ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ನಗರದ ಗಡಿಬಿಡಿಯ ನಡುವೆ ಹಕ್ಕಿಗಳ ಚಿಲಿಪಿಲಿಯ ಸವಿ!

ಬೆಂಗಳೂರು
21 ಮೇ 2020
ನಗರದ ಗಡಿಬಿಡಿಯ ನಡುವೆ ಹಕ್ಕಿಗಳ ಚಿಲಿಪಿಲಿಯ ಸವಿ!

ಇಲ್ಲೊಂದು ಚಿಲಿಪಿಲಿ, ಅಲ್ಲೊಂದು ವಾಹನದ ಹಾರ್ನ್! ಕೀಟಗಳ ಕಿರುಗುಡುವಿಕೆ,  ನಾಯಿಯ ಬೊಗಳುವಿಕೆ, ಚರ್ಚ್‌ನ ಗಂಟೆ ಮತ್ತು ವಿವಿಧ ಪಕ್ಷಿಗಳ ಕಲರವ -  ನಗರದಲ್ಲಿ ಇವೆಲ್ಲವೂ ಒಟ್ಟೊಟಿಗೆ ಕೇಳಿಸಬಹುದಾಗಿದ್ದು, ಇದೇ ಕಾರಣದಿಂದಲೇ ನಗರದಲ್ಲಿ ಪಕ್ಷಿಯಾಗಿ ಬದುಕುವುದು ಕಠಿಣಕಾರ್ಯ!. ಈ ಗಡಿಬಿಡಿಯ ಗಲಗಲದಲ್ಲಿ, ಸಂಗಾತಿಗೆ ಪಕ್ಷಿಯ ಕರೆ ಕೇಳಿಸುವುದು ಅಸಾಧ್ಯ! ಹಾಗಾಗಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು, ನಗರಗಳೂ ಸೇರಿದಂತೆ ಎಲ್ಲೆಡೆ, ಪಕ್ಷಿಗಳು ತಮ್ಮ ಸಮೂಹಗಾನದಲ್ಲಿ ಸಮಯ, ಆವಾಸಸ್ಠಾನ ಮತ್ತು ವಿಶಿಷ್ಟ ಸೂಚನೆ ನೀಡುವ ಸಲುವಾಗಿ ಕೂಗಿನ ಸಂಖ್ಯೆಯಲ್ಲಿ ಬದಲಾವಣೆ ತರುವ ವಿವಿಧ ತಂತ್ರಗಳನ್ನು ಬಳಸುತ್ತವೆ. ಅದರಲ್ಲೂ, ವಲಸೆ ಹಕ್ಕಿಗಳು ಬಂದಾಗ, ಸಮೂಹಗಾನದಲ್ಲಿ ತಮ್ಮದೇ ವೈಯಕ್ತಿಕ ದನಿಯನ್ನು ಕೇಳಿಸುವಂತೆ ಮಾಡಲು ಈ ತಂತ್ರಗಳು ಇನ್ನಷ್ಟು ನಿರ್ಣಾಯಕವಾಗಬಹುದು.

ಬಿಹೇವಿಯರಲ್ ಇಕಾಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವೊಂದರಲ್ಲಿ, ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಡಾ.ಆನಂದ್ ಕೃಷ್ಣನ್ ಅವರು, ವಲಸಿಗ ಹಕ್ಕಿಗಳ ಆಗಮನಕ್ಕೂ ಮುಂಚೆ ಮತ್ತು ನಂತರ, ಇಲ್ಲಿನ ಪಕ್ಷಿಗಳ ಹಾಡುವ ಚಟುವಟಿಕೆ ಮತ್ತು ಅವುಗಳ ಸಮುದಾಯ ರಚನೆಯಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡಿದರು. ಈ ಸಂಶೋಧನೆಯಲ್ಲಿ ಕಂಡುಬಂದ ಅಂಶಗಳು, ಪಕ್ಷಿಗಳ ಗಾಯನದ ಮೂಲಕ ಮತ್ತು ಅವುಗಳ ಹಾಡುವ ನಡವಳಿಕೆಯ ವಿವರಗಳ ಮೂಲಕ, ವೇಗವಾಗಿ ಬದಲಾಗುತ್ತಿರುವ ನಗರ ಆವಾಸಸ್ಥಾನಗಳ ಬಗ್ಗೆ ಅರಿಯಲು ಒಂದು ಪ್ರಮುಖ ಚೌಕಟ್ಟನ್ನು ಕಟ್ಟಿಕೊಡುತ್ತವೆ.

