ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಅಂಜೂರ - ಕಣಜಗಳ ಸಂಬಂಧ ಮತ್ತು ವಿಕಾಸದ ಪ್ರಾಮುಖ್ಯತೆ

ಬೆಂಗಳೂರು
26 Sep 2019
ಅಂಜೂರ - ಕಣಜಗಳ ಸಂಬಂಧ ಮತ್ತು ವಿಕಾಸದ ಪ್ರಾಮುಖ್ಯತೆ

ಅಂಜೂರದ ಮರ ಮತ್ತು ಅಂಜೂರದ ಕಣಜದ ನಡುವಿನ ಸಂಬಂಧವು ಸ್ವರ್ಗದಲ್ಲಿ ನಿಶ್ಚಯವಾದ ಮದುವೆಯೇ ಸರಿ! ಒಂದನ್ನು ಬಿಟ್ಟು ಮತ್ತೊಂದು ಬದುಕಲಾರದು; ಇವು ಒಂದರ ಮೇಲೊಂದು ಎಷ್ಟು ಅವಲಂಬಿತವೆಂದರೆ, ಹೆಣ್ಣು ಅಂಜೂರದ ಕಣಜವು ತನ್ನ ಮೊಟ್ಟೆಗಳನ್ನು ಅಂಜೂರದ ಹೂವುಗಳಲ್ಲಿ ಅಥವಾ ಸೈಕೋನಿಯಾದಲ್ಲಿ ಇಡುತ್ತದೆ ಮತ್ತು ಸಸ್ಯದ ಪರಾಗವನ್ನು ಪಸರಿಸಲು ಸಹಾಯ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ, ಅಂಜೂರದ ಹಣ್ಣು ತನ್ನೊಳಗೆ ಕಣಜವು ಇಟ್ಟಿರುವ ಮೊಟ್ಟೆಗಳಿಂದ ಹೊರಬರುವ ಲಾರ್ವಾಗಳಿಗೆ ಆಶ್ರಯ ಮತ್ತು ಆಹಾರವನ್ನು ಒದಗಿಸುತ್ತದೆ. ಹಾಗಂತ, ಯಾವುದೇ ಅಂಜೂರದ ಮರದಲ್ಲಿ ಯಾವುದೇ ಕಣಜ ತನ್ನ ವಾಸ್ತವ್ಯ ಹೂಡೋಕೆ ಸಾಧ್ಯವಿಲ್ಲ ಗೊತ್ತೆ? "ವಿಶ್ವದ 800 ಅಥವಾ ಅದಕ್ಕೂ ಹೆಚ್ಚು ಅಂಜೂರದ ಪ್ರಭೇದಗಳಲ್ಲಿ ಪ್ರತಿಯೊಂದೂ ತನ್ನದೇ ಆದ ವಿಶಿಷ್ಟವಾದ ಅಂಜೂರದ ಕಣಜ ಪ್ರಭೇದಗಳನ್ನು ಹೊಂದಿದೆ (ಅಂಜೂರ ಕಣಜದ ಸಮುದಾಯ) ಮತ್ತು ಆ ಕಣಜದ ಪ್ರಭೇದದ ಮೇಲೆ ಅವಲಂಬಿತವಾಗಿ ಆ ಅಂಜೂರ ಮರದ ಬದುಕು ಮುನ್ನಡೆಯುತ್ತದೆ" ಎನ್ನುತ್ತಾರೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪರಿಸರ ವಿಜ್ಞಾನ ಅಧ್ಯಯನ ಕೇಂದ್ರದ ಅಧ್ಯಾಪಕರಾದ ರೆನೀ ಎಂ. ಬೊರ್ಗೆಸ್. ಈ ಪ್ರಭೇದಗಳ ನಡುವಿನ ಪಾರಸ್ಪರಿಕ ಕ್ರಿಯೆಯನ್ನು ಅಧ್ಯಯನ ಮಾಡುವುದರ ಮೇಲೆ ಇವರ ಸಂಶೋಧನೆಗಳು ಕೇಂದ್ರೀಕೃತವಾಗಿವೆ.

