ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಆಸ್ಪತ್ರೆಗಳು ಮತ್ತು ಆರೋಗ್ಯಸೇವೆಯು ಕಾಯಿಲೆಗಳನ್ನು ಸೋಲಿಸುತ್ತವೆ ಎಂಬುದು ಮರೀಚಿಕೆಯೇ?

Read time: 1 min
ಬೆಂಗಳೂರು
15 Jun 2018
ಆಸ್ಪತ್ರೆಗಳು ಮತ್ತು ಆರೋಗ್ಯಸೇವೆಯು ಕಾಯಿಲೆಗಳನ್ನು ಸೋಲಿಸುತ್ತವೆ ಎಂಬುದು ಮರೀಚಿಕೆಯೇ? | ಪ್ರತಿಜೀವಕಗಳು 'ಸೂಪರ್ ಬಗ್' ಸರಣಿ - 3

ಪ್ರತಿಜೀವಕಗಳು 'ಸೂಪರ್ ಬಗ್' ಸರಣಿಯಲ್ಲಿ ಇದು ಕೊನೆಯ ಭಾಗ. ಇದರಲ್ಲಿ ರೋಗಗಳನ್ನು ಉಂಟುಮಾಡುವ ಬ್ಯಾಕ್ಟೇರಿಯಾಗಳಲ್ಲಿ ಪ್ರತಿಜೀವಕ ನಿರೋಧಕತೆ ಹೇಗೆ ಕಂಡುಬರುತ್ತದೆ, ಅದಕ್ಕೆ ಕಾರಣಗಳು ಮತ್ತು ಅದರಿಂದ ಉಂಟಾಗಬಹುದಾದ ತೀವ್ರತೆಯ ಬಗ್ಗೆ ತಿಳಿಯಬಹುದು. 

ಭಾರತವು ಈಗ ದೇಶಾದ್ಯಂತ ಸರ್ವತ್ರವಾಗಿರುವ ಸಣ್ಣ ಸೂಕ್ಷ್ಮ ಭಯೋತ್ಪಾದಕರಿಂದ ಅಪಾಯಕಾರಿ ಬೆದರಿಕೆಯನ್ನು ಎದುರಿಸುತ್ತಿದೆ. ಈ ಭಯೋತ್ಪಾದಕರು ಯಾರು ಎಂದು ಯೋಚಿಸುತ್ತಿದ್ದೀರಾ? ಇವೇ 'ಸೂಪರ್ ಬಗ್'ಗಳು. ಪ್ರತಿಜೀವಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿರುವ ಸೂಕ್ಷ್ಮಾಣುಜೀವಿಗಳು. ಪ್ರತಿಜೀವಕಗಳ ಮಿತಿ ಮೀರಿದ ಬಳಕೆಯಿಂದಾಗಿ ಈ ಪರಿಸ್ಥಿತಿ ಉಂಟಾಗುತ್ತದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. ಇದನ್ನು ಮತ್ತಷ್ಟು ಸಂಕೀರ್ಣಗೊಳಿಸುವುದು, ಪ್ರತಿಜೀವಕಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಆರೋಗ್ಯಸೇವಾ ಕ್ಷೇತ್ರದಲ್ಲಿ ಇರುವವರ ಅವೈಜ್ಞಾನಿಕ ತಿಳುವಳಿಕೆ; ಇದು ನಮ್ಮ ಸಮಾಜದ ಮುಖ್ಯ ಸ್ತಂಭವಾದ ಆರೋಗ್ಯ ಕ್ಷೇತ್ರವನ್ನೇ ಅಲುಗಾಡಿಸುತ್ತಿದೆ. ಭಾರತೀಯ ಆರೋಗ್ಯ ವ್ಯವಸ್ಥೆಯು ಯಾವ ಮಟ್ಟದಲ್ಲಿದೆ? ಕಟು ವಾಸ್ತವವನ್ನು ಎದುರಿಸಲು ಮತ್ತು ಔಷಧ-ನಿರೋಧಕ ಬ್ಯಾಕ್ಟೀರಿಯಾ ಒಡ್ಡುವ ಸವಾಲನ್ನು ಎದುರಿಸುವ ತಯಾರಿ ಹೊಂದಿದೆಯೇ?