ತಿಮಿಂಗಲಗಳು, ಕಪ್ಪೆಗಳು, ಕೀಟಗಳು ಮತ್ತು ಪಕ್ಷಿಗಳಂತಹ ಸ್ವರವನ್ನೇ ಹೆಚ್ಚಾಗಿ ಬಳಸಲಿಚ್ಚಿಸುವ ಜೀವಿಗಳಲ್ಲಿ ಹಾಡುಗಳು ಮತ್ತು ಕರೆಗಳು ವೈವಿಧ್ಯಮಯ ಕಾರ್ಯಗಳನ್ನು ನಿರ್ವಹಿಸುತ್ತವೆ. ಪಕ್ಷಿಗಳು ತಮ್ಮದೇ ಜಾತಿಯ ಇತರ ಸದಸ್ಯರನ್ನು ಗುರುತಿಸುವ ಕರೆಗಳು, ಬೆದರಿಕೆಯನ್ನು ಸೂಚಿಸುವ ಸಂಕೇತಗಳು, ತಮ್ಮ ವಸಾಹತು ಪ್ರದೇಶವನ್ನು ಜಗಜ್ಜಾಹೀರು ಮಾಡುವುದು ಮತ್ತು ಸಂಗಾತಿಗಳನ್ನು ಆಕರ್ಷಿಸುವ ಕರೆಗಳನ್ನು ಒಳಗೊಂಡಂತೆ, ವಿವಿಧ ಸಂಕೇತಗಳನ್ನು ಬಳಸುವ ಹಂತದವರೆಗೆ ವಿಕಸಿಸಿವೆ. ಈ ಸಂಕೇತಗಳು ಅಥವಾ ಧ್ವನಿಗಳನ್ನು ‘ಅಕೌಸ್ಟಿಕ್ ಸಂಕೇತಗಳು’ ಎಂದು ಕರೆಯಲಾಗುತ್ತದೆ. ‘ಬಹುಆಯಾಮದ ಸಂಕೇತ ಸ್ಥಳ’ಕ್ಕೆ ಸಂಬಂಧಿಸಿದ ಗಣಿತದ ವಿಧಾನದ ಮೂಲಕ ಅವುಗಳನ್ನು ಅಧ್ಯಯನ ಮಾಡಲಾಗುತ್ತದೆ.

"ಅಕೌಸ್ಟಿಕ್ ಸಂಕೇತ ಸ್ಥಳ ಎಂಬುದರ ಅರ್ಥವೇನೆಂದರೆ, ನಾವು ಧ್ವನಿಯನ್ನು ಒಂದು ಬಿಂದುವಾಗಿ ಪ್ರತಿನಿಧಿಸಬಹುದಾದರೆ, ಪಕ್ಷಿ ಸಮುದಾಯದ ಪ್ರತಿಯೊಂದು ಜಾತಿಯ ಬಿಂದುಗಳು ಈ ಸಂಕೇತ ಸ್ಥಳದ ವಿಭಿನ್ನ ಪ್ರದೇಶದಲ್ಲಿರಬೇಕು" ಎಂದು ಡಾ ಕೃಷ್ಣನ್ ವಿವರಿಸುತ್ತಾರೆ.

