ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಹುಲ್ಲುಗಾವಲುಗಳಿಗೆ ಮಾರಕವಾದ ಸಾಮಾಜಿಕ ಕೃಷಿ

Read time: 1 min
Kodaikanal
24 Mar 2018
Photo : Vignesh Kamath / Research Matters

ಅನೇಕ ಪ್ರವಾಸಿಗರ ಪಾಲಿಗೆ ಪಶ್ಚಿಮ ಘಟ್ಟಗಳೆಂದರೆ ರಮಣೀಯ ಪ್ರವಾಸಿ ತಾಣವಷ್ಟೇ. ಆದರೆ, ಇವುಗಳಿಗೆ ಅದಕ್ಕಿಂತಲೂ ಹೆಚ್ಚು ಮಾನ್ಯತೆ, ಪ್ರಾಮುಖ್ಯ ಇದೆ. ವಿಶ್ವದ ಜೀವ ವೈವಿಧ್ಯ ಸಂಪದ್ಭರಿತವಾಗಿರುವ ಎಂಟು ಅತ್ಯಂತ ಪ್ರಮುಖ ತಾಣಗಳಲ್ಲಿ ಪಶ್ಚಿಮ ಘಟ್ಟ ಶ್ರೇಣಿಯೂ ಒಂದು. ಈ ಗಿರಿ ಶ್ರೇಣಿ ಬಗೆಬಗೆಯ ಕಾಡುಗಳು ಮತ್ತು ಹುಲ್ಲುಗಾವಲುಗಳನ್ನು ಒಳಗೊಂಡ ಮಹತ್ತರ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂಬುದು ಇದರರ್ಥ. ಊಹಿಸಲಾಗದಷ್ಟು ಸಂಖ್ಯೆಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಇಲ್ಲಿವೆ. ಅಷ್ಟೇ ಅಲ್ಲ, ಭಾರತೀಯ ಮಳೆಗಾಲವನ್ನು ಕಾಪಾಡಿಕೊಳ್ಳುವಲ್ಲಿಯೂ ಇವುಗಳ ಪಾತ್ರ ಪ್ರಮುಖವಾದುದು.

ಆದರೂ, ಇತ್ತೀಚಿನ ವರ್ಷಗಳಲ್ಲಿ, ವ್ಯಾಪಕ ಮಾನವ ಚಟುವಟಿಕೆಗಳು ಈ ಹಚ್ಚ ಹಸುರಿನ ಕಾಡುಗಳ ಉಳಿವಿಗೆ ಬೆದರಿಕೆಯನ್ನೊಡ್ಡುತ್ತಿವೆ. ಇದರಿಂದಾಗಿ ಇಲ್ಲಿನ ಪ್ರಾಣಿಗಳ ಮತ್ತು ಸಸ್ಯಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪಶ್ಚಿಮ ಘಟ್ಟದಲ್ಲಿ ಏನೇನು ಬದಲಾವಣೆಗಳು ನಡೆಯುತ್ತಿದೆ ಎಂಬುದನ್ನು ನಿಖರವಾಗಿ ತಿಳಿಯಲು ಸಂಶೋಧಕರು ಮತ್ತು ಸಂರಕ್ಷಕರ ತಂಡವು, 'ಆಕಾಶ ದ್ವೀಪ' ಎಂದು ಕರೆಸಿಕೊಳ್ಳುವ ಪಳನಿ ಬೆಟ್ಟದಲ್ಲಿ, ಈ 40 ವರ್ಷಗಳಲ್ಲಿ ಸಸ್ಯವರ್ಗದ ಹೊದಿಕೆಯಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದೆ.

