ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಸಕ್ಕರೆ ಕಾರ್ಖಾನೆಗಳ ಲಾಭದಾಯಕತೆ ಹೆಚ್ಚಿಸುವ ಅವಕಾಶ

Read time: 1 min
Mumbai
25 Nov 2021
ಸಕ್ಕರೆ ಕಾರ್ಖಾನೆಗಳ ಲಾಭದಾಯಕತೆ ಹೆಚ್ಚಿಸುವ ಅವಕಾಶ

ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ಸಕ್ಕರೆ ಕಾರ್ಖಾನೆ

ಇಡೀ ಪ್ರಪಂಚದಲ್ಲೇ ಕಬ್ಬನ್ನು ಬೆಳೆದು,  ಅದರಿಂದ ಸಕ್ಕರೆಯನ್ನು ಉತ್ಪಾದಿಸುವ ತಂತ್ರಗಳನ್ನು ನಿರ್ಮಿಸುವಲ್ಲಿ ಭಾರತೀಯರು ಮತ್ತು ನ್ಯೂ ಗಿನಿಯಾದ ಸ್ಥಳೀಯ ಜನರು  ಮೊದಲಿಗರು. ಹಲವು  ವರ್ಷಗಳಲ್ಲಿ, ಕಬ್ಬಿನಿಂದ ಗರಿಷ್ಠ ಪ್ರಮಾಣದಲ್ಲಿ ರಸವನ್ನು ಹೊರತೆಗೆದು ಸಕ್ಕರೆ ಉತ್ಪನ್ನಗಳನ್ನು ಲಾಭದಾಯಕವಾಗಿಸುವ ಹೊಸ ಹೊಸ ಪ್ರಕ್ರಿಯೆಗಳು ಮೂಡಿಬಂದಿವೆ. ಜಗತ್ತಿನಾದ್ಯಂತ ಸಕ್ಕರೆ ಉತ್ಪಾದಕ ದೇಶಗಳಲ್ಲಿ ಭಾರತ ಎರಡನೆಯ ಪ್ರಮುಖ ಸ್ಥಾನ ಪಡೆದಿದ್ದರೂ ಸಹ, ಭಾರತದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಬಹಳಷ್ಟು ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ. ಬೇಡಿಕೆಗಿಂತ ಉತ್ಪಾದನೆ ಹೆಚ್ಚಾಗಿರುವ ಕಾರಣ ನಮ್ಮ ದೇಶದಲ್ಲಿ ಸಕ್ಕರೆಯ ದರ ಸಾಕಷ್ಟು ಕಡಿಮೆಯಾಗಿಯೇ ಉಳಿದಿದೆ. ಜಾಗತಿಕವಾಗಿಯೂ  ಸಕ್ಕರೆಯ ದರಗಳು ಕಡಿಮೆಯಿರುವುದರಿಂದ ರಫ್ತು ಮಾಡುವುದು ಕೂಡ ಸದಾ ಸಮರ್ಥನೀಯವಲ್ಲ.

ರೈತರ ನಷ್ಟಗಳನ್ನು ತಗ್ಗಿಸಿ, ಸಕ್ಕರೆ ಕಾರ್ಖಾನೆಗಳನ್ನು ಆರ್ಥಿಕವಾಗಿ ಕಾರ್ಯಸಾಧ್ಯ ಮಾಡಲು ಇರುವ ಒಂದು ದಾರಿಯೆಂದರೆ ಕಬ್ಬಿನ ತ್ಯಾಜ್ಯವಾದ ಬಗಸೆಯನ್ನು ಬಳಸಿ ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದು. ಬಗಸೆಯನ್ನು ಪಶು ಆಹಾರವಾಗಿ, ವಿದ್ಯುತ್ ಉತ್ಪಾನದನೆಯಲ್ಲಿ, ಹಾಗೂ ಎಥೆನಾಲ್ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಆದಾಯದ ಆಕರ್ಷಕ ಮಾರ್ಗಗಳನ್ನು ಒದಗಿಸುವ ಹಲವು ಜೀವರಾಸಾಯನಿಕಗಳಾದ ಕಿಣ್ವಗಳು, ಲ್ಯಾಕ್ಟಿಕ್ ಆಸಿಡ್ ಅಥವಾ ಸಾವಯವ ಆಸಿಡ್ ಗಳನ್ನು ತಯಾರಿಸುವುದರಲ್ಲಿ ಕೂಡ ಬಗಸೆಯನ್ನು ಬಳಸುತ್ತಾರೆ. ಹೀಗಿದ್ದರೂ ಸಹ, ಈ ನಿಟ್ಟಿನಲ್ಲಿ  ಆರ್ಥಿಕವಾಗಿ ಕಾರ್ಯಸಾಧ್ಯವಾದ ಪ್ರಕ್ರಿಯೆಗಳನ್ನು ಕಂಡುಹಿಡಿಯುವುದು ಒಂದು ಸವಾಲಾಗಿಯೇ ಉಳಿದಿದೆ.

