ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಪ್ಲಾಸ್ಟಿಕ್ ಎಂಬ ಪೆಡಂಭೂತದಿಂದ ಮುಕ್ತಿ ಎಂದು?

Read time: 1 min
ಬೆಂಗಳೂರು
5 Jun 2018
Photo : Vignesh Kamath / Research Matters

ಕರ್ನಾಟಕದ ಅತಿ ಎತ್ತರವಾದ ತಾಣ ಮುಳ್ಳಯ್ಯನಗಿರಿಯಾಗಲಿ, ಕಾಶ್ಮೀರದ ಲೇಹ್ ಪರಿಸರವಾಗಲಿ, ಅಥವಾ ನಮ್ಮ ಗೋಕರ್ಣದ ಮನಮೋಹಕ ಸಮುದ್ರ ತೀರವಾಗಲಿ, ಇವುಗಳೆಲ್ಲದರಲ್ಲೂ ಇರುವ ಸಾಮ್ಯತೆ ಏನು? ರಾಶಿಗಟ್ಟಲೆ ಬಿದ್ದಿರುವ ಪ್ಲಾಸ್ಟಿಕ್ ಕಸ! ಪ್ರವಾಸಿ ತಾಣಗಳನ್ನು ಬಿಟ್ಟರು ನಮ್ಮ ವಾಸಸ್ಥಳಗಳಲ್ಲೂ ಪ್ಲಾಸ್ಟಿಕ್ಕಿನ ಹಾವಳಿ ತಪ್ಪಿದ್ದಲ್ಲ. ಹೌದು, ಭಾರತದ ಉದ್ದಗಲ್ಲಕ್ಕೂ ಪ್ಲಾಸ್ಟಿಕ್ಕಿನ ಅವಾಂತರ ಹೇಳತೀರದು. ರಸ್ತೆಗಳಲ್ಲಿ, ಮೋರಿಗಳಲ್ಲಿ, ಕೆರೆಕಟ್ಟೆಗಳಲ್ಲಿ—ಎಲ್ಲೆಲ್ಲಿಯೂ ಪ್ಲಾಸ್ಟಿಕ್ ಚೀಲಗಳ, ಬಾಟಲಿಗಳ ಹಾವಳಿ. ನಾವು ವಿಶ್ವದಾದ್ಯಂತ ಪ್ರತೀ ನಿಮಿಷ ಬರೋಬ್ಬರಿ ಒಂದು ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಒಂಬತ್ತು ಮಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಬಿಸಾಡುತ್ತೇವಂತೆ. ಇದೇ ಗತಿಯಲ್ಲಿ ನಾವು ಮುಂದುವರೆದರೆ, ವಿಶ್ವ ಆರ್ಥಿಕ ಸಂಸ್ಥೆ (ವರ್ಲ್ಡ್ ಎಕನಾಮಿಕ್ ಫೋರಮ್)ನ ಒಂದು ವರದಿಯ ಪ್ರಕಾರ ೨೦೫೦ನೇ ಇಸವಿಯ ಹೊತ್ತಿಗೆ ನಮ್ಮ ಸಮುದ್ರಗಳಲ್ಲಿ ಮೀನುಗಳಿಗಿಂತ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚಿರುವುದಂತೆ! ಆಶ್ಚರ್ಯವೇನಿಲ್ಲ, ಅಲ್ಲವೇ?

ಈ ಪ್ಲಾಸ್ಟಿಕ್ ಎಂಬ ಪೆಡಂಭೂತದಿಂದ ನಮ್ಮ ಮುಕ್ತಿ ಎಂದು? ಇದರ ವಿಷಮವಾದ ಜಾಲದಿಂದ ನಾವು ಹೊರಬರಲು ಸಾಧ್ಯವೇ? ನಮ್ಮ ದಿನನಿತ್ಯದ ಜೀವನದಲ್ಲಿ ತೊಡಗಿಸಿಕೊಳ್ಳುವ ಸಣ್ಣ ಬದಲಾವಣೆಗಳು ಪ್ಲಾಸ್ಟಿಕ್ಕಿನ ಹಾವಳಿಯನ್ನು ಕಡಿಮೆ ಮಾಡಬಹುದೇ? ಇವೆಲ್ಲವನ್ನೂ ಮುಂದಿಟ್ಟುಕೊಂಡು ಈ ವರ್ಷದ ‘ವಿಶ್ವ ಪರಿಸರ ದಿನ’ದ ಅಂಗವಾಗಿ ‘ಪ್ಲಾಸ್ಟಿಕ್ಕಿನಿಂದ ಮಾಲಿನ್ಯ ತಡೆಗಟ್ಟೋಣ’ ಎಂದು ವಿಶ್ವ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಿದೆ. 