ಇತ್ತೀಚಿನ ಅಧ್ಯಯನವೊಂದರಲ್ಲಿ, ಪ್ರೊಫೆಸರ್ ಬೊರ್ಗೆಸ್ ಮತ್ತು ಐಐಎಸ್ಸಿಯ ಸಂಶೋಧಕರ ತಂಡವು, ಒಂದು ಪ್ರದೇಶದಲ್ಲಿ ಅಂಜೂರದ ಮರಗಳ ವಿತರಣೆಯು ಅಲ್ಲಿರುವ ಕಣಜ ಸಮುದಾಯಗಳೊಂದಿಗೆ ಹೇಗೆ ಥಳುಕು ಹಾಕಿಕೊಂಡಿದೆ ಎಂಬುದನ್ನು ತನಿಖೆ ಮಾಡಿದೆ. ಈ ಅಧ್ಯಯನದಿಂದ ತಿಳಿದುಬಂದ ಮಾಹಿತಿಯು, ಕಣಜಗಳು ತಮ್ಮ ಆತಿಥೇಯ ಅಂಜೂರದ ಮರಗಳು ಹೇರಿದ ಮಾನದಂಡಗಳ ಆಧಾರದ ಮೇಲೆ, ವಿಕಾಸವಾಗಿ, ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ‘ಬಯೊಲಜಿ ಲೆಟರ್ಸ್’ ಎಂಬ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಾಯೋಜಕತ್ವವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ವಹಿಸಿಕೊಂಡಿವೆ.

ಅಂಜೂರದ ಮರಗಳು ಎರಡು ಬಗೆಯವು - ಮೊನೇಸಿಯಸ್ ಮತ್ತು ಡಯೇಸಿಯಸ್; ಮೊನೇಸಿಯಸ್ ಮರಗಳಲ್ಲಿನ ಅಂಜೂರದ ಸೈಕೋನಿಯಾದಲ್ಲಿ (ವಿಶಿಷ್ಟ ಹೂವು) ಅಂಡಾಣು ಮತ್ತು ಪರಾಗ ಎರಡೂ ಇರುತ್ತವೆ ಆದರೆ ಡಯೇಸಿಯಸ್ ಅಂಜೂರದ ಮರಗಳಲ್ಲಿ ಪ್ರತ್ಯೇಕ ಮರಗಳ ಮೇಲೆ ಅಂಡಾಣುಯುಕ್ತ ಸೈಕೋನಿಯಾ ಮತ್ತು ಪರಾಗಯುಕ್ತ ಸೈಕೋನಿಯಾ ಬೆಳೆಯುತ್ತದೆ. ಸಂಶೋಧಕರು ಈ ಅಧ್ಯಯನಕ್ಕಾಗಿ ದಕ್ಷಿಣ ಭಾರತದಿಂದ ಎರಡು ಅಂಜೂರದ ಪ್ರಭೇದಗಳನ್ನು ಪರಿಗಣಿಸಿದ್ದಾರೆ. ತನ್ನೊಂದಿಗೆ ನಾಲ್ಕು ಜಾತಿಯ ಕಣಜಗಳನ್ನು ಹೊಂದಿರುವ ಕೂದಲುಳ್ಳ ಅಂಜೂರ ಅಥವಾ ಕಾಡು ಅತ್ತಿ ಮರ (ಫೈಕಸ್ ಹಿಸ್ಪಿಡಾ) ಒಂದು ವಿಧವಾದರೆ, ತನ್ನೊಂದಿಗೆ ಏಳು ಜಾತಿಯ ಕಣಜಗಳನ್ನು ಹೊಂದಿರುವ ಕ್ಲಸ್ಟರ್ ಫಿಗ್ ಎಂದೇ ಪ್ರಖ್ಯಾತ ಅತ್ತಿ ಮರ (ಫೈಕಸ್ ರೇಸಿಮೋಸಾ) ಎರಡನೆಯ ವಿಧ.

