ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಬದಲಾಗುತ್ತಿರುವ ನೇತ್ರಾವತಿ ನದಿಯ ಹಿಂದಿರುವ ಸತ್ತ್ವ

Read time: 1 min
ಮುಂಬಾಯಿ
15 Nov 2018
Photo : The Netravati River by Arjuncm3 [CC BY-SA 3.0 ], from Wikimedia Commons

ಕರ್ನಾಟಕದ ದಕ್ಷಿಣದಲ್ಲಿರುವ, ಐತಿಹಾಸಿಕವಾಗಿ ಬಂಟ್ವಾಳ ನದಿ ಎಂದು ಕರೆಯಲ್ಪಡುವ ನೇತ್ರಾವತಿ ನದಿಯ ಪ್ರವಾಹವು, ನೈರುತ್ಯ ಮಾನ್ಸೂನ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಬಂಟ್ವಾಳ ಪಟ್ಟಣದ ಸ್ಥಳೀಯ ನಿವಾಸಿಗಳು ಇನ್ನೂ 1974 ರಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಉಂಟಾದ ವಿನಾಶಕಾರಿ ಪ್ರವಾಹದಿಂದ ಹೊರಬಂದು ಪುನಃ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಇದು ಇತ್ತೀಚೆಗೆ 2013 ಮತ್ತು 2015 ರಲ್ಲಿ ಹಾಗೂ 2018 ರಲ್ಲಿ ಪುನರಪ್ಪಳಿಸಿದೆ. ನದಿಯ ನೀರಿನ ಮಟ್ಟದಲ್ಲಿ ಉಂಟಾಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಮಳೆ ಸುರಿತದ ಏರಿಳಿತಗಳು ಕಾರಣವೇ? ಸಂಪೂರ್ಣವಾಗಿ ಅಲ್ಲ, ಎಂದು ಬಾಂಬೆಯಲ್ಲಿರುವ, ಭಾರತೀಯ ತಂತ್ರಜ್ಞಾನ ಸಂಸ್ಥೆಯು, ತನ್ನ ಇತ್ತೀಚಿನ ಅಧ್ಯಯನವೊಂದರಲ್ಲಿ ತಿಳಿಸಿದೆ ಹಾಗೂ ನೇತ್ರಾವತಿ ನದಿಯ ಜಲಾನಯನ ಪ್ರದೇಶದಲ್ಲಿನ ಅತಿಯಾದ ಭೂಮಿಯ ಬಳಕೆಯು ಪ್ರಮುಖ ಕಾರಣವೆಂದು ಗುರುತಿಸಿದೆ.

“ಎನ್ವಿರಾನ್ಮೆಂಟಲ್ ಅರ್ಥ್ ಸೈನ್ಸಸ್” ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೇತ್ರಾವತಿ ನದಿಯ ಜಲಾನಯನ ಪ್ರದೇಶದಲ್ಲಿ ಬರಿದಾಗುತ್ತಿರುವ ಮಳೆನೀರು ಮತ್ತು ಪ್ರವಾಹದಗುಂಟ ಕೊಚ್ಚಿಹೋಗುತ್ತಿರುವ ಮಣ್ಣಿಗೆ ಸಂಬಂಧಿಸಿದಂತೆ, ನಗರೀಕರಣವು ಪ್ರಾಥಮಿಕ ಕಾರಣ ಎಂದು ತಿಳಿದಿದೆ. ಈ ಅಧ್ಯಯನವು 1972 ರಿಂದ ಐದು ವಿಭಿನ್ನ ಕಾಲಾವಧಿಗಳಲ್ಲಿ ಮತ್ತು 2030 ರ ಅವಧಿಗೆ ಯೋಜಿತ ಚಿತ್ರಣವೊಂದನ್ನು “ಮಣ್ಣು ಮತ್ತು ನೀರಿನ ಮೌಲ್ಯಮಾಪನ ಸಾಧನ (Soil and water Assessment Tool-SWAT) ಎಂಬ ನಿರ್ಧಿಷ್ಟ ಮಾದರಿಯನ್ನು ಬಳಸಿಕೊಂಡು ವಿಶ್ಲೇಷಿಸಲ್ಪಟ್ಟಿದೆ. ಈ ಸಂಶೋಧನೆಗಾಗಿ ಧನಸಹಾಯವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ಭಾರತ ಸರ್ಕಾರವು ಒದಗಿಸಿದೆ.

ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ನೇತ್ರಾವತಿ ನದಿಯು, ಮಂಗಳೂರು ಮತ್ತು ಬಂಟ್ವಾಳ ನಗರಗಳಿಗೆ ಕುಡಿಯುವ ನೀರಿನ ಪ್ರಾಥಮಿಕ ಮೂಲವಾಗಿದೆ. “ಸುಮಾರು 1.2 ದಶಲಕ್ಷ ಜನರು ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ವಾಸಿಸುತಿದ್ದಾರೆ. ಈ ಸಂಖ್ಯೆಯು 2030 ರ ಹೊತ್ತಿಗೆ ಎರಡುಪಟ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂದೆ ಉಂಟಾಗಬಹುದಾದ ಬದಲಾವಣೆಗಳ ಪರಿಣಾಮವನ್ನು ಅಧ್ಯಯನ ಮಾಡುವುದರಿಂದ, ಕೃಷಿ ವ್ಯವಸ್ಥೆಯ ಉತ್ತಮ ನಿರ್ವಹಣೆ ಮತ್ತು ಭವಿಷ್ಯದಲ್ಲಿ ಜಲಸಂಪನ್ಮೂಲಗಳನ್ನು ನಿರ್ವಹಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ” ಎಂದು ಈ ಅಧ್ಯಯನದ ಲೇಖಕರಾದ, ಬಾಂಬೆಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಎಲ್ಡೋ ಟಿ.ಐ. ಹೇಳುತ್ತಾರೆ.

ನೀರಿನ ಲಭ್ಯತೆಯು ಅಲ್ಲಿ ಸುತ್ತುವರೆದಿರುವ ಭೂಮಿಯನ್ನು ಯಾವ ಉದ್ದೇಶಗಳಿಗಾಗಿ ಬಳಸಿದ್ದಾರೆ ಹಾಗೂ ಭೂಮಿಯ ಮೇಲ್ಮೈ ಪದರವು ಯಾವುದರಿಂದ ಹೊದಿಸಲ್ಪಟ್ಟಿದೆ ಎಂಬುದರ ಮೇಲೆ ಆಧರಿತವಾಗಿದೆ. ಭೂಮಿಯ ಬಳಕೆ ಮತ್ತು ಭೂಮಿಯ ಮೇಲ್ಮೈ ಪದರದ ಪ್ರಮಾಣದಲ್ಲಿ ಉಂಟಾಗುವ ಬದಲಾವಣೆಯಿಂದ ಭೂಮಿಯ ಮೇಲ್ಮೈ ಲಕ್ಷಣಗಳಾದ ಸಸ್ಯಗಳ ಹೊದಿಕೆ, ಕಾಂಕ್ರೀಟ್ ಹೊದಿಕೆ, ಎತ್ತರ ಮತ್ತು ಇಳಿಜಾರುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮಳೆ ನೀರಿನ ಕಾಲುವೆ ಮತ್ತು ನೀರಿನ ಹರಿಯುವಿಕೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಹೆಚ್ಚಿದ ನಗರೀಕರಣವು ನೀರಿನ ಇಂಗುವಿಕೆಯನ್ನು ತಡೆಯುವಂತಹ, ಸಿದ್ದವಾದ ಕಾಂಕ್ರೀಟ್ ಹೊದಿಕೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ನೀರು ಬೇಗನೆ ಹರಿದುಹೋಗುತ್ತದೆ ಹಾಗೂ ಮಳೆನೀರು ಭೂಮಿಗೆ ಜಿನುಗುವುದು ಕಡಿಮೆಯಾಗಿ ಅಂರ್ತಜಲ ಮಟ್ಟ ಕುಸಿಯುತ್ತದೆ. ಕುಡಿಯಲು, ನೀರಾವರಿ ಮತ್ತು ಇತರೇ ಉದ್ದೇಶಗಳಿಗಾಗಿ ಅಂರ್ತಜಲವನ್ನು ಅವಲಂಭಿಸಿರುವ ಈ ಪ್ರದೇಶದ ಜನರು ನೀರಿನ ಕೊರತೆ ಎದುರಿಸುತ್ತಾರೆ.