ಇಂದು ಪ್ಲಾಸ್ಟಿಕ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮುಂಜಾನೆಯ ಹಲ್ಲುಜ್ಜುವ ಬ್ರಷ್ನಿಂದ ಹಿಡಿದು, ದಿನವೆಲ್ಲಾ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್, ರಾತ್ರಿ ಮಲುಗುವಾಗ ದೀಪ ಆರಿಸುವ ಸ್ವಿಚ್—ಎಲ್ಲದರಲ್ಲೂ ಪ್ಲಾಸ್ಟಿಕ್ಕಿನ ಒಂದಲ್ಲಾ ಒಂದು ಅವತಾರವಿದೆ! ಕಾಗದ, ಮರ, ಕಬ್ಬಿಣ ಇವೆಲ್ಲಕ್ಕಿಂತಲೂ ಪ್ಲಾಸ್ಟಿಕ್ ಬಹುಕಾಲ ಬಾಳುತ್ತದೆ. ಅಲ್ಲದೆ, ಇದನ್ನು ಉತ್ಪಾದಿಸುವುದು ಅಗ್ಗ ಮತ್ತು ಹೊತ್ತೊಯ್ಯಲು ಬಹಳ ಹಗುರ. ಇದು ನೀರಿನಲ್ಲಿ ನೆನೆಯುವುದಿಲ್ಲ, ಬಿಸಿಲಿನಲ್ಲಿ ಕರಗುವುದಿಲ್ಲ, ತುಕ್ಕು ಹಿಡಿಯುವುದಿಲ್ಲ ಮತ್ತು ಗೆದ್ದಲು ಹತ್ತುವುದಿಲ್ಲ! ಹಾಗಾಗಿ ನಾವು ಪ್ಲಾಸ್ಟಿಕ್ಕನ್ನು ಬಳಸಿದ್ದೇ ಬಳಸಿದ್ದು, ಎಸೆದಿದ್ದೇ ಎಸೆದಿದ್ದು! ಸುಮಾರು ೭೦ ವರ್ಷಗಳ ನಮ್ಮ ಮೌಢ್ಯ ಇತ್ತೀಚಿಗಷ್ಟೇ ತಿಳಿಯಾಗಿದ್ದು, ನಮಗೆ ಪ್ಲಾಸ್ಟಿಕ್ಕಿನ ದುಷ್ಪರಿಣಾಮಗಳ ಅರಿವು ಮೂಡುತ್ತಿದೆ. 

೧೯೦೭ರಲ್ಲಿ ಲಿಯೋ ಬೇಕೆಲ್ಯಾಂಡ್ ಎಂಬ ವಿಜ್ಞಾನಿಯು ಪ್ಲಾಸ್ಟಿಕ್ಕಿನ ಮೊದಲ ರೂಪವಾದ ಬೇಕೇಲೈಟ್ನನ್ನು ಕಂಡುಹಿಡಿದಿದ್ದರೂ, ಇದರ ಭಾರಿ ಪ್ರಮಾಣದ ಉತ್ಪಾದನೆಯು ೧೯೫೦ರ ನಂತರ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ನಾವು ಸುಮಾರು ೮೩೦ ಕೋಟಿ ಮೆಟ್ರಿಕ್ ಟನ್ನಿನಷ್ಟು ಪ್ಲಾಸ್ಟಿಕ್ ಉತ್ಪಾದಿಸಿದ್ದೇವೆ. ಇದರಲ್ಲಿ ಶೇಕಡಾ ೭೫ರಷ್ಟನ್ನು ‘ಕಸ’ವೆಂದು ಬಿಸಾಡಿದ್ದೇವೆ. ಕೇವಲ ಒಂಬತ್ತು ಪ್ರತಿಶತವಷ್ಟೇ ಮರುಬಳಕೆ ಮಾಡಿದ್ದೇವೆ. ಈ ಸಂಖ್ಯೆಗಳನ್ನು ಗಮನಿಸಿದರೆ ‘ನಮ್ಮ ಜೀವನದ ಗುರಿ ಏನು?’ ಎಂಬ ತಾತ್ವಿಕ ಪ್ರಶ್ನೆಗೆ ‘ಪ್ಲಾಸ್ಟಿಕ್ ತಯಾರಿಸಲು’ ಎಂಬ ಉತ್ತರ ಸರಿಹೊಂದುವುದೋ ಏನೋ!