ಕಬ್ಬಿನ ಬಗಸೆಯಿಂದ ಲ್ಯಾಕ್ಟಿಕ್ ಆಮ್ಲವನ್ನು (ಆಸಿಡ್) ಕ್ರಿಯೆ ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಎಷ್ಟು ಕಾರ್ಯಸಾಧ್ಯ ಎನ್ನುವ ವಿಷಯದಲ್ಲಿ ರಾಸಾಯನಿಕ ಎಂಜಿನಿಯರಿಂಗ್ ವಿಭಾಗ, ಐಐಟಿ-ಬಾಂಬೆ ಮತ್ತು ಮದ್ಯಸಾರ ತಂತ್ರಜ್ಞಾನ ಮತ್ತು ಜೈವಿಕ ಇಂಧನಗಳ ವಿಭಾಗ, ವಸಂತದಾದಾ ಸಕ್ಕರೆ ಸಂಸ್ಥೆ, ಮಂಜರಿ, ಪುಣೆ ಯಲ್ಲಿರುವ ಸಂಶೋಧಕರು ಇತ್ತೀಚೆಗೆ ಅಧ್ಯಯನ ನಡೆಸಿದರು.  ಈ ಉತ್ಪಾದನಾ ಕ್ರಿಯೆಯ ಪರಿಸರೀಯ ಪ್ರಭಾವವನ್ನು ಕೂಡ ಅಧ್ಯಯಿಸಿದರು. ಇದರಿಂದ ಅವರು, ಸಕ್ಕರೆ ಕಾರ್ಖಾನೆಗೆ ಹೊಂದಿಕೊಂಡಂತೆ  ಲ್ಯಾಕ್ಟಿಕ್ ಆಮ್ಲವನ್ನು ತಯಾರಿಸುವ ಘಟಕವನ್ನು ಕಟ್ಟಿದರೆ, ಅದು ಗಮನಾರ್ಹವಾದ ಆರ್ಥಿಕ ಮತ್ತು ಪರಿಸರೀಯ ಲಾಭಗಳನ್ನು ನೀಡುಬಹುದು ಎಂಬುದನ್ನು ಕಂಡುಹಿಡಿದರು.