ಭಾರತೀಯ ಸಂವಿಧಾನವು ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ. ಇದನ್ನು ಸಾಕಾರಗೊಳಿಸಲು, ಗುಣಮಟ್ಟದ ಆರೋಗ್ಯಸೇವೆವನ್ನು ಉಚಿತವಾಗಿ ಎಲ್ಲಾ ನಾಗರಿಕರಿಗೆ ಒದಗಿಸಲು, ಸರ್ಕಾರವು - ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಎಂಬ ಮೂರು ಹಂತಗಳ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಮಾನ್ಯ ರೋಗಗಳನ್ನು ತಡೆಗಟ್ಟುವ ಸಲಹೆ ಮತ್ತು ಮೂಲಭೂತ ಚಿಕಿತ್ಸಕ ಸೇವೆಗಳನ್ನು ಒದಗಿಸುತ್ತವೆ; ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ, ಸಮುದಾಯ ಮತ್ತು ವೈದ್ಯಕೀಯ ಅಧಿಕಾರಿಗಳ ನಡುವಿನ ಸಂಪರ್ಕದ ಮೊದಲ ಹಂತವಾಗಿದೆ. ಮಾಧ್ಯಮಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಸಾಮುದಾಯಿಕ ಆರೋಗ್ಯ ಕೇಂದ್ರಗಳು ಮತ್ತು ಉಪ-ಜಿಲ್ಲಾ ಆಸ್ಪತ್ರೆಗಳು ಸೇರಿದ್ದು, ಇದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಲ್ಲೇಖಿತ ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಹೆಚ್ಚು ಸುಧಾರಿತ ವೈದ್ಯಕೀಯ ಆರೈಕೆ ಮತ್ತು ದಿನದ ೨೪ ಘಂಟೆಯೂ ತುರ್ತು ಸೇವೆಗಳನ್ನು ಒದಗಿಸುತ್ತವೆ. ತೃತೀಯ ಆರೋಗ್ಯ ವ್ಯವಸ್ಥೆಗಳಲ್ಲಿ ಜಿಲ್ಲೆಯ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದ್ದು, ವಿಶೇಷ ಆರೋಗ್ಯ ಸಲಹಾ ಸೇವೆಯನ್ನು ನೀಡುತ್ತವೆ.

ಲಿಖಿತ ವಿವರಣೆಯ ಪ್ರಕಾರ, ಈ ಮೂರು ಹಂತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು, ಆರೋಗ್ಯ ಸೇವೆಯಲ್ಲಿ ಹೆಚ್ಚುತ್ತಿರುವ ಸಂಕೀರ್ಣತೆಯ ಆಧಾರದ ಮೇಲೆ ಸಮಸ್ಯೆಯನ್ನು ನೀಗುವ ವಿಸ್ತಾರವಾದ, ಸಂಘಟಿತ ವ್ಯವಸ್ಥೆಯಾಗಿ ಕಂಡುಬರುತ್ತದೆ. ಆದರೆ, ವಾಸ್ತವವಾಗಿ ಸಿಬ್ಬಂದಿಗಳ ತೀವ್ರತರವಾದ ಕೊರತೆ, ಸರತಿ ಸಾಲಿನಲ್ಲಿ ರೋಗಿಗಳು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಮತ್ತು ಕಳಪೆ ಸೇವೆಗಳು, ಸಾರ್ವಜನಿಕ ಆರೋಗ್ಯಸೇವೆಯನ್ನು ದುರ್ಬಲಗೊಳಿಸುತ್ತವೆ. ಭಾರತದಲ್ಲಿ, ಪ್ರತಿ ೧೦೦೦೦ ಜನರಿಗೆ ವೈದ್ಯರು, ಶುಶ್ರೂಷಕರು ಮತ್ತು ಶುಶ್ರೂಷಕಿಯರ ಒಟ್ಟು ಸಂಖ್ಯೆಯು ೧೧.೯ ರಷ್ಟು ಇದ್ದು, ಇದು ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸುವ ನಿಗಧಿತ ಸಂಖ್ಯೆಯ ಅಂದರೆ ೨೫.೪ರ ಅರ್ಧಕ್ಕಿಂತಾ ಕಡಿಮೆಯಿದೆ.

