ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಶ್ರೀಮಂತ ಹುಲ್ಲುಗಾವಲುಗಳು ಪಾಳುಭೂಮಿಗಳಲ್ಲ!

Bengaluru
10 Feb 2022
ಶ್ರೀಮಂತ ಹುಲ್ಲುಗಾವಲುಗಳು ಪಾಳುಭೂಮಿಗಳಲ್ಲ!

ಉಷ್ಣವಲಯದ ಸವನ್ನಾಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ ತಂಪೆನಿಸುವ ಎತ್ತರದ ಮರಗಳಿಲ್ಲದೇ ಇರಬಹುದು, ಆದರೆ ಎಲ್ಲಿನೋಡಿದರೂ ಹಸಿರು ಹುಲ್ಲು, ವಿವಿಧ ಚಿಟ್ಟೆಗಳೂ, ಕೀಟಗಳೂ, ಅವುಗಳನ್ನು ಹಿಡಿಯಲು ಅಡಗಿ ಕುಳಿತ ಹಕ್ಕಿಗಳೂ, ಹಾವು-ಹಲ್ಲಿ-ಓತಿಕೇತಗಳೂ ಕಾಣಸಿಗುತ್ತವೆ. ವಿಸ್ತಾರವಾದ ಹುಲ್ಲುಗಾವಲುಗಳಿಂದ ತುಂಬಿರುವ ಸವನ್ನಾಗಳನ್ನು, ಸಾಮಾನ್ಯವಾಗಿ ಪಾಳುಭೂಮಿಗಳು ಎಂದು ತಪ್ಪಾಗಿ ವರ್ಗೀಕರಿಸಲಾಗುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಈ ಉಷ್ಣವಲಯದ ಹುಲ್ಲುಗಾವಲೆಂಬ ಪರಿಸರ ವ್ಯವಸ್ಥೆಗಳು, ಹಲವು ಬಗೆಯಲ್ಲಿ ಅನನ್ಯವೆನಿಸಿದ್ದು, ಭೂಮಿಯ ಮೇಲೆ ಮತ್ತೆಲ್ಲಿಯೂ ಕಂಡುಬರದ ಹಲವಾರು ಸಸ್ಯಗಳಿಗೆ ನೆಲೆಯಾಗಿದೆ.

ನೆಲ ಅಥವಾ ಭೂಮಿಯು ಸೀಮಿತ ಸಂಪನ್ಮೂಲ ಅಲ್ಲವೇ? ಇರುವಷ್ಟೇ ವಿಸ್ತಾರದ ನೆಲ ಅಥವಾ ಭೂಭಾಗ ಇರಲು ಸಾಧ್ಯವೇ ಹೊರತು, ಹೆಚ್ಚಾಗುವುದಂತೂ ಸಾಧ್ಯವಿಲ್ಲ. ಭಾರತದ ಜನಸಂಖ್ಯೆಯು, ವಿಶ್ವದ ಜನಸಂಖ್ಯೆಯ ಸುಮಾರು ೧೮ ಪ್ರತಿಶತದಷ್ಟಿದ್ದರೂ, ಭೂಪ್ರದೇಶದ ವಿಷಯದಲ್ಲಿ ಇದು ಕೇವಲ ೨% ಆಗಿದೆ. ಹಾಗಾಗಿ, ಲಭ್ಯವಿರುವ ಎಲ್ಲಾ ಭೂಮಿಯನ್ನು - ಉತ್ಪಾದಕ ಭೂಮಿ ಅಥವಾ ಅನುತ್ಪಾದಕ ಪಾಳುಭೂಮಿಯೆಂದು ವರ್ಗೀಕರಿಸುವ ಕಲ್ಪನೆಗೆ ಕಾರಣವಾಗಿದೆ. ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಭೂಸಂಪನ್ಮೂಲ ಇಲಾಖೆಯು, ದೇಶದಲ್ಲಿ ಸುಮಾರು ೬೮.೩೫ ದಶಲಕ್ಷ ಹೆಕ್ಟೇರ್ ಭೂಮಿ 'ಪಾಳು ಭೂಮಿ'ಯಾಗಿ ಬಿದ್ದಿದೆ ಎಂದು ಅಂದಾಜಿಸಿದೆ. ಮತ್ತೂ ಮುಂದುವರೆದು, ಇದರಲ್ಲಿ ೫೦% ಭೂಮಿ ʼಅರಣ್ಯೇತರʼ ಎಂದು ಕಂಡುಬಂದಿದ್ದು, ಅದನ್ನು ಸೂಕ್ತವಾಗಿ ಮಾರ್ಪಡಿಸಿ, ಪೂರಕ ವಾತಾವರಣ ಸೃಷ್ಟಿಸಿದರೆ, 'ಉತ್ಪಾದಕ ಭೂಮಿ' ಎಂಬ ವರ್ಗಕ್ಕೆ ಸೇರಿಸಲು ಸಾಧ್ಯವಿದೆ ಎನ್ನುತ್ತದೆ. ಈ ಹಾಳು ಬಿದ್ದ, ಅರಣ್ಯವಲ್ಲದ ʼಪಾಳುಭೂಮಿʼಗಳು ಎಂದು ಕರೆಯಲಾಗುವ ಭೂಭಾಗವು ಸಾಮಾನ್ಯವಾಗಿ ಹುಲ್ಲುಗಾವಲುಗಳೊಂದಿಗೆ, ತೆರೆದ ಪೊದೆಗಳ ಸಂಯೋಜನೆಯನ್ನು ಹೊಂದಿರುವ ಭೂದೃಶ್ಯಗಳಾಗಿವೆ; ಇವುಗಳಲ್ಲಿ ಸಾಮಾನ್ಯವಾಗಿ ಕಲ್ಲಿನ ಹೊರಾವರಣ ಅಥವಾ ತೆರೆದ ಮೇಲಾವರಣದ ಪರಿಸರ ವ್ಯವಸ್ಥೆಗಳು ಕಂಡುಬರುತ್ತವೆ. ಅವು ವ್ಯವಸಾಯ ಮಾಡದೇ ಉಳಿದ ಭೂಭಾಗಗಳಾದ ಒಂದೇ ಕಾರಣಕ್ಕಾಗಿ, ಅವುಗಳನ್ನು 'ಅನುತ್ಪಾದಕ' ಮತ್ತು 'ಪಾಳುಭೂಮಿ' ಎಂದು ಕರೆಯುತ್ತಾರೆ.