ತಮ್ಮ ಜೀವನಚಕ್ರದ ಭಾಗವಾಗಿ, ಕಣಜಗಳು ನೇರವಾಗಿ ತಾವೇ ಅಂಜೂರದ ಸೈಕೋನಿಯಾವನ್ನು ಪ್ರವೇಶಿಸುತ್ತವೆ ಅಥವಾ ಮೊಟ್ಟೆಗಳನ್ನು ಇಡಲು ಓವಿಪೊಸಿಟರ್ ಎಂದು ಕರೆಯಲ್ಪಡುವ ಉದ್ದವಾದ ಸೂಜಿಯಂತಹ ಅಂಗವನ್ನು ಬಳಸಿ ಅಂಜೂರದ ಸೈಕೋನಿಯಾದೊಳಗೆ ಮೊಟ್ಟೆಗಳನ್ನು ಇರಿಸುತ್ತವೆ. ವಿಭಿನ್ನ ಗಾತ್ರಗಳು ಮತ್ತು ಆಕಾರಗಳಲ್ಲಿ ಬರುವ ಸೈಕೋನಿಯಾವು ಯಾವ ಜಾತಿಯ ಕಣಜಗಳು ತನ್ನೊಳಗೆ ಪ್ರವೇಶಿಸುತ್ತವೆ ಎಂಬುದನ್ನು ನಿಯಂತ್ರಿಸುತ್ತದೆ. ಸೈಕೋನಿಯಾದ ರಾಸಾಯನಿಕ ಗುಣವಿಶೇಷಗಳು, ರೂಪವಿಜ್ಞಾನ ಮತ್ತು ಬೆಳವಣಿಗೆಯ ನಿರ್ಬಂಧಗಳಿಂದಾಗಿ, ನಿರ್ದಿಷ್ಟ ಅಂಜೂರದ ಕಣಜಗಳು ಮಾತ್ರ ನಿರ್ದಿಷ್ಟ ಅಂಜೂರ ಮರದ ಪ್ರಭೇದದೊಂದಿಗೆ ಸಂಬಂಧ ಹೊಂದಲು ಸಾಧ್ಯ. ಕಣಜಗಳನ್ನು ಆಕರ್ಷಿಸಲು ಅಥವಾ ಹಿಮ್ಮೆಟ್ಟಿಸಲು ಅಂಜೂರದ ಸೈಕೋನಿಯಾ ವಿಶಿಷ್ಟವಾದ ಬಾಷ್ಪಶೀಲ ಸಂಯುಕ್ತಗಳನ್ನು ಸ್ರವಿಸುತ್ತದೆ; ಒಮ್ಮೊಮ್ಮೆ, ತಮ್ಮೊಳಗೆ ಕಣಜಗಳು ತಮ್ಮ ಮೊಟ್ಟೆಗಳನ್ನು ಇಡಬಾರದೆಂದು ಸೈಕೋನಿಯಂ ಗೋಡೆಯಂತಹ ಯಾಂತ್ರಿಕ ಅಡೆತಡೆಗಳನ್ನು ಕೂಡ ಬಳಸುತ್ತದೆ. ಹೀಗೆ ಬಗೆಬಗೆಯ ಅಡೆತಡೆಗಳ ನಡುವೆಯೂ ತಮ್ಮ ಆತಿಥೇಯ ಅಂಜೂರದ ಹಣ್ಣಿಗೆ ಹೊಂದಿಕೊಂಡ ಕಣಜಗಳ ರಚನಾತ್ಮಕ ಮತ್ತು ನಡವಳಿಕೆಯ ಗುಣಲಕ್ಷಣಗಳ ಮೇಲೆ, ವಿಕಾಸ ಚಕ್ರವು ತನ್ನ ಪ್ರಭಾವ ಬೀರುತ್ತದೆ.
 