ಪ್ಲಾಸ್ಟಿಕ್ಕಿನ ಗಂಡಾಂತರಗಳು

ಪ್ಲಾಸ್ಟಿಕ್ಕಿನಿಂದಾಗುವ ತೊಂದರೆಗಳು ಒಂದೇ ಎರಡೇ! ಈ ಸರಮಾಲೆಯನ್ನು ಬಿಡಿಸುತ್ತಾ ಹೋದಂತೆ ನಮ್ಮ ಪರಿಸರಕ್ಕೆ ನಾವು ಮಾಡುತ್ತಿರುವ ಹಾನಿಯ ತೀವ್ರತೆಯ ಅರಿವು ನಮಗಾಗುತ್ತದೆ. ಮೊದಲನೆಯದಾಗಿ ಪ್ಲಾಸ್ಟಿಕ್ ಉತ್ಪಾದಿಸುವ ವಿಧಾನದಿಂದ ಹಲವಾರು ವಿಷಪೂರಿತ ಅನಿಲಗಳು ನಮ್ಮ ವಾಯುಮಂಡಲವನ್ನು ಸೇರುತ್ತವೆ. ಒಂದು ಪ್ಲಾಸ್ಟಿಕ್ ಬಾಟಲಿಯನ್ನು ಉತ್ಪಾದಿಸುವಾಗ ಅದೇ ಗಾತ್ರದ ಗಾಜಿನ ಬಾಟಲಿ ತಯಾರಿಸುವುದಕ್ಕಿಂತ ೧೦೦ರಷ್ಟು ಹೆಚ್ಚು ವಾಯುಮಾಲಿನ್ಯವಾಗುತ್ತದೆ. ೧೯೫೦ರಿಂದ ಇಂದಿನವರೆಗೂ ವಿಶ್ವದಾದ್ಯಂತ ಪ್ಲಾಸ್ಟಿಕ್ಕಿನ ಉತ್ಪಾದನೆ ೨೦೦ ಪಟ್ಟು ಹೆಚ್ಚಾಗಿದೆ.

“ಇಂದು ಪ್ರತೀ ದಿನವೂ ನಾವು ಸುಮಾರು ಏಳು ಮಿಲಿಯನ್ ಬ್ಯಾರೆಲ್ಗಳಷ್ಟು (೧ ಬ್ಯಾರೆಲ್ = 159 ಲೀಟರು) ತೈಲವನ್ನು ಬಳಸುತ್ತೇವೆ. ಕಳೆದ ಹತ್ತು ವರ್ಷಗಳಲ್ಲಿ ಕಳೆದ ಶತಮಾನಕ್ಕಿಂತಲೂ ಹೆಚ್ಚು ಪ್ಲಾಸ್ಟಿಕ್ ತಯಾರಿಸಿದ್ದೇವೆ”, ಎಂದು  ಹೇಳುತ್ತಾರೆ ಆಂಡ್ರೂ ಅಲ್ಮಾಕ್, ‘ಪ್ಲಾಸ್ಟಿಕ್ಸ್ ಫಾರ್ ಚೇಂಜ್’ ಎಂಬ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

