ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಕರಾವಳಿಯ ನಗರ ಪ್ರದೇಶಗಳನ್ನು ವರ್ಗೀಕರಿಸಲು ಒಂದು ಹೊಸ ವಿಧಾನ

ಮುಂಬಾಯಿ
30 Aug 2018

ಇತ್ತೀಚೆಗೆ ಭಾರತದೊಳಗೆ ಆಲಿವ್ ರಿಡ್ಲೆ ಆಮೆಗಳ ಮರುಪ್ರವೇಶವು, ವಲಸೆ ಬಂದ ಪ್ರಾಣಿಗಳಿಗೆ ಭಾರತೀಯ ಕರಾವಳಿಗಳು ಅಚ್ಚುಮೆಚ್ಚಿನ ತಾಣ ಎಂಬುದನ್ನು ತೋರಿಸಿಕೊಟ್ಟಿದೆ. ಭಾರತದ ೭೫೦೦ ಕಿಲೋಮೀಟರ್ ಉದ್ದದ ಅತಿದೊಡ್ಡ ಕರಾವಳಿಯು, ವಿವಿಧ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ; ದೇಶದ ಒಟ್ಟು ಜನಸಂಖ್ಯೆಯ ಸುಮಾರು ೪೦% ಜನರು, ಇದೇ ಕರಾವಳಿಯುದ್ದಕ್ಕೂ ವಾಸಿಸುತ್ತಿದ್ದಾರೆ. ಕರಾವಳಿಯುದ್ದಕ್ಕೂ ನಡೆಯುವ ಅಭಿವೃದ್ಧಿ ಚಟುವಟಿಕೆಗಳು, ಕರಾವಳಿಯ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಮುಂಬಯಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರದೀಪ್ ಕಲ್ಬಾರ್, ಅರುಣ್ ಇನಾಮ್ದರ್ ಮತ್ತು ರವೀಂದ್ರ ಧೀಮಾನ್ ಅವರು, ಈಗ ಅಸ್ತಿತ್ವದಲ್ಲಿರುವ ಭಾರತ ಸರ್ಕಾರದ 'ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ'ಯ ಕೊರತೆಯನ್ನು ಪರಿಹರಿಸುವ ಉದ್ದೇಶದಿಂದ, ಕರಾವಳಿಯ ನಗರಪ್ರದೇಶಗಳನ್ನು ವರ್ಗೀಕರಿಸಲು ಒಂದು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಪ್ರಸ್ತುತ ಅಸ್ತಿತ್ವದಲ್ಲಿರುವ 'ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ'ಯ ಚೌಕಟ್ಟು, ಕರಾವಳಿಯುದ್ದಕ್ಕೂ ಇರುವ ಜೀವವೈವಿಧ್ಯವನ್ನು ಅಥವಾ ವಿವಿಧ ಪ್ರದೇಶಗಳಲ್ಲಿನ ಭೂದೃಶ್ಯಗಳ ವ್ಯತ್ಯಾಸಗಳನ್ನು ಪರಿಗಣಿಸುವುದಿಲ್ಲ. ಕರಾವಳಿ ಪ್ರದೇಶಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಈ ಅಂಶಗಳಿಗೆ ಆದ್ಯತೆ ನೀಡುವ ಅಗತ್ಯತೆಯನ್ನು ಸಂಶೋಧಕರು ಒತ್ತಿಹೇಳಿದ್ದಾರೆ; ಈ ಹೊಸ ವಿಧಾನವು ಈ ಅಂಶಗಳನ್ನು ಪರಿಗಣಿಸುತ್ತದೆ ಮತ್ತು ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುವಂತಹ ವಿನಾಯಿತಿ ಕೇಳುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಬಲವಾದ ಆಧಾರವನ್ನೂ ನೀಡುತ್ತದೆ.

