ಗೆದ್ದಲುಗಳು ತಮ್ಮ ಸಾಮಾಜಿಕ ಸಂಘಟನೆ, ವಾಸ್ತುಶಿಲ್ಪ ವಿನ್ಯಾಸ ಸಾಮರ್ಥ್ಯಗಳಿಗೆ ಮತ್ತು ಕುಖ್ಯಾತವಾಗಿ ಕೀಟಗಳಾಗಿ ಹೆಸರುವಾಸಿ. ಆದಾಗ್ಯೂ, ಈ ವರೆಗೆ ವರ್ಣಿಸಲಾದ ಎಲ್ಲ ಪ್ರಭೇದಗಳು ಹಾನಿ ಉಂಟು ಮಾಡುವ ವರ್ಗಕ್ಕೆ ಸೇರುವುದಿಲ್ಲ. ಒಂದು ಕಡೆ ವಿಶ್ವದ ಗೆದ್ದಲು ಪ್ರಭೇದಗಳಲ್ಲಿ ಕೇವಲ 12.5% ರಷ್ಟು ಮಾತ್ರ ಅಪಾರ ಆರ್ಥಿಕ ಹಾನಿಯನ್ನುಂಟುಮಾಡುವ ಕೀಟಗಳಾದರೆ, ಮತ್ತೊಂದೆಡೆ ಇವುಗಳ ಮಣ್ಣಿನಲ್ಲಿ ವಾಸಿಸುವ ಪ್ರತಿರೂಪಗಳು, ನೈಸರ್ಗಿಕ ಜಗತ್ತಿನಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ. ಇವು ಕಠಿಣ ಸಸ್ಯನಾರುಗಳನ್ನು ಕೊಳೆಸಲು ಅಥವಾ ಭಾಗಗಳಾಗಿ ವಿಭಜಿಸಲು ಸಹಾಯ ಮಾಡುತ್ತವೆ ಮತ್ತು ಪೋಷಕಾಂಶಗಳನ್ನು ಮಣ್ಣಿನಲ್ಲಿ ಮರುಬಳಕೆ ಮಾಡುತ್ತವೆ.
ಈವರೆಗೆ ಭಾರತದಲ್ಲಿ, ಸುಮಾರು 295 ಜಾತಿಯ ಗೆದ್ದಲುಗಳನ್ನು ಗುರುತಿಸಲಾಗಿದೆ. ಇದು ವಿಶ್ವದ ಗೆದ್ದಲು ಜೀವವೈವಿಧ್ಯತೆಯ ಸುಮಾರು 10%ನಷ್ಟಿದೆ. ಇತ್ತೀಚಿನ ಅಧ್ಯಯನವೊಂದರಲ್ಲಿ, ವಿಜ್ಞಾನಿಗಳು ಕೃಷ್ಣಕಾಪ್ರಿಟರ್ಮ್ಸ್ ದಿನೇಶನ್ ಮತ್ತು ಕೃಷ್ಣಕಾಪ್ರಿಟರ್ಮ್ಸ್ ಮಣಿಕಂಡನ್ ಎಂಬ ಎರಡು ಹೊಸ ಪ್ರಭೇದಗಳನ್ನು ಕಂಡುಹಿಡಿದಿದ್ದಾರೆ. ಇವು ಕೃಷ್ಣಕಾಪ್ರಿಟರ್ಮ್ಸ್ ಚೋಟಾನಿ ಕುಲಕ್ಕೆ ಸೇರಿದ ಪ್ರಭೇದಗಳು. ಇಲ್ಲಿಯವರೆಗೆ, ಈ ಗೆದ್ದಲುಗಳ ಗುಂಪನ್ನು ಭಾರತದ ಪಶ್ಚಿಮ ಘಟ್ಟದಲ್ಲಿ ಮಾತ್ರ ದಾಖಲಿಸಲಾಗಿದೆ. ಹಾಗಾಗಿ, ಇವು ಸ್ಥಳೀಯ ಹಾಗೂ ಅಪರೂಪದ ಪ್ರಭೇದಗಳು. ಕಾರ್ಯಕ್ಷೇತ್ರದಿಂದ ಈ ಪ್ರಭೇದಗಳ ಮಾದರಿಗಳನ್ನು ಸಂಗ್ರಹಿಸಿ ಇಡೀ ಪ್ರಾಣಿಸಂಗ್ರಹ ಸಮೀಕ್ಷೆಗೆ ಹೆಚ್ಚಿನ ಕೊಡುಗೆ ನೀಡಿದ, ಕೇರಳದ ಕೋಜ್ಹಿಕೋಡ್ ನ ಝುಆಲಾಜಿಕಲ್ ಸರ್ವೇ ಆಫ್ ಇಂಡಿಯಾದ ಶ್ರೀ ಕೆ.ಎ. ದಿನೇಶನ್ ಮತ್ತು ಶ್ರೀ. ಮಣಿಕಂಡನ್ ನಾಯರ್ ಅವರ ಗೌರವಾರ್ಥ, ಈ ಹೊಸ ಪ್ರಭೇದಗಳಿಗೆ ನಾಮಕರಣ ಮಾಡಲಾಗಿದೆ.