ಪ್ರತಿಯೊಂದು ಸಂಕೇತದ ಬಿಂದುಗಳೂ ಒಂದೊಂದು ವಿಭಿನ್ನ ಪ್ರದೇಶಗಳಾಗಿ ಗುರುತಿಸಿಕೊಂಡು ವಿಶಿಷ್ಟವಾದ ‘ಅಕೌಸ್ಟಿಕ್ ಗೂಡು’ ಎಂದು ಕರೆಸಿಕೊಳ್ಳುತ್ತವೆ. ಪ್ರತಿಯೊಂದು ಪ್ರಭೇದಗಳ ಬಿಂದುಗಳೂ ಬೇರೆ ಬೇರೆ ಸ್ಥಳದಲ್ಲಿದ್ದಾಗ, ಒಟ್ಟಾರೆ ಸಮುದಾಯವು ಈ ‘ಅಕೌಸ್ಟಿಕ್ ಸ್ಥಳ’ದ ತುಂಬಾ ಚದುರಿಹೋಗುತ್ತದೆ. ಇದಕ್ಕೆ ವಿರುದ್ಧವಾದ ಸನ್ನಿವೇಶವು ಉಂಟಾದಲ್ಲಿ, ವಿವಿಧ ಪ್ರಭೇದಗಳ ಹಾಡುಗಳು ಒಂದೇ ಬಿಂದುವಾಗಿ ಕಂಡುಬಂದು ಓವರ್ಲ್ಯಾಪ್ ಆಗುವ ಸಾಧ್ಯತೆಗಳಿವೆ.