1972 ರಲ್ಲಿ 60 ಚ.ಕಿ.ಮೀ ನಷ್ಟು ಇದ್ದ ನಗರ ಪ್ರದೇಶವು, 2012 ರಲ್ಲಿ ನಾಲ್ಕು ಪಟ್ಟು ಅಂದರೆ, 240 ಚ.ಕಿ.ಮೀ ನಷ್ಟು ಹೆಚ್ಚಳವಾಗಿದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ ಮತ್ತು ಇದು 2030 ರ ಹೊತ್ತಿಗೆ 340 ಚ.ಕಿ.ಮೀ ಹೆಚ್ಚಾಗುತ್ತದೆ ಎಂದು ಯೋಜಿಸಿದೆ. ಶೀಘ್ರ ನಗರೀಕರಣವು ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಅಂರ್ತಜಲ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ಮಣ್ಣಿನ ಸವಕಳಿಯಿಂದ ಕೃಷಿ ಉತ್ಪನ್ನದಲ್ಲಿ ಕೂಡ ನಷ್ಟವನ್ನು ಉಂಟು ಮಾಡುತ್ತದೆ.

ಹೆಚ್ಚುತ್ತಿರುವ ಕೃಷಿಯು, ಜಲಾನಯನ ಪ್ರದೇಶದಲ್ಲಿನ ಬದಲಾವಣೆಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ. 1972 ರಿಂದ 2012 ರವರೆಗೆ ಕೃಷಿ ಪ್ರದೇಶವು ಸುಮಾರು ಶೇ.15 ರಷ್ಟು ಹೆಚ್ಚಾಗಿದೆ ಮತ್ತು 2030 ರ ಹೊತ್ತಿಗೆ ಈ ಪ್ರದೇಶವು ಶೇ.24 ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ವಿರುದ್ದವಾಗಿ ಅರಣ್ಯ ಪ್ರದೇಶದಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಇದೇ ಅವಧಿಯಲ್ಲಿ ಅರಣ್ಯ ನಾಶವು ಶೇ.18 ರಷ್ಟಿದೆ. 2030 ರ ಹೊತ್ತಿಗೆ ಅರಣ್ಯ ಪ್ರದೇಶದಲ್ಲಿ ಸುಮಾರು ಶೇ.26 ರಷ್ಟು ಇಳಿಕೆಯನ್ನು ಕಾಣಲಿದೆ ಎಂದು ಅಧ್ಯಯನವು ಮುನ್ಸೂಚನೆ ನೀಡಿದೆ.

“ನಗರದ ವಿಸ್ತರಣೆಯು ಮುಖ್ಯವಾಗಿ ಮಂಗಳೂರು ನಗರದ ಸುತ್ತಲಿನ ನದಿಯ ಜಲಾನಯದ ಪ್ರದೇಶದ ಕೆಳಭಾಗದಲ್ಲಿ ಕಂಡುಬರುತ್ತದೆ. ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯು ಪೂರ್ವಭಾಗಗಳಲ್ಲಿ ಮತ್ತು ನಗರಪ್ರದೇಶಕ್ಕೆ ಹತ್ತಿರವಿರುವ, ನದಿಯ ಉದ್ದಕ್ಕೂ ಹರಡಿರುವ ಜಲಾನಯನ ಪ್ರದೇಶದ ಕೆಳಭಾಗದಲ್ಲಿ ಕಂಡುಬರುತ್ತದೆ. ನಗರ ಪ್ರದೇಶದ ವಿಸ್ತರಣೆಯಿಂದ ಉಂಟಾಗುವ ಪರಿಣಾಮಗಳು 2030 ರವರೆಗೂ ಮುಂದುವರೆಯುವ ನಿರೀಕ್ಷೆಯಿದೆ” ಎಂದು ಪ್ರೊಫೆಸರ್ ಎಲ್ಡೋ ಅವರು ಅಧ್ಯಯನದ ಸಂಶೋಧನೆಗಳಲ್ಲಿ ಕಂಡುಬಂದ ವಿವರಗಳನ್ವಯ ತಿಳಿಸುತ್ತಾರೆ.