ಕೃಷ್ಣಕಾಪ್ರಿಟರ್ಮ್ಸ್ ದಿನೇಶನ್ | ಕೃಪೆ - ಝುಆಲಾಜಿಕಲ್ ಸರ್ವೇ ಆಫ್ ಇಂಡಿಯಾ
ಕೇರಳದ ಕಾಡುಗಳಲ್ಲಿ ಬಂಡೆಗಳ ಕೆಳಗಿರುವ ಮಣ್ಣಿನಿಂದ ಸಂಗ್ರಹಿಸಿದ ಗೆದ್ದಲುಗಳನ್ನು ಅಧ್ಯಯನ ಮಾಡುವಾಗ ಸಂಶೋಧಕರು ಹೊಸ ಪ್ರಭೇದಗಳನ್ನು ಕಂಡುಹಿಡಿಡಿದ್ದಾರೆ.
“ಈ ಹೊಸ ಪ್ರಭೇದಗಳನ್ನು 2014-15ರಲ್ಲಿ ಝುಆಲಾಜಿಕಲ್ ಸರ್ವೇ ಆಫ್ ಇಂಡಿಯಾ ನಡೆಸುತ್ತಿದ್ದ ದಿನನಿತ್ಯದ ಪ್ರಾಣಿಸಂಗ್ರಹ ಸಮೀಕ್ಷೆಯ ಸಂದರ್ಭದಲ್ಲಿ ನಾವು ಬೆಟ್ಟಗುಡ್ಡಗಳ ಸಂಧಿಗಳಲ್ಲಿ ಅಕಸ್ಮಾತಾಗಿ ಕಂಡೆವು” ಎಂದು ಗೆದ್ದಲುಗಳ ಮೇಲೆ ಅಧ್ಯಯನ ನಡೆಸುವ, ಪ್ರಸ್ತುತ ಸಂಶೋಧನೆಯ ಪ್ರಮುಖ ಲೇಖಕರಲ್ಲಿ ಒಬ್ಬರಾದ ಡಾ. ಅಮಿನಾ ಪೂವಾಲಿ ರಿಸರ್ಚ್ ಮ್ಯಾಟರ್ಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ."ನನ್ನ ಪಿಎಚ್‌ಡಿ ಅಧ್ಯಯನ ಕೇರಳದ ಗೆದ್ದಲುಗಳ ಜೀವಿವರ್ಗೀಕರಣ ಮೇಲೆ ಇದ್ದುದರಿಂದ, ನಾನು ಸಂಗ್ರಹಿಸಿದ ಮಾದರಿಗಳನ್ನು ನನ್ನ ಮಾರ್ಗದರ್ಶಿಯೊಂದಿಗೆ ಅಧ್ಯಯನ ಮಾಡಿದ್ದೇನೆ. ವಿಜ್ಞಾನಕ್ಕೆ ಹೊಸದಾಗಿ ಪರಿಚಯಿಸುತ್ತಾ, ಎರಡು ಪ್ರಭೇದಗಳ ಬಗ್ಗೆ ಅಧ್ಯಯನ ಮಾಡಿರುವುದು ಸಂತಸದ ವಿಷಯ.” ಎಂದು ಡಾ. ಪೂವಾಲಿ ನುಡಿಯುತ್ತಾರೆ.