ಡಾ. ಕೃಷ್ಣನ್ ಅವರ ‘ಅಕೌಸ್ಟಿಕ್ ಸಂಕೇತ ಸ್ಥಳ’ದ ಅಧ್ಯಯನದ ಆಧಾರದ ಮೇಲೆ, ಅವರ ವಿದ್ಯಾರ್ಥಿಗಳಾದ  ಶಿವಂ ಚಿಟ್ನಿಸ್ ಮತ್ತು ಸಂಯುಕ್ತಾ ರಾಜನ್ ಅವರು, ನಾಲ್ಕು ನಿಕಟವಾಗಿ ಸಂಬಂಧಿತ ಪ್ರಭೇದಗಳಿಗೆ ಸೇರಿದ ಪ್ರೀಣಿಯಾ ಪಕ್ಷಿಗಳ ಸಂಯೋಗ ಕರೆಗಳನ್ನು ಅಧ್ಯಯನ ಮಾಡಿದರು.ಇತರ ಪ್ರಭೇದಗಳ ಅಥವಾ ತನ್ನದೇ ಪ್ರಭೇದದ ಪಕ್ಷಿಗಳ ನಡುವಿನ ಸ್ಪರ್ಧೆ ಮತ್ತು ಪಾರಿಸರಿಕ ಅಂಶಗಳ ಕಾರಣದಿಂದ, ಪಕ್ಷಿಗಳು, ದಿನದ ವಿವಿಧ ಸಮಯಗಳಲ್ಲಿ ಕರೆ ಹೊರಡಿಸುತ್ತವೆ ಅಥವಾ ಇತರ ಪಕ್ಷಿಗಳ ಕರೆಗಳ ನಡುವೆ ಇರುವ ನೀರವತೆಯ ಸಮಯದ ಲಾಭ ಪಡೆದು ವಿವಿಧ ಸ್ಥಳಗಳಿಂದ ಹಾಡುವಂತಹ ವಿವಿಧ ತಂತ್ರಗಳನ್ನು ಬಳಸಿಕೊಳ್ಳುತ್ತವೆ. ಅಂದರೆ, ಅಕೌಸ್ಟಿಕ್ ಸಂಕೇತಗಳು ಒಂದರ ಮೇಲೊಂದು ಒಂದೇ ಬಿಂದುವಾಗಿ ಕಂಡುಬರದಂತೆ, ವಿಭಿನ್ನ ಸ್ಥಾನಗಳನ್ನು ಬಿಂಬಿಸಿ ತಮ್ಮ ಕರೆಗಳ ಉದ್ದೇಶ ಈಡೇರುವಂತೆ ಮಾಡುವ ಈ ತಂತ್ರಗಳನ್ನು ಅಕೌಸ್ಟಿಕ್ ಸಂಕೇತ ಸ್ಥಳ’ದ ವಿಭಜನೆ ಎಂದು ಕರೆಯಲಾಗುತ್ತದೆ. ಈ ತಂಡದ ಅಧ್ಯಯನವು ಈ ವಿಷಯದ ಬಗ್ಗೆ ನಡೆದಿರುವ ಕೆಲವೇ ಕೆಲವು ಸಂಶೋಧನೆಗಳಲ್ಲಿ ಒಂದಾಗಿದ್ದು, ಕುರುಚಲು ಮತ್ತು ಹುಲ್ಲುಗಾವಲುಗಳಂತಹ ತೆರೆದ ಆವಾಸಸ್ಥಾನಗಳನ್ನು ಆಕ್ರಮಿಸುವ ಪಕ್ಷಿಗಳ ‘ಅಕೌಸ್ಟಿಕ್ ಸಂಕೇತ ಸ್ಥಳ’ದ ವಿಭಜನೆಯತ್ತ ಗಮನಹರಿಸುತ್ತದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಸಾರ್ವಜನಿಕ ಉದ್ಯಾನವನವಾದ ವೆಟಲ್ ಟೇಕ್ಡಿ ಜೀವವೈವಿಧ್ಯ ಉದ್ಯಾನವನದೊಳಗಿನ ಉಷ್ಣವಲಯಕ್ಕೆ ಸೇರಿದ  ನಗರದ ಕುರುಚಲು-ಹುಲ್ಲುಗಾವಲಿನ ಆವಾಸಸ್ಥಾನದಲ್ಲಿಈ  ಅಧ್ಯಯನಗಳನ್ನು ನಡೆಸಲಾಯಿತು. ಈ ತಂಡದ ಸಂಶೋಧಕರು, ಧ್ವನಿ ಮುದ್ರಕಕ್ಕೆ ಸಂಪರ್ಕ ಹೊಂದಿರುವ ಮೈಕ್ರೊಫೋನ್ ಬಳಸಿ ಪಕ್ಷಿಗಳ ಕರೆಗಳನ್ನು ದಾಖಲಿಸಿದ್ದಾರೆ. ಈ ಅಧ್ಯಯನಗಳ ಒಂದು ವಿಶಿಷ್ಟ ಅಂಶವೆಂದರೆ ಇವು ಆಕ್ರಮಣಶೀಲವಲ್ಲ, ಅಂದರೆ ಇದು ಪಕ್ಷಿಗಳನ್ನು ಕೈಯಲ್ಲಿ ಹಿಡಿದು ಅಥವಾ ಕೂಡಿ ಹಾಕಿ ಅಧ್ಯಯನ ನಡೆಸುವುದನ್ನು ಒಳಗೊಂಡಿರುವುದಿಲ್ಲ ಮತ್ತು ಸಾಧ್ಯವಾದಷ್ಟು ಅವುಗಳ ನೈಸರ್ಗಿಕ ಜೀವನಕ್ಕೆ  ಅಧ್ಯಯನ ಮಾಡುವವರಿಂದ ಅಡಚಣೆ ಇರುವುದಿಲ್ಲ.                                                                                                                                                                                                                      