ಸುದೀರ್ಘವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ನದಿಯ ಜಲಾನಯನ ಪ್ರದೇಶದಲ್ಲಿನ ನೀರಿನ ನಿರ್ವಹಣೆಗಾಗಿ ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಬಳಸಬಹುದೆಂದು ಸಂಶೋಧಕರು ವಿಶ್ವಾಸ ನೀಡುತ್ತಾರೆ ಹಾಗೂ ಹೆಚ್ಚಿನ ಭೂಬಳಕೆ ಮತ್ತು ಭೂಮಿಯ ಮೇಲ್ಮೈ ಪದರಗಳ ಹೆಚ್ಚಿನ ಬಳಕೆಯಿಂದ, ಗಣನೀಯವಾಗಿ ಬಾಧಿತಗೊಂಡ ಪ್ರದೇಶಗಳಲ್ಲಿ ಪ್ರತಿಕೂಲ ಪರಿಣಾಮಗಳನ್ನು ಕಡಿತಗೊಳಿಸಲು ಅರಣ್ಯೀಕರಣದಂತಹ ಅನೇಕ ನಿರ್ವಹಣಾ ಯೋಜನೆಗಳನ್ನು ಪ್ರತಿಪಾದಿಸುತ್ತಾರೆ.

“ಭವಿಷ್ಯದಲ್ಲಿ ಕೃಷಿ ಮತ್ತು ನಗರೀಕರಣದ ಗರಿಷ್ಟ ಹೆಚ್ಚಳವನ್ನು ನಿರೀಕ್ಷಿಸಬಹುದಾದ ಪ್ರದೇಶಗಳಾದ ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ಪ್ರದೇಶಗಳಲ್ಲಿ, ಸೂಕ್ತ ನಿರ್ವಹಣಾ ಯೋಜನೆಯನ್ನು ಹೊಂದುವುದು ಅವಶ್ಯವಿದೆ” ಎಂದು ಪ್ರೊಫೆಸರ್ ಎಲ್ಡೋ ಅವರು ಹೇಳುತ್ತಾರೆ. ಅಲ್ಲದೇ, ನೇತ್ರಾವತಿ ಜಲಾನಯನ ಪ್ರದೇಶದ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ನೀರಿನ ಅಭಾವ ಮತ್ತು ಗುಣಮಟ್ಟದ ಸಮಸ್ಯೆಗಳನ್ನು ಎದುರಿಸುವುದು ಮುಖ್ಯವಾಗಿದೆ.

ಈ ಅಧ್ಯಯನದಲ್ಲಿ ಪ್ರಸ್ತಾಪಿಸಲಾದ ವಿಧಾನವು ಉತ್ತಮ ನೀರಿನ ಸಂಪನ್ಮೂಲ ನಿರ್ವಹಣಾ ಯೋಜನೆಗಳಿಗಾಗಿ ಇತರೇ ನದಿಯ ಜಲಾನಯನ ಪ್ರದೇಶಗಳಿಗೆ ಸಹ ಅನ್ವಯಿಸಬಹುದು ಎಂದು ಲೇಖಕರು ಹೇಳುತ್ತಾರೆ. ಮುಂದುವರೆಸುತ್ತಾ, ಪಶ್ಚಿಮಘಟ್ಟದಲ್ಲಿನ ನದಿಯ ಜಲಾನಯನ ಪ್ರದೇಶದ ಮೇಲೆ ಈಗ ಹಾಗೂ ಭವಿಷ್ಯದಲ್ಲಿ ಉಂಟಾಗಬಹುದಾದ ಪರಿಣಾಮಗಳಿಗೆ ಮುಖ್ಯ ಕಾರಣ, ಹೆಚ್ಚಿದ ಭೂಬಳಕೆಯೇ ಅಥವಾ ಹವಾಮಾನ ಬದಲಾವಣೆಯೇ? ಎಂಬ ತೀಕ್ಷ್ಣವಾದ ಸಂಶೋಧನಾರ್ಹ ಪ್ರಶ್ನೆಗೆ ಉತ್ತರಿಸಲು ಸಂಶೋಧಕರು, ಈ ಕುರಿತು ವೈಜ್ಞಾನಿಕ ಅಧ್ಯಯನವನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ ಹಾಗೂ ಆ ಪ್ರದೇಶದಲ್ಲಿನ ಜಲಸಂಪನ್ಮೂಲದ ಸಂರಕ್ಷಣೆಗಾಗಿ ಸೂಕ್ತ ನಿರ್ವಹಣಾ ಯೋಜನೆಗಳನ್ನು ಅಭಿವೃದ್ದಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.