ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಅನುದಾನದಡಿಯಲ್ಲಿ ದೊರೆಯುವ ಆಹಾರ ಪದಾರ್ಥಗಳು; ಪೌಷ್ಟಿಕತೆ ಹಾಗೂ ಬೆಳವಣಿಗೆಯಲ್ಲಿ ಅದರ ಪಾತ್ರ ಮತ್ತು ತೊಡಕು

Read time: 1 min
ಬೆಂಗಳೂರು
10 Feb 2021
ಅನುದಾನದಡಿಯಲ್ಲಿ ದೊರೆಯುವ ಆಹಾರ ಪದಾರ್ಥಗಳು; ಪೌಷ್ಟಿಕತೆ ಹಾಗೂ ಬೆಳವಣಿಗೆಯಲ್ಲಿ ಅದರ ಪಾತ್ರ ಮತ್ತು ತೊಡಕು

ಆಹಾರ ಅಭದ್ರತೆ ಭಾರತ ದೇಶಕ್ಕೆ ಅಪರಿಚಿತವೇನಲ್ಲ - ನಮ್ಮ ದೇಶದಲ್ಲಿ ಮೂರರಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ. ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (International Institute for Population Sciences) 2015 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಐದು ವರ್ಷಕ್ಕಿಂತ ಕೆಳಗಿನ 50 ಪ್ರತಿಶತ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಾರೆಂದು ತಿಳಿದುಬಂದಿದೆ. ಆರೋಗ್ಯ ಹಾಗೂ ಕೃಷಿ ವಿಭಾಗಗಳಲ್ಲಿ ತ್ವರಿತ ಅಭಿವೃದ್ಧಿಯಾಗಿದ್ದರೂ ಸಹ, ಭಾರತದ ಬಹುತೇಕ ಜನತೆ ಭಾರಿ ಅಪೌಷ್ಟಿಕತೆಯಿಂದ ನರಳುತ್ತಿದೆ. ಇದಕ್ಕೆ  ಬಡತನ, ಅನಕ್ಷರತೆ, ನಿರುದ್ಯೋಗ ಮೊದಲಾದ ಸಾಮಾಜಿಕ-ಆರ್ಥಿಕ ವಿಷಯಗಳು ಪ್ರಮುಖ ಕಾರಣಗಳು.

2013ನೇ ಇಸವಿಯಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ನಿಯಮವನ್ನು (National Food Security Act - NFSA) ಜಾರಿಗೊಳಿಸಿತು. ಈ ನಿಯಮದ ಪ್ರಕಾರ ಆಹಾರ ಭದ್ರತೆ ಭಾರತದ ಪ್ರತಿಯೊಂದು ನಾಗರಿಕನ ಹಕ್ಕು ಎಂದು ಪರಿಗಣಿಸಲಾಗಿದೆ. ಸ್ವ-ಸೌಲಭ್ಯವನ್ನು ಕಲ್ಪಿಸಿಕೊಳ್ಳಲಾಗದ ನಾಗರೀಕರಿಗೆ ತಕ್ಕ ಪೌಷ್ಟಿಕತೆ ದೊರೆಯುವಂತೆ ಖಚಿತಪಡಿಸುವುದು ರಾಜ್ಯ ಸರ್ಕಾರಗಳ ಕಾನೂನು ಬದ್ಧ ಹೊಣೆಯಾಗಿದೆ. ಈ ನಿಯಮದಿಂದ ಬಡತನದ ರೇಖೆಯ ಕೆಳಗಿರುವ ಕುಟುಂಬಗಳಿಗೆ ಅಕ್ಕಿ, ಗೋಧಿ, ಸಕ್ಕರೆ, ಅಡಿಗೆ ಎಣ್ಣೆ ಮುಂತಾದ ಆಹಾರ ಪದಾರ್ಥಗಳನ್ನು ಸಾರ್ವಜನಿಕ ವಿತರಣಾ ಪದ್ಧತಿ (Public DistributionSystem - PDS) ಮೂಲಕ ಕಡಿಮೆ ದರದಲ್ಲಿ ಒದಗಿಸಲಾಗುತ್ತದೆ. ಹೀಗೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ PDS ಮೂಲಕ ಒದಗಿಸಲಾದ ಅಕ್ಕಿ ಹಾಗೂ ಸಕ್ಕರೆ ಅನುದಾನಗಳ ಬಗ್ಗೆ ಒಂದು ಅಧ್ಯಯನ ನಡೆಸಲಾಯಿತು, ಹಾಗೂ ಈ ಸೌಲಭ್ಯ ಪಡೆದ ನಾಗರೀಕರ ಪೌಷ್ಟಿಕತೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲವೆಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಇದರಿಂದಾಗಿ ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದೆಂದು ಕೂಡ ಕಂಡುಬಂದಿದೆ. ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಅಧ್ಯಯನವನ್ನು ನಡೆಸಿದ್ದು, ಇದರ ವಿವರಗಳನ್ನು ’ಸಾಮಾಜಿಕ ನೀತಿ ನಿಯತಕಾಲಿಕೆ’ ಪತ್ರಿಕೆಯಲ್ಲಿ (Journal of Social Policy) ಪ್ರಕಟಿಸಿದ್ದಾರೆ.