ಭಾರತೀಯ ಸವನ್ನಾಗಳು ಎಂದು ಪರಿಗಣಿಸಲಾದ ಈ ಭೂಭಾಗಗಳು ಕೂಡ ʼಉಷ್ಣವಲಯದ ಹುಲ್ಲುಗಾವಲು ಜೀವವ್ಯವಸ್ಥೆʼ ಅಥವಾ 'ಟ್ರಾಪಿಕಲ್ ಗ್ರಾಸಿ ಬಯೋಮ್ಸ್ʼನ (ಟಿಜಿಬಿಗಳು) ಭಾಗವಾಗಿರುವುದರಿಂದ, ಪರಿಸರತಜ್ಞರು ಈಗ ಈ 'ಪಾಳುಭೂಮಿ' ಕಲ್ಪನೆಯನ್ನು ಮತ್ತೆ ಪರಿಶೀಲಿಸಲೇಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇತ್ತೀಚೆಗೆ (22 ಜನವರಿ 2022) ʼಬಯೋಟ್ರೋಪಿಕಾʼದಲ್ಲಿ ಪ್ರಕಟವಾದ ಹೊಸ ಅಧ್ಯಯನವು, ಭಾರತೀಯ ಹುಲ್ಲುಗಾವಲುಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅವುಗಳ ಬಗ್ಗೆಯಿದ್ದ ಕೆಲವು ಅರ್ಥವಿಲ್ಲದ ಅಂತೆಕಂತೆಗಳನ್ನು ತಳ್ಳಿಹಾಕುತ್ತದೆ. ಪರಿಸರತಜ್ಞರಲ್ಲಿಯೂ ಸಹ ಇರುವ ಒಂದು ಜನಪ್ರಿಯ ಕಲ್ಪನೆ ಏನು ಗೊತ್ತೇ?  ವಿಶಿಷ್ಟ ಸ್ಥಳೀಯ ಪ್ರಭೇದಗಳು ಪ್ರಾಥಮಿಕವಾಗಿ ಕಂಡುಬರುವುದು, ಜೀವವೈವಿಧ್ಯದ ಹಾಟ್‌ಸ್ಪಾಟ್‌ ಎಂದು ಕರೆಯಲಾಗುವ ಪಶ್ಚಿಮ ಘಟ್ಟಗಳ ಅರಣ್ಯಗಳಲ್ಲಿ ಮತ್ತು ಹಿಮಾಲಯದಲ್ಲಿ ಮಾತ್ರ ಎಂದು! ಆದರೆ, ಈ ಅಧ್ಯಯನವು, ಭಾರತೀಯ ಹುಲ್ಲುಗಾವಲುಗಳು ಸಹ ಸ್ಥಳೀಯ ಪ್ರಭೇದಗಳನ್ನುಳ್ಳ ಅನನ್ಯ ಪರಿಸರ ವ್ಯವಸ್ಥೆಗಳಾಗಿವೆ ಎಂದು ವಾದಿಸುತ್ತದೆ. ವಿವಿಧ ರಾಜ್ಯಗಳ ಸಂಶೋಧಕರಾದ ಎ.ನೇರ್ಲೆಕರ್, ಎ.ಚೋರ್ಗೆ, ಜೆ.ದಳವಿ, ಆರ್.ಕುಳ್ಳಾಯಿಸ್ವಾಮಿ, ಎಸ್.ಕರುಪ್ಪುಸಾಮಿ, ವಿ.ಕಾಮತ್, ಆರ್.ಪೋಕರ್, ಆರ್.ಗಣೇಸನ್, ಎಂ.ಸರ್ದೇಸಾಯಿ, ಎಸ್.ಕಾಂಬಳೆಯವರನ್ನು ಒಳಗೊಂಡ ತಂಡವು ಈ ಅಧ್ಯಯನಕ್ಕೆ ಅಪಾರ ಕೊಡುಗೆ ನೀಡಿದೆ.