ಸಂಶೋಧಕರು ತಮ್ಮ ಈ ಅಧ್ಯಯನದಲ್ಲಿ, ಕರ್ನಾಟಕದ ಅಗುಂಬೆಯ ರಕ್ಷಿತಾರಣ್ಯದ ೧೮ ಫೈಕಸ್ ರೇಸ್‌ಮೋಸಾ ಮರಗಳು ಜೊತೆಗೆ ೧೭ ಹೆಣ್ಣು ಮತ್ತು ೩೦ ಗಂಡು ಫೈಕಸ್ ಹಿಸ್ಪಿಡಾ ಮರಗಳ ಭೌಗೋಳಿಕ ವಿತರಣೆಯನ್ನು ವಿಶ್ಲೇಷಿಸಿದ್ದಾರೆ. ಸಂಶೋಧಕರು, ಇವುಗಳ ಸ್ಥಾನಗಳನ್ನು ಪತ್ತೆಹಚ್ಚಲು ಜಿಪಿಎಸ್ ನಿರ್ದೇಶಾಂಕಗಳನ್ನು ಬಳಸಿದರು ಮತ್ತು ಕಣಜದ ಹಾರಾಟದ ಅವಧಿ, ದೇಹದ ಕೊಬ್ಬಿನಂಶ ಮತ್ತು ಚಯಾಪಚಯ ದರಗಳಂತಹ ದೈಹಿಕ ಗುಣಲಕ್ಷಣಗಳನ್ನು ಅಳೆಯುವ ಮೂಲಕ, ಒಂದು ಅಂಜೂರದ ಮರದಿಂದ ಇನ್ನೊಂದಕ್ಕೆ ಹಾರಲು ಆ ಕಣಜಗಳು ಹೊಂದಿರುವ ಸಾಮರ್ಥ್ಯವನ್ನು ನಿರ್ಣಯಿಸಿದರು. ಈ ಗುಣಲಕ್ಷಣಗಳು, ಒಂದು ನಿರ್ದಿಷ್ಟ ಅಂಜೂರದ ಮರದಿಂದ ಇನ್ನೊಂದಕ್ಕೆ ಕಣಜಗಳು ತಮ್ಮ ದೀರ್ಘ ಪ್ರಯಾಣವನ್ನು ಹೇಗೆ ಕೈಗೊಳ್ಳುತ್ತವೆ ಎಂಬುದರ ಬಗ್ಗೆ ತಿಳಿಸಿಕೊಡುತ್ತವೆ.

ಸಂಶೋಧಕರು ತಮ್ಮ ಈ ಅಧ್ಯಯನಕ್ಕಾಗಿ ಸಂಗ್ರಹಿಸಿದ ಎರಡು ಮಿಲಿಮೀಟರ್ಗಳಿಗಿಂತ ಕಡಿಮೆ ಅಳತೆಯ ಕಣಜಗಳನ್ನು, ಸೂಕ್ಷ್ಮದರ್ಶಕದ ಅಡಿಯಲ್ಲಿ ಅಧ್ಯಯನ ಮಾಡಿದ್ದಾರೆ.

“ಒಮ್ಮೆ ಅವುಗಳನ್ನು ಹಿಡಿದಿಟ್ಟ ನಂತರ, ಪ್ರಯೋಗಾಲಯದಲ್ಲಿ ಸಣ್ಣ ಚಲನೆಯ ಶೋಧಕಗಳನ್ನು ಬಳಸಿ ಅವುಗಳ ಹಾರಾಟದ ಅವಧಿಯನ್ನು ಪರೀಕ್ಷಿಸಿದ್ದೇವೆ. ಹೀಗೆ ಕಟ್ಟಿಹಾಕಿದಾಗ ನಡೆಸುವ ಹಾರಾಟಕ್ಕೆ ಬೇಕಾದ ಇಂಧನದ ಪ್ರಮಾಣವನ್ನು ಅಳೆಯಲು, ನಾವು ಅವುಗಳ ದೇಹದಿಂದ ಕೊಬ್ಬನ್ನು ಬೇರ್ಪಡಿಸಿ ಪರೀಕ್ಷಿಸಿದ್ದೇವೆ. ಜೊತೆಗೆ, ಅವುಗಳ ಇಂಗಾಲದ ಡೈಆಕ್ಸೈಡ್ ಉತ್ಪಾದನೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ನಾವು ಕಣಜಗಳ ಚಯಾಪಚಯ ದರವನ್ನು ಅಂದಾಜು ಮಾಡಿದ್ದೇವೆ.” ಎಂದು ಪ್ರೊಫೆಸರ್ ಬೊರ್ಗೆಸ್ ವಿವರಿಸುತ್ತಾರೆ.

