಂತೆ, ಹೀಗೆ ಪರೀಕ್ಷಿಸಲಾದ ಕಪ್ಪೆಗಳಲ್ಲಿ  ಶೇಖಡಾ ೭೯ ಕಪ್ಪೆಗಳೊಳಗೆ ಈ ಶಿಲೀಂಧ್ರವು ಕಂಡುಬಂದಿದೆ ಎಂಬುದು ಅಚ್ಚರಿ ಮತ್ತು ಭಯ ಹುಟ್ಟಿಸುವ ಸತ್ಯ. ಈಗಾಗಲೇ ಅಳಿವಿನಂಚಿನಲ್ಲಿರುವ ಅಂಬೋಲಿ ಕಪ್ಪೆ (ಕ್ಸಂಥೊಫ್ರೈನ್ ಟೈಗರಿನಾ), ಬಿಳಿ ತುಟಿಯ ಚಿಮ್ಮಂಡೆ ಕಪ್ಪೆ (ಫೆಜೆರ್ವಾರ್ಯ ಸಿಎಫ್. ಸಹ್ಯಾದ್ರಿಸ್) ಮತ್ತು ಕೈಕಾಲುಗಳಿಲ್ಲದ, ಹಾವಿನಂತೆ ಕಾಣುವ ಉಭಯಚರಗಳಾದ ಸಿಸಿಲಿಯನ್ ಗಳ ನಾಲ್ಕು ಪ್ರಭೇದಗಳಲ್ಲಿ ‘ಖೈಟ್ರಿಡಿಯೋಮೈಕೋಸಿಸ್’ ಸೋಂಕಿನ ಮೊದಲ ದಾಖಲೆಗಳನ್ನು ಈ ಅಧ್ಯಯನವು ವರದಿ ಮಾಡಿದೆ.

ಭಾರತದ ಪ್ರಸಿದ್ಧ ಕಪ್ಪೆತಜ್ಞರಾದ ಡಾ ಕೆ. ವಿ. ಗುರುರಾಜರವರು “ವಿವಿಧೆಡೆ ವ್ಯಾಪಕವಾಗಿ ಹರಡಿರುವ ಕಪ್ಪೆಗಳಿಗಿಂತಾ ಸ್ಥಳೀಯ ಕಪ್ಪೆಗಳಲ್ಲೇ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ದಿನದಲ್ಲಿ ಸಕ್ರಿಯವಾಗಿರುವ ಮತ್ತು ತೊರೆಗಳ ಬಳಿ ವಾಸಿಸುವ ‘ನರ್ತಿಸುವ ಕಪ್ಪೆ’ ಅಥವಾ ‘ಡ್ಯಾನ್ಸಿಂಗ್ ಫ್ರಾಗ್’ಗಳ  ಕುಟುಂಬವಾದ ‘ಮೈಕ್ರಿಕ್ಸಾಲಿಡೆ’ ಬಗ್ಗೆ ನನಗೆ ಹೆಚ್ಚು ಕಾಳಜಿಯಾಗುತ್ತದೆ; ಏಕೆಂದರೆ, ಇತರ ಕಪ್ಪೆಗಳಿಗೆ ಹೋಲಿಸಿದರೆ ಈ ಕಪ್ಪೆಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬಂದಿದೆ. ಅವುಗಳಲ್ಲಿ ಈ ರೋಗವು ವ್ಯಾಪಕವಾಗಿ ಹರಡಿದರೆ, ಅವು ಪಶ್ಚಿಮ ಘಟ್ಟಗಳಿಂದ ಶಾಶ್ವತವಾಗಿ ಕಣ್ಮರೆಯಾಗುವ ಮೊದಲ ಕಪ್ಪೆಗಳಾಗುತ್ತವೆ. ಸಾಮಾನ್ಯವಾಗಿ ಕಂಡುಬರುವ ಕಪ್ಪೆಗಳಾದ ಮಿನರ್ವಾರ್ಯಾ ಕ್ಯಾಪೆರಾಟಾ (ಕೆನರಾ ಚಿಮ್ಮಂಡೆ ಕಪ್ಪೆ), ದತ್ತಾಫ್ರೈನಸ್ ಮೆಲನೊಸ್ಟಿಕ್ಟಸ್ (ಏಷ್ಯಾದ  ಸಾಮಾನ್ಯ ಕಪ್ಪೆ) ಮತ್ತು ಬಹಳ ಅಪರೂಪವಾಗಿ ನಿಕ್ಟಿಬಾಟ್ರಾಕಸ್ನಲ್ಲಿ (ರಾತ್ರಿ ಕಪ್ಪೆಗಳು) ಕಂಡುಬರುವ ಈ ರೋಗದ ಬಗ್ಗೆ ನಾನು ಅವಲೋಕನ ನಡೆಸಿದ್ದೇನೆ” ಎಂದು ಈ ಅಧ್ಯಯನವನ್ನು ವಿವರಿಸುತ್ತಾರೆ.

