ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಭಾರತ ದೇಶದಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಹೊಸ ಬಲವರ್ಧಿತ ಆಹಾರ ಪದಾರ್ಥಗಳು

Mumbai
1 Sep 2021
ಭಾರತ ದೇಶದಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಹೊಸ ಬಲವರ್ಧಿತ ಆಹಾರ ಪದಾರ್ಥಗಳು

ಒಬ್ಬ ವ್ಯಕ್ತಿಯ ಆಹಾರದಲ್ಲಿ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳು (ವಿಟಮಿನ್ ಗಳು) ದೊರೆಯದೇ ಇದ್ದಾಗ ಅಪೌಷ್ಟಿಕತೆ ಉಂಟಾಗುತ್ತದೆ. ಸಾಮಾನ್ಯವಾಗಿ ಬಾಲ್ಯದಲ್ಲಿ ಶುರುವಾಗುವ ಈ ಸಮಸ್ಯೆ ಭಾರತದಲ್ಲಿ ವ್ಯಾಪಕವಾದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ. ಸೂಕ್ತ ಚಿಕಿತ್ಸೆ ನೀಡದೆ ಹೋದಲ್ಲಿ ಅಪೌಷ್ಟಿಕತೆ ಬಗೆಯಾದ ದೈಹಿಕ ಹಾಗೂ ಮಾನಸಿಕ ದೌರ್ಬಲ್ಯಗಳನ್ನು ಉಂಟು ಮಾಡಬಹುದು, ತೀವ್ರವಾದ ತೂಕ ಇಳಿಕೆಗೆ ಅಥವಾ , ಸಾವನ್ನು ಕೂಡ ಉಂಟು ಮಾಡಬಹುದು. ಭಾರತದಲ್ಲಿ 5 ವರ್ಷಗಳ ಒಳಗಿನ ಮಕ್ಕಳ 69% ಸಾವಿಗೆ ಅಪೌಷ್ಟಿಕತೆಯೇ ಕಾರಣವೆಂದು  2019 ರ ಯೂನಿಸೆಫ್ ವರದಿಮಾಡಿದ್ದಾರೆ.

ಅಪೌಷ್ಟಿಕತೆಯ ನಿವಾರಣೆಗೆ ಭಾರತ ಸರ್ಕಾರವು ತೊಡಗಿಸಿರುವ ಕಾರ್ಯಕ್ರಮಗಳು ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತವಾಗಿವೆ. ಈ ಕಾರ್ಯಕ್ರಮಗಳ ಮೂಲಕ ನಗರ ಪ್ರದೇಶದಲ್ಲಿರುವ ಅಂಚಿನ ಸಮುದಾಯದ - ಉದಾಹರಣೆಗೆ ಕೊಳೆಗೇರಿ ನಿವಾಸಿಗಳ - ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯ ವಿರುದ್ಧ ಹೋರಾಡುವುದು ಸಾಧ್ಯವಾಗದು. 6 ರಿಂದ 36 ತಿಂಗಳುಗಳ ವರೆಗಿನ ಮಕ್ಕಳ ಆಹಾರ ಸಂಯೋಜನೆ ಮತ್ತು ಪೋಷಕಾಂಶಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ನೀತಿ ಆಯೋಗವು (NITI Aayog) (ಇಂತಹ ಕಾರ್ಯಕ್ರಮಗಳ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸಂಸ್ಥೆ) ತನ್ನ ಇತ್ತೀಚಿನ ಪ್ರಗತಿ ಪತ್ರದಲ್ಲಿ ಪ್ರಕಟಿಸಿದೆ. ಇದಲ್ಲದೆ ಪ್ರಸ್ತುತವಾಗಿ ಒದಗಿಸುತ್ತಿರುವ ಪರ್ಯಾಯ ಪೋಷಣೆ ರುಚಿಕರವಾಗಿಲ್ಲ ಹಾಗೂ ಸೇವಿಸಲು ನೀರಸವಾಗಿದೆ. ಆದ್ದರಿಂದ ಅಪೌಷ್ಟಿಕತೆಯ ನಿವಾರಣೆಗೆ ಇದು ಪರಿಣಾಮಕಾರಿಯಾಗಿಲ್ಲ.