ಭಾರತೀಯ ಹುಲ್ಲುಗಾವಲುಗಳ ಬಗ್ಗೆ, ಅದರ ವಿಶಿಷ್ಟ ಸ್ಥಳೀಯ ಜೀವಸಂಕುಲದ ಬಗ್ಗೆ ಖಚಿತಪಡಿಸಿಕೊಳ್ಳಲು, ಈ ಸಂಶೋಧಕರ ತಂಡವು, ರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಮಟ್ಟದವರೆಗೂ, ಸೆಪ್ಟೆಂಬರ್ 2020ರವರೆಗೂ ದಾಖಲಾಗಿರುವ, ವಿವಿಧ ಪ್ರಾದೇಶಿಕ ಮಾಪಕಗಳನ್ನು ಒಳಗೊಂಡ ಫ್ಲೋರಿಸ್ಟಿಕ್ ಮತ್ತು ವರ್ಗೀಕರಣ ಮೂಲಗಳ ಸಮಗ್ರ ಪಟ್ಟಿಯನ್ನು ಪರಿಶೀಲಿಸಿದ್ದಾರೆ. ಇಲ್ಲಿಯೇ ಕಂಡುಹಿಡಿಯಲಾದ ಹೊಸ ಪ್ರಭೇದಗಳನ್ನು, ಅವುಗಳು ಮೊದಲು ಪತ್ತೆಯಾದ ದಿನಾಂಕ, ಆ ಪ್ರದೇಶದ ಎತ್ತರ ಮತ್ತು ಮಳೆಪ್ರಮಾಣ, ಅಲ್ಲಿನ ಅಕ್ಷಾಂಶ ಮತ್ತು ರೇಖಾಂಶ, ಈ ಪ್ರಭೇದದ ಕ್ರಿಯಾತ್ಮಕ ವರ್ಗೀಕರಣ, ಸಸ್ಯದ ಎತ್ತರ, ವ್ಯಾಪ್ತಿಯ ಗಾತ್ರ ಮತ್ತು ಹೂವು – ಹೂಗೊಂಚಲಿನ ಗಾತ್ರ – ಹೀಗೆ ಹತ್ತು ಹಲವಾರು ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ. ಸಂಶೋಧಕರು, ಈ ಭೂದೃಶ್ಯಗಳಲ್ಲಿ ಇಲ್ಲಿಯವರೆಗೂ ಪತ್ತೆಮಾಡಲಾದ ಪ್ರಭೇದಗಳನ್ನು ಗಮನಿಸುತ್ತಾ, ಇಲ್ಲಿ ಕಂಡುಬಂದ ʼಆವಿಷ್ಕಾರ ಮಾದರಿʼಯನ್ನು ಸಮಯ ಮತ್ತು ಪ್ರದೇಶದ ಆಧಾರದ ಮೇಲೆ ಅರ್ಥೈಸಿಕೊಂಡಿದ್ದಾರೆ.

ಹುಲ್ಲುಗಾವಲುಗಳಲ್ಲೂ ವಿಶಿಷ್ಟ, ಸ್ಥಳೀಯ ಪ್ರಭೇದಗಳಿವೆ!