ಜಾಗತಿಕವಾಗಿ ತಯಾರಿಸಲ್ಪಡುವ ಒಟ್ಟು ಲ್ಯಾಕ್ಟಿಕ್ ಆಮ್ಲದ ಒಂದು ಸಣ್ಣ ಭಾಗ, ಲ್ಯಾಕ್ಟೋ ಬ್ಯಾಸಿಲಸ್ ನಂತಹ ಲ್ಯಾಕ್ಟಿಕ್ ಆಮ್ಲದ  ಬ್ಯಾಕ್ಟೀರಿಯಾ ಅಥವಾ ತಂತು ಶಿಲೀಂಧ್ರಗಳನ್ನು ಬಳಸಿ ನಡೆಸುವ ವಿವಿಧ ಸಕ್ಕರೆಗಳ ಹುದುಗುವಿಕೆ ಕ್ರಿಯೆಯಿಂದ ಪ್ರಸ್ತುತವಾಗಿ ಉತ್ಪಾದನೆಗೊಳ್ಳುತ್ತಿದೆ. ಹಲವಾರು ವರ್ಷಗಳಿಂದ ಸಂಶೋಧಕರು ಲ್ಯಾಕ್ಟಿಕ್ ಆಮ್ಲದ ಉತ್ಪಾದನಾ ಕ್ರಿಯೆಯನ್ನು ವೆಚ್ಚ ಪರಿಣಾಮಕಾರಿಯಾಗಿಸಲು ಹಾಗೂ ಅದರ ದಕ್ಷತೆಯನ್ನು ವರ್ಧಿಸಲು ಪ್ರಯತ್ನಿಸುತ್ತಿದ್ದಾರೆ.  "ಪ್ರಮಾಣ ಮತ್ತು ಮೌಲ್ಯ - ಎರಡಕ್ಕೂ ಸಂಬಂಧಿಸಿದಂತೆ ಲ್ಯಾಕ್ಟಿಕ್ ಆಮ್ಲಕ್ಕೆ ಸಾಕಷ್ಟು ದೊಡ್ಡದಾದ ಮಾರುಕಟ್ಟೆ ಗಾತ್ರವಿದೆ. (ವರ್ಷಕ್ಕೆ 500,000 ಟನ್ ಗಳು, $ 2.5 ಬಿಲಿಯನ್) ಔಷಧೀಯ ವಸ್ತುಗಳು, ಆಹಾರ, ಸೌಂದರ್ಯವರ್ಧಕಗಳು, ಪಾಲಿಮರ್ ಗಳು - ಈ ಎಲ್ಲಾ ಉದ್ಯಮಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಬಳಸುತ್ತಾರೆ." ಎಂದು ಐಐಟಿ-ಬಾಂಬೆ, ರಾಸಾಯನಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರೂ, ಈ ಲೇಖನದ ಸಹ-ಲೇಖಕರೂ ಆದ ಪ್ರೊ|| ಯೋಗೇಂದ್ರ ಶಾಸ್ತ್ರಿಯವರು ಹೇಳಿದರು. ಆದರೆ, ಈ ಪ್ರಕ್ರಿಯೆಗಳ ಪರಿಸರೀಯ ಪ್ರಭಾವದ ವಿಷಯವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಬಗಸೆಯನ್ನು ತುಂಬುವಂತಹ ಪೂರ್ವೋಪಚಾರ ಪರಿಸ್ಥಿಗಳು, ಪ್ರಕ್ರಿಯಾ  ಪರಿಸ್ಥಿಗಳು, ಶುದ್ಧೀಕರಣ ವಿಧಾನಗಳು - ಈ ಎಲ್ಲಾ ಅಂಶಗಳೂ ಸಹ ಲ್ಯಾಕ್ಟಿಕ್ ಆಮ್ಲದ ಉತ್ಪಾದನಾ ಕ್ರಿಯೆಯ ಪರಿಸರೀಯ ಪ್ರಭಾವ ಹಾಗೂ ಆರ್ಥಿಕ ನಿರ್ವಹಣೆ ಎರಡರ ಮೇಲೂ ಪ್ರಭಾವ ಬೀರುತ್ತವೆ, ಹಾಗೂ ಇದರ ಫಲಿತಾಂಶ ಅಧ್ಯಯನದ ಪ್ರದೇಶಕ್ಕೆ ಮಾತ್ರ ನಿರ್ದಿಷ್ಟವಾಗಿರುತ್ತದೆ.

