ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನೇಕ ವಿಪತ್ತುಗಳ ಪೈಕಿ, ಮಣ್ಣಿನ ಲವಣಾಂಶದ ಹೆಚ್ಚಳವೂ ಒಂದು. 2050 ರ ಹೊತ್ತಿಗೆ, ಪ್ರಪಂಚದಾದ್ಯಂತ ಲಭ್ಯವಿರುವ ಇಂದಿನ ಕೃಷಿಯೋಗ್ಯ ಭೂಮಿಯ ಅರ್ಧದಷ್ಟು ಭಾಗವು ಲವಣಾಂಶದ ಏರುಪೇರಿನಿಂದ ಪ್ರಭಾವಿತವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಲವಣಾಂಶದ ಹೆಚ್ಚಳವು, ಭಾರತದ ಭತ್ತದ ಬಟ್ಟಲೆಂದೇ ಪ್ರಸಿದ್ಧವಾಗಿರುವ ಸಿಂಧೂ - ಗಂಗಾ ನದಿಗಳ ಒಡಲಿನ ಬಯಲು ಪ್ರದೇಶಕ್ಕೂ ಅಪಾರವಾದ ಹಾನಿ ಮಾಡಲಿದ್ದು, ಬೆಳೆ ಇಳುವರಿಯಲ್ಲಿ ಸುಮಾರು 45% ನಷ್ಟವನ್ನು ನಿರೀಕ್ಷಿಸಬಹುದಾಗಿದೆ. ಲವಣಾಂಶವು ಹೆಚ್ಚಾದಾಗ, ಸಸ್ಯಗಳು ಕಡಿಮೆ ನೀರನ್ನು ಹೀರಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತವೆ; ಅದು ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.