ಡಾ.ಕೃಷ್ಣನ್ ಅವರ ಅಧ್ಯಯನದಲ್ಲಿ, ಮಳೆಗಾಲದ ಸಮಯದಲ್ಲಿ ದಾಖಲಾದ 56 ಪ್ರಭೇದಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಒಟ್ಟು 70 ಪ್ರಭೇದಗಳನ್ನು ದಾಖಲಿಸಲಾಗಿದೆ. ಚಳಿಗಾಲದಲ್ಲಿ ಒಟ್ಟಾರೆ ದಾಖಲಾದ ಪ್ರಭೇದಗಳಲ್ಲಿನ ವೈವಿಧ್ಯತೆಯು, ಮಳೆಗಾಲಕ್ಕಿಂತ ಹೆಚ್ಚಾಗಿದ್ದು, ಆ ಪ್ರಭೇದಗಳ ಸಂಯೋಜನೆಯಲ್ಲಿ ಬದಲಾವಣೆ ಕಂಡುಬಂದಿದೆ. ಆದಾಗ್ಯೂ, ನಿಯಮಿತವಾಗಿ ಕರೆ ಮಾಡುವ ಹಕ್ಕಿಗಳ ಸಂಖ್ಯೆಯಲ್ಲಿ ಎಲ್ಲಾ ಋತುಮಾನದಲ್ಲೂ ಹೆಚ್ಚೂಕಡಿಮೆ ಒಂದೇ ಪ್ರಮಾಣ ಕಂಡುಬಂದಿದೆ. ಮಳೆಗಾಲದಲ್ಲಿ ಸಂತಾನೋತ್ಪತ್ತಿ ಮಾಡುವ ಅನೇಕ ಪಕ್ಷಿಗಳು ಚಳಿಗಾಲದಲ್ಲಿ ಮೌನವಾಗಿದ್ದವು, ಜೊತೆಗೆ, ಮತ್ತೂ ಕೆಲವು ಪಕ್ಷಿಗಳು ಅಧ್ಯಯನ ಪ್ರದೇಶದಿಂದ ಹೊರಗೆ ವಲಸೆ ಹೋದವು. ಈ ಮೌನವಾಗಿದ್ದ ಪಕ್ಷಿಗಳ ಕಾರಣದಿಂದ ಅಥವಾ ಇಲ್ಲಿನ ಪಕ್ಷಿಗಳು ವಲಸೆ ಹೋಗಿದ್ದರಿಂದ  ಖಾಲಿಯಾಗದ ‘ಅಕೌಸ್ಟಿಕ್ ಗೂಡು’ಗಳನ್ನು, ಇಲ್ಲಿಗೆ ಬಂದ ವಲಸೆ ಹಕ್ಕಿಗಳು ತಮ್ಮ ಕರೆಗಳಿಂದ ಆಕ್ರಮಿಸಿಕೊಂಡಿರಬಹುದು.

" ಅದಕ್ಕಿಂತಲೂ ಮುಖ್ಯವಾದ ವಿಷಯವೆಂದರೆ, ಸಂಕೇತ ಬಿಂದುಗಳ ಪ್ರಸರಣವು ಮಿತಿಮೀರದಂತೆ ನಿರ್ವಹಿಸುವುದು ಮಾತ್ರವಲ್ಲ, ಅಕೌಸ್ಟಿಕ್ ಸಂಕೇತ ಸ್ಥಳದ ಒಟ್ಟಾರೆ ಮಾದರಿಯು ಬದಲಾಗುವುದಿಲ್ಲ" ಎಂದು ಡಾ ಕೃಷ್ಣನ್ ಅಚ್ಚರಿ ಪಡುತ್ತಾರೆ.

ಅವರು ಇದರ ಪ್ರಾಮುಖ್ಯತೆಯನ್ನು ವಿವರಿಸುತ್ತಾ, ಈ ಮಾದರಿಯಲ್ಲಿ ಬದಲಾವಣೆಯಾಗದೇ ಉಳಿದಿದ್ದರ ಅರ್ಥವೆಂದರೆ ವಲಸಿಗರಾಗಿ ಇಲ್ಲಿಗೆ ಬಂದಿರುವ ಹಕ್ಕಿಗಳು, ಇಲ್ಲಿನ ಕೆಲವು ನಿವಾಸಿ ಪ್ರಭೇದಗಳ ನಿಕಟ ಸಂಬಂಧಿಗಳಾಗಿದ್ದು, ಅದೇ ಸಂಕೇತ ಸ್ಥಳಕ್ಕೆ ಹೊಂದಿಕೊಳ್ಳುತ್ತವೆ ಎಂದು ಅದು ಸೂಚಿಸುತ್ತದೆ" ಎಂದು ವಿವರಿಸುತ್ತಾರೆ. 