ವಸಂತದಾದಾ ಸಕ್ಕರೆ ಸಂಸ್ಥೆಯಲ್ಲಿ, ಬಗಸೆಯಿಂದ ಲ್ಯಾಕ್ಟಿಕ್ ಆಮ್ಲವನ್ನು ತಯಾರಿಸುವ ಹೊಸ ಪ್ರಕ್ರಿಯೆಯನ್ನು ಪ್ರಯೋಗಾಲಯ ಪ್ರಮಾಣದಲ್ಲಿ ಇತ್ತೀಚೆಗೆ ಕಂಡುಹಿಡಿಯಲಾಯಿತು. ಈ ಪ್ರಕ್ರಿಯೆ ನಾಲ್ಕು ಹಂತಗಳನ್ನೊಳಗೊಂಡಿದೆ - ಪೂರ್ವೂಪಚಾರ, ಜಲವಿಚ್ಛೇದನ, ಹುದುಗುವಿಕೆ, ಮತ್ತು ಬೇರ್ಪಡಿಸುವಿಕೆ ಅಥವಾ ಶುದ್ಧೀಕರಣ. ಬಗಸೆಯ ಪೂರ್ವೋಪಚಾರದಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಬಳಸಲಾಗುತ್ತದೆ; ಉಪಚಾರ ಹೊಂದಿದ ಬಗಸೆಯನ್ನು ಜಲವಿಚ್ಛೇದನಾ ಕಿಣ್ವಗಳ ಸಹಾಯದಿಂದ ಜಲವಿಚ್ಛೇದನಕ್ಕೆ ಗುರಿಪಡಿಸಲಾಗುತ್ತದೆ. ಈ ಹಂತದಲ್ಲಿ ಕರಗಿದ ಅಂಶವನ್ನು ಲ್ಯಾಕ್ಟಿಕ್ ಆಮ್ಲವನ್ನು ತಯಾರಿಸುವ ಬ್ಯಾಕ್ಟೀರಿಯಾದ ಸಹಾಯದಿಂದ ನಡೆಯುವ ಹುದುಗುವಿಕೆ ವಿಧಾನದಲ್ಲಿ ಕಚ್ಚಾ ವಸ್ತುವಾಗಿ ಉಪಯೋಗಿಸಲಾಗುತ್ತದೆ.  ಹುದುಗುವಿಕೆಯ ಸಾರಿನ ಆಮ್ಲೀಯತೆಯನ್ನು ತಗ್ಗಿಸಲು ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಕ್ಯಾಲ್ಸಿಯಂ ಲ್ಯಾಕ್ಟೇಟ್ ನ ರೂಪದಲ್ಲಿ ಹೊರತೆಗೆಯುವ ಸಲುವಾಗಿ ಹುದುಗುವಿಕೆಯ ಸಾರಿಗೆ ಹೆಚ್ಚುವರಿ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಸೇರಿಸಲಾಗುತ್ತದೆ. ಹೀಗೆ ಪಡೆದ ಕ್ಯಾಲ್ಸಿಯಂ ಲ್ಯಾಕ್ಟೇಟ್ ಅನ್ನು ಇನ್ನೂ ಶುದ್ಧೀಕರಿಸಿ 99.9% ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಜಿಪ್ಸಮ್ ಉಪ ಉತ್ಪನ್ನವಾಗಿ ದೊರೆಯುತ್ತದೆ - ಇದನ್ನು ಸಿಮೆಂಟ್ ಉದ್ಯಮದಲ್ಲಿ ಬಳಸುತ್ತಾರೆ.

ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕರು, ಭಾರತದಲ್ಲಿ ವಾಣಿಜ್ಯ ಪ್ರಮಾಣದಲ್ಲಿ ಈ ಹೊಸ ಪ್ರಕ್ರಿಯೆಯ ಪರಿಸರೀಯ ಪ್ರಭಾವವನ್ನು ಅರ್ಥೈಸಿಕೊಳ್ಳಲು, ತಾಂತ್ರಿಕ-ಆರ್ಥಿಕ ಮತ್ತು ಜೀವನ ಚಕ್ರ ಮೌಲ್ಯಮಾಪನವನ್ನು ನಡೆಸಿದರು. ISO 14040 ನ ವತಿಯಲ್ಲಿ ನಿಗದಿಪಡಿಸಲಾದ ಈ ವಿಧಾನ ಶಾಸ್ತ್ರದ ಪ್ರಕಾರ - ಗುರಿ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವುದು, ದಾಸ್ತಾನಿನ ಮೌಲ್ಯಮಾಪನ, ಕಚ್ಚಾ ವಸ್ತುಗಳ ಪರಿಸರೀಯ ಪ್ರಭಾವದ ಮೌಲ್ಯಮಾಪನ, ಸಾರಿಗೆ ಮತ್ತು ಉತ್ಪನ್ನದ ಉತ್ಪತ್ತಿ, ಫಲಿತಾಂಶಗಳ ಅರ್ಥ ವಿವರಣೆ - ಈ ಎಲ್ಲಾ ಹಂತಗಳೂ ಸೇರಿದ್ದವು. ಸೂಕ್ತ ಆರ್ಥಿಕ ಲಾಭವನ್ನು ಪರಿಗಣಿಸಿ ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಒಂದು ಸಕ್ಕರೆ ಕಾರ್ಖಾನೆಗೆ  ವಾಣಿಜ್ಯ ಘಟಕವನ್ನು ಜೋಡಿಸುವುದು ಸೂಕ್ತವೆಂದು ಭಾವಿಸಿದರು.

