ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ದಕ್ಷಿಣ ಭಾರತದ ಅಂತರ್ಜಲ ಬಿಕ್ಕಟ್ಟನ್ನು ಪರಿಹರಿಸುವುದರ ಬಗ್ಗೆ ಒಂದು ನೋಟ

Mumbai
5 ಮೇ 2021
ದಕ್ಷಿಣ ಭಾರತದ ಅಂತರ್ಜಲ ಬಿಕ್ಕಟ್ಟನ್ನು ಪರಿಹರಿಸುವುದರ ಬಗ್ಗೆ ಒಂದು ನೋಟ

ಜೂನ್ 2019 ರಲ್ಲಿ ಚೆನ್ನೈನ ಜನತೆ ಒಂದು ಭಯಾನಕ ಸಂಗತಿಯನ್ನು ಎದುರಿಸಬೇಕಾಯಿತು - ನಗರದ ಜಲಾಶಯಗಳ ಅಳವಿನ 0.1 ಪ್ರತಿಶತಕ್ಕೆ ನೀರಿನ ಮಟ್ಟ ಇಳಿದುಹೋಗಿತ್ತು. ಹಾಗೆ ನೋಡಿದರೆ ನೀರಿನ ಲಾರಿಗಳು, ಖಾಲಿ ಬಕೆಟ್ ಗಳು, ಉದ್ರಿಕ್ತ ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು, ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ. ರಾಷ್ಟ್ರೀಯ ಭಾರತ ಪರಿವರ್ತನೆ ಸಂಸ್ಥೆ (ನೀತಿ ಆಯೋಗ) 2019 ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಕಂಡು ಬಂದದ್ದೇನೆಂದರೆ, ಬೆಂಗಳೂರು, ದೆಹಲಿ, ವೆಲ್ಲೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ 21 ನಗರಗಳಲ್ಲಿ 2020 ನೆಯ ಇಸವಿಯ ವೇಳೆಗೆ ಒಳಗೆ ಅಂತರ್ಜಲ ಬರಿದಾಗಿ ಹೋಗಲಿದೆ. ಈ ಬಿಕ್ಕಟ್ಟಿಗೆ ಕಾರಣಗಳೇನು? ದಕ್ಷಿಣ ಭಾರತವೇ ಏಕೆ ಈ ಅಸಮಾನ ಬಾಧೆಗೊಳಗಾಗುತ್ತಿದೆ? ಮುಂಬಯಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT Bombay) ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧಕರಾದ ಅಖಿಲೇಶ್ ಎಸ್ ನಾಯರ್ ಹಾಗೂ ಪ್ರೊ|| ಜೆ ಇಂದು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಈ ಪ್ರಶ್ನೆಗಳಿಗೆ ವಿವರಣೆ ನೀಡಿದ್ದಾರೆ. ಈ ವಿವರಣೆಯಲ್ಲಿ ಸಂಶೋಧಕರು ಒತ್ತಿ ಹೇಳುವುದೇನೆಂದರೆ ಈ ಬಿಕ್ಕಟ್ಟು ಪದೇ ಪದೇ ಒದಗಿರುವ ಬರಗಾಲದ ಪರೋಕ್ಷ ಪರಿಣಾಮವಾಗಿದೆ. ಈ ಅಧ್ಯಯನದ ವಿವರಗಳನ್ನು ದೂರ ಸಂವೇದನೆಯ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ (International Journal of Remote Sensing) ಪ್ರಕಟಿಸಿದ್ದಾರೆ.