ಈ ಹುಲ್ಲುಗಾವಲು ಪ್ರದೇಶದಲ್ಲಿ ಕನಿಷ್ಠ 206 ಸ್ಥಳೀಯ ಸಸ್ಯಗಳಿವೆ ಎಂದು ಈ ಅಧ್ಯಯನವು ಪ್ರಚುರಪಡಿಸುತ್ತದೆ; ಈ ಪ್ರಭೇದಗಳು, 47 ಸಸ್ಯಕುಟುಂಬಗಳನ್ನು ಪ್ರತಿನಿಧಿಸುತ್ತವೆ ಮತ್ತು ಇವುಗಳಲ್ಲಿ 201 ಆಂಜಿಯೋಸ್ಪರ್ಮ್ಗಳು ಮತ್ತು ಐದು ಜಿಮ್ನೋಸ್ಪರ್ಮ್ಗಳು ಇವೆ. ಐ.ಯು.ಸಿ.ಎನ್ ಕೆಂಪು ಪಟ್ಟಿಯಲ್ಲಿ ದಾಖಲಾದ ಈ ಎಲ್ಲಾ ಸ್ಥಳೀಯ ಸಸ್ಯಗಳಲ್ಲಿ, 17 ಸಸ್ಯಪ್ರಭೇದಗಳು ಅಳಿವಿನ ಅಪಾಯದಲ್ಲಿದೆ ಎಂದು ವರದಿಯಾಗಿದೆ ಮತ್ತು ಹೊಸದಾಗಿ ಪತ್ತೆಯಾದ ಹೆಚ್ಚಿನ ಪ್ರಭೇದಗಳು ಔಪಚಾರಿಕ ಮೌಲ್ಯಮಾಪನಕ್ಕಾಗಿ ಕಾಯುತ್ತಿವೆ ಎಂದು ಈ ಅಧ್ಯಯನವು ಗಮನಸೆಳೆದಿದೆ.
“ಇದರಿಂದ ಸ್ಪಷ್ಟವಾಗುವುದೇನೆಂದರೆ, ನಾವು ದೀರ್ಘಕಾಲದವರೆಗೆ ಭಾರತೀಯ ಸವನ್ನಾಗಳನ್ನು ತಪ್ಪಾಗಿ ಪ್ರತಿನಿಧಿಸುತ್ತಿದ್ದೇವೆ” ಎನ್ನುತ್ತಾರೆ ಈ ಅಧ್ಯಯನದ ಪ್ರಮುಖ ಲೇಖಕ ಆಶಿಶ್ ನೇರ್ಲೆಕರ್. ನಾವು ಅವುಗಳನ್ನು ಏಕೆ ಕಡೆಗಣಿಸಿದ್ದೇವೆ ಎಂದು ತರ್ಕಿಸುತ್ತಾ, “ ಮೊದಲನೆಯದಾಗಿ, ವಸಾಹತುಶಾಹಿ ಪರಂಪರೆಯ ಕಾರಣದಿಂದಾಗಿ, ಈ ಸವನ್ನಾಗಳು ನಗಣ್ಯ ಸ್ಥಳೀಯ ಪ್ರಭೇದಗಳನ್ನು ಹೊಂದಿರುವ ಕೊಳೆತ ಕಾಡುಗಳು ಎಂದು ನಾವು ಇನ್ನೂ ಭಾವಿಸುತ್ತೇವೆ. ಎರಡನೆಯದಾಗಿ, ಇವುಗಳು ಸಂರಕ್ಷಣೆಗೆ ಯೋಗ್ಯವಾದ ಪ್ರಾಚೀನ ಪರಿಸರ ವ್ಯವಸ್ಥೆಗಳು ಎಂಬ ಮೆಚ್ಚುಗೆಯ ಕೊರತೆ ಎದ್ದುಕಾಣುತ್ತದೆ. ಕಾಡುಗಳು ಗಣನೀಯ ಪ್ರಮಾಣದಲ್ಲಿ ಎಲ್ಲರ ಗಮನವನ್ನು ಪಡೆದಿವೆ, ಆದರೆ, ಹುಲ್ಲುಗಾವಲುಗಳು ಒಂದು ವಿಭಿನ್ನ ಪರಿಸರವ್ಯವಸ್ಥೆ ಎಂದು ಗುರುತಿಸಲ್ಪಟ್ಟಿಲ್ಲ. ಸಂಶೋಧಕರು ಅರಣ್ಯದ ಪರಿಸರವ್ಯವಸ್ಥೆಗಳಲ್ಲಿ ಹೆಚ್ಚು ಜೀವವೈವಿಧ್ಯ ಅಧ್ಯಯನಗಳನ್ನು ನಡೆಸಿದ್ದಾರೆ ಮತ್ತು ಸವನ್ನಾಗಳೆಂಬ ಈ ಹುಲ್ಲುಗಾವಲುಗಳಲ್ಲಿ ಹೆಚ್ಚಿನ ಮೌಲ್ಯದ್ದು ಏನೂ ಇಲ್ಲ ಎಂದು ಊಹಿಸಿ, ಬದಿಗಿರಿಸಿದ್ದಾರೆ.” ಎನ್ನುತ್ತಾರೆ ಸಂಶೋಧಕ ನೇರ್ಲೆಕರ್‌.   
    