ಈ ಸಂಸ್ಥೆಯು ಮೊಬೈಲ್ ತಂತ್ರಜ್ಞಾನ ಬಳಸಿ ಪ್ಲಾಸ್ಟಿಕ್ ಪ್ರದೂಷಣೆಯನ್ನು ಕಡಿಮೆಮಾಡಲು ಯತ್ನಿಸುತ್ತಿದೆ. ಈ ತೀವ್ರ ಗತಿಯ ತಯಾರಿಕೆ ಮತ್ತು ಉಪಯೋಗವನ್ನು ಹತ್ತಿಕ್ಕುವುದು ಪ್ಲಾಸ್ಟಿಕ್ ವಿರುದ್ದ ನಮ್ಮ ಹೋರಾಟದ ಮೊದಲ ಹೆಜ್ಜೆಯೆನ್ನುತ್ತಾರೆ ತಜ್ಞರು. 

ಒಂದೆಡೆ ಪ್ಲಾಸ್ಟಿಕ್ ತಯಾರಿಕೆಯ ಉಪದ್ರವವಾದರೆ ಇನ್ನೊಂದೆಡೆ ಅದರ ವಿಲೇವಾರಿಯ ಬಹು ದೊಡ್ಡ ಸಮಸ್ಯೆಯಾಗಿ ಮೂಡಿದೆ. ಪ್ರತೀ ವರ್ಷ ಸುಮಾರು ೮೦ ಲಕ್ಷ ಟನ್ ಪ್ಲಾಸ್ಟಿಕ್ ಪದಾರ್ಥಗಳು ನಮ್ಮ ಸಮುದ್ರಗಳನ್ನು ಸೇರುತ್ತವೆ. “ಇದು ಇಡೀ ವಿಶ್ವದ ೨೧೭,೦೦೦ ಮೈಲಿಗಳ ಸಮುದ್ರ ತೀರಗಳಲ್ಲಿ ಪ್ರತೀ ಅಡಿಗೆ ಐದು ಚೀಲಗಳ ಕಸವನ್ನು ಇರಿಸುವುದಕ್ಕೆ ಸಮಾನ”, ಎನ್ನುತ್ತಾರೆ ಆಂಡ್ರೂ. ಈ ಕಸದ ರಾಶಿಯಲ್ಲಿ ಸುಮಾರು ಮೂರನೇ ಒಂದರಷ್ಟು ಸಮುದ್ರಜೀವಿಗಳು ಸಿಲುಕಿ ತಮ್ಮ ಜೀವ ಕಳೆದುಕೊಳ್ಳುತ್ತವೆ. ಶೇಖಡಾ ೯೦ಕ್ಕೂ ಅಧಿಕ ಕಡಲ ಹಕ್ಕಿಗಳಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಆಮೆಗಳು ನೀರಿನಲ್ಲಿ ತೇಲಾಡುವ ಪ್ಲಾಸ್ಟಿಕ್ ಚೀಲವನ್ನು ಆಹಾರವೆಂದೆಣಿಸಿ ತಿಂದು ದುರಂತದ ಸಾವಿಗೀಡಾಗುತ್ತವೆ. ದೈತ್ಯಾಕಾರದ ತಿಮಿಂಗಿಲಗಳಿಗೂ ಪ್ಲಾಸ್ಟಿಕ್ಕಿನ ಭಾದೆ ತಪಿದ್ದಲ್ಲ; ಇತ್ತೀಚಿಗೆ ಗ್ರೀಕ್ ದೇಶದಲ್ಲಿ ಸತ್ತ ತಿಮಿಂಗಿಲಗಳ ಹೊಟ್ಟೆಯಿಂದ ಪ್ಲಾಸ್ಟಿಕ್ ಚೂರುಗಳನ್ನು ತೆಗೆಯಲಾಗಿದೆ. 