ಇತ್ತೀಚಿನ ಒಂದು ಅಧ್ಯಯನದಲ್ಲಿ, ಬಾಂಬೆಯಲ್ಲಿನ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ- ಬಾಂಬೆ, IIT-Bombay) ಸಂಶೋಧಕರು ಈ ಹಿಂದೆ ಕಡೆಗಣಿಸಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮದೇ ಆದ, ಸೂಕ್ಷ್ಮ ಪೋಷಕಾಂಶಗಳನ್ನೊಳಗೊಂಡ  ಬಲವರ್ಧಿತ ಆಹಾರವನ್ನು ತಯಾರಿಸಿದ್ದಾರೆ. ಸರ್ಕಾರ ಒದಗಿಸುವ ಪಡಿತರ ಆಹಾರಕ್ಕೆ ಹೋಲಿಸಿದರೆ ಸಂಶೋಧಕರು ತಯಾರಿಸಿರುವ ಬಲವರ್ಧಿತ ಆಹಾರವು ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆಯೆಂದು ಈ ಅಧ್ಯಯನದ ಮೂಲಕ ತಿಳಿದು ಬಂದಿದೆ. ಈ ಸಂಶೋಧನೆಯನ್ನು ಪೀಡಿಯಾಟ್ರಿಕ್ ಆನ್ ಕಾಲ್ ನಿಯತಕಾಲಿಕೆಯಲ್ಲಿ (Pediatric Oncall Journal) ಪ್ರಕಟಿಸಲಾಗಿದೆ. ಐಐಟಿ ಬಾಂಬೆಯಲ್ಲಿರುವ ಟಾಟಾ ತಂತ್ರಜ್ಞಾನ ಮತ್ತು ವಿನ್ಯಾಸ ಕೇಂದ್ರವು (Tata Centre for Technology and Design) ಈ ಸಂಶೋಧನೆಗೆ ಧನಸಹಾಯ ನೀಡಿತ್ತು. ನಗರ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಅಪೌಷ್ಟಿಕತೆಯ ಸಮಸ್ಯೆಯ ಮೇಲೆ ಬೆಳಕು ಬೀರಲು ಸಂಶೋಧಕರು ಈ ಅಧ್ಯಯನವನ್ನು ಮುಂಬೈನಲ್ಲಿರುವ ಕೊಳೆಗೇರಿಯಾದ ಧಾರಾವಿಯಲ್ಲಿ ನಡೆಸಿದರು.

ಅಪೌಷ್ಟಿಕತೆಯನ್ನು ತಡೆಗಟ್ಟಲು ಆಹಾರದಲ್ಲಿ ಲಭ್ಯವಿಲ್ಲದ ಪೋಷಕಾಂಶಗಳನ್ನು ಸೇರಿಸಬಹುದು. ಇಂತಹ ಆಹಾರವನ್ನು ಸೂಕ್ಷ್ಮ ಪೋಷಕಾಂಶಗಳನ್ನೊಳಗೊಂಡ  ಬಲವರ್ಧಿತ ಆಹಾರವೆಂದು ಕರೆಯುತ್ತಾರೆ. ಉದಾಹರಣೆಗೆ ಜೀವಸತ್ವ (ವಿಟಮಿನ್) ಎ ಮತ್ತು ಡಿ ಯಿಂದ  ಬಲವರ್ಧಿತಗೊಂಡ ಹಾಲು. ತಯಾರಿಸುವ ವಿಧಾನ, ಪೋಷಕಾಂಶದ ಮೊತ್ತ, ಆಹಾರದ ಬಗೆ - ಇವೆಲ್ಲದರ ಆಧಾರದ ಮೇಲೆ ಬಲವರ್ಧಿತ ಆಹಾರಗಳನ್ನು ವಿವಿಧ ಬಗೆಗಳಾಗಿ ವಿಂಗಡಿಸಬಹುದು. ಜ಼ಿಂಕ್, ಕಬ್ಬಿಣ, ಕ್ಯಾಲ್ಸಿಯಂ, ಜೀವಸತ್ವ (ವಿಟಮಿನ್) ಎ ಮತ್ತು ಸಿ ಮೊದಲಾದ  ಸೂಕ್ಷ್ಮ ಪೋಷಕಾಂಶಗಳಿಂದ ಬಲವರ್ಧಿತಗೊಂಡ ಸೋಯಾ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಪ್ರಸ್ತುತವಾಗಿ ಭಾರತ ಸರ್ಕಾರವು ಒದಗಿಸುತ್ತದೆ.  ಇವುಗಳನ್ನು ಪಡಿತರ ದಿನಸಿಯಾಗಿ ವಿತರಿಸಲಾಗುತ್ತದೆ, ಮನೆಗಳಲ್ಲಿ ಜನರು ಈ ಹಿಟ್ಟಿನಿಂದ ಗಂಜಿ ಮಾಡಿ ಸೇವಿಸುತ್ತಾರೆ. ಹಿಟ್ಟಿನ ಚೀಲ ಸಮಗ್ರ ಕುಟುಂಬದ ಆಹಾರಕ್ಕೆ ಬಳಕೆಯಾಗುವುದರಿಂದ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ದಿನಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಯುವುದಿಲ್ಲ.