2008ನೇ ಇಸವಿಯಲ್ಲಿ ‘ಯಂಗ್ ಲೈವ್ಸ್ ಆರ್ಗನೈಷನ್” (Young Lives Organisation) ಸಮೀಕ್ಷೆ ನಡೆಸಿ, ಆಂಧ್ರ ಪ್ರದೇಶದ 4 ಜಿಲ್ಲೆಗಳಲ್ಲಿ ಹಾಗೂ ತೆಲಂಗಾಣದ 2 ಜಿಲ್ಲೆಗಳಲ್ಲಿ ಮಕ್ಕಳ, ತಾಯಂದಿರ ಹಾಗೂ ಪ್ರಧಾನ ಪೋಷಕರ ಮಾಹಿತಿ ಸಂಗ್ರಹಿಸಿತು. ಈ ಮಾಹಿತಿ ಎರಡೂ ರಾಜ್ಯಗಳ ಒಟ್ಟು ಜನಸಂಖ್ಯೆಯ 28 ಪ್ರತಿಶತ ಭಾಗವನ್ನು ಒಳಗೊಂಡಿತ್ತು. ಈ ಮಾಹಿತಿ ವಿವಿಧ ಆರ್ಥಿಕ ಹಿನ್ನೆಲೆಗಳ ಕಿರಿಯ ಹಾಗೂ ಹಿರಿಯ ಮಕ್ಕಳ ಮಿಶ್ರ ಜನಸಂಖ್ಯೆಯ ವಿವರಗಳನ್ನು ಪ್ರತಿನಿಧಿಸುತ್ತದೆ. ಸಂಶೋಧಕರು ಈ ಮಾಹಿತಿಯನ್ನು ಪರಿಶೀಲಿಸಿದಾಗ ತಿಳಿದು ಬಂದದ್ದೇನೆಂದರೆ - 20 ಪ್ರತಿಶತ ಕಡುಬಡತನದ ಕುಟುಂಬಗಳು PDS ನ ಸೌಕರ್ಯವನ್ನು ಬಳಸಿಕೊಂಡಿರಲಿಲ್ಲ ಹಾಗೂ 25ಕ್ಕೂ ಹೆಚ್ಚು ಪ್ರತಿಶತ ಶ್ರೀಮಂತ ಕುಟುಂಬಗಳು ಈ ಸೌಕರ್ಯವನ್ನು ಬಳಸಿಕೊಂಡಿದ್ದವು. ಈ ಮಾಹಿತಿ ನಿರೀಕ್ಷಿತ ಸಂಖ್ಯೆಗಳೊಂದಿಗೆ ಹೊಂದದೇ ಇದ್ದುದರಿಂದ PDS, ಸಾರ್ವಜನಿಕ ವಿತರಣಾ ಕ್ರಮದ  ಆಹಾರ ಭದ್ರತೆಯ ಸೂಚಕವಲ್ಲವೆಂದು ಸಂಶೋಧಕರು ತೀರ್ಮಾನಿಸಿದರು.

ಆಹಾರ ಬಳಕೆಯ ಹೆಚ್ಚಳ ಹಾಗೂ ಜನತೆ ತಮ್ಮ ಆದಾಯದಿಂದ ಅಧಿಕ ಪೌಷ್ಟಿಕತೆಯುಕ್ತ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು PDS ಪದ್ಧತಿ ಪ್ರೊತ್ಸಾಹಿಸಬೇಕಿದೆ. ಆದರೆ ಈ ಯೋಜನೆಯ ಯಶಸ್ಸು ಎರಡು ವಿಷಯಗಳ ಮೇಲೆ ಆಧಾರಿತವಾಗಿದೆ - ಜನತೆ ತಮ್ಮ ಪಥ್ಯದ ವಿಷಯವಾಗಿ ತಿಳುವಳಿಕೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ತಮ್ಮ ಪೌಷ್ಟಿಕ ಆಹಾರ ಸೇವನೆಯನ್ನು ಅಭಿವೃದ್ಧಿಗೊಳಿಸುವುದು. ಬಡತನದ ರೇಖೆಯ ಕೆಳಗಿರುವ ಜನತೆಗೆ ಉನ್ನತ ಶಿಕ್ಷಣದ ಸೌಲಭ್ಯವಿಲ್ಲದಿರುವ ಕಾರಣ ಈ ಕ್ರಮದ ನಿರೀಕ್ಷೆಗಳು ವಾಸ್ತವ ಪರಿಸ್ಥಿತಿಗೆ ತದ್ವಿರುದ್ಧವಾಗಿವೆ.