ಒಟ್ಟಾರೆಯಾಗಿ, ಭಾರತೀಯ ಆರೋಗ್ಯ ರಕ್ಷಣಾ ವ್ಯವಸ್ಥೆಯು ವಿಶ್ವ ಆರೋಗ್ಯ ಸಂಸ್ಥೆಯ ೧೯೨ ಸದಸ್ಯ ರಾಷ್ಟ್ರಗಳ ಪೈಕಿ ೧೧೨ ನೇ ಸ್ಥಾನದಲ್ಲಿದೆ; ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ, ಇದು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯ ದುರ್ಬಲ ಪರಿಸ್ಥಿತಿಯನ್ನು ಸೂಚಿಸುತ್ತದೆ. ಇದರ ಸ್ಪಷ್ಟ ಅರ್ಥವೇನೆಂದರೆ, ನಾಗರಿಕರ ಆರೋಗ್ಯದ ಮೂಲಭೂತ ಹಕ್ಕಿನೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಇಂತಹ ಪರಿಣಾಮಕಾರಿಯಲ್ಲದ ಸಾರ್ವಜನಿಕ ಆರೋಗ್ಯ ಸೇವೆಯ ಜೊತೆಗೇ ಅತ್ಯಂತ ದುಬಾರಿಯಾದ ಖಾಸಗಿ ಆರೋಗ್ಯ ಸೇವೆಯು,  ಜನರನ್ನು ಸ್ವ-ಔಷಧೋಪಚಾರಕ್ಕೆ ಮೊರೆಹೋಗಲು ಅಥವಾ ಔಷಧಿಗಳನ್ನು ಶಿಫಾರಸು ಮಾಡಲು ಅನುಮತಿಯಿಲ್ಲದವರಿಂದ  ಔಷಧಿಯನ್ನು ಪಡೆಯಲು ದೂಡುತ್ತವೆ.  ಇದರ ಪರಿಣಾಮವಾಗಿ, ತಪ್ಪಾದ ಔಷಧಿಗಳನ್ನು ಅದರಲ್ಲೂ ವಿಶೇಷವಾಗಿ ಪ್ರತಿಜೀವಕಗಳನ್ನು, ತಪ್ಪಾದ ಪ್ರಮಾಣದಲ್ಲಿ, ತಪ್ಪು ಅವಧಿಗಾಗಿ ಮತ್ತು ತಪ್ಪು ಆವರ್ತನೆಯಲ್ಲಿ ತೆಗೆದುಕೊಳ್ಳುವ ಪರಿಸ್ಥಿತಿ ಒದಗುತ್ತಿದ್ದು, ಇದು ಈಗಿನ 'ಸೂಪರ್ ಬಗ್' ಸಮಸ್ಯೆಗೆ ಕಾರಣವಾಗಿದೆ.