"ಸರ್ಕಾರಿ ಸಂಸ್ಥೆಗಳು ಸಾಮಾನ್ಯವಾಗಿ ’ಒಂದೇ ಗಾತ್ರ ಎಲ್ಲರಿಗೂ ಹೊಂದುತ್ತದೆ’ ಎಂಬ ದಾರಿಯಲ್ಲಿ ನಡೆಯುತ್ತಾರೆ. ಈ ಮಾರ್ಗವು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಸುಲಭವಾದರೂ ಸಹ, ಪರಿಣಾಮಕಾರಿ ಪರಿಹಾರವಲ್ಲ." ಎನ್ನುತ್ತಾರೆ, ಅಧ್ಯಯನದ ಹಿರಿಯ ಸಂಶೋಧಕರಾದ ಪ್ರೊ| ಪಾರ್ಥಸಾರಥಿ. ಬಲವರ್ಧಿತಗೊಂಡ ಹಿಟ್ಟುಗಳಿಗಿಂತ ಉತ್ತಮವಾದ ಪರ್ಯಾಯ ಆಹಾರ ಪದಾರ್ಥಗಳಿರಬಹುದೆಂದು ಇತರ ಅಧ್ಯಯನಗಳು ತಿಳಿಸಿವೆ.

ಮನೆಗೆ-ಒಯ್ಯುವ ಪಡಿತರ ಹಿಟ್ಟುಗಳು ರುಚಿಕರವಾಗಿಲ್ಲವಾದ್ದರಿಂದ ಬಲವರ್ಧಿತ ಆಹಾರ ಉತ್ಪನ್ನದ ತಯಾರಿಕೆಗಾಗಿ ಕೆಲವು ಆಹಾರ ಪದಾರ್ಥಗಳನ್ನು ಸಂಶೋಧಕರು ವಿಶೇಷವಾಗಿ ಆರಿಸಿಕೊಂಡರು. ಮುಂಬೈನಲ್ಲಿರುವ ಮನೆಗಳ ಮಕ್ಕಳು ಸಾಮಾನ್ಯವಾಗಿ ಸೇವಿಸುವಂತಹ ಉಪ್ಪಿಟ್ಟು, ಪಾಯಸ, ಜ಼ುಣ್ಕಾ, ಮುಂತಾದ ಆಹಾರಗಳನ್ನು ಗುರುತಿಸಿದರು. ಪ್ರತಿಯೊಂದು ಮಗುವೂ ಸೇವಿಸಲು ಅನುಕೂಲವಾದ 7 ರಲ್ಲಿ 1 ಪೊಟ್ಟಣಗಳಾಗಿ ಬಲವರ್ಧಿತ  ಆಹಾರ ಪದಾರ್ಥಗಳನ್ನು ವಿನ್ಯಾಸಗೊಳಿಸಿದರು. ಈ ವಿನ್ಯಾಸದ ಆಯ್ಕೆಯ ಹಿಂದೆ ಎರಡು ಕಾರಣಗಳಿದ್ದವು - ವಿವಿಧ ಆಯ್ಕೆಗಳನ್ನು ನೀಡುವುದು, ಮತ್ತು ಪ್ರತಿ ಮಗುವೂ ಕೂಡ ದಿನಕ್ಕೆ ಅಗತ್ಯವಿರುವ ಪೋಷಕಾಂಶವನ್ನು ಪಡೆಯುವಂತೆ ಖಚಿತಪಡಿಸಿಕೊಳ್ಳುವುದು.