ಅನ್ವೇಷಿಸಲು ಇನ್ನೂ ಬೇಕಾದಷ್ಟಿದೆ!

ಈ ತಂಡದ ಸಂಶೋಧಕರು, ಇಲ್ಲಿನ ಸ್ಥಳೀಯ ಸಸ್ಯಗಳ ಆವಿಷ್ಕಾರ ಮಾದರಿಗಳನ್ನು ಸಹ ವಿಶ್ಲೇಷಿಸಿದ್ದಾರೆ. ಭಾರತೀಯ ಸವನ್ನಾಗಳಲ್ಲಿನ ಸ್ಥಳೀಯ ಸಸ್ಯಗಳ ಆವಿಷ್ಕಾರದ ಪ್ರಮಾಣವು ಗಗನಮುಖಿಯಾಗಿ ಏರುತ್ತಲೇ ಸಾಗುತ್ತಿದ್ದು, ಸಮತಟ್ಟಾಗುವ ಅಥವಾ ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು ಕಂಡುಕೊಂಡಿದ್ದಾರೆ; ಅಂದರೆ, ಇದು ಇನ್ನೂ ವಿವರಿಸಲಾಗಿಲ್ಲದ ಜಾತಿಗಳ, ಪ್ರಭೇದಗಳ ಗಮನಾರ್ಹ ಪ್ರಮಾಣವನ್ನು ಸೂಚಿಸುತ್ತದೆ. ಇದರ ಪ್ರಕಾರ, 633 ಮತ್ತು 912 ಜಾತಿಗಳನ್ನು ಕ್ರಮವಾಗಿ 2050 ಮತ್ತು 2100 ರ ಹೊತ್ತಿಗೆ ವಿವರಿಸಲಾಗುವುದು ಎಂದು ಸಂಶೋಧಕರು ಊಹಿಸುತ್ತಾರೆ.

ಭಾರತೀಯ ಸವನ್ನಾಗಳು ಸ್ಥಳೀಯ ಸಸ್ಯಗಳಿಂದ ಸಮೃದ್ಧವಾಗಿರುವ ಪ್ರಾಚೀನ ಪರಿಸರ ವ್ಯವಸ್ಥೆಗಳಾಗಿವೆ ಮತ್ತು ಇದರ ಭಾಗವಾಗಿರುವ ಹಲವಾರು ಸಸ್ಯಗಳನ್ನು ಸಸ್ಯವಿಜ್ಞಾನಿಗಳು ಇನ್ನೂ ಕಂಡುಹಿಡಿಯಬೇಕಾಗಿದೆ. ಈ ಅಧ್ಯಯನದ ಸಹ-ಲೇಖಕರಾದ ವಿಘ್ನೇಶ್ ಕಾಮತ್ ಅವರು “ಭವಿಷ್ಯದಲ್ಲಿ ಪತ್ತೆಮಾಡಲಾಗುವ ಸ್ಥಳೀಯ ಸಸ್ಯಗಳು, ಬಹುಪಾಲು ಪಶ್ಚಿಮ ಘಟ್ಟಗಳ ಪೂರ್ವ ಅಂಚಿನಲ್ಲಿ ಮತ್ತು ಪೂರ್ವ ಘಟ್ಟಗಳ ಪರ್ವತ ಶ್ರೇಣಿಗಳ ಎತ್ತರದ ಪ್ರದೇಶಗಳಲ್ಲಿ ಸಿಗುವಂಥವು ಮತ್ತುಸಣ್ಣಗಾತ್ರವನ್ನುಳ್ಳ ಜಾತಿಗಳಾಗಿರಬಹುದು.” ಎಂದು ತಮ್ಮ ಪರಿಶೋಧನೆಯನ್ನು ವಿವರಿಸುತ್ತಾರೆ.  ಈ ಸಂಶೋಧನೆಗಳ ಆಧಾರದ ಮೇಲೆ, ಹೆಚ್ಚಿನ ಕ್ಷೇತ್ರ-ಅಧ್ಯಯನಗಳು ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ಈ ಪ್ರದೇಶಗಳಲ್ಲಿ ನಡೆಸಬೇಕಾಗಿದೆ; ಇದು ಇನ್ನೂ ಅನೇಕ ಹೊಸ ಸ್ಥಳೀಯ ಜಾತಿಗಳ ಆವಿಷ್ಕಾರಗಳಿಗೆ ಕಾರಣವಾಗಬಹುದು.