‘ಈ ಆಕಾಶ ದ್ವೀಪಗಳು ಆವಾಸಸ್ಥಾನ ದ್ವೀಪಗಳಾಗಿವೆ. ಸಾಮಾನ್ಯವಾಗಿ ಇವು ಹೆಚ್ಚಿನ ಎತ್ತರದ ಆರ್ದ್ರ, ತಂಪಾದ ಆವಾಸ ಸ್ಥಾನಗಳಾಗಿದ್ದು, ಶುಷ್ಕ, ಬೆಚ್ಚಗಿನ ಕಡಿಮೆ ಎತ್ತರದ ಪ್ರದೇಶಗಳಿಂದ ಬೇರ್ಪಡಿಸಿವೆ’ ಎನ್ನುತ್ತಾರೆ ಈ ಅಧ್ಯಯನದ ಸಹಲೇಖಕರಾದ ಡಾ. ವಿ.ವಿ. ರಾಬಿನ್. ಪಶ್ಚಿಮಘಟ್ಟಗಳು, ಅದರಲ್ಲೂ, ವಿಶೇಷವಾಗಿ ಶ್ರೀಲಂಕಾ ಪ್ರದೇಶದಲ್ಲಿರುವ ಆಕಾಶ ದ್ವೀಪವು, ಎತ್ತರ ಪ್ರದೇಶದ ತೇವಾರಣ್ಯವಾದ 'ಶೋಲಾ ಕಾಡುಗಳ' ಮತ್ತು ಗುಡ್ಡಗಾಡಿನ ವಿಶೇಷ ಹುಲ್ಲುಗಾವಲುಗಳ ಸಮ್ಮಿಲನ. ಈ ಹುಲ್ಲುಗಾವಲುಗಳು ಜೀವವೈವಿಧ್ಯದಲ್ಲೂ ಸಮೃದ್ಧವಾಗಿದ್ದು, ಹುಲ್ಲುಗಳ 27 ಸ್ಥಳೀಯ ಪ್ರಭೇದಗಳನ್ನು ಹೊಂದಿವೆ.

'ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ'ವು ಇವುಗಳಲ್ಲಿ ಒಂದನ್ನು ಅಳಿವಿನಂಚಿನ ಪ್ರಭೇದ ಎಂದು ವರ್ಗೀಕರಿಸಿದೆ. ಇಂತಹ ಅನೇಕ ಸಸ್ಯ-ಪ್ರಾಣಿಗಳಿಗೆ ನೆಲೆಯಾಗಿರುವುದಲ್ಲದೇ, ಈ ಹುಲ್ಲುಗಾವಲುಗಳು ತಗ್ಗಿನ ಪ್ರದೇಶಗಳಿಗೆ ನೀರನ್ನೂ ಹರಿಸುತ್ತವೆ.

‘ಪಶ್ಚಿಮ ಘಟ್ಟಗಳು, ಬಹುಶಃ ಭಾರತದಲ್ಲಿನ ಉತ್ತಮ ದಾಖಲಿತ ಭೂದೃಶ್ಯಗಳಾಗಿದ್ದರೂ ಅಲ್ಲಿನ ಕೀಟಗಳು ಮತ್ತು ಇತರ ಕಶೇರುಕಗಳ ಬಗ್ಗೆ ನಮಗೆ ತಿಳಿಯದಿರುವ ಅಂಶಗಳು ಬೇಕಾದಷ್ಟಿವೆ. ಅಲ್ಲಿ ಅನೇಕ ಸ್ಥಳೀಯ ವಿಶಿಷ್ಟ ಹಕ್ಕಿಗಳು ಕೂಡ ಇವೆ’ ಎನ್ನುತ್ತಾರೆ ಈ ಅಧ್ಯಯನದ ಸಹ ಲೇಖಕರಾದ ಡಾ ಮಿಲಿಂದ್ ಬೈಯಾನ್.

ಇಂದು, ಹುಲ್ಲುಗಾವಲುಗಳು ಎಂದರೆ ಅನುಪಯುಕ್ತ ತ್ಯಾಜ್ಯತಾಣಗಳು ಎಂಬ ತಪ್ಪುಗ್ರಹಿಕೆಯ ಕಾರಣದಿಂದ, ಈ ವಿಶಿಷ್ಟ ಆವಾಸಸ್ಥಾನಗಳು ಅಪಾಯಕ್ಕೆ ಸಿಲುಕಿವೆ. 'ಪ್ಲಾಸ್ ಒನ್' (PLOS ONE) ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, 1973ರಿಂದ 2014ರರವರೆಗಿನ 40 ವರ್ಷಗಳ ಅವಧಿಯಲ್ಲಿ, ಪಳನಿ ಬೆಟ್ಟದ ಹುಲ್ಲುಗಾವಲುಗಳು, ಕಾಡುಗಳು, ತೋಟಗಳು ಮತ್ತು ಕೃಷಿಭೂಮಿಗಳ ವಿಸ್ತೀರ್ಣದಲ್ಲಿ ಬಹಳ ಬದಲಾವಣೆ ಆಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಸಂಶೋಧಕರು ಈ ಅಧ್ಯಯನಕ್ಕೆ ಆರಿಸಿಕೊಂಡಿದ್ದ 40 ವರ್ಷಗಳ ಅವಧಿಯಲ್ಲಿ ಪ್ರತಿ ದಶಕದ ಮಾಹಿತಿಗಾಗಿ, ಪಳನಿ ಬೆಟ್ಟಗಳ ಭೂದೃಶ್ಯದ ಉಪಗ್ರಹ ಚಿತ್ರಗಳನ್ನು ಬಳಸಿದ್ದಾರೆ. ಅದರ ವೈಶಿಷ್ಟ್ಯಗಳ ಆಧಾರದ ಮೇಲೆ, ಅವರು ಅಲ್ಲಿನ ಭೂಪ್ರದೇಶವನ್ನು ಶೋಲಾ ಅರಣ್ಯ, ಶೋಲಾ ಹುಲ್ಲುಗಾವಲು, ಮರಮುಟ್ಟುಗಳ ತೋಟಗಳು, ಮಾನವ ವಸತಿ, ಕೃಷಿಭೂಮಿ ಮತ್ತು ಜಲಪಾತ್ರೆಗಳಾಗಿ ವರ್ಗೀಕರಿಸಿದರು.