ಮನೆಗೆ-ಒಯ್ಯುವ ಪಡಿತರ ದಿನಸಿಯಲ್ಲಿ ಪ್ರಮುಖವಾಗಿ ಉಪ್ಪು ಅಥವಾ ಸಕ್ಕರೆಯನ್ನೊಳಗೊಂಡ ಹಿಟ್ಟನ್ನು ನೀಡಲಾಗುತ್ತದೆ - ಇದನ್ನು ರುಚಿಕರವಾಗಿ ತಯಾರಿಸಲು ಬೇರೆ ಪದಾರ್ಥಗಳನ್ನು ಅಡಿಗೆ ಮಾಡುವ ಸಮಯದಲ್ಲಿ ಬೆರೆಸಬೇಕಾಗುತ್ತದೆ.  ಅಡಿಗೆ ಮಾಡುವ ಸಮಯವೂ ಹೆಚ್ಚು, ಇತರ ಪದಾರ್ಥಗಳನ್ನು ಬೆರೆಸಬೇಕು, ಇದರಿಂದ ಆಹಾರದ ದರವು ಏರುತ್ತದೆ. ಸಂಶೋಧಕರು ವಿನ್ಯಾಸಗೊಳಿಸಿದ ಬಲವರ್ಧಿತ ಆಹಾರ ಪದಾರ್ಥಗಳಲ್ಲಿ ಕೊಬ್ಬಿನಾಂಶ, ಮಸಾಲೆಗಳು, ಒಗ್ಗರಣೆ ಮುಂತಾದವುಗಳನ್ನು ಮುಂಚೆಯೇ ಬೆರೆಸಿದರು. ಇದರಿಂದ ಆಹಾರದ ದರ ಮತ್ತು ಅಡಿಗೆಯ ಸಮಯ ಎರಡನ್ನೂ ಕಡಿಮೆಗೊಳಿಸಿದರು. ಈ ಬಲವರ್ಧಿತ  ಆಹಾರವನ್ನು 5 ನಿಮಿಷಗಳಲ್ಲಿ ತಯಾರಿಸಬಹುದು, ಮನೆಗೆ-ಒಯ್ಯುವ ಪಡಿತರ ದಿನಸಿಗಳಿಂದ ಅಡಿಗೆ ಮಾಡಲು 20 ನಿಮಿಷಗಳು ಬೇಕಾಗುವುದು.

ಧಾರಾವಿಯಾದ್ಯಂತ 300 ಅಂಗನವಾಡಿಗಳಲ್ಲಿ (ಸರ್ಕಾರ ಪ್ರಾಯೋಜಿಸುವ ಮಕ್ಕಳ ಆರೈಕೆ ಕೇಂದ್ರಗಳು) ಸಂಶೋಧಕರು ಈ ಅಧ್ಯಯನವನ್ನು ನಡೆಸಿದರು. WHO ಬೆಳವಣಿಗೆ ಚಾರ್ಟ್ ಗಳನ್ನು ಬಳಸಿ 6 ರಿಂದ 60 ತಿಂಗಳೊಳಗಿನ ಮಕ್ಕಳನ್ನು ಪರಿಶೀಲಿಸಿದರು. ಆಯ್ದ ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಒಂದು ಗುಂಪಿಗೆ ಸಂಶೋಧಕರು ವಿನ್ಯಾಸಗೊಳಿಸಿದ ಬಲವರ್ಧಿತ  ಆಹಾರ ಪದಾರ್ಥವನ್ನು ಮೂರು ತಿಂಗಳುಗಳ ಕಾಲ ನೀಡಲಾಯಿತು. ಇನ್ನೊಂದು ಗುಂಪಿಗೆ ಸರ್ಕಾರ ಒದಗಿಸುವ ಮನೆಗೆ-ಒಯ್ಯುವ ಪಡಿತರ ದಿನಸಿ ಆಹಾರವನ್ನು ಮೂರು ತಿಂಗಳುಗಳ ಕಾಲ ನೀಡಲಾಯಿತು. ಏಕರೂಪತೆಯನ್ನು ಖಾತ್ರಿಗೊಳಿಸಲು, ಸಂಶೋಧಕರು ಅಂಗನವಾಡಿ ಕಾರ್ಯಕರ್ತರಿಗೆ ಪೂರಕ ಆಹಾರ ಪದಾರ್ಥಗಳ ಪ್ರಯೋಜನಗಳ ಬಗ್ಗೆ ಮತ್ತು ಅವುಗಳನ್ನು ಬಳಸುವ ವಿಧಾನದ ಬಗ್ಗೆ ಮಾರ್ಗದರ್ಶನ ನೀಡಿದರು.