ಕರಾವಳಿ ಪ್ರದೇಶದ ಅಭಿವೃದ್ಧಿ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತ ಸರ್ಕಾರವು, 'ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ'ಯನ್ನು (ಸಿ.ಆರ್.ಝೆಡ್.) ಜಾರಿಗೊಳಿಸಿತು. ಇದನ್ನು ಮೊದಲ ಬಾರಿಗೆ ೧೯೯೧ರಲ್ಲಿ ಪರಿಚಯಿಸಲಾಯಿತು ಮತ್ತು ೨೦೧೧ರಲ್ಲಿ ಪರಿಷ್ಕರಿಸಲಾಯಿತು; ಈ ನೀತಿಚೌಕಟ್ಟು, ಕರಾವಳಿ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲು ನಿಯಂತ್ರಕ ಕಾರ್ಯವಿಧಾನಗಳನ್ನು ನೀಡಿದೆ. ಈ ಅಧಿಸೂಚನೆಯ ಪ್ರಾಥಮಿಕ ಉದ್ದೇಶಗಳು ಸಾಂಪ್ರದಾಯಿಕ ಮೀನುಗಾರಿಕೆಯೇ ಜೀವನೋಪಾಯವಾಗಿರುವವರಿಗೆ ಸಹಕಾರಿಯಾಗಿರುವುದು, ಜೊತೆಗೆ, ಜೀವವೈವಿಧ್ಯತೆಯ ಮತ್ತು ನೈಸರ್ಗಿಕ ಕರಾವಳಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮಾಡುವುದು; ಆದರೆ, ಇತ್ತೀಚಿಗೆ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಿ, ಅಭಿವರ್ಧಕರಿಗೆ ರಿಯಾಯಿತಿಗಳನ್ನು ನೀಡುವಂತಹ ತಿದ್ದುಪಡಿಗಳಾಗಿದ್ದು, ಸೂಕ್ಷ್ಮಪರಿಸರವಲಯಗಳ ರಕ್ಷಣೆಯ ವಿಚಾರದಲ್ಲಿ ರಾಜಿಯಾಗಿದ್ದು ಕಂಡುಬಂದಿದೆ.

ಕರಾವಳಿಯು ಸಮುದ್ರಗಳು, ಕೊಲ್ಲಿಗಳು, ಜಲಧಾರೆ, ಕೊಳ್ಳಗಳು, ನದಿಗಳು ಮತ್ತು ಹಿನ್ನೀರುಗಳನ್ನು ಒಳಗೊಂಡಿರುತ್ತವೆ. ಸಿ.ಆರ್.ಝೆಡ್. (೨೦೧೧) ಭಾರತದಾದ್ಯಂತ ಕರಾವಳಿ ಪ್ರದೇಶಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸುತ್ತದೆ: ಸಿ.ಆರ್.ಝೆಡ್. ೧ (ಮ್ಯಾಂಗ್ರೋವ್ಗಳು ಮತ್ತು ಹವಳದ ದಿಬ್ಬಗಳಂತಹ ಪರಿಸರೀಯ ಸೂಕ್ಷ್ಮಪ್ರದೇಶಗಳು), ಸಿ.ಆರ್.ಝೆಡ್. ೨ (ಆರ್ಥಿಕವಾಗಿ ಪ್ರಮುಖವೆನಿಸುವ ನಿರ್ದಿಷ್ಟ ಪ್ರದೇಶಗಳು ಮತ್ತು ತೀರಕ್ಕೆ ಹತ್ತಿರವಿರುವ ಅಭಿವೃದ್ಧಿ ಹೊಂದಿದ ಪ್ರದೇಶಗಳು), ಸಿ.ಆರ್.ಝೆಡ್. ೩ (ಸಿ.ಆರ್.ಝೆಡ್. ೧ ಮತ್ತು ಸಿ.ಆರ್.ಝೆಡ್. ೨ರ ಪ್ರದೇಶಗಳನ್ನು ಹೊರತುಪಡಿಸಿ, ತುಲನಾತ್ಮಕವಾಗಿ ತೊಂದರೆಗೊಳಗಾಗದ ಪ್ರದೇಶಗಳು) ಮತ್ತು ಸಿ.ಆರ್.ಝೆಡ್. ೪ (ಕಡಿಮೆ ಉಬ್ಬರವಿಳಿತದ ರೇಖೆಯಿಂದ ೧೨ ಕಡಲ ಮೈಲುಗಳವರೆಗೆ ಸಾಗರದೊಳಗಿರುವ ಪ್ರದೇಶಗಳು, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತಿತರ ಸಣ್ಣ ದ್ವೀಪಗಳು). ಪ್ರಸ್ತುತ ವರ್ಗೀಕರಣವು, ಸ್ವಾಗತಾರ್ಹ ಕ್ರಮವಾಗಿದ್ದರೂ, ರಕ್ಷಿತ ವಲಯದ ವ್ಯಾಪ್ತಿಯ ಬಗ್ಗೆ ಯಾವುದೇ ನಿಖರವಾದ ತರ್ಕವನ್ನು, ಮಾರ್ಗದರ್ಶಿ ಸೂತ್ರಗಳನ್ನು ಮುಂದಿಡುವುದಿಲ್ಲ; ಹಾಗಾಗಿ ಇದು ಪಾರದರ್ಶಕವಲ್ಲ.