ಇದು ನಮ್ಮದೇ ಖರ್ಚಿನಲ್ಲಿ 'ಸೂಪರ್ ಬಗ್'ಗಳ ಬೆಳವಣಿಗೆಯನ್ನು ಉತ್ತೇಜಿಸುವಂತೆ ನಡೆಸಲಾಗುತ್ತಿರುವ ಪ್ರತಿಜೀವಕಗಳ ದುರುಪಯೋಗ. ಈ 'ಸೂಪರ್ ಬಗ್'ಗಳ ಉಗಮವು ಕೂಡ, ನಿರಾಶಾದಾಯಕ ಆರೋಗ್ಯ ಸೇವಾ ವ್ಯವಸ್ಥೆಯ ಮತ್ತೊಂದು ಕೊಡುಗೆಯಾಗಿದೆ. ಸೋಂಕಿನಿಂದ ಗುಣಮುಖರಾಗಲು ನಮಗೆ ಸಹಾಯ ಮಾಡುತ್ತವೆ ಎಂದು ಭಾವಿಸಲಾದ ಆಸ್ಪತ್ರೆಗಳೇ, ಈಗ ಬ್ಯಾಕ್ಟೀರಿಯಾಗಳಿಗೆ, ಅದರಲ್ಲೂ ವಿಶೇಷವಾಗಿ ಪ್ರತಿಜೀವಕಗಳಿಗೆ ನಿರೋಧಕವಾಗಿರುವಂತಹ 'ಸೂಪರ್ ಬಗ್'ಗಳಿಗೆ ಸಮೃದ್ಧವಾಗಿ ಬೆಳೆಯಲು ಆಸರೆ ಒದಗಿಸುತ್ತಿವೆ.

ಭಾರತೀಯ ಆರ್ಥಿಕತೆಯ ಉದಾರೀಕರಣ ಮತ್ತು ಬೆಳೆಯುತ್ತಿರುವ ಮಧ್ಯಮ ವರ್ಗದೊಂದಿಗೆ, ಪರಿಣಾಮಕಾರಿಯಲ್ಲದ ಸಾರ್ವಜನಿಕ ಆರೋಗ್ಯ ಸೇವೆಯೂ, ಖಾಸಗಿ ಆರೋಗ್ಯ ಸೇವೆಯ ಶೀಘ್ರ ವಿಸ್ತರಣೆಗೆ ಕಾರಣವಾಗಿದೆ. ೨೦೧೪ ರಲ್ಲಿ ಖಾಸಗಿ ಆರೋಗ್ಯ ಸೇವಾ ವಲಯವು ೭೦% ರಷ್ಟು ಹೊರರೋಗಿ ಮತ್ತು ೬೦% ರಷ್ಟು ಒಳರೋಗಿಗಳ ಆರೈಕೆ ಮಾಡಿದೆ ಎಂದು ಕಂಡುಬಂದಿದೆ. ಖಾಸಗಿ ಆರೋಗ್ಯ ಸೇವಾ ವ್ಯವಸ್ಥೆಯು, ಮೂಲಭೂತ ಚಿಕಿತ್ಸಕ ಸೇವೆಗಳನ್ನು ನೀಡುವ ಪ್ರತ್ಯೇಕವಾದ ಸಣ್ಣ ಸಣ್ಣ ಚಿಕಿತ್ಸಾಲಯಗಳಿಂದ ಮೊದಲ್ಗೊಂಡು ವಿಶೇಷ ಆರೋಗ್ಯ ಸಲಹೆ ಮತ್ತು ಸೇವೆ ನೀಡುವ ದೊಡ್ಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿರುತ್ತವೆ.

ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಖಾಸಗಿ ವೈದ್ಯರು ಹೆಚ್ಚಿನ ಔಪಚಾರಿಕ ವೈದ್ಯಕೀಯ ತರಬೇತಿಯನ್ನೂ ಹೊಂದಿಲ್ಲದಿದ್ದರೂ, ಹೆಚ್ಚಿನ ಸಲಹಾ ಶುಲ್ಕವನ್ನು ವಿಧಿಸುತ್ತಾರೆ ಎಂದು ಕಂಡುಬಂದಿದೆ. ಕಳಪೆ ಸರಕಾರಿ ನಿಯಮಗಳು, ಅಂತಹ ನಕಲಿ ವೈದ್ಯರು ಅಥವಾ ತರಬೇತಿಯಿಲ್ಲದ ವೈದ್ಯರು ತೊಂದರೆಯಿಲ್ಲದೆ ಬದುಕುಳಿಯಲು ಸಹಾಯ ಮಾಡಿವೆ. ಅನೇಕ ಸಾಮಾಜಿಕ ಅಂಶಗಳ ಕಾರಣದಿಂದ, ಈಗ ಹೆಚ್ಚಿನ ಜನರು ತಮ್ಮ ಆರೋಗ್ಯ ಅಗತ್ಯಗಳಿಗಾಗಿ, ಖಾಸಗಿ ಚಿಕಿತ್ಸಕರನ್ನು ಭೇಟಿಮಾಡುವುದನ್ನೇ ಆಯ್ಕೆ ಮಾಡುತ್ತಾರೆ.

ಆದರೆ, ಭಾರತದಲ್ಲಿ ಸಾಮಾನ್ಯವಾಗಿ ಆಸ್ಪತ್ರೆಗಳು ಯಾವ ಮಟ್ಟದಲ್ಲಿವೆ? ನಾವು ಸೋಂಕುಕಾರಕಗಳ, ಅದರಲ್ಲೂ, ವಿಶೇಷವಾಗಿ 'ಸೂಪರ್ ಬಗ್'ಗಳ ವಿರುದ್ಧ ಹೋರಾಡಲು ಸುಸಜ್ಜಿತರಾಗಿದ್ದೇವೆಯೇ? ದುರದೃಷ್ಟವಶಾತ್, ಈ ಪ್ರಶ್ನೆಗಳಿಗೆ ಉತ್ತರವು 'ಇಲ್ಲ' ಎಂದಾಗಿದೆ.

ಬ್ಯಾಕ್ಟೀರಿಯಾದ ಪ್ರಸರಣ ಮತ್ತು ಸಂತಾನೋತ್ಪತ್ತಿಯನ್ನು ಬೆಂಬಲಿಸುವಂತಹ ಕೆಟ್ಟ ನೈರ್ಮಲ್ಯದ ಅಭ್ಯಾಸಗಳನ್ನು ಹೊಂದಿರುವ ಭಾರತದ ಆಸ್ಪತ್ರೆಗಳ ಕಾರಣದಿಂದ, ಈ ಸಮಸ್ಯೆ ಉದ್ಭವಿಸಿದೆ. ಬ್ಯಾಕ್ಟೀರಿಯಾದ ಸೋಂಕುಗಳನ್ನು ನಿಯಮಿತವಾಗಿ ನಿಭಾಯಿಸುವ ಸ್ಥಳಗಳಲ್ಲಿ, ನೈರ್ಮಲ್ಯ ಕ್ರಮಗಳು ಬಹಳ ಮುಖ್ಯವಾಗಿದ್ದು, ಆಸ್ಪತ್ರೆಗಳು ಅಂತಹ ಸ್ಥಳಗಳ ಉದಾಹರಣೆಯಾಗಿವೆ. ಆದರೆ, ನಮ್ಮ ಆಸ್ಪತ್ರೆಗಳನ್ನು ನಾವು ಹೇಗೆ ಇರಿಸಿಕೊಂಡಿದ್ದೇವೆ? ಜನನಿಬಿಡತೆ, ಅಶುಚಿಯಾದ ಶೌಚಾಲಯಗಳು ಮತ್ತು ಕಳಪೆ ಕೈತೊಳೆಯುವ ಸೌಲಭ್ಯಗಳು, ದುರದೃಷ್ಟವಶಾತ್, ಭಾರತೀಯ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಇನ್ನೂ ಕಂಡುಬರುತ್ತವೆ. ಈ ಸೌಲಭ್ಯಗಳು ಅಥವಾ ಅವುಗಳ ಮೂಲಭೂತ ಕೊರತೆಯು ಆರೋಗ್ಯ ಸೇವಾ ಕ್ಷೇತ್ರದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ.