ತಪ್ಪಾದ ವರ್ಗೀಕರಣ

ಸ್ವತಂತ್ರ ಸಂಶೋಧಕರಾದ ಎಂ.ಡಿ ಮಧುಸೂದನ್ ಮತ್ತು ಬೆಂಗಳೂರಿನ ATREE ಸಂಸ್ಥೆಯ ಹಿರಿಯ ಸಂಶೋಧಕರಾದ ಅಬಿ ತಮೀಮ್ ವನಕ್ ಅವರ ಮತ್ತೊಂದು ಅಧ್ಯಯನದಲ್ಲಿ, ಅವರು ಸವನ್ನಾಗಳು, ಮರುಭೂಮಿಗಳು, ಕಲ್ಲಿನ ಹೊರಾವರಣ ಸೇರಿದಂತೆ ಇಂತಹ ಅನೇಕ ಭೂದೃಶ್ಯಗಳ ವಿತರಣೆ ಮತ್ತು ವ್ಯಾಪ್ತಿಯ ಮಾಪನ ಮಾಡಿ, ಅಧ್ಯಯನ ನಡೆಸಿ, ನಕ್ಷೆ ತಯಾರಿಸಿದ್ದಾರೆ. ಇದನ್ನು ಗೂಗಲ್ ಅರ್ಥ್ ಎಂಜಿನ್ ಬಳಸಿ ಮಾಡಲಾಗಿದ್ದು, ಈ ಪರಿಸರ ವ್ಯವಸ್ಥೆಗಳನ್ನು ʼಓಪನ್ ನ್ಯಾಚುರಲ್ ಇಕೋಸಿಸ್ಟಮ್ಸ್ʼ (ONEs) ಎಂದು ಕರೆದಿದ್ದಾರೆ. ಅವರು ಇಂತಹ ಪರಿಸರವ್ಯವಸ್ಥೆಗಳ ಗುಚ್ಛದ ಸಂವಾದಾತ್ಮಕ ನಕ್ಷೆಯನ್ನು ಸಹ ಸಿದ್ಧಪಡಿಸಿದ್ದಾರೆ; ಅದರ ಕೊಂಡಿ ಇಲ್ಲಿದೆ: https://tinyurl.com/open-natural-ecosystems. ಈ ತೆರೆದ ನೈಸರ್ಗಿಕ ಪರಿಸರವ್ಯವಸ್ಥೆಗಳು 300,000 ಚದರ ಕಿ.ಮೀ ಅಥವಾ ಭಾರತದ ಭೂದೃಶ್ಯದ 10% ಕ್ಕಿಂತ ಹೆಚ್ಚು ಆಕ್ರಮಿಸಿಕೊಂಡಿವೆ ಎಂದು ಅವರು ಅಂದಾಜಿಸಿದ್ದಾರೆ; ಇದು ಭೂ ಸಂಪನ್ಮೂಲ ಇಲಾಖೆಯ ಅಂದಾಜಿಗೆ ಹತ್ತಿರದಲ್ಲಿದೆ; ಆದರೆ ಇಲಾಖೆಯ ಪ್ರಕಾರ ಈ ಪರಿಸರವ್ಯವಸ್ಥೆಗಳನ್ನು 'ವೇಸ್ಟ್ ಲ್ಯಾಂಡ್‌ಗಳು' ಅಥವಾ ʼಪಾಳು ಭೂಮಿʼ ಎಂದು ವರ್ಗೀಕರಿಸಲಾಗಿದೆ.

ಮಧುಸೂದನ್ ಅವರು ಗಮನಿಸಿದಂತೆ ಇವುಗಳನ್ನು 'ಅಧೋಗತಿಗೆ ತಲುಪಿದ' ಅಥವಾ 'ತ್ಯಾಜ್ಯ' ಪ್ರದೇಶಗಳೆಂದು ಪ್ರತಿನಿಧಿಸುವ ಮೂಲಕ ಏನಾಗುತ್ತದೆ ಗೊತ್ತೇ? ಸೌರ ಮತ್ತು ಗಾಳಿ ಫಾರ್ಮ್‌ಗಳಂತಹ ʼನವೀಕರಿಸಬಹುದಾದ ಇಂಧನʼದ ಯೋಜನೆಗಳು ಅಥವಾ ಇಂಗಾಲದ ಪ್ರತ್ಯೇಕೀಕರಣಕ್ಕಾಗಿ 'ಮರು ಅರಣ್ಯೀಕರಣ' ಕಾರ್ಯಗಳು ಇಲ್ಲಿ ನಡೆಯುತ್ತವೆ. ಹವಾಮಾನ ಬದಲಾವಣೆಯನ್ನು ತಗ್ಗಿಸುವಂತಹ ಚಟುವಟಿಕೆಗಳಿಗೆ ಈ ಖಾಲಿ ಪ್ರದೇಶಗಳನ್ನು ಬಳಸುವುದು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣಬಹುದು. ಆದರೆ, ಇದು ಸತ್ಯಕ್ಕೆ ದೂರವಾದ ಮಾತು. "ವಿಪರ್ಯಾಸವೆಂದರೆ, ಇಂತಹ ಕ್ರಮಗಳು ಪರಿಸರಕ್ಕೆ ಮತ್ತಷ್ಟು ಸಮಸ್ಯೆಗಳನ್ನು ಒಡ್ಡುತ್ತವೆ ಮತ್ತು ಈ ಭೂದೃಶ್ಯಗಳ ಜೀವವೈವಿಧ್ಯತೆಗೆ ಹಾನಿ ಮಾಡುತ್ತವೆ. ಇದರ ಪರಿಣಾಮವಾಗಿ, ನಾವು ಮಳೆಕಾಡುಗಳನ್ನು ಕಳೆದುಕೊಳ್ಳುವುದಕ್ಕಿಂತಾ ಹೆಚ್ಚಿನ ವೇಗದಲ್ಲಿ, ಇಂತಹ ಪರಿಸರ ವ್ಯವಸ್ಥೆಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಅವುಗಳ ಸ್ಥಳೀಯ ಪ್ರಭೇದಗಳ ಉಳಿವು ಮತ್ತು ಆವಾಸಸ್ಥಾನದೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದೇವೆ, ”ಎಂದು ಅವರು ವಿವರಿಸುತ್ತಾರೆ.