ಆದ್ದರಿಂದ, ಈ ಪ್ರೀಣಿಯಾ ಪ್ರಭೇದದ ಸಂಯೋಜನೆಯಲ್ಲಿ ಋತುಮಾನಕ್ಕನುಗುಣವಾಗಿ ಆಗುವ ಬದಲಾವಣೆಯ ಹೊರತಾಗಿಯೂ, ಮಳೆಗಾಲದ ನಂತರ ಚಳಿಗಾಲದ ವಲಸಿಗರು ಆಗಮಿಸಿದ ಮೇಲೆ ಚದುರಿದ, ಸ್ಥಿರವಾದ ಅಕೌಸ್ಟಿಕ್ ಸಮುದಾಯ ರಚನೆ ಕಂಡುಬರುತ್ತದೆ.  ಚಿಟ್ನಿಸ್ ಅವರ ಅಧ್ಯಯನವು ನಿಕಟವಾಗಿ ಸಂಬಂಧ ಹೊಂದಿರುವ ಪಕ್ಷಿ ಪ್ರಭೇದಗಳ ಸಂಯೋಗದ ಹಾಡುಗಳ ಮೇಲೆ ಕೇಂದ್ರೀಕೃತವಾಗಿತ್ತು.

“ ಯಾವುದೋ ಸಂಯೋಗದ ಕರೆ ತನ್ನದೇ ಜಾತಿಯ ಕರೆಯಂತೆ ಕೇಳಿಸಿದ್ದು, ಅದನ್ನು ಅನುಸರಿಸಿ ಬೇರೆ ಪ್ರಭೇದದ ಗಂಡು ಪ್ರೀಣಿಯಾದೊಂದಿಗೆ ಹೆಣ್ಣು ಪ್ರೀಣಿಯಾ ಆಕಸ್ಮಿಕವಾಗಿ ಸಂಯೋಗದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿರುತ್ತದೆ ಎಂದೆನಿಸಿತ್ತು; ಆದರೆ ವಾಸ್ತವವಾಗಿ, ನಿಕಟವಾಗಿ ಸಂಬಂಧಿತ ಪ್ರೀಣಿಯಾ ಪ್ರಭೇದಗಳೂ ಕೂಡ ತಮ್ಮ ಕರೆಗಳ ಅಕೌಸ್ಟಿಕ್ ಸಂಕೇತಗಳ ವಿಭಜನೆಗಾಗಿ, ತಾವು ಹಾಡುವ ಸ್ಥಳದ ಎತ್ತರವನ್ನು ಸಹ ಭಿನ್ನವಾಗಿರಿಸಿಕೊಳ್ಳುವುದನ್ನು ನಾವು ಕಂಡುಕೊಂಡಿದ್ದೇವೆ, ಹಾಗಾಗಿ ತಮ್ಮ ಕರೆಗಳ ನಡುವೆ ಯಾವುದೇ ಗೊಂದಲವಿರದಂತೆ, ಸ್ಪಷ್ಟ ವ್ಯತ್ಯಾಸ ಗೋಚರಿಸುವಂತೆ ನೋಡಿಕೊಳ್ಳುತ್ತವೆ”ಎಂದು ವಿವರಿಸುತ್ತಾರೆ.                                                                                                                                                