ಭಾರತೀಯ ಮತ್ತು ಬ್ರಿಟಿಷ್ ಸಂಶೋಧಕರು ನಡೆಸಿದ ಒಂದು ಅಧ್ಯಯನದಲ್ಲಿ, ಗುಜರಾತ್ ರಾಜ್ಯದ ೨೦ ಶಿಶು ಜನನ ಕೇಂದ್ರಗಳನ್ನು ಪರೀಕ್ಷಿಸಿ, ಅಲ್ಲಿನ ವಿವಿಧ ಸೋಂಕು ನಿಯಂತ್ರಣ ಅಭ್ಯಾಸಗಳನ್ನು ವಿಶ್ಲೇಷಿಸಿದ್ದಾರೆ.  ಈ ಕೇಂದ್ರಗಳಲ್ಲಿ ೭೦% ರಷ್ಟು ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಳಲ್ಲಿ, ಮುಂಚೆ ಬಳಸಲಾದ ಶಸ್ತ್ರಚಿಕಿತ್ಸೆಯ ಕೈಗವಸುಗಳನ್ನು ಮರುಬಳಕೆ ಮಾಡಲಾಗಿದೆಯೆಂದು ಅವರು ಕಂಡುಕೊಂಡರು; ಇದು ಆಘಾತಕಾರಿ ವಿಷಯವಾಗಿದ್ದು, ಇದು ಖಚಿತವಾಗಿ ಬೃಹತ್ ಪ್ರಮಾಣದಲ್ಲಿ ಸೋಂಕುಗಳನ್ನು ಹರಡುತ್ತದೆ. ಅಲ್ಲದೇ, ಈ ಕೇಂದ್ರಗಳ ಹೆರಿಗೆ ಕೋಣೆಗಳಲ್ಲಿ ಸುಮಾರು ೮೫%ರಷ್ಟು ಬಾರಿ, ಹೆರಿಗೆಯ ನಂತರ ತಕ್ಷಣ ಹಾಸಿಗೆಯ ಮೇಲ್ಮೈಯನ್ನು ಸ್ವಚ್ಛ ಮಾಡಲಿಲ್ಲ ಮತ್ತು ೩೩% ಆರೋಗ್ಯ ಕೇಂದ್ರಗಳ ಹೆರಿಗೆ ಕೋಣೆಗಳಲ್ಲಿ ಹ್ಯಾಂಡ್ಸ್ ಫ್ರೀ ನಲ್ಲಿಗಳು ಇರಲಿಲ್ಲ! ಈ ಕಳಪೆ ಸೋಂಕು ನಿಯಂತ್ರಣ ಪದ್ಧತಿಗಳು, ಬ್ಯಾಕ್ಟೀರಿಯಾದ ಯಥೇಚ್ಛ ಸಂತಾನೋತ್ಪತ್ತಿ ಮತ್ತು ಪ್ರಸರಣಕ್ಕೆ ಕಾರಣವಾಗುತ್ತದೆ; ಈ ಬ್ಯಾಕ್ಟೀರಿಯಾಗಳಲ್ಲಿ ಯಾವುದಾದರೂ 'ಸೂಪರ್ ಬಗ್'ಗಳಿದ್ದರೆ, ಈ ಕಳಪೆ ನೈರ್ಮಲ್ಯದ ಪ್ರಯೋಜನ ಪಡೆದು, ಕಾಡ್ಗಿಚ್ಚಿನಂತೆ ಸೋಂಕನ್ನು ಸಾಂಕ್ರಾಮಿಕವನ್ನಾಗಿಸಿ ಹರಡುತ್ತದೆ.