ಇದಲ್ಲದೆ, “ತಪ್ಪಾದ ಗುರುತು ನೀಡಿರುವ ಪರಿಣಾಮವಾಗಿ, ದೊಡ್ಡ ಪ್ರಮಾಣದ ಭೂಪರಿವರ್ತನೆ ಮತ್ತು ತಪ್ಪಾದ ಸ್ಥಳಗಳಲ್ಲಿ ಮರಗಳನ್ನು ನೆಡುವುದು ನಡೆಯುತ್ತಿದೆ; ಇದು ಸವನ್ನಾಗಳ ತ್ವರಿತ ನಷ್ಟಕ್ಕೆ ಕಾರಣವಾಗುತ್ತಿದೆ. ನಮ್ಮ ಸಂಶೋಧನೆಗಳು ಭಾರತೀಯ ಸವನ್ನಾಗಳ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಈ ಜೀವವೈವಿಧ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಸಲುವಾಗಿ ಹೆಚ್ಚಿನ ಗಮನ ಸೆಳೆಯಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ.” ಎಂದು ವಿಘ್ನೇಶ್ ಅವರು ತಮ್ಮ ಆಶಯ ವ್ಯಕ್ತಪಡಿಸುತ್ತಾರೆ. ಹೀಗಾಗಿ, ಅರಣ್ಯ ಇಲಾಖೆ ಮತ್ತು ‘ಸಂರಕ್ಷಣಾವಾದಿಗಳು’ ಸೇರಿದಂತೆ ಮರ ನೆಡುವುದನ್ನು ಉತ್ತೇಜಿಸುವವರು, ಈ ನೈಸರ್ಗಿಕ ಪರಿಸರ ವ್ಯವಸ್ಥೆಗಳ ಮೇಲೆ ಆಗುತ್ತಿರುವ ಹಾನಿಯ ಬಗ್ಗೆ ಮರುಚಿಂತನೆ ಮಾಡಬೇಕಾಗುತ್ತದೆ.