ಸಿ.ಆರ್.ಝೆಡ್. ೧ರ ಪ್ರಕಾರ, ಹೆಚ್ಚು ಉಬ್ಬರವಿಳಿತದ ರೇಖೆಯಿಂದ ೫೦೦ ಮೀಟರ್ವರೆಗೆ ಅಭಿವೃದ್ಧಿಕರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ; ಆದರೆ ಸಿ.ಆರ್.ಝೆಡ್. ೩ರ ಪ್ರಕಾರ ಈ ರೇಖೆಯಿಂದ ೨೦೦ ಮೀಟರ್ವರೆಗೆ ಅಭಿವೃದ್ಧಿಕರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ; ಹೀಗೆ ನಿರ್ದಿಷ್ಟ ಅಂತರವನ್ನು ಆಯ್ಕೆ ಮಾಡಲು ಯಾವುದೇ ವೈಜ್ಞಾನಿಕ ಆಧಾರವನ್ನೂ ಬಳಸಿಲ್ಲ. ಹೊಸ ಸಿ.ಆರ್.ಝೆಡ್. (೨೦೧೮) ಸಹ ಇದೇ ನ್ಯೂನತೆಗಳನ್ನು ಹೊಂದಿದೆ. ಇದೂ ಕೂಡ ಯಾವುದೇ ವೈಜ್ಞಾನಿಕ ತರ್ಕವನ್ನು ಹೊಂದಿಲ್ಲ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ  ಯಾವುದೇ ಸ್ಪಷ್ಟ ಗುರಿಯಿರದ ಕಾರಣದಿಂದಾಗಿ, ಹಿಂದಿನ ಅಧಿಸೂಚನೆಗೆ ಒದಗಿದ ಗತಿಯೇ ಇದಕ್ಕೂ ಒದಗುವ ಸಾಧ್ಯತೆಯಿದೆ ಎನ್ನುತ್ತಾರೆ ಪ್ರಾಧ್ಯಾಪಕ ಅರುಣ್.

ಸಂಶೋಧಕರು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿ.ಐ.ಎಸ್.) ಮತ್ತು ಗಣಿತದ ಮಾದರಿಗಳ ಆಧಾರದ ಮೇಲೆ, ಹೊಸ ವರ್ಗೀಕರಣ ವಿಧಾನವನ್ನು ಸೂಚಿಸುತ್ತಾರೆ. ಜಿ.ಐ.ಎಸ್. ಎಲ್ಲಾ ರೀತಿಯ ಭೌಗೋಳಿಕ ಮಾಹಿತಿಗಳನ್ನು ಸೆರೆಹಿಡಿಯಲು ಮತ್ತು ವಿಶ್ಲೇಷಿಸಲು ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಆಧಾರಿತ ಸಾಧನವಾಗಿದೆ. ಭವಿಷ್ಯದ ಬಳಕೆಗಾಗಿ ಭೂಮಿಯ ವೈಶಿಷ್ಟ್ಯಗಳನ್ನು ಗುರುತಿಸಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ; ಆದರೆ ಇದು ಯೋಜನಾ ನಿರ್ವಾಹಕ ನಿರ್ಧಾರಗಳನ್ನು ಮತ್ತು ಯೋಜಕರ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದಿಲ್ಲ. ಈ ಕೊರತೆಯನ್ನು ಪರಿಹರಿಸಲು, ಸಂಶೋಧಕರು ಎಂ.ಸಿ.ಡಿ.ಎಂ. (ಮಲ್ಟಿ ಕ್ರೈಟೀರಿಯಾ ಡಿಸಿಶನ್ ಮೇಕಿಂಗ್) ಎಂಬ ಗಣಿತತಂತ್ರವನ್ನು ಬಳಸಿದರು.ಇದು ಜಿ.ಐ.ಎಸ್. ಜೊತೆ ಸೇರಿ, ನಿರ್ಣಯ ತೆಗೆದುಕೊಳ್ಳುವಲ್ಲಿ ಇರುವ ಸಂಘರ್ಷದ ಮಾನದಂಡಗಳನ್ನು ಮೌಲ್ಯಮಾಪನ ಮಾಡುತ್ತದೆ. ಪ್ರಾಧ್ಯಾಪಕ ಕಲ್ಬಾರ್ ವಿವರಿಸುವಂತೆ, ಇದು ಪ್ರಬಲವಾದ ವೈಜ್ಞಾನಿಕ ಆಧಾರವನ್ನು ಹೊಂದಿದ್ದು, ವಸ್ತುನಿಷ್ಠ ಮತ್ತು ಪಾರದರ್ಶಕವಾಗಿದೆ.