ದೇಶದ ಆಸ್ಪತ್ರೆಗಳಲ್ಲಿನ ಕಳಪೆ ನೈರ್ಮಲ್ಯ ಅಭ್ಯಾಸಗಳದ್ದು ಒಂದು ಕಥೆಯಾದರೆ, ವೈದ್ಯಕೀಯ ತ್ಯಾಜ್ಯ ವಿಲೇವಾರಿಯದ್ದು ಮತ್ತೊಂದು ಭಯ ಹುಟ್ಟಿಸುವ ಕಥೆಯಾಗಿದೆ. ದೇಹದ ಜೀವದ್ರವಗಳನ್ನು ಹೊಂದಿರುವ ವೈದ್ಯಕೀಯ ತ್ಯಾಜ್ಯವನ್ನು, ಸಾಮಾನ್ಯವಾಗಿ, ಸರಿಯಾದ ಚಿಕಿತ್ಸಕ ಪ್ರಕ್ರಿಯೆಗಳಿಗೆ ಒಳಪಡಿಸದೆ, ಆಸ್ಪತ್ರೆಗಳ ಸುತ್ತಮುತ್ತಲೂ ಸುರಿಯಲಾಗುತ್ತದೆ. ಖಂಡಿತವಾಗಿ ಈ ವೈದ್ಯಕೀಯ ತ್ಯಾಜ್ಯಗಳು 'ಸೂಪರ್ ಬಗ್'ಗಳನ್ನೂ ಒಳಗೊಂಡಂತೆ ಹಲವಾರು ಬಗೆಯ ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತವೆ. ಹೆಚ್ಚಿನ ಆಸ್ಪತ್ರೆಗಳು ಇಂತಹ ಅಪಾಯಕಾರಿ ತ್ಯಾಜ್ಯವನ್ನು ಸುತ್ತಲಿನ ನೈಸರ್ಗಿಕ ಪರಿಸರಕ್ಕೆ ಬಿಡುಗಡೆ ಮಾಡುವ ಮೂಲಕ, ತಮ್ಮ ತ್ಯಾಜ್ಯ ವಿಲೇವಾರಿಯ ತಲೆನೋವನ್ನು ತೊಡೆದುಹಾಕಿಕೊಳ್ಳುತ್ತವೆ. ಆದರೆ ನದಿ ಕೆರೆ ಕುಂಟೆಗಳ ನೀರು ಇದರಿಂದ ಕಲುಷಿತಗೊಂಡು ಬಹುದೊಡ್ಡ ಅಪಾಯಕ್ಕೆ ಮುನ್ನುಡಿ ಬರೆಯುತ್ತವೆ. ವಾಯುಗಾಮಿ ಅಥವಾ ಜಲಗಾಮಿ 'ಸೂಪರ್ ಬಗ್'ಗಳಿಗಂತೂ ಇದು ಸ್ವರ್ಗವೇ ಸರಿ.

ಇದನ್ನು ಸಾಬೀತು ಮಾಡಲು ಬೇಕಾದಷ್ಟು ದಾಖಲೆ ಮತ್ತು ಅಂಕಿಅಂಶಗಳಿವೆ. ೨೦೧೭ರಲ್ಲಿ ಆಲಿಘಢ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ  ಅಧ್ಯಯನದಲ್ಲಿ, ಅಲಿಘಢ ಮುಸ್ಲಿಂ ವಿಶ್ವವಿದ್ಯಾನಿಲಯದ 'ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ'ಯಿಂದ ಮೂರು ವಿಭಿನ್ನ ಹೊರದಾರಿಯ ಮೂಲಕ ಒಳಚರಂಡಿ ನೀರಿಗೆ ಸೇರುವ ತ್ಯಾಜ್ಯವನ್ನು ಪರೀಕ್ಷಿಸಲಾಯಿತು; ಆಗ ದೊರೆತ ಆಘಾತಕಾರಿ ಅಂಶವೆಂದರೆ ಆ ಚರಂಡಿ ನೀರಿನಲ್ಲಿ ೩೨ ವಿವಿಧ ಬಗೆಯ 'ಸೂಪರ್ ಬಗ್'ಗಳು, ಅಂದರೆ ಪ್ರತಿಜೀವಕಗಳಿಗೆ ಪ್ರತಿರೋಧ ಬೆಳೆಸಿಕೊಂಡ ಸೂಕ್ಷ್ಮಾಣು ಜೀವಿಗಳು ಪತ್ತೆಯಾದವು!