ಇಷ್ಟೇ ಅಲ್ಲದೆ ವಿವಿಧ ವಯೋಮಾನದ ಮಕ್ಕಳಿಗೆ ಅಗತ್ಯವಿರುವ ಕ್ಯಾಲೋರಿಗಳು ಮತ್ತು ಪ್ರೋಟೀನ್ ನ ಮೊತ್ತವನ್ನು ಕೂಡ ಸಂಶೋಧಕರು ಪರಿಗಣಿಸಿದರು.  ಬಲವರ್ಧಿತ  ಆಹಾರ ಪದಾರ್ಥವನ್ನು ಪಡೆದ ಮಕ್ಕಳ ಗುಂಪನ್ನು ಇನ್ನೂ ಎರಡು ಉಪ ಗುಂಪುಗಳಾಗಿ ವಿಂಗಡಿಸಿದರು - 6 ರಿಂದ 24 ತಿಂಗಳುಗಳ ವಯಸ್ಸು ಮತ್ತು 25 ರಿಂದ 60 ತಿಂಗಳುಗಳ ವಯಸ್ಸು. 2 ವರ್ಷಕ್ಕೂ ಕೆಳಗಿನ ಮಕ್ಕಳಿಗೆ ಪೂರ್ವಸಿದ್ಧ ಉಪ್ಪಿಟ್ಟು, ಪೂರ್ವಸಿದ್ಧ ಪಾಯಸ, ಮತ್ತು ಬಳಸಲು-ಸಿದ್ಧ ನಾದಿದ ಹಿಟ್ಟು ಮುಂತಾದ ಅರೆಘನ ಆಹಾರ ಪದಾರ್ಥಗಳನ್ನು ನೀಡಿದರು. ಇವುಗಳು ಮಕ್ಕಳಿಗೆ ದಿನಕ್ಕೆ 250-300 ಕಿಲೋ ಕ್ಯಾಲೋರಿಗಳನ್ನು ಮತ್ತು 10-12 ಗ್ರಾಮ್ ಪ್ರೋಟೀನ್ ಗಳನ್ನು ಒದಗಿಸಿದವು. ಹಿರಿಯ ಮಕ್ಕಳಿಗೆ ಅರೆಘನ ಮತ್ತು ಘನ ಆಹಾರ ಪದಾರ್ಥಗಳ ಸಂಯೋಜನೆಯನ್ನು ನೀಡಿದರು. ಸಾಂಪ್ರದಾಯಿಕ ಮಹಾರಾಷ್ಟ್ರೀಯ ಖಾದ್ಯಗಳಾದ ನಾನ್ ಕಟಾಯಿ, ಶಾಖರ್ ಪುರ, ಜ಼ುಣ್ಕಾ ಮುಂತಾದವುಗಳನ್ನು ಅನುಕರಿಸುವ ರೀತಿಯಲ್ಲಿ ಪೂರ್ವಸಿದ್ದ ರೂಪದಲ್ಲಿ ಈ ಆಹಾರ ಪದಾರ್ಥಗಳನ್ನು ತಯಾರಿಸಲಾಯಿತು. ಇವುಗಳು ಮಕ್ಕಳಿಗೆ ದಿನಕ್ಕೆ 450-500 ಕಿಲೋ ಕ್ಯಾಲೋರಿಗಳನ್ನು ಮತ್ತು 12-15 ಗ್ರಾಮ್ ಪ್ರೋಟೀನ್ ಗಳನ್ನು ಒದಗಿಸಬಲ್ಲವು. ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರವು ಮನೆಗೆ-ಒಯ್ಯುವ ಪಡಿತರ ದಿನಸಿ ಆಹಾರವನ್ನು ಎಲ್ಲಾ ವಯಸ್ಸಿನ ಮಕ್ಕಳಿಗೂ ಒಂದೇ ರೀತಿಯ ಪೊಟ್ಟಣಗಳ ರೂಪದಲ್ಲಿ ವಿತರಿಸುತ್ತದೆ.