ಸಂಶೋಧಕರು ತಮ್ಮ ಅಧ್ಯಯನಕ್ಕೆ ಪ್ರಕ್ರಿಯೆಯ ಮೊದಲ ಮೂರು ಹಂತಗಳಾದ ಪೂರ್ವೋಪಚಾರದಿಂದ ಹುದುಗುವಿಕೆಯ ವರೆಗೆ ವಸಂತದಾದಾ ಸಕ್ಕರೆ ಸಂಸ್ಥೆಯಿಂದ ಪಡೆದ ಪ್ರಾಯೋಗಿಕ ಮಾಹಿತಿಯನ್ನು  ಬಳಸಿದರು. ಲ್ಯಾಕ್ಟಿಕ್ ಆಮ್ಲವನ್ನು ಶುದ್ಧೀಕರಿಸುವ ಉಳಿದ ಹಂತಗಳನ್ನು, ಆಮ್ಲೀಯತೆ, ಬಗಸೆಯ ಪ್ರಮಾಣ, ತಾಪಮಾನ, ಮುಂತಾದ ಪ್ರಕ್ರಿಯಾ ನಿಯತಾಂಕಗಳ ಮಾಹಿತಿಯನ್ನು ಒದಗಿಸುವ ಮೂಲಕ, 'ಆಸ್ಪೆನ್' ವಿಶ್ಲೇಷಣಾ ಯಂತ್ರದಲ್ಲಿ ಅನುಕರಿಸಿದರು.