ಈ ಅಧ್ಯಯನವು ಝುಆಲಾಜಿಕಲ್ ಸರ್ವೇ ಆಫ್ ಇಂಡಿಯಾ - ಕೋಜ್ಹಿಕೋಡ್, ಪುಣೆ, ಕೋಲ್ಕತಾ ಕೇಂದ್ರಗಳು, ಸೆಂಟ್ರಲ್ ಯೂನಿವರ್ಸಿಟಿ, ಕಾಸರ್ಗೋಡ್ ಮತ್ತು ಸಿಎಂಎಸ್ ಕಾಲೇಜು ಕೊಟ್ಟಾಯಂ ವಿಜ್ಞಾನಿಗಳ ಒಂದು ತಂಡದ ಸಾಮೂಹಿಕ ಕೊಡುಗೆ. ಈ ಆವಿಷ್ಕಾರದ ಮೊದಲು, ಕೆ. ಮೈತಿ ಮತ್ತು ಕೆ. ಠಾಕುರಿ ಎಂಬ ಎರಡು ಪ್ರಭೇದಗಳನ್ನು ಮಾತ್ರ ಈ ಕುಲದಡಿ ವರ್ಗೀಕರಿಸಲಾಗಿತ್ತು. ಈ ಅಧ್ಯಯನವನ್ನು ಓರಿಯಂಟಲ್ ಇನ್ಸೆಕ್ಟ್ಸ್ ಎಂಬ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
‘ಸೈನಿಕ’ ಗೆದ್ದಲುಗಳ ರೂಪವಿಜ್ಞಾನ ಲಕ್ಷಣಗಳನ್ನು ಬಳಸಿ, ಸಂಶೋಧಕರು ಈ ಹೊಸ ಪ್ರಭೇದಗಳ ರೂಪುರೇಷೆಗಳನ್ನು ವಿವರಿಸಿದ್ದಾರೆ. ‘ಕಾರ್ಮಿಕ’ ಗೆದ್ದಲುಗಳು ಕಟ್ಟುನಿಟ್ಟಾದ ಕಾರ್ಯ ವಿಭಜನೆಯನ್ನು ಪ್ರದರ್ಶಿಸುತ್ತವೆ. ವಸಾಹತು ಪ್ರದೇಶದಲ್ಲಿ ‘ಸೈನಿಕ’ ಗೆದ್ದಲುಗಳು ಗೂಡನ್ನು ರಕ್ಷಿಸುತ್ತವೆ. ಆದರೆ ಮಣ್ಣಿನ ದಿಬ್ಬವನ್ನು ನಿರ್ಮಿಸುವ ಜವಾಬ್ದಾರಿ ‘ಕಾರ್ಮಿಕ’ ಗೆದ್ದಲುಗಳು ಹೊರುತ್ತವೆ. ಆದಾಗ್ಯೂ, ‘ಸೈನಿಕರನ್ನು’ ಹುಡುಕುವುದು ಸರಳವಲ್ಲ.
“ಮಣ್ಣಿನಲ್ಲಿ ವಾಸಿಸುವ ಗೆದ್ದಲುಗಳಲ್ಲಿನ ಕಾರ್ಮಿಕರಿಗೆ ಹೋಲಿಸಿದರೆ ಸೈನಿಕ ಗೆದ್ದಲುಗಳು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತವೆ. ಕೆಲವೊಮ್ಮೆ, ಉತ್ತಮ ಸಂಖ್ಯೆಯ ಗೆದ್ದಲುಗಳನ್ನು ಪಡೆಯಲು ನಾವು ಮಣ್ಣನ್ನು ಆಳವಾಗಿ ಅಗೆಯಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗಬಹುದು. ಅಲ್ಲದೇ, ಇದು ನಮ್ಮ ಅದೃಷ್ಟವನ್ನು ಅವಲಂಬಿಸಿರುತ್ತದೆ, ”ಎಂದು ಡಾ. ಪೂವಾಲಿ ಹೇಳುತ್ತಾರೆ.
1997 ರಲ್ಲಿ, ಇದೆ ಕುಲವನ್ನು ವಿವರಿಸಲು ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯ ‘ಸೈನಿಕರನ್ನು’ ಬಳಸಲಾಯಿತು. ಈ ಪ್ರಯತ್ನವು ಗೆದ್ದಲುಗಳು ತಮ್ಮ ಊರ್ಧೋಷ್ಠದ ಅಂಚಿನಲ್ಲಿರುವ "ಆಂಟರೊಲೇಟರಲ್ ಪಾಯಿಂಟ್ಸ್" ಎಂದು ಕರೆಯಲ್ಪಡುವ ವೈಶಿಷ್ಟ್ಯಗಳನ್ನು ಹೊಂದಿಲ್ಲ ಎಂಬ ಊಹೆಗೆ ಕಾರಣವಾಯಿತು. ಲ್ಯಾಬ್ರಮ್ ಅಥವಾ ಊರ್ಧೋಷ್ಠ ಒಂದು ಗೆದ್ದಲಿನ ಬಾಯಿಯ ಮುಂದೆ ಇರುವ ಒಂದು ಚರ್ಮ. ಇದು ಮೇಲಿನ-ತುಟಿಯಾಗಿ ಸಹ ಕಾರ್ಯನಿರ್ವಹಿಸುತ್ತದೆ.