ಈ ಅಳತೆಗಳು, ಕಣಜಗಳ ಹಾರಾಟದ ಚಟುವಟಿಕೆಯ ಮಟ್ಟವನ್ನು ಮತ್ತು ದೂರದ-ಹಾರಾಟಗಳನ್ನು ನಿರ್ವಹಿಸಲು ಕಣಜಗಳ ಸಾಪೇಕ್ಷ ಸಾಮರ್ಥ್ಯವನ್ನು ಪ್ರತಿಬಿಂಬಿಸುವುದರಿಂದ, ಹೆಚ್ಚು ಉಪಯುಕ್ತವೆನಿಸಿವೆ.

ಆತಿಥೇಯ ಅಂಜೂರದ ಮರಗಳ ಪ್ರಾದೇಶಿಕ ವಿತರಣೆ ಮತ್ತು ಅವುಗಳ ಸೈಕೋನಿಯಾದಲ್ಲಿ ವಾಸಿಸುವ ಕಣಜಗಳ ಗುಣಲಕ್ಷಣಗಳನ್ನು ಸಂಶೋಧಕರು ಹೋಲಿಸಿದಾಗ, ಫೈಕಸ್ ಹಿಸ್ಪಿಡಾದ ಗಂಡು ಮತ್ತು ಹೆಣ್ಣು ಮರಗಳಿಗಿಂತ ಫೈಕಸ್ ರೇಸಿಮೋಸಾ ಅಥವಾ ಅತ್ತಿ ಮರಗಳು ವ್ಯಾಪಕ ವಿತರಣೆಯನ್ನು ಹೊಂದಿದೆ ಎಂದು ಅವರು ಕಂಡುಕೊಂಡರು. ಫೈಕಸ್ ರೇಸಿಮೋಸಾದಲ್ಲಿ ವಾಸಿಸುವ ಕಣಜ ಸಮುದಾಯಗಳು ಫೈಕಸ್ ಹಿಸ್ಪಿಡಾ ಅಥವಾ ಕಾಡು ಅತ್ತಿ ಮರದಲ್ಲಿರುವ ಕಣಜ ಸಮುದಾಯಗಳಿಗಿಂತಾ ಹೆಚ್ಚಿನ ಪ್ರಸರಣ ಸಾಮರ್ಥ್ಯವನ್ನು ಪ್ರದರ್ಶಿಸಿವೆ ಎಂದು ಫಲಿತಾಂಶಗಳು ತೋರಿಸಿಕೊಟ್ಟವು. ಈ ಅವಲೋಕನವು ಅಂಜೂರದ ಮರಗಳ ಸಂಪನ್ಮೂಲ ವಿತರಣೆ ಮತ್ತು ಅಂಜೂರದ ಕಣಜಗಳ ಪ್ರಸರಣ ಗುಣಲಕ್ಷಣಗಳ ನಡುವಿನ ಸಂಪರ್ಕವನ್ನು ಸ್ಥಾಪಿಸುತ್ತದೆ. ವಿಕಾಸದ ಸಮಯದಲ್ಲಿ, ಆತಿಥೇಯ ಅಂಜೂರದ ಹಣ್ಣುಗಳು ಅವುಗಳ ಪ್ರಸರಣ ಮಾದರಿಗಳನ್ನು ಬದಲಿಸಿದಂತೆಯೇ, ಅವುಗಳಿಗೆ ಸಂಬಂಧಪಟ್ಟ ಕಣಜ ಸಮುದಾಯಗಳು ಕೂಡ ತಮ್ಮ ಆತಿಥೇಯ ಮರಗಳ ಪ್ರಸರಣಕ್ಕೆ ಹೊಂದಿಕೆಯಾಗುವಂತೆ ತಮ್ಮ ಪ್ರಸರಣವನ್ನು ನಿಕಟವಾಗಿ ಬದಲಾಯಿಸಿಕೊಳ್ಳುತ್ತವೆ. ಪ್ರಕೃತಿ ನಿಯಮಕ್ಕೆ ಎಲ್ಲರೂ ತಲೆಬಾಗಲೇಬೇಕು; ಇಲ್ಲದಿದ್ದರೆ ತಮಗೆ ಉಳಿಗಾಲವಿಲ್ಲ ಎಂಬ ಸತ್ಯವನ್ನು ಅವು ಚೆನ್ನಾಗಿ ಅರಿತಂತಿದೆ ಅಲ್ಲವೇ? 