3 ತಿಂಗಳುಗಳ ಅಧ್ಯಯನದ ನಂತರ ಸಂಶೋಧಕರು ಮಕ್ಕಳನ್ನು ಪುನಃ ಪರಿಶೀಲಿಸಿದರು. ಬಲವರ್ಧಿತ  ಆಹಾರ ಪದಾರ್ಥವನ್ನು ಪಡೆದ ಮಕ್ಕಳ ಗುಂಪಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು 39.2% ರಷ್ಟು ಕಡಿಮೆಯಾಗಿತ್ತು, ಸರ್ಕಾರ ಒದಗಿಸುವ ಮನೆಗೆ-ಒಯ್ಯುವ ಪಡಿತರ ದಿನಸಿ ಆಹಾರವನ್ನು ಪಡೆದ ಮಕ್ಕಳ ಗುಂಪಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು 33% ರಷ್ಟು ಕಡಿಮೆಯಾಗಿತ್ತು. ಸಂಶೋಧಕರು ನೀಡಿದ ಬಲವರ್ಧಿತ ಆಹಾರ ಪದಾರ್ಥಗಳು ಹೆಚ್ಚು ಸ್ವೀಕಾರಾರ್ಹತೆಯನ್ನು ಪಡೆದವು ಏಕೆಂದರೆ ಅವುಗಳು ವೈವಿಧ್ಯಮಯವಾಗಿದ್ದವು ಮತ್ತು ಮಕ್ಕಳ ವಯಸ್ಸಿಗೆ ಅನುಗುಣವಾಗಿ ರುಚಿ ಮತ್ತು ರೂಪವನ್ನು ಹೊಂದಿಸಲಾಗಿತ್ತು. ಹೀಗಾಗಿ ಬಲವರ್ಧಿತ  ಆಹಾರ ಪದಾರ್ಥವನ್ನು ಪಡೆದ ಮಕ್ಕಳ ಗುಂಪಿನಲ್ಲಿ ಆಹಾರ ಸೇವನೆಯ ಪ್ರಮಾಣದಲ್ಲಿ ಹೆಚ್ಚಳವನ್ನು (75-80%) ಸಂಶೋಧಕರು ಗಮನಿಸಿದರು. ಇಲ್ಲಿ ಗಮನಾರ್ಹ ವಿಷಯವೆಂದರೆ ಎರಡೂ ಗುಂಪಿನ ಮಕ್ಕಳ ಆಹಾರ ಸೇವನೆಯಯನ್ನು ಅಂಗನವಾಡಿ ಕಾರ್ಯಕರ್ತರು ಸತತವಾಗಿ ಮೇಲ್ವಿಚಾರಿಸುತ್ತಿದ್ದರಿಂದ ಅಪೌಷ್ಟಿಕತೆಯ ಇಳಿಕೆಗೆ ಇದೂ ಸಹ ಕೊಡುಗೆ ನೀಡಿರುವ ಸಾಧ್ಯತೆಯಿದೆ. ಕಾರ್ಯಕರ್ತರ ಸತತ ಸಮಾಲೋಚನೆಯಿಂದ ಮಕ್ಕಳು ಮನೆಗೆ ಒಯ್ದ ಆಹಾರ ಪದಾರ್ಥವನ್ನು ತಪ್ಪದೇ ಸೇವಿಸುತ್ತಿರುವರೆಂಬುದು ಖಾತ್ರಿಯಾಯಿತು.