ಪ್ರಸ್ತುತ ಅಧ್ಯಯನದಲ್ಲಿ, ಸಾಕಷ್ಟು ಸಂಖ್ಯೆಯಲ್ಲಿ ಗೆದ್ದಲುಗಳನ್ನು ಸಂಗ್ರಹಿಸಿದ ಸಂಶೋಧಕರು ಕೆಲವು ಮಾದರಿಗಳಲ್ಲಿ ಹರಿದ, ಮುರಿದ ಮತ್ತು ಮಡಿಸಿಕೊಂಡಿದ್ದ ಆಂಟರೊಲೇಟರಲ್ ಪಾಯಿಂಟ್‌ಗಳನ್ನು (ಮುಂದಿರುವ ಪಾರ್ಶ್ವ ಬಿಂದು) ಗಮನಿಸಿದರು. ಇದರ ಆಧಾರದ ಮೇಲೆ, ಅವರು ಕೃಷ್ಣಕಾಪ್ರಿಟರ್ಮ್ಸ್ ಕುಲದ ಸಾಮಾನ್ಯ ವೈಶಿಷ್ಟ್ಯಗಳನ್ನು ಮರು ವ್ಯಾಖ್ಯಾನಿಸಿದ್ದಾರೆ.
ಹಿಂದಿನ ಅಧ್ಯಯನಗಳು, ಗೆದ್ದಲುಗಳು ಕೇರಳ ಮತ್ತು ತಮಿಳುನಾಡು ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿನ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನಕ್ಕೆ ಸೀಮಿತವಾಗಿದೆ ಎಂದು ತೋರಿಸಿದೆ. ಆದಾಗ್ಯೂ, ಸಂಶೋಧಕರು ಕೆ. ಠಾಕುರಿ ಮತ್ತು ಕೆ. ಮೈತಿ ಪ್ರಭೇದಗಳು ಕೇರಳದ ಇತರ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿಯೂ ವಿಸ್ತರಿಸಿವೆ ಎಂದು ಕಂಡುಹಿಡಿದಿದ್ದಾರೆ. ಈ ನಾಲ್ಕು ಪ್ರಭೇದಗಳಿಗೆ ವಿತರಣಾ ನಕ್ಷೆಯನ್ನು ರಚಿಸಿದಾಗ, ಇತರ ಗೆದ್ದಲುಗಳ ಪ್ರಭೇದಗಳಿಗೆ ಹೋಲಿಸಿದರೆ, ಕೃಷ್ಣಕಾಪ್ರಿಟರ್ಮ್ಸ್ ಪ್ರಭೇದ ಸಮುದ್ರ ಮಟ್ಟದಿಂದ ಹೆಚ್ಚಿನ ಎತ್ತರ ಪ್ರದೇಶಕ್ಕೆ ಇರುನೆಲೆಯ ಒಲವು ತೋರಿಸಿದೆ ಎಂದು ಕಂಡುಬಂದಿದೆ.
"ಎಲ್ಲಾ ಪ್ರಭೇದಗಳು ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ಇರುವ ಕಡಿಮೆ ತಾಪಮಾನದಲ್ಲಿ ಬದುಕಲು ಸಾಧ್ಯವಿಲ್ಲ" ಎಂದು ಈ ಶೋಧನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಡಾ.ಪೂವಾಲಿ ಹೇಳುತ್ತಾರೆ. ವಾಸ್ತವವಾಗಿ, ಎತ್ತರದಲ್ಲಿನ ಹೆಚ್ಚಳದೊಂದಿಗೆ ಗೆದ್ದಲುಗಳ ವೈವಿಧ್ಯತೆಯು ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಕಂಡುಹಿಡಿದಿವೆ.