ಈ ಸಂಶೋಧನೆಯಲ್ಲಿ ನಾಲ್ಕು ಪ್ರೀಣಿಯಾ ಪ್ರಭೇದಗಳ ಗಾಯನದ ನಡವಳಿಕೆಯನ್ನು ಅಧ್ಯಯನ ಮಾಡಲಾಗಿದೆ. ಪರಸ್ಪರ ಬಿಂದುಗಳ ಅತಿಕ್ರಮಣವನ್ನು ಕಡಿಮೆ ಮಾಡಲು, ವಿಭಿನ್ನ’ಅಕೌಸ್ಟಿಕ್ ಗೂಡು’ಗಳಿಂದ ಹಾಡುತ್ತವೆ. ಅಂದರೆ ತಮ್ಮ ಅಕೌಸ್ಟಿಕ್ ಸಂಕೇತ ಬಿಂದುಗಳನ್ನು ಬೇರೆ ಬೇರೆಯಾಗಿಯೇ ಇಡಲು ಅನೇಕ ತಂತ್ರಗಳನ್ನು ಬಳಸುತ್ತವೆ. ಒಂದೇ ಪ್ರಭೇದದ ಇತರ ಸದಸ್ಯರಿಂದ ತಮ್ಮ ಕರೆಗಳನ್ನು ಬೇರ್ಪಡಿಸಲು, ವಿವಿಧ ಸ್ವರಗಳನ್ನು ಹೊರಡಿಸುತ್ತವೆ ಅಥವಾ ಒಂದೇ ಸ್ವರವನ್ನು ವಿವಿಧ ಗತಿಗಳಲ್ಲಿ, ವಿವಿಧ ಸಂಖ್ಯೆಗಳಲ್ಲಿ ಪುನರಾವರ್ತಿಸುತ್ತವೆ. ಇತರ ಕರೆಗಳಿಗೆ ಹೋಲಿಸಿದರೆ ಕರೆ ಸ್ವರಗಳಲ್ಲಿನ ಈ ವ್ಯತ್ಯಾಸವು, ಅವುಗಳ ಸಂಯೋಗದ ಹಾಡುಗಳಲ್ಲಿ ಹೆಚ್ಚಾಗಿ ಇದ್ದದ್ದು ಕಂಡುಬಂದಿದೆ. ಈ ಪಕ್ಷಿಗಳು, ವಿವಿಧ ಪರಿಸರೀಯ ಅಂಶಗಳಿಗೆ ಪ್ರತಿಕ್ರಿಯೆಯಾಗಿ ಮತ್ತು ಪರಿಣಾಮಕಾರಿ ಧ್ವನಿ ಪ್ರಸರಣಕ್ಕಾಗಿ, ಹಾಡುವ ನಡವಳಿಕೆಯ ವಿಭಿನ್ನ ಮಾದರಿಗಳನ್ನು ಬಳಸಿಕೊಳ್ಳುತ್ತವೆ.

ಪಕ್ಷಿಗಳು, ಪಾರಿಸರಿಕ ಒತ್ತಡಗಳಿಗೆ ಪ್ರತಿಕ್ರಿಯಿಸಿದಂತೆಯೇ, ಭೂ-ಬಳಕೆ ಮತ್ತು ಅಭಿವೃದ್ಧಿ ಯೋಜನೆಗಳಿಂದಾಗಿ ನಗರ ಆವಾಸಸ್ಥಾನಗಳಲ್ಲಿ ಆದ ಬದಲಾವಣೆಗಳಿಗೂ ಪ್ರತಿಕ್ರಿಯಿಸುತ್ತವೆ. ಅಕೌಸ್ಟಿಕ್ ಮಾನಿಟರಿಂಗ್ ಅಥವಾ ಪಕ್ಷಿಗಳು ಹೊರಡಿಸುವ ಶಬ್ದಗಳನ್ನು ಅಧ್ಯಯನ ಮಾಡುವುದು ಒಂದು ಆಕ್ರಮಣಶೀಲವಲ್ಲದ ವಿಧಾನವಾಗಿದ್ದು, ಇದನ್ನು ನಗರ ಪರಿಸರ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಸಹ ಬಳಸಬಹುದು. ಡಾ. ಕೃಷ್ಣನ್ ಅವರಿಗೆ, ನಗರದ ಜಂಜಾಟದಲ್ಲಿ ಈ ಅಧ್ಯಯನ ಮಾಡುವುದು ಸುಲಭವೇನೂ ಆಗಿರಲಿಲ್ಲ!