"ಮಹಾರಾಷ್ಟ್ರದಲ್ಲಿ ಅಪೌಷ್ಟಿಕತೆಯ ಪ್ರಮಾಣದಲ್ಲಿ ಮಹತ್ವದ ಇಳಿಕೆ ಕಾಣದೇ ಇರುವ ವಾಸ್ತವ ಸಂಗತಿಯು ಸರ್ಕಾರ ಮನೆಗೆ ಒದಗಿಸುವ ಪಡಿತರ ದಿನಸಿಗೆ ಪರ್ಯಾಯ ವ್ಯವಸ್ಥೆಯನ್ನು ತಯಾರಿಸಲು ಆಧಾರವಾಗಬಹುದು. ಅಪೌಷ್ಟಿಕತೆಯನ್ನು ನಿವಾರಿಸಲು ಇತರ ಅನುಸರಣ ಕಾರ್ಯವಿಧಾನಗಳನ್ನು ಹುಡುಕುವ ಆಧಾರವೂ ಆಗಬಹುದು," ಎನ್ನುತ್ತಾರೆ, ಪ್ರೊ| ಶಾ.

ಸರ್ಕಾರವು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ವಿಧಾನದಲ್ಲಿ ನಿಜವಾದ ಬದಲಾವಣೆಯನ್ನು ತರಲು ಸಂಶೋಧಕರು ಬಯಸುತ್ತಾರೆ. ಸರ್ಕಾರವು ಬಲವರ್ಧಿತಗೊಂಡ ಆಹಾರ ಪದಾರ್ಥಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಲವರ್ಧಿತಗೊಂಡ ಆಹಾರ ಪದಾರ್ಥಗಳನ್ನು ನೀಡುವ ಕ್ರಿಯೆಯ ತಾಂತ್ರಿಕ ಪರಿಣಾಮಕಾರಿತ್ವವನ್ನು ಪರಿಶೀಲಿಸುವಲ್ಲಿ ಈ ಅಧ್ಯಯನವು ಪ್ರಾಯೋಗಿಕ ಯೋಜನೆಯಾಗಿತ್ತು. ಮುಂದಿನ ಹಂತದಲ್ಲಿ ಉತ್ಪನ್ನದ ವೆಚ್ಚ, ಮತ್ತು ಪ್ರಯತ್ನದ ವೆಚ್ಚದ ಪ್ರಮಾಣಗಳನ್ನು ಪರಿಗಣಿಸುವ ಯೋಜನೆಯನ್ನು ಸಂಶೋಧಕರು ಹಮ್ಮಿಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವೆಗಳ ಆಯುಕ್ತರು ಮತ್ತು ಟಾಟಾ ಟ್ರಸ್ಟ್ ನ ಪೋಷಣೆ ತಂಡದೊಂದಿಗೆ ಮಾತುಕತೆಯಲ್ಲಿ ಕೂಡ ತೊಡಗಿದ್ದಾರೆ.

"ಸರ್ಕಾರಿ ಕಾರ್ಯಕ್ರಮವು ಸೂಕ್ಷ್ಮ ಪೋಷಕಾಂಶಗಳಿಂದ ಬಲವರ್ಧಿತಗೊಂಡ ಆಹಾರ ಪದಾರ್ಥಗಳನ್ನು ತನ್ನ ವಿತರಣಾ ವ್ಯವಸ್ಥೆಯಲ್ಲಿ ಒಟ್ಟುಗೂಡಿಸಿ, ಪ್ರಸ್ತುತವಾಗಿ ಒದಗಿಸುತ್ತಿರುವ ಒಂದೇ ರೀತಿಯ ಮನೆಗೆ-ಒಯ್ಯುವ ಪಡಿತರ ದಿನಸಿಗೆ ಬದಲಾಗಿ 7 ರಲ್ಲಿ 1 ಪೊಟ್ಟಣಗಳನ್ನು ನೀಡುವಂತೆ ನಾವು ಪ್ರೇರೇಪಿಸಿದ್ದೇವೆ," ಎನ್ನುತ್ತಾರೆ, ಪ್ರೊ| ಶಾ.

Kannada