ಈ ಪ್ರಕ್ರಿಯೆಯಲ್ಲಿ ಒಂದು ಕೆಜಿ ಲ್ಯಾಕ್ಟಿಕ್ ಆಮ್ಲಕ್ಕೆ 4.2 ಕೆಜಿ ಇಂಗಾಲದ ಡೈಆಕ್ಸೈಡ್ ಸಮಾನ ವಸ್ತುವು ತಯಾರಾಗುತ್ತಿದೆಯೆಂದು ಸಂಶೋಧಕರು ಕಂಡುಹಿಡಿದರು. ಒಂದು ಲೀಟರ್ ಪೆಟ್ರೋಲ್ ನಿಂದ ಉಂಟಾಗುವ ಉತ್ಸರ್ಜನಕ್ಕಿಂತ ಇದು 50% ಹೆಚ್ಚಿನ ಪ್ರಮಾಣದ್ದಾಗಿದೆ. ಈ ಉತ್ಸರ್ಜನದ ಪ್ರಮುಖ ಕಾರಣ ಪೂರ್ವೋಪಚಾರ ಮತ್ತು ಜಲವಿಚ್ಚೇದನದ ಹಂತಗಳು.  ಪೂರ್ವೋಪಚಾರದ ಹಂತದಲ್ಲಿ ಬಳಕೆಯಾಗುವ  ಸೋಡಿಯಂ ಹೈಡ್ರಾಕ್ಸೈಡ್ ನ ತಯಾರಿಕೆಯು ಹವಾಮಾನ ಬದಲಾವಣೆಯ ಒಟ್ಟು ಪ್ರಭಾವಕ್ಕೆ 50% ಗಿಂತ ಹೆಚ್ಚು ಕಾರಣಕರ್ತವಾಗಿದೆ. ಅದೇ ರೀತಿ ಕಚ್ಚಾ ವಸ್ತುಗಳ ಮತ್ತು ಸೌಲಭ್ಯಗಳ ಅಸ್ಥಿರ ವೆಚ್ಚವು ಉತ್ಪಾದನೆಯ ಒಟ್ಟು ವೆಚ್ಚದ ಮೇಲೆ ಪ್ರಮುಖ ಪರಿಣಾಮ ಬೀರುತ್ತಿದೆಯೆಂದೂ ಸಹ ಸಂಶೋಧಕರು ಕಂಡುಹಿಡಿದರು. ಪೂರ್ವೋಪಚಾರ ಮತ್ತು ಜಲವಿಚ್ಚೇದನ ಹಂತಗಳಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಕಿಣ್ವಗಳನ್ನು ಬಳಸುವುದರಿಂದ ಈ ಹಂತಗಳ ವೆಚ್ಚವು ಒಟ್ಟು ಉತ್ಪಾದನಾ ವೆಚ್ಚದ 80% ಕ್ಕಿಂತ ಹೆಚ್ಚಾಗಿದ್ದವು. ತಾಂತ್ರಿಕ-ಆರ್ಥಿಕ ಮೌಲ್ಯಮಾಪನವು, ಪ್ರಸ್ತುತ ಮಾರುಕಟ್ಟೆ ದರಗಳ ಪ್ರಕಾರ, ಲ್ಯಾಕ್ಟಿಕ್ ಆಮ್ಲದ ಉತ್ಪಾದನೆಯ ಈ ಪ್ರಕ್ರಿಯೆಯು ಆರು ವರ್ಷಗಳ ನಂತರವೇ ಲಾಭದಾಯಕವಾಗುವುದೆಂದು ಕಂಡುಕೊಂಡಿತು.

ಪ್ರಯೋಗಾಲಯದಲ್ಲಿನ ಪ್ರಯೋಗಗಳು ಮತ್ತು ಅನುಕರಣೆಗಳು ಆದರ್ಶಪ್ರಾಯವಾದ ಮತ್ತು ನಿಯಂತ್ರಿತ ಪರಿಸರದಲ್ಲಿ ನಡೆಯುವುದರಿಂದ ನಿಜ ಪ್ರಪಂಚದ ಫಲಿತಾಂಶಗಳು ಪ್ರಯೋಗಾಲಯದಲ್ಲಿ ದೊರೆತದ್ದಕ್ಕಿಂತ ಬೇರೆಯಾಗಿರುವವೆಂದು ಸಂಶೋಧಕರು ನಿರೀಕ್ಷಿಸುತಾರೆ.  "ಪ್ರಕ್ರಿಯಾ ಇನ್ಪುಟ್ ಗಳಲ್ಲಿ ಅಡಚಣೆ ಮತ್ತು ಏರಿಳಿತ ಇರುವುದು ಸರ್ವೇ ಸಾಮಾನ್ಯ. ಹಾಗಾಗಿ, ಉತ್ಪನ್ನದ ಫಲದಲ್ಲಿ ತಗ್ಗುಂಟಾಗಿ ಆರ್ಥಿಕ ಲೆಕ್ಕಾಚಾರದಲ್ಲಿ ನಕಾರಾತ್ಮಕ ಪರಿಣಾಮವುಂಟಾಗುವುದೆಂದು ನಿರೀಕ್ಷಿಸಬಹುದು." ಎಂದು ಪ್ರೊ|| ಶಾಸ್ತ್ರಿ ಹೇಳಿದರು. ಆದರೂ, ವಾಣಿಜ್ಯ ಉತ್ಪಾದನ್ನ ಘಟಕಗಳಲ್ಲಿ ವಿವಿಧ ಅನುಕೂಲಗಳಿವೆ - ಸ್ವಯಂಚಾಲಿತ ಪ್ರಕ್ರಿಯೆ ನಿಯಂತ್ರಣಗಳು, ಉತ್ತಮ ಪ್ರಕ್ರಿಯೆ ಉಪಕರಣಗಳು, ಸುಧಾರಿತ ಪ್ರಕ್ರಿಯೆ ದಕ್ಷತೆ, ಇತ್ಯಾದಿ. "ಒಟ್ಟಾರೆ, ನಿಜ ಪ್ರಪಂಚದ ವೆಚ್ಚಗಳು ನಾವು ಎಣಿಸಿದ ಅಂಕಗಳ +/- 25% ಇರಬಹುದೆಂದು ನಾವು ಹೇಳುತ್ತೇವೆ." ಎಂದೂ ಕೂಡ  ಪ್ರೊ|| ಶಾಸ್ತ್ರಿ ಹೇಳಿದರು.