"ಅಧ್ಯಯನದ ಸಮಯದಲ್ಲಿ ನಾನು ಗಾಳಿ, ಮಳೆ, ಸೈರನ್, ಮೇಲೆ ಹಾರುತ್ತಿರುವ ವಿಮಾನ, ನಾಯಿಗಳ ಬೊಗಳುವಿಕೆ, ನಗರದಲ್ಲಿನ ವಾಹನ ದಟ್ಟಣೆಯ ಸದ್ದು ಇತ್ಯಾದಿ ಶಬ್ದಗಳನ್ನು ಕೇಳ್ಪಟ್ಟೆ. ಭಾರತದ ಇತರ ಭಾಗಗಳಲ್ಲಾದರೆ ಬಾಲಿವುಡ್ ಸಂಗೀತವೂ ಇವುಗಳೊಂದಿಗೆ ಕೇಳಸಿಗುತ್ತದೆ!"  ಎನ್ನುತ್ತಾರೆ ಡಾ, ಕೃಷ್ಣನ್. ಆದರೆ ಆಸಕ್ತಿಯಿಂದ ನಿರಂತರವಾಗಿ ತರಬೇತಿ ಪಡೆದ ಕಿವಿಯ ದಯೆಯಿಂದ ಅವರು ಈ ಗದ್ದಲದಲ್ಲೂ ಪಕ್ಷಿಗಳ ಕರೆಗಳನ್ನು ಬೇರ್ಪಡಿಸಿ ಗುರುತಿಸಲು ಕಲಿತಿದ್ದಾರೆ. " ಆದರೆ, ಕೇವಲ ಪಕ್ಷಿಗಳ ಧ್ವನಿ ಕೇಳಿಸುತ್ತಿದ್ದು,  ಉಳಿದಂತೆ ಎಲ್ಲವೂ ಶಾಂತವಾಗಿರುತ್ತಿದ್ದರೆ ಜೀವನ ಎಷ್ಟು ಸುಲಭವಾಗುತ್ತಿತ್ತು; ಆದರೆ ಅಂತಹ ಪರಿಸ್ಥಿತಿ ಇಲ್ಲಿ ಅಪರೂಪ!" ಎಂದು ತಮ್ಮ ಅನುಭವ ಹಂಚಿಕೊಂಡರು.

ಡಾ. ಕೃಷ್ಣನ್ ಮತ್ತು ಅವರ ತಂಡದ ಸಂಶೋಧಕರು, ಈಗ, ನಿಷ್ಕ್ರಿಯ ಅಕೌಸ್ಟಿಕ್ ಮತ್ತು ಸಮುದಾಯ ಅಕೌಸ್ಟಿಕ್ ಅಧ್ಯಯನಗಳನ್ನು ಹುಲ್ಲುಗಾವಲು ಮತ್ತು ಕುರುಚಲು ಸಸ್ಯಗಳಿರುವ ಆವಾಸಸ್ಥಾನಗಳಿಗೆ ವಿಸ್ತರಿಸುತ್ತಿದ್ದಾರೆ.

“ ಇಲ್ಲಿಯವರೆಗೂ ಹೆಚ್ಚಿನ ಅಧ್ಯಯನಗಳಿಗೆ ತೆರೆದುಕೊಂಡಿರದ ಈ  ಆವಾಸಸ್ಥಾನಗಳಲ್ಲಿ ಇರುವ ಪಕ್ಷಿ ಮತ್ತು ಬಾವಲಿಗಳ ಅಕೌಸ್ಟಿಕ್ ಸಮುದಾಯಗಳನ್ನು ಅನ್ವೇಷಿಸಲು ನಾವು ಆಸಕ್ತಿ ಹೊಂದಿದ್ದೇವೆ. ಈ ವಿಧಾನವು ಭರವಸೆದಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಇದರಿಂದ ನಾವು ಏನೇನು ಹೊಸ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ ”ಎಂದು ತಮ್ಮ ಉತ್ಸಾಹಕ್ಕೆ ಮಾತಿನ ರೂಪ ನೀಡುತ್ತಾರೆ ಡಾ. ಕೃಷ್ಣನ್.
 

 

Kannada