‘ಪಾಳುಭೂಮಿʼಗಳ ಬಗ್ಗೆ ಮರುಚಿಂತನೆ ಮಾಡುವ ಸಮಯ

ಈ ಪ್ರದೇಶಗಳಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸುವ ಲಕ್ಷಾಂತರ ಪಶುಪಾಲಕ ಮತ್ತು ಕೃಷಿ-ಪಶುಪಾಲಕ ಸಮುದಾಯಗಳನ್ನು ಈ ಪರಿಸರ ವ್ಯವಸ್ಥೆಗಳು ಬೆಂಬಲಿಸುತ್ತವೆ ಎಂದು ಸಂಶೋಧಕರಾದ ಮಧುಸೂದನ್ ಅವರು ವಾದಿಸುತ್ತಾರೆ. ಇದೇ ಕಾರಣಕ್ಕೆ, ಅವುಗಳನ್ನು ಪಾಳುಭೂಮಿ ಎಂದು ಕರೆಯುವುದು ಬಹಳ ಅಪ್ರಬುದ್ಧವಾದ, ಸಂಕುಚಿತ ದೃಷ್ಟಿಯ ಮತ್ತು ಸಂಪೂರ್ಣವಾಗಿ ತಪ್ಪಾದ ರೀತಿಯಾಗಿದೆ. ಇದು ವಸಾಹತುಶಾಹಿ ಅರಣ್ಯ ಪರಂಪರೆಯಿಂದ ಬಂದಿದೆ ಎಂದು ಇದರ ಹಿಂದಿನ ಕಾರಣದ ಬಗ್ಗೆ ಸಂಶೋಧಕರಾದ ಆಶಿಶ್ ಗಮನಸೆಳೆದಿದ್ದಾರೆ; ಅವರು ಹೇಳುವಂತೆ, ಆ ಪರಂಪರೆಯ ಪ್ರಕಾರ, ಮರಮುಟ್ಟುಗಳನ್ನು ಒದಗಿಸುವ ಮರಗಳಿರುವ ಭೂದೃಶ್ಯಗಳನ್ನು ಮಾತ್ರ ಮೌಲ್ಯೀಕರಿಸಲಾಗುತ್ತದೆ; ನೈಸರ್ಗಿಕವಾಗಿ ಮರಗಳು ಕಡಿಮೆ ಇರುವ ಅಥವಾ ಮರಗಳೇ ಇಲ್ಲದ ಹುಲ್ಲುಗಾವಲಿನಂತಹ ಭೂದೃಶ್ಯಗಳು, ವಾಣಿಜ್ಯಿಕವಾಗಿ ಲಾಭಕರವಲ್ಲವೆಂಬ ಕಾರಣಕ್ಕೆ ಸಂರಕ್ಷಣಾ ಮೌಲ್ಯವೇ ಇಲ್ಲವೆಂದು ಭಾವಿಸಲಾಗುತ್ತದೆ.

ವಿಪರ್ಯಾಸವೆಂದರೆ, ಭಾರತ ಸರ್ಕಾರದ ಭೂಸಂಪನ್ಮೂಲ ಇಲಾಖೆಯು ‘ಇಂಟಿಗ್ರೇಟೆಡ್ ವೇಸ್ಟ್‌ಲ್ಯಾಂಡ್ ಡೆವಲಪ್‌ಮೆಂಟ್ ಪ್ರೋಗ್ರಾಂ’ ಎಂಬ ʼಪಾಳುಭೂಮಿʼಗಳ ಅಭಿವೃದ್ಧಿ ಕಾರ್ಯಕ್ರಮವನ್ನು ರಚಿಸಿದ್ಧಾರೆ. ಅದು ನಿಜಾರ್ಥದಲ್ಲಿಪ್ರತಿಕೂಲವಾಗಿದ್ದು, ಸವನ್ನಾಗಳನ್ನು, ಈ ಹುಲ್ಲುಗಾವಲು ಪರಿಸರ ವ್ಯವಸ್ಥೆಗಳಲ್ಲಿ ಕಂಡುಬರುವ ಅನೇಕ ಸ್ಥಳೀಯ ಜಾತಿಗಳನ್ನು ಬೆದರಿಸುತ್ತಿದೆ. ಅವರು ʼವೇಸ್ಟ್‌ಲ್ಯಾಂಡ್ ಅಟ್ಲಾಸ್ ಆಫ್ ಇಂಡಿಯಾʼಎಂಬ ಭಾರತದ ʼಪಾಳುಭೂಮಿʼ ನಕ್ಷೆಯನ್ನೂ ಸಹ ಸಿದ್ಧಪಡಿಸಿದ್ದಾರೆ; ಆ ನಕ್ಷೆಯ ಭಾಗವಾಗಿರುವುದು ಇಂತಹ ತೆರೆದ ನೈಸರ್ಗಿಕ ಪರಿಸರ ವ್ಯವಸ್ಥೆಗಳೇ ಆಗಿವೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಅಂತಹ ಕಾರ್ಯಕ್ರಮಗಳನ್ನು ಮತ್ತು ʼಪಾಳುಭೂಮಿʼ ಎಂಬ ಕಲ್ಪನೆಯನ್ನು ರದ್ದುಗೊಳಿಸುವುದು ಮಾತ್ರ ವಿವೇಕದ ನಡೆ ಎನಿಸುತ್ತದೆ. ಮಾನವನ ಹಸ್ತಕ್ಷೇಪದಿಂದ ವ್ಯವಸ್ಥಿತವಾಗಿ ಅವನತಿಗೆ ಒಳಗಾದ ಭಾರತೀಯ ಹುಲ್ಲುಗಾವಲುಗಳನ್ನು ಸಂರಕ್ಷಿಸುವತ್ತ ಗಮನಹರಿಸಬೇಕಾಗಿದೆ.

ಪರಿಸರೀಯವಾಗಿ, ಯಾವುದೇ ಪಾಳುಭೂಮಿಗಳಿಲ್ಲ ಮತ್ತು ʼಪಾಳುಭೂಮಿʼ ಎಂಬ ಪದಕ್ಕೆ ಅರ್ಥವೂ ಇಲ್ಲ.

Kannada