ಸಮುದ್ರದಲ್ಲಿರುವ ಪ್ಲಾಸ್ಟಿಕ್ ಕಸದ ರಾಶಿಯ ಇನ್ನೊಂದು ಸಮಸ್ಯೆ ‘ಮೈಕ್ರೋಪ್ಲಾಸ್ಟಿಕ್’. ಸೂರ್ಯನ ಶಾಖದಿಂದ, ನೀರಿನ ಉಪ್ಪಿನಂಶದಿಂದ ಅಥವಾ ಸಮುದ್ರದ ಪ್ರಕ್ಷುಬ್ಧತೆಯಿಂದ ಪ್ಲಾಸ್ಟಿಕ್ ವಸ್ತುಗಳು ಕ್ರಮೇಣ ಅತೀ ಸಣ್ಣ ಚೂರುಗಳಾಗಿ ಎಲ್ಲೆಡೆ ಹರಡುತ್ತವೆ. ಇವೇ ‘ಮೈಕ್ರೋಪ್ಲಾಸ್ಟಿಕ್’. ಇವು ನೀರನ್ನು ಮಲಿನಗೊಳಿಸುವುದಲ್ಲದೆ, ಪ್ರಪಂಚದ ಎಲ್ಲಾ ಜೀವರಾಶಿಗಳಿಗೂ ಆಹಾರದ ಮೂಲಕ ಸೇರಿ ಹಾನಿ ಮಾಡುತ್ತವೆ. ಒಂದು ಅಧ್ಯಯನದ ಪ್ರಕಾರ ೮೩ ಪ್ರತಿಶತ ಪ್ರಪಂಚದಲ್ಲಿರುವ ಕುಡಿಯುವ ನೀರಿನಲ್ಲಿ, ಮತ್ತು ೯೦ ಪ್ರತಿಶತ ಬಾಟಲಿ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ. ಇವುಗಳಿಂದ ಕ್ಯಾನ್ಸರ್ ಬರಬಹುದಲ್ಲದೇ ಹಾರ್ಮೋನ್ ಕೂಡ ಏರುಪೇರಾಗುವ ಸಾಧ್ಯತೆಗಳಿವೆ.

ಪ್ಲಾಸ್ಟಿಕ್ಕಿನ ಹಾವಳಿಗೆ ಇತರೆ ಪ್ರಾಣಿಗಳೂ ತುತ್ತಾಗಿವೆ. “ರಸ್ತೆಯಲ್ಲಿರುವ ಬಹಳಷ್ಟು ಹಸುಗಳು ಪ್ಲಾಸ್ಟಿಕ್ ತಿಂದು ಸಾಯುತ್ತವೆ. ನಮಗೆ ಅದು ಗೋಚರಿಸದಿದ್ದರೂ ಅವುಗಳ ಸಾವು ಖಚಿತ”, ಎನ್ನುತ್ತಾರೆ ಕ್ಲೆಮೆಂಟೀನ್ ಕೊಯೆನೆಗ್ರಾಸ್, ‘ಕರುಣಾ ಸೊಸೈಟಿ ಫಾರ್ ಅನಿಮಲ್ಸ್ ಅಂಡ್ ನೇಚರ್’ ಸಂಸ್ಥೆಯ ಅಧ್ಯಕ್ಷರು. ಈ ಸಂಸ್ಥೆಯ ‘ದಿ ಪ್ಲಾಸ್ಟಿಕ್ ಕೌ’ ಎಂಬ ಯೋಜನೆಯಡಿ ಎಷ್ಟೋ ಹಸುಗಳ ಹೊಟ್ಟೆಯಿಂದ ಸುಮಾರು ೭೦ ಕೆಜಿ ಪ್ಲಾಸ್ಟಿಕ್ ತೆಗೆಯಲಾಗಿದೆ.

ಇವೆಲ್ಲದರೊಂದಿಗೆ ಪ್ಲಾಸ್ಟಿಕ್ ವಸ್ತುಗಳು ಒಮ್ಮೆ ಭೂಮಿಯೊಳಗೆ ಸೇರಿದರೆ ಅವು ಎಂದೂ ಗೊಬ್ಬರವಾಗುವುದಿಲ್ಲ. ಇದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸಿ ಕೃಷಿ ಸಂಭಂದಿತ ಕಾರ್ಯಗಳಿಗೆ ತೊಡಕಾಗಬಹುದು. ಪ್ಲಾಸ್ಟಿಕ್ಕಿನ ವಿಲೇವಾರಿ ಸಹ ವಾಯುಮಾಲಿನ್ಯ ಉಂಟುಮಾಡುತ್ತದೆ. 