ವಿಜ್ಞಾನಿಗಳು ಈ ಹಿಂದೆ ಜಿ.ಐ.ಎಸ್. ಅನ್ನು ನಗರ ಯೋಜನೆ, ಆಹಾರ ಭದ್ರತೆಗಳಂತಹ ಅನ್ವಯಗಳಲ್ಲಿ, ಇತರ ನಿರ್ಧಾರ ತೆಗೆದುಕೊಳ್ಳುವ ಮಾದರಿಗಳ ಜೊತೆಗೆ ಬಳಸಿದ್ದರೂ, ಕರಾವಳಿ ಪ್ರದೇಶಗಳನ್ನು ವರ್ಗೀಕರಿಸುವಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗಿದೆ. ಸಂಶೋಧಕರು ಉಪಗ್ರಹಗಳಿಂದ ದೊರೆತ ದೂರಸಂವೇದಿ ಮಾಹಿತಿಯನ್ನು, ಮುಂಬೈ ಕರಾವಳಿಯ ಬಗ್ಗೆ ಲಭ್ಯವಿರುವ ದಾಖಲೆಯನ್ನು ಮತ್ತು ಭೂಮಿ ಬಳಕೆಯ ಬಗ್ಗೆ ಸರ್ಕಾರೀ ಸಂಸ್ಥೆಯ ದಾಖಲೆಗಳನ್ನು ಬಳಸಿದ್ದಾರೆ. ಇದರ ಆಧಾರದ ಮೇಲೆ, ಪ್ರತಿ ವಿಭಾಗಕ್ಕೆ 'ಕರಾವಳಿ ಪ್ರದೇಶ ಸೂಚ್ಯಂಕ'(ಸಿ.ಎ.ಐ.)ದ ಲೆಕ್ಕಾಚಾರ ಮಾಡಿದ್ದಾರೆ. ಸಿ.ಎ.ಐ. ಸೂಚ್ಯಂಕವು ೦ ಯಿಂದ ೧೦ರ ನಡುವೆ ಒಂದು ಸಂಖ್ಯೆಯಾಗಿದ್ದು, ದೊಡ್ಡ ಸಂಖ್ಯೆಯು ಪರಿಸರೀಯವಾಗಿ ಹೆಚ್ಚು ಸೂಕ್ಷ್ಮಪ್ರದೇಶಗಳನ್ನು ಸೂಚಿಸುತ್ತದೆ. ಈ ಹೊಸ ವರ್ಗೀಕರಣ ವ್ಯವಸ್ಥೆಯು, ಸಿ.ಎ.ಐ. ಆಧಾರದ ಮೇಲೆ, ಕರಾವಳಿ ಪ್ರದೇಶಗಳನ್ನು ಹೆಚ್ಚು ಸೂಕ್ಷ್ಮಪ್ರದೇಶದಿಂದ ಮೊದಲ್ಗೊಂಡು ಕಡಿಮೆ ಸೂಕ್ಷ್ಮಪ್ರದೇಶದವರೆಗೆ, ನಾಲ್ಕು ವಿಧಗಳಾಗಿ ವಿಂಗಡಿಸುತ್ತದೆ. ಈ ವ್ಯವಸ್ಥೆಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ; ಇದು ಪ್ರಸ್ತುತ ವರ್ಗೀಕರಣ ವಿಧಾನಕ್ಕಿಂತಲೂ ನಿಖರವಾಗಿದ್ದು, ಅಧ್ಯಯನದ ಉದ್ದೇಶವು ಪಾರದರ್ಶಕವೂ, ವೈಜ್ಞಾನಿಕವೂ ಆಗಿದೆ; ಇದು ಪಾಲುದಾರರ ವ್ಯಕ್ತಿನಿಷ್ಠ ಆಸಕ್ತಿಯನ್ನೂ ಮೀರಿ, ಕರಾವಳಿ ಪ್ರದೇಶ ನಿರ್ವಹಣೆಗೆ ಸಮರ್ಥನೀಯ ಚೌಕಟ್ಟನ್ನು ಒದಗಿಸುತ್ತದೆ. ಇದರ ಫಲವಾಗಿ, ಇನ್ನು ಭಾರತದ ಕಡಲತೀರಗಳಲ್ಲಿ  ಜೀವವೈವಿಧ್ಯದ ಕಾಳಜಿವಹಿಸುವ ಉತ್ತಮ ಯೋಜಿತ ನಗರಗಳನ್ನು ಕಾಣಬಹುದು ಎಂದು ಆಶಿಸೋಣ.

Kannada