ಈ ಸಂಶೋಧನೆಯಿಂದ ಕಂಡುಬಂದ ಅಚ್ಚರಿದಾಯಕ ಹಾಗೂ ಬೇಸರದ ವಿಚಾರವೆಂದರೆ, ಈ ಭೂಭಾಗದ ಅರ್ಧಕ್ಕಿಂತಲೂ ಹೆಚ್ಚು, (ನಿಖರವಾಗಿ ಹೇಳುವುದಾದರೆ ಶೇಕಡ 58ರಷ್ಟು) ಪ್ರದೇಶವು, 40ವರ್ಷಗಳಲ್ಲಿ ಭಾರಿ ಬದಲಾವಣೆಗೆ ಒಳಗಾಗಿದೆ. ಇದರ ಅರ್ಥ, 249 ಚದರ ಕಿಲೊ ಮೀಟರ್ ಶೋಲಾ ಹುಲ್ಲುಗಾವಲುಗಳು ಮತ್ತು 33 ಚದರ ಕಿಲೊ ಮೀಟರ್ ಶೋಲಾ ಅರಣ್ಯವು ನಷ್ಟವಾಗಿದೆ.

ಹುಲ್ಲುಗಾವಲುಗಳ ಮೇಲೆ ದುಷ್ಪರಿಣಾಮ ಬೀರುವ ಅಂಶಗಳ ಪೈಕಿ, ಮಾನವನಿರ್ಮಿತ ತೋಟಗಳ ಪಾಲು ಹೆಚ್ಚು. ತೋಟಗಳ ಪ್ರಮಾಣವು ಈ 40 ವರ್ಷಗಳಲ್ಲಿ 12 ಪಟ್ಟು ಹೆಚ್ಚಾಗಿದ್ದು, ಇವುಗಳೇ ಸ್ಥಳೀಯ ಆವಾಸಸ್ಥಾನಕ್ಕೆ ಅತ್ಯಂತ ಹಾನಿಕಾರಕವಾಗಿವೆ ಎಂದು ಸಂಶೋಧಕರು ಗಮನಿಸಿದ್ದಾರೆ. ಕೃಷಿ ಭೂಮಿಯ ಪ್ರಮಾಣವು 31.1 ಚದರ ಕಿಲೊ ಮೀ‌‌‌ಟರ್‌ನಿಂದ 104.5 ಚದರ ಕಿಲೊ ಮೀಟರ್‌ಗೆ ಹೆಚ್ಚಳ ಆಗಿರುವುದೂ, ಇದೇ ಕಾಲಘಟ್ಟದಲ್ಲಿ. 1993– 2014ರ ಅವಧಿಯಲ್ಲಿ ತೋಟ ಮತ್ತು ಕೃಷಿಯ ಹೆಚ್ಚಳವು ಅತ್ಯಧಿಕ ಪ್ರಮಾಣದಲ್ಲಿ ಕಂಡುಬಂದಿದ್ದು, ಈ ಸಮಯದಲ್ಲೇ ಸ್ಥಳೀಯ ಸಸ್ಯವರ್ಗದಲ್ಲಿ ಗರಿಷ್ಠ ಬದಲಾವಣೆ ಕಂಡುಬಂದಿದೆ ಎಂದು ಸಂಶೋಧಕರು ಗಮನಿಸಿದ್ದಾರೆ.'