ಅಂತರ್ಜಲದ ಇಳಿಯುವ ಮಟ್ಟ ಮೂಲಭೂತ ಅಗತ್ಯಗಳಾದ ಜಲಸಂಚಯನದ ಮೇಲಷ್ಟೇ ಅಲ್ಲದೆ, ಆಹಾರ ಭದ್ರತೆ ಹಾಗೂ ಅರ್ಥ ವ್ಯವಸ್ಥೆ ಮುಂತಾದ ಇತರ ವಿಶಾಲ ವಿಷಯಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಲಭ್ಯವಿರುವ ಅಂತರ್ಜಲದ 90 ಪ್ರತಿಶತ ಭಾಗವನ್ನು ನೀರಾವರಿಗಾಗಿ ಉಪಯೋಗಿಸಿಕೊಂಡು ಕೃಷಿಗಾರಿಕೆಯನ್ನೇ ತೀವ್ರವಾಗಿ ಅವಲಂಬಿಸಿರುವ ಭಾರತ ದೇಶದಲ್ಲಿ ಅನಿಯಮಿತ ಮಳೆ ಸೇರಿದಂತೆ ಇತರ ಅಂಶಗಳೂ ಸಹ ಪ್ರಸ್ತುತ ಬಿಕ್ಕಟ್ಟಿಗೆ ಕಾರಣಗಳಾಗಿವೆ. ಪದೇ ಪದೇ ಎದುರಾದ ಬರಗಾಲದ ಸಮಯದಲ್ಲಿ ನೀರಿನ ಅಭಾವ ಉಂಟಾಗಿದ್ದು, ಅಂತರ್ಜಲ ಮಟ್ಟದ ಅವ್ಯಸ್ಥಿತ ಶೋಷಣೆಗೆ ಇದೇ ಕಾರಣವಾಯಿತೆಂದು ಸಂಶೋಧಕರು ಉಲ್ಲೇಖಿಸುತ್ತಾರೆ. ದಕ್ಷಿಣ ಭಾರತದಲ್ಲಿನ ಅಂತರ್ಜಲ ಸಂಗ್ರಹಣೆಯ ಏರಿಳಿತದ ಐತಿಹಾಸಿಕ ಮಾಹಿತಿಯನ್ನು ಪರಿಗಣಿಸದಿದ್ದರಿಂದ ಈ ಮೊದಲಿನ ಅಧ್ಯಯನಗಳು ದಕ್ಷಿಣ ಭಾರತದ ಅಂತರ್ಜಲ ಬಿಕ್ಕಟ್ಟನ್ನು ತೀವ್ರವಾಗಿ ಕಡಿಮೆ ಅಂದಾಜು ಮಾಡಿವೆ. ಕಠೋರ ಬರಗಾಲದ ನಂತರ ಉಂಟಾಗುವ ಅಂತರ್ಜಲದ ಬೇಡಿಕೆಯ ಹೆಚ್ಚಳ ಅಂತರ್ಜಲ ಸಂಗ್ರಹಣೆಯ ಇಳಿತದ ವೇಗವನ್ನು ಬದಲಾಯಿಸುತ್ತದೆ.

“ಉತ್ತರ ಭಾರತದ ರಾಜ್ಯಗಳಲ್ಲಿ ಅಂತರ್ಜಲ ಮಟ್ಟದ ಸವಕಳಿ ಬಿರುಸಾಗಿದೆಯೆಂದೂ, ಅದಕ್ಕೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ಸ್ಥಿರವಾಗಿದೆಯೆಂದೂ ಪ್ರಸ್ತುತ ಲಭ್ಯವಿರುವ ಅಧ್ಯಯನಗಳು ವರದಿ ಮಾಡುತ್ತವೆ. ಆದಾಗ್ಯೂ, ಬೆಂಗಳೂರು, ಚೆನ್ನೈ ಮುಂತಾದ ನಗರಗಳಲ್ಲಿ ಕಳೆದ ಹಲವು ವರ್ಷಗಳಿಂದ ಅಂತರ್ಜಲದ ಕೊರತೆಯ ವರದಿಗಳು ಬರುತ್ತಿವೆ”, ಎನ್ನುತ್ತಾರೆ ಪ್ರೊ|| ಇಂದು. “ಈ ಸಂಗತಿಯು, ಪೂರ್ವಾಧ್ಯಯನಗಳಲ್ಲಿ ಕಂಡ ಫಲಿತಾಂಶಗಳಿಗೂ ವಾಸ್ತವ ಪರಿಸ್ಥಿತಿಗೂ ಇರುವ ಅಸಂಗತತೆಗಿರಬಹುದಾದ ಸಾಧ್ಯವಿರುವ ಕಾರಣಗಳನ್ನು ಅನ್ವೇಷಿಸಲು ನಮ್ಮನ್ನು ಪ್ರೇರೇಪಿಸಿತು”, ಎಂದು ಹೇಳುತ್ತಾರೆ.