ಇದಲ್ಲದೇ, ಸಂಶೋಧಕರು ಕೆ. ಠಾಕುರಿ ಮತ್ತು ಕೆ. ದಿನೇಶನ್ ಪ್ರಭೇದಗಳಿಗೆ ಡಿಎನ್‌ಎ ಬಾರ್ಕೋಡಿಂಗ್ (ಡಿಎನ್‌ಎ ಅನುಕ್ರಮಗಳ ಸಣ್ಣ ಸರಪಳಿಯನ್ನು ಬಳಸಿಕೊಂಡು ಜೀವಿಗಳನ್ನು ಗುರುತಿಸಲು ಬಳಸುವ ಒಂದು ವಿಧಾನ) ಅಧ್ಯಯನಗಳನ್ನು ನಡೆಸಿದರು. ಸಂಶೋಧಕರು ಕೃಷ್ಣಕಾಪ್ರಿಟರ್ಮ್ಸ್ ಕುಲದಲ್ಲಿ ಕೆ. ದಿನೇಶನ್ ಪ್ರಭೇದವನ್ನು ಗುರುತಿಸಬಹುದಾದ ಸದಸ್ಯವೆಂದು ಕಂಡುಹಿಡಿದಿದ್ದಾರೆ, ಮತ್ತು ಮತ್ತು ಅದೇ ವಂಶವೃಕ್ಷದ ಕೆ. ಠಾಕುರಿಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಈ ವಂಶವೃಕ್ಷದ ರೇಖಾಚಿತ್ರವು ಜೀವಿಗಳ ನಡುವಿನ ವಿಕಸನೀಯ ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಆದರೆ, ಕುತೂಹಲಕಾರಿಯಾಗಿ, ಕೆ. ದಿನೇಶನ್ ಪ್ರಭೇದದ ಗೂಡಿನಲ್ಲಿ ಕಂಡುಬಂದ ಎರಡು ‘ಕೆಲಸಗಾರ’ ಗೆದ್ದಲುಗಳು ಡೈಕಸ್ಪಿಡಿಟರ್ಮ್ಸ್ ಎಂಬ ಮತ್ತೊಂದು ಕುಲಕ್ಕೆ ಸೇರಿವೆ ಎಂದು ತಿಳಿದುಬಂದಿದೆ.
“ವಿವಿಧ ಜಾತಿಯ ಗೆದ್ದಲುಗಳು ಒಂದೇ ಆವಾಸಸ್ಥಾನದಲ್ಲಿ ವಾಸಿಸುತ್ತವೆ. ಅವರು ತಮ್ಮದೇ ಆದ ಪ್ರತ್ಯೇಕ ಛನ್ನಪಥಗಳು ಮತ್ತು ಮಣ್ಣಿನ ಕೆಳಗೆ ಗೂಡುಗಳನ್ನು ಹೊಂದಿರಬಹುದು ”ಎಂದು ಈ ಪ್ರಕ್ರಿಯೆಯನ್ನು ವಿವರಿಸುತ್ತಾ ಡಾ ಪೂವಾಲಿ ಹೇಳುತ್ತಾರೆ. ಗೆದ್ದಲುಗಳ ಸಂಗ್ರಹವು ಮಣ್ಣನ್ನು ಕದಡುತ್ತವೆ ಮತ್ತು ಈ ಪ್ರಕ್ರಿಯೆಯಲ್ಲಿ ವಿವಿಧ ಪ್ರಭೇದಗಳ ಗೆದ್ದಲುಗಳು ಬೆರೆಯಬಹುದು. "ಇತರ ಗೆದ್ದಲು ಪ್ರಭೇದಗಳೊಂದಿಗೆ ಡೈಕಸ್ಪಿಡಿಟರ್ಮ್ಸ್ ಕುಲದ ಸಂಬಂಧ ಈಗಾಗಲೇ ವರದಿಯಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಪದೇ ಪದೇ ನೋಡಿ, ಇದರ ಮೇಲೆ ಅಧ್ಯಯನ ನಡೆಸುವ ವರೆಗೆ, ಗೆದ್ದಲುಗಳ ಅಂತರ್ವರ್ಧಕ ಸಾಮಾಜಿಕ ಸಂವಹನಗಳನ್ನು ಬಗ್ಗೆ ನಾವು ಹೆಚ್ಚು ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ”ಎಂದು ಅವರು ಹೇಳುತ್ತಾರೆ.
ಗೆದ್ದಲು ಪ್ರಭೇದಗಳ ಈ ಆವಿಷ್ಕಾರಗಳು ವೈಜ್ಞಾನಿಕ ದಾಖಲಾತಿಗಾಗಿ ಕಾಯುತ್ತಿರುವ ಇನ್ನೂ ಹಲವಾರು ಪ್ರಭೇದಗಳು, ವಿಶೇಷವಾಗಿ ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ತಾಣಗಳಲ್ಲಿ ಇರಬಹುದು ಎಂದು ಸೂಚಿಸುತ್ತದೆ.