ಪ್ಲಾಸ್ಟಿಕ್ಕಿನ ಪಾಶದಿಂದ ಮುಕ್ತಿ

ಪ್ಲಾಸ್ಟಿಕ್ಕಿನಿಂದ ಇಷ್ಟೆಲ್ಲಾ ತೊಂದರೆಯಾದರೆ ಅದಕ್ಕೆ ಪರಿಹಾರವೇನು? ತಜ್ಞರ ಪ್ರಕಾರ ಮರುಬಳಕೆ ಆಗದ ಪ್ಲಾಸ್ಟಿಕ್ ಪದಾರ್ಥಗಳ ಉತ್ಪಾದನೆ ಮೊದಲು ನಿಲ್ಲಬೇಕು. ಆದಷ್ಟು ಪ್ಲಾಸ್ಟಿಕ್ಕಿನ ಬಳಕೆಯನ್ನು ಕಡಿಮೆ ಮಾಡಿ, ಅದನ್ನು  ಮರುಬಳಸಬೇಕು. ಆದರೆ ಸಂತೋಷದ ವಿಷಯವೆಂದರೆ ಇಂದು ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆಯನ್ನು ಎದುರಿಸಲು ಹಲವಾರು ಸಂಸ್ಥೆಗಳು ಬಹುರೂಪಿ ಪರಿಹಾರಗಳನ್ನು ಹುಡುಕುತ್ತಿವೆ. ಹೀಗಾಗಿ ಇಂದು ಭಾರತದಲ್ಲಿ ಸುಮಾರು ೧೫-೨೦ ಪ್ರತಿಶತ ಪ್ಲಾಸ್ಟಿಕ್ ಕಸವು ಮರುಬಳಕೆಯಾಗುತ್ತಿದೆ.

ಪ್ಲಾಸ್ಟಿಕ್ಕಿನ ಮರುಬಳಕೆ ಸುಲಭದ ಉಪಾಯವಾಗಿ ಕಂಡುಬಂದರೂ ಅದರಿಂದ ಅಪಾಯಗಳೇ ಹೆಚ್ಚು. “ಭಾರತದಲ್ಲಿ ಪ್ಲಾಸ್ಟಿಕ್ಕಿನ ಮರುಬಳಕೆಯ ಬಗ್ಗೆ ಸರಿಯಾದ ನಿಯಂತ್ರಣಗಳು ಇಲ್ಲದ ಕಾರಣ ಕೆಲವರು ಅವೈಜ್ಞಾನಿಕ ಹಾಗು ಅಪಾಯಕಾರಿ ವಿಧಾನಗಳನ್ನು ಬಳಸುತ್ತಾರೆ”, ಎನ್ನುತ್ತಾರೆ ಕೆ ಕೆ ಪ್ಲಾಸ್ಟಿಕ್ ಸಂಸ್ಥೆಯ ರಸೂಲ್ ಖಾನ್. ಇವರ ಸಂಸ್ಥೆಯು ಪ್ಲಾಸ್ಟಿಕ್ ಕಸದಿಂದ ರಸ್ತೆಗಳನ್ನು ನಿರ್ಮಿಸುತ್ತಿದ್ದು, ೨೦೦೦ದಿಂದ ಈವರೆಗೂ ಸುಮಾರು ೧೫,೦೦೦ ಟನ್ ಪ್ಲಾಸ್ಟಿಕ್ ಕಸವನ್ನು ೩,೦೦೦ ಕಿಮೀ ರಸ್ತೆಯನ್ನಾಗಿ ಪರಿವರ್ತಿಸಿದೆ.