2003 ರಿಂದ 2016 ರ ವರೆಗಿನ 13 ವರ್ಷಗಳ ಅವಧಿಯನ್ನೊಳಗೊಂಡ ನಾಸಾದ (NASA) ಗ್ರೇಸ್ (Gravity Recovery and Climate Experiment) ಉಪಗ್ರಹದಿಂದ ಪಡೆದ ಅಂತರ್ಜಲ ಮಾಹಿತಿ ಹಾಗೂ ಕೇಂದ್ರ ಅಂತರ್ಜಲ ಮಂಡಳಿ (Central Ground Water Board) ಪರಿವೀಕ್ಷಿಸಿದ ಸುಮಾರು 6000 ಬಾವಿಗಳ ಸಂಗ್ರಹದಿಂದ ಪಡೆದ ಮಾಹಿತಿಯನ್ನು ಸಂಶೋಧಕರು ಪರಿಶೀಲಿಸಿದರು. ಅವರು ಗಮನಿಸಿದ್ದೇನೆಂದರೆ ಅಂತರ್ಜಲ ಮಟ್ಟದಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದದ್ದು 2009ರ ಇಸವಿಯಲ್ಲಿ. ಆದ್ದರಿಂದ ಅವರು ತಮ್ಮ ಪರಿಶೀಲನೆಯನ್ನು ಎರಡು ಭಾಗಗಳಾಗಿ ವಿಭಜಿಸಿದರು - 2009-ಪೂರ್ವ ಹಾಗೂ 2009-ನಂತರ. 

ದಕ್ಷಿಣ ಭಾರತದಲ್ಲಿ 2009-ಪೂರ್ವ ಕಾಲದಲ್ಲಿ ಅಂತರ್ಜಲ ಮಟ್ಟಗಳು ಹೆಚ್ಚುತ್ತಿದ್ದವೆಂದೂ, 2009-ನಂತರ ಕಾಲದಲ್ಲಿ ತಿಂಗಳಿಗೆ 0.25 ಸೆಂಟಿಮೀಟರ್ ನಂತೆ ಆತಂಕಕಾರಿ ಗತಿಯಲ್ಲಿ ಅಂತರ್ಜಲ ಮಟ್ಟಗಳು ಕ್ಷೀಣಿಸುತ್ತಿದ್ದವೆಂದೂ ಸಂಶೋಧಕರು ಕಂಡುಕೊಂಡರು. 2009ನೇ ಇಸವಿಯಲ್ಲಿ ವಾರ್ಷಿಕ ಸರಾಸರಿ ಮಳೆಯಳೆತಕ್ಕಿಂತ 23 ಪ್ರತಿಶತ ಕಡಿಮೆ ಮಳೆ ಬಂದಿದ್ದು, ಅತ್ಯಂತ ಕಠೋರ ಬರಗಾಲವನ್ನು ಭಾರತ ದೇಶ ಅನುಭವಿಸಿತು. ಅಷ್ಟೇ ಅಲ್ಲದೆ ಬೆಣಚು, ಅಗ್ನಿಶಿಲೆ ಮುಂತಾದ ಗಡಸು ಬಂಡೆಗಳನ್ನೊಳಗೊಂಡ ದಕ್ಷಿಣ ಭಾರತದ ಪ್ರತಿಕೂಲ ಭೂ-ಸಂಯೋಜನೆಯಿಂದಾಗಿ ಮಳೆನೀರು ಸುಲಭವಾಗಿ ಒಸರದೇ ಇರುವುದರಿಂದ ಅಂತರ್ಜಲ ಮಟ್ಟದ ಸವಕಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಪಟ್ಟಿದೆಯೆಂದು ಸಹ ಗಮನಿಸಿದರು.