ಈ ಅಧ್ಯಯನದ ಆವಿಷ್ಕಾರಗಳು, ಜೀವಿಗಳ ಜೀವಿತದ ಮೇಲೆ ವಿಕಾಸದ ಪಾತ್ರವೇನು ಎಂಬುದನ್ನು ಮನನ ಮಾಡಿಸುತ್ತದೆ. ವ್ಯಾಪಕವಾಗಿ ವಿತರಿಸಲ್ಪಟ್ಟ ಅಂಜೂರದ ಮರಗಳು ದೂರದ ಹಾರಾಟ ಮಾಡುವ ಕಣಜಗಳನ್ನು ಆಶ್ರಯಿಸುತ್ತವೆ ಮತ್ತು ಇದಕ್ಕೆ ವ್ಯತಿರಿಕ್ತವಾಗಿ, ಪ್ರಸರಣದ ವ್ಯಾಪಕತೆ ಕಡಿಮೆಯಿರುವ ಅಂಜೂರದ ಮರಗಳು ದೂರದ ಹಾರಾಟ ಮಾಡುವ ಕಣಜಗಳ ಆಯ್ಕೆಗೆ ಒಲವು ತೋರುವುದಿಲ್ಲ ಎಂಬುದು ಈ ವಿಕಾಸದ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ವಿದ್ಯಮಾನವು ಅನೇಕ ಕೀಟಗಳಿಗೆ ಅನ್ವಯಿಸುತ್ತದೆ; ಉದಾಹರಣೆಗೆ, ಬೆಳೆಗಳನ್ನು ಕಾಡುವ ಕೀಟಗಳು ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ಚಲಿಸುವ ಬಗೆ ಅರಿತುಕೊಳ್ಳಲು ಇದು ಸಹಾಯಕ.

“ಯಾವುದೇ ಒಂದು ಸಮುದಾಯದಲ್ಲಿ ಪ್ರಸರಣಕ್ಕೆ ಸಂಬಂಧಿಸಿದ ಗುಣಲಕ್ಷಣಗಳನ್ನು ಹೋಲಿಸುವಾಗ, ವಿಕಸನೀಯ ಸಮಯದ ರೂಪಾಂತರಕ್ಕೆ ಸ್ಪಷ್ಟ ಮತ್ತು ವಿವರವಾದ ಪರಿಗಣನೆಯ ಅಗತ್ಯವಿದೆ ಎಂದು ನಾವು ಪ್ರಸ್ತಾಪಿಸುತ್ತೇವೆ" ಎನ್ನುತ್ತಾರೆ ಸಂಶೋಧಕರು. ಅವರು ಈಗ ಇತರ ಪ್ರಭೇದಗಳ ಅಂಜೂರದ ಹಣ್ಣುಗಳು ಮತ್ತು ಅಂಜೂರದ ಕಣಜ ಸಮುದಾಯಗಳ ನಡುವೆ, ತಮ್ಮ ಈ ಸಂಶೋಧನೆಗಳನ್ನು ಪರಿಶೀಲಿಸುವ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.

Kannada