ಈ ಹುಲ್ಲುಗಾವಲು ಆವಾಸಸ್ಥಾನದಲ್ಲಾದ ಇಂತಹ ಒಂದು ವ್ಯಾಪಕ ಬದಲಾವಣೆಯು, ಶೋಲಾ ಕಾಡುಗಳ ಜೀವವೈವಿಧ್ಯದ ಮೇಲೆ ಭರಿಸಲಾಗದ ಪರಿಣಾಮಗಳನ್ನು ಉಂಟುಮಾಡಿದೆ.

‘ಈ ಭೂಪ್ರದೇಶದಲ್ಲಿ ಮಾತ್ರ ಕಂಡುಬರುತ್ತಿದ್ದ ವಿಶಿಷ್ಟ ಹಕ್ಕಿಗಳಲ್ಲಿ ಒಂದಾದ 'ನೀಲಗಿರಿ ಪಿಪಿಟ್', ತನ್ನ ಆವಾಸಸ್ಥಾನದ ಮೇಲಾಗುತ್ತಿರುವ ದೌರ್ಜನ್ಯದ ಕಾರಣದಿಂದ ಸ್ಥಳೀಯವಾಗಿ ಅಳಿವಿನಂಚಿಗೆ ಸರಿಯುತ್ತಿರುವುದು ಕಂಡುಬಂದಿದೆ. ಈ ಪಕ್ಷಿಗಳಂತೆಯೇ, ಅನೇಕ ಸಸ್ಯಗಳು, ಕೀಟಗಳು ಮತ್ತು ಇತರ ಪ್ರಭೇದಗಳ ಮೇಲೂ ಈ ಬದಲಾವಣೆ ಪ್ರಭಾವ ಬೀರುತ್ತದೆ ಎಂದೂ ನಾವು ಅರ್ಥೈಸಿಕೊಳ್ಳಬಹುದು’ ಎನ್ನುತ್ತಾರೆ ಡಾ. ಬೈಯಾನ್.

ಅಧ್ಯಯನವು, ಪಶ್ಚಿಮಘಟ್ಟಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮನ್ನು ಎಚ್ಚರಿಸುವ ಮೊದಲ ಅಧ್ಯಯನವೇನಲ್ಲ. ಆದರೆ, ಪಶ್ಚಿಮಘಟ್ಟದ ಹುಲ್ಲುಗಾವಲಿನ ಭವಿಷ್ಯವನ್ನು ವಿವರವಾಗಿ ವಿವರಿಸುವ ಮೊದಲನೆಯ ಸಂಶೋಧನೆ ಇದಾಗಿದೆ. ಆವಾಸಸ್ಥಾನಗಳ ವೈವಿಧ್ಯವನ್ನು ಕಡೆಗಣಿಸಿ ಎಲ್ಲವನ್ನೂ ಒಂದೇ ರೀತಿ ನೋಡುವುದು, ಹೇಗೆ ತಪ್ಪು ಅರ್ಥೈಸುವಿಕೆಗೆ ಕಾರಣವಾಗಬಹುದು ಎಂಬುದರ ಬಗ್ಗೆಯೂ ಈ ಸಂಶೋಧನೆ ಗಮನ ಸೆಳೆಯುತ್ತದೆ.

ಹಾಗಾದರೆ, ನಾವು ಈ ಹಾನಿಯನ್ನು ಹೇಗೆ ತಡೆಯಬಹುದು? ಈ ಪ್ರಶ್ನೆಗೆ ಉತ್ತರವಾಗಿ, ಸಂಶೋಧಕರು, ಈ ವಿಶಿಷ್ಟ ಆವಾಸಸ್ಥಾನವನ್ನು ಪುನಃಸ್ಥಾಪಿಸಲು ಮತ್ತು ರಕ್ಷಿಸಲು, ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರಂತಹ ವಿವಿಧ ಪಾಲುದಾರರನ್ನು ಒಳಗೊಂಡಿರುವ ಪುನಃಸ್ಥಾಪನಾ ಮಾದರಿಯನ್ನು ಶಿಫಾರಸು ಮಾಡುತ್ತಾರೆ.

‘ಅಳಿದುಳಿದ ಹುಲ್ಲುಗಾವಲುಗಳನ್ನು ಸಂರಕ್ಷಿಸಿ, ಜೊತೆಗೇ, ಅವುಗಳೊಳಗೆ ಹೊಸ ತೋಟಗಳ ಆಕ್ರಮಣವನ್ನು ತಡೆಗಟ್ಟುವ ಮೂಲಕ ಮಾತ್ರ, ಈಗಿರುವ ಹುಲ್ಲುಗಾವಲು ಆವಾಸಸ್ಥಾನಗಳ ಸಂರಕ್ಷಣೆ ಸಾಧ್ಯ’ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.