ಈ ಫಲಿತಾಂಶಗಳು ಪ್ರಕ್ರಿಯೆಯನ್ನು ಉತ್ತಮಗೊಳಿಸುವ ಅವಕಾಶಗಳನ್ನು ಗುರುತಿಸುವ ದಿಕ್ಕಿನಲ್ಲಿ ಸಂಶೋಧಕರಿಗೆ ನೆರವಾದವು. ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಮರುಬಳಕೆ ಮಾಡುವುದರಿಂದ, ಹೆಚ್ಚು ಬಗಸೆಯನ್ನು ತುಂಬಿ ಸಂಸ್ಕರಣೆಯ ವೇಗವನ್ನು ಹೆಚ್ಚಿಸುವುದರಿಂದ, ಮತ್ತು ಕಿಣ್ವಗಳ ಬಳಕೆಯನ್ನು ತಗ್ಗಿಸುವುದರಿಂದ,   ಹವಾಮಾನ ಬದಲಾವಣೆಯ ಪ್ರಭಾವದಲ್ಲಿ ಮತ್ತು ಉತ್ಪಾದನಾ ವೆಚ್ಚದಲ್ಲಿ 50% ಇಳಿಕೆಯನ್ನು ಉಂಟುಮಾಡಲು ಸಾಧ್ಯವಿದೆಯೆಂದು ಸಂಶೋಧಕರು ಕಂಡುಕೊಂಡರು.

ವೃತ್ತಾಕಾರದ ಆರ್ಥಿಕ ತತ್ವಗಳನ್ನು ಅಳವಡಿಸಿಕೊಳ್ಳುತ್ತಿರುವ ಇಂದಿನ ಜಗತ್ತಿನಲ್ಲಿ ತ್ಯಾಜ್ಯಗಳನ್ನು ಬಳಸುವಂತಹ ಆರ್ಥಿಕವಾಗಿ ಕಾರ್ಯಸಾಧ್ಯವಿರುವ ಪ್ರಕ್ರಿಯೆಗಳನ್ನು ಅಭಿವೃದ್ಧಿಗೊಳಿಸುವ ಅವಕಾಶಗಳನ್ನು ಗುರುತಿಸುವುದು ಅತ್ಯವಶ್ಯಕವಾಗಿದೆ. ಈ  ಹೊಸ ಪ್ರಕ್ರಿಯೆಗಳು ಪರಿಸರದ ಮೇಲಿನ ನಕಾರಾತ್ಮಕ ಪ್ರಭಾವಗಳನ್ನು ತಗ್ಗಿಸಬೇಕೆಂಬುದೂ ಸಹ ಸಮಂಜಸವಾಗಿದೆ. ಈ ನಿಟ್ಟಿನಲ್ಲಿ, ಉತ್ಪನ್ನದ ಸಾಲಿನ ಪ್ರತಿಯೊಂದು ಅಂಗವನ್ನು ಬಳಸಿ ಮೌಲ್ಯವನ್ನು ರಚಿಸುವ ಜೈವಿಕ ಸಂಸ್ಕರಣಾಗಾರವನ್ನು ಕಟ್ಟುವುದು ಮುಂದಿನ ದಾರಿಗಳಲ್ಲಿ ಒಂದಾಗಿದೆ.