ಬೆಂಗಳೂರಿನ ‘ಸಾಹಸ್’ ಸಂಸ್ಥೆಯು ಪ್ರತೀ ವರ್ಷ ಸುಮಾರು ೧,೪೦೦ ಟನ್ ಪ್ಲಾಸ್ಟಿಕ್ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸುತ್ತದೆ. “ನಮ್ಮ ದಿನನಿತ್ಯದ ಪ್ಲಾಸ್ಟಿಕ್ ಬಳಕೆಗೆ ಒಂದು ಸದೃಢ ವಿಂಗಡಣೆಯ ವ್ಯವಸ್ಥೆ ಅವಶ್ಯಕ. ಮರುಬಳಕೆಯಾಗದ ಪ್ಲಾಸ್ಟಿಕ್ನನ್ನು ನಿಷೇಧಿಸಬೇಕು. ನಮಲ್ಲಿ ಸಂಗ್ರಹವಾಗುವ ಎಲ್ಲಾ ಪ್ಲಾಸ್ಟಿಕ್ನನ್ನು ನಾವು ಕಾನೂನಿನ ಪ್ರಕಾರ ಸಂಸ್ಕರಿಸುತ್ತೇವೆ”, ಎನ್ನುತ್ತಾರೆ ‘ಸಾಹಸ್’ನ ಅನ್ನಿ ಫಿಲಿಪ್.

ಒಟ್ಟಾರೆ ಪ್ಲಾಸ್ಟಿಕಿನ ಉಪಕಾರಕ್ಕಿಂತ ಅಪಕಾರವೇ ಹೆಚ್ಚು.  ಆದರಿಂದ ನಮ್ಮ ಅತೀಯಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಅತ್ಯಗತ್ಯ. ಒಂದು ಸಮೀಕ್ಷೆಯ ಪ್ರಕಾರ ಪ್ರತಿಯೊಬ್ಬರೂ ಇಂದು ವರ್ಷಕ್ಕೆ ಸುಮಾರು ೮೪ ಕೆಜಿ ಪ್ಲಾಸ್ಟಿಕ್ ಬಳಸುತ್ತಿದ್ದೇವಂತೆ! ನಮ್ಮ ಜೀವನಶೈಲಿಯಲ್ಲಾಗುವ ಸಣ್ಣ ಬದಲಾವಣೆಯಿಂದ ಇದನ್ನು ನಿಯಂತ್ರಿಸಬಹುದೇ? ಖಂಡಿತ, ಎನ್ನುತ್ತಾರೆ ತಜ್ಞರು. ಇನ್ನು ಮುಂದೆ ಪಾನೀಯ ಕುಡಿಯುವಾಗ ಸ್ಟ್ರಾ ನಿರಾಕರಿಸಿ, ಅಂಗಡಿಗೆ ನಿಮ್ಮದೇ ಚೀಲವನ್ನು ಕೊಂಡೊಯ್ಯಿರಿ, ಪ್ಲಾಸ್ಟಿಕ್ ಲೋಟಗಳನ್ನು ತ್ಯಜಿಸಿ, ನಿಮ್ಮ ನೆರೆಹೊರೆಯ ಅಂಗಡಿಮುಂಗಟ್ಟುಗಳಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿ, ಕಸ ವಿಂಗಡಿಸಿ ಮತ್ತು ನಿಮ್ಮ ನಗರಪಾಲಿಕೆಯವರಿಗೆ ಕಸ ಸರಿಯಾಗಿ ಸಂಸ್ಕರಿಸುವಂತೆ ಒತ್ತಾಯಿಸಿ. ಪ್ರತಿಯೊಬ್ಬರ ಸಣ್ಣ ಬದಲಾವಣೆ ನಮ್ಮ ಮುಂದಿನ ಪ್ಲಾಸ್ಟಿಕ್ ರಹಿತ ಪ್ರಪಂಚಕ್ಕೆ ನಾಂದಿ ಹಾಡಲಿದೆ. ಇಂದಿನ ‘ವಿಶ್ವ ಪರಿಸರ ದಿನ’ದಂದು ಒಕ್ಕೊರಲಿನಿಂದ ಹೇಳೋಣ—‘‘ಪ್ಲಾಸ್ಟಿಕ್ಕಿನಿಂದ ಮಾಲಿನ್ಯ ತಡೆಗಟ್ಟೋಣ’!