ಆಸ್ಪತ್ರೆಯ ಒಳಚರಂಡಿ ನೀರನ್ನು ಪರೀಕ್ಷಿಸಿದಂತೆಯೇ, ಪ್ರತಿಜೀವಕಗಳನ್ನು ಉತ್ಪಾದಿಸುವ ಔಷಧೀಯ ಕೈಗಾರಿಕೆಗಳ ಸುತ್ತಲಿನ ನೀರಿನ ಮೂಲಗಳನ್ನೂ ಪರೀಕ್ಷಿಸಲಾಯಿತು; ೨೦೧೭ರಲ್ಲಿ ಜರ್ಮನಿಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ, ಹೈದರಾಬಾದ್ನ ಔಷಧ ತಯಾರಿಕಾ ಘಟಕಗಳ ಸಮೀಪದ ೨೮ ವಿವಿಧ ಜಲಪಾತ್ರಗಳಿಂದ ಮಾದರಿಯನ್ನು ಸಂಗ್ರಹಿಸಲಾಯಿತು; ಈ ಎಲ್ಲಾ ೨೮ ನೀರಿನ ಮಾದರಿಗಳೂ ಪ್ರತಿಜೀವಕಗಳ ಉಪಸ್ಥಿತಿಯನ್ನು ತೋರಿಸಿದ್ದು, ಅವುಗಳಲ್ಲಿ ೯೫%ಕ್ಕಿಂತಾ ಹೆಚ್ಚು ಮಾದರಿಗಳಲ್ಲಿ 'ಸೂಪರ್ ಬಗ್'ಗಳು ತಮ್ಮ ಉಪಸ್ಥಿತಿಯನ್ನು ಸಾರಿವೆ ಎಂಬುದು ಭಯ ಹುಟ್ಟಿಸುವ ಫಲಿತಾಂಶವೇ ಸರಿ.

'ಸೂಪರ್ ಬಗ್'ಗಳ ವ್ಯಾಪಕ ಉಪಸ್ಥಿತಿಯು ಹೆಚ್ಚುತ್ತಿರುವ ಕಾರಣದಿಂದ, ನಾವು ಪ್ರತಿಜೀವಕ ನಿರೋಧಕ ಸೋಂಕಿಗೆ ಈಡಾಗುವ ಸಾಧ್ಯತೆಗಳೂ ಹೆಚ್ಚುತ್ತಿದೆ. 'ಸೂಪರ್ ಬಗ್'ಗಳ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ, ಕ್ಷಯರೋಗ ಮತ್ತು ಟೈಫಾಯಿಡ್ನಂತಹ ಪ್ರಾಣಾಂತಿಕ ರೋಗಗಳ ವಿರುದ್ಧ ನಮ್ಮ ಮಾಯಾ ಮಾತ್ರೆಗಳು ಕೆಲಸಕ್ಕೆ ಬರುವುದಿಲ್ಲ; ಆಗ ನಾವು ಪ್ರತಿಜೀವಕ ಪೂರ್ವ ಯುಗಕ್ಕೆ ಸಾಗಿಸಲ್ಪಡುತ್ತೇವೆ!  ಉತ್ತಮ ಆರೋಗ್ಯ ಸೇವೆ ಮತ್ತು ಒಳ್ಳೆಯ ಆರೋಗ್ಯದ ಭರವಸೆಯು ಮರೀಚಿಕೆಯೆನಿಸುತ್ತದೆ.