ಕುತೂಹಲಕಾರಿ ಅಂಶವೆಂದರೆ, ಈ ಶಿಲೀಂಧ್ರಗಳ ಸೋಂಕು ‘ಹೆಚ್ಚು ಎತ್ತರದ ಪ್ರದೇಶ’ಗಳಿಗಿಂತಾ ‘ಕಡಿಮೆ ಎತ್ತರದ ಪ್ರದೇಶ’ಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ  ಹರಡಿಕೊಂಡಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ. ಇದರ ಹಿಂದಿನ ಕಾರಣವನ್ನು ಅನ್ವೇಷಿಸಿದ ಸಂಶೋಧಕರ ಪ್ರಕಾರ, ‘ಕಡಿಮೆ ಎತ್ತರದ ಪ್ರದೇಶ’ಗಳ ನಡುವೆ ಉತ್ತಮ ಸಂಪರ್ಕಜಾಲವಿದ್ದು, ಇವುಗಳ ನಡುವೆ ಹರಿಯುವ ತೊರೆಗಳು ಸಂವಹನ ಮಾರ್ಗಗಳಂತೆ ವರ್ತಿಸಿ, ಸೋಂಕು ಹರಡಲು ಸಹಾಯ ಮಾಡುತ್ತವೆ. ‘ಕಡಿಮೆ ಎತ್ತರದ ಪ್ರದೇಶ’ಗಳಲ್ಲಿ ವಾಸಿಸುವ ಮಾನವರ ಸಂಖ್ಯೆಯೂ ಕಡಿಮೆಯಿರುವುದು, ಬಿ.ಡಿ. ಶಿಲೀಂಧ್ರವು ಹೆಚ್ಚು ಪ್ರಚಲಿತವಾಗುವುದಕ್ಕೆ ಸಹಾಯಕ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ‘ಹೆಚ್ಚಿನ ಎತ್ತರದ ಪ್ರದೇಶ’ಗಳ ಭೌತಿಕ ಲಕ್ಷಣಗಳು, ಉದಾಹರಣೆಗೆ ಬೆಟ್ಟಗಳ ಮತ್ತು ಕಣಿವೆಗಳ ಭೌತಿಕ ಆಕಾರವು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವಂತೆ ಕಂಡುಬರುತ್ತದೆ. ಜಲಪಕ್ಷಿಯಾದ ಕೆಂಪು ಮೂತಿಯ ಟಿಟ್ಟಿಭ ಹಕ್ಕಿಯು (ವೆನೆಲ್ಲಸ್ ಇಂಡಿಕಸ್) ಈ ರೋಗಕಾರಕ ಶಿಲೀಂಧ್ರವನ್ನು ಹರಡುವ ವಾಹಕ ಎಂಬ ಸಂಭವನೀಯತೆಗೂ ಈ ಅಧ್ಯಯನದ ಫಲಿತಾಂಶಗಳು ಇಂಬು ಕೊಡುತ್ತವೆ.

ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಬಗ್ಗೆ ಉತ್ಸಾಹವಿರುವವರ ಸಂಖ್ಯೆಯಲ್ಲಿ ವಿಪರೀತದ ಹೆಚ್ಚಳ ಕಂಡುಬಂದಿದೆ; ಆದರೆ, ಅವರಲ್ಲಿ ಬಹುಪಾಲು ಜನರಿಗೆ ಬಿ.ಡಿ. ಸೋಂಕಿರುವ ಕಪ್ಪೆಗಳ ಬಗ್ಗೆ ತಿಳಿದಿರುವುದಿಲ್ಲ; ಡಾ ಗುರುರಾಜ ಅವರ ಪ್ರಕಾರ, ಕಪ್ಪೆಗಳನ್ನು ನೋಡಿ, ಗಮನಿಸಿ ನಿರ್ವಹಿಸಲು ಉತ್ತಮ ಕ್ಷೇತ್ರ ಸಮೀಕ್ಷಾ ತಂತ್ರಗಳು ಅಗತ್ಯ; ಇಲ್ಲದಿದ್ದಲ್ಲಿ, ಒಬ್ಬ ವ್ಯಕ್ತಿಯು ತನಗೆ ತಿಳಿಯದೆಯೇ ರೋಗವನ್ನು ಹರಡುವ ವಾಹಕವಾಗಿ ವರ್ತಿಸಬಹುದು. 

Kannada