ಕುಟುಂಬಗಳನ್ನು PDS-ಸಹಿತ ಹಾಗೂ PDS-ರಹಿತ ಎಂದು ಎರಡು ಭಾಗಗಳಾಗಿ ವಿಂಗಡಿಸಿ ಪರಿಶೀಲಿಸಿದಾಗ ಈ ಎರಡೂ  ಅಂಶಗಳು ಸಂಶೋಧಕರ ಗಮನಕ್ಕೆ ಬಂದವು. ಬಹುಶಃ ಪ್ರತಿಯೊಂದು PDS-ಸಹಿತ ಕುಟುಂಬವು ಅಕ್ಕಿಯನ್ನು ಪಡೆದುಕೊಂಡಿತ್ತು, ಹಾಗೂ 80 ಪ್ರತಿಶತ PDS-ಸಹಿತ ಕುಟುಂಬಗಳು ಸಕ್ಕರೆಯನ್ನು ಪಡೆದುಕೊಂಡಿದ್ದವು. ಆದರೆ ಹಿಂದಿನ ಅಧ್ಯಯನಗಳ ಪ್ರಕಾರ ತಿಳಿದಿರುವುದೇನೆಂದರೆ ಬಿಳಿ ಅಕ್ಕಿಯ ಬಳಕೆ ರಕ್ತದಲ್ಲಿನ ಸಕ್ಕರೆ ಅಂಶದ ಏರಿಕೆಗೆ ಅನುವು ಮಾಡಿಕೊಡುತ್ತದೆ. ಹಾಗೆಯೇ ಸಕ್ಕರೆಯ ಅತಿಯಾದ ಬಳಕೆ ಮಧುಮೇಹ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.

ಅಕ್ಕಿ ಹಾಗೂ ಸಕ್ಕರೆಗಳಿಗೆ ಅನುದಾನ ದೊರೆಯುವ ಕಾರಣ ಮಕ್ಕಳು ಇವುಗಳನ್ನು ಹೆಚ್ಚಾಗಿ ಸೇವಿಸಲು ಆರಂಭಿಸಿರುವರೆಂದು ಸಂಶೋಧಕರು ನಿರೂಪಿಸಿದ್ದಾರೆ. ಅಷ್ಟೇ ಅಲ್ಲದೆ PDS ಕ್ರಮದಲ್ಲಿ ಪಡೆದ ಸಕ್ಕರೆಯಿಂದ ಮಕ್ಕಳ ಪಥ್ಯದ ಪೌಷ್ಟಿಕಾಂಶ ವೈವಿಧ್ಯತೆಯಲ್ಲಿ ಯಾವುದೇ ಮಹತ್ವದ ಏರಿಕೆಯಿಲ್ಲವೆಂದೂ, PDS ಕ್ರಮದಲ್ಲಿ ಪಡೆದ ಅಕ್ಕಿಯ ಸೇವನೆಯಿಂದ ಮಕ್ಕಳ ಬೆಳವಣಿಗೆಯು ಕುಂಠಿತವಾಗುವ ಸಂಭವವಿದೆಯೆಂದೂ ಸಹ ನಿರೂಪಿಸಿದ್ದಾರೆ. ಅಕ್ಕಿ ಹಾಗೂ ಸಕ್ಕರೆಗಳಿಗೆ ಅನುದಾನ ನೀಡುವುದರಿಂದ ಹಸಿವಿನ ಶಮನವಾಗಬಹುದಾದರೂ, ಅಲ್ಪಾಹಾರದ ಕಾರಣ ಆಗುವ ಕುಂದು ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗದು. ಜೊತೆಗೆ ಅಲ್ಪ ಪೌಷ್ಟಿಕಾಂಶವುಳ್ಳ ಸಕ್ಕರೆಯಂತಹ ಆಹಾರ ಪದಾರ್ಥಗಳ ಸೇವನೆ ಹೆಚ್ಚಾಗುತ್ತದೆ. ಆದ್ದರಿಂದ ಈ ಅಧ್ಯಯನವು PDS ನಿಂದ ಸಕ್ಕರೆಯನ್ನು ತೆಗೆದುಹಾಕಬೇಕೆಂದು  ಸೂಚಿಸುತ್ತದೆ.