2009ನೇ ಇಸವಿಯ ನಂತರ ಮಳೆಸುರಿತದ ಏರಿಳಿತವು ಅಂತರ್ಜಲ ಸಂಗ್ರಹಣೆಯ ಮೇಲೆ ಮಹತ್ತರ ಪರಿಣಾಮ ಬೀರಿತು. ಇದಲ್ಲದೆ ಚೆನ್ನೈ ನಂತಹ ಪ್ರಮುಖ ನಗರಗಳಲ್ಲಿ ನಗರ ವಿಸ್ತರಣೆಯ ಯೋಜನೆಯಲ್ಲಿ ಕೆರೆಕಟ್ಟೆಗಳ ಮೇಲೆ ಕಟ್ಟಡಗಳ ನಿರ್ಮಾಣ ಬಿರುಸಾಗಿ ನಡೆದಿದ್ದು, ಅಂತರ್ಜಲ ಮರುಪೂರಣ ಪ್ರಕ್ರಿಯೆಯನ್ನು ದುರ್ಬಲಗೊಳಿಸಿತು. ಈ ಮಾನವ ನಿರ್ಮಿತ ಅಡಚಣೆಗಳು ನೆಲದಲ್ಲಿ ನೀರಿನ ಜಿನುಗುವಿಕೆಗೆ ಅಡ್ಡಿ ಮಾಡಿ, ಪ್ರವಾಹ ಹಾಗೂ ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ರಾಸಾಯನಿಕಗಳಿಂದಾಗುವ ಅಂತರ್ಜಲ ಮಾಲಿನ್ಯ - ಇವುಗಳಿಗೆ ಕಾರಣವಾಗುತ್ತವೆ.

ಬಹಳ ವರ್ಷಗಳಿಂದ ಭಾರತ ದೇಶವು ಹಲವಾರು ಬರಗಾಲಗಳನ್ನು ಎದುರಿಸಿದೆ, ಸಮಯ ಕಳೆದಂತೆ ಬರಗಾಲದ ಆವರ್ತನ ಹೆಚ್ಚಾಗುತ್ತಲೇ ಇದೆ. 2030 ನೇ ಇಸವಿಯ ಹೊತ್ತಿಗೆ ಭಾರತದ ಜನಸಂಖ್ಯೆಯ 40ಕ್ಕೂ ಹೆಚ್ಚು ಪ್ರತಿಶತ ಜನರಿಗೆ ಕುಡಿಯುವ ನೀರು ಲಭ್ಯವಿರುವುದಿಲ್ಲ ಎಂದು ನೀತಿ ಆಯೋಗದ ವರದಿ ಹೇಳುತ್ತದೆ. ಈ ಸಂಖ್ಯೆಯು ಜಗತ್ತಿನಾದ್ಯಂತ ಆತಂಕವನ್ನುಂಟು ಮಾಡಿದೆ. ನೀರಿನ ಅಭಾವವು ಬಹುತೇಕ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೃಷಿ ಹಾಗೂ ಕೈಗಾರಿಕಾ ಉದ್ಯಮಗಳಿಗೆ ಅಪಾಯ ಒಡ್ಡಲಿದೆ ಎಂದು ಈ ವರದಿಯು ಪ್ರವಾದಿಸುತ್ತದೆ. ಇದರಿಂದಾಗಿ ಮೊದಲೇ ಕ್ಷೀಣವಾಗಿರುವ ಸಾಮಾಜಿಕ ಆರ್ಥಿಕ ದುಸ್ಥಿತಿಯು ಇನ್ನೂ ಉಲ್ಬಣಗೊಂಡಿರುವುದು ಕಂಡುಬಂದಿದೆ. ಜಾಗತಿಕ ಕಾರ್ಯಪಡೆಯ 75 ಪ್ರತಿಶತಕ್ಕೂ ಹೆಚ್ಚಿನ ಉದ್ಯೋಗಗಳು ನೀರನ್ನು ಅವಲಂಬಿಸಿರುವುದರಿಂದ ಕಾರ್ಮಿಕ ವರ್ಗವು ನಿರುದ್ಯೋಗದ ಅಪಾಯವನ್ನು ಎದುರಿಸುತ್ತಿದೆ.