"ಬಾಲ್ಯ, ಯೌವನ, ಹಾಗೂ ಕಿರು ಹರೆಯದ ವಯಸ್ಸುಗಳಲ್ಲಿ ಆಹಾರ ಅಭದ್ರತೆಯ ಕಾರಣಗಳು ಹಾಗೂ ಅಭದ್ರತೆಯಿಂದ ಉಂಟಾಗುವ ಪರಿಣಾಮಗಳ ವಿಷಯವಾಗಿ ತನಿಖೆ ನಡೆಸುತ್ತಿದ್ದೇವೆ", ಎನ್ನುತ್ತಾರೆ ಈ ಅಧ್ಯಯನದ ಲೇಖಕರೂ, ಲ್ಯಾಂಕ್ಯಾಸ್ಟರ್ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರ ಮತ್ತು ಸಮಾಜ ಸೇವೆಯ ಉಪನ್ಯಾಸಕರೂ ಆದ ಡಾ|| ಜಾಸ್ಮಿನ್ ಫ್ಲೆಡ್ಡೆರ್ ಯೊಹಾನ್. ಭಾರತ, ಇಥಿಯೋಪಿಯಾ, ವಿಯೆಟ್ನಾಂ, ಹಾಗೂ ಪೆರು ದೇಶಗಳಲ್ಲಿ ಆಹಾರ ಅಭದ್ರತೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಈ ತಂಡ ಯು ಕೆ ಸಂಶೋಧನೆ ಮತ್ತು ನಾವೀನ್ಯ ಸಂಸ್ಥೆಯ (UK Research and Innovation) ಭವಿಷ್ಯ ನಾಯಕರ ವೇತನದಡಿಯಲ್ಲಿ (Future Leaders Fellowship) ಆರ್ಥಿಕ ನೆರವು ಪಡೆದಿದೆ. "ಅಲ್ಪ ಪ್ರಮಾಣದ ಸಂದರ್ಶನಗಳಿಂದ ಪ್ರಾರಂಭಿಸಿ ಬೃಹತ್ ಪ್ರಮಾಣದ ಸಮೀಕ್ಷೆಗಳನ್ನು ನಿರ್ಮಿಸುವ ಮೂಲಕ ಭಾರತದ ಇತರ ಪ್ರಾಂತ್ಯಗಳಿಂದ ಮಾಹಿತಿ ಸಂಗ್ರಹಿಸುವಲ್ಲಿ ನಮ್ಮ ಸಂಶೋಧನಾ ಕಾರ್ಯವನ್ನು ವಿಸ್ತರಿಸಲಿದ್ದೇವೆ", ಎಂದೂ ಡಾ|| ಜಾಸ್ಮಿನ್ ಹೇಳುತ್ತಾರೆ.

ಅಕ್ಕಿ ಹಾಗೂ ಸಕ್ಕರೆಗಳ ಸೇವನೆಯ ಏರಿಕೆ, ಅಲ್ಪಾವಧಿಯಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ಬಗೆಹರಿಸಿದರೂ ಸಹ, ದೀರ್ಘಾವಧಿಯಲ್ಲಿ ವಿವಿಧ ಗೊಂದಲಗಳಿಗೆ ಅನುವು ಮಾಡಿಕೊಡುತ್ತದೆ. ಪೌಷ್ಟಿಕತೆ ಹಾಗೂ PDS ನಲ್ಲಿ ಅಧಿಕ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಒಳಪಡಿಸುವ ವಿಷಯಗಳ ಬಗ್ಗೆ ಕುಟುಂಬಗಳಿಗೆ ಸಮೂಹ ಮಾಧ್ಯಮ ಕಾರ್ಯಕ್ರಮಗಳು ಶಿಕ್ಷಣ ನೀಡಿದರೆ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ನೆರವಾಗಬಹುದು ಎಂಬುದು ಸಂಶೋಧಕರ ಭಾವನೆ. ಸಂಶೋಧನಾ ತೀರ್ಮಾನಗಳನ್ನು ನೀತಿನಿರ್ಮಾತರೊಂದಿಗೆ ಹಂಚಿಕೊಳ್ಳುವುದು ಅತ್ಯಗತ್ಯವಾಗಿದೆ, ಹಾಗೂ ಸಂಶೋಧಕರು ಅದೇ ಕಾರ್ಯದಲ್ಲಿ ತೊಡಗಿದ್ದಾರೆ.

"ಭವಿಷ್ಯ ನಾಯಕರ ವೇತನದ ನಿಯೋಜನೆಯುಳ್ಳ ನಾಲ್ಕೂ ದೇಶಗಳಲ್ಲಿ ನೀತಿನಿರ್ಮಾತರು ಹಾಗೂ ಪಾಲುದಾರರನ್ನೊಳಗೊಂಡ ಸಲಹಾಮಂಡಳಿಯನ್ನು ನಿರ್ಮಿಸುವ ಯೋಜನೆಯಿದೆ", ಎಂದು ಡಾ|| ಜಾಸ್ಮಿನ್ ತಮ್ಮ ಮಾತನ್ನು ಮುಗಿಸುತ್ತಾರೆ.