ಅಂತರ್ಜಲ ಮಟ್ಟವನ್ನು ಉಳಿಸಿಕೊಂಡು ಅದರ ಅವನತಿಯನ್ನು ಹಿನ್ನಡೆಸುವುದು ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಕೈಗಾರಿಕಾ, ಹಾಗೂ ವ್ಯವಸಾಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅತ್ಯವಶ್ಯಕವಾಗಿದೆ. ದೇಶದಾದ್ಯಂತ ಪ್ರಚಲಿತವಿರುವ ನೀರಿನ ಅಭಾವದ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನ್ನಲ್ಲಿ ಸಂಘಟಿತ ಪ್ರಯತ್ನ ನಡೆಸಲು ಕಾವೇರಿ ನೀರಿನ ಸಮಸ್ಯೆಯಂತಹ ಅಂತರ-ರಾಜ್ಯ ವಿವಾದಗಳನ್ನು ಬದಿಗಿಟ್ಟು ಮುನ್ನಡೆಯಬೇಕಾಗಿದೆ.

“ನೀರಾವರಿ ಉದ್ದೇಶಕ್ಕಾಗಿ ಅಂತರ್ಜಲವನ್ನು ಹೊರತೆಗೆಯಲು ಸುಸ್ಥಿರ ಮಾರ್ಗವನ್ನು ಸ್ಥಾಪಿಸಲು ವೈಜ್ಞಾನಿಕ ವಿಧಾನವನ್ನು ಅಳವಡಿಸುವುದರಿಂದ ಅಂತರ್ಜಲ ಶೋಷಣೆಯನ್ನು ತಡೆಗಟ್ಟಬಹುದು”, ಎನ್ನುತ್ತಾರೆ ಪ್ರೊ|| ಇಂದು.

“ಅಂತರ್ಜಲದ ಅಕ್ರಮ ಹೊರತೆಗೆಯುವಿಕೆಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವುದು - ಇವುಗಳ ಮೂಲಕ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಬಹುದು. ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಇತರ ರಾಜ್ಯಗಳು ಅಂತರ್ಜಲದ ಸವಕಳಿಯನ್ನು ಹಿನ್ನಡೆಸಲು ಕೃತಕ ಮರುಪೂರಣ ಬಾವಿಗಳನ್ನು ಉಪಯೋಗಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದು ಮುಂತಾದವು ಸೇರಿದಂತೆ ಅನೇಕ ವಿಧಾನಗಳನ್ನು ಬಳಸುತ್ತವೆ”, ಎನ್ನುತ್ತಾರೆ ಪ್ರೊ|| ಇಂದು. ಈ ರಾಜ್ಯಗಳಲ್ಲಿ ಅಂತರ್ಜಲದ ಮಟ್ಟವು ಕ್ರಮೇಣ ಹೆಚ್ಚಾಗುತ್ತಿದೆಯೆಂದು ಈ ಅಧ್ಯಯನವು ಹೇಳುತ್ತದೆ. “ಇದೇ ವಿಧಾನಗಳನ್ನು ದೇಶದಾದ್ಯಂತ ಅಳವಡಿಸಿದರೆ, ಭಾರತದ ಅಂತರ್ಜಲ ಸಂಗ್ರಹಣೆಯು ಬಹು ಪ್ರಮಾಣದಲ್ಲಿ ಸುಧಾರಿಸುವುದು. ಭಾರತದಲ್ಲಿ ಅಂತರ್ಜಲ ಸಂಗ್ರಹಣೆಯ ಸುಸ್ಥಿರ ಸ್ಥಿತಿಯನ್ನು ಬೆಳೆಸುವ ನಮ್ಮ ಪ್ರಸ್ತುತ ಯೋಜನೆಗಾಗಿ ನಾವು ಆಸ್ಟ್ರೇಲಿಯಾದ ಕಾಮನ್ವೆಲ್ತ್ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಂಸ್ಥೆ ಯ (Commonwealth Scientific and Industrial Research Organisation) ಹಿರಿಯ ವಿಜ್ಞಾನಿಯಾದ ಡಾ|| ಜೆ. ಶ್ರೀಕಾಂತ್ ರವರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ”, ಎಂದು ಪ್ರೊ|| ಇಂದು ತಮ್ಮ ಮಾತನ್ನು ಮುಗಿಸುತ್ತಾರೆ.

Kannada